ಅಗ್ನಿ – 2

Print Friendly, PDF & Email
ಅಗ್ನಿ – 2

ಪರಿಚಯ

ಗುರುಗಳು ಒಂದು ವನವಿಹಾರಕ್ಕೆ ಸಂಬಂಧಿಸಿದ ಘಟನೆಯನ್ನು ಹೇಳುತ್ತಾರೆ. ಒಂದು ಸಲ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಜೊತೆಗೆ ವನ ವಿಹಾರಕ್ಕೆ ಹೋಗಿದ್ದರು. ಅವರು ಆಹಾರ ತಯಾರಿಸಲು ಬೇಕಾಗುವ ಅಕ್ಕಿ, ಬೇಳೆ, ತರಕಾರಿ, ಕಟ್ಟಿಗೆ ಮುಂತಾದುವನ್ನು ಅವರ ಜೊತೆಗೆ ತೆಗೆದುಕೊಂಡು ಹೋಗಿದ್ದರು. ಗುಡ್ಡಗಾಡು ಪ್ರದೇಶದಲ್ಲಿದ್ದ ಒಂದು ಹೊಳೆಯ ಬಳಿ ಅವರು ಶಿಬಿರವನ್ನು ಮಾಡಿದ್ದರು. ಆ ಸ್ಥಳಕ್ಕೆ ಹೋದ ನಂತರ ಅಹಾರ ತಯಾರಿಸಲು ಬೇಕಾಗುವ ಎಲ್ಲ ವಸ್ತುಗಳನ್ನು ಜೋಡಿಸಿ ಇಡಲು ಪ್ರಾರಂಭಿಸಿದರು. ದುರದೃಷ್ಟವಶಾತ್, ಅವರಿಗೆ ಅಡುಗೆ ಮಾಡಲು ಸಾಧ್ಯವಾಗಲಿಲ್ಲ. ಏನೋ ಇಲ್ಲ ಅನಿಸುತ್ತಿತ್ತು. ಏನದು? ಅದೇ, ಬೆಂಕಿಪೊಟ್ಟಣ! ಕಟ್ಟಿಗೆಯನ್ನು ಉರಿಸಲು ಅಲ್ಲಿ ಅವರಿಗೆ ಬೇರೆ ಯಾವುದೇ ಅಗ್ನಿಮೂಲಗಳಿರಲಿಲ್ಲ.

ಪ್ರಶ್ನೆಗಳು
  1. ಸೂರ್ಯನನ್ನು ಯಾರು ಸೃಷ್ಟಿಸಿದರು?
  2. ಆಹಾರ ತಯಾರಿಸುವುದಕ್ಕಲ್ಲದೆ, ಬೇರೆ ಯಾವ ವಿಧದಲ್ಲಿ ಅಗ್ನಿಯಿಂದ ನಮಗೆ ಸಹಾಯವಾಗುತ್ತದೆ?
  3. ಬೆಳಕು ನಿಮಗೆ ಯಾವಾಗ ಬೇಕಾಗುತ್ತದೆ?
  4. ಬೆಳಗಿನ ಸಮಯದಲ್ಲಿ ನಿಮಗೆ ಬೆಳಕು ಹೇಗೆ ದೊರೆಯುತ್ತದೆ?
  5. ಪ್ರಪಂಚಕ್ಕೆ ಸೂರ್ಯನು ಏನೆಲ್ಲವನ್ನು ಕೊಡುತ್ತಾನೆ?
ಹಾಡು

ಅಗ್ನಿಜ್ವಾಲೆಯು ಉರಿಯುತಲಿದೆ, ಕತ್ತಲೆ ಕವಿದ ರಾತ್ರಿಯು ಬೆಳಗುತಲಿದೆ, ಬೆಳಕೇ ಜೀವವು, ಕತ್ತಲೆಯದು ಮೃತ್ಯು ಅಗ್ನಿಯಿಂದ ಬೆಳಕು ನಮಗೆ ಉತ್ಸಾಹವು, ಶಕ್ತಿಯು.

ಗರ್ಭದಿಂದ ಗೋರಿವರೆಗೆ ಅಗ್ನಿ ನಮಗೆ ಮಿತ್ರನು, ಕಡೆಯತನಕ ಜೊತೆಯೊಳಿದ್ದು ಬೇಕಾದ್ದು ಕೊಡುವನು, ಬೇಸಗೆಯಲಿ ಅತಿ ಹೆಚ್ಚು ತಾಪದಿಂದ ಸುಡುವನು ಛಳಿಗಾಲದಿ ಬೆಚ್ಚಗಿನ ಉಡುಗೊರೆಯೇ ಅವನು!

ನೀರಿಗಿಂತ ಹಗುರ ಅವನು ಎಲ್ಲೆಡೆಗೂ ಹರಡುವನು ಸದಾ ಪರಿಶುದ್ಧತೆಯೇ ಸಹಜ ಗುಣವು ಅಗ್ನಿಗೆ.

ಗುಂಪು ಚಟುವಟಿಕೆ

ಚರ್ಚಿಸುವ ಸಲುವಾಗಿ ಈ ಕೆಳಗೆ ಕೆಲವು ಪ್ರಶ್ನೆಗಳನ್ನು ನೀಡಲಾಗಿದೆ. ಗುರುಗಳು ತರಗತಿಯನ್ನು ಕೆಲವು ಗುಂಪುಗಳನ್ನಾಗಿ ವಿಂಗಡಿಸಿ, ಪ್ರತಿಯೊಂದು ಗುಂಪಿಗೂ ಒಂದೊಂದು ಪ್ರಶ್ನೆಯನ್ನು ನೀಡಬಹುದಾಗಿದೆ. ಉತ್ತರಗಳನ್ನು ಅವರು ಪಟ್ಟಿಮಾಡಬಹುದು. ಒಬ್ಬ ವಿದ್ಯಾರ್ಥಿ ಅದನ್ನು ಪ್ರಸ್ತುತ ಪಡಿಸಬಹುದು. ಹೆಚ್ಚು ಪರಿಣಾಮಕಾರಿಯಾಗಲು ಪ್ರದರ್ಶನಗಳನ್ನು ಏರ್ಪಡಿಸಬಹುದು.

  1. ಬೆಳಕಿನ ಯಾವ ಮೂಲಗಳನ್ನು ನಾವು ಬಳಸುತ್ತಿದ್ದೇವೆ?
  2. ಅಗ್ನಿಯಲ್ಲಿ ಏನನ್ನು ಉರಿಸುತ್ತೇವೆ? ಏಕೆ?
  3. ಯಾವ ವಸ್ತುಗಳನ್ನು ಅಗ್ನಿಯಲ್ಲಿ ಶುದ್ಧೀಕರಿಸುತ್ತೇವೆ?
ಮೌನಾಸನ

ಮಕ್ಕಳೇ, ಪ್ರತಿದಿನ ನೀವು ಮುಂಜಾನೆ ಬೇಗ ಹಾಸಿಗೆಯಿಂದ ಎದ್ದು ಪ್ರಾರ್ಥನೆಯನ್ನು ಮಾಡುವಿರಿ. ಹೊರಬಂದು ಪೂರ್ವ ದಿಗಂತದಲ್ಲಿ, ಕೆಂಪು ಬಣ್ಣದಿಂದ ದುಂಡಾಗಿ ಗೋಚರಿಸುವ ಉದಯಿಸುತ್ತಿರುವ ಸೂರ್ಯನಿಗೆ ನಮಸ್ಕರಿಸಿ. ಸೂರ್ಯನನ್ನು ರಾತ್ರಿಯ ಕತ್ತಲೆಯನ್ನು ಹೊರಹಾಕುವ ಬೆಳಕು, ಮತ್ತು ಬೆಳಕನ್ನು ಎಲ್ಲೆಡೆಗೆ ಪಸರಿಸುವವನು ಎಂದು ಭಾವಿಸಿಕೊಳ್ಳಿ. ಮುಂಜಾನೆಯ ಸೂರ್ಯನ ಹಿತವಾದ ತಾಪದ ಅನುಭವ ನಿಮಗಾಗುತ್ತದೆ. ನಂತರ ನೀವು ಸ್ನಾನಮಾಡಿ, ನಿಮ್ಮ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಶುದ್ಧಿಗೊಳಿಸಿ. ಮತ್ತು ನಿಮ್ಮ ಒದ್ದೆ ಬಟ್ಟೆಗಳನ್ನು ಸೂರ್ಯನ ಬಿಸಿಲಿನಲ್ಲಿ ಹಾಗೂ ಗಾಳಿಯಲ್ಲಿ ಒಣಗಲು ಬಿಡಿ. ದಿನ ಪೂರ್ತಿ ಸೂರ್ಯದೇವರು ನಮಗೆ ಬೆಳಕು, ಶಾಖ ಮತ್ತು ಚೈತನ್ಯವನ್ನು ನೀಡುತ್ತಿದ್ದಾರೆ. ಅಮ್ಮ ನಿಮಗೆ ಬೆಂಕಿಯಲ್ಲಿ ಬೇಯಿಸಿದ ಉಪಾಹಾರವನ್ನು ನೀಡುತ್ತಾರೆ. ನಂತರ ಕಸ ಗುಡಿಸುವವರು ಬಂದು, ನಿಮ್ಮ ಜಾಗದಲ್ಲಿರುವ ಅನುಪಯುಕ್ತ ವಸ್ತುಗಳನ್ನು, ತ್ಯಾಜ್ಯಗಳನ್ನು ಸಂಗ್ರಹಿಸಿ, ಅದಕ್ಕೆ ಬೆಂಕಿ ಹಚ್ಚಿ, ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ ಹಾಗೂ ಶುದ್ಧವಾಗಿಡುತ್ತಾರೆ. ನಂತರ ಸೂರ್ಯ ನೆತ್ತಿಯ ಮೇಲೆ ಬರುತ್ತಾನೆ. ನಿಮ್ಮ ಅಮ್ಮ ಬೆಂಕಿಯ ಸಹಾಯದಿಂದ ತಯಾರಿಸಿದ ರುಚಿಕರವಾದ ಅಡುಗೆಯನ್ನು ನೀವು ಊಟಮಾಡುತ್ತೀರಿ. ಸಾಯಂಕಾಲವಾಗುತ್ತದೆ; ಚಂದ್ರನ ಬೆಳಕು ಬರುತ್ತದೆ. ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಲು ನೀವು ಮನೆಯ ಎಲ್ಲ ದೀಪಗಳನ್ನು ಬೆಳಗಬೇಕಾಗುತ್ತದೆ. ನಿಮ್ಮ ಅಮ್ಮ ದೇವರ ಮನೆಯಲ್ಲಿರುವ ಪವಿತ್ರ ದೀಪಗಳನ್ನು ಬೆಳಗಿಸಿ ಪ್ರಾರ್ಥನೆ ಮಾಡುತ್ತಾರೆ. ಧೂಪ ದ್ರವ್ಯಗಳನ್ನು ಬೆಳಗಿಸಿ ಸುಗಂಧವನ್ನು ಪಸರಿಸಲಾಗುತ್ತದೆ.

ಪ್ರಾರ್ಥನೆ

“ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿಃ, ಶಾಂತಿಃ, ಶಾಂತಿಃ || “

Leave a Reply

Your email address will not be published. Required fields are marked *