ಭಗವದ್ ರೂಪದ ಧ್ಯಾನ
ಭಗವದ್ ರೂಪದ ಧ್ಯಾನ
ನಮ್ಮ ಪ್ರೀತಿಯ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಅಭಯ ಹಸ್ತದೊಂದಿಗೆ ನಿಂತಿರುವ ರೂಪವನ್ನು ಧ್ಯಾನಿಸುತ್ತೇವೆ. ನಮ್ಮ ಪ್ರೀತಿಯ ಸ್ವಾಮಿಯ ಶಿರವನ್ನು ಮುಕುಟದಂತೆ ಸುತ್ತುವರೆದಿರುವ ಮೃದುವಾದ ಕೂದಲಿನ ಪ್ರಭಾವಲಯದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸುತ್ತೇವೆ. ಸ್ವಾಮಿಯ ಮುಖವನ್ನು ನೋಡಿ, ಅದರಲ್ಲಿ ಹುಣ್ಣಿಮೆಯ ಪರಿಪೂರ್ಣತೆ ತುಂಬಿದೆ ಮತ್ತು ನೀಲಮೇಘ ವರ್ಣದಿಂದ ಕೂಡಿದೆ. ಮಿನುಗು ತಾರೆಗಳಂತೆ ಹೊಳೆಯುವ ಕಣ್ಣುಗಳ ಪ್ರೇಮಪೂರಿತ ದೃಷ್ಟಿಯು ಹೃದಯಸ್ಪರ್ಶಿಯಾಗಿದೆ. ಅವರ ಮಂದಹಾಸ ವದನಾರವಿಂದವು ನಮ್ಮ ಮನಸ್ಸುಗಳನ್ನು ಸೂರೆಗೊಳಿಸಿದೆ. ಸ್ವಾಮಿಯ ಬಲವಾದ ಭುಜಗಳನ್ನು ನೋಡಿ. ಅವು ಎಲ್ಲಾ ಲೋಕಗಳ ಭಾರವನ್ನು ಹೋರುವ ಭುಜಗಳು ಮತ್ತು ಭಕ್ತರ ಹಾದಿಯಲ್ಲಿ ಬರುವ ಎಲ್ಲಾ ಕೆಟ್ಟದ್ದನ್ನು ತಡೆಯಬಲ್ಲ ಭುಜಗಳು.
ಸ್ವಾಮಿಯ ಬಲಗೈ ನಮ್ಮನ್ನು ಆಶೀರ್ವದಿಸಲು ಮೇಲಕ್ಕೆತ್ತಿದೆ ಮತ್ತು ಅಭಯದ ಭಂಗಿಯಲ್ಲಿದೆ, “ಅಭಯ” ಎಂದರೆ “ಭಯಪಡಬೇಡ” ಎಂದರ್ಥ. ಆ ಹಸ್ತವು “ನಾನಿಲ್ಲಿರುವಾಗ ಭಯವೇಕೆ” ಎಂದು ಆಶ್ವಾಸನೆ ಕೊಡುತ್ತಿದೆ. ಹೌದು, ನಮ್ಮನ್ನು ಪ್ರೇರೇಪಿಸಲು, ಮಾರ್ಗದರ್ಶನ ಮಾಡಲು ಮತ್ತು ಕಾಪಾಡಲು ಸ್ವಾಮಿಯು ಯಾವಾಗಲೂ ಇರುತ್ತಾರೆ. “ಅವರು ಎಲ್ಲರ ಆಶ್ರಯ ಮತ್ತು ಕರುಣೆಯ ಮಿತಿಯಿಲ್ಲದ ಸಾಗರ.”
ಈಗ ನಿಮ್ಮ ಕಿವಿಯಲ್ಲಿ ಬಾಬಾ ಅವರ ಸುಮಧುರ ದಿವ್ಯ ವಾಣಿಯು ಪ್ರತಿಧ್ವನಿಸುತ್ತಿದೆ. “ಕೆಟ್ಟದ್ದನ್ನು ತ್ಯಜಿಸಿ, ಒಳ್ಳೆಯ ಕಾರ್ಯಗಳಿಗೆ ಬದ್ಧರಾಗಿರಿ ಮತ್ತು ಸರಿಯಾದ ರೀತಿಯಲ್ಲಿ ಜೀವನವನ್ನು ಮಾಡಿ. ಸತ್ಯ, ಪ್ರೀತಿ, ಎಲ್ಲಾ ಜೀವಿಗಳ ಬಗ್ಗೆ ಅಹಿಂಸಾ ಮನೋಭಾವ, ಸಹನೆ ಮತ್ತು ಸಹಿಷ್ಣುತೆ ದೈವಿಕ ಸದ್ಗುಣಗಳಾಗಿವೆ. ಅದು ಶಾಂತಿ, ಸಂತೋಷ ಮತ್ತು ಶುಭವನ್ನು ಉತ್ತೇಜಿಸುತ್ತದೆ, ಬೆಳೆಸುತ್ತದೆ ಮತ್ತು ಎಲ್ಲೆಡೆ ಬೀರುತ್ತದೆ” ಎಂದು ಸ್ವಾಮಿ ಆದೇಶಿಸುತ್ತಿದ್ದಾರೆ.
ಸ್ವಾಮಿಯ ಚರಣಕಮಲಗಳನ್ನು ಧೃಢವಾಗಿ ಹಿಡಿದುಕೊಳ್ಳಿ. ಈಗ ನಮ್ಮ ತಲೆಯನ್ನು ಬಾಗಿಸಿ ಅವರ ಚರಣಗಳ ಮೇಲೆ ಇಟ್ಟು ಈ ವಿಧವಾಗಿ ಪ್ರಾರ್ಥಿಸೋಣ.
“ಓ ಜಗದೀಶ್ವರನೇ, ನಿನ್ನ ಪಾದಗಳನ್ನು ಹಿಡಿದಿರುವ ಈ ಕೈಗಳು ಯಾವುದೇ ಸಂದರ್ಭದಲ್ಲೂ ಸಡಿಲಗೊಳ್ಳದಿರುವ ಶಕ್ತಿಯನ್ನು ನಮಗೆ ನೀಡು.
ನಿನ್ನ ಚಿತ್ತಕ್ಕೆ ಬಾಗಿದ ಈ ತಲೆ ಎಂದಿಗೂ ಲೌಕಿಕ ದುಷ್ಟ ವಿಷಯಗಳಿಗೆ ಬಾಗದಿರಲಿ. ಈ ಕಣ್ಣುಗಳು ಸದಾ ನಿನ್ನ ಪಾದಗಳಲ್ಲಿ ನೆಲೆಗೊಳ್ಳಲಿ.
ಓ ಸ್ವಾಮಿ! ದಯವಿಟ್ಟು ನಮ್ಮ ಬರಿದಾದ ಹೃದಯಗಳಲ್ಲಿ ವಾಸಿಸಿ ಮತ್ತು ಅದನ್ನು ನಿಮ್ಮ ಶಾಶ್ವತ ನೆಲೆಯನ್ನಾಗಿ ಮಾಡಿ. ಇದರಿಂದಾಗಿ ಅದರತ್ತ ಧಾವಿಸುವ ಪ್ರತಿಯೊಂದು ರಕ್ತಕಣವನ್ನು ನಿಮ್ಮ ದಿವ್ಯ ಉಪಸ್ಥಿತಿಯಿಂದ ಶುದ್ಧಗೊಳಿಸಬಹುದು. ಈ ಮೂಲಕ ನಾನು ನೋಡುವ ನೋಟ, ಆಡುವ ಮಾತು, ಕೇಳುವ ನುಡಿ ಮತ್ತು ಮಾಡುವ ಎಲ್ಲಾ ಕೆಲಸಗಳು ಸತ್ಯಂ, ಶಿವಂ ಮತ್ತು ಸುಂದರಂ ಆಗಿರುತ್ತದೆ.”
- ಓ ಸ್ವಾಮಿ, ನಮ್ಮ ಮನಸ್ಸಿನಲ್ಲಿ ಮತ್ತು ನಮ್ಮ ಆಲೋಚನೆಯಲ್ಲಿ ನೆಲೆಸಿ,
- ಓ ಸ್ವಾಮಿ, ನಮ್ಮ ಕಣ್ಣುಗಳಲ್ಲಿ ಮತ್ತು ನಮ್ಮ ದೃಷ್ಟಿಯಲ್ಲಿ ನೆಲೆಸಿ,
- ಓ ಸ್ವಾಮಿ, ನಮ್ಮ ಕಿವಿಗಳಲ್ಲಿ ಮತ್ತು ನಮ್ಮ ಶ್ರವಣದಲ್ಲಿ ನೆಲೆಸಿ,
- ಓ ಸ್ವಾಮಿ, ನಮ್ಮ ಬಾಯಿಯಲ್ಲಿ ಮತ್ತು ನಮ್ಮಮಾತಿನಲ್ಲಿ ನೆಲೆಸಿ,
- ಓ ಸ್ವಾಮಿ, ನಮ್ಮ ಹೃದಯದಲ್ಲಿ ಮತ್ತು ನಮ್ಮ ಆಸೆಗಳಲ್ಲಿ ನೆಲೆಸಿ,
- ಓ ಸ್ವಾಮಿ, ನಮ್ಮ ದೇಹದಲ್ಲಿ ಮತ್ತು ನಮ್ಮ ಚರ್ಯೆಗಳಲ್ಲಿ ನೆಲೆಸಿ.
ನಮ್ಮನ್ನು ನಿಮ್ಮ ಪ್ರೀತಿಯ ಮಕ್ಕಳನ್ನಾಗಿಸಿ, ಸತ್ಯವಂತರು ಮತ್ತು ಪರಿಶುದ್ಧರನ್ನಾಗಿ ಮಾಡಿ. ಇದರಿಂದ ನಾವು ನಿಮ್ಮನ್ನು ಎಲ್ಲರಲ್ಲೂ ನೋಡುವಂತಾಗಲಿ. ಆಗ ಮಾತ್ರವೇ ಇಡೀ ಜಗತ್ತು, ನಿಮ್ಮ ಮಹಿಮೆಯಿಂದ ತುಂಬಿರುವಂತೆ ನಮಗೆ ಗೋಚರಿಸುತ್ತದೆ. ಆಗ ನಮಗೆ ಯಾವುದೇ ಶತ್ರುಗಳಿರುವುದಿಲ್ಲ. ನಮ್ಮ ಕುರಿತಾಗಿ ಯಾರೂ ಅಸೂಯೆಪಡುವುದಿಲ್ಲ, ಏಕೆಂದರೆ ಅವರು ಇನ್ನು ಮುಂದೆ ಬೇರೆಯವರಲ್ಲ, ನೀವೇ ಆಗಿರುತ್ತೀರಿ ಮತ್ತು ನಾವು ಇನ್ನು ಮುಂದೆ ನಾವಾಗಿರುವುದಿಲ್ಲ, ನಿಮ್ಮ ಸ್ವರೂಪವೇ ಆಗಿರುತ್ತೇವೆ.
ಓ ಕರ್ತನೇ, ನೀನು ನಮ್ಮವನು, ಮತ್ತು ನಾವು ನಿನ್ನವರು.