ಆಸೆಗಳ ನಿಯಂತ್ರಣ– ಗುರುಗಳಿಗೆ ಹೆಚ್ಚಿನ ಅಭ್ಯಾಸ

Print Friendly, PDF & Email
ಆಸೆಗಳ ನಿಯಂತ್ರಣ– ಗುರುಗಳಿಗೆ ಹೆಚ್ಚಿನ ಅಭ್ಯಾಸ

ಆಹಾರದ ಅಪವ್ಯಯ ಮಾಡಬೇಡಿ;
ಹಣದ ಅಪವ್ಯಯ ಮಾಡಬೇಡಿ;
ಸಮಯದ ಅಪವ್ಯಯ ಮಾಡಬೇಡಿ;
ಶಕ್ತಿಯ ಅಪವ್ಯಯ ಮಾಡಬೇಡಿ
ಪ್ರಕೃತಿಯ ದುರುಪಯೋಗ ಮಾಡದಿರಿ

“ಆಸೆಗಳ ನಿಯಂತ್ರಣ ಕಾರ್ಯಕ್ರಮ” ದ ಬಗ್ಗೆ ಭಗವಾನ್ ಶ್ರೀ ಸತ್ಯ ಸಾಯಿಬಾಬಾ ರವರು ನೀಡಿದ ದಿವ್ಯೋಪನ್ಯಾಸಗಳ ಸಾರ ಸಂಗ್ರಹವನ್ನು ಈ ಕೆಳಗೆ ನೀಡಲಾಗಿದೆ.

ಆಸೆಗಳೆಂಬ ಸೆರೆಮನೆ

“ಆಸೆಗಳ ನಿಯಂತ್ರಣ” ಎಂಬುದರ ಅರ್ಥವೇನು? ಮಾನವನು ತನ್ನ ಮಿತಿಯಿಲ್ಲದ ಆಸೆಗಳಿಂದಾಗಿ ಭ್ರಮೆಗೆ ಒಳಗಾಗಿದ್ದಾನೆ. ಅವನು ಕನಸಿನ ಲೋಕದಲ್ಲಿ ಬದಕುತ್ತಿದ್ದಾನೆ. ಅವನು ಪರಮೋನ್ನತ ಪ್ರಜ್ಞೆಯನ್ನು ಮರೆಯುತ್ತಿದ್ದಾನೆ. ಆದ್ದರಿಂದ ಅವುಗಳ ಮೇಲೆ ಒಂದು ಮಿತಿಯನ್ನು ಹೇರುವುದರ ಮೂಲಕ, ನಿಯಂತ್ರಣದಲ್ಲಿಡುವುದು ಒಳ್ಳೆಯದು. ನಾವು ಅತಿಯಾಗಿ ಹಣವನ್ನು ಖರ್ಚು ಮಾಡುತ್ತಿದ್ದೇವೆ. ನಮ್ಮ ಸಂತೋಷಕ್ಕಾಗಿ ಅತಿಯಾಗಿ ವ್ಯಯಮಾಡುವುದಕ್ಕಿಂತ, ಬಡವರು ಮತ್ತು ಅಗತ್ಯವುಳ್ಳವರ ನೆರವಿಗಾಗಿ ಹಣ ವ್ಯಯಮಾಡಬೇಕು. ಇದು ‘ಆಸೆಗಳ ನಿಯಂತ್ರಣ’ದ ನಿಜವಾದ ಅರ್ಥ. ಏನಿದ್ದರೂ, ಹಣ ನೀಡುವುದೊಂದೇ ಅಗತ್ಯವಾಗಿರುವುದು ಎಂದು ಯೋಚಿಸಿ ತಪ್ಪು ಮಾಡಬೇಡಿ. ನಿಮ್ಮ ಆಸೆಗಳು ವೃದ್ಧಿಗೊಂಡು ಮುಂದುವರಿಯಲು ಅವಕಾಶ ನೀಡಬೇಡಿ, ಪ್ರಾಪಂಚಿಕವಾದ ಆಸೆಗಳು, ಅವಿಶ್ರಾಂತ ಮತ್ತು ಅನಾಹುತಕರ ಜೀವನಕ್ಕೆ ಎಡೆ ಮಾಡಿಕೊಡುವುದರಿಂದ, ನಿಮ್ಮ ಆಸೆಗಳನ್ನು ಕಡಿತ ಮಾಡಿ. ಆಸೆಗಳು ಒಂದು ಸೆರೆಮನೆ ಇದ್ದಂತೆ. ಮನುಷ್ಯನು ತನ್ನ ಆಸೆಗಳನ್ನು ಮಿತಿಗೊಳಿಸುವುದರಿಂದ ಮಾತ್ರ ಇದರಿಂದ ಬಿಡುಗಡೆ ಹೊಂದಬಹುದು. ಬದುಕಿನ ಮೂಲ ಅಗತ್ಯಗಳಿಗೆ ಮಾತ್ರ ನೀವು ಅಪೇಕ್ಷೆಗಳನ್ನು ಹೊಂದಿರಬೇಕು.

ಆಸೆಗಳನ್ನು ನೀವು ಹೇಗೆ ಕಡಿಮೆಗೊಳಿಸಬಹುದು?

ಮೊದಲನೆಯದಾಗಿ ಆಹಾರ: ನೀವು ಅಗತ್ಯವಾಗಿ ಏನು ತಿನ್ನಬೇಕೋ, ಅದನ್ನು ಮಾತ್ರ ತಿನ್ನಿರಿ. ದುರಾಸೆ ಪಡಬೇಡಿ. ನೀವು ಎಷ್ಟು ತಿನ್ನಬಹುದೋ, ಅದಕ್ಕಿಂತ ಜಾಸ್ತಿ ಹಾಕಿಸಿಕೊಳ್ಳಬೇಡಿ. ಮತ್ತು ಉಳಿದುದನ್ನು ವ್ಯರ್ಥ ಮಾಡಬೇಡಿ. ಏಕೆಂದರೆ, ಆಹಾರವನ್ನು ಅಪವ್ಯಯ ಮಾಡುವುದು ಒಂದು ಮಹಾಪಾಪ. ಹೆಚ್ಚಾಗಿ ಉಳಿದ ಆಹಾರವು ಇನ್ನೊಂದು ಹೊಟ್ಟೆಯನ್ನು ತುಂಬಿಸಬಹುದು. ಆಹಾರವನ್ನು ವ್ಯರ್ಥಮಾಡ ಬೇಡಿ. ಏಕೆಂದರೆ, ಆಹಾರವೇ ದೇವರು, ಜೀವವೇ ದೇವರು, ಮತ್ತು ಮನುಷ್ಯನು ಆಹಾರದಿಂದ ಜನಿಸಿದ್ದಾನೆ. ಆಹಾರವು ಮನುಷ್ಯನ ಜೀವನ, ದೇಹ, ಮನಸ್ಸು ಮತ್ತು ನಡತೆಗಳಿಗೆ ಪ್ರಧಾನ ಆಕರವಾಗಿದೆ. ಸ್ವೀಕರಿಸಿದ ಆಹಾರದಲ್ಲಿ ಮುಖ್ಯ ಭಾಗವಾದ, ಸಾಂದ್ರ ಭಾಗವು ತ್ಯಾಜ್ಯ ವಸ್ತುವಾಗಿ ಹೊರಹಾಕಲ್ಪಡುತ್ತದೆ. ಆಹಾರದ ಅತ್ಯಲ್ಪ ಪ್ರಮಾಣವಾದ ಸೂಕ್ಷ್ಮ ಭಾಗವು, ಶರೀರದಿಂದ ಹೀರಲ್ಪಟ್ಟು ರಕ್ತವಾಗಿ ಹರಿಯುತ್ತದೆ. ಅದಕ್ಕಿಂತ ಇನ್ನೂ ಕಡಿಮೆ ಪ್ರಮಾಣದ, ಆಹಾರದ ಅತೀ ಸೂಕ್ಷ್ಮ ಭಾಗವು ಮನಸ್ಸನ್ನು ಉಂಟುಮಾಡುತ್ತದೆ. ಆದ್ದರಿಂದ ಮನಸ್ಸು, ನಾವು ಸ್ವೀಕರಿಸಿದ ಆಹಾರದ ಪ್ರತಿಫಲನವಾಗಿದೆ. ಈಗಿನ ನಮ್ಮ ಮನಸ್ಸಿನ ಮೃಗೀಯ ಮತ್ತು ಪೈಶಾಚಿಕ ಪ್ರವೃತ್ತಿಗೆ ನಾವು ಬಳಸುವ ಆಹಾರವು ಕಾರಣವಾಗಿದೆ. ದಯೆ, ಕರುಣೆ, ಪ್ರೇಮ ಮತ್ತು ಸಹನೆಗೆ ಬದಲಾಗಿ, ದ್ವೇಷ, ವ್ಯಾಮೋಹದಂತಹ ಕೆಟ್ಟ ಗುಣಗಳು ಕಾರ್ಯಾಚರಣೆ ಮಾಡುತ್ತಿವೆ. ಆದ್ದರಿಂದ ನಾವು ಸೇವಿಸುವ ಆಹಾರದ ಗುಣಮಟ್ಟವು, ಬಹಳ ಶುದ್ಧ, ಬಹಳ ಸ್ವಚ್ಛ, ಬಹಳ ಪವಿತ್ರ ಮತ್ತು ಸಾತ್ವಿಕವಾಗಿರಬೇಕಾಗುತ್ತದೆ. ಮನುಷ್ಯನು ಅಂತಹ ಆಹಾರದಿಂದ ನಿಜವಾದ ಪೌಷ್ಟಿಕತೆಯನ್ನು ಪಡೆಯುತ್ತಾನೆ.

ನಾವು ಕುಡಿಯುವ ನೀರಿನಲ್ಲಿ ಹೆಚ್ಚುಭಾಗ ಮೂತ್ರವಾಗಿ ಹೊರಹೋಗುತ್ತದೆ. ಬಳಸಿದ ನೀರಿನಲ್ಲಿ ಅಲ್ಪಭಾಗ ಜೀವಶಕ್ತಿಯಾಗುತ್ತದೆ. ಆದ್ದರಿಂದ ನಾವು ತೆಗೆದುಕೊಳ್ಳುವ ಆಹಾರ ಮತ್ತು ನೀರಿನ ಸ್ವಭಾವವು ನಮ್ಮ ನಡತೆಯನ್ನು ನಿರ್ಧರಿಸುತ್ತದೆ. ನಾವು ಸ್ವೀಕರಿಸುವ ಆಹಾರ ಮತ್ತು ನೀರಿನ ಗುಣಮಟ್ಟವನ್ನು ನಿಯಂತ್ರಿಸುವುದರಿಂದ ಮಾತ್ರ ನಾವು ದಿವ್ಯತೆಯನ್ನು ಸಾಧಿಸಬಹುದು. ಆದ್ದರಿಂದಲೇ ಆಹಾರವನ್ನು ‘ದೇವರು’ ಎಂದು ಹೇಳಲಾಗಿದೆ. ಆದ್ದರಿಂದ ಆಹಾರವನ್ನು ವ್ಯರ್ಥ ಮಾಡಿದರೆ, ದೇವರನ್ನು ನಷ್ಟ ಮಾಡಿಕೊಂಡಂತೆ. ಆಹಾರವನ್ನು ಅಪವ್ಯಯ ಮಾಡಬೇಡಿ. ನಿಮಗೆ ಎಷ್ಟು ಆಗತ್ಯವಿದೆಯೋ, ಅಷ್ಟನ್ನು ಮಾತ್ರ ಸೇವಿಸಿ. ಮತ್ತು ನೀವು ಸೇವಿಸುತ್ತಿರುವುದು ಸಾತ್ವಿಕ ಆಹಾರ ಎಂಬುದನ್ನು ದೃಢ ಪಡಿಸಿಕೊಳ್ಳಿ. ಆಹಾರ ಮಿಕ್ಕಿದರೆ, ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಿ.

ಎರಡನೆಯದಾಗಿ ಹಣ: ಭಾರತೀಯರು ಹಣ ಅಥವಾ ಸಂಪತ್ತನ್ನು ‘ಲಕ್ಷ್ಮೀ ದೇವಿ’ ಎಂದು ಪರಿಗಣಿಸುತ್ತೇವೆ. ಹಣದ ದುರುಪಯೋಗ ಮಾಡಬೇಡಿ. ಹಾಗೆ ಮಾಡುವುದರಿಂದ ನೀವು ಕೇವಲ ಕೆಟ್ಟ ಗುಣಗಳ, ಕೆಟ್ಟ ಆಲೋಚನೆಗಳ ಮತ್ತು ಕೆಟ್ಟ ಹವ್ಯಾಸಗಳ ದಾಸರಾಗುತ್ತೀರಿ. ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಒಳ್ಳೆಯ ಕಾರ್ಯಗಳಿಗಾಗಿ ಉಪಯೋಗಿಸಿ. ಹಣದ ದುರ್ಬಳಕೆ ಒಳ್ಳೆಯದಲ್ಲ. ಆದ್ದರಿಂದ ಹಣದ ಅಪವ್ಯಯ ಮಾಡಬೇಡಿ. ಅದು ನಿಮ್ಮನ್ನು ಕೆಟ್ಟಮಾರ್ಗದಲ್ಲಿ ಕೊಂಡೊಯ್ಯುತ್ತದೆ.

ಮೂರನೆಯದು ಸಮಯ: ಅತ್ಯಂತ ಪ್ರಮುಖವಾದ, ಅತ್ಯಂತ ಅಗತ್ಯವಾದ ಅಂಶ, ಸಮಯ. ಸಮಯವನ್ನು ಯಾರೂ ವ್ಯರ್ಥ ಮಾಡಬಾರದು. ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಈ ಸೃಷ್ಟಿಯಲ್ಲಿ ಎಲ್ಲವೂ ಸಮಯವನ್ನು ಅವಲಂಬಿಸಿದೆ. ಆದ್ದರಿಂದ ಸಮಯವನ್ನು ಪವಿತ್ರೀಕರಿಸಬೇಕು. ನಮ್ಮ ಧರ್ಮಗ್ರಂಥಗಳೂ ಸಹ ದೇವರನ್ನು ‘ಕಾಲ’ಮತ್ತು ‘ಅಕಾಲ’ ಎಂದು ಉಲ್ಲೇಖಿಸಲಾಗಿದೆಯೆಂದು ಹೇಳುತ್ತವೆ. ದೇವರು ಕಾಲದಿಂದ ಪರಿಮಿತನಾಗಿಲ್ಲ. ಅವನು ಕಾಲಾತೀತನು; ಅವನೇ ಕಾಲನು; ಅವನು ಕಾಲವನ್ನು ನಿಯಂತ್ರಿಸುವವನು. ಕಾಲವು ಭಗವಂತನ ಸ್ವರೂಪ. ಪ್ರತಿಯೊಂದೂ ಕಾಲವನ್ನು ಅವಲಂಬಿಸಿದೆ. ಮನುಷ್ಯನ ಹುಟ್ಟು ಮತ್ತು ಸಾವುಗಳಿಗೆ ಮುಖ್ಯ ಕಾರಣ ಕಾಲ. ನಮ್ಮ ಬೆಳವಣಿಗೆಯಲ್ಲಿ ಮುಖ್ಯವಾದ ಅಂಶ ಕಾಲ. ನಾವು ಕಾಲವನ್ನು ವ್ಯರ್ಥ ಮಾಡಿದರೆ, ಜೀವನವೇ ವ್ಯರ್ಥವಾಗುತ್ತದೆ. ಆದ್ದರಿಂದ ಕಾಲವು ನಮ್ಮ ಜೀವನದ ಅತ್ಯಂತ ಅಗತ್ಯವಾದ ಅಂಶ. ಅನಗತ್ಯವಾದ ಸಂಭಾಷಣೆಯಲ್ಲಿ ಭಾಗವಹಿಸುವುದು ಅಥವಾ ಇತರರ ವೈಯುಕ್ತಿಕ ವಿಚಾರಗಳಲ್ಲಿ ತೊಡಗಿಸಿಕೊಂಡು ಕಾಲಹರಣ ಮಾಡುವುದರಿಂದ ಕಾಲವನ್ನು ಅಪಮೌಲ್ಯಗೊಳಿಸದಿರಿ. ಕೆಟ್ಟ ಆಲೋಚನೆ ಮತ್ತು ವರ್ತನೆಗಳಿಂದಾಗಿ, ಸ್ವಲ್ಪವೂ ಸಮಯ ವ್ಯರ್ಥವಾಗಬಾರದೆಂಬುದೇ “ಸಮಯವನ್ನು ವ್ಯರ್ಥಮಾಡಬೇಡಿ” ಎಂಬ ಮಾತಿನ ಹಿಂದಿರುವ ಸತ್ಯ. ಬದಲಾಗಿ ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳಿ.

ನಾಲ್ಕನೆಯದು, ಶಕ್ತಿ: ನಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನು ಎಂದಿಗೂ ವ್ಯರ್ಥ ಗೊಳಿಸಬಾರದು. “ನಾವು ಶಕ್ತಿಯನ್ನು ಹೇಗೆ ವ್ಯರ್ಥಗೊಳಿಸುತ್ತಿದ್ದೇವೆ?” ಎಂದು ನೀವು ನನ್ನನ್ನು ಕೇಳಬಹುದು. ನೀವು ಕೆಟ್ಟದ್ದನ್ನು ನೋಡಿದರೆ, ನಿಮ್ಮ ಶಕ್ತಿಯು ವ್ಯರ್ಥವಾಗುತ್ತದೆ. ಕೆಟ್ಟವಿಚಾರಗಳನ್ನು ಕೇಳುವುದು, ಕೆಟ್ಟದ್ದನ್ನು ಮಾತನಾಡುವುದು, ಕೆಟ್ಟದ್ದನ್ನು ಆಲೋಚಿಸುವುದು ಮತ್ತು ಕೆಟ್ಟದ್ದನ್ನು ಮಾಡುವುದು, ಇವು ನಿಮ್ಮ ಶಕ್ತಿಯನ್ನು ವ್ಯರ್ಥ ಗೊಳಿಸುತ್ತವೆ. ಈ ಎಲ್ಲ ಐದು ಕ್ಷೇತ್ರಗಳಲ್ಲಿ, ನಿಮ್ಮ ಶಕ್ತಿಯನ್ನು ರಕ್ಷ್ಶಿಸಿಕೊಳ್ಳಿ, ಮತ್ತು ನಿಮ್ಮ ಬದುಕನ್ನು ಹೆಚ್ಚು ಅರ್ಥಪೂರ್ಣಗೊಳಿಸಿಕೊಳ್ಳಿ.

ಕೆಟ್ಟದ್ದನ್ನು ನೋಡಬೇಡ – ಒಳ್ಳೆಯದನ್ನೇ ನೋಡು,
ಕೆಟ್ಟದ್ದನ್ನು ಕೇಳಬೇಡ – ಒಳ್ಳೆಯದನ್ನೇ ಕೇಳು,
ಕೆಟ್ಟದ್ದನ್ನು ಮಾತನಾಡಬೇಡ – ಒಳ್ಳೆಯದನ್ನೇ ಮಾತನಾಡು,
ಕೆಟ್ಟದ್ದನ್ನು ಯೋಚಿಸಬೇಡ – ಒಳ್ಳೆಯದನ್ನೇ ಯೋಚಿಸು,
ಕೆಟ್ಟದ್ದನ್ನು ಮಾಡಬೇಡ – ಒಳ್ಳೆಯದನ್ನೇ ಮಾಡು,
ಇದೇ ಭಗವಂತನೆಡೆಗೆ ಮಾರ್ಗ.

ಯಾವುದೇ ಕೆಟ್ಟದ್ದನ್ನು ನೋಡುವುದಾಗಲಿ, ಕೇಳುವುದಾಗಲಿ, ಮಾತನಾಡುವುದಾಗಲಿ, ಯೋಚಿಸುವುದಾಗಲಿ ಅಥವಾ ಮಾಡುವುದಾಗಲಿ ದಿವ್ಯತೆಯ ಮಾರ್ಗವಾಗಲಾರದು. ನಾವು ಈ ಮಾರ್ಗವನ್ನು ಅನುಸರಿಸದಿದ್ದಲ್ಲಿ, ನಮ್ಮ ಶಕ್ತಿಯ ಅಪವ್ಯಯ ಮಾಡುತ್ತಿರುತ್ತೇವೆ. ಶಕ್ತಿಯ ಈ ರೀತಿಯ ಅಪವ್ಯಯದಿಂದ ನಾವು ನಮ್ಮ ನೆನಪಿನ ಶಕ್ತಿ, ಬುದ್ಧಿಶಕ್ತಿ, ವಿವೇಚನಾಶಕ್ತಿ ಮತ್ತು ನ್ಯಾಯ ನಿರ್ಣಯದ ಶಕ್ತಿಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ಇಂದಿನ ಮನುಷ್ಯನು ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿವೇಚಿಸಲು ಸಮರ್ಥನಾಗಿಲ್ಲ. ಹೀಗಿರುವಾಗ, ಅವನು ಸರಿಯಾದ ವರ್ತನೆಯ ದಾರಿಯನ್ನು ಪ್ರವೇಶಿಸಲು ಹೇಗೆ ಸಾಧ್ಯ? “ಇದು ಹೇಗೆ ಸಾಧ್ಯ? ನಾವು ಹೇಗೆ ಶಕ್ತಿಯನ್ನು ಅಪವ್ಯಯ ಗೊಳಿಸುತ್ತಿದ್ದೇವೆ?” ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಉದಾಹರಣೆಗೆ, ರೇಡಿಯೋದಲ್ಲಿ ಒಂದು ಕಾರ್ಯಕ್ರಮವನ್ನು ಆಲಿಸುವಾಗ, ನೀವು ಶಬ್ದವನ್ನು ಹೆಚ್ಚು ಗೊಳಿಸಿದರೂ, ಕಡಿಮೆ ಮಾಡಿದರೂ, ರೇಡಿಯೋ ಚಾಲನೆಯಲ್ಲೇ ಇರುವುದರಿಂದ, ವಿದ್ಯುತ್ತಿನ ಬಳಕೆ ಆಗಿಯೇ ಆಗುತ್ತದೆ. ನಮ್ಮ ಮನಸ್ಸು ಒಂದು ರೇಡಿಯೋ ಇದ್ದಂತೆ. ನೀವು ಬೇರೆಯವರೊಂದಿಗೆ ಮಾತನಾಡುತ್ತಿದ್ದರೂ, ನಿಮ್ಮಲ್ಲಿಯೇ ಯೋಚನೆ ಮಾಡುತ್ತಿದ್ದರೂ, ಶಕ್ತಿಯನ್ನು ಬಳಸಿ ಕೊಳ್ಳುತ್ತಿರುತ್ತೀರಿ. ನಿಮ್ಮ ಮನಸ್ಸು ಅಷ್ಟೂ ಹೊತ್ತೂ ಕೆಲಸ ಮಾಡುತ್ತಿರುತ್ತದೆ. ಅದು ಯಾವಾಗಲೂ ಕಾರ್ಯೋನ್ಮುಖವಾಗಿರುವುದರಿಂದ, ನೀವು ಬಹಳ ಶಕ್ತಿಯನ್ನು ಬಳಸಿಕೊಳ್ಳುತ್ತೀರಿ. ಮನಸ್ಸಿನ ಹೊರಳಾಟಕ್ಕಾಗಿ ಅಷ್ಟೊಂದು ಶಕ್ತಿಯನ್ನು, ಬಲವನ್ನು ಉಪಯೋಗಿಸುವ ಬದಲು, ಒಳ್ಳೆಯ ವಿಚಾರಗಳನ್ನು ಆಲೋಚಿಸಲು ನಿಮ್ಮ ಸಮಯವನ್ನು ಬಳಸುವುದು ಉತ್ತಮವಲ್ಲವೇ? “ಆಸೆಗಳ ನಿಯಂತ್ರಣ ಕಾರ್ಯಕ್ರಮ”ವು, ಆಹಾರ, ಹಣ, ಕಾಲ ಮತ್ತು ಶಕ್ತಿ ಈ ಕ್ಷೇತ್ರಗಳಲ್ಲಿ, ಮನುಷ್ಯನು ಯಾವುದೇ ಅಪವ್ಯಯ ಮಾಡದ ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ.

[Sathya Sai Newsletter (USA), Volume 13, Number 3 (Spring 1989). Divine Discourse on Service and the Sai Organisation, November 21, 1988.]

ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ಅತ್ಯಂತ ಸುಲಭ ವಿಧಾನ

ನೀವು ನಿಮ್ಮ ಪ್ರಜ್ಞೆಯಲ್ಲಿ ಭಗವಂತನು ಸದಾ ನಿಮ್ಮೊಂದಿಗಿದ್ದಾನೆ ಎಂಬುದನ್ನು ಮೂಡಿಸಿಕೊಂಡಿರಬೇಕು. ‘ಎಲ್ಲ ಕಾರ್ಯಗಳನ್ನೂ ನಾನು ಭಗವಂತನ ಸಂತೋಷಕ್ಕಾಗಿ ಮಾಡುತ್ತಿದ್ದೇನೆ’ ಎಂಬ ಭಾವನೆಯಿಂದ ನೀವು ನಡೆದುಕೊಳ್ಳಬೇಕು. ಇದು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಅತ್ಯಂತ ಸುಲಭ ವಿಧಾನ. ನಿಮ್ಮ ದೇಹವು ಭಗವಂತನಿಗೆ ಸೇರಿದ್ದು ಎಂಬ ಭಾವನೆಯಿಂದ ನೀವು ನಡೆದುಕೊಂಡರೆ, ಆ ನಿಮ್ಮ ದೇಹದಿಂದ ನೀವು ಪಾಪವನ್ನು ಮಾಡುವುದಿಲ್ಲ. ಬದಲಾಗಿ, ನಿಮ್ಮ ಎಲ್ಲ ಪ್ರಯತ್ನಗಳು ಮತ್ತು ಪರಿಶ್ರಮಗಳು ದಿವ್ಯತೆಯ ಕಡೆಗೆ ಸಾಗುತ್ತವೆ. ನಿಮ್ಮ ಶಕ್ತಿಯು ಭಗವಂತನಿಗೆ ಸೇರಿದ್ದು ಎಂಬ ಸಂಪೂರ್ಣ ನಿಶ್ಚಿತಾಭಿಪ್ರಾಯವನ್ನು ನೀವು ಹೊಂದಿದ್ದರೆ, ನೀವು ಅದನ್ನು ದುರುಪಯೋಗ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಶ್ರೀ ಸತ್ಯಸಾಯಿ ಕೇಂದ್ರಗಳಲ್ಲಿ ‘ಆಸೆಗಳ ನಿಯಂತ್ರಣ’ ದ ನಿಯಮವನ್ನು ನಿಗದಿಪಡಿಸಿದ್ದೇವೆ.

ನಾಲ್ಕು ಹಂತಗಳ ಕಾರ್ಯಕ್ರಮ

ಆಸೆಗಳ ಮೇಲಿನ ಮೊದಲ ನಿಯಂತ್ರಣವು, “ ಆಹಾರವನ್ನು ವ್ಯರ್ಥಮಾಡಬೇಡಿ; ಆಹಾರವೇ ದೇವರು” ನಿಮ್ಮ ದೇಹವು ಆಹಾರದಿಂದ ಉಂಟಾಗಿದೆ, ನಿಮ್ಮ ಪಾಲಕರು ಸೇವಿಸಿದ ಆಹಾರದ ಪ್ರತಿಫಲವೇ ನೀವಾಗಿದ್ದೀರಿ. ಆಹಾರವೇ ದೇವರು. ಅಗತ್ಯವಿರುವಷ್ಟು ಆಹಾರವನ್ನು ಸೇವಿಸಿರಿ. ಆದರೆ ನಿಮ್ಮ ತಟ್ಟೆಗೆ ತುಂಬಾ ಆಹಾರವನ್ನು ಹಾಕಿಸಿಕೊಂಡು ಎಸೆಯ ಬೇಡಿ. ಆಹಾರವನ್ನು ವ್ಯರ್ಥ ಮಾಡುವುದರ ಮೂಲಕ ನೀವು ದಿವ್ಯ ಶಕ್ತಿಯನ್ನು ನಷ್ಟಗೊಳಿಸಿಕೊಳ್ಳುತ್ತೀರಿ. ಎರಡನೆಯ ಆದೇಶ, “ಹಣವನ್ನು ಅಪವ್ಯಯ ಮಾಡಬೇಡಿ; ದೇವರೇ ಸಂಪತ್ತು”. “ಹಣವೇ ದೇವರಾಗಿರುವುದರಿಂದ ಹಣದ ದುರ್ಬಳಕೆ ಕೆಟ್ಟದ್ದು. ಹಣವನ್ನು ದುಂದು ವೆಚ್ಚಮಾಡಿ ದುರ್ಬಳಕೆ ಮಾಡುವುದರ ಬದಲಾಗಿ, ಆಹಾರ, ಹಣ, ಬಟ್ಟೆ, ಮನೆ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ದಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. “ಹಣದ ದುರ್ಬಳಕೆಯು ಕೇವಲ ಕೆಟ್ಟದ್ದು ಮಾತ್ರವಲ್ಲ; ಪಾಪವೂ ಹೌದು”. Tಮೂರನೆಯ ಆದೇಶ, “ಸಮಯವೇ ದೇವರು. ಸಮಯವು ವ್ಯರ್ಥವಾದರೆ, ಜೀವನವೇ ವ್ಯರ್ಥವಾದಂತೆ” ಭಗವಂತನನ್ನು “ ಕಾಲಾಯ ನಮಃ, ಕಾಲ ಕಾಲಾಯ ನಮಃ,ಕಾಲಾತೀತಾಯ ನಮಃ, ಕಾಲಸ್ವರೂಪಾಯ ನಮಃ” ಎಂದು ಸ್ತುತಿಸಲಾಗಿದೆ. ಪವಿತ್ರವಾದ ಕಾರ್ಯಗಳ ಮೂಲಕ ಸಮಯವನ್ನು ಕಳೆಯಿರಿ. ಸಮಯವನ್ನು ವ್ಯರ್ಥಗೊಳಿಸಬೇಡಿ. ಸಮಯವನ್ನು ವ್ಯರ್ಥಗೊಳಿಸಿದರೆ ಭಗವಂತನನ್ನು ನಷ್ಟ ಗೊಳಿಸಿಕೊಂಡಂತೆ. Tನಾಲ್ಕನೆಯ ಆದೇಶ, “ಶಕ್ತಿಯನ್ನು ಅಪವ್ಯಯ ಮಾಡಬೇಡಿ” ಜನರು ಕೆಟ್ಟ ಆಲೋಚನೆಗಳು, ಕೆಟ್ಟದ್ದನ್ನು ನೋಡುವಿಕೆ, ಕೆಟ್ಟದ್ದನ್ನು ಕೇಳುವಿಕೆ ಮತ್ತು ಕೆಟ್ಟ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ತಮ್ಮ ಶಕ್ತಿಯನ್ನು ಅಪವ್ಯಯ ಮಾಡುತ್ತಾರೆ.

ಸರಿಯಾದ ರಾಜಮಾರ್ಗವು ಈಕೆಳಗಿನಂತಿದೆ:
ಕೆಟ್ಟದ್ದನ್ನು ನೋಡಬೇಡ – ಒಳ್ಳೆಯದನ್ನೇ ನೋಡು
ಕೆಟ್ಟದ್ದನ್ನು ಕೇಳಬೇಡ – ಒಳ್ಳೆಯದನ್ನೇ ಕೇಳು,
ಕೆಟ್ಟದ್ದನ್ನು ಮಾತನಾಡಬೇಡ – ಒಳ್ಳೆಯದನ್ನೇ ಮಾತನಾಡು,
ಕೆಟ್ಟದ್ದನ್ನು ಯೋಚಿಸಬೇಡ – ಒಳ್ಳೆಯದನ್ನೇ ಯೋಚಿಸು,
ಕೆಟ್ಟದ್ದನ್ನು ಮಾಡಬೇಡ – ಒಳ್ಳೆಯದನ್ನೇ ಮಾಡು
ಇದೇ ಭಗವಂತನೆಡೆಗೆ ಮಾರ್ಗ.

ಮೇಲಿನ ಆದೇಶಗಳನ್ನು ಕಾರ್ಯ ರೂಪಕ್ಕೆ ತರುವುದರಿಂದ ನೀವು ನಿಮ್ಮ ಸಮಯವನ್ನು ಪವಿತ್ರೀಕರಿಸಬಹುದು. ಇದು ನೀವು ಕೈಗೊಳ್ಳಬೇಕಾದ ಆಧ್ಯಾತ್ಮಿಕ ಸಾಧನೆ ಮತ್ತು ಸೇವೆ. ಮನೋನಾಶವಾಗಿ, ದಿವ್ಯತೆಯೊಂದಿಗೆ ವಿಲೀನತೆಯನ್ನು ಸಾಧಿಸುವ ಒಂದು ದಿನ ಒದಗಿ ಬರುತ್ತದೆ

[Summer Showers in Brindavan 1993; Chapter 6: The Conquest of the Mind]

ಅಂತರಂಗದ ಪ್ರೇಮ ಜ್ಯೋತಿಯನ್ನು ಬೆಳಗಿಸಿ

ಮನುಷ್ಯನು ಇಂದು ಸಂತೋಷವಾಗಿ, ಆನಂದದಿಂದ ಇರಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾನೆ. ನಿಮಗೆ ಆನಂದವು ಎಲ್ಲಿ ದೊರೆಯುತ್ತದೆ? ಅದು ಪ್ರಾಪಂಚಿಕ ವಸ್ತುಗಳಲ್ಲಿ, ವ್ಯಕ್ತಿಗಳಲ್ಲಿ, ಪುಸ್ತಕಗಳಲ್ಲಿ ಇದೆಯೇ? ಇಲ್ಲವೇ ಇಲ್ಲ. ಆನಂದವು ಪ್ರತಿಯೊಬ್ಬನ ಒಳಗೇ ಇದೆ. ನೀವು ಆನಂದದ ಆಕರವಾಗಿರುವ ನಿಜವಾದ ನಿಮ್ಮತನವನ್ನು ಮರೆತಿದ್ದೀರಿ. ಹೊರಗಿನ ಕೃತಕ ಸಂತೋಷಕ್ಕಾಗಿ ಬಹಳಷ್ಟು ಕಷ್ಟಪಟ್ಟು ಹೋರಾಡುತ್ತಿರುವಿರಿ. ನಿಮ್ಮ ಹೃದಯದಲ್ಲೇ ಇರುವ ಸತ್ಯಸ್ಥಿತಿಯ ಬಗ್ಗೆ ನಿಮಗೆ ಅರಿವಿಲ್ಲ. ವಾಸ್ತವವಾಗಿ ಎಲ್ಲಾ ಆನಂದವೂ ಅಲ್ಲೇ ಇದೆ. ಪ್ರೇಮ ತತ್ವವು ಹೃದಯದಿಂದ ಉದ್ಭವಿಸುತ್ತದೆ; ಜಗತ್ತಿನಿಂದಲ್ಲ. ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಆದರೆ ಈಗ ಎಲ್ಲೆಲ್ಲಿಯೂ ದ್ವೇಷ ಮತ್ತು ಕೋಪಗಳೇ ಇವೆ. ಎಲ್ಲಿ ನೋಡಿದರೂ, ಆಸೆ, ವೈರ, ಭಯ ಕಂಡುಬರುತ್ತದೆ. ನೀವು ಶಾಂತಿಯನ್ನು ಹೇಗೆ ನಿರೀಕ್ಷಿಸುತ್ತೀರಿ? ಆನಂದವಾಗಿರುವುದನ್ನು ಹೇಗೆ ನಿರೀಕ್ಷಿಸುತ್ತೀರಿ? ನಿಮ್ಮೊಳಗೆ ಪ್ರೇಮ ಜ್ಯೋತಿಯನ್ನು ಬೆಳಗಿಸಿ. ಆಗ ಭಯ ಮತ್ತು ಭ್ರಮೆಗಳನ್ನು ನಿವಾರಿಸಬಹುದು. ಮತ್ತು ಆತ್ಮದರ್ಶನವನ್ನು ಪಡೆಯಬಹುದು. ಇಲ್ಲವಾದಲ್ಲಿ ನೀವು ಅನುಭವಿಲೇಬೇಕಾಗುತ್ತದೆ. ನಿಮ್ಮ ಆಸೆಗಳಿಗೆ ನೀವು ಮಿತಿಯನ್ನು ಹೇರಬೇಕಾಗುತ್ತದೆ. ಭೂಮಿ ಮತ್ತು ಆಸ್ತಿಯ ಮಿತಿಗೆ ನಿಯಮಗಳಿವೆ. ಆದರೆ ನಿಮ್ಮ ಆಸೆಗಳಿಗೆ ಯಾವ ಮಿತಿಯೂ ಇಲ್ಲ. ಆಸೆಗಳ ನಿಯಂತ್ರಣವೆಂದರೆ, ಅವುಗಳ ಮೇಲೆ ಮಿತಿಯನ್ನು ಹೇರುವುದು. ಒಮ್ಮೆ ಆಸೆಗಳು ನಿಯಂತ್ರಿಸಲ್ಪಟ್ಟರೆ, ನೀವು ಸಂತೋಷವಾಗಿರಬಹುದು.

ಕಡಿಮೆ ಗಂಟುಮೂಟೆಗಳು, ಹೆಚ್ಚಿನ ಸಮಾಧಾನ, ಪ್ರಯಾಣವನ್ನು ಸಂತೋಷಕರವನ್ನಾಗಿಸುತ್ತವೆ

ನಿಮ್ಮ ಜೀವನವು ಒಂದು ಸುದೀರ್ಘ ಪಯಣ. ಜೀವನದ ಈ ದೀರ್ಘವಾದ ಪ್ರಯಾಣದಲ್ಲಿ ನೀವು ಕಡಿಮೆ ಗಂಟುಮೂಟೆಗಳನ್ನು (ಆಸೆಗಳನ್ನು) ಹೊಂದಿರಬೇಕು. ಆದ್ದರಿಂದಲೇ, “ಕಡಿಮೆ ಗಂಟುಮೂಟೆಗಳು, ಹೆಚ್ಚಿನ ಸಮಾಧಾನ, ಪ್ರಯಾಣವನ್ನು ಸಂತೋಷಕರ ವನ್ನಾಗಿಸುತ್ತವೆ” ಎಂದು ಹೇಳಲಾಗಿದೆ. ಆದ್ದರಿಂದ ಇಂದು ನೀವು ‘ಆಸೆಗಳ ನಿಯಂತ್ರಣ’ವನ್ನು ಅನುಸರಿಸಬೇಕಾಗಿದೆ. ದಿನದಿಂದ ದಿನಕ್ಕೆ ನೀವು ನಿಮ್ಮ ಆಸೆಗಳನ್ನು ಕಡಿತ ಮಾಡಿಕೊಳ್ಳಬೇಕು. ‘ಆಸೆಗಳನ್ನು ಪೂರೈಸುವುದರಲ್ಲಿ ಸಂತೋಷದ ನೆಲೆಯಿದೆ ಎಂದು ನೀವು ತಪ್ಪಾದ ಗ್ರಹಿಕೆಯಲ್ಲಿದ್ದೀರಿ. ವಾಸ್ತವವಾಗಿ, ಆಸೆಗಳು ಪೂರ್ಣವಾಗಿ ನಿರ್ಮೂಲನವಾದಾಗ, ಸತೋಷದ ಉದಯವಾಗುತ್ತದೆ. ಆಸೆಗಳನ್ನು ಕಡಿಮೆ ಮಾಡಿದಾಗ, ತ್ಯಾಗದ ಕಡೆಗೆ ನೀವು ಮುನ್ನಡೆಯುತ್ತೀರಿ. ನಿಮಗೆ ಅನೇಕ ಆಸೆಗಳಿವೆ. ಅವುಗಳಿಂದ ನೀವು ಏನನ್ನು ಪಡೆಯುತ್ತೀರಿ? ಯಾವುದನ್ನಾದರೂ ನೀವು ನಿಮ್ಮದೆಂದು ಹಕ್ಕು ಸಾಧಿಸಿದಾಗ, ಅದರ ಪರಿಣಾಮಗಳನ್ನು ಎದುರಿಸಲು ನೀವು ಬದ್ಧರಾಗಿರಬೇಕಾಗುತ್ತದೆ. ಒಂದು ತುಂಡುಭೂಮಿಯನ್ನು ನೀವು ನಿಮ್ಮದೆಂದು ಹೇಳಿದರೆ, ಆಗ ಅದರ ಬೆಳೆಯ ಕೊಯ್ಲನ್ನು ನೀವೇ ಮಾಡಬೇಕಾಗುತ್ತದೆ. ಅಹಂಕಾರ ಮತ್ತು ವ್ಯಾಮೋಹದ ಈ ಪ್ರವೃತ್ತಿಯು,ನಿ ಮ್ಮನ್ನು ದುಃಖಕ್ಕೆ ಒಳಪಡಿಸುತ್ತದೆ. ಅಹಂಕಾರ ಮತ್ತು ವ್ಯಾಮೋಹಗಳನ್ನು ತೊರೆದ ಕ್ಷಣದಿಂದ ನೀವು ಆನಂದವಾಗಿರುತ್ತೀರಿ.

[Sathya Sai Speaks, Volume 32, Part 1, Chapter 6: Put a Ceiling on Your Desires.]

ನೀವು ಈ ಜಗತ್ತನ್ನು ಬಿಡುವಾಗ ನಿಮ್ಮೊಡನೆ ಯಾವುದೂ ಬರುವುದಿಲ್ಲ.

ನೀವು ಇಂದು ಎಲ್ಲಿನೋಡಿದರೂ, ಎಲ್ಲಾ ಕಡೆಯೂ ಕೇವಲ ಆಸೆಗಳು, ಆಸೆಗಳು ಮತ್ತು ಇನ್ನೂ ಹೆಚ್ಚಿನ ಆಸೆಗಳು. ಈ ಆಸೆಗಳ ಮೇಲೆ ಒಂದು ಮಿತಿಯನ್ನು ಹಾಕಿರಿ! ಆಗ ಮಾತ್ರ ನಿಮ್ಮ ಮನಸ್ಸು ಸ್ಥಿರವಾಗುತ್ತದೆ. “ನನಗೆ ಇದು ಬೇಕು”, “ನನಗೆ ಅದು ಬೇಕು” ಮುಂತಾಗಿ ನೀವು ಹೇಳುತ್ತೀರಿ. ಹೀಗೆ ನೀವು ಅನೇಕ “ಬೇಕು”ಗಳನ್ನು ಬೆಳೆಸಿಕೊಳ್ಳುತ್ತೀರಿ. ಅವು ಹಾದುಹೋಗುವ ಮೋಡಗಳಿದ್ದಂತೆ. ನೀವು ನಿಮ್ಮ ಬೇಕುಗಳನ್ನು, ಈ ಹಾದು ಹೋಗುವ ಮೋಡಗಳನ್ನು ಏಕೆ ವೃದ್ಧಿಗೊಳಿಸಿಕೊಳ್ಳುತ್ತೀರಿ? ಕೊನೆಯದಾಗಿ, ನೀವು ಈ ನಶ್ವರವಾದ ಶರೀರವನ್ನು ಬಿಟ್ಟು ಹೊರಡುವಾಗ, ಯಾವುದೂ ನಿಮ್ಮೊಡನೆ ಬರುವುದಿಲ್ಲ. ಈ ಜಗತ್ತನ್ನು ಮಹಾರಾಜರುಗಳೂ, ಚಕ್ರವರ್ತಿಗಳೂ ಆಳಿದ್ದಾರೆ. ಅವರು ಅನೇಕ ದೇಶಗಳನ್ನು ಗೆದ್ದು, ಅಪಾರ ಸಂಪತ್ತನ್ನು ಸಂಗ್ರಹಿಸಿದರು. ಜಗತ್ತಿನ ಅನೇಕ ಭಾಗಗಳನ್ನು ಗೆದ್ದಿದ್ದ ಅಲೆಗ್ಸಾಂಡರ್ ಚಕ್ರವರ್ತಿಯೂ ಸಹ, ಅವನು ಸಂಗ್ರಹಿಸಿದ ಸಂಪ್ಪತ್ತಿನಲ್ಲಿ ಒಂದು ಅತ್ಯಲ್ಪ ಭಾಗವನ್ನೂ ಅವನೊಂದಿಗೆ ತೆಗೆದುಕೊಂಡು ಹೋಗಲಾಗಲಿಲ್ಲ. ಬರಿಗೈಯಲ್ಲಿ ಅವನು ಈ ಜಗತ್ತನ್ನು ಬಿಡಬೇಕಾಯಿತು. ಈ ಸತ್ಯವನ್ನು ನಿರೂಪಿಸಲು, ಅವನು ತನ್ನ ಮೃತ ದೇಹವನ್ನು, ಎರಡೂ ಹಸ್ತಗಳು ಆಕಾಶದ ಕಡೆಗೆ ಮೇಲೆತ್ತಿರುವ ಸ್ಥಿತಿಯಲ್ಲಿ, ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವಂತೆ ಸಚಿವರಿಗೆ ಆದೇಶಿಸಿದ್ದನು. ಈ ವಿಚಿತ್ರವಾದ ಮನವಿಗೆ ಕಾರಣವನ್ನು ತಿಳಿಯಲು ಸಚಿವರು ಕುತೂಹಲಿಗಳಾಗಿದ್ದರು. “ನಾನು ಅನೇಕ ದೇಶಗಳನ್ನು ಜಯಿಸಿದ್ದು, ಅಪಾರ ಸಂಪತ್ತನ್ನು ಸಂಗ್ರಹಿಸಿದ್ದೇನೆ. ನನ್ನ ಅಧೀನದಲ್ಲಿ ಬಹುದೊಡ್ಡ ಸೈನ್ಯವಿದೆ. ಆದರೂ ಸಹ, ನಾನು ಈ ದೇಹವನ್ನು ಬಿಡುವಾಗ ನನ್ನೊಡನೆ ಬರುವವರು ಯಾರೊಬ್ಬರೂ ಇಲ್ಲ. ನಾನು ಬರಿಗೈಯಲ್ಲಿ ಹೋಗುತ್ತಿದ್ದೇನೆ. ಇದನ್ನು ಎಲ್ಲ ಜನರಿಗೆ ನಿರೂಪಿಸಬೇಕಾಗಿದೆ” ಎಂದು ಅವನು ಹೇಳಿದನು.

[Sathya Sai Speaks, Volume 41, Chapter 19: Contemplate on God, the Real Hero, for Victory.]

ಅತಿಯಾದ ಆಸೆಯು ಪ್ರಕೃತಿಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ

ಮನುಷ್ಯನು ತನ್ನ ಆಸೆಗಳ ಮೇಲೆ ಮಿತಿಯನ್ನು ಹೇರಬೇಕು. ಮನುಷ್ಯನ ನಡವಳಿಕೆಯು ದಾರಿ ತಪ್ಪಿರುವುದರಿಂದ ಇಂದಿನ ದಿನಗಳಲ್ಲಿ ನಾವು ಪ್ರಕೃತಿ ವಿಕೋಪಗಳು ಉಂಟಾಗುವುದನ್ನು ನೋಡುತ್ತೇವೆ. ನಿಮಗೆ ಗುಜರಾತ್ ನ ಭೂಕಂಪದಿಂದಾದ ವಿನಾಶದ ಅರಿವಿದೆ. ಸಹಸ್ರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದಕ್ಕೆ ಕಾರಣವೆಂದರೆ ಮನುಷ್ಯನ ಅತಿಯಾದ ಆಸೆ. ಭಗವಂತನು ತನ್ನ ಸೃಷ್ಟಿಯಲ್ಲಿ ಅತ್ಯಂತ ನಿಖರವಾದ ಸಮತೋಲನವನ್ನಿಟ್ಟಿದ್ದಾನೆ. ಭಗವಂತನ ಸೃಷ್ಟಿಯಲ್ಲಿ ಭೂಮಿ ಮತ್ತು ಸಾಗರಗಳು ಸಮತೋಲನಕ್ಕೆ ಒಳಪಟ್ಟಿವೆ. ಆದರೆ, ಮನುಷ್ಯನು ತೈಲವನ್ನು ಹೊರ ತೆಗೆಯುವ ಸಲುವಾಗಿ ವಿವೇಚನಾರಹಿತನಾಗಿ ಭೂಮಿಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಪ್ರತಿನಿತ್ಯ ಸಮುದ್ರಗಳಿಂದ ಟನ್ ಗಟ್ಟಲೆ ಮೀನುಗಳನ್ನು ಹಿಡಿಯಲಾಗುತ್ತಿದೆ. ಈ ರೀತಿಯ ಪ್ರಕೃತಿಯ ಮೇಲಿನ ವಿವೇಚನಾರಹಿತವಾದ ಅತಿಕ್ರಮಣವು, ಭೂಮಿಯಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಮಾನವ ಕುಲದ ವಿನಾಶಕ್ಕೆ ಎಡೆಮಾಡಿ ಕೊಟ್ಟಿದೆ. ತನ್ನಲ್ಲಿನ ಅಸ್ಥಿರತೆಯಿಂದ ಮುಕ್ತನಾಗದ ಹೊರತು, ಮನುಷ್ಯನಿಗೆ ಭೂಕಂಪನದ ತೊಂದರೆಗಳು ಆಗದಿರುತ್ತವೆಯೇ?

ನಿಮ್ಮ ದುರಾಸೆಯನ್ನು ತಣಿಸಲೋಸ್ಕರ ಪ್ರಕೃತಿಯ ಸಂಪನ್ಮೂಲಗಳನ್ನು ಲೂಟಿಮಾಡಬೇಡಿ

ಭಾರತೀಯರು ಮಾತ್ರವಲ್ಲದೆ ಇಡೀ ಜಗತ್ತಿನ ಜನರು, ಸಮತೋಲನವನ್ನು ಉಳಿಸಿಕೊಳ್ಳಲು ಹೋರಾಡಬೇಕು. ಪಂಚಭೂತಗಳು ದಿವ್ಯತೆಯ ಮೂರ್ತ ಸ್ವರೂಪಗಳಾಗಿವೆ. ಮನುಷ್ಯನು ಸತ್ಯವನ್ನು ಅರಿತುಕೊಂಡು, ಅದರಂತೆ ನಡೆದುಕೊಂಡಾಗ ಮಾತ್ರ ಅವನ ಜೀವನಕ್ಕೆ ರಕ್ಷಣೆ ದೊರೆಯ ಬಲ್ಲದು. ಕೆಲವು ದಿನಗಳ ಹಿಂದೆ, ನಾನು ಗುಜರಾತಿನ ಭೂಕಂಪದ ಸಂತ್ರಸ್ತರಿಗೆ ಅಕ್ಕಿ, ಬೇಳೆ ಮುಂತಾದುವುಗಳನ್ನು ಲಾರಿಗಳಲ್ಲಿ ತುಂಬಿಸಿ ಕಳಿಸಿದೆ. ಕೆಲವು ಜನರು, “ಸ್ವಾಮೀ, ಗುಜರಾತಿಗೆ ಪರಿಹಾರ ಸಾಮಗ್ರಿಗಳನ್ನು ಕಳಿಸಲು ಅಷ್ಟೊಂದು ಹಣವನ್ನು ಖರ್ಚು ಮಾಡುವ ತೊಂದರೆಯನ್ನು ನೀವೇಕೆ ತೆಗೆದುಕೊಳ್ಳುತ್ತೀರಿ? ಬದಲಾಗಿ, ನೀವು ಭೂಕಂಪವನ್ನೇ ಆಗದಂತೆ ನಿವಾರಿಸಬಹುದಾಗಿತ್ತು” ಎಂದು ಕೇಳಿದರು. “ಆತ್ಮೀಯರೇ, ಭೂಕಂಪಕ್ಕಾಗಿ ಮನುಷ್ಯನು ಅವನನ್ನೇ ದೂಷಿಸಿಕೊಳ್ಳಬೇಕಾಗಿದೆ. ಸಂಪತ್ತಿನ ಮೇಲಿನ ಅತಿಯಾದ ಲೋಭದಿಂದ ಅವನು ಭೂಮಿಯ ಸಮತೋಲನಕ್ಕೆ ಅಡ್ಡಿಪಡಿಸುತ್ತಿದ್ದಾನೆ. ಅದರಿಂದಾಗಿ ಭೂಕಂಪ ಉಂಟಾಗುತ್ತಿದೆ. ಇದು ಪ್ರಕೃತಿ ನಿಯಮ.” ಎಂದು ನಾನು ಉತ್ತರಿಸಿದೆ. ಅಗತ್ಯವಿರುವವರಿಗೆ ಸಹಾಯ ಮಾಡುವುದರಮೂಲಕ, ನೀವು ನಿಮ್ಮ ಮಾನವಪ್ರೇಮವನ್ನು ವ್ಯಕ್ತಪಡಿಸಬೇಕು. ಪ್ರೇಮವೇ ನಿಮ್ಮ ಸ್ವಭಾವ. ಪ್ರಕೃತಿಗೆ ಸಮತೋಲನವು ಅತ್ಯಗತ್ಯವಾಗಿರುವಂತೆ, ಮನುಷ್ಯನಿಗೆ ಪ್ರೇಮವು ಅತ್ಯವಶ್ಯಕ. ಭಗವಂತನು ಏನನ್ನೇ ಸೃಷ್ಟಿಸಿದ್ದರೂ, ಅದು ನಿಮ್ಮ ಕ್ಷೇಮಕ್ಕಾಗಿಯೇ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಪ್ರಕೃತಿಯನ್ನು ಅನುಭವಿಸಬೇಕು. ನಿಮ್ಮ ಅತಿಯಾದ ಆಸೆಯನ್ನು ತಣಿಸುವ ಸಲುವಾಗಿ ನೀವು ಪ್ರಕೃತಿಯ ಸಂಪನ್ಮೂಲಗಳನ್ನು ಲೂಟಿ ಮಾಡಬಾರದು.

ಅಗತ್ಯಕ್ಕೆ ಬೇಕಾದಷ್ಟು ಮಾತ್ರ ವಿಜ್ಞಾನವನ್ನು ಬಳಸಿಕೊಳ್ಳಬೇಕು

ಇಲ್ಲೊಂದು ಉದಾಹರಣೆ ಇದೆ. ಒಮ್ಮೆ ಒಬ್ಬ ದುರಾಸೆಯ ವ್ಯಕ್ತಿಯ ಹತ್ತಿರ ಒಂದು ಬಾತು ಕೋಳಿ ಇತ್ತು. ಅದು ಪ್ರತಿನಿತ್ಯ ಒಂದೊಂದು ಬಂಗಾರದ ಮೊಟ್ಟೆ ಇಡುತ್ತಿತ್ತು. ಒಂದೇ ಸಾರಿಗೆ ಅನೇಕ ಮೊಟ್ಟೆಗಳನ್ನು ಪಡೆಯಬಹುದೆಂದು ಯೋಚಿಸಿದ ಆವ್ಯಕ್ತಿಯು, ಬಾತುಕೋಳಿಯ ಹೊಟ್ಟೆಯನ್ನು ಸೀಳಿದನು. ಇಂದಿನ ಮನುಷ್ಯನೂ ಸಹ ಇಂತಹ ಮೂರ್ಖತನದ ಮತ್ತು ದುರಾಸೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ. ಪ್ರಕೃತಿಯು ನೀಡುತ್ತಿರುವುದರಲ್ಲಿ ತೃಪ್ತಿಪಟ್ಟುಕೊಳ್ಳದೆ, ಹೆಚ್ಚು ಹೆಚ್ಚು ಬೇಕೆಂದು ಹಂಬಲಿಸುತ್ತಿದ್ದಾನೆ. ಈ ಪ್ರಕ್ರಿಯೆಯಲ್ಲಿ ಅವನು ಅಸಮತೋಲನವನ್ನು ಸೃಷ್ಟಿಸುತ್ತಿದ್ದಾನೆ. ಇಂದು ವಿಜ್ಞಾನಿಗಳು ಹೊಸ ಆವಿಷ್ಕಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯೂ ಸಹ, ಪ್ರಕೃತಿಯಲ್ಲಿನ ಅಸಮತೋಲನಕ್ಕೆ ಎಡೆಮಾಡಿ ಕೊಟ್ಟಿದೆ. ಇದರ ಪರಿಣಾಮವಾಗಿ, ಭೂಕಂಪಗಳಾಗುತ್ತಿವೆ ಮತ್ತು ಸಕಾಲಕ್ಕೆ ಮಳೆಯಾಗುತ್ತಿಲ್ಲ. ವಿಜ್ಞಾನವನ್ನು ಅಗತ್ಯವಿರುವಷ್ಟು ಮಟ್ಟಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು. ವಿಜ್ಞಾನವು ಅದರ ಮಿತಿಗಳನ್ನು ಹೊಂದಿದೆ. ಆ ಮಿತಿಗಳನ್ನು ಮೀರುವುದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ನೀವು ಸಾಗಬೇಕಾದ ದಾರಿ ಬಹಳ ದೂರವಿದೆ. ಸತ್ಯ ಮತ್ತು ಸನ್ನಡತೆಗಳಿಗೆ ಬದ್ಧರಾಗಿರಿ. ನಮ್ಮ ಪುರಾತನ ಋಷಿಗಳು, ’ಸತ್ಯವನ್ನೇ ಹೇಳಿ, ಮಧುರವಾಗಿ ಮಾತನಾಡಿ, ಅಪ್ರಿಯವಾದ ಸತ್ಯವನ್ನು ಹೇಳಬೇಡಿ’ ಎಂದು ಹೇಳಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿ, ಅವುಗಳನ್ನು ದುರುಪಯೋಗ ಮಾಡಬೇಡಿ. ಪ್ರತಿಯೊಬ್ಬರಿಗೂ ಸಹಾಯಮಾಡಿ ಮತ್ತು ಅವರು ಸಂತಸಗೊಳ್ಳುವಂತೆ ಮಾಡಿ. ನೀವು ಕಲಿತ ಒಳ್ಳೆಯ ವಿಚಾರಗಳನ್ನು ಇತರರೊಡನೆ ಹಂಚಿಕೊಳ್ಳಿ. ಇದು ನಿಮ್ಮ ಆದ್ಯ ಕರ್ತವ್ಯ.

ಮನುಷ್ಯನ ತಲ್ಲಣಗಳಿಗೆ ಆಸೆಗಳೇ ಮೂಲ ಕಾರಣ

ಮನುಷ್ಯನು ನಡೆಸುವ ಎಲ್ಲ ಆಧ್ಯಾತ್ಮಿಕ ಅಭ್ಯಾಸಗಳ ಗುರಿಯೂ, ಅವನ ಮನಸ್ಸನ್ನು ಸ್ಥಿರಗೊಳಿಸುವುದೇ ಆಗಿದೆ. ಮನಸ್ಸು ಸ್ಥಿರವಾಗಿಲ್ಲದಿದ್ದರೆ, ದೇವರ ನಾಮವನ್ನು ಸತತವಾಗಿ ಪುನರುಚ್ಚರಿಸುವುದರಿಂದ, ಧ್ಯಾನಮಾಡುವುದರಿಂದ ಮತ್ತು ಕಠೋರವಾದ ಆಧ್ಯಾತ್ಮಿಕ ಆಚರಣೆಗಳನ್ನು ಮಾಡುವುದರಿಂದ ಯಾವ ಉಪಯೋಗವೂ ಇಲ್ಲ. ನೀವು ಒಮ್ಮೆ ನಿಮ್ಮ ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ದೇವರ ಅನುಭವವನ್ನು ಪಡೆಯಬಹುದು. ಅವನು ನಿಮ್ಮಿಂದ ಬಹಳ ದೂರದಲ್ಲಿಲ್ಲ. ಅವನು ನಿಮ್ಮಲ್ಲಿ, ನಿಮ್ಮ ಕೆಳಗೆ, ಮೇಲೆ, ಮತ್ತು ನಿಮ್ಮ ಸುತ್ತಲೂ ಇದ್ದಾನೆ. ವಾಸ್ತವವಾಗಿ ದೇವರು ಮನುಷ್ಯನ ಒಳಗೇ ವಾಸವಾಗಿದ್ದಾನೆ. ಆದರೂ ಮನುಷ್ಯನಿಗೆ ಅವನನ್ನು ಕಾಣಲು ಸಾಧ್ಯವಾಗಿಲ್ಲ. ಕಾರಣವೇನು? ಮನುಷ್ಯನ ಮಿತಿಯಿಲ್ಲದ, ಸ್ವಾರ್ಥಯುತವಾದ ಆಸೆಗಳು ಅವನಿಗೆ ದೇವರನ್ನು ನೋಡಲಾಗದಂತೆ ಮಾಡಿವೆ. ಮನುಷ್ಯನ ತಲ್ಲಣಗಳಿಗೆ ಆಸೆಗಳೇ ಮೂಲ ಕಾರಣ. ಇಂದ್ರಿಯಗಳ ನಿಯಂತ್ರಣ ಮತ್ತು ಆಸೆಗಳ ಮಿತಿಗೊಳಿಸುವಿಕೆಯು ಅವನಿಗೆ ಸುತ್ತಲೂ ಭಗವಂತನನ್ನು ಕಾಣಲು ಮತ್ತು ಆನಂದವನ್ನು ಅನುಭವಿಸಲು ಸಹಾಯ ಮಾಡುತ್ತವೆ. ಆದ್ದರಿಂದ ನಾವು ನಮ್ಮ ಆಸೆಗಳ ಮೇಲೆ ನಿಗಾವಹಿಸಬೇಕು. ನಾವು ಇತರರ ಕೆಟ್ಟಮಾತುಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಅಪನಿಂದೆ, ಟೀಕೆಗಳಿಂದ ದುಃಖಿತರಾಗಬೇಕಿಲ್ಲ.

ಪಂಚೇಂದ್ರಿಯಗಳನ್ನು ನಿಯಂತ್ರಿಸಿ

ಬುದ್ಧನು ಪಂಚೇಂದ್ರಿಯಗಳನ್ನು ನಿಯಂತ್ರಿಸಲು ಬಯಸಿದ. ಅವನು ಮೊದಲು ಬಹಳ ಮುಖ್ಯವಾಗಿ ಸರಿಯಾದ ದೃಷ್ಟಿಯನ್ನು ಗಳಿಸಲು ನಿರ್ಧರಿಸಿದ. ಇಂದು ಮನುಷ್ಯನು ತನ್ನ ಮನಸ್ಸಿನ ಚಂಚಲತೆಯಿಂದಾಗಿ, ದೃಷ್ಟಿಯನ್ನು ನಿಯಂತ್ರಿಸಲು ಅಸಮರ್ಥನಾಗಿದ್ದಾನೆ. ಸಿನೆಮಾ, ವೀಡಿಯೋ, ಟಿ.ವಿ ಇತ್ಯಾದಿಗಳು ಮನುಷ್ಯನ ಮನಸ್ಸನ್ನು ಮಲಿನಗೊಳಿಸಿವೆ. ಅವನು ಒಳ್ಳೆಯದನ್ನು ನೋಡಲಾರನು ಮತ್ತು ಒಳ್ಳೆಯದನ್ನು ಕೇಳಲಾರನು. ತನ್ನ ಆಶಾಂತತೆಗೆ ತಾನೇ ಕಾರಣನಾಗಿದ್ದಾನೆ. ಬುದ್ಧನು ಸರಿಯಾದ ದೃಷ್ಟಿಗೆ ಮಾತ್ರವಲ್ಲದೆ, ಸರಿಯಾದ ಕೇಳುವಿಕೆ, ಸರಿಯಾದ ಮಾತು, ಸರಿಯಾದ ಭಾವನೆ ಮತ್ತು ಸರಿಯಾದ ಆಲೋಚನೆಗಳ ಅಗತ್ಯದ ಬಗ್ಗೆಯೂ ಪ್ರಾಧಾನ್ಯತೆ ನೀಡಿದನು. ಇವುಗಳ ಕೊರತೆಯಿಂದಾಗಿ, ಮಾನವೀಯತೆಯು ಬಹಳ ವೇಗವಾಗಿ ಪೈಶಾಚಿಕತೆ ಮತ್ತು ಮೃಗೀಯತೆಗಳಿಗೆ ದಾರಿಮಾಡಿ ಕೊಡುತ್ತಿದೆ. ಮನುಷ್ಯನಲ್ಲಿ ಮೃಗೀಯ ಗುಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಪ್ರಾಣಿಗಳಿಗಾದರೂ ಕಾಲ ಮತ್ತು ಕಾರಣಗಳಿವೆ, ಆದರೆ ಮನುಷ್ಯನಿಗೆ ಯಾವುದೂ ಇಲ್ಲವಾಗಿದೆ. ಇಂದು ಮನುಷ್ಯ ಪ್ರಾಣಿಗಳಿಗಿಂತ ಕಳಪೆಯಾಗಿದ್ದಾನೆ. ಕರುಣೆ, ದಯೆ, ಪ್ರೇಮ ಮತ್ತು ಸಹನೆಯಂತಹ ಮಾನವೀಯ ಗುಣಗಳು ಅವನಲ್ಲಿ ಇಲ್ಲವಾಗಿವೆ. ಅವನ ಚಿಂತೆಗಳಿಗೆ ಮೂಲಕಾರಣವಾಗಿರುವ ಕೆಟ್ಟ ಆಲೋಚನೆಗಳಿಂದ ಅವನು ಮುಕ್ತನಾಗಬೇಕು. ಇದಕ್ಕೆ ನಿರಂತರವಾದ ಮತ್ತು ಸ್ಥಿರವಾದ ಅಭ್ಯಾಸ ಬೇಕಾಗುತ್ತದೆ.

ಮನಸ್ಸನ್ನು ಪಳಗಿಸಿ ಮತ್ತು ಸೂತ್ರಧಾರನಾಗಿ

ಮನುಷ್ಯನು ಸತತವಾದ ಮತ್ತು ಸ್ಥಿರವಾದ ಅಭ್ಯಾಸದಿಂದ ಮನಸ್ಸನ್ನು ನಿಯಂತ್ರಿಸಬಹುದು ಮತ್ತು ಶಾಂತಿಯನ್ನು ಗಳಿಸಬಹುದು. ಶಾಂತವಾದ ಮನಸ್ಸಿನಲ್ಲಿ ಮಾತ್ರ ಉದಾತ್ತವಾದ ಆಲೋಚನೆಗಳು ಮೂಡುತ್ತವೆ. ಮನಸ್ಸು ಮನುಷ್ಯನ ನಿಯಂತ್ರಣದಲ್ಲಿರಲೇಬೇಕು. ಮನಸ್ಸನ್ನು ಪಳಗಿಸಿ ಮತ್ತು ಸೂತ್ರಧಾರನಾಗಿ. ದುರದೃಷ್ಟವಶಾತ್, ಮನಸ್ಸನ್ನು ನಿಯಂತ್ರಿಸುವ ಬದಲು, ಮನುಷ್ಯನು ಇಂದ್ರಿಯಗಳ ಗುಲಾಮನಾಗಿದ್ದಾನೆ. ಇದು ಅವನ ಅಸ್ಥಿರತೆಗೆ ಮುಖ್ಯ ಕಾರಣವಾಗಿದೆ. ಇದಕ್ಕಿಂತ ಹೆಚ್ಚಾಗಿ, ಅವನು ದೇಹದ ಮೇಲಿನ ವ್ಯಾಮೋಹವನ್ನು ಹೊಂದಿದ್ದಾನೆ. ಜನರು ಅವನಲ್ಲಿ ತಪ್ಪನ್ನು ಕಂಡರೆ, ಅವನು ಸುಲಭವಾಗಿ ವ್ಯಾಕುಲಿತನಾಗಲು ಇದು ಕಾರಣವಾಗಿದೆ. ದೇಹವು ಒಂದು ನೀರಿನ ಗುಳ್ಳೆಯಂತಿರಬೇಕಾದರೆ, ಅವನು ದೇಹದ ಬಗ್ಗೆ ಏಕೆ ಚಿಂತಿಸಬೇಕು? ನೀವು ದೇಹದ ಬಗೆಗಿನ ವ್ಯಾಮೋಹದಿಂದ ಮುಕ್ತರಾಗಬೇಕು.

[Summer Showers in Brindavan 2002; Chapter 11: Sense Control Is the Highest Sadhana.]

ಪ್ರಕೃತಿಯಿಂದ ಪಾಠ ಕಲಿಯಿರಿ

“ಆಸೆಗಳ ನಿಯಂತ್ರಣ“ ಎಂಬ ಪದದಲ್ಲಿ ನಾಲ್ಕು ಅಂಗಗಳಿವೆ. ಅತಿಯಾದ ಮಾತಿಗೆ ತಡೆ ಹಾಕುವುದು, ಅತಿಯಾದ ಆಸೆಗಳು ಮತ್ತು ವೆಚ್ಚಕ್ಕೆ ತಡೆಹಾಕುವುದು, ಆಹಾರದ ಬಳಕೆಯಲ್ಲಿ ನಿಯಂತ್ರಣ ಮತ್ತು ಶಕ್ತಿಯ ಅಪವ್ಯಯದ ಬಗ್ಗೆ ನಿಗಾವಹಿಸುವುದು ಇವು ಆ ನಾಲ್ಕು. ಮನುಷ್ಯನಿಗೆ ಅವನ ಪೋಷಣೆಗೆ ಉಪಯುಕ್ತವಾದ ಕೆಲವು ವಸ್ತುಗಳ ಅಗತ್ಯವಿದೆ. ಅವನು ಅದಕ್ಕಿಂತ ಹೆಚ್ಚಾಗಿ ಹಂಬಲಿಸಬಾರದು. ಈ ವಿಷಯವಾಗಿ ನಾವು ಪ್ರಕೃತಿಯಿಂದ ಒಂದು ಪಾಠವನ್ನು ಕಲಿಯಬಹುದು. ಗಾಳಿಯು ಸಾಕಷ್ಟು ಪ್ರಮಾಣದಲ್ಲಿ ದೊರೆತರೆ ಮಾತ್ರ ಒಳ್ಳೆಯದು ಮತ್ತು ಹಿತಕರವಾಗಿರುತ್ತದೆ. ಅದು ಜಾಸ್ತಿಯಿದ್ದು, ಬಿರುಗಾಳಿ ಉಂಟಾದರೆ, ನಿಮಗೆ ಅಭದ್ರತೆಯ ಭಾವನೆ ಉಂಟಾಗುತ್ತದೆ. ನಿಮಗೆ ಬಾಯಾರಿಕೆಯಾದಾಗ, ನೀವು ಒಂದು ಮಿತಿಯ ಪರಿಮಾಣದಲ್ಲಿ ನೀರನ್ನು ಕುಡಿಯಬಹುದು. ನೀವು ಗಂಗಾನದಿಯ ನೀರನ್ನೆಲ್ಲ ಕುಡಿಯಲಾರಿರಿ! ನಮ್ಮ ದೇಹದ ಪೋಷಣೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ನಾವು ತೆಗೆದುಕೊಳ್ಳುತ್ತೇವೆ. ದೇಹದ ಸಾಮಾನ್ಯ ಉಷ್ಣತೆ 98.4 0 ಎಂದು ವೈದ್ಯರಿಗೆ ಗೊತ್ತಿದೆ. ಇದು 990 ಗಳಿಗಿಂತ ಹೆಚ್ಚಾದರೆ, ದೇಹದಲ್ಲಿನ ಯಾವುದೋ ಏರುಪೇರಿನಿಂದ ಜ್ವರ ಬಂದಿದೆ ಎಂದು ಅವರು ಹೇಳುತ್ತಾರೆ. ಒಂದು ಸಾಮಾನ್ಯಗತಿಯಲ್ಲಿ ನಾವು ಉಸಿರನ್ನು ತೆಗೆದುಕೊಳ್ಳುತ್ತೇವೆ ಮತ್ತು ಬಿಡುತ್ತೇವೆ. ಈ ಗತಿಯಲ್ಲಿ ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾದರೆ, ಅದು ದೇಹದಲ್ಲಿನ ಏರುಪೇರನ್ನು ಸೂಚಿಸುತ್ತದೆ. ನಾಡಿಯ ಬಡಿತದ ದರದಲ್ಲಿ ಅಥವಾ ರಕ್ತದ ಒತ್ತಡದಲ್ಲಿನ ವ್ಯತಾಸವೂ ಸಹ ಅಸಮತೋಲನವನ್ನು ಸೂಚಿಸುತ್ತದೆ. ಆದ್ದರಿಂದ ನೀವು ಸ್ವಲ್ಪ ಮಿತಿ ಮೀರಿದರೂ ಅದು ದೇಹಕ್ಕೆ ಅಪಾಯ ಮತ್ತು ಹಾನಿಕಾರಕ ಎಂಬುದನ್ನು ಕಂಡುಕೊಳ್ಳುತ್ತೀರಿ. ಪ್ರತಿಯೊಂದಕ್ಕೂ ಸಾಮಾನ್ಯ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಒಂದು ಮಿತಿ ಇದೆ. ನಿಮ್ಮ ಕಣ್ಣುಗಳು ಮಿಂಚಿನ ಬೆಳಕನ್ನು ನೋಡುವ ಸಂದರ್ಭ ಬಂದರೆ, ಅಥವಾ ಫೋಟೋ ತೆಗೆಯುವಾಗಿನ ಬೆಳಕನ್ನು ನೋಡುವಾಗ ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಏಕೆಂದರೆ, ಅವು ಅಷ್ಟೊಂದು ಉನ್ನತ ಪ್ರಕಾಶದ ಬೆಳಕನ್ನು ತಡೆಯಲಾರವು. ಕಿವಿಯ ತಮಟೆಗಳೂ ಸಹ ಒಂದು ನಿರ್ದಿಷ್ಟ ಮಿತಿಯ ನಂತರ ಶಬ್ದವನ್ನು ಸಹಿಸಲಾರವು. ನಾವು ಆಗ ಕಿವಿಯನ್ನು ಮುಚ್ಚಿಕೊಳ್ಳುತ್ತೇವೆ ಅಥವಾ ಕಿವಿಯ ಒಳಗೆ ಹತ್ತಿಯನ್ನು ಇಟ್ಟುಕೊಳ್ಳುತ್ತೇವೆ. ಇವುಗಳಿಂದ ನಾವು ನಮ್ಮ ಜೀವನವು ಒಂದು ನಿಯಮಿತ ಸಂಸ್ಥೆ! [ಲಿಮಿಟೆಡ್ ಕಂಪೆನಿ] ಎಂಬುದನ್ನು ಮನಗಾಣಬಹುದು.

ನಮ್ಮ ಆಸೆಗಳಿಗೆ ಮಿತಿ ಇರಬೇಕು

ಹಾಗೆಯೇ ನಮ್ಮ ಆಸೆಗಳಿಗೂ ಮಿತಿ ಇರಬೇಕು. ಮಹಿಳೆಯರು ಸಾಮಾನ್ಯವಾಗಿ, ಅಂಗಡಿಗೆ ಅಥವಾ ವಸ್ತು ಪ್ರದರ್ಶನಕ್ಕೆ ಹೋದಾಗ, ತಮ್ಮ ಕಪಾಟುಗಳಿಗೆ ಇನ್ನಷ್ಟು ಸೀರೆಗಳನ್ನು ಸೇರಿಸಿಕೊಳ್ಳುವ ಆಸೆಯನ್ನು ಹೊಂದಿರುತ್ತಾರೆ. ನೀವು ಸಮಂಜಸವೆನಿಸುವಷ್ಟು ಸಂಖ್ಯೆಯ ಸೀರೆಗಳನ್ನು ಹೊಂದಿರಬೇಕು. ಆದರೆ, ಅದು ಆಡಂಬರ ಅಥವಾ ಪ್ರದರ್ಶನಕ್ಕಾಗಿ ಭಾರೀ ಸಂಗ್ರಹವಾಗಬಾರದು. ಹಣದ ಅಪವ್ಯಯವು ಒಂದು ದೊಡ್ಡ ಅನಿಷ್ಟ. ಪುರುಷರೂ ಸಹ ಅನಗತ್ಯವಾದ, ಅನಪೇಕ್ಷಿತ ವಸ್ತುಗಳ ಬಗ್ಗೆ ವೆಚ್ಚ ಮಾಡುವುದನ್ನು ನಿಯಂತ್ರಿಸಲು ಗಮನ ವಹಿಸಬೇಕು. ಹಣವು ದಿವ್ಯತೆಯ ಮೂರ್ತ ಸ್ವರೂಪ. ಸಂಪತ್ತಿನ ಬಗ್ಗೆ ಮಾತನಾಡುವಾಗ, ಅತ್ಯಾಶೆಯ ಸಂಗ್ರಹ ಮತ್ತು ದುಂದು ವೆಚ್ಚಗಳನ್ನು ತಪ್ಪಿಸುವ ಬಗ್ಗೆ ಎಚ್ಚರಿಕೆಯಿಂದಿರಬೇಕು. ಆಹಾರವನ್ನು ತಯಾರಿಸುವಾಗಲೂ ಸಹ ಅಪವ್ಯಯವನ್ನು ತಡೆಯುವ ಬಗ್ಗೆ ನೀವು ಎಚ್ಚರಿಕೆಯನ್ನು ವಹಿಸಬೇಕು. ದೇಹಕ್ಕೆ ಅಗತ್ಯವಾಗಿ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಬಳಸುವುದರಿಂದ ನಾವು ಕೇವಲ ಹಾನಿಯನ್ನೇ ಉಂಟುಮಾಡುತ್ತೇವೆ. ಮೂರನೆಯದಾಗಿ, ಬದುಕಿನ ಅಳತೆಗೋಲಾಗಿರುವ “ಸಮಯ”ದ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು. ಸೆಕೆಂಡುಗಳು ಗಂಟೆಗಳಾಗುತ್ತವೆ; ಗಂಟೆಗಳು ವರ್ಷಗಳಾಗುತ್ತವೆ; ವರ್ಷಗಳು ಯುಗಗಳಾಗುತ್ತವೆ ಮತ್ತು ಹೀಗೆಯೇ ಮುಂದುವರಿಯುತ್ತದೆ. ಅತ್ಯಂತ ಬೆಲೆಯುಳ್ಳ ಈ ಕಾಲವನ್ನು ನೀವು ವ್ಯರ್ಥ ಮಾಡಬಾರದು. ವ್ಯರ್ಥವಾದ ಪ್ರಯತ್ನಗಳಲ್ಲಿ ಕಳೆದ ಕಾಲವನ್ನು ಮರಳಿ ಪಡೆಯಲು ಯಾವುದೇ ಮಾರ್ಗದಿಂದಲೂ ಸಾಧ್ಯವಿಲ್ಲ. ನಮ್ಮ ಎಲ್ಲ ಚಟುವಟಿಕೆಗಳನ್ನು, ನಮಗೆ ಲಭ್ಯವಿರುವ ಸಮಯವನ್ನು ಬಳಸಿ ಅತಿ ಹೆಚ್ಚು ಪ್ರಯೋಜನವನ್ನು ಪಡೆಯುವರೀತಿಯಲ್ಲಿ ರೂಪಿಸಬೇಕು. ಆದ್ದರಿಂದ, ಆಹಾರ, ಹಣ, ಸಮಯ ಮತ್ತು ಶಕ್ತಿಗಳನ್ನು ನಾವು ಅಪವ್ಯಯ ಮಾಡಬಾರದು.

“ಆಸೆಗಳ ನಿಯಂತ್ರಣ ಕಾರ್ಯಕ್ರಮ’ದ ಉದ್ದೇಶಗಳು”

ಆಸೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂದು ಕಾರ್ಯಕ್ರಮವಿದೆ. ಈ ಕಾರ್ಯಕ್ರಮದ ವಿಷಯ, ಹಣ, ಸಮಯ, ಆಹಾರ, ಮತ್ತು ಇತರ ಸಂಪನ್ಮೂಲಗಳನ್ನು ವ್ಯರ್ಥವಾಗದಂತೆ ತಡೆಯುವುದು ಮತ್ತು ಈ ಎಲ್ಲವುಗಳನ್ನು ಜನರ ಕ್ಷೇಮಕ್ಕಾಗಿ ಬಳಸುವುದು. ಸಮಯವನ್ನು ವ್ಯರ್ಥ ಮಾಡಬೇಡಿ. ಸಮಯ ವ್ಯರ್ಥವಾದರೆ, ಬದುಕೇ ವ್ಯರ್ಥವಾದಂತೆ. ಕಾಲವೇ ದೇವರು. ಪರಿಶುದ್ಧವಾದ ಮತ್ತು ನಿಸ್ವಾರ್ಥ ಭಾವದಿಂದ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ನಿಮಗೆ ಲಭ್ಯವಿರುವಷ್ಟೂ ಸಮಯವನ್ನು ಪವಿತ್ರೀಕರಿಸಿಕೊಳ್ಳಿ. ಇಂದು ನಾವು ಅನವಶ್ಯಕ ಮಾತು ಮತ್ತು ಅರ್ಥಹೀನ ವರ್ತನೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ, ಅನವಶ್ಯಕ ಮತ್ತು ಅನಪೇಕ್ಷಿತ ವಿಷಯಗಳಿಗೆ ಸಮಯವನ್ನು ವ್ಯರ್ಥಮಾಡುತ್ತಿದ್ದೇವೆ. ಈ ಎಲ್ಲ ವರ್ತನೆಗಳಲ್ಲಿ ನಾವು ನಮ್ಮ ದೇಹವನ್ನು ಕಾಲಕ್ಕೆ ಅರ್ಪಿಸುತ್ತಿದ್ದೇವೆ. ಬದಲಾಗಿ ಕಾಲವನ್ನು ನಮ್ಮ ಸೇವಕನನ್ನಾಗಿ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಅಂದರೆ, ನಮ್ಮ ಸಮಯವನ್ನು ಒಳ್ಳೆಯ ಆಲೋಚನೆ ಮತ್ತು ಒಳ್ಳೆಯ ಕಾರ್ಯಗಳಲ್ಲಿ ಕಳೆಯುವುದು ಎಂದು ಇದರ ಅರ್ಥ. ಪ್ರತಿನಿತ್ಯ ನಿಮ್ಮ ಇರುವಿಕೆಯ ಪ್ರತಿಕ್ಷಣದಲ್ಲಿಯೂ ನೀವು, “ನಾನು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೇನೆ? ಒಳ್ಳೆಯ ಉದ್ದೇಶಕ್ಕೋ ಅಥವಾ ಕೆಟ್ಟ ಉದ್ದೇಶಕ್ಕೋ?” ಎಂದು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಹಾಗೆಯೇ, ಆಹಾರಕ್ಕೆ ಸಂಬಂಧ ಪಟ್ಟಂತೆ, “ನಾನು ನನಗೆ ಎಷ್ಟುಬೇಕೋ ಅಷ್ಟೇ ಆಹಾರವನ್ನು ತೆಗೆದುಕೊಳ್ಳುತ್ತಿದ್ದೇನೆಯೇ? ಅಥವಾ ಹೆಚ್ಚು ತೆಗೆದುಕೊಳ್ಳುತ್ತಿರುವೆನೋ?, ನಾನು ಆಹಾರವನ್ನು ವ್ಯರ್ಥ ಮಾಡುತ್ತಿರುವೆನೆ?” ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಅದೇ ರೀತಿಯಲ್ಲಿ ಹಣಕ್ಕೆ ಸಂಬಂಧ ಪಟ್ಟಂತೆ, “ನಾನು ಈ ಹಣವನ್ನು ನನ್ನದೇ ಸ್ವಾರ್ಥದ ಅಗತ್ಯಗಳಿಗೆ ಅಥವಾ ನನ್ನ ಹೆಸರು ಮತ್ತು ಕೀರ್ತಿಯನ್ನು ದೊಡ್ಡದಾಗಿ ಕಾಣುವಂತೆ ಮಾಡಲು ಅಥವಾ ನನ್ನ ಅಹಂಕಾರ ಮತ್ತು ಗರ್ವಗಳನ್ನು ತಣಿಸಲು ಉಪಯೋಗಿಸುತ್ತಿರುವೆನೇ? ಎಂದು ಪ್ರಶ್ನಿಸಿಕೊಳ್ಳಬೇಕು. ಒಮ್ಮೆ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ನೀವು ಪ್ರಾರಂಭಿಸಿದರೆ, ಅದಕ್ಕಿಂತ ಹೆಚ್ಚಿನ ಆಧ್ಯಾತ್ಮಿಕ ಸಾಧನೆ ಬೇರೆ ಇಲ್ಲ. ಇವು “ಆಸೆಗಳ ನಿಯಂತ್ರಣ ಕಾರ್ಯಕ್ರಮ”ದ ಉದ್ದೇಶಗಳು.

ನಿಮ್ಮ ಬದುಕನ್ನು ಪವಿತ್ರ ಮತ್ತು ಅತ್ಯಂತ ಯೋಗ್ಯವನ್ನಾಗಿ ಮಾಡಿಕೊಳ್ಳಿ

ಮನುಷ್ಯನಿಗೆ ದೈಹಿಕಬಲ, ಮಾನಸಿಕ ಬಲ ಮತ್ತು ಧನಬಲ ಎಂಬ ಮೂರುಬಗೆಯ ಬಲಗಳನ್ನು ನೀಡಲಾಗಿದೆ. ಈ ಎಲ್ಲವನ್ನೂ “ಯಜ್ಞ” (ತ್ಯಾಗ) ವಾಗಿ ಅರ್ಪಿಸಲ್ಪಡಬೇಕೆಂದು ಹೇಳಲಾಗಿದೆ. ಈ ಅರ್ಪಣೆಯು ಭಗವಂತನಿಗಾಗಿ ಅಲ್ಲ. ಯಾರು ನಿಮಗೆ ನಿಮ್ಮ ದೇಹ ಮತ್ತು ಮನಸ್ಸನ್ನು ನೀಡಿರುವನೋ, ಆ ಭಗವಂತನಿಗೆ, ಅವನಿಗೋಸ್ಕರ ಅವುಗಳ ಅಗತ್ಯವಿಲ್ಲ. ಎಲ್ಲ ಸಂಪತ್ತುಗಳ ಮೂಲವೂ ಸಹ ಭಗವಂತನೇ. ನಿಮ್ಮ ಸಂಪತ್ತಿನಿಂದ ಅವನಿಗೇನು ಬೇಕಾಗಿದೆ? ಅದನ್ನು ಪವಿತ್ರ ಉದ್ದೇಶಗಳಿಗಾಗಿ ಉಪಯೋಗಿಸಿ. ಸೇವಾ ಕಾರ್ಯಕ್ರಮವನ್ನು ಕೇವಲ ನಿಮ್ಮ ಬದುಕನ್ನು ಪವಿತ್ರ ಮತ್ತು ಅತ್ಯಂತ ಯೋಗ್ಯಗೊಳಿಸಲು ಅವಕಾಶಗಳನ್ನು ಒದಗಿಸುವ ಸಲುವಾಗಿ ಉದ್ದೇಶಿಸಲಾಗಿದೆ. ಅದು ಇರುವುದು ಸಮರ್ಪಣಾ ಭಾವವನ್ನು ಬೆಳೆಸುವ ಸಲುವಾಗಿ.

[Sathya Sai Speaks, Volume 17, Chapter 16: Ceiling on DesiresII.]

ಸದಾ ಸಂತೋಷವಾಗಿರಿ

ಯಾವುದೇ ತೊಂದರೆಯನ್ನು ಎದುರಿಸುತ್ತಿದ್ದರೂ, ಯಾವುದೇ ಸಂದರ್ಭದಲ್ಲಿಯೂ ನೀವು ಸಂತೋಷವಾಗಿರುವುದನ್ನು ಕಲಿಯಬೇಕು. ನಿಮಗೊಂದು ಚೇಳು ಕುಟುಕಿದ್ದರೆ, ಸರ್ಪ ಕಚ್ಚಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕು, ಸರ್ಪದಿಂದ ನೀವು ಕಚ್ಚಿಸಿಕೊಂಡಿದ್ದರೆ, ಸಧ್ಯ ಅದು ಮಾರಣಾಂತಿಕವಾಗಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕು. ನಿಮಗೊಂದು ವಾಹನವನ್ನು ಇಟ್ಟುಕೊಳ್ಳಲು ಸಹ ಸಾಧ್ಯವಾಗಿಲ್ಲ ದಿದ್ದಲ್ಲಿ, ನಿಮಗೆ ನಡೆಯಲು ಸಾಧ್ಯವಾಗುವಂತೆ ಕಾಲುಗಳು ದೃಢವಾಗಿವೆ ಎಂದು ಸಂತೋಷ ಪಡಬೇಕು. ನೀವು ಲಕ್ಷಾಧೀಶರಾಗಿಲ್ಲದಿದ್ದರೂ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಾಕಾಗುವಷ್ಟು ಆಹಾರವನ್ನು ಒದಗಿಸಲು ತಕ್ಕ ಸಂಪನ್ಮೂಲಗಳಿರುವುದಕ್ಕೆ ಸಂತೋಷಪಡಬೇಕು. ಪ್ರತಿಕೂಲ ಸನ್ನಿವೇಶಗಳಲ್ಲೂ ಸಹ ಸಂತೋಷವನ್ನು ಅನುಭವಿಸುವುದಕ್ಕೆ ಇದೇ ಮಾರ್ಗ. ನಿಮ್ಮೊಳಗಿನ ಸತ್ಯವನ್ನು ಅರಿತುಕೊಳ್ಳುವ ಕಡೆಗೆ ನಿಮ್ಮ ಪ್ರಯತ್ನವನ್ನು ತಿರುಗಿಸಿ. ಶಾಂತವಾದ ಮತ್ತು ಅರ್ಥಪೂರ್ಣವಾದ ಬದುಕನ್ನು ಸಾಗಿಸಲು, ಆಸೆಗಳ ನಿಯಂತ್ರಣವು ಕಡ್ಡಾಯ. ಹೆಚ್ಚು ಹೆಚ್ಚು ಸಂಪತ್ತನ್ನು ಗಳಿಸುವ ಆಸೆಯನ್ನು ನಿಗ್ರಹಿಸಿ, ನೀವು ಒಳಗಿನ ಸತ್ಯವನ್ನು ಅರಿತುಕೊಳ್ಳುವುದರ ಕಡೆಗೆ ನಿಮ್ಮ ಪ್ರಯತ್ನವನ್ನು ತಿರುಗಿಸಬೇಕು. ಈ ಪ್ರಯತ್ನವನ್ನು ಮುಂದುವರಿಸುವಾಗ, ನೀವು ಆಹಾರ, ಹಣ, ಸಮಯ ಮತ್ತು ಶಕ್ತಿಯ ಅಪವ್ಯಯಗಳನ್ನು ತಪ್ಪಿಸಿ, ಅವೆಲ್ಲವೂ ದೇವರ ಸ್ವರೂಪಗಳೆಂಬ ಅರಿವನ್ನು ಪಡೆಯಬೇಕು. ಅನಗತ್ಯವಾಗಿ ಮಾತನಾಡುವುದನ್ನು ತಪ್ಪಿಸಬೇಕು; ಏಕೆಂದರೆ, ಇದರ ಪರಿಣಾಮವಾಗಿ, ಶಕ್ತಿಯು ವ್ಯರ್ಥವಾಗಿ ನೆನಪಿನ ಶಕ್ತಿಯು ಕಡಿಮೆಯಾಗುತ್ತದೆ.

[Sathya Sai Speaks, Volume 27, Chapter 20: Spiritual Orientation to Education.]

ದೇವರ ಕೃಪೆಯಿಂದ ಮಾತ್ರ ಶಾಂತಿಯನ್ನು ಪಡೆಯಲು ಸಾಧ್ಯ

ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಶಾಂತಿಯನ್ನು ಗಳಿಸಲು ಕಷ್ಟಪಟ್ಟು ಪ್ರಯತ್ನಿಸುತ್ತಾನೆ. ಶಾಂತಿಯನ್ನು ಆಧ್ಯಾತ್ಮಿಕ ವಿಧಿಗಳಿಂದ ಸಾಧಿಸಲು ಸಾಧ್ಯವಿಲ್ಲ; ಮಾರುಕಟ್ಟೆಯಿಂದ ಯಾವುದೋ ವಸ್ತುವಿನಂತೆ ಪಡೆಯಲೂ ಆಗುವುದಿಲ್ಲ. ಗ್ರಂಥ ಜ್ಞಾನದಿಂದಾಗಲಿ, ಅಥವಾ ಬದುಕಿನಲ್ಲಿನ ಉನ್ನತ ಹುದ್ದೆಯಿಂದಾಗಲಿ ಗಳಿಸಲು ಸಾಧ್ಯವಿಲ್ಲ. ಶಾಂತಿಯನ್ನು ಕೇವಲ ದೇವರ ಕೃಪೆಯಿಂದ ಮಾತ್ರ ಪಡೆಯಲು ಸಾಧ್ಯ. ಮನುಷ್ಯನು ಶಾಂತಿಯನ್ನು ಗಳಿಸಲು ತವಕವನ್ನು ಹೊಂದಿದ್ದರೂ, ಆ ದಾರಿಯಲ್ಲಿ ಅವನು ಅನೇಕ ಅಡಚಣೆಗಳನ್ನು ಎದುರಿಸುತ್ತಾನೆ. ರೈಲಿನಲ್ಲಿ ಪ್ರಯಾಣಿಸುವವರಿಗೆ, “ಕಡಿಮೆ ಗಂಟುಮೂಟೆ, ಹೆಚ್ಚು ನೆಮ್ಮದಿ, ಪ್ರಯಾಣವನ್ನು ಹರ್ಷದಾಯಕ ಗೊಳಿಸುತ್ತವೆ”ಎಂಬ ಘೋಷಣಾ ವಾಕ್ಯ ಚೆನ್ನಾಗಿ ಪರಿಚಿತವಾಗಿರುತ್ತದೆ. ಈಗ ಮನುಷ್ಯನು ಮಿತಿಯಿಲ್ಲದ ಆಸೆಗಳಿಂದ, ತಾನೇ ಸ್ವಯಂ ಹೆಚ್ಚು ಭಾರ ಮಾಡಿಕೊಳ್ಳುತ್ತಿದ್ದಾನೆ. ಆಸೆಗಳೆಂಬ ಈ ಹೆಚ್ಚಿನ ಭಾರವಾದ ಗಂಟುಮೂಟೆಗಳಿಂದಾಗಿ, ಮನುಷ್ಯನು ಜೀವನದ ಪಯಣವನ್ನು ಸಾಗಿಸಲು ಬಹಳ ಕಷ್ಟಪಡುತ್ತಾನೆ. ಇಂತಹ ಆಸೆಗಳ ಸಂತಾನದಿಂದಾಗಿ, ಅವನು ಸಮತೋಲನವನ್ನು ಕಳೆದುಕೊಳ್ಳುತ್ತಾನೆ, ಗುರಿಯಿಂದ ಬಹಳ ದೂರ ಸಾಗುತ್ತಾನೆ ಮತ್ತು ಮತಿಭ್ರಾಂತನಾಗುವ ಪ್ರವೃತ್ತಿಯನ್ನೂ ತೋರಿಸುತ್ತಾನೆ. ಈ ಕಾರಣಗಳಿಂದಾಗಿ ನಾನು ‘ಆಸೆಗಳ ನಿಯಂತ್ರಣದ ಬಗ್ಗೆ ಒತ್ತು ನೀಡುತ್ತಲೇ ಬಂದಿದ್ದೇನೆ. ಆಸೆಗಳನ್ನು ಮಿತಿಗೊಳಿಸುವುದರಿಂದ ನೀವು ಒಂದು ನಿರ್ದಿಷ್ಟ ಮಟ್ಟದವರೆಗೆ ಶಾಂತಿಯನ್ನು ಗಳಿಸಬಹುದು. ನೀವು ನಿಮ್ಮ ಆಸೆಗಳನ್ನು ತಡೆಯುವ ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಭಗವಂತನ ಕೃಪೆಯನ್ನು ಪಡೆಯುವ ಪ್ರಯತ್ನವನ್ನು ಮಾಡಬೇಕು.

[Sathya Sai Speaks, Volume 31, Chapter 19: Faith, Love, and Grace.]

ಕೆಟ್ಟಗುಣಗಳು, ನಿಮ್ಮದೇ ಆಲೋಚನೆಗಳ ಪರಿಣಾಮಗಳು

ನೀವು ಕೋಪಗೊಂಡಿದ್ದೀರಿ, ಎಂದು ಭಾವಿಸೋಣ. ಈ ಕೋಪ ಎಲ್ಲಿಂದ ಬಂತು? ಅದು ನಿಮ್ಮಿಂದಲೇ ಬಂದಿದೆ. ಹಾಗೆಯೇ ಮತ್ಸರವೂ ನಿಮ್ಮ ಮನಸ್ಸಿನಿಂದಲೇ ರೂಪುಗೊಂಡ ಒಂದು ಗುಣ. ಹೀಗೆ ಪ್ರತಿಯೊಂದು ಕೆಟ್ಟ ಗುಣವೂ ನಿಮ್ಮದೇ ಆಲೋಚನೆಗಳ ಫಲವಾಗಿದೆ. ಆದ್ದರಿಂದ ನಿಮ್ಮ ಆಲೋಚನೆಗಳನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾದರೆ ಮಾತ್ರ, ನಿಮಗೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಮನಸ್ಸು, ಬುದ್ಧಿ ಮತ್ತು ಪ್ರಜ್ಞೆ ಇವು, ಆತ್ಮದ ಪ್ರತಿಫಲನಗಳು. ಮನಸ್ಸಿಗೆ ಸ್ಥಿರತೆಯಿಲ್ಲ. ಅದು ಆಲೋಚನೆಗಳು ಮತ್ತು ಆಸೆಗಳ ಉಗ್ರಾಣ. ‘ಬಂಧನ ಅಥವಾ ಮೋಕ್ಷಗಳಿಗೆ ಮನಸ್ಸೇ ಏಕಮೇವ ಕಾರಣ’ ಎಂದು ಹೇಳಲಾಗಿದೆ. ಆದ್ದರಿಂದ ಆಸೆಗಳ ಮೇಲೆ ನಿರ್ಬಂಧವನ್ನುಂಟುಮಾಡುವುದರ ಮೂಲಕ ಮನಸ್ಸನ್ನು ಸರಿಯಾದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

[Sathya Sai Speaks, Volume 42, Chapter 1: Know Thyself! You Will Know Everything.]

ಪ್ರಕೃತಿಯ ಋಣಾತ್ಮಕ ಅಂಶವನ್ನು ಕ್ರಿಯಾಶೀಲಗೊಳಿಸಬೇಡಿ

ಮನುಷ್ಯನ ದೇಹದ ಅಂಗಾಂಗಗಳನ್ನು ಅವನ ಒಳಿತಿಗಾಗಿ ಉಪಯೋಗಿಸಲ್ಪಡುವಂತೆ, ತಾನು ಸಮಾಜದ ಒಂದು ಅಂಗವೆಂದು ಭಾವಿಸಿ ಅವನು ಸಮಾಜದ ಯೋಗಕ್ಷೇಮಕ್ಕಾಗಿ ಸಹಾಯ ಮಾಡಬೇಕು. ಪುನಃ ಸಮಾಜವು ಪ್ರಕೃತಿಯ ಒಂದು ಅಂಗ, ಪ್ರಕೃತಿಯು ಪರಮಶ್ರೇಷ್ಠನಾದ ಭಗವಂತನ ಅಂಗ. ಹೀಗೆ ಮನುಷ್ಯ ಮತ್ತು ದೇವರ ನಡುವೆ ಅತ್ಯಂತ ಸಮೀಪದ ಒಂದು ಸಂಬಂಧವಿದೆ. ಪ್ರಕೃತಿಯು ಮನುಷ್ಯನಿಗಿಂತ ಹೆಚ್ಚು ಪ್ರಗತಿಶೀಲವಾಗಿದೆ. ಆದ್ದರಿಂದ ಪ್ರಕೃತಿಯನ್ನು ರಕ್ಷಿಸಲು, ಅದನ್ನು ಒಂದು ಮಿತಿಯಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಮನುಷ್ಯನು ಅಜಾಗರೂಕತೆಯಿಂದ ಪ್ರಕೃತಿಯೊಡನೆ ದುರ್ವರ್ತನೆಯನ್ನು ತೋರಿಸಿದರೆ, ಅದು ಪ್ರತಿಕೂಲವಾಗಿ ವರ್ತಿಸುವುದರಿಂದ ತೊಂದರೆ ಉದ್ಭವಿಸುತ್ತದೆ. ಪ್ರಕೃತಿಯನ್ನು ರಕ್ಷಿಸುವ ಸಲುವಾಗಿ ಆಸೆಗಳ ನಿಯಂತ್ರಣವನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅವನು ಪ್ರಕೃತಿಯ ಋಣಾತ್ಮಕ ಅಂಶಕ್ಕೆ ಚಾಲನೆ ನೀಡಬಾರದು. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ, ವಿಜ್ಞಾನಿಗಳು ತಮ್ಮ ಆವಿಷ್ಕಾರಗಳಿಂದ ಸಮಾಜದ ಮೇಲಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಕಾಳಜಿಯನ್ನು ಹೊಂದಿಲ್ಲ. ಅವರು ಮಾನವಕುಲದ ಯೋಗಕ್ಷೇಮದ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ. ವಿನಾಶಕಾರಿ ಅಸ್ತ್ರಗಳನ್ನು ತಯಾರಿಸುವುದರಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತಲೇ ಇದ್ದಾರೆ. ಸೌಕರ್ಯಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ, ಅತಿಯಾದ ಸೌಕರ್ಯವು, ಮನುಷ್ಯನ ಮನಸ್ಸನ್ನು ಕೆಡಿಸಿ, ಸಂತೋಷಕ್ಕೆ ಬದಲಾಗಿ ದುಃಖವನ್ನುಂಟುಮಾಡಬಹುದು. ನಿರ್ಬಂಧಗಳಿಲ್ಲದೇ ಯಾವುದೇ ಒಳ್ಳೆಯದನ್ನು ಸಾಧಿಸಲಾಗುವುದಿಲ್ಲ. ತಂತ್ರಜ್ಞಾನದ ಪ್ರಗತಿ ಮತ್ತು ಅತಿಯಾದ ಸೌಕರ್ಯಗಳ ಒದಗಿಸುವಿಕೆಯ ಕಾರಣದಿಂದಾಗಿ, ಬದುಕು ಯಾಂತ್ರಿಕವಾಗಿದೆ ಮತ್ತು ಆಧ್ಯಾತ್ಮಿಕತೆಯನ್ನು ಉಪೇಕ್ಷಿಸಲಾಗಿದೆ. ವಿಜ್ಞಾನವು ಪ್ರತಿಯೊಂದನ್ನೂ ತುಣುಕುಗಳನ್ನಾಗಿ ವಿಭಜಿಸುತ್ತದೆ. ಆದರೆ ಆಧ್ಯಾತ್ಮಿಕತೆಯು ವಿವಿಧತೆಯಲ್ಲಿ ಏಕತೆಯನ್ನು ನಿರ್ಮಿಸುತ್ತದೆ. ಇಂದು ಮನುಷ್ಯನು ಮಾನವರಲ್ಲಿ ಏಕತೆಯ ಭಾವನೆಯನ್ನು ಬೆಳೆಸಲು ಪ್ರಯತ್ನಗಳನ್ನು ಮಾಡುತ್ತಿಲ್ಲ.

ಮನುಷ್ಯ, ದೇವರು ಮತ್ತು ಪ್ರಕೃತಿಯ ನಡುವಿನ ಆತ್ಮೀಯ ಸಂಬಂಧ:

ಉದಾಹರಣೆಗೆ, ವಾತಾವರಣದಲ್ಲಿರುವ ಓಜೋನ್ ಪದರವು, ಭೂಮಿಯ ಮೇಲಿನ ಜನರನ್ನು ಸೂರ್ಯ ವಿಕಿರಣಗಳಿಂದ ಉಂಟಾಗುವ ಕೆಟ್ಟ ಪರಿಣಾಮಗಳಿಂದ ರಕ್ಷಿಸುತ್ತದೆ. ತಂತ್ರಜ್ಞಾನದ ಪ್ರಗತಿಯಿಂದಾಗಿ, ಹಲವಾರು ಕಾರ್ಖಾನೆಗಳು ಮೇಲೆದ್ದು, ವಾತಾವರಣಕ್ಕೆ ಹಾನಿಕಾರಕ ಅನಿಲಗಳನ್ನು ಸೇರಿಸುತ್ತಿವೆ. ಪರಿಣಾಮವಾಗಿ ಓಜೋನ್ ಪದರವು ತೆಳುವಾಗಿದೆ. ಇದನ್ನು ತಡೆಯದೆ ಮುಂದುವರಿಯಲ್ಪಟ್ಟರೆ, ಅದು ವಿಪತ್ತಿನ ಸಂದರ್ಭಗಳನ್ನು ಉಂಟುಮಾಡಬಹುದು. ವಿಜ್ಞಾನಿಗಳು ಓಜೋನ್ ಪದರವು ಛಿದ್ರವಾಗುವುದನ್ನು ತಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಆವರಿಗೆ ಪರಿಹಾರವನ್ನು ಕಂಡುಹಿಡಿಯಲಾಗಿಲ್ಲ. ಹೆಚ್ಚು ಪ್ರಮಾಣದ ಇಂಗಾಲದ ಡೈಯಾಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವುದು ಈ ಪರಿಸ್ಥಿತಿಗೆ ನಿಜವಾದ ಕಾರಣವಾಗಿದೆ. ಸಾಮಾನ್ಯವಾಗಿ, ಗಿಡಗಳು ಮತ್ತು ಮರಗಳು ಇಂಗಾಲದ ಡೈಯಾಕ್ಸೈಡನ್ನು ಹೀರಿಕೊಂಡು ಸ್ವಾಭಾವಿಕ ಪ್ರಕ್ರಿಯೆಯಾದ ‘ದ್ಯುತಿ ಸಂಶ್ಲೇಷಣೆ’ಯಿಂದ ಆಮ್ಲಜನಕವನ್ನು ಒದಗಿಸುತ್ತವೆ. ಆದರೆ, ಎಚ್ಚರಿಸಬೇಕಾದ ಮಟ್ಟಕ್ಕೆ ಅರಣ್ಯನಾಶವಾಗುತ್ತಿರುವುದರಿಂದ, ವಾತಾವರಣದಲ್ಲಿ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಆದ್ದರಿಂದ, ತೀವ್ರವಾದ ಅರಣ್ಯೀಕರಣ, ಎಲ್ಲ ಕಡೆಯೂ ಹೆಚ್ಚು ಮರಗಳನ್ನು ಬೆಳೆಸುವುದು, ಇರುವ ಮರಗಳನ್ನು ಬೇರೆ ಉದ್ದೇಶಗಳಿಗೆ ನಾಶಮಾಡದೆ ರಕ್ಷಿಸುವುದು, ಇವು ಈ ಪರಿಸ್ಥಿತಿಗೆ ಪರಿಹಾರಗಳಾಗಿವೆ. ಹೀಗೆ ಮನುಷ್ಯ, ಪ್ರಕೃತಿ ಮತ್ತು ದೇವರ ಸಂಬಂಧ ಅತ್ಯಂತ ಆತ್ಮೀಯವಾಗಿದೆ. ವಿಜ್ಞಾನಿಗಳು ಇದನ್ನು ಅರಿತುಕೊಳ್ಳಲು ಅಸಮರ್ಥರಾಗಿರುವರೋ ಏನೋ!

[Sathya Sai Speaks, Volume 26, Chapter 3: The Predicament of Man Today.][http://www.sathyasai.org/publications/TeachingsOfBSSSB-Vol01.html]

Leave a Reply

Your email address will not be published. Required fields are marked *

error: