ಜಲ [ನೀರು] – 1

Print Friendly, PDF & Email
ಜಲ [ನೀರು] – 1

ಪರಿಚಯ:

‘ನೀರು’ ದೇವರ ಸೃಷ್ಟಿಯಲ್ಲಿಯೇ ಅಮೃತವಿದ್ದಂತೆ. ನೀರಿಲ್ಲದೆ ಜೀವನ ಸಾಧ್ಯವಿಲ್ಲ. ಮನುಷ್ಯ, ಪ್ರಾಣಿಗಳು ಮತ್ತು ಗಿಡಮರಗಳು ಬದುಕುಳಿಯಲು ನೀರು ಅತ್ಯಗತ್ಯ. ಭಾರತದಲ್ಲಿ ನಾವು ಎಲ್ಲ ನದಿಗಳನ್ನು ‘ತಾಯಿ’ ಎಂದೇ ಕರೆಯುತ್ತೇವೆ. ಉದಾ: ಗಂಗಾಮಾತೆ, ಮಾತೆ ಗೋದಾವರಿ, ಕಾವೇರಿಮಾತೆ, ಇತ್ಯಾದಿ. ಅವುಗಳನ್ನು ದೇವತೆಗಳೆಂದೇ ಪೂಜಿಸುತ್ತೇವೆ. ಗಂಗಾನದಿಗೆ ಪ್ರತಿನಿತ್ಯ ಆರತಿ ಮಾಡಲಾಗುತ್ತದೆ. ನಮ್ಮ ಬದುಕನ್ನು ಉಳಿಸುವ ಜಲಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಸ್ವಾರ್ಥದಿಂದಾಗಿ ಮಾನವ, ನದಿಗಳನ್ನು ಸ್ವಚ್ಛವಾಗಿ ಮತ್ತು ಶುದ್ಧವಾಗಿ ಇಟ್ಟುಕೊಂಡಿಲ್ಲ. ನಾವು ಎಲ್ಲಾ ತ್ಯಾಜ್ಯ ವಸ್ತುಗಳನ್ನು ನದಿಗೆ ಎಸೆಯುತ್ತೇವೆ. ನದಿಗಳ ಸಮೀಪದಲ್ಲಿರುವ ಕೈಗಾರಿಕೆಗಳು, ಕೈಗಾರಿಕಾ ತ್ಯಾಜ್ಯಗಳನ್ನು ನದಿಗೆ ದೂಡಿಬಿಡುತ್ತವೆ. ಇದರಿಂದಾಗಿ ಮಾನವನ ಉಪಯೋಗಕ್ಕೆ ನದೀ ನೀರು ಇಂದು ಅನರ್ಹವಾಗಿದೆ. ಇದಲ್ಲದೆ ನಿಸರ್ಗದ ಸಮತೋಲನಕ್ಕೂ ತೊಂದರೆಯಾಗಿದೆ. ನಾವು ದಿನನಿತ್ಯದ ಬಳಕೆಯಲ್ಲೂ ಸಹ ನೀರನ್ನು ಹಾಳು ಮಾಡುತ್ತೇವೆ. ಅದನ್ನು ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ನಿಸರ್ಗ ಕೆಲವು ಕಡೆ ಪ್ರವಾಹವನ್ನೂ ಮತ್ತು ಇನ್ನಿತರ ಕಡೆಗಳಲ್ಲಿ ಬರಗಾಲವನ್ನೂ ಸೃಷ್ಟಿಸಿ ನಮಗೆ ಶಿಕ್ಷೆ ನೀಡುತ್ತದೆ.

ಗುಣಲಕ್ಷಣಗಳು:

ನೀರಿಗೆ ನಾಲ್ಕು ಗುಣಲಕ್ಷಣಗಳಿವೆ. ಅವುಗಳೆಂದರೆ ಶಬ್ದ, ಸ್ಪರ್ಶ, ರೂಪ ಮತ್ತು ರಸ. ಇದು ನಿರಂತರವಾಗಿ ಪ್ರವಹಿಸುತ್ತದೆ. ಸದಾ ಕ್ರಿಯಾಶೀಲವಾಗಿರುತ್ತದೆ. ನೀರಿನಿಂದ ಇದನ್ನು ನಾವು ಕಲಿಯಬೇಕು. ನಾವೂ ಸಹ ನಿಸರ್ಗದಲ್ಲಿ ಸಾಮರಸ್ಯವನ್ನು ತರಬೇಕು ಮತ್ತು ಬೇರೆಯವರಿಗೆ ಸಹಾಯಮಾಡಬೇಕು. ಹಾಗೂ ಯಾವಾಗಲೂ ಕಾರ್ಯ ನಿರ್ವಹಿಸು ತ್ತಿರಬೇಕು, ಸೋಮಾರಿಯಾಗಿರಬಾರದು. ‘ನೀರು’ ಯಾವಾಗಲೂ ಮೇಲಿನಿಂದ ಕೆಳಗಿಳಿಯುತ್ತದೆ. ಎಷ್ಟು ಮೇಲಿನಿಂದ ಅದು ಕೆಳಗೆ ಬೀಳುತ್ತದೆಯೋ, ಅದರ ಶಕ್ತಿ ಅಷ್ಟು ಹೆಚ್ಚಾಗಿರುತ್ತದೆ. ಇದು ವಿದ್ಯುಚ್ಛಕ್ತಿ ಉತ್ಪಾದನೆಗೂ ಸಹಾಯ ಮಾಡುತ್ತದೆ. ನೀರು ತಗ್ಗು ಪ್ರದೇಶಗಳಿಗೆ ಸುಲಭವಾಗಿ ಹರಿಯುತ್ತದೆ. ಅದರಂತೆ ನಮಗೂ ‘ಅಹಂ’ ಇರಬಾರದು. ಬಡಜನರೊಂದಿಗೆ ಸುಲಭವಾಗಿ ಬೆರೆಯಬೇಕು ಮತ್ತು ಪ್ರೀತಿಸಬೇಕು. ಕುಡಿದರೂ, ಸ್ನಾನಕ್ಕೆ ಬಳಸಿದರೂ, ನೀರು ನಮಗೆ ತಂಪೆರೆಯುತ್ತದೆ. ಹರಿಯುತ್ತಿರುವ ನೀರು ತನ್ನ ಜೊತೆಗೆ ಕೊಳೆ ಮತ್ತು ಎಲೆಗಳನ್ನು ಕೊಂಡೊಯ್ದು, ಆ ಪರಿಸರವನ್ನು ಸ್ವಚ್ಛವಾಗಿಯೂ, ಅಚ್ಚುಕಟ್ಟಾಗಿಯೂ ಇಡುತ್ತದೆ.

ಉದ್ದರಣ:

ಕೋಪಿಷ್ಠಳಾದ ಒಬ್ಬ ಮಹಿಳೆಗೆ ಇದ್ದಳು. ಅವಳಿಗೆ ಸಣ್ಣ ಸಣ್ಣ ವಿಷಯಗಳಿಗೂ ಸಿಟ್ಟು ಬರುತ್ತಿತ್ತು. ಶಾಂತವಾದಾಗ ಅವಳು ಪಶ್ಚಾತ್ತಾಪ ಪಡುತ್ತಿದ್ದಳು. ಆದರೆ ಅವಳಿಗೆ ಸಿಟ್ಟನ್ನು ಜಯಿಸಲು ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ಅವಳ ಮನೆಗೆ ಒಬ್ಬರು ಸಾಧು ಬಂದರು. ಮಹಿಳೆಯು ಅವರ ಹತ್ತಿರ, “ಸ್ವಾಮೀ, ನಾನು ಬಹಳ ಬೇಗ ಕೋಪಕ್ಕೆ ಒಳಗಾಗುತ್ತೇನೆ. ಇದರಿಂದ ನಾನು ಬಹಳ ದುಃಖಿತಳಾಗಿದ್ದೇನೆ. ಈ ಅಭ್ಯಾಸದಿಂದ ಹೊರಗೆ ಬರುವ ದಾರಿಯನ್ನು ದಯವಿಟ್ಟು ತಿಳಿಸಿ” ಎಂದು ಕೇಳಿಕೊಂಡಳು. ಆಗ ಸಾಧುವು, “ಅಮ್ಮಾ, ಯೋಚಿಸಬೇಡ. ನನ್ನ ಹತ್ತಿರ ಸಿಟ್ಟನ್ನು ತಡೆಗಟ್ಟಲು ಒಳ್ಳೆಯ ಔಷಧವಿದೆ. ನಾಳೆ ನಾನು ಆ ಔಷಧದ ಸಹಿತ ಬರುತ್ತೇನೆ” ಎಂದು ಉತ್ತರಿಸಿದರು. ಮಾರನೆಯ ದಿನ ಬರುವಾಗ ಸಾಧುವು ಯಾವುದೋ ದ್ರವ ತುಂಬಿದ ಒಂದು ಸೀಸೆಯನ್ನು ತೆಗೆದುಕೊಂಡು ಬಂದರು. ಅದನ್ನು ಮಹಿಳೆಗೆ ಕೊಡುತ್ತಾ, “ಯಾವಾಗ ನಿನಗೆ ಸಿಟ್ಟು ಬರುತ್ತದೆಯೊ, ಆಗ ಸೀಸೆಯನ್ನು ನಿನ್ನ ಬಾಯಿಗಿಟ್ಟುಕೊಂಡು, ಅದರಲ್ಲಿರುವ ದ್ರವವನ್ನು, ನಿನ್ನ ಸಿಟ್ಟು ಕಡಿಮೆಯಾಗುವ ತನಕ ಗುಟುಕರಿಸುತ್ತಾ ಹೋಗು. ನಾನು ಏಳುದಿನ ಬಿಟ್ಟು ಬರುತ್ತೇನೆ” ಎಂದು ಹೇಳಿದರು.

ಆ ಮಹಿಳೆ ಔಷಧವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಳು. ಅವಳಗೆ ಸಿಟ್ಟು ಬಂದಾಗಲೆಲ್ಲಾ ಆ ಸೀಸೆಯಿಂದ ಗುಟುಕರಿಸುತ್ತಿದ್ದಳು.

ಸಾಧು ಭರವಸೆ ನೀಡಿದಂತೆ ಏಳುದಿನ ಬಿಟ್ಟು, ಫಲಿತಾಂಶವನ್ನು ತಿಳಿಯಲು ಬಂದರು. ಆ ಮಹಿಳೆಯು ಸಾಧುವಿನ ಪಾದಗಳಿಗೆರಗಿ, “ಸ್ವಾಮಿ, ನೀವು ನನ್ನನ್ನು ಉಳಿಸಿದ್ದೀರಿ. ನೀವು ಎಷ್ಟು ಒಳ್ಳೆಯ ಔಷಧವನ್ನು ತಂದು ಕೊಟ್ಟಿದ್ದೀರೆಂದರೆ, ನನಗೆ ನನ್ನ ಸಿಟ್ಟು ಎಲ್ಲಿ ಹೋಯಿತು ಎಂಬುದೇ ಗೊತ್ತಿಲ್ಲ. ದಯವಿಟ್ಟು ಔಷಧಿಯ ಬಗ್ಗೆ ತಿಳಿಸಿರಿ.”ಎಂದು ಪ್ರಾರ್ಥಿಸಿದಳು. ಆಗ ಸಾಧುವು, “ಸಹೋದರಿ, ಆ ಸೀಸೆಯಲ್ಲಿ ಬೇರೇನೂ ಇರಲಿಲ್ಲ, ಪರಿಶುದ್ಧವಾದ ನೀರು ಮಾತ್ರ ಇತ್ತು. ನೀರು ಮನಸ್ಸಿಗೆ ಮತ್ತು ಹೃದಯಕ್ಕೆ ತಂಪುನೀಡುತ್ತದೆ. ಆದ್ದರಿಂದ ನಿನ್ನ ಸಿಟ್ಟು ಹೋಗಿದೆ” ಎಂದು ಹೇಳಿದರು.

ನೀರು ಬಾಯಾರಿಕೆಯನ್ನು ತಣಿಸುತ್ತದೆ ಮತ್ತು ಭೂಮಿ (ಕೆಟ್ಟದ್ದನ್ನು) ದಬ್ಬಾಳಿಕೆಯನ್ನು ಸಹಿಸಿಕೊಳ್ಳುತ್ತದೆ. ಅವುಗಳಂತೆ ನಾವೂ ಸಹ, ಧರ್ಮವಂತರು ಮತ್ತು ನೀತಿವಂತರಾಗಿರಬೇಕು.

ಮೌನಾಸನ:

ಮಕ್ಕಳನ್ನು ನದಿಯ ದಂಡೆಗೆ ಕರೆದುಕೊಂಡು ಹೋಗಿ. ಅವರು ನಿಶ್ಶಬ್ದದಿಂದ ಕುಳಿತು, ವಿಶಾಲವಾದ ನೀರಿನತ್ತ ಗಮನಹರಿಸಲಿ. ಈ ಕೆಳಗಿನಂತೆ ಯೋಚಿಸಲು ತಿಳಿಸಿ.

  1. ಹರಿಯುವ ನೀರುಎಷ್ಟು ಶುದ್ಧವಾಗಿದೆ.
  2. ಹರಿಯುವ ನೀರು ಎಷ್ಟೊಂದು ಸುಂದರವಾಗಿದೆ.
  3. ಶುದ್ಧ, ಸ್ವಚ್ಛ ಮತ್ತು ತಂಪಾಗಿರುವ ನೀರಿನ ರುಚಿ ಎಷ್ಟೊಂದು ಹಿತವಾಗಿದೆ.
  4. ನೀರಿನಿಂದಾಗಿಯೇ ಸುತ್ತಮುತ್ತಲೆಲ್ಲಾ ವಾತಾವರಣ ಉಲ್ಲಾಸಮಯವಾಗಿದೆ; ಹಸಿರುಮಯವಾಗಿದೆ. ತಣ್ಣನೆ ನೀರಿನ ಮೇಲೆ ಬೀಸಿ ಬರುವ ಗಾಳಿ ತಂಪಾಗಿದೆ.
  5. ನನ್ನ ಮನಸ್ಸು ಶಾಂತಿ ಮತ್ತು ಪ್ರೇಮದಿಂದ ತುಂಬಿದೆ. ನನ್ನದು, ನಿನ್ನದು, ಎತ್ತರ, ತಗ್ಗು ಎಂಬ ಭಾವವಿಲ್ಲದೆ ಎಲ್ಲರ ಮೇಲೂ ಪ್ರೇಮ ಹರಿಯುತ್ತಿದೆ.
ಚಟುವಟಿಕೆ:
  1. ಯಾವ ಹಣ್ಣಿನ ಹೆಸರಿನಲ್ಲಿ ‘ವಾಟರ್’ ಎಂಬುದಿದೆ?
  2. ಕನ್ನಡ, ಇಂಗ್ಲೀಷ್, ಹಿಂದಿಭಾಷೆಗಳಲ್ಲಿ ‘ಜಲ’ವನ್ನು ಏನೆಂದು ಕರೆಯುತ್ತಾರೆ?
  3. ನೀರು ಮೂರು ಸ್ಥಿತಿಗಳನ್ನು ಹೊಂದಿದೆ. ಮಂಜುಗಡ್ಡೆಯು —— ಸ್ಥಿತಿಯಾಗಿದೆ ಮತ್ತು ಆವಿ —— ಸ್ಥಿತಿಯಾಗಿದೆ.
  4. ಒಂಟೆಯು ದೂರ ದೂರಕ್ಕೆ, ಹಲವಾರು ದಿನಗಳವರೆಗೆ, ನೀರಿಲ್ಲದೆ ಹೇಗೆ ಪ್ರಯಾಣಿಸುತ್ತದೆ?
  5. ದೇಹದಲ್ಲಿ ಹೆಚ್ಚುವರಿ ನೀರಿನ ನಷ್ಟದಿಂದ —- ಉಂಟಾಗುವುದು.

Leave a Reply

Your email address will not be published. Required fields are marked *