Chitha Chora
Compilation of Divine Discourses
ಶ್ರೀ ಕೃಷ್ಣನ ಆಕರ್ಷಣೆ
ತನ್ನ ದೈವೀಕ ಲೀಲೆಗಳು ಮತ್ತು ಪವಾಡಗಳಿಂದಾಗಿ ಹಾಗೂ ತನ್ನ ಪ್ರೇಮದಿಂದಾಗಿ, ಮನಸ್ಸನ್ನು ಇಂದ್ರಿಯಗಳ ಆಕರ್ಷಣೆಯಿಂದ ದೂರಮಾಡಿ ತನ್ನೆಡೆಗೆ ಆಕರ್ಷಿಸುವವನು. ಬಾಬಾರವರು ಹೇಳುವಂತೆ, ಎಲ್ಲರನ್ನೂ ತನ್ನತ್ತ ಆಕರ್ಷಿಸುವುದು ದೈವಿಕತೆಯ ಒಂದು ಲಕ್ಷಣ. ಈ ದೈವೀಕ ಆಕರ್ಷಣೆಯು ಯಾರನ್ನು ಮೋಸಮಾಡುವುದಕ್ಕಾಗಲೀ ಅಥವಾ ದಾರಿತಪ್ಪಿಸುವುದಕ್ಕಾಗಿಯೂ ಅಲ್ಲ. ಅದು ನಮ್ಮನ್ನು ಪರಿವರ್ತಿಸಿ, ಬದಲಾಯಿಸಿ, ಸುಧಾರಣೆ ಮಾಡುವ ಸಲುವಾಗಿ, ಎಂದು ಅವರು ಸೂಚಿಸಿದ್ದಾರೆ.
‘ಶ್ರೀ ಕೃಷ್ಣ ತತ್ವ’ದಲ್ಲಿ ಕಂಡು ಬರುವ ‘ಬೆಳೆಸುವ ಅಂಶ’
‘ಕೃಷ್ಣ’ ಎಂಬ ಪದದ ಮೂಲ ಧಾತು ಪದ ‘ಕೃಷ್.’ ಇದರ ಅರ್ಥ ‘ಬೆಳೆ ಬೆಳೆಯುವ ಸಲುವಾಗಿ ಹೊಲವನ್ನು ಹಸನಾಗಿಸುವುದು.’ ‘ಕೃಷ್ಣ’ ಎಂಬ ಪದದ ಅರ್ಥ ‘ಹೃದಯಗಳಲ್ಲಿ ಮನೆಮಾಡಿರುವ ನಕಾರಾತ್ಮಕ ಪ್ರವೃತ್ತಿಗಳೆಂಬ ಕಳೆಗಳನ್ನು ತೆಗೆದುಹಾಕಿ, ಅಲ್ಲಿ ಶ್ರದ್ಧೆ, ಆನಂದ ಮತ್ತು ಧೈರ್ಯಗಳೆಂಬ ಸಕಾರಾತ್ಮಕ ಪ್ರವೃತ್ತಿಗಳನ್ನು ಬಿತ್ತುವುದು. ಶ್ರೀ ಕೃಷ್ಣನು ತನ್ನ ಭಕ್ತರ ಹೃದಯಗಳಲ್ಲಿ ಆನಂದವೆಂಬ ಫಸಲನ್ನು ಬೆಳೆಸಿ, ಅವರಿಗೆ ಜ್ಞಾನ, ಆನಂದ, ಮತ್ತು ತಮ್ಮ ಅಸ್ತಿತ್ವದ ಬಗ್ಗೆ ಅರಿವನ್ನು ನೀಡುವನು.
‘ರಾಧೇ’ ಎಂಬುದು ಕೇವಲ ಒಬ್ಬ ಸ್ತ್ರೀಯನ್ನು ಮಾತ್ರವೇ ಸೂಚಿಸುವುದಲ್ಲ. ಅದು ಭಗವಂತನಿಗೆ ಸಂಪೂರ್ಣ ಶರಣಾಗಿ, ಅವನಿಗೆ ತಮ್ಮ ಹೃದಯಗಳನ್ನು ಸಮರ್ಪಿಸಿಕೊಂಡ ಎಲ್ಲರೂ ‘ರಾಧೆಯರೇ.’ “ನಿಮ್ಮ ಎಲ್ಲ ಆಲೋಚನೆಗಳು ಮತ್ತು ಕ್ರಿಯೆಗಳನ್ನು ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಿದಲ್ಲಿ, ನೀವೂ ಸಹ ರಾಧೆಯ ಮಟ್ಟಕ್ಕೆ ಮೇಲೇರುವಿರಿ. ‘ರಾಧೆ’ ಎಂಬುದು ಕೇವಲ ಒಬ್ಬ ಸ್ತ್ರೀಗೆ ಮಾತ್ರವೇ ಅನ್ವಯವಾಗುವುದಲ್ಲ. ಯಾರೆಲ್ಲರೂ ಶ್ರೀ ಕೃಷ್ಣನಿಗೆ ಸಂಪೂರ್ಣ ಶರಣಾಗುವರೋ ಅವರೆಲ್ಲರೂ ರಾಧೆಯರೇ”- ಭಗವಾನ್ ಬಾಬಾ.
ನೀವು ನಿಮ್ಮ ಶಿರದಲ್ಲಿ ಜ್ಞಾನ ಮತ್ತು ಧೀಮಂತಿಕೆಯನ್ನು ಬೆಳೆಸಿಕೊಂಡರೆ ಮಾತ್ರ ಸಾಲದು, ನಿಮ್ಮ ಹೃದಯಗಳಲ್ಲಿ ತೀವ್ರ ಭಕ್ತಿಯನ್ನು ಸಹ ತುಂಬಿಕೊಳ್ಳಬೇಕು ಎಂಬುದೇ ರಾಧೆಯ ಸಂದೇಶ. ಶಿರದಲ್ಲಿ ಕೇವಲ ಜ್ಞಾನವನ್ನು ತುಂಬಿಕೊಳ್ಳುವುದಕ್ಕಿಂತಲೂ, ಹೃದಯದಲ್ಲಿ ಪ್ರೇಮವನ್ನು ತುಂಬಿಕೊಳ್ಳಿ. ವೈವಿಧ್ಯತೆಯಲ್ಲಿ ಅಡಗಿರುವ ಏಕತೆಯನ್ನು ಗುರುತಿಸಿ. ಇದು ವಿಶ್ವ ವ್ಯಾಪಕ. ನಿಮ್ಮ ಇಂದ್ರಿಯಗಳನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಿ, ಇಲ್ಲದಿದ್ದಲ್ಲಿ ಅವು ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುತ್ತವೆ. ಅಶಾಶ್ವತ ಮತ್ತು ಸದಾ ಬದಲಾವಣೆ ಹೊಂದುವ ಈ ಜಗತ್ತನ್ನು ನಂಬದಿರಿ, ನಿಮ್ಮ ಗಮನವನ್ನು ನಿತ್ಯ ಸತ್ಯನಾದ ಭಗವಂತನ ಮೇಲೆ ಕೇಂದ್ರೀಕರಿಸಿ. ಜಗತ್ತನ್ನು ನಂಬದಿರಿ, ಮೃತ್ಯುವಿಗೆ ಭಯಪಡದಿರಿ, ದೇವರನ್ನು ಮರೆಯದಿರಿ, – ಇವೆಲ್ಲವೂ ರಾಧೆಯ ಸಂದೇಶಗಳೇ.
ನಾವು ಸದಾ ಕಾಲ, ಎಲ್ಲಾ ಗುಣಗಳಲ್ಲಿ ಭಗವಂತನನ್ನು ಗುರುತಿಸಿ, ಆನಂದಿಸಬೇಕು. ಇತರರ ಏಳಿಗೆ ಮತ್ತು ಅಭಿವೃದ್ಧಿಗಳನ್ನು ನೋಡಿ, ಅಸೂಯೆ ಪಡದಿರಿ. ಗೋಪಿಕೆಯರಲ್ಲಿ ಕಂಡುಬಂದ ಈ ಅಸೂಯೆಯನ್ನು ಗುರುತಿಸಿ, ಅವರಿಗೆ ಇದ್ದ ಎಲ್ಲಾ ಸಂಶಯಗಳನ್ನು ದೂರಮಾಡಿದ್ದೂ ಸಹ ರಾಧೆಯೇ.
ಕೃಪೆ: http://sssbpt.info/summershowers/ss1978/ss1978-23.pdf
ನವನೀತ ಚೋರಂ
ಭಗವಾನ್ ಬಾಬಾರವರು ಹೀಗೆ ಹೇಳುತ್ತಾರೆ, “ಶ್ರೀ ಕೃಷ್ಣನನ್ನು ನವನೀತ ಚೋರನೆಂದು ವರ್ಣಿಸುತ್ತಾರೆ. ಕೃಷ್ಣನು ಕದ್ದ ಬೆಣ್ಣೆ ಯಾವುದು? ಅದೇ ಭಕ್ತರ ಹೃದಯಗಳು. ಭಕ್ತನು ತನ್ನ ಹೃದಯವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಿದಾಗ, ಶ್ರೀ ಕೃಷ್ಣನು ಅದನ್ನು ಸ್ವೀಕರಿಸುತ್ತಾನೆ. ಇದನ್ನು ಕಳ್ಳತನವೆಂದು ಹೇಳಲಾಗುವುದೇ? ವ್ಯಕ್ತಿಗೆ ಸೇರಿದ ವಸ್ತುಗಳನ್ನು ಅವನಿಗೆ ಅರಿವಾಗದಂತೆ ತೆಗೆದುಕೊಂಡು ಹೋದರೆ ಮಾತ್ರ ಅದು ‘ಕಳ್ಳತನ,’ ಅವನು ‘ಕಳ್ಳ’ ಎನ್ನಬಹುದು. ಕೃಷ್ಣನು ಕೇಳುವುದು ನಿಮ್ಮ ಪ್ರೇಮವನ್ನು ಮಾತ್ರ. ನೀವು ಅದನ್ನು ಅರ್ಪಿಸಿದಾಗಲೇ ಅವನು ಅದನ್ನು ಸ್ವೀಕರಿಸುವುದು. ಶ್ರೀ ಕೃಷ್ಣನನ್ನು ‘ಚೋರ’ನೆಂದು ಕರೆಯುವವರು, ಅವನ ಮೇಲೆ ಪರಿಪೂರ್ಣ ಪ್ರೇಮವನ್ನು ಹೊಂದಿರುವ ಭಕ್ತರು. ಇದು ಅವಹೇಳನ ಮಾಡುವ ಉದ್ದೇಶದಿಂದಲ್ಲ. ತಮ್ಮ ತಮ್ಮ ಭಕ್ತಿ ಮತ್ತು ತಿಳುವಳಿಕೆಗಳಿಗೆ ಅನುಸಾರವಾಗಿ, ಭಕ್ತರು ದೇವರನ್ನು ವಿವಿಧ ರೀತಿಯಲ್ಲಿ ವರ್ಣಿಸುತ್ತಾರೆ. ಇದು ವೈಯುಕ್ತಿಕ ಅನುಭವವನ್ನು ವ್ಯಕ್ತಮಾಡುವಿಕೆ ಮಾತ್ರ. ದೈವತ್ವವು ಈ ಎಲ್ಲಾ ನಿರ್ಬಂಧ ಮತ್ತು ಗುಣಗಳಿಗೆ ಮೀರಿದುದು.”
ಕೃಪೆ: http://sssbpt.info/ssspeaks/volume19/sss19-18.pdf
ಹೃದಯ ಚೋರ – ಸ್ವಾಮಿ
ಸ್ವಾಮಿಯವರು ಹಲವಾರು ಸಂದರ್ಭಗಳಲ್ಲಿ ಶ್ರೀ ಸತ್ಯಸಾಯಿ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡುತ್ತಿದ್ದುದು ಉಂಟು. ೧೯೯೪, ೯೫ ಮತ್ತು ೯೬ ರಲ್ಲಿ ಅಲ್ಲಿ ನಡೆದ ವಸ್ತು ಪ್ರದರ್ಶನಗಳ ಸಂದರ್ಭಗಳಲ್ಲೂ ಸ್ವಾಮಿಯವರು ಅಲ್ಲಿಗೆ ಆಗಮಿಸಿ ಅಲ್ಲಿ ಹಲವಾರು ಗಂಟೆಗಳನ್ನು ಕಳೆಯುತ್ತಿದ್ದರು. ಪ್ರತಿಯೊಂದು ಮಾದರಿಯ ಮುಂದೆ ನಿಂತು, ಅದರ ಬಗ್ಗೆ ವಿವರಿಸಲು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು ಇಂತಹ ಒಂದು ಭೇಟಿಯ ಸಂದರ್ಭದಲ್ಲೇ ಪ್ರಸಿದ್ಧ, “burglar alarm leela,” (ಕಳ್ಳನು ನುಸುಳಿರುವುದರ ಬಗ್ಗೆ ಎಚ್ಚರಿಸುವ ಕರೆಘಂಟೆ) ನಡೆಯಿತು. ಆ ಮಾದರಿಯ ಮೇಲೆ ತಮ್ಮ ಕೈಯನ್ನು ಇಡಬೇಕೆಂದು ಅದರ ಬಗ್ಗೆ ವಿವರಿಸುತ್ತಿದ್ದ ವಿದ್ಯಾರ್ಥಿಯು, ಸ್ವಾಮಿಯವರನ್ನು ಪ್ರಾರ್ಥಿಸಿದ. ಆಗ ಆ ಕರೆಘಂಟೆಯು ಹೊಡೆಯುವುದೆಂದೂ ವಿವರಿಸಿದ. ಸ್ವಾಮಿ ಅದರ ಮೇಲೆ ಕೈ ಇಟ್ಟರು. ಆದರೆ ಗಂಟೆ ಹೊಡೆಯಲೇ ಇಲ್ಲ. ನಂತರ ಅದರ ಮೇಲೆ ಕೈ ಇಡಲು ಸ್ವಾಮಿಯವರು ಆ ವಿದ್ಯಾರ್ಥಿಗೆ ಹೇಳಿದರು. ಅವನು ಕೈ ಇಟ್ಟಕೂಡಲೇ ಆ ಗಂಟೆಯು ಜೋರಾಗಿ ಹೊಡೆಯಲು ಪ್ರಾರಂಭಿಸಿತು. ಈ ರೀತಿ ಎರಡು ಬಾರಿ ನಡೆಯಿತು. ಆಗ ಸ್ವಾಮಿಯವರು ಅದರ ಬಗ್ಗೆ ಒಂದು ಸುಂದರ ವಿವರಣೆಯನ್ನು ನೀಡಿದರು. ‘ನಾನು ಚೋರನಲ್ಲ, ಆದರೆ ಚಿತ್ತ ಚೋರ – ಹೃದಯಗಳನ್ನು ಕದಿಯುವವನು,’ ಎಂದು.