ಏಕಲವ್ಯ

Print Friendly, PDF & Email
ಏಕಲವ್ಯ

ಶಸ್ತ್ರಭ್ಯಾಸ ಕಲೆಯಲ್ಲಿ ಪ್ರಾವೀಣ್ಯವನ್ನು ಪಡೆಯಲು ಧೃತರಾಷ್ಟ್ರ ತನಯರು ಹಾಗೂ ಪಾಂಡು ಪುತ್ರರೊಂದಿಗೆ ಇತರ ಅನೇಕ ರಾಜಪುತ್ರರು ದ್ರೋಣಾಚಾಯ೵ರ ಆಶ್ರಮದಲ್ಲಿ ಕಲಿಯುತ್ತಿದ್ದರು. ಆಚಾಯ೵ರ ಖ್ಯಾತಿಯನ್ನು ಕೇಳಿದ ಅನೇಕರು ಅವರ ಮಾರ್ಗದರ್ಶನದಲ್ಲಿ ಆಯುಧಗಳನ್ನು ಪ್ರಯೋಗಿಸುವ ಕಲೆಯನ್ನು ಅಭ್ಯಸಿಸಲು ಇಚ್ಚಿಸುತ್ತಿದ್ದರು. ಇಂಥ ಪ್ರಸಂಗದಲ್ಲಿ ಒಂದು ದುರಂತವು ಸಂಭವಿಸಿತು. ಹಿರಣ್ಯಧನುವೆಂಬ ಹೆಸರಿನ ಬೇಡರ ರಾಜನೊಬ್ಬನಿದ್ದ. ಅವರ ಮಗ ಏಕಲವ್ಯನು ತಾನೂ ಕೂಡ ದ್ರೋಣಾಚಾಯ೵ರ ಶಿಷ್ಯನಾಗಿ ಧನುರ್ವಿದ್ಯಾ ಪ್ರವೀಣನಾಗಲು ಯೋಚಿಸಿದನು.

ಅವನು ಗುರುಗಳ ಸಮೀಪಕ್ಕೆ ಹೋಗಿ ತನ್ನ ಅಭೀಷ್ಟವನ್ನು ವ್ಯಕ್ತಪಡಿಸಿ, “ಪೂಜ್ಯ ಗುರುಗಳೇ, ನಾನು ತಮ್ಮ ಸೇವೆಯನ್ನು ಮಾಡಿ, ಶಸ್ತ್ರ ಪ್ರಯೋಗ ವಿದ್ಯೆಯನ್ನು ಕಲಿಯಲಿಚ್ಚಿಸಿದ್ದೇನೆ. ದಯವಿಟ್ಟು ನನ್ನ ಮೇಲೆ ಕೃಪೆದೋರಬೇಕು,” ಎಂದನು.

ತಕ್ಷಣವೇ ಗುರುಗಳು ಉತ್ತರಿಸಿದರು: “ಮಗನೇ ಈ ರಾಜಪುತ್ರರೊಂದಿಗೆ ನಿನಗೆ ವಿದ್ಯಾದಾನ ಮಾಡುವುದು ನನಗೆ ಸಾಧ್ಯವಿಲ್ಲ.”

ಈ ರೀತಿಯಲ್ಲಿ ಏಕಲವ್ಯನಿಗೆ ಜ್ಞಾನದ ದ್ವಾರಗಳು ಮುಚ್ಚಲ್ಪಟ್ಟಿದ್ದವು. ಅವನು ಅತ್ಯಂತ ದುಃಖಿತನಾದನು. ಅವನಿಗೆ ದುಷ್ಟತನ ಇಷ್ಟವಾಗುತ್ತಿರಲಿಲ್ಲ. ಆದರೆ ಅವನ ನಿರ್ಧಾರವೂ ಅಷ್ಟೇ ದೃಢವಾಗಿತ್ತು. ಅದಕ್ಕಾಗಿ ಅವನು ಅರಣ್ಯಕ್ಕೆ ಹೋಗಿ ಗುರುಗಳ ಮಣ್ಣಿನ ಮೂರ್ತಿಯನ್ನು ತಯಾರಿಸಿ ಅದನ್ನೇ ಗುರುಗಳೆಂದು ಭಾವಿಸಿ ಭಕ್ತಿಯಿಂದ ಬಾಗಿ ನಮಸ್ಕರಿಸಿ, ಧನುರ್ವಿದ್ಯೆಯನ್ನು ಕಲಿಯಲು ಪ್ರಾರಂಭಿಸಿದನು. ಅವನ ಭಕ್ತಿಯು ಅಗಾಧವಾಗಿತ್ತು. ಈ ರೀತಿಯಲ್ಲಿ ಕಲಿಯುತ್ತಾ ಅವನು ಧನುರ್ವಿದ್ಯಾಪಾರಂಗತನಾದನು.

ಒಂದು ದಿನ ಗುರುಗಳ ಅಪ್ಪಣೆಯನ್ನು ಪಡೆದ ಪಾಂಡವ ಕೌರವರು ಬೇಟೆಯಾಡಲು ಹೋದರು. ದೈವಯೋಗದಿಂದ ಅವರು ಏಕಲವ್ಯನು ವಾಸಿಸುವ ಅರಣ್ಯಕ್ಕೆ ಬಂದರು. ಆ ರಾಜಕುಮಾರರ ನಾಯಿಯೊಂದು ಅವರಿಂದ ಬೇರ್ಪಟ್ಟು ಎಲ್ಲೆಲ್ಲೋ ಸುತ್ತಾಡುತ್ತಾ ಇತ್ತು. ಒಮ್ಮೆಲೇ ಏಕಲವ್ಯನನ್ನು ನೋಡಿ ಬೊಗಳಲು ಪ್ರಾರಂಭಿಸಿತು. ಬೇಡ ಯುವರಾಜನು ಏಳು ಬಾಣಗಳನ್ನು ಬೀಸಿ ಅದರ ಬಾಯಿಗೆ ಹೊಲಿಗೆ. ಹಾಕಿದನು. ಆ ನಾಯಿ ಓಡುತ್ತಾ ಪಾಂಡವರ ಸಮೀಪಕ್ಕೆ ಬಂದಿತು. ಅವರು ಯೋಚಿಸಿದರು. ಈ ನಾಯಿ ಬಾಯಿಗೆ ಇಷ್ಟು ಚಾಣಾಕ್ಷತನದಿಂದ ಬಾಣಗಳ ಹೊಲಿಗೆ ಹಾಕಿದವನು ಯಾರಿರಬಹುದು? ಅವನು ನಿಜವಾಗಿಯೂ ವೀರಧನುರ್ಧಾರಿಯೇ ಇರಬೇಕು. ಹೀಗೆ ಏಕಲವ್ಯನ ಬಗೆಗೆ ಪ್ರಶಂಸೆಯೂ ಜೊತೆಗೆ ಮತ್ಸರ ಅಸೂಯೆಗಳೂ ಅವರಲ್ಲಿ ಉಂಟಾದವು. ಈಗವರು ಆ ಬಿಲ್ಲುಗಾರನನ್ನು ಹುಡುಕಲು ಉದ್ಯುಕ್ತರಾದರು. ಕೆಲ ಹೆಜ್ಜೆ ಮುಂದೆ ಹೋಗುವಾಗ ಏಕಲವ್ಯನು ಬಿಲ್ಲುವಿದ್ಯೆಯ ಅಭ್ಯಾಸ ಮಾಡುತ್ತಿರುವುದನ್ನು ಕಂಡರು. ಅವನ್ಯಾರೆಂದು ಅವರು ವಿಚಾರಿಸಿದರು.

ಅವನು ಹೇಳಿದನು, “ನಾನು ಏಕಲವ್ಯ, ಹಿರಣ್ಯಧನುವಿನ ಮಗ ಮತ್ತು ದೋಣಾಚಾಯ೵ರ ಶಿಷ್ಯ.” ಆಶ್ಚರ್ಯಚಕಿತರಾದ ರಾಜಪುತ್ರರು ತಮ್ಮ ಗುರುಗಳ ಸಮೀಪ ಬಂದು ಏಕಲವ್ಯನು ತಿಳಿಸಿದ ಸಂಗತಿಯನ್ನೆಲ್ಲ ಹೇಳಿದರು. ಗುರುಗಳು ಸಹ ದಂಗಾಗಿ ಹೇಳಿದರು: “ಆದರೆ ಏಕಲವ್ಯನು ನನ್ನ ಶಿಷ್ಯನಲ್ಲ. ನಾನವನಿಗೆ ಇಲ್ಲಿ ಪ್ರವೇಶವನ್ನು ಕೊಟ್ಟಿಲ್ಲ.” ಅವರ ಅತ್ಯಂತ ಕುಶಲ ಶಿಷ್ಯನಾದ ಧನಂಜಯನು ತನ್ನನ್ನು ಎಲ್ಲ ಶಿಷ್ಯರಿಗಿಂತಲೂ ಮೇಲಾದ ನಿಪುಣ ಶಿಷ್ಯನನ್ನಾಗಿಸುವ ಅಭಯವನ್ನಿತ್ತು ಗುರುಗಳ ಅಭೀಷ್ಟವನ್ನು ಜ್ಞಾಪಿಸಿ ಈಗ ಏಕಲವ್ಯನು ತನ್ನನ್ನು ಮೀರಿಸುವಂತಾಗಿದ್ದಾನೆಂದು ಹೇಳಿ, “ನನ್ನೊಂದಿಗೆ ಬನ್ನಿ ಗುರುಗಳೇ, ದಯವಿಟ್ಟು ನೀವೇ ಖಾತ್ರಿ ಮಾಡಿಕೊಳ್ಳಿ” ಎಂದನು. ಏಕಲವ್ಯನು ತನಗೆ ದರ್ಶನವಿತ್ತ ದ್ರೋಣಾಚಾಯ೵ರನ್ನು ಬಾಗಿ ನಮಸ್ಕರಿಸಿ ಅವರ ಆಜ್ಞೆಯನ್ನು ಕೇಳಿದನು. ದ್ರೋಣಾಚಾಯ೵ರು ಅವನ ಬಲಗೈಯ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳಿದರು. ಸ್ವಲ್ಪವೂ ಹಿಂದುಮುಂದು ನೋಡದೆ ಏಕಲವ್ಯನು ತನ್ನ ಬಲ ಹೆಬ್ಬೆರಳನ್ನು ತಕ್ಷಣ ಕತ್ತರಿಸಿ ಕೊಟ್ಟುಬಿಟ್ಟನು. ಅಂದಿನಿಂದ ಏಕಲವ್ಯನು ಧನುರ್ಬಾಣಗಳನ್ನು ಹಿಡಿಯಲು ಅಸಮರ್ಥನಾದನು. ಏಕಲವ್ಯನ ನಿಸ್ವಾರ್ಥ ಪೂರ್ಣತ್ಯಾಗವು ಅವನಲ್ಲಿ ಗುರುವಿನ ಬಗ್ಗೆ ಎಂಥ ಅಪಾರ ಭಕ್ತಿ ಇತ್ತೆಂಬುದನ್ನು ತೋರಿಸುತ್ತದೆ.

Leave a Reply

Your email address will not be published. Required fields are marked *

error: