ಭೀಷ್ಮ ಪ್ರತಿಜ್ಞೆ

Print Friendly, PDF & Email
ಭೀಷ್ಮ ಪ್ರತಿಜ್ಞೆ

‘ಮಹಾಭಾರತ’ವೆಂದು ಖ್ಯಾತವಾದ ಮಹಾಕಾವ್ಯವು ಭವ್ಯ ಭಾರತದಲ್ಲಿ ಪಾಂಡವರ ಮತ್ತು ಅವರ ದಾಯಾದಿಗಳಾದ ಕೌರವರು ಆಗಿಹೋದ ಕಾಲದಲ್ಲಿ ನಡೆದ ಒಂದು ಪ್ರಾಚೀನ ಕತೆ. ಭಾರತಮಾತೆ ವೀರಪುತ್ರರನ್ನು ಪಡೆದ ವೀರ ಮಾತೆ. ಆ ಶ್ರೇಷ್ಠ ಪುರುಷರ ಕಾರ್ಯಗಳೂ ಶ್ರೇಷ್ಠವಾದವು. ಆಗಿನ ದಿನ ಗಳಲ್ಲಿ ‘ತಾತ’ ಅಥವಾ ‘ಪಿತಾಮಹ’ನೆನಿಸಿದ ಭೀಷ್ಮನು ಆ ಇಬ್ಬರಿಗೂ ಏಕಮಾತ್ರ ಪ್ರಮುಖ ವ್ಯಕ್ತಿಯಾಗಿದ್ದನು. ಅರಸನಾಗದೇ ಇದ್ದಾಗ್ಯೂ ಹೆಚ್ಚಿನ ಮಾನ್ಯತೆಯನ್ನು ಪಡೆದ ರಾಷ್ಟ್ರ ನಿರ್ಮಾತೃವೂ, ರಾಜಕಾರ ಧುರಂಧರನೂ ಆಗಿದ್ದನು. ರಾಷ್ಟ್ರದ ಪ್ರತಿಯೊಂದು ಕಾಯ೵ಭಾರದಲ್ಲಿಯೂ ಉನ್ನತ ಯುದ್ಧಾಶ್ವವನ್ನೇರಿ ಮೆರೆವ ಅವನ ಮಹೋನ್ನತ ವ್ಯಕ್ತಿತ್ವವು ಎಲ್ಲೆಲ್ಲೂ ಗೋಚರವಾಗುತ್ತದೆ. ಭೀಷ್ಮನು ರಾಜನಾಗಿರಲಿಲ್ಲ. ಆದರೆ ರಾಜ್ಯ ಅಧಿಕಾರಿಯಾಗಿ ಹುಟ್ಟಿದ್ದಾಗ್ಯೂ ಸ್ವಸಂತೋಷದಿಂದಲೇ ತನ್ನ ಅಧಿಕಾರವನ್ನು ಅವನು ಬಿಟ್ಟುಕೊಟ್ಟನು.

ಅದು ನಡೆದದ್ದು ಹೀಗೆ. ಶಂತನು ಮಹಾರಾಜನ ಏಕಮಾತ್ರ ಪುತ್ರನಾಗಿ ಜನಿಸಿ ಯುವರಾಜ ಪಟ್ಟಕ್ಕೆ ಅರ್ಹನಾದ ಅವನು ವೈಭವಪೂರ್ಣನಾಗಿ ಬೆಳೆದನು. ಅವನು ಚಿಕ್ಕವನಾಗಿದ್ದಾಗ ಒಂದು ಅಪೂರ್ವ ಘಟನೆ ನಡೆಯಿತು. ದೇಶದ ಸಮ್ರಾಟನೆನಿಸಿದ ಅವನ ತಂದೆ, ಮೀನುಗಾರನೊಬ್ಬನ ರೂಪಸಿಯಾದ ಮಗಳ ಮೋಹಕ್ಕೆ ಒಳಗಾದನು.

ಈ ಮೀನುಗಾರನು ಅಂಥ ಉನ್ನತ ಮಟ್ಟದ ವಿವಾಹಕ್ಕೆ ತನ್ನ ಮಗಳು ಯೋಗ್ಯಳಲ್ಲವೆಂದು ಅಂದುಕೊಂಡಾಗ್ಯೂ ಸೂಕ್ಷ್ಮಮತಿಯೂ ಗರ್ವಿಯೂ ಆಗಿದ್ದ. ಅವನು ಇದಕ್ಕೆ ಲಕ್ಷ ಕೊಡಲಿಲ್ಲ. ಒಂದು ವೇಳೆ ಅವಳು ಮದುವೆಯಾದ ಪಕ್ಷದಲ್ಲಿ, ಅವಳನ್ನು ಕೇವಲ ತುಚ್ಚ ರೀತಿಯಲ್ಲಿ, ತಿರಸ್ಕಾರ ಭಾವದಿಂದ ಕಾಣಲಾದೀತೆಂದು ಅವನು ಅಂದುಕೊಂಡನು. ಅವಳು ತನ್ನ ಜೀವನದ ಶೇಷಭಾಗವನ್ನೆಲ್ಲ ಅರಮನೆಯಲ್ಲಿಯೇ ಕಳೆಯುವುದೇನೋ ನಿಜವಿದ್ದಾಗ್ಯೂ ಆ ಅರಮನೆಯು ಯಾವ ಮೂಲೆಗೆ? ಇವಳು ಯಾರೂ ಅವಳನ್ನು ಮಹಾರಾಣಿ ಎಂಬ ದೃಷ್ಟಿಯಿಂದ ಕಾಣಲಾರರು. ಅವಳಿಂದ ಜನಿಸಿದ ಮಕ್ಕಳನ್ನು ಪಟ್ಟಕ್ಕೆ ಅಧಿಕಾರಿಯಾಗಿ ಭಾವಿಸಲಾರರು. ಭೀಷ್ಮನ ಬದಲಾಗಿ, ಅವಳ ಮಗನನ್ನು ಯುವರಾಜನನ್ನಾಗಿ ಮಾಡಿದರೆ ಮಾತ್ರ ಅವಳನ್ನು ಮಹಾರಾಜನಿಗೆ ಮದುವೆ ಮಾಡಿಕೊಡುವುದಾಗಿ ಅವನು ಒಪ್ಪಿದನು. ವೀರಪುರುಷರಿರುವ ಆ ಕಾಲದಲ್ಲಿ ಪ್ರಜೆಗಳೆಲ್ಲರೂ ಎಷ್ಟು ಬಲಿಷ್ಠರಾಗಿದ್ದರೆಂದರೆ ಮೀನುಗಾರನೊಬ್ಬನೇ ತನ್ನ ಅಭಿಪ್ರಾಯವನ್ನು ಖಂಡಿತಪಡಿಸಲು ಸಾಧ್ಯವಿರಲಿಲ್ಲ.

ಕನ್ಯಾಪಿತೃವಿನ ಈ ನಿಬಂಧನೆಯನ್ನು ಅರಿತ ಶಂತನು ಮಹಾರಾಜನು ತನ್ನ ಬೇಡಿಕೆಯನ್ನು ಹಿಂತೆಗೆದುಕೊಂಡನು. ಆದರೆ ಆ ಲಾವಣ್ಯವತಿಯ ರೂಪವನ್ನು ತನ್ನ ಮನಸ್ಸಿನಿಂದ ಹೊರದೂಡಲು ಅವನಿಗೆ ಸಾಧ್ಯವಾಗಲಿಲ್ಲ. ಮಹಾರಾಜನ ಈ ಮನೋರೋಗವನ್ನು ಪ್ರತಿಯೊಬ್ಬರೂ ಕಂಡುಕೊಂಡರು. ರಾಜಕುಮಾರನೂ ಇದನ್ನು ಗಮನಿಸಿದನು. ಅದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಂಡ ಮೇಲೆ ಅವನು ಒಂದು ನಿರ್ಧಾರಕ್ಕೆ ಬಂದನು. ಎಂಥ ಅನಿರೀಕ್ಷಿತ ಪರಿಣಾಮವದು: ತನ್ನ ತಂದೆಯ ದುಗುಡದ ಕಾರಣವನ್ನು ಅರಿತ ಕೂಡಲೇ ಭೀಷ್ಮನು ತನ್ನ ರಥವನ್ನು ತರಲು ಆಜ್ಞಾಪಿಸಿ, ಆ ಮೀನುಗಾರನ ಭೇಟಿಗೆ ಹೊರಟನು. ಅಲ್ಲಿಗೆ ಹೋಗಿ ಆ ಮದುವೆ ನಿರಾಕರಿಸಲು ಕಾರಣವೇನೆಂಬುದನ್ನು ಕೂಲಂಕಷವಾಗಿ ವಿಚಾರಿಸಿದನು. ಆಗ ಆ ಮೀನುಗಾರನು, ತನ್ನ ಮಗಳು ಭವಿಷ್ಯದಲ್ಲಿ ಜನಿಸಲಿರುವ ರಾಜರ ಮಾತೆಯೆಂದೆನಿಸಿಕೊಂಡರೆ ಮಾತ್ರ ಅರಮನೆಯನ್ನು ಪ್ರವೇಶಿಸಲು ತನ್ನ ಅಭ್ಯಂತರವೇನಿಲ್ಲವೆಂದು ಹೇಳಿದನು.

ಅದಕ್ಕೆ ಯುವರಾಜನು ಹೇಳಿದನು: “ಹಾಗಾದರೆ ನಿನ್ನ ಮಗಳಾದ ಸತ್ಯವತಿಯ ಮಕ್ಕಳ ಹಿತಕ್ಕೋಸ್ಕರ ಸಿಂಹಾಸನದ ಸಮಸ್ತ ಹಕ್ಕುಗಳನ್ನು ನಾನು ಒಮ್ಮನಸ್ಸಿನಿಂದ ಬಿಟ್ಟುಕೊಡಲು ಸಿದ್ಧನಾಗಿದ್ದೇನೆ.”

“ಅಯ್ಯೋ! ಅಪ್ಪಾ ಪ್ರತಿಜ್ಞೆ ಮಾಡುವುದೇನೋ ನಿನಗೆ ಸುಲಭ. ಆ ಮಾತನ್ನು ಒಳ್ಳೆಯ ಮನಸ್ಸಿನಿಂದ ಈಗ ಆಡಿದೆ. ಆಮೇಲೆ ನೀನು ಮದುವೆಯಾಗುವೆ; ನಿನ್ನ ಮಕ್ಕಳ ಭವಿಷ್ಯ? ಕೇವಲ ನಿನ್ನೊಬ್ಬನ ಸಂಕಲ್ಪಕ್ಕಾಗಿ ಅವರು ಸಿಂಹಾಸನವನ್ನು ಬಿಟ್ಟುಕೊಡಲು ಸಮ್ಮತಿಸಲಾರರು.”

ಈ ಮಾತಿನ ಮಥಿತಾರ್ಥವನ್ನು ಕಂಡುಕೊಂಡ ಯುವರಾಜನು ಇಡೀ ಪ್ರಪಂಚದಲ್ಲಿ ಎಲ್ಲಕ್ಕಿಂತ ಮಿಗಿಲಾಗಿ ತನಗೆ ಹೆಚ್ಚು ಪ್ರಿಯಕರವಾದದ್ದು ತನ್ನ ತಂದೆಯ ಸಂತೋಷ ಒಂದೇ ಎಂದೆಣಿಸಿ ಮತ್ತೊಂದು ಘೋರ ಪ್ರತಿಜ್ಞೆಯನ್ನು ಕೈಕೊಂಡನು. “ನಾನೆಂದಿಗೂ ಮದುವೆಯಾಗಲಾರೆನೆಂದು ನಿನಗೆ ವಚನವನ್ನು ನೀಡುವೆನು,” ಎಂದು ಹೇಳಿ, “ಆದ್ದರಿಂದ ಉತ್ತರಾಧಿಕಾರಿ ಎಂದು ಹಕ್ಕು ಬೇಡುವಂಥ ಮಗನು ನನಗಾಗಲು ಸಾಧ್ಯವಿಲ್ಲ. ಈಗಲಾದರೂ ನಿನ್ನ ಮಗಳನ್ನು ನನ್ನ ತಂದೆಗೋಸುಗ ಕರೆದುಕೊಂಡು ಹೋಗಲು ನೀನು ಒಪ್ಪುವಿಯಾ?” ಎಂದು ಮೀನುಗಾರರನ್ನು ಕೇಳಿದನು.

ಮುಖಕ್ಕೆ ಮುಸುಕವನ್ನಳೆದುಕೊಂಡು ಹೊರಬಂದ ಮತ್ಸಗಂಧಿಯನ್ನು ತನ್ನ ತಾಯಿಯೆಂದೇ ಭಾವಿಸಿ ಯುವರಾಜನು ನಮಸ್ಕರಿಸಿದನು ಮತ್ತು ತನ್ನ ರಥದಲ್ಲಿ ಕುಳ್ಳಿರಿಸಿದನು. ನಂತರ ತಾನೇ ಸಾರಥ್ಯವನ್ನು ವಹಿಸಿಕೊಂಡು ಕುದುರೆ ಲಗಾಮನ್ನು ಹಿಡಿದು, ರಥವನ್ನು ಓಡಿಸಿ ನೇರವಾಗಿ ಅರಮನೆಯ ಬಾಗಿಲಿಗೆ ತಂದು ನಿಲ್ಲಿಸಿದನು.

ತಾನು ಮೆಚ್ಚಿದ ಕನೈಯು ವಧುವಾಗಿ ತನ್ನೆದುರು ಬಂದು ನಿಂತದ್ದನ್ನು ನೋಡಿ ಶಂತನು ಮಹಾರಾಜನು ತನ್ನ ಕಣ್ಣುಗಳನ್ನು ತಾನೇ ನಂಬದಾದನು. ಅವಳನ್ನು ಕರೆತಂದ ತನ್ನ ಮಗನಿಗೋಸ್ಕರವೇ ಅವನು ಆಕೆಯನ್ನು ತಾನಾಗಿ ನಿರಾಕರಿಸಿದ್ದನು. ಆದರೆ ಅವಳು ಈಗ ಹೇಗೆ ಮತ್ತು ಏಕೆ ಬಂದಳೆಂಬುದನ್ನು ತಿಳಿದುಕೊಂಡ ಮೇಲೆ ಅವನಿಗೆ ತನ್ನ ಮಗನ ನಿಸ್ವಾರ್ಥತೆಯ ಬಗ್ಗೆ ಮರುಕವುಂಟಾಯಿತು. ಅವನು ಮೊದಲ ಸಲ ಅವನನ್ನು “ಭೀಷ್ಮ”–“ಘೋರ” ಎಂದು ಹೆಸರಿಸಿ ಅತ್ಯಂತ ವಿಸ್ಮಯಕಾರಿಯಾದ ವರವನ್ನು ದಯಪಾಲಿಸಿ ಆಶೀರ್ವದಿಸಿದನು. “ನನ್ನ ಕಂದಾ, ನೀನು ಎಷ್ಟು ಕಾಲ, ಜೀವಿಸ ಬಯಸುವಿಯೋ ಅಷ್ಟು ಕಾಲದವರೆಗೆ ಜೀವಿತವನ್ನು ಮುನ್ನಡೆಸುವೆ. ನಿನ್ನ ಮಹಾಜೀವಕ್ಕೆ ಅಪಾಯವನ್ನುಂಟು ಮಾಡುವುದು ಯಾರಿಂದಲೂ ಸಾಧ್ಯವಿಲ್ಲ. ಮೃತ್ಯುದೇವತೆಯೂ ಸಹ ನಿನ್ನ ಬಳಿ, ನೀನು ಬಯಸಿದ ಹೊರತು, ಸುಳಿಯಲು ಸಾಧ್ಯವಿಲ್ಲ,” ಎಂದು ಮಹಾರಾಜನು ನುಡಿದನು, ತಂದೆ ಆಶೀರ್ವಾದವಾಗಲಿ, ತಾಯಿಯ ಆಶೀರ್ವಾದವಾಗಲಿ ಎಂದೆಂದಿಗೂ ಅದೃಷ್ಟವನ್ನು ಬರಿಸುತ್ತದೆ. ತನ್ನ ತಂದೆಯ ವಚನದ ನಿಜಾಂಶವನ್ನು ತೋರಿಸಿಕೊಡುವಂತೆ ಕುರುಕ್ಷೇತ್ರದಲ್ಲಿ ಸರೋವರದ ಬಳಿ ಭೀಷ್ಮನು ಸುದೀರ್ಘ ಕಾಲ ಶರಾಘಾತದಿಂದ ಮರಣಶಯ್ಯೆಯಲ್ಲಿಯೇ ಪವಡಿಸಿದ್ದನು.

ಅಂದಿನಿಂದೀಚೆಗೆ ಯುವರಾಜನ ಜೀವನವೆಲ್ಲವೂ ಹೆಚ್ಚು ಕಡಿಮೆ ಋಷಿ ಸದೃಶವಾಗಿತ್ತು. ಶೂರನಿಗೆ ತಕ್ಕುದಾದ ಕಾವ್ಯಗಳಲ್ಲಿ ನಿರತನಾಗಿ ಆದರೂ ಧರ್ಮಯುದ್ಧಗಳಲ್ಲಿ ತೊಡಗಿದ್ದ ಅವನು ಸ್ವಪ್ರಯೋಜನಾರ್ಥವಾಗಿ ಯಾವ ಕಾಯ೵ಗಳನ್ನೂ ಮಾಡುತ್ತಿರಲಿಲ್ಲ. ಆದರೆ ಆಜ್ಞೆಯನ್ನು ಕಾಯ್ದುಕೊಳ್ಳಲೋಸುಗವೋ ಸಾಮುದಾಯಕ ಸುಖಕ್ಕಾಗಿಯೇ ಆಚರಿಸುತ್ತಿದ್ದನು. ಪಟ್ಟದರಸರ ಸೇವಾರ್ಥವಾಗಿ ಅವರ ರಾಜ್ಯವನ್ನು ರಕ್ಷಿಸುವ ಹೊಣೆಗಾರಿಕೆ ಅವನದಾಗಿತ್ತು. ಸತ್ಯವತಿಗೆ ಇಬ್ಬರು ಮಕ್ಕಳಾದರು. ಆದರೆ ಅವಳಿಗೆ ವೈಧವ್ಯ ಪ್ರಾಪ್ತಿಯಾದ ಕೆಲವೇ ವರ್ಷಗಳಲ್ಲಿ ಒಬ್ಬ ಮಗನು ಚಿಕ್ಕ ಪ್ರಾಯದಲ್ಲಿಯೇ ಮೃತನಾದನು. ಈ ಕೃತಿಯ ವಂಶವೇ ಇದರಿಂದ ನಂದಿ ಹೋಗುವುದೇನೋ ಎಂದು ಭಾಸವಾಗುತ್ತಿತ್ತು. ಒಂದು ಕಾಲಕ್ಕೆ ಸಾಮಾನ್ಯ ಮೀನುಗಾರನ ಮಗಳಾಗಿದ್ದು ರಾಜಮಾತೆಯಾದ ಅವಳು ಯುವರಾಜನಾದ ಭೀಷ್ಮನನ್ನು ತನ್ನ ಪ್ರತಿಜ್ಞೆಯನ್ನು ತೊರೆದು ವಿವಾಹವಾಗಲು ಮೇಲಿಂದ ಮೇಲೆ ಸೆರಗೊಡ್ಡಿ ಬೇಡಿಕೊಳ್ಳುತ್ತಿದ್ದಳು.

ಆದರೆ ಯಾವ ಬಗೆಯ ಪ್ರೇರಣೆಯಿಂದಲೂ ಅವನ ಪ್ರತಿಜ್ಞಾ ಭಂಗವಾಗುವಂತಿರಲಿಲ್ಲ. ಅದಕ್ಕೆ ಬದಲಾಗಿ ಕಾವಿಧಾರಿ ಸಂನ್ಯಾಸಿಯಂತೆ ನೆರೆ ರಾಜ್ಯದಲ್ಲಿ ನಡೆವ ರಾಜಕುಮಾರಿಯರ ಸ್ವಯಂವರ ಮಂಟಪಕ್ಕೆ ಹೋಗಿ ಅಲ್ಲಿ ಆಗಮಿಸಿದ ಅನ್ಯ ಅತಿಥಿಗಳನ್ನೆಲ್ಲಾ ಯುದ್ಧಕ್ಕೆ ಆಹ್ವಾನಿಸಿದನು. ಅನಂತರ ಎಲ್ಲರನ್ನೂ ಪರಾಭವಗೊಳಿಸಿ ಆ ರಾಜಕುಮಾರಿಯರನ್ನು ಕರೆತಂದು ಸತ್ಯವತಿಯ ಮಗನಿಗೆ ಮದುವೆ ಮಾಡಿಸಿದನು. ಹೆಮ್ಮೆ ಹಾಗು ಅಭಿಮಾನದಿಂದ ಉಸಿರುಗಟ್ಟಿದಂತಾಗಿ, ರಾಣಿವಾಸದ ಸ್ತ್ರೀಯರೆಲ್ಲರೂ ಆ ಉಗ್ರ ಪ್ರತಾಪಿಯ ಪ್ರಭಾವವನ್ನು ಅವಲೋಕಿಸುತ್ತಿದ್ದರು. ನಿಜಕ್ಕೂ ಅವನ ಶಕ್ತಿಯು ಭಯಂಕರವಾಗಿತ್ತು. ಪ್ರತಿಯೊಬ್ಬರೂ ಅವನೆದುರು ಹೋಗಿ ಬಾಗುತ್ತಿದ್ದರು. ಸೂಯ೵ ಪ್ರಕಾಶದಂತೆ ವಜ್ರ ವೈಡೂಯ೵ ಖಚಿತವಾದ ಅವನ ಚಿನ್ನದ ಕವಚವು ಹೊಳೆಯುತ್ತಿತ್ತು.

ಕುರುಕ್ಷೇತ್ರ ಯುದ್ಧದ ಅಂತ್ಯದವರೆಗೂ ಭೀಷ್ಮನೂ ಬಹುಕಾಲ ಬಾಳಿದನು. ಭೀಷ್ಮನೆಂದರೆ ಭೀಕರನು ಎಂಬಂತೆ ಇದ್ದು ಭಾರತದ ಹಲವು ಸವಿನೆನಪುಗಳೊಂದಿಗೆ ಹೊಂದಿಕೊಂಡು ಬಾಳಿದನು. ಅಂತ್ಯಕಾಲದಲ್ಲಿ ಕೃಷ್ಣಧ್ಯಾನದಲ್ಲಿಯೇ ನಿಮಗ್ನನಾಗಿ ಕೊನೆಗೆ ನಿರ್ವಿಕಾರ ಭಾವವನ್ನು ತಳೆದು ಮೃತ್ಯುವಶನಾದನು. ಭಾರತ ಮಾತೆಯ ಶ್ರೇಷ್ಠ ಹಾಗೂ ನಿಷ್ಕಳಂಕ ಯೋಧನಾದ ಅವನು ಭಯರಹಿತನಾಗಿ ಯಾರ ಹಂಗಿಗೂ ಒಳಪಡದ ಶ್ರೇಷ್ಠ ಬದುಕನ್ನು ಬಾಳಿ ವೀರಮರಣವನ್ನಪ್ಪಿದನು.

Leave a Reply

Your email address will not be published. Required fields are marked *