ರಾಮನಿಗಾಗಿ ಭರತನ ಕೊರಗು

Print Friendly, PDF & Email
೪. ರಾಮನಿಗಾಗಿ ಭರತನ ಕೊರಗು

Bharatha pines for Rama

ಭರತನು ಇಡೀ ರಾತ್ರಿ ನಿದ್ರೆಯಿಲ್ಲದೆ ರಾಮನಿಗಾಗಿ ಅತ್ತೇ ಅತ್ತನು. ಕಾಡಿಗೆ ಎಂದು ಹೋದೇನೋ ರಾಮನ ಪಾದಗಳ ಮೇಲೆ ಎಂದು ಬಿದ್ದೇನೋ ಎಂದು ತವಕ ಪಡುತ್ತಿದ್ದನು.

ಬೆಳಗಾಗುತ್ತಲೆ ಭರತ ಶತ್ರುಘ್ನರು, ತಮ್ಮ ತಾಯಂದಿರು, ವಸಿಷ್ಠ ಗುರುಗಳು, ಮಂತ್ರಿಗಳು, ಭಾರಿ ಸೈನ್ಯ, ಸೇವಕರು ಮತ್ತು ಪ್ರಜೆಗಳೊಂದಿಗೆ ಅಯೋಧ್ಯೆಯನ್ನು ಬಿಟ್ಟು ಹೊರಟರು.

ಎರಡು ದಿನಗಳ ಪ್ರಯಾಣ ಮಾಡಿದ ನಂತರ ಅವರು ಗಂಗಾ ನದೀತೀರಕ್ಕೆ ಬಂದು ತಂಗಿದರು. ಅಲ್ಲಿ ಅಂಬಿಗರ ಜನಾಂಗದ ಮುಖಂಡನಾದ ಗುಹನು ಅವರನ್ನು ಕಂಡನು. ರಾಮ ಲಕ್ಷ್ಮಣರೊಡನೆ ಯುದ್ಧ ಮಾಡಲು ಭರತನು ಸೈನ್ಯವನ್ನು ತರುತ್ತಿರುವನೆಂದು ಆತನು ಸಂಶಯಪಟ್ಟನು. ತನ್ನ ಸಂಶಯ ನಿಜವೇ, ಅಲ್ಲವೇ ಎಂದು ತಿಳಿದುಕೊಳ್ಳಲು ಬಯಸಿದ ಆತನು ರಾಮನನ್ನು ಹೋಲುತ್ತಿರುವ ಭರತನನ್ನು ಸಮೀಪಿಸಿದನು. ದುಃಖದಿಂದ ಭರತನ ಕಣ್ಣುಗಳು ಕೆಂಪಾಗಿದ್ದವು. ಆತನು ಮರದ ತೊಗಟೆಯ ಆಭರಣಗಳನ್ನು ಧರಿಸಿದ್ದನು. ಗುಹನು ಅಭಿನಂದಿಸಿದಾಗ, ಭರತನು ತಾನು ರಾಮನನ್ನು ಅಯೋಧ್ಯೆಗೆ ಮರಳಿ ಕರೆದುಕೊಂಡು ಬರಲು ಕಾಡಿಗೆ ಹೊರಟಿರುವುದಾಗಿ ತಿಳಿಸಿದನು.

ಭರತನ ವಿನಯ ವಿಧೇಯತೆಗಳನ್ನು ಕಂಡ ಗುಹನು ಅತ್ಯಂತ ಆನಂದಭರಿತನಾಗಿ, ಆತನ ಸಮಸ್ತ ಪರಿವಾರವೂ ಗಂಗೆಯನ್ನು ದಾಟಲು ಸಕಲ ಸೌಕರ್ಯಗಳನ್ನು ಏರ್ಪಡಿಸಿದನು. ಅವರಿಗೆ ಭಾರದ್ವಾಜ ಋಷಿಗಳ ಆಶ್ರಮದೆಡೆಗೆ ಮಾರ್ಗದರ್ಶನವನ್ನು ನೀಡಿದನು. ಆಶ್ರಮವನ್ನು ತಲುಪಿದ ಮೇಲೆ ಅನತಿ ದೂರದಲ್ಲಿ ಸೈನ್ಯವನ್ನು ನಿಲ್ಲಿಸಿ ಭರತ ಶತ್ರುಘ್ನರು ಭಾರದ್ವಾಜರನ್ನು ಸಂದರ್ಶಿಸಿದರು. ಸಾಷ್ಟಾಂಗವೆರಗಿ ರಾಮನನ್ನು ತಾವು ಭೆಟ್ಟಿಯಾಗುವ ಉದ್ದೇಶವನ್ನು ಅವರಿಗೆ ತಿಳಿಸಿದರು. ಕೂಡಲೇ ಅವರು ಹೀಗೆ ಪ್ರಶ್ನಿಸಿದರು. “ರಾಮನನ್ನು ಇರುಕಿನಲ್ಲಿ ಸಿಕ್ಕಿಸಿ ಕೊಲ್ಲಲು ಸಾಧ್ಯವಾಗುವಂತೆ ನನ್ನಿಂದ ಅವನ ಚಲನವಲನೆ ಯನ್ನು ಮನಗಾಣಲಿಚ್ಛಿಸುವಿರೇನು?” ಭರತನಿಗೆ ಈ ಶಬ್ದಗಳು ಅತ್ಯಂತ ತಾಪವನ್ನುಂಟು ಮಾಡಿದವು. ಆತ ಹೇಳಿದನು, “ಅಂಥ ಉದ್ದೇಶಯುಕ್ತ ಅಪರಾಧ ಮಾಡಬಯಸಿದರೆ ನಾನು ಅತ್ಯಂತ ಪಾಪಿಷ್ಠನೆನಿಸುವೆನು. ಮಹರ್ಷಿಗಳೇ, ಅಂಥ ಕಾರ್ಯವೆಸಗಬಯಸುವ ನೀಚನು ನಾನೆಂದು ನಿಜವಾಗಿಯೂ ನೀವು ಬಗೆದಿರಾ?”

ಭಾರಧ್ವಾಜರಿಗೆ ಭರತನ ಪವಿತ್ರ ಮನಸ್ಸಿನ ಅರಿವಾಯಿತು. ಅದರಿಂದ ಅವರು ಆ ರಾತ್ರಿ ಆತನಿಗೆ ಸಾಂತ್ವನ ನೀಡಿದ್ದಲ್ಲದೆ ಆತಿಥ್ಯವನ್ನೂ ಮಾಡಿದರು. ಆದರೆ ಭರತನ ಹೃದಯ ರಾಮನಿಗಾಗಿ ತವಕಪಡುತ್ತಿತ್ತು. ಆ ಆತಿಥ್ಯವೆಲ್ಲ ಆತನಿಗೆ ರುಚಿಸಲಿಲ್ಲ. ಮರುದಿನ ಬೆಳಿಗ್ಗೆ ಭಾರದ್ವಾಜರು ಭರತನಿಗೆ ಸೀತಾ ಲಕ್ಷ್ಮಣರೊಡಗೂಡಿ ರಾಮನಿದ್ದ ಚಿತ್ರಕೂಟದ ಮಾರ್ಗದರ್ಶನ ನೀಡಿದರು.

ಚಿತ್ರಕೂಟದಲ್ಲಿ ರಾಮಲಕ್ಷ್ಮಣರು ಚಿಕ್ಕದೊಂದು ಪರ್ಣಕುಟಿಯನ್ನು ರಚಿಸಿ ಅಲ್ಲಿ ಸುಖವಾಗಿದ್ದರು. ಸೃಷ್ಟಿಯ ಸೊಬಗನ್ನು ವರ್ಣಿಸುತ್ತಾ, ಹಚ್ಚ ಹಸುರಾಗಿ ಬೆಳೆದ ಹುಲ್ಲು ಗಿಡ ಪೊದರುಗಳ ಆಶ್ಚರ್ಯಕರವಾದ ರಚನೆಗಳನ್ನು ಸೀತೆಗೆ ತೋರಿಸುತ್ತಾ ರಾಮನು ಹರ್ಷಗೊಳ್ಳುತ್ತಿದ್ದನು.

ಒಂದು ಮಧ್ಯಾಹ್ನ ಆ ಮೂವರೂ ಉಲ್ಲಾಸದಿಂದ ಆನಂದ ಮನಸ್ಕರಾಗಿ ಒಂದು ಮರದಡಿಯಲ್ಲಿ ವಿಶ್ರಮಿಸಿಕೊಂಡಿರುವಾಗ ದೊಡ್ಡ ಗಲಭೆಯೊಂದು ಕೇಳಿಸಿತು. ಪಕ್ಷಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಚದುರಾಡಿದವು. ಆಗ ಲಕ್ಷ್ಮಣನು ಹತ್ತಿರದಲ್ಲಿದ್ದ ಎತ್ತರವಾದ ಮರವನ್ನು ಹತ್ತಿ ಸುತ್ತಲೂ ನಿರೀಕ್ಷಿಸಿದನು. ಅನಂತರ ಲಗುಬಗೆಯಿಂದ ಮರವನ್ನಿಳಿದು ರಾಮನ ಸಮೀಪ ಬಂದು ಕೂಗಾಡತೊಡಗಿದನು. “ಅಣ್ಣಾ, ಭರತನು ದೊಡ್ಡದೊಂದು ಸೈನ್ಯವನ್ನು ತೆಗೆದುಕೊಂಡು ನಮ್ಮನ್ನು ಬಂಧಿಸಲು ಇತ್ತ ಕಡೆ ಬರುತ್ತಿದ್ದಾನೆ. ಅದೇನು ಅಷ್ಟು ಸುಲಭವೆಂದು ಎಣಿಸಿದ್ದಾನೇನು ಅವನು? ನನ್ನ ಕೈಯಿಂದಲೇ ಅವನು ತನ್ನ ಜೀವನ ಕೊನೆಯ ಘಟ್ಟವನ್ನು ಮುಟ್ಟುತ್ತಾನೆ.” ಆತನು ಅತ್ಯಂತ ಕೋಪದಿಂದ ಉದ್ರಿಕ್ತನಾಗಿ ಸ್ಪಷ್ಟವಾಗಿ ಮಾತನಾಡಲೂ ಕೂಡ ಅಸಮರ್ಥನಾಗಿದ್ದನು. ರಾಮನು ಆತನನ್ನು ಮಧ್ಯದಲ್ಲಿ ತಡೆದು ಹೇಳಿದನು ಲಕ್ಷ್ಮಣಾ, ಆತುರಪಡಬೇಡ, ಭರತನು ಇಕ್ಷ್ವಾಕು ವಂಶವನ್ನು ನಾಶ ಮಾಡಲಾರ. ನನ್ನ ಮೇಲೆ ಅವನಿಗಿರುವ ವಾತ್ಸಲ್ಯ, ಭಕ್ತಿ ಎಷ್ಟೆಂಬುದು ನನಗೆ ಗೊತ್ತು. ರಾಜ್ಯದ ಮೇಲೆ ನಿನಗೆ ಅಷ್ಟೊಂದು ವ್ಯಾಮೋಹವಿದ್ದರೆ ಭರತನು ಅದನ್ನು ನಿನಗೆ ಕೊಡುವ ಹಾಗೆ ನಾನು ನೋಡಿಕೊಳ್ಳುತ್ತೇನೆ.”

ಈ ಮಾತುಗಳು ಲಕ್ಷ್ಮಣನ ಹೃದಯಕ್ಕೆ ಚೆನ್ನಾಗಿ ನಾಟಿದವು. ತನ್ನ ಮೂರ್ಖತನದ ಅರಿವು ಅವನಿಗಾಯಿತು. ತನ್ನ ವರ್ತನೆಗಾಗಿ ನಾಚಿಕೆಯೂ ಆಯಿತು. ಅದಕ್ಕಾಗಿ ತನ್ನನ್ನು ಶಿಕ್ಷಿಸಬೇಕೆಂದು ರಾಮನಲ್ಲಿ ಪ್ರಾರ್ಥಿಸಿಕೊಂಡನು. ಅನಂತರ ಮೂವರೂ ಭರತನ ಬರವಿಗಾಗಿ ಆತುರದಿಂದ ಕಾಯತೊಡಗಿದರು.

ಭರತನು ಸ್ಪಷ್ಟವಾಗಿ ಗೋಚರಿಸಿದಾಗ ಆತನ ಮುನಿವೇಷ, ಶೋಕ ತಪ್ತ ಮುಖ ನೋಡಿ ರಾಮನಿಗೆ ಅತ್ಯಂತ ಖೇದವಾಯಿತು. ಆತನು ಧಾವಿಸಿ ಬಂದು ಭರತನನ್ನು ಅಪ್ಪಿಕೊಂಡನು. ಇಬ್ಬರೂ ಮನದಣಿಯೆ ಅತ್ತರು.

ಅಯೋಧ್ಯೆಯ ಎಲ್ಲರ ಯೋಗಕ್ಷೇಮವನ್ನು ರಾಮನು ವಿಚಾರಿಸಿದನು. ರಾಜ್ಯದ ಸ್ಥಿತಿಯನ್ನು ಕೇಳಿಕೊಂಡನು. ಆಗ ಭರತನು ಅಣ್ಣನಿಗೆ ಹೇಳಿದನು, “ಅಣ್ಣಾ, ನೀನು ಅಯೋಧ್ಯೆಯನ್ನು ಬಿಟ್ಟು ಬಂದ ಮೇಲೆ ನಾನು ಆ ರಾಜ್ಯವನ್ನು ಆಳುವೆನೆಂದು ಭಾವಿಸಿರುವೆಯಾ? ನಮ್ಮ ವಂಶದಲ್ಲಿ ಎಂದೆಂದಿಗೂ ಹಿರಿಯಣ್ಣನು ರಾಜ್ಯವಾಳಬೇಕು. ಅಂತಲೇ ನಿನ್ನನ್ನು ಹಿಂದಕ್ಕೆ ಕರೆದುಕೊಂಡು ಹೋಗಲು ನಾನು ಬಂದಿದ್ದೇನೆ. ನೀನು ಹೊರಟು ಬಂದ ಮೇಲೆ ನಮ್ಮ ಪ್ರೀತಿಯ ತಂದೆ ಮೃತ್ಯುವಶರಾಗಿ ನಮ್ಮನ್ನೆಲ್ಲಾ ಅನಾಥರನ್ನಾಗಿ ಮಾಡಿದರು.”

ತಂದೆಯ ಮರಣವಾರ್ತೆಯನ್ನು ಕೇಳಿದ ತಕ್ಷಣ ರಾಮನು ಮೂರ್ಛಿತನಾದನು. ಕ್ಷಣಕಾಲದ ತರುವಾಯ ಆತನು ಚೇತರಿಸಿಕೊಂಡ ಮೇಲೆ ನಾಲ್ವರು ಸಹೋದರರೂ ಮಂದಾಕಿನೀ ನದೀತೀರಕ್ಕೆ ಹೋಗಿ ತಂದೆಗೆ ತರ್ಪಣವನ್ನು ಬಿಟ್ಟು ಅಗಲಿದ ಆತ್ಮಕ್ಕೆ ಗೌರವವನ್ನು ಸಲ್ಲಿಸಿದರು.

ಅನಂತರ ಎಲ್ಲರೂ ಆಶ್ರಮಕ್ಕೆ ಮರಳಿ ಬಂದು ಕುಳಿತ ಮೇಲೆ ರಾಮನು ಭರತನಿಗೆ ಕೇಳಿದನು, “ಭರತನು, ನೀನೇಕೆ ರಾಜ್ಯವನ್ನು ತೊರೆದು ಮುನಿವೇಷದಲ್ಲಿ ಇಲ್ಲಿಗೆ ಬಂದೆ?” ಅದಕ್ಕೆ ಭರತನು ಉತ್ತರಿಸಿದ, “ಪ್ರೀತಿಯ ಬಂಧುವೇ, ತಂದೆಯ ಮರಣಾನಂತರ ಅಯೋಧ್ಯೆಯಿಂದ ಧರ್ಮವೇ ಹೊರಟು ಹೋಗಿದೆ. ಸಿಂಹಾಸನಕ್ಕೆ ಬಾಧ್ಯಸ್ಥ ನಾನಲ್ಲ. ರಾಜ್ಯವನ್ನು ಆಳಲು ನೀನೇ ಸರಿಯಾದ ವ್ಯಕ್ತಿ. ಆದ್ದರಿಂದ ನೀನೇ ಅಯೋಧ್ಯೆಗೆ ಬಂದು ಪುನಃ ಧರ್ಮಸ್ಥಾಪನೆಯನ್ನು ಮಾಡಬೇಕೆಂದು ಪ್ರಾರ್ಥಿಸಲು ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ. ನಿನ್ನನ್ನು ಇಷ್ಟೆಲ್ಲಾ ತೊಂದರೆಗೀಡು ಮಾಡಬೇಕೆಂದು ಯೋಚಿಸಿದ. ನನ್ನ ತಾಯಿ ಕೈಕೇಯಿಯು ಈಗ ಪಶ್ಚಾತ್ತಾಪ ಪಡುತ್ತಿದ್ದಾಳೆ.”

ಇದನ್ನೆಲ್ಲಾ ಕೇಳಿದ ರಾಮನು, “ನನ್ನ ಮೇಲೆ ನೀವೆಲ್ಲರೂ ತೋರಿದ ಪ್ರೀತಿಗಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ತಾಯಿ ಕೈಕೇಯಿಯ ಬಗ್ಗೆ ಹೇಳುವುದಾದರೆ ಆಕೆಯನ್ನಾಗಲಿ, ತಂದೆಯನ್ನಾಗಲಿ ದೂಷಿಸಬೇಡ. ಮನುಷ್ಯ ಮಾತ್ರದವರಾದ ನಾವೆಲ್ಲರೂ ವಿಧಿಗೆ ಅಧೀನರು. ದೈವದಾಟಕ್ಕೆ ನಾವು ತಲೆ ಬಾಗಬೇಕಾದುದು ಅನಿವಾಯ೵. ಹದಿನಾಲ್ಕು ವರ್ಷ ನಾನು ಅರಣ್ಯವಾಸ ಮಾಡಬೇಕೆಂದೂ, ನೀನು ರಾಜ್ಯವನ್ನಾಳಬೇಕೆಂದೂ ತಂದೆಯ ಆಶಯವಾಗಿತ್ತು. ಆದ್ದರಿಂದ ಅವರ ಆಸೆ ಪೂರ್ಣವಾಗಲಿ. ಅವರ ಆತ್ಮ ಸಂತೃಪ್ತಿಗೊಳ್ಳುತ್ತದೆ,” ಎಂದು ಹೇಳಿದನು. ಭರತನೂ ಅಷ್ಟೇ ಹಠವಾದಿ. ಆತ ಹೇಳಿದ, “ನಿನ್ನನ್ನು ಇಲ್ಲಿಯೇ ಬಿಟ್ಟು ನಾನು ರಾಜ್ಯಕ್ಕೆ ಹಿಂತಿರುಗುವುದೇ ಇಲ್ಲ. ಆ ರಾಜ್ಯಕ್ಕೆ ನಾನು ಅರ್ಹನೂ ಅಲ್ಲ. ಆದ್ದರಿಂದ ದಯವಿಟ್ಟು ನನ್ನದು ಮಾತ್ರವಲ್ಲ, ಶತ್ರುಘ್ನನ ತಾಯಿಯ ಹಾಗೂ ಸಹಸ್ರಾರು ಪ್ರಜೆಗಳ ಆಸೆಗಳನ್ನು ಪೂರ್ಣಗೊಳಿಸು,” ಎಂದು ದೀನನಾಗಿ ಪ್ರಾರ್ಥಿಸಿದನು.

ಆಗ ರಾಮನು ದೃಢಚಿತ್ತದಿಂದ ನುಡಿದನು, “ನನ್ನ ಮನಸ್ಸು ಅಚಲ ನಿರ್ಧಾರವನ್ನು ಕೈಗೊಂಡಿದೆ. ನಾನು ನಮ್ಮ ತಂದೆಯ ವಚನವನ್ನು ಪಾಲಿಸಬೇಕು. ಅದನ್ನು ಮೀರಿ ಹೋಗಕೂಡದು. ತಂದೆಯ ಮರಣಾನಂತರ ಪ್ರಜೆಗಳನ್ನು ಪರಿಪಾಲಿಸುವುದು ನಿನ್ನ ಕರ್ತವ್ಯ. ಅಲ್ಲಿ ಶತ್ರುಘ್ನನು ನಿನಗೆ ಸಹಾಯಕನಾಗುತ್ತಾನೆ. ಆದ್ದರಿಂದ ನೀನು ಮರಳಿ ಹೋಗಿ ರಾಜ್ಯವನ್ನು ಆಳು. ನನ್ನ ಶುಭಾಶಯಗಳು ಕೂಡಾ ನಿನ್ನೊಡನಿರುತ್ತವೆ.”

ಆದರೆ ಭರತನು ಅದಕ್ಕೆ ಒಪ್ಪಲಿಲ್ಲ. ರಾಮನು ಅಯೋಧ್ಯೆಗೆ ಬರುವವರೆಗೂ ತಾನು ನಿರಶನ ವ್ರತವನ್ನು ಕೈಕೊಳ್ಳುವುದಾಗಿ ತಿಳಿಸಿದನು. ಆಗ ವಸಿಷ್ಠರು ಮುಂದೆ ಬಂದು ಒಂದು ಸಲಹೆಯನ್ನು ನೀಡಿದರು. ರಾಮನ ಪ್ರತಿನಿಧಿಯಾಗಿ ಭರತನು ಆತನು ಬರುವವರೆಗೆ ಅಯೋಧ್ಯೆಯನ್ನು ಆಳತಕ್ಕದ್ದು. ಈ ಸಲಹೆ ಎಲ್ಲರಿಗೂ ಸಮ್ಮತವಾಯಿತು. ಆದರೂ ಭರತನು ಹೇಳಿದನು, “ರಾಮಾ, ದಯವಿಟ್ಟು ನಿನ್ನ ಪಾದುಕೆಗಳನ್ನು ನನಗೆ ಕೊಡು. ಅವುಗಳನ್ನು ನಾನು ಸಿಂಹಾಸನದ ಮೇಲಿಟ್ಟು, ನೀನು ಹಿಂತಿರುಗಿ ಬರುವವರೆಗೆ ರಾಜಾಜ್ಞೆಯನ್ನು ಪ್ರಾಮಾಣಿಕ ರೀತಿಯಲ್ಲಿ ಪರಿಪಾಲಿಸುತ್ತೇನೆ. ನನ್ನ ಪಾಡಿಗೆ ನಾನು ವಿರಕ್ತನಾಗಿ ಪಟ್ಟಣದ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ವಾಸಮಾಡಿಕೊಂಡಿದ್ದು ನಿನ್ನ ಸಂಗಡವೇ ಪಟ್ಟಣವನ್ನು ಪ್ರವೇಶಿಸುತ್ತೇನೆ. ಆದರೆ ಹದಿನಾಲ್ಕು ವರ್ಷಗಳು ಕಳೆದ ನಂತರ ನೀನು ಹಿಂತಿರುಗಿ ಬಾರದಿದ್ದರೆ ಚಿತೆಯಲ್ಲಿ ನಾನು ನನ್ನ ಪ್ರಾಣವನ್ನರ್ಪಿಸುತ್ತೇನೆ.” ಭರತನ ಈ ಉದಾರ ಸ್ವಭಾವವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ರಾಮನು ಅವರೆಲ್ಲರನ್ನು ಆಶೀರ್ವದಿಸಿ ಅಯೋಧ್ಯೆಗೆ ಹಿಂತಿರುಗಲು ಹೇಳಿ ಎಲ್ಲರನ್ನು ಬೀಳ್ಕೊಟ್ಟನು.

ಪ್ರಶ್ನೆಗಳು
  1. ಅರಸುತನವನ್ನು ಭರತನು ಯಾಕೆ ನಿರಾಕರಿಸಿದನು?
  2. ರಾಮನು ಅಯೋಧ್ಯೆಗೆ ಹಿಂತಿರುಗಲು ಯಾಕೆ ಒಪ್ಪಲಿಲ್ಲ?
  3. ಎಲ್ಲರಿಗೂ ಸಮಾಧಾನವಾಗುವಂತೆ ವಸಿಷ್ಠರು ಸಮಸ್ಯೆಯನ್ನು ಹೇಗೆ ಬಗೆಹರಿಸಿದರು?

Leave a Reply

Your email address will not be published. Required fields are marked *

error: