ದೇವರಿಗೆ ನಮ್ಮ ಹಿತ ಗೊತ್ತು

Print Friendly, PDF & Email
ದೇವರಿಗೆ ನಮ್ಮ ಹಿತ ಗೊತ್ತು

ದೇವರು ಸೂಯ೵, ಚಂದ್ರ, ನಕ್ಷತ್ರಗಳನ್ನು ಸೃಷ್ಟಿಸಿದ್ದಾನೆ. ಅವನು ನಾವೆಲ್ಲ ವಾಸಿಸುತ್ತಿರುವ ಈ ಸುಂದರವಾದ ಭೂಮಿಯನ್ನೂ ಸೃಷ್ಟಿಸಿದ್ದಾನೆ. ಅವನು ನಮ್ಮೆಲ್ಲರ ಸವ೵ಶಕ್ತ ತಂದೆ. ನಾವೆಲ್ಲಾ ಅವನ ಪ್ರೀತಿಯ ಮಕ್ಕಳು.

ಆದ್ದರಿಂದ ನಾವು ದೇವರೊಂದಿಗೆ ಪ್ರೇಮ ಮತ್ತು ಭಕ್ತಿಯಿಂದ ಮಾತನಾಡಿದಾಗ ಅವನು ಸಂತೋಷಗೊಳ್ಳುತ್ತಾನೆ. ಅವನು ನಮ್ಮ ಅಂತರಾಳದ ಪ್ರಾಥ೵ನೆಯನ್ನೂ ಕೇಳಿಸಿಕೊಳ್ಳಬಲ್ಲನು. ಆದರೆ ನಮ್ಮ ಪ್ರಾಥ೵ನೆ ಪ್ರಾಮಾಣಿಕವಾಗಿರಬೇಕೆಂಬುದನ್ನು ನೆನಪಿಡಿ. ನಮ್ಮ ಪ್ರಾಥ೵ನೆ ಸರಿಯಾದ ವಿಷಯಗಳಿಗೆ ಮಾತ್ರ ಇರಬೇಕು. ಇಲ್ಲದಿದ್ದರೆ, ದೇವರೂ ಅಸಂತೋಷಗೊಳ್ಳುತ್ತಾನೆ; ನಾವೂ ಅಸಂತೋಷಗೊಳ್ಳುತ್ತೇವೆ.

ಮೆಹೂರ್ ಎಂಬ ಹಳ್ಳಿಯಲ್ಲಿ ಶಂಭು ಎಂಬ ಚಮ್ಮಾರನಿದ್ದನು. ಸುತ್ತಮುತ್ತಲಿನ ಹಳ್ಳಿಗಳಲ್ಲೆಲ್ಲ ಅವನು ಪ್ರಾಮಾಣಿಕ ಕೆಲಸಗಾರನೆಂದು ಹೆಸರಾಗಿದ್ದನು. ಇಡೀ ದಿವಸ ಹೊಸ ಪಾದರಕ್ಷೆಗಳನ್ನು ಹೊಲಿಯುವುದರಲ್ಲಿ, ಹಳೆಯದನ್ನು ಸರಿಪಡಿಸುವುದರಲ್ಲಿ ಅವನು ತೊಡಗಿರುತ್ತಿದ್ದನು. ಇದರಿಂದ ಅವನಿಗೆ ಕುಟುಂಬ ಪೋಷಣೆಗೆ ಅಗತ್ಯವಿದ್ದಷ್ಟು ಸಂಪಾದನೆಯಾಗುತ್ತಿತ್ತು.

ಒಂದು ದಿನ ಪಕ್ಕದ ಹಳ್ಳಿಯ ಜಮೀನುದಾರನು ಕುದುರೆಯನ್ನು ಹತ್ತಿಕೊಂಡು ಶಂಭುವಿನ ಗುಡಿಸಲ ಮುಂದೆ ಹಾದು ಹೋದನು. ಬೆಲೆಯುಳ್ಳ ಸುಂದರ ವಸ್ತ್ರ ಧರಿಸಿ ಗತ್ತಿನಿಂದ ಹೋಗುತ್ತಿರುವುದನ್ನು ಕಂಡ ಶಂಭುವಿನ ಮನಸ್ಸಿನಲ್ಲಿ ಆಸೆ ಮೂಡಿತು. “ಇವನು ಇಪ್ಪತ್ತು ಹಳ್ಳಿಗಳಿಗೆ ಒಡೆಯನಾಗಿದ್ದಾನೆ, ಬಂಗಾರದ ಗಣಿಯನ್ನೇ ಕೊಳ್ಳುವಷ್ಟು ಸಂಪತ್ತು ಇವನಿಗಿದೆ. ಇವನ ಜೀವನ ಸುಖ ಸೌಭಾಗ್ಯಗಳಿಂದ ತುಂಬಿದೆ. ನನ್ನದೆಂಥ ಕರ್ಮ! ಇಡೀ ದಿನ ಚರ್ಮವನ್ನು ಕತ್ತರಿಸುತ್ತಾ ಚಪ್ಪಲಿ ಹೊಲಿಯುತ್ತಾ ಕುಳಿತಿರುತ್ತೇನೆ. ದೇವರು ನನ್ನ ವಿಷಯದಲ್ಲಿ ಏಕೆ ಇಷ್ಟೊಂದು ನಿಷ್ಕರುಣಿಯಾಗಿದ್ದಾನೆ?”

ಮನಸ್ಸಿನಲ್ಲಿ ಈ ವಿಚಾರ ಮೂಡುತ್ತಿದ್ದಂತೆಯೇ ಶಂಭುವಿನ ಕಣ್ಣು ಗೋಡೆಯ ಮೇಲೆ ತೂಗು ಹಾಕಿದ್ದ ಪಂಢರಿ ವಿಠಲನ ಚಿತ್ರದ ಕಡೆಗೆ ತಿರುಗಿತು. ಮುಗ್ಧತೆಯಿಂದ ಅವನು ಹೇಳಿ ಕೊಂಡನು, “ನನ್ನ ಪ್ರೀತಿಯ ಮಹಾ ಪ್ರಭುವೇ, ನೀನು ನನ್ನ ಸರ್ವಶಕ್ತನಾದ ತಂದೆ. ನೀನೇ ನನ್ನ ಪ್ರೀತಿಯ ತಾಯಿ. ಬೆಳಗಿನಿಂದ ಸಾಯಂಕಾಲದವರೆಗೂ ನಾನು ಮಾಡುವುದನ್ನೆಲ್ಲ ನೀನು ನೋಡುತ್ತಲೇ ಇರುತ್ತೀಯೆ. ನನ್ನ ವಿಷಯದಲ್ಲಿ ಕರುಣೆ ಬಾರದೆ? ನನಗೆ ಇರಲು ಒಂದು ದೊಡ್ಡ ಮನೆ, ಜೋಳ ಬೆಳೆಯಲು ಹೊಲ, ನನ್ನ ಹೆಂಡಿರು ಮಕ್ಕಳು ಹಾಗು ನನಗೆ ಅಗತ್ಯವಿದ್ದ ಸುಂದರ ವಸ್ತುಗಳನ್ನು ಕೊಂಡುಕೊಳ್ಳಲು ಸಾಕಷ್ಟು ಹಣ ಕೊಡಬಾರದೇ?”

ಶಂಭು ಈ ರೀತಿ ಪ್ರಾರ್ಥನೆ ಮಾಡುತ್ತಿರುವಂತೆಯೇ ಚಿತ್ರದಲ್ಲಿದ್ದ ವಿಠಲನು ನಗುತ್ತಿರುವಂತೆ ಅನ್ನಿಸಿತು. ಶಂಭು ತನಗೆ ತಾನೇ ಅಂದುಕೊಂಡನು, “ವಿಠಲನು ನಿಶ್ಚಯವಾಗಿಯೂ ನನ್ನ ಪ್ರಾರ್ಥನೆ ಕೇಳಿದ್ದಾನೆ. ಆದರೆ ಆತನು ನಕ್ಕಿದ್ದೇಕೆ? ನಾನು ಕೇಳಿದ್ದು ಹೆಚ್ಚಾಯಿತೆ?”

ಆ ದಿನ ರಾತ್ರಿ ವಿಠಲನು ಜಮೀನುದಾರನ ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದನು. “ಮೊಹರ್ ಹಳ್ಳಿಯ ಚಮ್ಮಾರ ಶಂಭು ನನ್ನ ಭಕ್ತ. ಆತನಿಗೆ ನೀನು ಸಹಾಯ ಮಾಡಬೇಕೆಂದು ನನ್ನ ಇಚ್ಛೆ. ಅವನಿಗೊಂದು ದೊಡ್ಡ ಮನೆ ಕಟ್ಟಿಸಿಕೊಡು, ಒಂದು ಮಡಕೆ ತುಂಬ ಬಂಗಾರದ ನಾಣ್ಯಗಳನ್ನು ಕೊಡು, ನಾಲ್ಕು ಎಕರೆ ಭೂಮಿಯನ್ನು ಅವನ ಹೆಸರಿಗೆ ನೋಂದಾಯಿಸು. ನಿನಗೆ ನನ್ನ ಅನುಗ್ರಹವಾಗುವುದು.” ಜಮೀನುದಾರನು ವಿಠಲನ ಆಜ್ಞೆಯಂತಯೇ ನಡೆದುಕೊಂಡನು.

ಶಂಭುವಿಗೆ ತನ್ನ ಭಾಗ್ಯವನ್ನು ನಂಬುವುದೇ ಅಸಾಧ್ಯವಾಯಿತು. ಅವನು ಚರ್ಮದ ಕೆಲಸವನ್ನೂ, ಪಾದರಕ್ಷೆ ಹೊಲಿಯುವುದನ್ನೂ ಬಿಟ್ಟನು. ಇಡೀ ಕುಟುಂಬವು ಹೊಲದಲ್ಲಿ ಹರಗುವುದು, ಬಿತ್ತುವುದು ಮುಂತಾದ ಕಾರ್ಯದಲ್ಲಿ ತೊಡಗಿತು. ಅವರಿಗೆ ತಾವು ಬೇಡಿದುದನ್ನೆಲ್ಲ ಭಗವಂತನು ದಯಪಾಲಿಸಿದನೆನ್ನಿಸಿತು.

ಆದರೆ ಕೆಲವೇ ದಿನಗಳಲ್ಲಿ ಶಂಭುವಿಗೆ ಕಷ್ಟಗಳು ಬರತೊಡಗಿದುವು. ಆತನ ದೂರದ ನೆಂಟರು ಮನೆಯಲ್ಲಿ ಬಂದು ಇರತೊಡಗಿದರು. ಪ್ರತಿನಿತ್ಯ ಒಂದಿಲ್ಲೊಂದು ವಿಷಯದ ಬಗೆಗೆ ಅವರು ಬಡಿದಾಡುತ್ತಿದ್ದರು. ತನ್ನ ಬಂಗಾರದ ಮಡಕೆಯನ್ನು ಸುರಕ್ಷಿತವಾಗಿ ಎಲ್ಲಿಡಬೇಕೋ ಶಂಭುವಿಗೆ ತಿಳಿಯಲಿಲ್ಲ. ಅದನ್ನು ಹೊಲದ ಒಂದು ಮೂಲೆಯಲ್ಲಿ ಹೂಳಿದನು. ಆದರೆ ಕಳ್ಳರು ಅದನ್ನು ಕದಿಯಬಹುದೆಂದು ಅವನಿಗೆ ಸದಾ ಭಯ, ಆತಂಕ. ಆ ವರ್ಷ ಮಳೆಯಿಲ್ಲದೆ ಒಂದು ಕಾಳು ಧಾನ್ಯವೂ ಹೊಲದಿಂದ ಬರಲಿಲ್ಲ.

ಹೀಗೆ ಶಂಭುವು ಜೀವನದಲ್ಲಿ ಎಲ್ಲ ಸುಖ-ಶಾಂತಿಗಳನ್ನೂ ಕಳೆದುಕೊಂಡನು. ದಿನದಿನಕ್ಕೆ ಕೊರಗುತ್ತಾ, ಸೊರಗುತ್ತಾ ನಡೆದನು. ಆದರೆ ಅದರಿಂದ ಅವನಿಗೆ ಬುದ್ಧಿ ಬಂದಿತು. ಕೊನೆಗೊಂದು ದಿನ ಅವನು ವಿಠೋಬನ (ವಿಠ್ಠಲನ) ಚಿತ್ರದೆದುರಿಗೆ ನಿಂತು ಪ್ರಾರ್ಥಿಸಿದನು. “ಪ್ರಭು ನಾನು ಮನೆ ಹೊಲ ಸಂಪತ್ತನ್ನು ಬೇಡಿದಾಗ ನೀನೇಕೆ ನಕ್ಕೆ ಎಂಬುದು ನನಗೆ ಅರ್ಥವಾಗುತ್ತಿದೆ. ಇವುಗಳಿಂದ ನನ್ನ ಸುಖವೇನೂ ಹೆಚ್ಚಾಗಲಿಲ್ಲ. ಅವು ನಿಜವಾಗಿಯೂ ನನ್ನ ಶಾಂತಿ, ತೃಪ್ತಿ, ಸುಖನಿದ್ರೆ, ಒಳ್ಳೆಯ ಆರೋಗ್ಯ ಮತ್ತು ಸಂತೋಷಗಳನ್ನು ಅಪಹರಿಸಿಬಿಟ್ಟವು. ದಯವಿಟ್ಟು ನನ್ನ ಸ್ವಾರ್ಥ, ಲೋಭಗಳನ್ನು ಕ್ಷಮಿಸು. ನನ್ನ ಪ್ರಾಮಾಣಿಕವಾದ ಕಠಿಣ ಪರಿಶ್ರಮವನ್ನು ಮರಳಿ ದಯಪಾಲಿಸು. ಮತ್ತೆ ಹೊಸ ಚಪ್ಪಲಿ ಮಾಡುತ್ತಾ ಹಳೆಯ ಚಪ್ಪಲಿ ಸರಿಮಾಡುತ್ತಾ ನನ್ನ ಬಂಧು ಭಗಿನಿಯರ ಸೇವೆ ಮಾಡುವಂತೆ ಅನುಗ್ರಹಿಸು. ನನ್ನ ಹೃದಯ ಭಕ್ತಿ, ಪ್ರೀತಿಯಿಂದ ತುಂಬಲಿ. ಓ ಪ್ರಭುವೇ, ನಿನ್ನ ಪ್ರೀತಿಯ, ಮಕ್ಕಳಿಗೆ ಯಾವುದರಿಂದ ಒಳ್ಳೆಯದಾಗುವುದೆಂದು ನೀನೇ ಬಲ್ಲೆ.”

ಪ್ರಶ್ನೆಗಳು:
  1. ನಾವು ದೇವರನ್ನು ಏಕೆ ಪ್ರೀತಿಸಬೇಕು?
  2. ತಾನು ಬೇಡಿದ್ದನ್ನು ಪಡೆದ ಮೇಲೂ ಚಮ್ಮಾರ ಶಂಭು ಏಕೆ ಸಂತೋಷವಾಗಿರಲಿಲ್ಲ?
  3. ದೇವರು ನಿಮ್ಮ ಮುಂದೆ ಪ್ರತ್ಯಕ್ಷವಾಗಿ, “ನಿನಗೇನು ಬೇಕು?” ಎಂದು ಕೇಳಿದರೆ, ನೀವು ಏನು ಬೇಡುವಿರಿ?

Narration: Ms. Shreya Pulli
[Sri Sathya Sai Balvikas Alumna]

Leave a Reply

Your email address will not be published. Required fields are marked *

error: