ಸ್ಥಿರಚಿತ್ತತೆ

Print Friendly, PDF & Email
ಸ್ಥಿರಚಿತ್ತತೆ

ಜನಕ ಮಹಾರಾಜನು, ತನ್ನ ರಾಜ್ಯದ ಮತ್ತು ಅಲ್ಲಿಯ ಜನರ ಯೋಗಕ್ಷೇಮಕ್ಕೆ ಸೇರಿದ ಎಲ್ಲಾ ಪ್ರಾಪಂಚಿಕ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರೂ ಸಹ, ಆತನ ಮನಸ್ಸು ಸದಾ ದೈವೀಕ ಚಿಂತನೆಯಲ್ಲಿ ತೊಡಗಿರುತ್ತಿತ್ತು. ಒಮ್ಮೆ, ಶುಕ ಮಹರ್ಷಿಗಳು ಮಿಥಿಲಾಪುರದ ಸಮೀಪದ ಅರಣ್ಯದಲ್ಲಿ ತಮ್ಮ ಶಿಷ್ಯರಿಗೆ ಅನೇಕ ವಿಷಯಗಳ ಬಗ್ಗೆ ಬೋಧನೆ ಮಾಡುತ್ತಿರುವರೆಂಬ ವರ್ತಮಾನವು ಜನಕನಿಗೆ ತಿಳಿದು ಬಂತು. ತಾನೂ ಸಹ ಆ ಮಹರ್ಷಿಗಳ ಶಿಷ್ಯನಾಗಿ, ಅವರ ಉಪದೇಶವನ್ನು ಪಡೆಯಬೇಕೆಂಬ ಆಕಾಂಕ್ಷೆ ಆತನಲ್ಲಿ ಮೂಡಿತು. ಅದರಂತೆ, ಆ ಮಹರ್ಷಿಗಳ ಬಳಿ ಹೋಗಿ, ತನ್ನನ್ನೂ ಒಬ್ಬ ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಅವರಲ್ಲಿ ಪ್ರಾರ್ಥಿಸಿದನು. ಅಂದಿನಿಂದ ಜನಕನೂ ಸಹ ಅವರ ಶಿಷ್ಯರಲ್ಲಿ ಒಬ್ಬನಾಗಿ, ತರಗತಿಯಲ್ಲಿ ಕುಳಿತು ಮಹರ್ಷಿಗಳಿಂದ ಪಾಠ ಪ್ರವಚನಗಳನ್ನು ಕಲಿಯತೊಡಗಿದನು.

Janaka wants to be Sukha's disciple.

ಒಂದು ದಿನ, ಜನಕನು ಸಕಾಲಕ್ಕೆ ತರಗತಿಗೆ ಬರಲಾಗಲಿಲ್ಲ. ಶುಕ ಮಹರ್ಷಿಗಳು ಪಾಠವನ್ನು ಪ್ರಾರಂಭಿಸದೇ, ಜನಕನ ಬರುವಿಕೆಗಾಗಿ ಕಾಯುತ್ತಿರುವುದಾಗಿ, ಇತರ ಶಿಷ್ಯರಿಗೆ ತಿಳಿಸಿದರು. ಜನಕನು ಬರುವವರೆಗೆ ಕಾಯಬೇಕೆಂಬುದನ್ನು ಕೇಳಿದ ಶಿಷ್ಯರು ಮೆಲ್ಲಗೆ ಗೊಣಗಿಕೊಳ್ಳತೊಡಗಿದರು. ತಾವು ಶುಕ ಮಹರ್ಷಿಗಳ ಬಳಿ ಕಲಿಯಲು ಬಂದ ಮುಖ್ಯ ಕಾರಣವೇ, ಅವರು ದೊರೆಗಳಿಗಾಗಲೀ ಅಥವಾ ಇತರ ಪ್ರಭಾವಶಾಲಿ ವ್ಯಕ್ತಿಗಳಿಗಾಗಲೀ ಮುಖ್ಯತ್ವ ನೀಡದ ನಿಷ್ಪಕ್ಷಪಾತಿ ಎಂದು, ಆದರೆ ಅವರೂ ಸಹ ಅದಕ್ಕೆ ಹೊರತಲ್ಲ, ಎಂದು ಬೇಸರಗೊಂಡರು. ಈ ಘಟನೆಯಿಂದಾಗಿ, ಗುರುಗಳ ಬಗ್ಗೆ ಅವರ ನಂಬಿಕೆ ಕಡಿಮೆಯಾಗತೊಡಗಿತು. ಜನಕ ಮಹಾರಾಜನ ಮೇಲೆ ಅಸೂಯೆ ಶುರುವಾಯಿತು.

Disciples were made to feel city in fire

ಶಿಷ್ಯರಲ್ಲಿ ತಲೆಯೆತ್ತಿದ್ದ ಅಸೂಯೆ ಮತ್ತು ದ್ವೇಷಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಶುಕರು, ಅವರಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು.

ಅದೊಂದು ದಿನ. ಪಾಠ ಪ್ರವಚನಗಳು ಪ್ರಾರಂಭವಾಗಿತ್ತು. ಅಕಸ್ಮಾತ್ ತಲೆಯೆತ್ತಿ ನೋಡಿದ ಶಿಷ್ಯರಿಗೆ, ದೂರದಲ್ಲಿ ಕಾಣುತ್ತಿದ್ದ ಮಿಥಿಲಾಪುರಿಗೆ ಬೆಂಕಿಯು ಆವರಿಸುತ್ತಿದ್ದಂತೆ ಗೋಚರವಾಯಿತು. ಅದರಿಂದ ಭಯಭೀತರಾದ ಶಿಷ್ಯರು, ಬೆಂಕಿಯಿಂದಾಗಿ ಅಲ್ಲಿರುವ ತಮ್ಮ ಕುಟುಂಬದವರಿಗೆ ಏನು ತೊಂದರೆಯಾಗಿದೆಯೋ ಏನೋ, ಅವರಿಗೆ ಸಹಾಯ ಮಾಡಿ ಕಾಪಾಡಬೇಕೆಂದು, ಕೂಡಲೇ ಮೇಲೆದ್ದು ನಗರದ ಕಡೆಗೆ ಧಾವಿಸಿದರು. ಆದರೆ ಜನಕ ಮಹಾರಾಜನಾದರೋ, ಸ್ಥಿರಚಿತ್ತದಿಂದ ಅಲ್ಲಿಯೇ ಕುಳಿತು ಪಾಠವನ್ನು ಕೇಳುತ್ತಿದ್ದ.

Except Janaka all others running

ಅರಮನೆಗೂ ಬೆಂಕಿಯ ಜ್ವಾಲೆ ಹರಡುತ್ತಿದೆಯೆಂದು, ಅಲ್ಲಿರುವವರನ್ನು ಹೋಗಿ ರಕ್ಷಿಸಬೇಕೆಂದೂ, ಶುಕರು ಜನಕನಿಗೂ ಸಹ ಸೂಚಿಸಿದರು. ಶಾಂತಚಿತ್ತದಿಂದ ಜನಕನು ಉತ್ತರಿಸಿದ, “ದೇವರ ಇಚ್ಛೆಯಿದ್ದಂತಾಗಲಿ, ಅದನ್ನು ಯಾರಿಂದಲೂ ಬದಲಾಯಿಸಲಾಗದು.”

ಅಸೂಯೆ ತುಂಬಿದ್ದ ಶಿಷ್ಯರು, ಆತಂಕದಿಂದ ಓಡುತ್ತಾ, ಮಿಥಿಲಾ ನಗರಿಯನ್ನು ಸೇರಿದಾಗ, ಅಲ್ಲಿ ಅವರಿಗೆ ಯಾವ ಬೆಂಕಿಯ ಜ್ವಾಲೆಯಾಗಲೀ ಅಥವಾ ಅದರಿಂದ ಯಾವ ಅನಾಹುತವಾಗಲೀ ಆಗಿದ್ದುದು ಕಂಡು ಬರಲಿಲ್ಲ. ತಾವು ಕಂಡುದು ಕೇವಲ ಭ್ರಮೆಯೇನೋ ಎಂದು ಅವರಿಗೆ ಅನ್ನಿಸಿತು.

ನಿಟ್ಟುಸಿರು ಬಿಡುತ್ತಾ ಆಶ್ರಮಕ್ಕೆ ಹಿಂತಿರುಗಿದ ಶಿಷ್ಯರು, ಶುಕ ಮಹರ್ಷಿಗಳಿಗೆ ಅಲ್ಲಿ ನಡೆದುದರ ಬಗ್ಗೆ ವರದಿ ನೀಡಿದರು. ಅಲ್ಲೇ, ಏಕಾಗ್ರತೆಯಿಂದ ಕುಳಿತು ಪಾಠ ಪ್ರವಚನವನ್ನು ಶ್ರದ್ಧೆಯಿಂದ ಕೇಳುತ್ತಿದ್ದ ಜನಕನನ್ನು ಗಮನಿಸಿದ ಅವರು ಆಶ್ಚರ್ಯಚಕಿತರಾದರು. ಆ ಅಸೂಯಾಪರ ಶಿಷ್ಯರನ್ನು ಉದ್ದೇಶಿಸಿ ಶುಕ ಮಹರ್ಷಿಗಳು ಹೀಗೆ ನುಡಿದರು,” ಮನಸ್ಸಿನ ಮೇಲೆ ಹತೋಟಿಯಿಡಲಾಗದ ಹಲವಾರು ಶಿಷ್ಯರನ್ನು ಹೊಂದಿರುವ ಬದಲಾಗಿ, ಮನೋನಿಗ್ರಹ ಹೊಂದಿರುವ ಇಂತಹ ಶಿಸ್ತಿನ ಶಿಷ್ಯನು ಒಬ್ಬನಿದ್ದರೂ ಸಾಕು.”

ಪ್ರಶ್ನೆಗಳು
  1. ಶುಕ ಮಹರ್ಷಿಗಳ ಶಿಷ್ಯರು ಜನಕನನ್ನು ಕಂಡು ಏಕೆ ಅಸೂಯೆ ಹೊಂದಿದರು?
  2. ಅದನ್ನು ದೂರಮಾಡಲು ಶುಕರು ಯಾವ ಯೋಜನೆಯನ್ನು ಮಾಡಿದರು?
  3. ಅದಕ್ಕೆ ಜನಕನ ಪ್ರತಿಕ್ರಿಯೆ ಹೇಗಿತ್ತು?
  4. ಇತರ ಶಿಷ್ಯರು ಆ ಸಂದರ್ಭದಲ್ಲಿ ಹೇಗೆ ವರ್ತಿಸಿದರು?

[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್– 2
ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ]

Leave a Reply

Your email address will not be published. Required fields are marked *