ವಾಯು – 2
ವಾಯು – 2
“ಮುದ್ದು ಮಕ್ಕಳೇ!, ಒಂದು ಆಟದೊಂದಿಗೆ ಶುರು ಮಾಡೋಣ. ನಿಮ್ಮ ಕೈಗಳಿಂದ ಮೂಗು ಮತ್ತು ಬಾಯಿಗಳನ್ನು ಮುಚ್ಚಿಕೊಳ್ಳಿ. ಯಾರು ತುಂಬಾ ಹೊತ್ತು ಹಾಗೆ ಕುಳಿತುಕೊಳ್ಳುತ್ತೀರಾ?
(ಮಕ್ಕಳ ಭಾವನೆಯನ್ನು ವಿಶ್ಲೇಷಿಸುವುದು). ಈಗ ಹೇಳಿ, ಪಂಚಭೂತಗಳಲ್ಲಿ ಯಾವುದು ಇಲ್ಲದಿದ್ದರೆ, ನಾವು ಒಂದು ಕ್ಷಣವೂ ಇರಲುಸಾಧ್ಯವಿಲ್ಲ? ಹೌದು, ಅದೇ ವಾಯು! ನಮಗೆ ಬಾಯಾರಿಕೆಯಾದರೆ, ನೀರಿಲ್ಲದಿದ್ದರೂ ಸ್ವಲ್ಪಕಾಲ ಬದುಕಬಹುದು. ನಮಗೆ ಹಸಿವಾದಾಗ, ಆಹಾರವಿಲ್ಲದಿದ್ದರೂ ನಾವು ಕೆಲವು ದಿನ ಇರಬಹುದು. ಆದರೆ ವಾಯುವಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.”
- ವಾಯುವನ್ನು ಸೃಷ್ಟಿಸಿದವರು ಯಾರು? ವಿಜ್ಞಾನಿಗಳೇ, ವೈದ್ಯರೇ ಅಥವಾ ಇಂಜನಿಯರ್‌ಗಳೇ? ಇಲ್ಲ, ನಮ್ಮೆಲ್ಲರ ಮೇಲಿನ ಪ್ರೀತಿಗಾಗಿ ದೇವರೇ ಸೃಷ್ಟಿಸಿರುವುದು.
- ವಾಯುವನ್ನು ಉಪಯೋಗಿಸಿಕೊಂಡದ್ದಕ್ಕಾಗಿ ಯಾವುದಾದರೂ ತೆರಿಗೆಯನ್ನು ನೀಡುತ್ತಿದ್ದೇವೆಯೇ? ನಗರ ಪ್ರದೇಶಗಳಲ್ಲಿ ನಾವು ವಿದ್ಯುಚ್ಛಕ್ತಿ ಮತ್ತು ನೀರಿಗಾಗಿ ಹಣವನ್ನು ನೀಡುತ್ತೇವೆ. ಆದರೆ ಗಾಳಿಗೆ ಏನನ್ನೂ ನೀಡುತ್ತಿಲ್ಲ. ಅದು ಪೂರ್ಣ ಉಚಿತ. – ಅದು ದೇವರ ಕೊಡುಗೆಯಾದ್ದರಿಂದ ನಾವೆಲ್ಲರೂ ದೇವರಿಗೆ ಋಣಿಗಳಾಗಿರಬೇಕು; ನಮ್ಮ ಮೇಲಿನ ಅವನ ದಿವ್ಯ ಅನುಗ್ರಹಕ್ಕಾಗಿ!
ಪ್ರಾರ್ಥನೆ
ಬನ್ನಿ, ಎಲ್ಲರೂ ವಾಯುದೇವನನ್ನು ಪ್ರಾರ್ಥಿಸೋಣ. :
ಬನ್ನಿ, ಎಲ್ಲರೂ ವಾಯುದೇವನನ್ನು ಪ್ರಾರ್ಥಿಸೋಣ..
“ನಮಸ್ತೇ ವಾಯೋ| ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ |
ತ್ವಾಮೇವ ಪ್ರತ್ಯಕ್ಷಂ ಬ್ರಹ್ಮವದಿಷ್ಯಾಮಿ |
ಋತಂ ವದಿಷ್ಯಾಮಿ | ಸತ್ಯಂ ವದಿಷ್ಯಾಮಿ |
ಓಂ ಶಾಂತಿಃ ಶಾಂತಿಃ ಶಾಂತಿಃ”
ಓ, ವಾಯುದೇವರೇ! ದಿವ್ಯದೇವರೇ, ತಲೆಬಾಗುವೆವು ನಾವು ನಿಮಗೆ
ಸತ್ಯವೇ ಅತ್ಯುನ್ನತವಾದುದೆಂದು, ಬುದ್ಧಿಶಕ್ತಿ, ಸಾಮರ್ಥ್ಯ,
ಉಸಿರಿನ ಸಮತೋಲನಗಳ ಸದಾ, ಅನುಗ್ರಹಸಿ ಎಂದು ||
ಕಥೆ
ಹನುಮಂತನು ಹೇಗೆ ಶಕ್ತಿಶಾಲಿಯಾದನು? ನಿಮಗೆ ತಿಳಿದಿದೆಯೋ? ಆ ಬಗ್ಗೆ ನಾನು ಈದಿನ ನಿಮಗೆ ಹೇಳುತ್ತೇನೆ, ಆದರೇ ಅದಕ್ಕಿಂತ ಮೊದಲು, ಹನುಮಂತನ ತಂದೆ ಯಾರು ಅಂತ ಹೇಳ್ತೀರಾ? ಹೌದು, ವಾಯುದೇವ.
ಹನುಮಂತನು ಹುಟ್ಟಿದ ಕೆಲವು ಕ್ಷಣಗಳಲ್ಲೇ ಹಸಿವಿನಿಂದಾಗಿ ಉದಯಿಸುತ್ತಿರುವ ಸೂರ್ಯನನ್ನು, ಕೆಂಪಾಗಿ ಮಾಗಿದ ಹಣ್ಣೆಂದು ತಿಳಿದು, ಅದನ್ನು ಹಿಡಿಯಲು ಹೇಗೆ ಹಾರಿದನೆಂಬ ಘಟನೆಯನ್ನು ತಿಳಿದಿರುವಿರಿ. ಅವನು ಸೂರ್ಯನನ್ನು ನುಂಗಿದ್ದರಿಂದ ಇಡೀ ವಿಶ್ವವೇ ಕತ್ತಲಲ್ಲಿ ಮುಳುಗಿತು. ದೇವತೆಗಳೆಲ್ಲರೂ ಹನುಮಂತನಿಗೆ ಸೂರ್ಯನನ್ನು ಅವನ ಬಾಯಿಯಿಂದ ಬಿಡುಗಡೆ ಗೊಳಿಸುವಂತೆ ಹೇಳುತ್ತಾರೆ. ಆದರೆ ಹನುಮಂತ ಈ ಪ್ರಸ್ತಾಪವನ್ನು ಒಪ್ಪಲಿಲ್ಲ. ಇಂದ್ರನಿಗೆ ಸಿಟ್ಟು ಬಂದು, ಆಗತಾನೇ ಜನಿಸಿದ ಹನುಮಂತನ ಮೇಲೆ ವಜ್ರಾಯುಧದಿಂದ ಪ್ರಹಾರ ಮಾಡಿದ. ಇದರಿಂದ ಹನುಮಂತನ ಬೆನ್ನೆಲುಬು ಮುರಿಯಿತು. ಕುಪಿತಗೊಂಡ ವಾಯುದೇವ, ವಿಶ್ವದಿಂದಲೇ ತಾನು ಹಿಂದೆ ಸರಿದು ಬೀಸುವುದನ್ನು ನಿಲ್ಲಿಸಿದ. ಆಗ ಗಾಳಿಯಿಲ್ಲದೆ, ಹೆಚ್ಚಿನ ಶಾಖದಿಂದ ಸೃಷ್ಟಿಯೆಲ್ಲ ಉರಿಯತೊಡಗಿತು. ಎಲ್ಲ ಕಡೆ ತಾಪ ಹೆಚ್ಚಾಯಿತು. ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಎಲ್ಲ ದೇವತೆಗಳೂ, ವಾಯುದೇವನಲ್ಲಿಗೆ ಹೋಗಿ ಸೃಷ್ಟಿಯನ್ನು ಉಳಿಸುವಂತೆ ಪ್ರಾರ್ಥಿಸಿದರು. ವಾಯುದೇವನು ತನ್ನ ಮಗನಿಗೆ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ಶಕ್ತಿಯನ್ನು ನೀಡಬೇಕೆಂದು ಕೋರಿದನು. ಅವರೆಲ್ಲರ ದಿವ್ಯ ದರ್ಶನದಿಂದಾಗಿ ಹನುಮಂತನಿಗೆ ವಿಶೇಷ ಶಕ್ತಿ, ಬುದ್ಧಿ ಮತ್ತು ಅಂತಃಪ್ರಜ್ಞೆ ದೊರೆಯಿತು. ನಂತರದಲ್ಲಿ ಮಾರುತಿ ಹನುಮಂತನೆನಿಸಿದ.
ಪ್ರಶ್ನೆಗಳು
- ವಾಯುದೇವನು ಬೀಸುವುದನ್ನು ನಿಲ್ಲಿಸಿದ್ದರಿಂದ ಏನಾಯಿತು?
- ಗಾಳಿ ಇಲ್ಲದಿದ್ದರೆ ಏನಾಗುತ್ತದೆ?
- ಮೀನುಗಳು/ಜಲಚರ ಪ್ರಾಣಿಗಳು ಬದುಕಲು ಸಾಧ್ಯವೇ? (ಇಲ್ಲ, ಅವುಗಳೂ ಸಹ ನೀರಿನಲ್ಲಿರುವ ಗಾಳಿಯನ್ನು ಉಪಯೋಗಿಸಿಕೊಳ್ಳುತ್ತವೆ.)
- ಮರಗಳು ಗಾಳಿಯಿಲ್ಲದೆ ಬದುಕುತ್ತವೆಯೇ? (ಇಲ್ಲ, ಅವುಗಳೂ ಸಹ ಎಲೆಗಳ ಮೂಲಕ ಉಸಿರಾಡುತ್ತವೆ.)
ವೃತ್ತದ ಆಟ
ನೆಲದ ಮೇಲೆ ಆರು ವೃತ್ತಗಳನ್ನು ಗುರುತುಮಾಡಿ, ಅವುಗಳಿಗೆ ಕ್ರಮವಾಗಿ ಭೂಮಿ, ಜಲ, ಅಗ್ನಿ, ವನ, ಪಕ್ಷಿಗಳು, ಮತ್ತು ವಾಯು ಶೂನ್ಯಪ್ರದೇಶ ಎಂದು ಹೆಸರಿಡಲಾಗಿದೆ. ಸುತ್ತಲೂ ಆರು ಮಕ್ಕಳು ಸುತ್ತುತ್ತಿರುತ್ತಾರೆ. ಹಿನ್ನೆಲೆಯಲ್ಲಿ ಸಂಗೀತವಿರುತ್ತದೆ. ಸಂಗೀತವನ್ನು ನಿಲ್ಲಿಸಿದಾಗ, ಮಕ್ಕಳು ಯಾವುದಾರೊಂದು ವೃತ್ತವನ್ನು ಆರಿಸಿಕೊಂಡು ನಿಲ್ಲಬೇಕು. ಯಾವ ವೃತ್ತದಲ್ಲಿರುವರೋ ಅದಕ್ಕೆ ತಕ್ಕಂತೆ ಅವರು ಈ ಕೆಳಗಿನಂತೆ ಅಭಿನಯವನ್ನು ಮಾಡಬೇಕು.
ಭೂಮಿ — ನರ್ತಿಸುತ್ತಿರುವ ಮನುಷ್ಯ
ಜಲ — ಈಜುತ್ತಿರುವ ಮೀನು,
ಪಕ್ಷಿಗಳು — ಹಾರುತ್ತಿರುವ ಪಕ್ಷಿ,
ಅಗ್ನಿ — ಉರಿಯುತ್ತಿರುವ ಬೆಂಕಿ,
ವನ — ತೂಗಾಡುತ್ತಿರುವ ಮರ,
ವಾಯುಶೂನ್ಯ ಪ್ರದೇಶ — ಸತ್ತ ದೇಹ (ಶವ),
ವಾಯುಶೂನ್ಯ ಪ್ರದೇಶದಲ್ಲಿರುವ ಮಗು ಆಟದಿಂದ ಹೊರ ಬರಬೇಕು. (ಈಗ ವಾಯುವಿನ ಗುಣ ಲಕ್ಷಣಗಳ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವುದು)
- ನೀವು ವಾಯುವನ್ನು ನೋಡಿದ್ದೀರಾ? — ಇಲ್ಲ, ವಾಯುವು ರೂಪ ರಹಿತವಾಗಿದೆ
- ನೀವು ವಾಯುವಿನ ರುಚಿಯನ್ನು ನೋಡಿದ್ದೀರಾ? — ಇಲ್ಲ, ಅದು ರುಚಿ ರಹಿತವಾದದ್ದು.
- ನೀವು ವಾಯುವಿನ ವಾಸನೆಯನ್ನು ನೋಡಿದ್ದೀರಾ? — ಇಲ್ಲ, ಅದಕ್ಕೆ ಯಾವುದೇ ವಾಸನೆ ಇರುವುದಿಲ್ಲ.
- ನೀವು ಗಾಳಿಯ ಶಬ್ದವನ್ನು ಕೇಳಿದ್ದೀರಾ? — ಹೌದು, ಅದರ ವೇಗಕ್ಕೆ ತಕ್ಕಂತೆ ಶಬ್ದವಿರುತ್ತದೆ.
- ನೀವು ಗಾಳಿಯನ್ನು ಸ್ಪರ್ಶಿಸಿದ್ದೀರಾ? — ಹೌದು, ಗಾಳಿಯ ಹಿತವಾದ ಸ್ಪರ್ಶದ ಅನುಭವವಾಗುತ್ತದೆ.
ಬೆಳಗ್ಗೆ ಮತ್ತು ಸಾಯಂಕಾಲ ಗಾಳಿಯಲ್ಲಿ ಓಡಾಡುತ್ತಿದ್ದರೆ, ನಿಮಗೆ ಹೇಗೆನಿಸುತ್ತದೆ? – ನಾವು ಆಹ್ಲಾದಕರವಾಗಿ, ಶಕ್ತಿಯುತವಾಗಿ ಮತ್ತು ಸಂತೋಷವಾಗಿ ಇದ್ದೇವೆ ಎಂಬ ಅನುಭವ ಉಂಟಾಗುತ್ತದೆ. ಆದ್ದರಿಂದ ವಾಯುವಿಗೆ ‘ಶಬ್ದ’ ಮತ್ತು ‘ಸ್ಪರ್ಶ’ಎಂಬ ಎರಡು ಗುಣಲಕ್ಷಣಗಳಿವೆ.
ಕಥೆ
ಡಾಲಿ ಎಂಬ ಹೆಸರಿನ ಒಂದು ಪಕ್ಷಿ ಇತ್ತು. ತನ್ನ ಬಲವಾದ ರೆಕ್ಕೆಯಿಂದಾಗಿ ಅದು, ಇಡೀ ವಿಶ್ವದ ಹೊಸಹೊಸ ಸ್ಥಳಗಳನ್ನು ಮತ್ತು ಸುಂದರವಾದ ನಿಸರ್ಗದ ತಾಣಗಳನ್ನು ನೋಡಲು ಯೋಜನೆ ಹಾಕಿತು. ಬೆಳಗಿನ ಜಾವ ಡಾಲಿ ಹೊರಟಿತು. ಹೊಸ ಗಾಳಿ ಎಲ್ಲಕಡೆ ಬೀಸುತ್ತಿತ್ತು. ಆನಂದದಿಂದ ಮತ್ತು ಉಲ್ಲಾಸದಿಂದ ಅದು ಹಾಡುಗಳನ್ನು ಹೇಳುತ್ತ, ತನ್ನ ಸುತ್ತ ಮುತ್ತಲಿನಲ್ಲಿರುವ ಸುಂದರವಾದ ಮರಗಳು, ಹೂಗಳು, ಹಣ್ಣುಗಳನ್ನು ನೋಡುತ್ತಾ ಸ್ವಚ್ಛಂದವಾಗಿ ಹಾರಾಡುತ್ತಿತ್ತು. ಮಾರ್ಗ ಮಧ್ಯದಲ್ಲಿ ಅದು ಹಣ್ಣುಗಳನ್ನು ತಿನ್ನುತ್ತಾ, ನದಿಯ ಪರಿಶುದ್ಧವಾದ ನೀರನ್ನು ಕುಡಿಯುತ್ತಾ, ಮರದ ಕೊಂಬೆಯ ಮೇಲೆ ಕುಳಿತು ಸ್ವಲ್ಪವಿರಾಮ ತೆಗೆದುಕೊಳ್ಳುತ್ತಾ, ಮತ್ತೆ ತನ್ನ ಪ್ರಯಾಣವನ್ನು ಮುಂದುವರಿಸುತ್ತಿತ್ತು. ಹೀಗೆ ಅದು ಹಲವಾರು ಮೈಲಿಗಳಷ್ಟು ಪ್ರಯಾಣ ಮಾಡಿತು. ಒಂದು ಕ್ಷಣ ಅದಕ್ಕೆ ಉಸಿರಾಟದ ತೊಂದರೆ ಉಂಟಾಯಿತು. ನಿಶ್ಶಕ್ತಿ ಉಂಟಾಗಿ, ನಿಧಾನವಾಗಿ ಕೆಳಗಿಳಿಯತೊಡಗಿತು. ಅದರ ಕಣ್ಣು ಉರಿಯತೊಡಗಿತು. ಅದಕ್ಕೆ ಕಲುಷಿತ ನೀರುಳ್ಳ ಒಂದು ಕಾಲುವೆ ಕಾಣಿಸಿತು.
ನೋವಿದ್ದುದರಿಂದ ಬೇರೆ ನೀರಿನ ಮೂಲವನ್ನು ಹುಡುಕಲು ಸಾಧ್ಯವಾಗದೆ, ತನ್ನ ಕಣ್ಣುಗಳನ್ನು ಅದೇ ಕಲುಷಿತ ನೀರಿನಲ್ಲಿ ತೊಳೆದುಕೊಂಡಿತು. ನಂತರದಲ್ಲಿ ಸ್ವಲ್ಪ ವಿರಾಮವನ್ನು ಪಡೆಯಲು ಮರವನ್ನು ಹುಡುಕಿತು. ಬಹಳ ಹುಡುಕಾಟದ ನಂತರ ಒಂದು ಸಣ್ಣ ಮರ ಕಾಣಿಸಿತು. ಅಲ್ಲಿ ಸ್ವಲ್ಪಹೊತ್ತು ವಿಶ್ರಾಂತಿಪಡೆದ ನಂತರ, ‘ಹೀಗೇಕಾಯಿತು?’ ಎಂದು ಆಶ್ಚರ್ಯಪಟ್ಟಿತು. ತಾನೆಲ್ಲಿದ್ದೇನೆ ಎಂದು ಅದು ಸುತ್ತಲೂ ಗಮನಿಸಿತು. ಸುತ್ತಮುತ್ತಲೂ ಕಟ್ಟಡಗಳಿವೆ, ಮರಗಳಿಲ್ಲ. ಅದೊಂದು ದೊಡ್ಡ ಕಾರ್ಖಾನೆಯಿಂದ ಬಹಳಷ್ಟು ಹೊಗೆ ಸುತ್ತಮುತ್ತ ಎಲ್ಲ ಕಡೆಗೂ ಹರಡುತ್ತಿರುವುದನ್ನು ಅದು ನೋಡಿತು. ಕೆಳಗಡೆ ರಸ್ತೆಯ ಮೇಲೆ ನೂರಾರು ವಾಹನಗಳು ಹೊಗೆಯನ್ನು ಉಗುಳುತ್ತಾ ಹೋಗುತ್ತಿರುವುದನ್ನು ನೋಡಿ ಅದಕ್ಕೆ ಭಯವಾಯಿತು. ದೇವರ ಕೊಡುಗೆಯಾದ ಪರಿಶುದ್ಧ ಗಾಳಿಯನ್ನು ಮನುಷ್ಯನ ರಾಕ್ಷಸೀ ಪ್ರವೃತ್ತಿಯು ಹಾಳು ಮಾಡುತ್ತಿರುವುದನ್ನು ನೋಡಿ, ಪುಟ್ಟ ಡಾಲಿಯು ನಾಚಿತು. ವಿಶ್ವವನ್ನೇ ಸುತ್ತಬೇಕೆಂಬ ತನ್ನಯೋಚನೆಯನ್ನು ಕೈಬಿಟ್ಟಿತು. ಭಾರವಾದ ಹೃದಯದಿಂದ ತನ್ನ ಹಳ್ಳಿಗೆ ಹಿಂದಿರುಗಿತು. ಅದು ತನ್ನ ಸ್ನೇಹಿತರನ್ನೆಲ್ಲ ಕರೆದು ತೋಟಗಳ ಮಹತ್ವದ ಬಗ್ಗೆ ತಿಳಿಸಿತು. ಅವು ವಾತಾವರಣಕ್ಕೆ ಅನಿಲಗಳು ಸೇರುವಬಗ್ಗೆ ಮತ್ತು ದೇಹ ಹಾಗೂ ಮನಸ್ಸಿಗೆ ಬೇಕಾಗುವ ಪರಿಶುದ್ಧವಾದ ಗಾಳಿಯ ಬಗ್ಗೆಮಾತನಾಡಿದವು. ಇದಲ್ಲದೇ ಅವು ವಿವಿಧ ಮರಗಳ ಬೀಜಗಳನ್ನು ಪೊಟ್ಟಣಗಳಲ್ಲಿ ಸಂಗ್ರಹಿಸಿದವು. ನಂತರ ಎಲ್ಲವೂ ನಗರ ಪ್ರದೇಶಗಳಿಗೆ ಹಾರಿ, ನಗರಗಳಲ್ಲೆಲ್ಲ ಬೀಜಗಳನ್ನು ಚೆಲ್ಲಿದವು. ಅವು ತಮ್ಮ ಕರ್ತವ್ಯವನ್ನು ನಿರ್ವಹಿಸಿದೆವು ಎಂದು ಸಂತೋಷಪಟ್ಟವು. ಒಂದು ವರ್ಷದ ನಂತರ ಡಾಲಿ, ಆ ನಗರವನ್ನು ನೋಡಲು ಬಂದಿತು. ಸುತ್ತಲೂ ತಂಗಾಳಿ ಬೀಸುತ್ತಿದ್ದುದರಿಂದ, ಮರಗಳು ತೂಗಾಡುತ್ತಿದ್ದವು. ಈಗ ಅದಕ್ಕೆ ಕಣ್ಣು ಉರಿಯಲಿಲ್ಲ; ಉಸಿರುಗಟ್ಟಲಿಲ್ಲ. ತುಂಬಾ ಸಂತೋಷಗೊಂಡು ಕುಣಿಯುತ್ತಾ ಅದು,
“ಹೊಚ್ಚಹೊಸಗಾಳಿ, ಆರೋಗ್ಯಕರ ಗಾಳಿ, ಪರಿಶುದ್ಧ ಗಾಳಿ, ಪವಿತ್ರ ಗಾಳಿ”, ಎಂದು ಹಾಡಿತು.
ರಸಪ್ರಶ್ನೆ
ಮಕ್ಕಳು ಏನನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ತಿಳಿಯಲು ಕೆಲವು ಪ್ರಶ್ನೆಗಳನ್ನು ಕೇಳಬಹುದು.
- ಗಾಳಿ ಕಲುಷಿತವಾದರೆ ಏನಾಗುತ್ತದೆ? (- ಉಷ್ಣತೆಹೆಚ್ಚಾಗುತ್ತದೆ.)
- ಗಾಳಿಯು ಕಲುಷಿತಗೊಳ್ಳಲು ಕಾರಣವೇನು? (- ಕಾರ್ಖಾನೆಗಳು, ವಾಹನಗಳಿಂದ ಬಂದು ಸೇರುವ ಅನಿಲಗಳು, ಅರಣ್ಯನಾಶ)
- ಕಲುಷಿತ ಗಾಳಿಯನ್ನು ಹೇಗೆ ನಿಯಂತ್ರಿಸಬಹುದು? (- ತೋಟಗಳ ನಿರ್ಮಾಣ, ವಾತಾವರಣಕ್ಕೆ ಅನಿಲಗಳು ಸೇರುವುದನ್ನು ನಿಯಂತ್ರಿಸುವುದು)
- ಪರಿಶುದ್ಧ ಗಾಳಿಯ ಮಹತ್ವವೇನು? (- ಶಕ್ತಿ ನೀಡುತ್ತದೆ, ನಮ್ಮನ್ನು ಸದಾ ಹರ್ಷಿತರನ್ನಾಗಿಡುತ್ತದೆ.)
ದೃಶ್ಶೀಕರಣ
ಪ್ರವಾಸ ಹೋಗಲು ಈಗ ಎಲ್ಲರೂ ಸಿದ್ಧರಾಗಿರಿ. ಎಲ್ಲಿಗೆ ಹೋಗೋಣ? ಪೂರ್ಣ ಹಸಿರಿನಿಂದ ಕೂಡಿರುವ ಉದ್ಯಾನವನಕ್ಕೆ ಹೋಗೋಣ. ಸುತ್ತಲೂ ಅಂದವಾದ ಹೂವುಗಳು ಸುಗಂಧವನ್ನು ಹರಡುತ್ತಿವೆ. ಪರಿಶುದ್ಧವಾದ ಹೊಸಗಾಳಿ ನಮ್ಮ ದೇಹವನ್ನು ಸ್ಪರ್ಶಿಸುತ್ತಿದೆ. ಇದು ನಮ್ಮಲ್ಲಿ ಹೊಸತನವನ್ನು ನೀಡುತ್ತಿದೆ. ಆದ್ದರಿಂದ ಹೊರಡೋಣ. ನೇರವಾಗಿ ಕುಳಿತು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿರಿ. ಈಗ ಬೆಳಗಿನ ಜಾವವೆಂದು ಭಾವಿಸಿರಿ. ಮೂರುಬಾರಿ “ಓಂ”ಕಾರ ಪಠಿಸಿರಿ. (ಒಂದು ನಿಮಿಷ ನಿಶ್ಶಬ್ದ. ನಂತರ ಗುರು, ನಿಧಾನವಾಗಿ ಮಾತನಾಡುತ್ತಾರೆ.)
“ಪ್ರಿಯಮಕ್ಕಳೇ! ನಿಧಾನವಾಗಿ ಎದ್ದೇಳಿ. ಸರದಿಯ ಸಾಲಿನಲ್ಲಿ ನಿಲ್ಲಿರಿ. ಸೂರ್ಯನನ್ನು ನೋಡಿರಿ. ಎಷ್ಟು ಸುಂದರವಾಗಿದೆ ಉದಯಿಸುತ್ತಿರುವ ಸೂರ್ಯ! ಓಹ್, ಎಂತಹ ತಂಪಾದ ಗಾಳಿ! ಅದು ನಮ್ಮ ಇಡೀ ದೇಹವನ್ನು ಸ್ಪರ್ಶಿಸುತ್ತಿದೆ. ಆಹಾ, ಎಂತಹ ಶಾಂತಿ! ದಯವಿಟ್ಟು ನಿರೀಕ್ಷಿಸಿ, ಬಸ್ಸು ಬರುತ್ತಿದೆ. ಅದು ಮುಂದಕ್ಕೆ ಚಲಿಸಲಿ. ಅಯ್ಯೋ, ಕೆಟ್ಟ ಹೊಗೆ, ನಿಮ್ಮ ಮೂಗನ್ನು ಮುಚ್ಚಿಕೊಳ್ಳಿ. ನಮ್ಮ ಆರೋಗ್ಯಕ್ಕೆ ಈ ಹೊಗೆ ಹಾನಿಕಾರಕ. ಸರಿ, ನಾವಿನ್ನು ರಸ್ತೆಯನ್ನು ದಾಟೋಣ. ಸುಂದರವಾದ ಉದ್ಯಾನವನವನ್ನು ನೋಡೋಣ. ಉದ್ಯಾನವನದೊಳಗೆ ಸರದಿಯ ಸಾಲಿನಲ್ಲಿ ಹೋಗಿರಿ. ಎಂತಹ ಆಹ್ಲಾದಕರ ತಂಗಾಳಿ
ಉದ್ಯಾನವನದೊಳಗೆ ಸುತ್ತಲೂ ಇರುವ ದಾರಿಯಲ್ಲಿ ಓಡಿರಿ. (ಒಂದು ನಿಮಿಷ ವಿರಾಮ). ಈಗ ನಿಮಗೆ ಸೆಖೆಯಾಗುತ್ತಿದೆ; ಬೆವರು ಬರುತ್ತಿದೆ. ಮರದ ಕೆಳಗೆ ವಿರಾಮ ತೆಗೆದುಕೊಳ್ಳಿ. ಹೇಗೆನಿಸುತ್ತಿದೆ? ಈಗ ಮತ್ತೊಮ್ಮೆ ತಂಗಾಳಿಯನ್ನು ಆನಂದಿಸಿ. ಅದು ನಿಮ್ಮ ಸೆಖೆ ಮತ್ತು ಬೆವರನ್ನು ಹೋಗಲಾಡಿಸುತ್ತಿದೆ. ಮರಗಳನ್ನು ನೋಡಿ… ಹೇಗೆ ಗಾಳಿಯ ಆಯಕ್ಕೆ ತಕ್ಕಂತೆ ತೊನೆದಾಡುತ್ತಿವೆ. ಓಹ್ ಎಂತಹ ಮಧುರವಾದ ಪರಿಮಳ!
ಗಾಳಿಯು ಹೂಗಳ ಕಂಪನ್ನು ನಮಗೆ ತಂದು ಒದಗಿಸುತ್ತಿದೆ. ಈಗ ಹೊರಡುವ ಸಮಯ. ಸೂರ್ಯ, ಗಿಡಗಳು, ಹೂವುಗಳಿಗೆ ವಂದನೆಗಳನ್ನು ಹೇಳಿ. ನಿಮ್ಮ ವಿಶೇಷ ವಂದನೆಗಳು ವಾಯುವಿಗೆ.. ನಿಧಾನವಾಗಿ ಚಲಿಸಿ. ನಾವು ಈಗ ನಮ್ಮ ತರಗತಿಯ ಮುಂದಿದ್ದೇವೆ. ನಿಮ್ಮ ಶೂಗಳನ್ನು ಕಳಚಿ, ನಿಧಾನವಾಗಿ ಒಳಗೆ ಬನ್ನಿ. ನಿಮ್ಮ, ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಿರಿ, ವಿಶ್ರಮಿಸಿರಿ. (ಒಂದು ನಿಮಿಷದ ವಿರಾಮ).
ಈಗ ನಾವೆಲ್ಲ ಓಂ, ಶಾಂತಿಃ, ಶಾಂತಿಃ, ಶಾಂತಿಃ ಎಂದು ಪಠಿಸೋಣ.”