ವಾಯು–1

Print Friendly, PDF & Email
ವಾಯು–1

ಪರಿಚಯ

ದೇವರ ಸೃಷ್ಟಿಯಲ್ಲಿ ‘ವಾಯು’ ಅತ್ಯಂತ ಮಹತ್ವದ್ದಾಗಿದೆ. ಸೃಷ್ಡಿಯ ಜೀವಿಗಳು ವಾಯುವಿಲ್ಲದೆ, ಒಂದು ಕ್ಷಣವೂ ಬದುಕಿ ಉಳಿಯಲಾರವು. ನಮ್ಮ ಪೂರ್ವಜರು ವಾಯುವನ್ನು ‘ವಾಯುದೇವ’ (Air – God) ಎಂದು ಪೂಜಿಸುತ್ತಿದ್ದರು.

ಗುಣಲಕ್ಷಣಗಳು

ವಾಯುವಿಗೆ ‘ಶಬ್ದ’ ಮತ್ತು ‘ಸ್ಪರ್ಶ’ ಎಂಬ ಎರಡು ಗುಣ ಲಕ್ಷಣಗಳಿವೆ. ಅದು ನಿರ್ಮೋಹತ್ವ ಗುಣವನ್ನು ಹೊಂದಿದೆ. ಎಲ್ಲಾ ಕಡೆ ಇರುತ್ತದೆ. ಆದರೇ, ಯಾವೊಂದು ಸ್ಥಳಕ್ಕೂ ಬಂಧಿಸಿಕೊಂಡಿಲ್ಲ. ಇದು ಯಾರ ಪರವಾಗಿಲ್ಲ ಅಥವಾ ಯಾವುದೇ ಸ್ವಾರ್ಥಕ್ಕೆ ಒಳಗಾಗಿಲ್ಲ. ಬಡವ/ ಬಲ್ಲಿದ, ಮಾನವ/ಪ್ರಾಣಿ/ಗಿಡ, ಹೆಚ್ಚು/ಕಡಿಮೆ ಎಂಬ ತಾರತಮ್ಯವಿಲ್ಲದೆ ಅದರ ಪ್ರೇಮ ಎಲ್ಲರಿಗೂ ಲಭ್ಯ. ವಾಯುವಿಲ್ಲದೆ ಸುಮಧುರವಾದ ಸಂಗೀತವೂ ಸಾಧ್ಯವಿಲ್ಲ.

ಕಥೆ

ಉದಾರಿಯಾದ ಒಬ್ಬ ರಾಜನಿದ್ದನು. ಅವನು ಯಾವಾಗಲೂ ಸಾರ್ವಜನಿಕರಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದನು. ಅವನು ಒಂದು ಸಲ, ‘ಮಾರುಕಟ್ಟೆಯಲ್ಲಿ ನಿಮ್ಮ ವಸ್ತುಗಳನ್ನು ಮಾರಲಾಗದಿದ್ದರೆ, ಅದನ್ನು ನಾನು ಕೊಳ್ಳುತ್ತೇನೆ’ ಎಂದು ಘೋಷಿಸಿದ. ಒಮ್ಮೆ, ಒಬ್ಬನು ಒಂದು ಶನಿದೇವರ ಪ್ರತಿಮೆಯನ್ನು ಮಾರುಕಟ್ಟೆಯಲ್ಲಿ ಮಾರಲು ತಂದ. ಆದರೆ, ಯಾರು ತಾನೇ ಶನಿದೇವರ ಪ್ರತಿಮೆಯನ್ನು ಮನೆಯಲ್ಲಿಟ್ಟುಕೊಳ್ಳಲು ಕೊಂಡುಕೊಳ್ಳುತ್ತಾರೆ? ರಾಜನು ತಾನು ಹೇಳಿದಂತೆ ಅದನ್ನು ಕೊಂಡುಕೊಂಡು ತನ್ನ ಸ್ಥಳದಲ್ಲಿ ಇಟ್ಟುಕೊಂಡ. ರಾತ್ರಿ ಲಕ್ಷ್ಮೀದೇವಿ ಅವನ ಮುಂದೆ ಪ್ರತ್ಯಕ್ಷಳಾಗಿ, ‘ಶನಿ ಬಂದಿರುವುದರಿಂದ ನಾನು ಈ ಜಾಗವನ್ನು ಬಿಡುತ್ತಿದ್ದೇನೆ’ ಎಂದಳು. ಬೇರೆ ವಿಧಿಯಿಲ್ಲದೆ ರಾಜನು, ಹಾಗೆಯೇ ಮಾಡು, ನಾನು ನನ್ನ ಮಾತನ್ನು ಉಳಿಸಿಕೊಳ್ಳಬೇಕು ಮತ್ತು ಸತ್ಯವನ್ನು ಎತ್ತಿಹಿಡಿಯಬೇಕು’ ಎಂದು ಉತ್ತರಿಸಿದನು. ಸ್ವಲ್ಪ ಹೊತ್ತಿನ ನಂತರ, ಧರ್ಮದೇವತೆಯು ಕಾಣಿಸಿಕೊಂಡು, ಶನಿದೇವರು ಅಲ್ಲಿಗೆ ಬಂದಿರುವುದರಿಂದ ತಾನು ಅಲ್ಲಿಂದ ಹೊರಡುವುದಾಗಿ ತಿಳಿಸುತ್ತಾನೆ. ರಾಜನು ಈ ಮೊದಲಿನ ಉತ್ತರವನ್ನೇ ನೀಡಿ, ತಾವು ಬಯಸುವುದಾದರೆ ಹಾಗೇ ಮಾಡಬಹುದು ಎಂದು, ಧರ್ಮದೇವತೆಗೆ ಹೊರಡಲು ಅನುವು ಮಾಡಿಕೊಡುತ್ತಾನೆ. ಆಮೇಲೆ ಸತ್ಯದೇವನ ಆಗಮನವಾಯಿತು. ಅವನೂ ಸಹ ಹೊರಡುವುದಕ್ಕೆ ಸಿದ್ಧನಾದನು. ರಾಜನು ಅವನನ್ನು ಹಿಡಿದುಕೊಂಡು, ‘ನಾನು ನಿನ್ನನ್ನು ಹೋಗಲು ಬಿಡುವುದಿಲ್ಲ; ಕೇವಲ ನಿನಗೋಸ್ಕರವಾಗಿ ಲಕ್ಷ್ಮಿ ಮತ್ತು ಧರ್ಮ ದೇವತೆಯನ್ನು ನಾನು ಹೋಗಲು ಬಿಟ್ಟೆ,’ ಎಂದು ಹೇಳಿದನು. ಇದರಿಂದಾಗಿ ಸತ್ಯದೇವ ಅಲ್ಲೇ ಉಳಿಯಬೇಕಾಯಿತು. ಅವನು ಹೋಗಲಿಲ್ಲ. ಇದನ್ನು ನೋಡಿದ ಲಕ್ಷ್ಮಿ ಮತ್ತು ಧರ್ಮದೇವತೆ ಸಹಾ ಹಿಂತಿರುಗಿ ಬಂದರು.

ಮೌಲ್ಯಗೀತೆ

ತಂಪಾದ ಶುದ್ಧ ಸ್ವಚ್ಛ ಗಾಳಿಯ ತೆರದಿ,
ಇರಲೆನ್ನ ನಗೆಯು ಉತ್ಸಾಹದ ಚಿಲುಮೆಯಾಗಿ,
ದೊರಕಲಿ ನನಗೆ ಭಗವಂತನ ಚರಣಾರವಿಂದಗಳ ಸನಿಹ
ನಾನು ನಿನ್ನಲ್ಲಿನ ಚೇತನಶಕ್ತಿ,
ನಿನ್ನ ಉಸಿರಾಟದ ಪ್ರಾಣಶಕ್ತಿ.
ಪ್ರಖರ ಶಾಖದ ಮಧ್ಯದಲಿ ಬೀಸಿಬರುವೆ,
ತಂಪಾದ ತಂಗಾಳಿಯನು ನಿನಗೆ ಕೊಡುವೆ.
ಹೊತ್ತು ತರುವೆನು ಹೂವು ಹಣ್ಣುಗಳ ಕಂಪನು
ಹಕ್ಕಿ ಪಕ್ಷಿಗಳ ಕಲರವದ ಗೀತವನು,
ತೂಗುತಿಹ ತೆನೆಗಳನು ಸವರಿ ನಾ ಬರುವೆ,
ಇಂಪಾದ ಗಾನವನು ಸೃಷ್ಟಿಸಿರುವೆ

ಮೌನಾಸನ

ಮಕ್ಕಳನ್ನು ಸುಗಂಧಭರಿತವಾದ ಹೂವುಗಳಿಂದ ಕೂಡಿರುವ ಒಂದು ಸುಂದರವಾದ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ. ಅಲ್ಲಿ ಅವರು ನೇರವಾಗಿ, ಮೌನವಾಗಿ ಕುಳಿತುಕೊಳ್ಳಲಿ. ನಂತರ ಕಣ್ಣುಗಳನ್ನು ಮುಚ್ಚಿಕೊಂಡು, “ನಾನು ಸುಂದರವಾದ ಉದ್ಯಾನವನದಲ್ಲಿ ಕುಳಿತಿದ್ದೇನೆ. ತಂಗಾಳಿ ಬೀಸುತ್ತಿದೆ. ಆ ಗಾಳಿಗೆ ಸುಗಂಧ ಭರಿತವಾದ ಹೂವಿನ ಪರಿಮಳವಿದೆ. ನನ್ನ ಪೂರ್ಣದೇಹದ ದಣಿವು ಆರಿದೆ. ಮತ್ತು ಈ ತಂಗಾಳಿಯಿಂದ ದೇಹವೂ ತಂಪಾಗಿದೆ. ನಾನು ಪ್ರೇಮ ಮತ್ತು ಆನಂದ ಭರಿತವಾದ ಕಿರಣಗಳನ್ನು ನನ್ನ ಸುತ್ತ ಮುತ್ತ ಕಳಿಸುತ್ತಿದ್ದೇನೆ. ನನ್ನ ಸಮೀಪದಲ್ಲಿ ಯಾರೋ ಕೊಳಲನ್ನು ನುಡಿಸುತ್ತಿದ್ದಾರೆ. ನನ್ನ ಕಿವಿಯ ಮೇಲೆ ಸಂಗೀತವು ಬೀಳುತ್ತಿದ್ದಂತೆ, ನನಗೆ ಶಾಂತಿ ದೊರೆತಿದೆ. ಪಕ್ಷಿಗಳೂ ಸಹ ಮರದ ಮೇಲೆ ಕುಳಿತು ಹಾಡುತ್ತಿವೆ. ಪೂರ್ಣ ವಾತಾವರಣವೇ ನನಗೆ ಶಕ್ತಿ ನೀಡುತ್ತಿದೆ” ಎಂದು ಕಲ್ಪಿಸಿಕೊಳ್ಳಲಿ.

Leave a Reply

Your email address will not be published. Required fields are marked *

error: