ಶ್ರೀರಾಮ ಜನನ
ಶ್ರೀರಾಮ ಜನನ:
ಶ್ರೀರಾಮನು ಸೂರ್ಯವಂಶದ, ಇಕ್ಷ್ವಾಕು ರಾಜಮನೆತನಕ್ಕೆ ಸೇರಿದವನು. ಶ್ರೀರಾಮನ ತಂದೆಯಾದ ದಶರಥನು ಅಯೋಧ್ಯೆಯ ಮಹಾರಾಜನಾಗಿದ್ದನು.
ದಶರಥನಿಗೆ ಕೌಸಲ್ಯ, ಸುಮಿತ್ರೆ ಮತ್ತು ಕೈಕೇಯಿ ಎಂಬ ಮೂವರು ಪತ್ನಿಯರಿದ್ದರು. ಅವರಿಗೆ ಮಕ್ಕಳಿರಲಿಲ್ಲವಾದ್ದರಿಂದ, ಮಕ್ಕಳನ್ನು ಪಡೆಯುವ ಸಲುವಾಗಿ ದಶರಥನು ‘ಪುತ್ರಕಾಮೇಷ್ಟಿ’ ಯಾಗವನ್ನು ಮಾಡಿದನು. ಯಾಗದ ಪವಿತ್ರಾಗ್ನಿಯಿಂದ ಒಂದು ದಿವ್ಯರೂಪವು ಕಾಣಿಸಿಕೊಂಡು, ದಿವ್ಯ ಪಾಯಸದಿಂದ ತುಂಬಿರುವ ಒಂದು ಬಟ್ಟಲನ್ನು ದಶರಥನಿಗೆ ನೀಡಿತು. ಮತ್ತು ಆ ಪಾಯಸವನ್ನು ಆತನ ಮೂವರು ಪತ್ನಿಯರೂ ಸೇವಿಸಬೇಕೆಂದು ಹೇಳಿತು. ರಾಣಿಯರು ಅತ್ಯಂತ ಭಕ್ತಿಯಿಂದ ಆ ಪಾಯಸವನ್ನು ಸೇವಿಸಿದರು. ಕೆಲವು ಕಾಲಾನಂತರ, ಕೌಸಲ್ಯೆಯು ಶ್ರೀರಾಮನಿಗೆ ಜನ್ಮ ನೀಡಿದಳು. ಹಾಗೆಯೇ ಸುಮಿತ್ರೆಗೆ ಲಕ್ಷ್ಮಣ ಮತ್ತು ಶತ್ರುಘ್ನರೂ, ಕೈಕೇಯಿಗೆ ಭರತನೂ ಹುಟ್ಟಿದರು. ಈ ಮಕ್ಕಳನ್ನು ಪಡೆದು ದಶರಥ ಮಹಾರಾಜನು ಅತ್ಯಂತ ಸಂತೋಷಭರಿತನಾಗಿದ್ದನು. ಅವನು ಪುತ್ರೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಿದನು. ಆ ಮಕ್ಕಳಲ್ಲಿ ಶ್ರೀರಾಮನು ತನ್ನ ಅಸಾಮಾನ್ಯವಾದ ಸತ್ಯನಿಷ್ಠೆ ಮತ್ತು ಕರ್ತವ್ಯಪರಾಯಣತೆಯಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದನು.