ಆಕಾಶ -1

Print Friendly, PDF & Email
ಆಕಾಶ -1

ಪರಿಚಯ

ಸೃಷ್ಟಿಯ ಆರಂಭದಲ್ಲಿ, ದೇವರು ಮೊದಲ ಪದ “ಓಂ”ನ್ನು ಉಚ್ಛರಿಸಿದರು. ದೇವರ ಈ ಧ್ವನಿಗೆ ಸ್ಥಳ ನೀಡಲು ಆಕಾಶ ಸೃಷ್ಟಿಯಾಯಿತು. ಎಲ್ಲ ಕಡೆಯಲ್ಲಿಯೂ ಇದು ವ್ಯಾಪಿಸಿದೆ. ಇದಕ್ಕೆ ಯಾವುದೇ ಮಿತಿ ಇಲ್ಲ. ಎಲ್ಲ ಸ್ಥಳಗಳಲ್ಲಿಯೂ ಇದನ್ನು ನೋಡಬಹುದು. ಇದು ಎಲ್ಲಾ ವಸ್ತುಗಳಿಗೂ ಸ್ಥಳಾವಕಾಶ ನೀಡಿದೆ. ನಮ್ಮ ಪೂರ್ವಜರು ಆಕಾಶವನ್ನು “ಶಬ್ದ ಬ್ರಹ್ಮನ್” ಎಂದು ಪೂಜಿಸುತ್ತಿದ್ದರು. “ ಶಬ್ದ ಬ್ರಹ್ಮನ್”- ಆದಿ ಸ್ವರೂಪದ ಶಬ್ದ.

ಗುಣಲಕ್ಷಣಗಳು

ಪಂಚಭೂತಗಳಲ್ಲಿ ಮೊದಲನೆಯದಾದ ‘ಆಕಾಶ’ದ ಲಕ್ಷಣ ‘ಶಬ್ದ’. ಕಿವಿಗೆ ಕೇಳಲ್ಪಡುವ ಸಂಗೀತ ಮುಂತಾದ ಬ್ರಹ್ಮಾಂಡದ ಎಲ್ಲ ಶಬ್ದಗಳಿಗೆ ಮೂಲಾಧಾರವೇ ‘ಓಂ’. ಇದು ಎಲ್ಲ ವಸ್ತುಗಳ ಮತ್ತು ಎಲ್ಲ ಚೇತನಗಳ ಮೂಲವಾಗಿದೆ. ವ್ಯಾಪಕತೆ [ವಿಶಾಲತೆ] ಯು ಆಕಾಶದ ಲಕ್ಷಣ. ಆಕಾಶದ ಹಾಗೆ ನಮ್ಮ ಹೃದಯವೂ ವಿಶಾಲವಾಗಿರಬೇಕು ಮತ್ತು ಭಗವಂತನು ಸೃಷ್ಟಿಸಿರುವ ಎಲ್ಲ ವಿಷಯಗಳಿಗೆ ಮತ್ತು ವಸ್ತುಗಳಿಗೆ ನಮ್ಮ ಹೃದಯದಲ್ಲಿ ಸ್ಥಾನವಿರಬೇಕು. ವಿಶ್ವದಲ್ಲಿರುವ ಎಲ್ಲ ಸೃಷ್ಟಿಯನ್ನೂ ಪ್ರೀತಿಸುವಂತಿರಬೇಕು.

ಹಾಡು

ಆಕಾಶ ಎಲ್ಲದಕು ಅವಕಾಶ ನೀಡಿಹುದು,
ಅಂತೆಯೇ ಇರಲೆನ್ನ ಹೃದಯ,
ಒಳಗೊಳ್ಳಲೀ ಎಲ್ಲ ಇರುವಿಕೆಯ

ಕಥೆ

ಜಪಾನ್ ನಲ್ಲಿ ಕಗಾವಾ ಎಂಬ ಒಬ್ಬ ಪ್ರಖ್ಯಾತ ಮನುಷ್ಯನಿದ್ದ. ಅವನು ಜಪಾನಿನ “ಮಹಾತ್ಮಾ ಗಾಂಧಿ”ಎಂದೇ ಪ್ರಸಿದ್ಧನಾಗಿದ್ದ. ಅವನು ಒಂದು ಸಣ್ಣ ಪಟ್ಟಣದಲ್ಲಿ ಬಹಳ ಸರಳ ಜೀವನ ನಡೆಸುತ್ತಿದ್ದ. ಎಲ್ಲರೂ ಅವನನ್ನು ಇಷ್ಟ ಪಡುತ್ತಿದ್ದರು. ಆ ಪಟ್ಟಣದಲ್ಲಿ ಒಬ್ಬ ಕುಖ್ಯಾತ ಮನುಷ್ಯನಿದ್ದ. ಅವನು ಎಲ್ಲರೊಡನೆಯೂ ಅಸಭ್ಯವಾಗಿ ವರ್ತಿಸುತ್ತಿದ್ದ. ಯಾರೂ ಅವನನ್ನು ಇಷ್ಟಪಡುತ್ತಿರಲಿಲ್ಲ. ಎಲ್ಲರೂ ಕಗಾವಾನನ್ನು ಇಷ್ಟ ಪಡುತ್ತಿದ್ದರೆ, ಇವನು ಕಗಾವಾನನ್ನು ದ್ವೇಷಿಸುತ್ತಿದ್ದ ಮತ್ತು ಅವನಿಗೆ ಕೆಡುಕನ್ನು ಉಂಟುಮಾಡಲು ಬಯಸುತ್ತಿದ್ದ. ಆದ್ದರಿಂದ ಅವನು ರಾತ್ರಿ ಕಾಲದಲ್ಲಿ ಕಗಾವಾನ ಮನೆಗೆಹೋದ. ಕಗಾವಾ ಮೇಲೆದ್ದು, ತನ್ನನ್ನು ಕೊಲ್ಲಲು ಬಂದ ಕೆಂಪು ಕಣ್ಣಿನವನನ್ನು ನೋಡಿದ. ಆದರೆ ಅವನು ಶಾಂತವಾಗಿದ್ದನು. ಕೈಗಳೆರಡನ್ನೂ ಜೋಡಿಸಿಕೊಂಡು, “ದೇವರೇ, ಅವನಿಗೆ ಒಳ್ಳೆಯ ಬುದ್ಧಿ ನೀಡು, ಅವನ ಯೋಗಕ್ಷೇಮಕ್ಕಾಗಿ ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ”ಎಂದು ದೇವರ ಹತ್ತಿರ ಕಗಾವಾ ಪ್ರೇಮಭರಿತನಾಗಿ ಪ್ರಾರ್ಥಿಸಲಾರಂಭಿಸಿದ. ‘ಯಾರನ್ನು ತಾನು ಕೊಲ್ಲಬೇಕೆಂದು ಬಂದಿರುವೆನೋ, ಅವನು ತನ್ನ ಯೋಗಕ್ಷೇಮಕ್ಕಾಗಿ ದೇವರಲ್ಲಿ ಮೊರೆಯಿಡುತ್ತಿದ್ದಾನೆ’ ಎಂಬುದನ್ನು ನೋಡಿ ಆ ಕುಖ್ಯಾತನಾದ ಮನುಷ್ಯನು ಆಶ್ಚರ್ಯಚಕಿತನಾದನು. ಅವನು ತನ್ನ ಆಯುಧಗಳನ್ನು ಎಸೆದು, ಅಳುತ್ತಾ ಕಗಾವಾನ ಪಾದಗಳಿಗೆ ಎರಗಿದ. ಕಗಾವಾನು ಅವನಿಗೆ ಮೇಲೇಳುವಂತೆ ಹೇಳಿ, ಅವನನ್ನು ಅಪ್ಪಿಕೊಂಡು ಕಣ್ಣೀರನ್ನು ಒರೆಸುತ್ತ, “ಚಿಂತಿಸಬೇಡ, ತಪ್ಪು ಮಾಡುವುದು ಮಾನವನ ಸಹಜ ಗುಣ, ಕ್ಷಮಿಸುವುದು ಸರ್ವ ಶ್ರೇಷ್ಠವಾದುದು” ಎಂದು ಹೇಳಿದನು. ಕಗಾವಾನ ಪ್ರಾರ್ಥನೆ ಮತ್ತು ಪ್ರೀತಿಯಿಂದ ಆ ವ್ಯಕ್ತಿಯು ಪೂರ್ಣವಾಗಿ ಬದಲಾದನು. ನಂತರದಲ್ಲಿ ಅವನು ಒಳ್ಳೆಯ ಮನುಷ್ಯನಾದನು.

ಮೌನಾಸನ

ಎಲ್ಲ ಮಕ್ಕಳೂ ಸುಖಾಸನದಲ್ಲಿ ನೇರವಾಗಿ, ನಿಶ್ಶಬ್ದವಾಗಿ, ಕಣ್ಮುಚ್ಚಿ ಕುಳಿತುಕೊಳ್ಳಲಿ. ನಂತರ ಈ ಕೆಳಗಿನಂತೆ ಊಹಿಸಿಕೊಳ್ಳಲಿ, “ನಾನೊಂದು ತೋಟದಲ್ಲಿ ಓಡಾಡುತ್ತಿದ್ದೇನೆ. ಅದು ತುಂಬಾ ಸುಂದರವಾಗಿದೆ. ಪಕ್ಷಿಗಳು ಇಂಪಾಗಿ ಹಾಡುತ್ತಿವೆ. ಅವು ತುಂಬಾ ಆನಂದದಿಂದ ಇವೆ. ತಂಗಾಳಿ ಬೀಸುತ್ತಿದೆ. ನಾನು ನೀಲಾಕಾಶವನ್ನು ನೋಡುತ್ತಿದ್ದೇನೆ. ಇಲ್ಲಿ ಎಷ್ಟೊಂದು ಸ್ಥಳಾವಕಾಶವಿದೆ! ನಾನು ಹಿಗ್ಗುತ್ತಿದ್ದೇನೆ; ಆಗಸದಂತೆ ವಿಸ್ತಾರವಾಗುತ್ತಿದ್ದೇನೆ (ವಿಶಾಲವಾಗುತ್ತಿದ್ದೇನೆ). ಆಗಸವು ಎಲ್ಲಾ ಜೀವಿಗಳನ್ನು ಬಾನೆತ್ತರಕ್ಕೆ ಹಾರಲು ಮತ್ತು ಆನಂದಪಡಲು ಕರೆಯುತ್ತಿದೆ. ಸೂರ್ಯನು ತನ್ನ ಪ್ರೇಮ ಕಿರಣಗಳಿಂದ ಹೊಳೆಯುತ್ತಿದ್ದಾನೆ. ನಾನೂ ಸಹ ನನ್ನ ಎರಡು ಕೈಗಳನ್ನು ವಿಸ್ತರಿಸುತ್ತೇನೆ. ಜನರು, ಪ್ರಾಣಿಗಳು, ಪಕ್ಷಿಗಳು, ಮೀನುಗಳು, ಗೃಹಗಳು, ಕಲ್ಲುಗಳು ಎಲ್ಲವೂ ನನ್ನ ಸನಿಹ ಬಂದು ಪ್ರೇಮವನ್ನು ಹಂಚಿಕೊಳ್ಳಲಿ. ನಾನು ಸಂತೋಷವನ್ನೂ, ಆನಂದವನ್ನು ಅನುಭವಿಸುತ್ತಿದ್ದೇನೆ. ನಾನು ನನ್ನ ವಂದನೆಗಳನ್ನು ಸುತ್ತ ಮುತ್ತಲಿನವರಿಗೆಲ್ಲ ತಿಳಿಸುತ್ತಿದ್ದೇನೆ.

ಚಟುವಟಿಕೆ

ಈ ಚೌಕಗಳಲ್ಲಿರುವ ಪಂಚಭೂತಗಳನ್ನು ಗುರುತಿಸಿ.

ಪ್ರಾರ್ಥನೆ

ಸಮಸ್ತ ಲೋಕಾಃ ಸುಖಿನೋ ಭವಂತು

Leave a Reply

Your email address will not be published. Required fields are marked *