ರಾಮ, ಭರತ ಆದರ್ಶಸೋದರರು

Print Friendly, PDF & Email
ರಾಮ, ಭರತ ಆದರ್ಶಸೋದರರು:

Bharatha meets Rama

ಆ ಸಮಯದಲ್ಲಿ ಭರತ ಮತ್ತು ಶತ್ರುಘ್ನರು ಕೈಕೇಯ ದೇಶಕ್ಕೆ ಅವರ ಸೋದರಮಾವನ ಮನೆಗೆ ಹೋಗಿದ್ದರು. ಅವರಿಗೆ ಸಂದೇಶ ಕಳಿಸಲಾಯಿತು. ಅವರು ತಾವಿಲ್ಲದಿದ್ದಾಗ ನಡೆದ ಎರಡು ಅತ್ಯಂತ ವಿಷಾದದ ಮತ್ತು ಆಘಾತಕರವಾದ ಸಂಗತಿಗಳನ್ನು ಮಾತ್ರ ನೋಡಲು ಬಂದ ಹಾಗಾಯಿತು.

ಕೈಕೇಯಿ ಮತ್ತು ಮಂಥರೆಯು ‘ನಿನಗೆ ಸಾಮ್ರಾಜ್ಯ ಪಟ್ಟಾಭಿಷೇಕ’ ಎಂಬ ವಾರ್ತೆಯೊಂದಿಗೆ ಭರತನನ್ನು ಸ್ವಾಗತಿಸಿದರು. ಇಲ್ಲಿನ ಪರಿಸ್ಥಿತಿ ಮತ್ತು ರಾಮನು ಕಾಡಿಗೆ ಹೋದುದಕ್ಕೆ ಕಾರಣವು ತಿಳಿದಾಗ ಭರತನು ಕೋಪದಿಂದ ಕೆಂಡವಾದನು. ಅವನಿಗೆ ತಂದೆಯ ಮರಣದ ದುಃಖವನ್ನು ಸಹಿಸಲಾಗಲಿಲ್ಲ. ನಡೆದುದೆಲ್ಲವಕ್ಕೂ ಮಂಥರೆಯ ಪ್ರಭಾವಕ್ಕೆ ಒಳಗಾದ ತನ್ನ ತಾಯಿ ಕೈಕೇಯಿಯೇ ಕಾರಣ ಎಂದು ಅವನಿಗೆ ಅರಿವಾಯಿತು. ಕೇವಲ ತನ್ನ ಕಾರಣಕ್ಕಾಗಿ ರಾಮನನ್ನು ಕಾಡಿಗೆ ಕಳುಹಿಸಿದ ಆಲೋಚನೆಯ ಬಗ್ಗೆ ಅವನಿಗೆ ಬಹಳ ಸಿಟ್ಟು ಬಂತು. ಅವನು ದುಃಖದಿಂದ ಉಡುಗಿ ಹೋಗಿದ್ದ ತಾಯಿ ಕೌಸಲ್ಯೆಯ ಬಳಿಗೆ ಓಡಿಹೋಗಿ, ಅವಳ ಪಾದಗಳ ಮೇಲೆ ಬಿದ್ದು ರೋಧಿಸಿದನು. ತಾಯಿ ಕೌಸಲ್ಯೆಯು ಅಕ್ಕರೆಯಿಂದ ಅವನನ್ನು ಸಮಾಧಾನಪಡಿಸಿದಳು.

ಭರತನಿಗೆ ಪಟ್ಟಾಭಿಷೇಕ ಮಾಡುವ ಬಗ್ಗೆ ವಸಿಷ್ಟ ಋಷಿಗಳು ಒಂದು ತುರ್ತುಸಭೆ ಕರೆದರು. ಆದರೆ ರಾಮನು ಕಾಡಿನಲ್ಲಿ ಅಲೆಯುತ್ತಿರುವಾಗ ತಾನು ರಾಜನಾಗಲು ಭರತನು ನಿರಾಕರಿಸಿದನು. ತಾನು ರಾಮನಿದ್ದಲ್ಲಿಗೆ ಹೋಗಿ, ‘ಅವನನ್ನು ಅಯೋಧ್ಯೆಗೆ ಹಿಂದಿರುಗಿ ಬಂದು ರಾಜತ್ವವನ್ನು ಒಪ್ಪಿಕೊಳ್ಳುವಂತೆ’ ಬೇಡಿಕೊಳ್ಳುವುದಾಗಿ ದೃಢವಾಗಿ ತಿಳಿಸಿದನು. ಭರತ, ಶತ್ರುಘ್ನರು ಅವರ ತಾಯಿಯರು, ಗುರು ವಸಿಷ್ಟರು, ದೊಡ್ಡ ಸೈನ್ಯ ಮತ್ತು ಅಯೋಧ್ಯೆಯ ಅನೇಕ ನಾಗರಿಕರೊಂದಿಗೆ ರಾಮನನ್ನು ಸಂಧಿಸಲು ಕಾಡಿಗೆ ಹೊರಟರು.

ಭಾರದ್ವಾಜ ಋಷಿಗಳ ಸಹಾಯದಿಂದ ಭರತ ಮತ್ತು ಸಂಗಡಿಗರಿಗೆ ರಾಮನು ವಾಸಿಸುತ್ತಿದ್ದ ಸ್ಥಳವನ್ನು ತಲುಪಲು ಸಾಧ್ಯವಾಯಿತು. ಅದು ಚಿತ್ರಕೂಟ ಎಂಬ ಸ್ಥಳದಲ್ಲಿದ್ದ ಒಂದು ಚಿಕ್ಕ ಕುಟೀರ. ಸೈನ್ಯದೊಂದಿಗೆ ಬಂದ ಭರತನನ್ನು ಕಂಡು ಲಕ್ಷ್ಮಣನು ಕೋಪದಿಂದ ವ್ಯಗ್ರನಾದನು. ಆದರೆ ರಾಮನು, ‘ಭರತ ಎಂದಿಗೂ ಇಕ್ಷ್ವಾಕು ಕುಲಕ್ಕೆ ಕಳಂಕ ತರುವುದಿಲ್ಲ’ ಎಂದು ಲಕ್ಷ್ಮಣನನ್ನು ಎಚ್ಚರಿಸಿ ಸಮಾಧಾನ ಪಡಿಸಿದನು.

ಭರತ, ರಾಮರ ಸಮಾಗಮವು ಒಂದು ಅಪೂರ್ವ ಕ್ಷಣವಾಗಿತ್ತು. ಅವರು ಒಬ್ಬರನ್ನೊಬ್ಬರು ಪರಸ್ಪರ ತಬ್ಬಿಕೊಂಡು ಅತ್ತರು. ರಾಮನು ಒಬ್ಬ ಸನ್ಯಾಸಿಯಂತೆ ಉಡುಗೆ ಧರಿಸಿರುವುದನ್ನು ನೋಡಿ ಭರತನ ಮನಸ್ಸಿಗೆ ಬಹಳ ನೋವಾಯಿತು. ರಾಮನು ಅಯೋಧ್ಯೆಯ ಕ್ಷೇಮಸಮಾಚಾರಗಳ ಬಗ್ಗೆ ವಿಚಾರಿಸಿದನು. ಭರತನು ತಂದೆಯ ಸಾವಿನ ದಾರುಣ ವಿಚಾರವನ್ನು ತಿಳಿಸಿದನು. ರಾಮನಿಗೆ ಪ್ರಜ್ಞೆ ತಪ್ಪಿದಂತಾಯಿತು. ಎಲ್ಲ ಸಹೋದರರು ಮಂದಾಕಿನಿ ನದಿಯ ತೀರದಲ್ಲಿ ಸಂಪ್ರದಾಯದಂತೆ ಅಗಲಿದ ಆತ್ಮಕ್ಕೆ ತರ್ಪಣಗಳನ್ನು ನೀಡಿದರು.

ಭರತನು ರಾಮನಿಗೆ ಅಯೋಧ್ಯೆಗೆ ಹಿಂತಿರುಗಿ ಬಂದು ರಾಜನಾಗಬೇಕೆಂದು ವಿನಂತಿಸಿದನು. ಆದರೆ ರಾಮನು ತಂದೆಯ ಮಾತನ್ನು ಪಾಲಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಕೊನೆಯಲ್ಲಿ ವಸಿಷ್ಟರು ಮಧ್ಯೆ ಪ್ರವೇಶಿಸಿ, ರಾಮನು ವನವಾಸದಿಂದ ಹಿಂತಿರುಗುವವರೆಗೂ, ಅವನ ಪ್ರತಿನಿಧಿಯಾಗಿ ಭರತನು ಅಯೋಧ್ಯೆಯನ್ನು ಆಳಬೇಕೆಂದು ತೀರ್ಮಾನಿಸಿದರು. ಭರತನು ರಾಮನಿಗೆ ಅವನ ಪಾದುಕೆಗಳನ್ನು ನೀಡಬೇಕೆಂದೂ, ರಾಮನು ಹಿಂತಿರುಗುವವರೆಗೂ ಅವುಗಳನ್ನೇ ಸಿಂಹಾಸನದ ಮೇಲೆ ಇರಿಸುವುದಾಗಿಯೂ ವಿನಂತಿಮಾಡಿದನು. ೧೪ ವರ್ಷಗಳ ಕೊನೆಯಲ್ಲಿ ರಾಮನು ಅಯೋಧ್ಯೆಗೆ ಹಿಂತಿರುಗಿ ಬರದಿದ್ದರೆ, ತಾನು ಅಗ್ನಿಪ್ರವೇಶ ಮಾಡುವುದಾಗಿಯೂ ಅವನು ಎಚ್ಚರಿಕೆ ನೀಡಿದನು. ಅಯೋಧ್ಯೆಗೆ ಹಿಂತಿರುಗಿದ ಮೇಲೆ ಭರತನು ಸಮೀಪದ ಒಂದು ಹಳ್ಳಿಯಲ್ಲಿ ಗುಡಿಸಿಲಿನಲ್ಲಿ ಸನ್ಯಾಸಿಯಂತೆ ಜೀವಿಸುತ್ತಿದ್ದು, ರಾಮನು ಹಿಂತಿರುಗಿದ ನಂತರ ಅವನೊಂದಿಗೇ ತಾನು ಅಯೋಧ್ಯಾ ನಗರಕ್ಕೆ ಪ್ರವೇಶಿಸುವುದಾಗಿ ನಿರ್ಧರಿಸಿದನು. ಭ್ರಾತೃಪ್ರೇಮ, ವಾತ್ಸಲ್ಯ ಮತ್ತು ತ್ಯಾಗಗಳ ಶ್ರೇಷ್ಠ ಉದಾಹರಣೆ ಭರತ!

Leave a Reply

Your email address will not be published. Required fields are marked *