ವಿಶ್ವ ಪ್ರೇಮ

Print Friendly, PDF & Email
ವಿಶ್ವ ಪ್ರೇಮ

ಮಹಮ್ಮದ್ ಪೈಗಂಬರರು ‘ಇಸ್ಲಾಂ’ ಹೆಸರಿನ ತಮ್ಮ ಹೊಸ ಧರ್ಮವನ್ನು ಜಗತ್ತಿಗೆ ನೀಡುತ್ತಿದ್ದರು. ಸತ್ಯ, ಶಾಂತಿ, ಮಾನವಪ್ರೇಮ ಹಾಗೂ ಪ್ರಾರ್ಥನೆಗಳ ಸಂದೇಶವನ್ನು ಪ್ರಸಾರ ಮಾಡುವ ಅವತಾರ ಪುರುಷರಾಗಿದ್ದರು ಅವರು. ಮಹಮ್ಮದರು ಇಸ್ಲಾಂ ಧರ್ಮವನ್ನು ಪ್ರಸಾರ ಮಾಡಲು ಪ್ರಾರಂಭಿಸಿದಾಗ ಅನೇಕರು ಅವರನ್ನು ವಿರೋಧಿಸಿದರು. ಕೆಲವರು ಅಜ್ಞಾನದಿಂದಾಗಿ ಮಹಮ್ಮದ್ ರ ಮತವನ್ನು ಒಪ್ಪಲಿಲ್ಲ. ಇನ್ನು ಕೆಲವರಿಗೆ ಪೈಗಂಬರರ ಜನಪ್ರಿಯತೆಯನ್ನು ಕಂಡು ಅಸೂಯೆ. ಅವರಲ್ಲಿ ಅನೇಕರು ಮಹಮ್ಮದರ ಬಗೆಗೆ ಸುಳ್ಳು ಕಥೆಗಳನ್ನು ಕಟ್ಟಿ ಹರಡುತ್ತಾ ಜನರಲ್ಲಿ ಅವರನ್ನು ಕುರಿತು ದ್ವೇಷವನ್ನು ಬಿತ್ತುತ್ತಿದ್ದರು. ಇನ್ನೂ ಕೆಲವರಂತೂ ಮಹಮ್ಮದರನ್ನು ಹೊಡೆದು ಗಾಯಗೊಳಿಸುವದಕ್ಕೂ ಹಂಚಿಕೆ ಹಾಕಿದ್ದರು. ಇಂತಹ ವಿರೋಧಿಗಳಲ್ಲಿ ಒಬ್ಬ ಮಹಿಳೆಯೂ ಇದ್ದಳು. ಮಹಮ್ಮದರ ಶಿಷ್ಯ ವರ್ಗವು ದಿನದಿನಕ್ಕೆ ಬೆಳೆಯುವುದನ್ನು ಕಂಡು ಆಕೆಯ ಕೋಪ ದ್ವೇಷಗಳಿಗೆ ಮಿತಿಯೇ ಉಳಿಯಲಿಲ್ಲ. ಹೀಗಿರಲು ಮಹಮ್ಮದರು ಪ್ರತಿ ದಿನವೂ ತನ್ನ ಮನೆಯ ಮುಂದೆಯೇ ಹಾದು ಹೋಗುತ್ತಾರೆ ಎಂಬ ವಿಷಯ ಅವಳಿಗೆ ತಿಳಿಯಿತು. ಹಾಗೆ ತಿಳಿದ ದಿನವೇ ಅವಳು ಒಂದು ಬುಟ್ಟಿ ತುಂಬಾ ಕಸಕಡ್ಡಿ ತುಂಬಿಕೊಂಡು ಮಹಮ್ಮದ್ ರಿಗೆ ಅಪಮಾನ ಮಾಡಲು ಸಿದ್ಧತೆ ಮಾಡಿಕೊಂಡಳು. ತನ್ನ ಹಂಚಿಕೆಯಿಂದ ಅವಳಿಗೆ ತುಂಬಾ ಖುಷಿಯಾಗಿತ್ತು. ಮರುದಿನ ಬೆಳಿಗ್ಗೆ ಮಹಮ್ಮದರು ತನ್ನ ಮನೆಯ ಮುಂದೆ ಬರುತ್ತಿದ್ದಂತೆಯೇ ಆ ಮಹಿಳೆ ತನ್ನ ಮನೆಯ ಮಹಡಿಯನ್ನು ಹತ್ತಿ ಹೋಗಿ ಅಲ್ಲಿಂದ ಅವರ ತಲೆಯ ಮೇಲೆ ಬೀಳುವಂತೆ ಬುಟ್ಟಿಯಲ್ಲಿ ತುಂಬಿಕೊಂಡಿದ್ದ ಕಸ-ಕಡ್ಡಿ ಸುರಿದಳು. ಆದರೆ ಪೈಗಂಬರ್ ತಲೆಯೆತ್ತಿ ಕೂಡ ನೋಡಲಿಲ್ಲ. ಸ್ವಲ್ಪವೂ ಬೇಸರ ಪಟ್ಟುಕೊಳ್ಳದೆ ತಲೆ, ಹೆಗಲುಗಳ ಮೇಲೆ ಬಿದ್ದ ಕೊಳೆಯನ್ನು ಕೊಡವಿಕೊಳ್ಳುತ್ತ ಮಸೀದಿಯ ಕಡೆಗೆ ನಡೆದರು. ಅರಬ್ ಮಹಿಳೆಯಾದರೋ ತಾನು ಮಹಮ್ಮದ್ ರಿಗೆ ತುಂಬಾ ಅವಮಾನ ಮಾಡಿದನೆಂದು ಹೆಮ್ಮೆಯಿಂದ ಸಂತೋಷಪಟ್ಟಳು. “ಹಾ! ಹಾ! ಇನ್ನುಮುಂದೆ ದಿನಾಲು ಇವನಿಗೆ ಇದೇ ಸ್ವಾಗತ!” ಎಂದು ಅಟ್ಟಹಾಸ ಮಾಡಿ ನಕ್ಕಳು.

old Arab lady throwing waste on Prophet Mohammed.

ಪ್ರತಿದಿನ ಬೆಳಿಗ್ಗೆ ಅರಬ್ ಮಹಿಳೆ ಮಹಮ್ಮದ್ ಪೈಗಂಬರರನ್ನು ಅದೇ ರೀತಿ ಅಪಮಾನಿಸುತ್ತಿದ್ದಳು. ಆದರೆ ಮಹಮ್ಮದ್ ಪೈಗಂಬರರು ಅದನ್ನು ಗಮನಕ್ಕೇ ತಂದುಕೊಳ್ಳುತ್ತಿಲ್ಲವೆಂಬುದು ಅವಳಿಗೆ ಮನವರಿಕೆಯಾಯಿತು. ಅವಳ ದುಷ್ಟತನಕ್ಕೆ ಪ್ರತಿಯಾಗಿ ಅವರು ಉದಾಸೀನತೆಯಿಂದಿದ್ದರು. ಇದರಿಂದ ಆ ಮಹಿಳೆಗೆ ಅವರ ಮೇಲೆ ಕೋಪವು ಇನ್ನೂ ಹೆಚ್ಚಾಯಿತು. ಒಂದು ದಿನ ಮಹಮ್ಮದರು ಆಕೆಯ ಮನೆಯ ಮುಂದೆ ಹೋಗುತ್ತಿರುವಾಗ ಈಚೆಗೆ ಮೂರು ದಿನಗಳಿಂದಲೂ ತಮ್ಮ ತಲೆಯ ಮೇಲೆ ಕಸ ಬಿದ್ದಿಲ್ಲ ಎಂಬುದು ನೆನಪಾಯಿತು. ಇದರಿಂದ ಅವರಿಗೆ ಸಂತೋಷ ಉಂಟಾಗುವುದಕ್ಕೆ ಬದಲಾಗಿ ಚಿಂತೆಯುಂಟಾಯಿತು.

Mohammed giving medicine to the old lady who is sick.

“ಇಂದು ನನ್ನ ತಲೆಯ ಮೇಲೆ ಕಸ ಏಕೆ ಬೀಳಲಿಲ್ಲ? ಅವಳು ಮಾಡುತ್ತಿದ್ದ ಈ ತುಂಟಾಟವು ನನ್ನ ಶಿಷ್ಯರಿಗೇನಾದರೂ ತಿಳಿದು ಅವಳನ್ನು ಅವರು ಶಿಕ್ಷಿಸಿದ್ದಾರೆಯೇ? ಏನೇ ಆಗಲಿ ಒಳಗೆ ಹೋಗಿ ನೋಡಿ ಬರುತ್ತೇನೆ,” ಎಂದುಕೊಂಡು ಮಹಮ್ಮದರು ಮಹಡಿ ಹತ್ತಿ ಹೋಗಿ ಅರ್ಧ ಮುಚ್ಚಿದ ಬಾಗಿಲು ತಟ್ಟಿದರು. “ಬನ್ನಿ,” ಎಂಬ ಕ್ಷೀಣವಾದ ದನಿ ಅವರಿಗೆ ಒಳಗಿನಿಂದ ಕೇಳಿಸಿತು. ಮಹಮ್ಮದರು ಒಳಗೆ ಕಾಲಿಡುತ್ತಿದ್ದಂತೆಯೇ ಒಬ್ಬ ಮುದುಕಿಯು ಖಾಯಿಲೆಯಿಂದ ನರಳುತ್ತಾ ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡರು. “ಅಮ್ಮಾ, ನಿನಗೆ ತುಂಬಾ ಜ್ವರ ಬಂದಿರುವ ಹಾಗೆ ಕಾಣುತ್ತಿದೆ. ಔಷಧಿ ತೆಗೆದುಕೊಳ್ಳುತ್ತಿರುವೆಯಾ ಎಂದು ಪ್ರೀತಿ ತುಂಬಿದ ದನಿಯಲ್ಲಿ ಕೇಳಿದರು. “ಇಲ್ಲ ನನ್ನನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲ. ನನಗೇನಾದರೂ ಬೇಕಾದರೆ ನಾನೇ ಬಹು ಕಷ್ಟದಿಂದ ಎದ್ದು ತೆಗೆದುಕೊಳ್ಳಬೇಕು,” ಎಂದು ಆಕೆ ಉತ್ತರಿಸಿದಳು. ಮಹಮ್ಮದರು ಪ್ರೀತಿಯಿಂದ ಮಾತನಾಡುತ್ತಾ ಮೂರು ದಿನಗಳಿಂದ ಆಕೆ ನರಳುತ್ತಿರುವುದನ್ನು ತಿಳಿದುಕೊಂಡರು. ಅಲ್ಲಿಂದ ತಮ್ಮ ಮನೆಗೆ ಬಂದು ಔಷಧದ ಸೀಸೆ ತೆಗೆದುಕೊಂಡು ಮತ್ತೆ ಮುದುಕಿಯ ಬಳಿಗೆ ಹೋದರು. “ಹಕೀಮರಿಂದ ಔಷಧಿ ತಂದಿದ್ದೇನೆ. ದಿನಕ್ಕೆ ಮೂರು ಸಲ ತೆಗೆದುಕೋ, ಎಲ್ಲವೂ ಸರಿಯಾಗುವುದು,” ಎಂದು ಹೇಳುತ್ತಾ ಔಷಧಿಯನ್ನು ಬಟ್ಟಲಿಗೆ ಹಾಕಿಕೊಟ್ಟರು.

ಮಹಮ್ಮದರ ಶುದ್ಧ ಅಂತಃಕರಣವನ್ನು ಕಂಡು ಆ ಮಹಿಳೆಯ ಕಣ್ಣುಗಳಲ್ಲಿ ನೀರು ತುಂಬಿ ಬಂದಿತು. “ಈ ಮಹಾಪುರುಷರು ಎಷ್ಟೊಂದು ತಾಳ್ಮೆಯುಳ್ಳವರು! ಎಷ್ಟೊಂದು ಪ್ರೇಮಪೂರ್ಣ! ಕ್ಷಮಾವಂತ!” ಎಂದು ಮನಸಿನಲ್ಲೇ ಅಂದುಕೊಂಡಳು. ಅವಳ ಹೃದಯ ಪಶ್ಚಾತ್ತಾಪದಿಂದ ತುಂಬಿ ಬಂದಿತ್ತು. ದುಃಖ ತಡೆಯಲಾರದೆ ಬಿಕ್ಕಿಬಿಕ್ಕಿ ಅತ್ತಳು. ತೊದಲು ನುಡಿಯಲ್ಲಿ, “ನೀವು ನಿಜವಾಗಿಯೂ ದೇವತಾ ಮನುಷ್ಯರು. ನಿಮ್ಮ ವಿಷಯದಲ್ಲಿ ನಾನು ಮಾಡಿದ ಪಾಪವನ್ನು ದೇವರು ಕ್ಷಮಿಸುವನೇ? ದಯಮಾಡಿ ದೇವರ ಕಡೆಗೆ ಹೋಗುವ ಸರಿಯಾದ ಮಾರ್ಗವನ್ನು ತೋರಿಸಿ,” ಎಂದು ಪ್ರಾರ್ಥಿಸಿದಳು. “ಅಮ್ಮ, ಮಾತನಾಡಿ ಹೆಚ್ಚು ಆಯಾಸ ಮಾಡಿಕೊಳ್ಳಬೇಡ. ಪರಮಾತ್ಮನು ಸರ್ವಶಕ್ತನೆಂದೂ, ಸರ್ವಜ್ಞನೆಂದೂ, ಸರ್ವವ್ಯಾಪಿಯೆಂದು ನಿನಗೆ ನಂಬಿಕೆ ಇದ್ದರೆ ಆತನು ನಿನ್ನಿಂದ ಎಂದಿಗೂ ದೂರವಾಗುವುದಿಲ್ಲ. ಆದರೆ ಆತನು ಬರಿಯ ಪೂಜೆಯಿಂದ ತೃಪ್ತನಾಗುವುದಿಲ್ಲ. ಎಲ್ಲರ ವಿಷಯದಲ್ಲಿಯೂ ನಿಸ್ವಾರ್ಥ ಪ್ರೇಮವಿರಬೇಕು. ಆ ಪ್ರೇಮವನ್ನು ಪ್ರಾಮಾಣಿಕತೆ, ಸಕ್ರಿಯ ನಿಷ್ಠೆ, ಕ್ಷಮಾಶೀಲತೆ, ಉದಾರ ದಾನಬುದ್ಧಿ, ಸೇವೆ, ತ್ಯಾಗಗಳ ಮೂಲಕ ಆಚರಿಸಬೇಕು. ಈ ರೀತಿ ಮಾತ್ರ ನಾವು ದೇವರ ಪ್ರೀತಿಗೆ ಪಾತ್ರರಾಗುತ್ತೇವೆ,” ಎಂದು ಮಹಮ್ಮದರು ಹೇಳಿ ಆಕೆಯನ್ನು ಸಮಾಧಾನಪಡಿಸಿದರು.

ಪ್ರಶ್ನೆಗಳು:
  1. ಅರಬ್ ಮಹಿಳೆ ಮಾಡಿದ ತಪ್ಪೇನು?
  2. ಮಹಮ್ಮದರು ಅವಳಿಗೆ ಯಾವ ಪಾಠ ಕಲಿಸಿದರು?
  3. ನಾವು ಹೇಗೆ ದೇವರ ಪ್ರೀತಿಗೆ ಪಾತ್ರರಾಗಬಹುದು?

Leave a Reply

Your email address will not be published. Required fields are marked *