ಧರ್ಮರಾಜನ ಬುದ್ಧಿ ಮತ್ತೆ

Print Friendly, PDF & Email
ಧರ್ಮರಾಜನ ಬುದ್ಧಿ ಮತ್ತೆ

ಧರ್ಮರಾಜ ಅಥವಾ ಯುಧಿಷ್ಠಿರನು ಪಾಂಡವರ ಹಿರಿಯಣ್ಣನು. ಧರ್ಮವೇ ರೂಪವೆತ್ತಿ ಬಂದಂತೆ ಧಾರ್ಮಿಕ ನಡತೆಯನ್ನೇ ಆಶ್ರಯಿಸಿಕೊಂಡಿರುವವನು. ಇದನ್ನು ನಿದರ್ಶಿಸುವ ಅನೇಕ ಸನ್ನಿವೇಶಗಳು ಮಹಾಭಾರತದಲ್ಲಿ ಇವೆ. ಅವುಗಳಲ್ಲಿ ಒಂದು ಉಪಾಖ್ಯಾನ ಸಾಕ್ಷಾತ್ ಯಮಧರ್ಮರಾಜನು ಅಸಾಧಾರಣ ಪರಿಸ್ಥಿತಿಯಲ್ಲಿ ಅವನೆದುರು ಬಂದು ಪರೀಕ್ಷಿಸಿದ್ದು.

ಒಮ್ಮೆ ಪಾಂಡವರು ಅರಣ್ಯದಲ್ಲಿ ಅಡ್ಡಾಡುತ್ತಿರುವಾಗ ಅವರಿಗೆ ಅತೀವ ಬಾಯಾರಿಕೆಯಾಯಿತು. ಅನತಿ ದೂರದಲ್ಲಿ ಒಂದು ನೀರಿನ ಕೊಳ ಇದೆ ಎಂಬುದನ್ನು ಕಿರಿಯವನಾದ ಸಹದೇವನು ಮರದ ಮೇಲೇರಿ ನೋಡಿದನು. ತನ್ನ ಸೋದರರಿಗೆಲ್ಲಾ ಅಲ್ಲಿಯೇ ಕಾಯಲು ಹೇಳಿ ತಾನು ನೋಡಿದ ದಿಕ್ಕಿನ ಕಡೆಗೆ ಧಾವಿಸಿ ಹೋದನು. ಕೊಳವನ್ನು ಕಂಡಾಕ್ಷಣ ಮೊದಲು ತನ್ನ ತೃಷೆಯನ್ನು ಹೋಗಲಾಡಿಸಿ, ಅನಂತರ ಕೊಡದಲ್ಲಿ ನೀರು ತುಂಬಿಕೊಳ್ಳಲು ನಿಶ್ಚಯಿಸಿದನು.

ಆದರೆ ಅವನು ಕೊಳದಲ್ಲಿ ಇಳಿಯುವಷ್ಟರಲ್ಲಿ ಒಂದು ಧ್ವನಿ ಕೇಳಿಸಿತು. “ನಿಲ್ಲು, ಈ ಕೊಳವನ್ನು ಕಾಯುತ್ತಿರುವ ಯಕ್ಷ ನಾನು. ನನ್ನ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಲ್ಲದೆ ನೀನು ನೀರು ಕುಡಿಯಲು ಸಾಧ್ಯವಿಲ್ಲ.” ಸಹದೇವನು ಆ ಅಧಿಕಾರವಾಣಿಯನ್ನು ನಿರ್ಲಕ್ಷಿಸಿ ಸ್ವಲ್ಪ ನೀರನ್ನು ಗುಟುಕರಿಸಿದನು. ತಕ್ಷಣ ಮತ್ತೇರಿದವನಾಗಿ ಆ ಕೊಳದ ದಂಡೆಯ ಮೇಲೆ ಬಿದ್ದು ಮೃತನಾದನು.

ಸ್ವಲ್ಪ ಹೊತ್ತಿನ ತರುವಾಯ ತನ್ನ ತಮ್ಮನನ್ನು ಹುಡುಕುತ್ತಾ ಬಂದು ನಕುಲನು ಅದೇ ಗತಿಯನ್ನು ಪಡೆದನು. ಅದರಂತೆ ಅರ್ಜುನ ಭೀಮರು ಸಹ ಮೃತರಾದರು.

ಕಟ್ಟಕಡೆಗೆ ಯುಧಿಷ್ಠಿರನು ಕೊಳದ ಬಳಿ ಬಂದನು. ತನ್ನ ನಾಲ್ವರು ಸೋದರರು ಮೃತರಾಗಿ ಬಿದ್ದುದನ್ನು ಕಂಡು ಬೆರಗಾದನು. ಸಾವಕಾಶವಾಗಿ ಕೊಳದ ಬಳಿ ಹೊರಟಾಗ ಯಕ್ಷನ ಧ್ವನಿ ಅವನಿಗೆ ಕೇಳಿಸಿತು. ಧರ್ಮರಾಜನು ಅಲ್ಲಿಯೇ ತಡೆದು ಯಕ್ಷ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗಿ ನಿಂತನು. ಯಕ್ಷನು ಅನೇಕ ಪ್ರಶ್ನೆಗಳನ್ನು ಕೇಳಿದನು. ಕೆಲವು ಪ್ರಶ್ನೆಗಳಿಗೆ ಧರ್ಮರಾಜನು ನೀಡಿದ ಉತ್ತರಗಳು ಹೀಗಿದ್ದವು:

  1. ಪ್ರಶ್ನೆ: ಅಪಾಯದಲ್ಲಿದ್ದ ಮನುಷ್ಯನನ್ನು ಪಾರುಮಾಡುವುದು ಯಾವುದು?
    ಉತ್ತರ: ಧರ್ಮ
  2. ಪ್ರಶ್ನೆ: ಯಾವ ವಿದ್ಯೆಯನ್ನು ಕಲಿತುಕೊಂಡಾಗ ಮನುಷ್ಯನು ಜಾಣನಾಗುತ್ತಾನೆ?
    ಉತ್ತರ: ವಿದ್ಯೆ ಅಥವಾ ಶಾಸ್ತ್ರಗಳನ್ನು ಓದಿದ ಮಾತ್ರಕ್ಕೆ ಮನುಷ್ಯನು ಜಾಣನಾಗಲಾರ. ಜಾಣರ ಸಂಪರ್ಕದಲ್ಲಿದ್ದರೆ ಆ ಮೂಲಕ ಮನುಷ್ಯನು ಜಾಣನಾಗುತ್ತಾನೆ.
  3. ಪ್ರಶ್ನೆ: ಭೂಮಿಗಿಂತ ಹೆಚ್ಚು ಉತ್ಕೃಷ್ಟ ಮತ್ತು ಸಹಾಯಕವಾಗಿರುವುದು ಯಾವುದು?
    ಉತ್ತರ: ಮಕ್ಕಳನ್ನು ಮುಂದೆ ತರುವಂಥ ತಾಯಿ, ಭೂಮಿಗಿಂತಲೂ ಹೆಚ್ಚು ಉತ್ಕೃಷ್ಟ ಮತ್ತು ಸಹಾಯಕಳಾದವಳು.
  4. ಪ್ರಶ್ನೆ: ಗಾಳಿಗಿಂತಲೂ ತೀವ್ರವಾದುದು ಯಾವುದು?
    ಉತ್ತರ: ಮನಸ್ಸು
  5. ಪ್ರಶ್ನೆ: ಪ್ರವಾಸಿಯ ಶ್ರೇಷ್ಠ ಮಿತ್ರ ಯಾರು?
    ಉತ್ತರ: ಅವನ ವಿದ್ಯೆ
  6. ಪ್ರಶ್ನೆ: ಆನಂದ ಎಂದರೇನು?
    ಉತ್ತರ: ಉತ್ತಮ ನಡತೆಯ ಪರಿಣಾಮವೇ ಆನಂದ.
  7. ಪ್ರಶ್ನೆ: ಮಾನವನು ಎಲ್ಲರಿಂದಲೂ ಪ್ರೀತಿಸಲ್ಪಡುವುದು ಯಾವಾಗ?
    ಉತ್ತರ: ಅವನು ತನ್ನ ಅಹಂಕಾರವನ್ನು ತ್ಯಜಿಸಿದಾಗ
  8. ಪ್ರಶ್ನೆ: ನಷ್ಟವಾದರೂ ದುಃಖಕ್ಕೆ ಬದಲು ಸುಖವನ್ನು ನೀಡುವಂಥಾದ್ದು ಯಾವುದು? <
    ಉತ್ತರ: ಕ್ರೋಧ
  9. ಪ್ರಶ್ನೆ: ಏನನ್ನು ಬಿಡುವುದರಿಂದ ಮನುಷ್ಯನು ಶ್ರೀಮಂತನಾಗುತ್ತಾನೆ?
    ಉತ್ತರ: ಆಸೆಗಳನ್ನು
  10. ಪ್ರಶ್ನೆ: ಪ್ರಪಂಚದಲ್ಲಿ ಅತ್ಯಂತ ಆಶ್ಚರ್ಯಕರವಾದದ್ದೇನು?
    ಉತ್ತರ: ಚಿರಂತನವೂ ಬದುಕುವ ಉಪಾಯವನ್ನು ಹುಡುಕುವ ಎಲ್ಲ ಜೀವಿಗಳು ಪ್ರತಿದಿನವೂ ಸಾಯುವುದನ್ನು ಮನುಷ್ಯನು ನೋಡುತ್ತಾನೆ. ಮರಣವನ್ನಪ್ಪುವ ಮನುಷ್ಯ ಮರಣಕ್ಕಾಗಿ ಆಳುತ್ತಾನೆ. ಇದೇ ಪ್ರಪಂಚದಲ್ಲಿ ಅತ್ಯಂತ ಆಶ್ಚರ್ಯಕರವಾದದ್ದು.

ಯಕ್ಷನು ಈ ಉತ್ತರಗಳಿಂದ ಸುಪ್ರೀತನಾಗಿ ವರವನ್ನು ದಯಪಾಲಿಸಿದನು. ಅವನು ಒಬ್ಬ ಸೋದರನಿಗೆ ಜೀವದಾನ ಕೊಡುವುದಾಗಿಯೂ ಅವರಲ್ಲಿ ಒಬ್ಬನನ್ನು ಆರಿಸಿಕೊಳ್ಳೆಂದು ಧರ್ಮರಾಜನನ್ನು ಕೇಳಿದನು.

ಯುಧಿಷ್ಠಿರನು ನಕುಲನನ್ನು ಆರಿಸಿಕೊಂಡನು. ನಕುಲನನ್ನೇ ಯಾತಕ್ಕೆ ಆರಿಸಿದೆಯೆಂದು ಕೇಳಲಾಗಿ ಅವನು ಹೀಗೆ ವಿವರಿಸಿ ಹೇಳಿದನು. ನನ್ನ ತಂದೆಗೆ ಇಬ್ಬರು ಪತ್ನಿಯರು, ಕುಂತಿಯ ಮಕ್ಕಳಲ್ಲಿ ತಾನು ಒಬ್ಬನಾದರೂ ಜೀವಿಸಿದ್ದೇನೆ. ಆದರೆ ಮಾದ್ರಿಯ ಇಬ್ಬರು ಮಕ್ಕಳೂ ಮರಣಿಸಿದ್ದಾರೆ. ಮಾತೆಯರಿಬ್ಬರಿಗೂ ಸಮಾನವಾದ ನ್ಯಾಯವನ್ನು ದೊರಕಿಸಿ ಕೊಡುವ ಕಾರಣದಿಂದ ನಾನು ನಕುಲನನ್ನು ಆರಿಸಿಕೊಂಡೆ.”

ತಕ್ಷಣ ಯಕ್ಷನು ನ್ಯಾಯದೇವತೆಯಾದ ಯಮಧರ್ಮನಾಗಿ ರೂಪ ತಾಳಿದನು. ಅವನು ಧರ್ಮರಾಜನ ಬುದ್ಧಿಮತ್ತೆ ಮತ್ತು ಉದಾರ ಚಾರಿತ್ರ್ಯವನ್ನು ಪ್ರಶಂಸಿಸಿದನು. ಪಾಂಡವರೆಲ್ಲರಿಗೂ ಜೀವದಾನ ನೀಡಿ ಯಶಸ್ಸು ಹಾಗೂ ಸುಖ ಪ್ರಾಪ್ತಿಯಾಗಲೆಂದು ಹರಸಿದನು.

ಪ್ರಶ್ನೆಗಳು:
  1. ಕೊಳದ ಬಳಿ ನಾಲ್ವರು ಪಾಂಡವರು ಮೃತ್ಯ ವಶರಾಗಲು ಕಾರಣವೇನು?
  2. ಧಮ೵ರಾಜನು ತನ್ನ ಪಾಂಡಿತ್ಯವನ್ನು ಹೇಗೆ ಪ್ರದರ್ಶಿಸಿದನು?
  3. ಪುನರುಜೀವನಕ್ಕಾಗಿ ಅವನು ನಕುಲನನ್ನೇ ಯಾಕೆ ಆರಿಸಿಕೊಂಡನು?

Leave a Reply

Your email address will not be published. Required fields are marked *

error: