ಭಾಗ – 3

Print Friendly, PDF & Email
ಭಾಗ – 3

ಸತ್ಯನು ಮಾಘ ಮಾಸದಲ್ಲಿ ಬೆಳಿಗ್ಗೆ 4 ಗಂಟೆಗೆ ಮಕ್ಕಳನ್ನು ಅಂಜನೇಯ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದನು.


ಕೆಲವು ಮಕ್ಕಳು ತುಂಬಾ ಚಿಕ್ಕವರಾಗಿದ್ದು, ಅವರಿಗೆ ಬೇಗನೆ ಎದ್ದೇಳಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಸತ್ಯ ಅವರನ್ನು ಹತ್ತಿರದ ಕೊಳಕ್ಕೆ ಎತ್ತಿಕೊಂಡೊಯ್ಯುತ್ತಿದ್ದನು. ಅವರಿಗೆ ಮಾಘ ಮಾಸಕ್ಕೆ ಸಂಬಂಧಿಸಿದ ಪವಿತ್ರ ಸ್ನಾನವನ್ನು ಮಾಡಿಸಿ ನಂತರ ದೇವಾಲಯಕ್ಕೆ ‘ಪ್ರದಕ್ಷಿಣೆ ’ಗೆ ಕರೆದೊಯ್ಯುತ್ತಿದ್ದನು.

ಮಕ್ಕಳು ಪ್ರದಕ್ಷಿಣೆ ಮಾಡುವಾಗ ಸತ್ಯ ದೇವಾಲಯದಲ್ಲಿ ಕುಳಿತುಕೊಳ್ಳುತ್ತಿದ್ದನು. ಒಂದು ದಿನ, ಅವರು ಸತ್ಯನನ್ನು ದೇವಾಲಯ ಪ್ರದಕ್ಷಿಣೆ ಹಾಕಲು ಅವರೊಂದಿಗೆ ಸೇರಿಕೊಳ್ಳಬೇಕೆಂದು ಒತ್ತಾಯಿಸಿದರು. “ನೀನಿಲ್ಲದೆ ನಾವು ದೇವಾಲಯದ ಪ್ರದಕ್ಷಿಣೆ ಹೋಗುವುದಿಲ್ಲ” ಎಂದು ಅವರು ಹೇಳಿದರು. ಸತ್ಯ ಮೊದಲು, ‘ತಾನು ದೇವಾಲಯದ ಒಳಗಿನಿಂದಲೇ ಅವರನ್ನು ನೋಡುತ್ತಿದ್ದೇನೆ’ ಎಂದು ಹೇಳಿ ಹೋಗಲು ನಿರಾಕರಿಸಿದನು. ಆದರೆ ಅಂತಿಮವಾಗಿ ಅವರ ಒತ್ತಡಕ್ಕೆ, ಅವನು ದೇವಾಲಯವನ್ನು ಪ್ರದಕ್ಷಿಣೆ ಹಾಕಲು ಪ್ರಾರಂಭಿಸಿದನು.

ನಂತರ, ಈ ಘಟನೆಯನ್ನು ಉಲ್ಲೇಖಿಸುವಾಗ ಸ್ವಾಮಿ ಈ ರೀತಿ ಹೇಳಿದರು, “ನೀವು ನಂಬುತ್ತೀರೋ ಇಲ್ಲವೋ ಆ ದಿನ ಸ್ವತಃ ಆಂಜನೇಯನೇ ಬಂದು ದೇವಾಲಯದ ಸುತ್ತಲೂ ಹೋಗದಂತೆ ನನ್ನನ್ನು ತಡೆದನು. ಆ ಅಂಜನೇಯನು ‘ಓ ದೇವರೇ, ಶ್ರೀ ರಾಮ! ನಾನು ನಿನ್ನನ್ನು ಪ್ರದಕ್ಷಿಣೆ ಮಾಡಬೇಕೇ ಹೊರತು, ನೀವು ಇದನ್ನು ಮಾಡಬಾರದು” ಎಂದನು.

ಎಲ್ಲಾ ಮಕ್ಕಳು ಸತ್ಯನನ್ನು ಹಿಡಿದು, ಅವರೊಂದಿಗೆ ಅವನನ್ನು ಎಳೆಯಲು ಪ್ರಯತ್ನಿಸಿದರು. ಆದರೆ ಅವರಿಗೆ ಸತ್ಯನನ್ನು ಸರಿಸಲು ಸಾಧ್ಯವಾಗಲಿಲ್ಲ. ಆಗ ಸತ್ಯ ಅವರಿಗೆ, “ಈ ಅಂಜನೇಯನನ್ನು ಸಾಮಾನ್ಯ ಕೋತಿ ಎಂದು ತಪ್ಪಾಗಿ ಗ್ರಹಿಸಬೇಡಿ, ದೇವಾಲಯವನ್ನು ಸುತ್ತುವರಿಯಲು ಅವನು ನನ್ನನ್ನು ಬಿಡುವುದಿಲ್ಲ” ಎಂದನು.

ಇದರ ನಂತರ ಮಕ್ಕಳ ಹೃದಯದಲ್ಲಿ ದೊಡ್ಡ ಪರಿವರ್ತನೆ ಉಂಟಾಯಿತು. ಅವರು ಆಂಜನೇಯ ದೇವಸ್ಥಾನದಲ್ಲಿ ತಾವು ಕಂಡದ್ದನ್ನು ಹಳ್ಳಿಯ ಜನರಿಗೆ ತಿಳಿಸಲು ಹೊರಟರು. ಸುದ್ದಿ ಸುಬ್ಬಮ್ಮನಿಗೂ ತಲುಪಿತು. ಮರುದಿನ ಅವಳು ಸತ್ಯನನ್ನು ತನ್ನ ಮನೆಗೆ ಕರೆದು, “ರಾಜು ನಾನು ಕೆಲವು ದೋಸೆಗಳನ್ನು ಸಿದ್ಧಪಡಿಸಿದ್ದೇನೆ, ಅವುಗಳನ್ನು ನೀನು ಬಂದು ತಿನ್ನು” ಎಂದಳು. ಆ ದಿನಗಳಲ್ಲಿ, ಇಡ್ಲಿ ಮತ್ತು ದೋಸೆಯಂತಹ ಆಹಾರ ಪದಾರ್ಥಗಳನ್ನು ಶ್ರೀಮಂತ ಜನರ ಆಹಾರವೆಂದು ಪರಿಗಣಿಸಲಾಗಿತ್ತು!. ಸತ್ಯ ಎಂದಿಗೂ ಒಂಟಿಯಾಗಿ ತಿನ್ನಲು ಒಪ್ಪುತ್ತಿರಲಿಲ್ಲ, ಆದ್ದರಿಂದ ಅವನು ಎಲ್ಲಾ ಮಕ್ಕಳಿಗೂ ಆಹಾರವನ್ನು ನೀಡಿದರೆ ಮಾತ್ರ ಬರುತ್ತೇನೆ ಎಂದು ಸುಬ್ಬಮ್ಮನಿಗೆ ಹೇಳಿದನು. ಸುಬ್ಬಮ್ಮ ನಂತರ ಎಲ್ಲಾ ಮಕ್ಕಳಿಗೆ ದೋಸೆಗಳನ್ನು ಸಿದ್ಧಪಡಿಸಿದಳು.

ಸತ್ಯ ಇಲ್ಲದಿದ್ದಾಗ ಅವಳು ಮಕ್ಕಳನ್ನು ತನ್ನ ಬಳಿಗೆ ಕರೆದು, “ರಾಜು ಸ್ನೇಹ ಹೊಂದಲು ನೀವು ಎಷ್ಟು ಅದೃಷ್ಟಶಾಲಿ ಎಂದು ನಿಮಗೆ ತಿಳಿದಿದೆಯೇ? ಅವನು ಸಾಮಾನ್ಯ ಹುಡುಗನಲ್ಲ. ಅವನ ಆಜ್ಞೆಯನ್ನು ಅನುಸರಿಸಿ. ಯಾವುದೇ ಸಂದರ್ಭದಲ್ಲೂ ಅವನಿಗೆ ಅವಿಧೇಯರಾಗಬೇಡಿ. ಆತನನ್ನು ಸಂತೋಷಪಡಿಸುವ ಮೂಲಕ ಸಂತೋಷವಾಗಿರಿ. ನೀವು ಏನಾದರೂ ತಪ್ಪು ಮಾಡಿದರೆ, ಅವನು ತನ್ನ ಅಸಮಾಧಾನವನ್ನು ವ್ಯಕ್ತಪಡಿಸುವುದಿಲ್ಲ, ಆದರೆ ನಿಮ್ಮ ಕ್ರಿಯೆಗಳ ಪರಿಣಾಮಗಳನ್ನು ನೀವು ಎದುರಿಸಬೇಕಾಗುತ್ತದೆ. ಆದುದರಿಂದ ಆತನು ಎಂದಿಗೂ ಅತೃಪ್ತಿ ಅನುಭವಿಸದ ರೀತಿಯಲ್ಲಿ ವರ್ತಿಸಿ” ಎಂದಳು.

ಸುಬ್ಬಮ್ಮ ತನ್ನ ಜೀವನವನ್ನು ಸ್ವಾಮಿಗೆ ಅರ್ಪಿಸಿದಳು. ಅವಳು ಎಲ್ಲಾ ಭಕ್ತರಿಗೆ ಉಚಿತ ಆಹಾರವನ್ನು ನೀಡುತ್ತಿದ್ದಳು ಮತ್ತು ಕೊನೆಯ ಉಸಿರಿರುವವರೆಗೂ ಸ್ವಾಮಿಯ ಸೇವೆ ಸಲ್ಲಿಸುತ್ತಿದ್ದಳು. ಒಂದು ದಿನ, ಬಾಬಾ ಅವಳೊಂದಿಗೆ ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ, “ಸುಬ್ಬಮ್ಮ, ನಿನಗೆ ಏನು ಬೇಕು?” ಎಂದು ಕೇಳಿದರು. ಅವಳು ಮೃದುವಾಗಿ “ಸ್ವಾಮಿ”, ನನಗೆ ಏನೂ ಬೇಡ. ಆದರೆ ನನ್ನ ಜೀವನದ ಕೊನೆಯ ಕಾಲದಲ್ಲಿ, ದಯವಿಟ್ಟು ನಿಮ್ಮ ಕೈಗಳಿಂದ ನನ್ನ ಬಾಯಿಗೆ ನೀರನ್ನು ಸುರಿಯುವ ಮೂಲಕ ನನ್ನ ಜೀವನವನ್ನು ಪವಿತ್ರಗೊಳಿಸಿ” ಎಂದು ಕೇಳಿದಳು. ಅವಳ ಆಸೆಯನ್ನು ಈಡೇರಿಸುವುದಾಗಿ ಸ್ವಾಮಿ ಭರವಸೆ ನೀಡಿದರು.

ನಂತರ, ಕೆಲವು ಭಕ್ತರ ಕೋರಿಕೆಯ ಮೇರೆಗೆ ಸ್ವಾಮಿ ಹತ್ತು ದಿನಗಳ ಕಾಲ ಚೆನ್ನೈಗೆ ಹೋದರು. ಅದು ಯುದ್ಧದ ಸಮಯ. ಪ್ರತಿ ಗಂಟೆಗೆ ವಾಯು-ದಾಳಿ ಸೈರನ್ ಸದ್ದು ಮಾಡಿದಾಗ ಬೀದಿಗಳು ನಿರ್ಜನವಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ, ಸ್ವಾಮಿಗೆ ಪುಟ್ಟಪರ್ತಿಗೆ ಮರಳಲು ಸಾಧ್ಯವಾಗಲಿಲ್ಲ. ಈ ಮಧ್ಯೆ, ಸುಬ್ಬಮ್ಮ ತೀವ್ರ ಅನಾರೋಗ್ಯಕ್ಕೆ ಒಳಗಾದರು. ಆಕೆಯನ್ನು ಬುಕ್ಕಪಟ್ಟಣಂಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ತೀರಿಕೊಂಡರು. ಆಕೆಯ ಸಂಬಂಧಿಕರು ವ್ಯಂಗ್ಯವಾಗಿ ಹೇಳಿದರು “ಸಾಯಿಬಾಬಾ ಅವಳ ಕೊನೆಯ ಕ್ಷಣದಲ್ಲಿ ಬಾಯಿಗೆ ನೀರನ್ನು ಬಿಡುವುದಾಗಿ ಮಾತನ್ನು ಕೊಟ್ಟಿದ್ದರು. ಆದರೆ ಅವನು ಈಗ ಬಂದಿದ್ದಾನೆಯೇ? ಅವನು ಎಲ್ಲಿದ್ದಾನೆ?” ಎಂದರು. ಬಾಬಾ ಮದ್ರಾಸ್ ನಿಂದ ಹಿಂದಿರುಗುತ್ತಿದ್ದಾಗ ಸ್ಮಶಾನದ ಮುಂದೆ ಹಾದುಹೋದರು. ಅಲ್ಲಿ ಮರದ ಕಟ್ಟಿಗೆಯನ್ನು ರಾಶಿ ಇಡಲಾಗಿತ್ತು. ಬಾಬಾ ಯಾರ ಅಂತ್ಯಕ್ರಿಯೆ ನಡೆಸಲಿದ್ದಾರೆ ಎಂದು ವಿಚಾರಿಸಿದರು. ಧೋಬಿ ಸುಬ್ಬಣ್ಣ, “ಸ್ವಾಮಿ, ಸುಬ್ಬಮ್ಮ ಮೂರು ದಿನಗಳ ಹಿಂದೆ ನಿಧನರಾದರು” ಎಂದು ಹೇಳಿದರು. ಸ್ವಾಮಿ ಸುಬ್ಬಮ್ಮನ ಶವವನ್ನು ಇಟ್ಟಿದ್ದ ಮನೆಗೆ ಹೋದರು. ಸುಬ್ಬಮ್ಮನ ಸಹೋದರಿ ಅವರನ್ನು ನೋಡಿದ ಕೂಡಲೇ, “ಬಾಬಾ, ಅವಳು ನೀನು ಬರಬೇಕೆಂದು ಹಂಬಲಿಸಿದಳು. ಕೊನೆಯ ಕ್ಷಣದಲ್ಲಿ ನೀವು ಅವಳ ಬಾಯಿಗೆ ಸುರಿಯುವ ನೀರಿಗಾಗಿ ಅವಳು ಹಂಬಲಿಸುತ್ತಿದ್ದಳು. ಅವಳು ನಿರಾಶೆಯಿಂದ ಸತ್ತಳು” ಎಂದು ಹೇಳಿದಳು. “ಅಂತಹ ಕೆಲಸ ಎಂದಿಗೂ ಸಂಭವಿಸುವುದಿಲ್ಲ” ಎಂದು ಸ್ವಾಮಿ ಹೇಳಿದರು. ಅವರು ಸ್ವಲ್ಪ ನೀರು ಕೇಳಿದರು ಮತ್ತು ಸುಬ್ಬಮ್ಮನ ಮುಖದಿಂದ ಬಟ್ಟೆಯನ್ನು ತೆಗೆದರು. ಮೂರು ದಿನಗಳು ಕಳೆದಿದ್ದರಿಂದ ಇರುವೆಗಳು ಅವಳ ದೇಹದ ಮೇಲೆ ತೆವಳುತ್ತಿದ್ದವು. “ಸುಬ್ಬಮ್ಮ”, ಎಂದು ಸ್ವಾಮಿ ಪ್ರೀತಿಯಿಂದ ಕರೆದರು. ಅವಳು ಕಣ್ಣು ತೆರೆದು, ಸ್ವಾಮಿಯ ಕೈಗಳನ್ನು ಹಿಡಿದು ಕಣ್ಣೀರಿಟ್ಟಳು. ಸ್ವಾಮಿ ಅವಳ ಮುಖದಿಂದ ಕಣ್ಣೀರನ್ನು ಒರೆಸುತ್ತಾ, “ಇನ್ನು ನಿನ್ನ ಕಣ್ಣುಗಳನ್ನು ಶಾಂತಿಯಿಂದ ಮುಚ್ಚು” ಎಂದು ಹೇಳಿದರು. ಅವರು ಪವಿತ್ರ ನೀರನ್ನು ಅವಳ ಬಾಯಿಗೆ ಸುರಿದು ಅವರ ವಾಗ್ದಾನವನ್ನು ಉಳಿಸಿಕೊಂಡರು.

ನಾವು ಸ್ವಾಮಿಯ ಬಾಲ್ಯದ ಕಥೆಗಳನ್ನು ಕೇಳುತ್ತಿದ್ದೇವೆ, ಇದರಿಂದಾಗಿ ಸ್ವಾಮಿ ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೂ ಸಹ ಆದರ್ಶಪ್ರಾಯ ಜೀವನವನ್ನು ನಡೆಸಿದರು ಎಂದು ನಮಗೆ ತಿಳಿಯಬಹುದು. ಅವರ ಬಾಲ್ಯದಲ್ಲಿ ಇತರರು ಮಾಡಿದ ತೊಂದರೆಗಳಿಗೆ ಒಳಗಾಗಲು ಅವರಿಗೆ ಯಾವುದೇ ಕಾರಣವಿರಲಿಲ್ಲ. ಅವರು ಇದನ್ನು ಸಂಪೂರ್ಣವಾಗಿ ಜನರಿಗೆ ಉದಾಹರಣೆಯ ರೀತಿಯಲ್ಲಿ ಮಾಡಿದರು. ಆದುದರಿಂದ ಅವರ ವಿದ್ಯಾರ್ಥಿಗಳಾದ ನಾವೂ ಸಹ ಹಣವನ್ನು ಅಥವಾ ಸಮಯವನ್ನು ವ್ಯರ್ಥ ಮಾಡದ ರೀತಿಯಲ್ಲಿ ವರ್ತಿಸಬೇಕು ಮತ್ತು ಒಳ್ಳೆಯ ಆಲೋಚನೆಗಳು, ಉತ್ತಮ ಅಭ್ಯಾಸಗಳು ಮತ್ತು ಉತ್ತಮ ಕಾರ್ಯಗಳನ್ನು ಬೆಳೆಸಿಕೊಳ್ಳಬೇಕು. ಸ್ವಾಮಿ ಹೇಳುತ್ತಾರೆ, “ಭಗವಂತನನ್ನು ನಂಬಿ, ಅವನನ್ನು ತೃಪ್ತಿ ಪಡಿಸಿ ಮತ್ತು ನಿಮ್ಮ ಜೀವನವನ್ನು ಉದ್ಧಾರ ಮಾಡಿಕೊಳ್ಳಿರಿ.”

Leave a Reply

Your email address will not be published. Required fields are marked *