ವಕ್ರತುಂಡ ಮಹಾಕಾಯ ಶ್ಲೋಕ – ಮುಂದುವರೆದ ಭಾಗ

Print Friendly, PDF & Email
ವಕ್ರತುಂಡ ಮಹಾಕಾಯ ಶ್ಲೋಕ – ಮುಂದುವರೆದ ಭಾಗ
ಕಥೆ:

ಬ್ರಹ್ಮ ದೇವರು ಸೃಷ್ಟಿಸಿದ ಮೊದಲ ಯುಗವಾದ ಸತ್ಯ ಯುಗದಲ್ಲಿ, ಅತ್ಯಂತ ಶಕ್ತಿಶಾಲಿಯಾದ ಸಿಂಧೂರಾಸುರನೆಂಬ ರಾಕ್ಷಸನು ಇದ್ದನು. ಅವನು ನಿರಂತರ ತಪಸ್ಸಿನಲ್ಲಿ ತೊಡಗಿರುತ್ತಿದ್ದ ಮತ್ತು ತನ್ನ ತಪಸ್ಸಿನಿಂದ ಪಡೆದ ಶಕ್ತಿಯನ್ನು ದುಷ್ಟ ಮತ್ತು ವಿನಾಶಕಾರಿ ಕೆಲಸಗಳಿಗೆ ಬಳಸುತ್ತಿದ್ದ. ಕಾಲಾಂತರದಲ್ಲಿ ಅವನು ಎಷ್ಟು ಶಕ್ತಿಶಾಲಿಯಾದನು ಎಂದರೆ, ದೇವತೆಗಳು ಕೂಡ ಅವನನ್ನು ಸೋಲಿಸುವುದು ಅಸಾಧ್ಯವೆಂದು ಮನಗಂಡರು. ಸಿಂಧೂರಾಸುರನು ಋಷಿಗಳು ಮತ್ತು ಸಂತರಿಗೆ ತೊಂದರೆ ಕೊಡುತ್ತಿದ್ದನು. ಅವರನ್ನು ಸೆರೆಮನೆಗೆ ತಳ್ಳಿ ಹಿಂಸಿಸುತ್ತಿದ್ದನು. ಅವನ ಶಕ್ತಿಗೆ ಇಡೀ ವಿಶ್ವದಲ್ಲಿ ಸಮಾನರಿಲ್ಲ ಎಂದು ಯಾವಾಗಲೂ ಭಾವಿಸುತ್ತಿದ್ದನು.

ಹೀಗೆಯೇ ಮುಂದುವರಿಯಲು ಋಷಿಗಳು ಮತ್ತು ಸಂತರು ಶ್ರೀಮನ್ನಾರಾಯಣನಲ್ಲಿ ಮೊರೆ ಹೋಗಿ ತಮ್ಮನ್ನು ಸಿಂಧೂರಾಸುರನಿಂದ ಬಿಡುಗಡೆಗೊಳಿಸಲು ಪ್ರಾರ್ಥಿಸಿದರು.

“ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್” ಎಂದು ಗೀತೆಯಲ್ಲಿ ಘೋಷಿಸಿದ ಶ್ರೀಮನ್ನಾರಾಯಣನು ಋಷಿಗಳಿಗೆ ಮತ್ತು ಸಂತರಿಗೆ ಅಭಯವನ್ನಿತ್ತನು. ಸಾಧುಗಳ ಸಂರಕ್ಷಣೆ ಮತ್ತು ದುಷ್ಟ ಶಿಕ್ಷಣೆಗೋಸ್ಕರವಾಗಿ ಪ್ರತಿಯೊಂದು ಯುಗದಲ್ಲಿ ತಾನು ಅವತರಿಸುತ್ತೇನೆ ಎಂದು ಇದರರ್ಥ ಅಲ್ಲವೇ? ಅದರಂತೆ ಶ್ರೀಮನ್ನಾರಾಯಣನು ಋಷಿಗಳು ಇನ್ನು ಭಯಪಡುವ ಅವಶ್ಯಕತೆ ಇಲ್ಲ ಎಂದು ಅಭಯವನ್ನಿತ್ತು, ಶೀಘ್ರದಲ್ಲಿಯೇ ತಾನು ಶಿವ-ಪಾರ್ವತಿಯರ ಪುತ್ರನಾಗಿ ಅವತಾರವೆತ್ತಿ ಸಿಂಧೂರಾಸುರನ ಸಂಹಾರ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟನು.

ಅದರಂತೆ ಪಾರ್ವತಿ ಗರ್ಭವನ್ನು ಧರಿಸಿದಳು. ಆದರೆ ಸಿಂಧೂರಾಸುರನು ತನ್ನ ಮೃತ್ಯುವು ಪರಮ ಮಂಗಳಕರನಾದ ಶಿವನ ಪುತ್ರನಿಂದ ಆಗುವುದು ಎಂದು ತಿಳಿದುಕೊಂಡು ಸೂಕ್ಷ್ಮ ರೂಪದಲ್ಲಿ ಪಾರ್ವತಿಯ ಗರ್ಭವನ್ನು ಪ್ರವೇಶಿಸಿ, ಆ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಶಿರವನ್ನು ಕತ್ತರಿಸಿ ಮಾಯವಾದನು.

ನವಮಾಸ ತುಂಬಲು ಪಾರ್ವತಿಯು ಗಂಡು ಮಗುವನ್ನು ಹಡೆದಳು. ಹುಟ್ಟಿದ ಗಂಡು ಮಗುವಿಗೆ ಶಿರಸ್ಸು ಇರಲಿಲ್ಲ. ಆದರೆ ಆ ಮಗುವು ಶ್ರೀಮನ್ನಾರಾಯಣನ ಅಂಶಾವತಾರವಾದ ಕಾರಣ ಪೂರ್ಣ ಜೀವಂತವಾಗಿ ಇತ್ತು.

ದೇವಿ ಪಾರ್ವತಿಯು ಇದನ್ನು ನೋಡಿ ಹತಾಶಳಾಗಿ, “ಓ ಇದೇಕೆ ಹೀಗಾಯಿತು? ಶಿರವಿಲ್ಲದ ಮಗುವಿನಿಂದ ಏನು ಪ್ರಯೋಜನ?” ಎಂದು ನುಡಿದಳು.

ಇದನ್ನು ಕಂಡ ಪರಮೇಶ್ವರನು ಪಾರ್ವತಿಯನ್ನು ಸಮಾಧಾನಪಡಿಸುತ್ತ ಅವಳಿಗೆ ಧೈರ್ಯ ಹೇಳಿ, ತನ್ನ ಗಣಗಳಲ್ಲಿ ಒಬ್ಬನಾದ ವೀರಭದ್ರನನ್ನು ಕರೆದು ಇಡೀ ಭೂಮಂಡಲದಲ್ಲಿ ದಕ್ಷಿಣ ದಿಕ್ಕಿನಲ್ಲಿ ಕಾಲು ಹಾಕಿ ಮಲಗಿದ ಒಬ್ಬ ಜೀವಿಯ ತಲೆಯನ್ನು ತೆಗೆದುಕೊಂಡು ಬಾ ಎಂದು ಹೇಳಿದನು. ಅದರಂತೆ ವೀರಭದ್ರನು ಇಡೀ ಭೂಮಂಡಲವನ್ನು ಸುತ್ತಾಡಿ ನೋಡಲು ದಕ್ಷಿಣ ದಿಕ್ಕಿನಲ್ಲಿ ಕಾಲು ಹಾಕಿ ಮಲಗಿರುವ ಯಾವ ಒಬ್ಬ ಜೀವಿಯೂ ಅವನಿಗೆ ಸಿಗಲಿಲ್ಲ. ಕಾರಣವೇನೆಂದರೆ ಶಾಸ್ತ್ರಗಳಲ್ಲಿ ದಕ್ಷಿಣ ದಿಕ್ಕು ಯಮನ ದಿಕ್ಕಾದ ಕಾರಣ ಆ ದಿಕ್ಕಿನಲ್ಲಿ ಕಾಲು ಹಾಕಿ ಮಲಗಬಾರದು ಎಂದು ಜನರು ಅರಿತಿದ್ದರು. ಯಮನು ಮೃತ್ಯುವಿನ ದೇವತೆ ಆದಕಾರಣ ದಕ್ಷಿಣ ದಿಕ್ಕಿನಲ್ಲಿ ಕಾಲು ಹಾಕಿ ಮಲಗುವುದು ಸಾವಿನ ಕಡೆಗೆ ಹೋಗುವ ಸೂಚನೆ ಎಂದು ಜನರು ಅರಿತಿದ್ದರು. ಪುರಾಣಕಾಲದಲ್ಲಿ ಜನರಿಗೆ ಶಾಸ್ತ್ರಗಳ ಮೇಲೆ ಅಚಲವಾದ ನಂಬಿಕೆಯಿತ್ತು ಮತ್ತು ತಮ್ಮ ದಿನನಿತ್ಯ ಜೀವನದಲ್ಲಿ ಅದನ್ನು ಪಾಲಿಸುತ್ತಿದ್ದರು. ವೀರಭದ್ರನಿಗೆ ಇಡೀ ಭೂಮಂಡಲವನ್ನು ಹುಡುಕಲು ಒಂದು ಆನೆಯ ಹೊರತಾಗಿ ಬೇರೆ ಯಾವುದೇ ಒಬ್ಬ ಮನುಷ್ಯ ಜೀವಿಯು ದಕ್ಷಿಣ ದಿಕ್ಕಿನಲ್ಲಿ ಕಾಲು ಹಾಕಿ ಮಲಗಿರುವುದು ಕಂಡುಬರಲಿಲ್ಲ. ವೀರಭದ್ರನು ಪರಮೇಶ್ವರನಲ್ಲಿ ಹಿಂತಿರುಗಿ ತಾನು ಕಂಡದ್ದನ್ನು ವಿವರಿಸಿ, “ಓ ದೇವನೇ, ನಿನ್ನ ಅನುಮತಿ ಇದ್ದರೆ ಆ ಆನೆಯ ತಲೆಯನ್ನೇ ಕತ್ತರಿಸಿ ತಂದು ಕೊಡುವೆನು,” ಎಂದು ಹೇಳಿದನು. ಪರಮೇಶ್ವರನು ಇದಕ್ಕೆ ಒಪ್ಪಿದನು. ಅದರಂತೆ ವೀರಭದ್ರನು ಆ ಆನೆಯ ಶಿರವನ್ನು ಕತ್ತರಿಸಿ ಶಿವನಿಗೆ ಒಪ್ಪಿಸಿದನು. ಶಿವನು ಆನೆಯ ತಲೆಯನ್ನು ಮಗುವಿನ ಮೇಲೆ ಇರಿಸಿ ಅದಕ್ಕೆ ಮತ್ತೆ ಮೊದಲಿನಂತೆ ಜೀವವನ್ನು ತುಂಬಿದನು.

ಆದರೆ ಪಾರ್ವತಿಗೆ, ತನ್ನ ಮಗುವಿಗೆ ಆನೆಯ ತಲೆ ಮತ್ತು ಮನುಷ್ಯನ ಶರೀರ ಇದೆ ಎಂದು ಲೋಕದ ಜನರು ಆಡಿಕೊಳ್ಳುವರು ಎಂದು ದುಃಖವಾಯಿತು. ಪರಮೇಶ್ವರನು ಪಾರ್ವತಿಯನ್ನು ಆ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿ, “ನಾನು ಈ ಮಗುವಿಗೆ ವಿದ್ಯೆ ಮತ್ತು ಜ್ಞಾನವನ್ನು ಕೊಡುವವನು ಆಗಲಿ ಮತ್ತು ವಿದ್ವತ್ ಜನರಿಂದ ಪೂಜಿಸಿ ಗೌರವಿಸಲ್ಪಡುವವನಾಗಲಿ ಇವನಿಗೆ ‘ವಿದ್ಯಾಪತಿ’ ಎಂದು ವರವನ್ನು ಕೊಡುತ್ತೇನೆ,” ಎಂದನು. “ಇದಲ್ಲದೆ ಯಾವುದೇ ಕಾರ್ಯದಲ್ಲಿ ಬರುವ ಅಡೆತಡೆಗಳನ್ನು ಇವನು ನಿವಾರಿಸಲಿ ಮತ್ತು ಯಾವುದೇ ಪೂಜೆಯ ಪ್ರಾರಂಭದಲ್ಲಿ ಮೊದಲ ಪೂಜೆಯು ಇವನಿಗೇ ಸಲ್ಲುವಂತಾಗಲಿ ಎಂಬ ಕಾರಣದಿಂದ ಇವನಿಗೆ ‘ವಿಘ್ನಹರ್ತ’ ಎಂದು ವರವನ್ನು ಕೊಡುತ್ತೇನೆ. ಲೋಕದಲ್ಲಿ ಇವನು ಪ್ರಸಿದ್ಧನಾಗಲಿ” ಎಂದನು. ದೇವಿ ಪಾರ್ವತಿಗೆ ಇದನ್ನು ಕೇಳಿ ಸಂತೋಷವಾಯಿತು.

ಆ ಬಾಲಕನು ಗಣೇಶ ಎಂದು ಪ್ರಸಿದ್ಧನಾಗಿ ಬೆಳೆದನು. ಇನ್ನೂ ತರುಣಾವಸ್ಥೆಯಲ್ಲಿ ಇದ್ದಾಗಲೇ ತನ್ನ ಅವತಾರದ ಉದ್ದೇಶಕ್ಕಾಗಿ ಅಣಿಯಾದನು. ಒಂದು ದಿನ ಸಿಂಧೂರಾಸುರನೊಂದಿಗೆ ಯುದ್ಧಮಾಡಲು ನರ್ಮದಾ ನದಿಯ ತಟಕ್ಕೆ ಬಂದನು.

ಆ ಯುದ್ಧವು ದೀರ್ಘ ಮತ್ತು ಘೋರವಾಗಿದ್ದು, ಗಣೇಶನು ತನ್ನ ಪರಶುವಿನಿಂದ ಸಿಂಧುರಾಸುರನನ್ನು ಕೊಂದು ಯುದ್ಧದಲ್ಲಿ ಗೆದ್ದನು. ಗಣೇಶನು ಸಿಂಧೂರಾಸುರನ ತಲೆ ಕಡಿದಾಗ ಅವನ ತಲೆಯ ರಕ್ತ ಗಣೇಶನ ಮೈಯ ತುಂಬ ಸಿಡಿಯಿತು. ಈ ಕಾರಣದಿಂದ ಗಣೇಶನನ್ನು ಸಿಂಧೂರ ವರ್ಣದಿಂದ ಚಿತ್ರಿಸಿದ್ದಾರೆ. ಈ ಬಣ್ಣವು ಸತ್ಯದ ಎದುರು ದುಷ್ಟ ಶಕ್ತಿಗಳ ಸರ್ವನಾಶ ಮತ್ತು ಶೂನ್ಯತೆಯ ಭಾವದ ಸಂಕೇತ. ಈ ಕಾರಣದಿಂದಲೇ ನರ್ಮದಾ ನದಿಯ ತೀರದಲ್ಲಿರುವ ಕೆಂಪು ಶಿಲೆಗಳನ್ನು ‘ಗಣೇಶ’ ಎಂದು ಪೂಜಿಸುತ್ತಾರೆ.

ಯುದ್ಧದ ನಂತರ ಗಣೇಶನು ನದಿತೀರದ ತಟದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸಿ ಒಂದು ತಂಪಾದ ನೆರಳಿನ ಸ್ಥಾನವನ್ನು ಹುಡುಕುತ್ತಿದ್ದನು. ಅಲ್ಲಿ ಹಚ್ಚಹಸುರಿನ ಹುಲ್ಲಿನ ರಾಶಿಯನ್ನು ಕಂಡು ಕೆಲಕಾಲ ವಿಶ್ರಾಂತಿಯನ್ನು ಪಡೆದು, ಹೊಸ ಹುರುಪಿನಿಂದ ಎದ್ದು ಆ ಹುಲ್ಲಿನ ಕುರಿತಾಗಿ ಈ ಹುಲ್ಲಿನಿಂದ ತನ್ನನ್ನು ಪೂಜಿಸಿದರೆ ಸಂಪ್ರೀತನಾಗುವೆನು ಎಂದು ವರವಿತ್ತನು. ಅಂದಿನಿಂದ ಗಣೇಶನನ್ನು ದರ್ಭೆ ಹುಲ್ಲಿನಿಂದ ಪೂಜಿಸುತ್ತಾರೆ. ಈ ದರ್ಭೆ ಹುಲ್ಲನ್ನು ಗಣೇಶನಿಗೆ ಅಲ್ಲದೇ ಬೇರೆ ಯಾವ ದೇವರ ಪೂಜೆಗೂ ಇಡುವುದಿಲ್ಲ. ಈ ರೀತಿಯಾಗಿ ಗಣೇಶನು ಸಿಂಧೂರಾಸುರನನ್ನು ಸಂಹಾರ ಮಾಡಿ ಲೋಕದಲ್ಲಿ ಮತ್ತೆ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಿದನು. ಆದ್ದರಿಂದ ಹಿಂದೂ ಸಂಪ್ರದಾಯದಲ್ಲಿ ಜನ್ಮದಿನ, ವಿವಾಹ ಅಥವಾ ಸತ್ಯನಾರಾಯಣ ಪೂಜೆ, ಗೃಹಪ್ರವೇಶ ಮುಂತಾದ ಶುಭ ಸಮಾರಂಭಗಳಲ್ಲಿ ಮೊದಲು ಗಣೇಶನನ್ನು ಪೂಜಿಸುತ್ತಾರೆ. ಕಾರಣವೇನೆಂದರೆ ಗಣೇಶನು ವಿಘ್ನಹರ್ತನು. ಅಡೆತಡೆಗಳನ್ನು ನಿವಾರಿಸುವವನು.

Illustrations by Sai Eashwaran, Sri Sathya Sai Balvikas Student.
ಉಲ್ಲೇಖ : ಶ್ರೀ ಸತ್ಯಸಾಯಿ ಬಾಲವಿಕಾಸ್ ಗುರುಗಳ ಕೈಪಿಡಿ, ಗ್ರೂಪ್ – 1, ಪ್ರಥಮ ವರ್ಷ, ‘ಶ್ರೀ ಸತ್ಯ ಸಾಯಿ ಬುಕ್ಸ್ ಮತ್ತು ಪಬ್ಲಿಕೇಶನ್ ಟ್ರಸ್ಟ್’, ‘ಧರ್ಮಕ್ಷೇತ್ರ, ಮಹಾಕಾಳಿ ಕೇವ್ಸ್ ರಸ್ತೆ, ಅಂಧೇರಿ (ಪೂ), ಮುಂಬೈ.

Leave a Reply

Your email address will not be published. Required fields are marked *

error: