ಯಾರಲ್ಲಿ ಆತ್ಮವಿಶ್ವಾಸವಿದೆಯೋ, ಅವರನ್ನು ದೇವರು ಮೆಚ್ಚುವನು
ಯಾರಲ್ಲಿ ಆತ್ಮವಿಶ್ವಾಸವಿದೆಯೋ, ಅವರನ್ನು ದೇವರು ಮೆಚ್ಚುವನು
ನಮ್ಮ ‘ಧೀ’ ಶಕ್ತಿಯನ್ನು ಹರಿತಗೊಳಿಸಿದಾಗ, ಪ್ರಕೃತಿಯಲ್ಲಿರುವ ಐಕ್ಯತೆಯು ನಮ್ಮ ಅರಿವಿಗೆ ಬರುವುದು. ವೇದಗಳಲ್ಲಿ ‘ಮಹಾ ಮಂತ್ರ’ವೆಂದು ಗೌರವಿಸಲ್ಪಟ್ಟಿರುವುದು ಗಾಯತ್ರಿ ಮಂತ್ರ. ಇದು ತೇಜಸ್ಸಿನ ಮೂಲವಾದ ಸೂರ್ಯದೇವನನ್ನು, ನಮ್ಮ ‘ಧೀ’ಶಕ್ತಿಯನ್ನು ಚುರುಕುಗೊಳಿಸೆಂದು ಬೇಡುವ ಪ್ರಾರ್ಥನೆ.
ತೆನಾಲಿ ರಾಮಕೃಷ್ಣನು ಪ್ರಸಿದ್ಧ ಆಂಧ್ರ ಕವಿ, ಹಾಸ್ಯಗಾರ ಮತ್ತು ತತ್ವಜ್ಞಾನಿ. ಆತನು ಕ್ರಿ.ಶ. ಸುಮಾರು ೧೫೦೦ರಲ್ಲಿ, ವಿಜಯನಗರದ ಸುಪ್ರಸಿದ್ಧ ದೊರೆಯಾದ ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದವನು. ಅಲ್ಲಿ ತನ್ನ ಬುದ್ಧಿವಂತಿಕೆ, ಹಾಸ್ಯಪ್ರಜ್ಞೆಗಳಿಂದಾಗಿ, ಬಹಳ ಗೌರವವನ್ನು ಸಂಪಾದಿಸಿದ್ದವನು.
ಒಮ್ಮೆ, ತೆನಾಲಿ ರಾಮಕೃಷ್ಣನು ದಟ್ಟ ಅರಣ್ಯದ ಮೂಲಕ ಹಾದು ಹೋಗುತ್ತಿದ್ದಾಗ, ದಾರಿ ತಪ್ಪಿದನು. ಸರಿಯಾದ ದಾರಿಯನ್ನು ಹುಡುಕುತ್ತಾ, ಅಲೆದಾಡುತ್ತಿದ್ದಾಗ, ಅಲ್ಲೊಬ್ಬ ವಯಸ್ಸಾದ ಋಷಿಗಳು ಕುಳಿತಿರುವುದನ್ನು ಕಂಡನು. ಅವರ ಬಳಿ ಹೋಗಿ, ಅವರಿಗೆ ನಮಸ್ಕರಿಸಿ ತನ್ನ ಗೌರವವನ್ನು ಸಮರ್ಪಿಸಿದನು. ಆ ದಟ್ಟ ಅರಣ್ಯದಲ್ಲಿ ಅವರು ಹೇಗೆ ಸಿಕ್ಕಿ ಹಾಕಿಕೊಂಡರೆಂದು ಆ ಋಷಿಗಳನ್ನು ಕೇಳಿದಾಗ, ಅವರು ಹೇಳಿದರು, “ನಿನ್ನನ್ನು ಯಾವ ಒಂದು ಅಗೋಚರ, ಅದ್ಭುತ ಶಕ್ತಿಯು ಇಲ್ಲಿಗೆ ಎಳೆದು ತಂದಿತೋ, ಅದೇ ಶಕ್ತಿಯು ನನ್ನನ್ನು ಸಹ ಇಲ್ಲಿಗೆ ಎಳೆದು ತಂದಿದೆ. ನಾನು ಈ ಶರೀರವನ್ನು ತ್ಯಾಗಮಾಡಬೇಕಾದ ಘಳಿಗೆಯು ಸಮೀಪಿಸುತ್ತಿದೆ. ಇಷ್ಟು ವರ್ಷಗಳ ಕಾಲ ನನ್ನ ಶ್ರೀ ರಕ್ಷೆಯಾಗಿ, ಸಂಪತ್ತಾಗಿ ಜಪಿಸುತ್ತಿದ್ದ ಮಂತ್ರವನ್ನು ನಾನೀಗ ನಿನಗೆ ಉಪದೇಶಿಸುತ್ತೇನೆ.” ಹೀಗೆ ಹೇಳಿದ ಋಷಿಗಳು ರಾಮಕೃಷ್ಣನ ಕಿವಿಯಲ್ಲಿ, ಮಹಾ ಕಾಳಿಯ ಆ ಮಂತ್ರವನ್ನು ಉಪದೇಶಿಸಿದರು.
ಈ ಮಹಾನ್ ಉಡುಗೊರೆಯು ರಾಮಕೃಷ್ಣನಿಗೆ ಬಹು ಸಂತೋಷವನ್ನು ಕೊಟ್ಟಿತು. ಆ ದಟ್ಟ ಅರಣ್ಯದೊಳಗಿದ್ದ, ಕಾಳಿಮಾತೆಯ ದೇವಾಲಯಕ್ಕೆ ಹೋಗಿ, ಅಲ್ಲಿ ಅತ್ಯಂತ ಶ್ರದ್ಧೆಯಿಂದ, ಮಾತೆಯನ್ನು ಒಲಿಸಿಕೊಳ್ಳುವ ಆ ಮಂತ್ರವನ್ನು ಜಪಿಸುತ್ತಾ ಧ್ಯಾನಮಗ್ನನಾದನು. ಒಂದು ರಾತ್ರಿ, ಆ ಕಾಡಿನ ಆದಿವಾಸಿಗಳಾದ ಕೋಯಾ ಜನಾಂಗದವರು, ಕಾಳಿದೇವಿಗೆ ಬಲಿಕೊಟ್ಟು ಅವಳ ಕೃಪೆಗೆ ಪಾತ್ರರಾಗಬೇಕೆಂದು, ಅಲ್ಲಿಗೆ ಒಂದು ಮೇಕೆಯನ್ನು ಎಳೆದು ತಂದರು. ಕೂಡಲೇ ರಾಮಕೃಷ್ಣನು ಕಾಳಿಯ ವಿಗ್ರಹದ ಹಿಂದೆ ಹೋಗಿ, ಅಡಗಿ ಕುಳಿತನು. ಇನ್ನೇನು ಕತ್ತಿಯಿಂದ ಆ ಮೇಕೆಯ ಕತ್ತನ್ನು ಕಡಿಯಬೇಕೆನ್ನುವಷ್ಟರಲ್ಲೇ, ರಾಮಕೃಷ್ಣನು ಗಂಭೀರ ಧ್ವನಿಯಲ್ಲಿ ಮಾತನಾಡಿದನು,” ನಿಮಗೆ ಹೇಗೆ ನಾನು ತಾಯಿಯೋ, ಹಾಗೆಯೇ ನಾನು ಎಲ್ಲಾ ಜೀವಿಗಳ ತಾಯಿ. ನೀವು ಈ ನನ್ನ ಮಗುವನ್ನು ಕೊಂದಿರಾದರೆ, ನಾನು ನಿಮ್ಮನ್ನು ಶಪಿಸಬೇಕಾದೀತು,” ಎಂದು. ಕಾಳಿಮಾತೆಯೇ ಮಾತಾಡಿದಳೆಂದು ಹೆದರಿದ, ಆ ಕೋಯಾ ಜನರು ಬಲಿಯನ್ನು ನಿಲ್ಲಿಸಿ, ಅಲ್ಲಿಂದ ಹೊರಟುಹೋದರು.
ಆಗ ಕಾಳಿಮಾತೆಯು ರಾಮಕೃಷ್ಣನ ಮುಂದೆ ಪ್ರತ್ಯಕ್ಷವಾದಳು. ಆತನ ಸಾಧನೆಯಿಂದ ತನಗೆ ಮೆಚ್ಚುಗೆಯಾಗಿದೆಯೆಂದು ಹೇಳಿ, ಏನು ವರ ಬೇಕೋ ಕೇಳೆಂದು ಹೇಳಿದಳು. ಮಾತೆಯ ಒಂದು ಕೈಯಲ್ಲಿ ಮೊಸರನ್ನವಿದ್ದ ತಟ್ಟೆಯೂ, ಮತ್ತೊಂದು ಕೈಯ್ಯಲ್ಲಿ ಹಾಲು ಅನ್ನವಿದ್ದ ತಟ್ಟೆಯೂ ಇದ್ದವು. “ಇವುಗಳಲ್ಲಿ ನಿನಗೆ ಯಾವುದು ಬೇಕೋ ತೆಗೆದುಕೋ,” ಎಂದು ಮಾತೆಯು ರಾಮಕೃಷ್ಣನಿಗೆ ಹೇಳಿದಳು. ಆದರೆ, ಯಾವುದನ್ನೂ ತೆಗೆದುಕೊಳ್ಳಬೇಕೆಂದು ತೀರ್ಮಾನಿಸುವ ಮೊದಲು, ಅವುಗಳನ್ನು ತಿಂದರೆ ದೊರೆಯುವ ಫಲವೇನೆಂಬುದನ್ನು ತಿಳಿಸಲು, ರಾಮಕೃಷ್ಣನು ದೇವಿಯನ್ನು ಪ್ರ್ರಾರ್ಥಿಸಿದನು. ಆಗ ಮಾತೆಯು ಹೇಳಿದಳು, “ಮೊಸರನ್ನವನ್ನು ತೆಗೆದುಕೊಂಡಲ್ಲಿ, ಅದು ನಿನಗೆ ಅಪಾರ ಐಶ್ವರ್ಯ ಮತ್ತು ಸಂಪತ್ತುಗಳನ್ನು ಕರುಣಿಸುತ್ತದೆ. ಹಾಲು ಅನ್ನವನ್ನು ತೆಗೆದುಕೊಂಡಲ್ಲಿ, ಅದು ನಿನ್ನನ್ನು ಅತ್ಯಂತ ಶ್ರೇಷ್ಠ ವಿದ್ವಾಂಸನನ್ನಾಗಿ ಮಾಡುತ್ತದೆ. ಈಗ ಇವುಗಳಲ್ಲಿ ಯಾವುದು ಬೇಕೋ ಆರಿಸಿಕೋ,” ಎಂದು. ರಾಮಕೃಷ್ಣನು ತನ್ನೊಳಗೆ ಹೀಗೆ ಆಲೋಚಿಸಿದ, “ಅಪಾರ ಸಂಪತ್ತಿದ್ದರೂ ಬುದ್ಧಿಯಿಲ್ಲದಿದ್ದರೆ ಏನೂ ಪ್ರಯೋಜನವಾಗದು, ಅಂತೆಯೇ ಕೇವಲ ವಿದ್ವತ್ತಿನ ಮೂಲಕ, ದಿನಕ್ಕೆ ಮೂರು ಬಾರಿ ಹೊಟ್ಟೆ ತುಂಬಿಸಿಕೊಳ್ಳಲು ಆಗುವುದಿಲ್ಲ,” ಆತನು ಬಹಳ ಚತುರ. ದೇವಿಗೆ ಮತ್ತೊಂದು ಪ್ರಶ್ನೆ ಹಾಕಿದ, “ನನ್ನ ಮುಂದಿರುವ ಈ ಎರಡು ತಟ್ಟೆಗಳಲ್ಲಿ, ಯಾವುದಾದರೂ ಒಂದನ್ನು ಆರಿಸಿಕೊಳ್ಳುವ ಮೊದಲು, ಅವುಗಳ ರುಚಿಯು ಹೇಗಿರುವುದೆಂದು ತಿಳಿಸು, ತಾಯಿ!,” ಎಂದು. ಜೋರಾಗಿ ನಕ್ಕ ತಾಯಿಯು, “ಅವುಗಳ ರುಚಿಯ ನಡುವೆ ಇರುವ ವ್ಯತ್ಯಾಸವನ್ನು ನಾನು ನಿನಗೆ ಹೇಗೆ ಅರ್ಥಮಾಡಿಸಲಿ? ಅವನ್ನು ನೀನೇ ರುಚಿ ನೋಡಿ ತಿಳಿಯಬೇಕು,” ಎಂದು ಹೇಳುತ್ತಾ ಅವನ ಕೈಗೆ ಆ ಎರಡೂ ತಟ್ಟೆಗಳನ್ನು ಕೊಟ್ಟಳು.
ಚತುರ ರಾಮಕೃಷನು ಕೂಡಲೇ, ಆ ಎರಡರಲ್ಲಿದ್ದುದನ್ನೂ ತಟ್ಟನೆ ತನ್ನ ಬಾಯಲ್ಲಿ ಹಾಕಿಕೊಂಡು, ಮೊಸರು ಮತ್ತು ಹಾಲು ಅನ್ನಗಳೆರಡನ್ನೂ ಗಬಗಬನೆ (ಬೇಗ ಬೇಗ) ತಿಂದು ಮುಗಿಸಿಬಿಟ್ಟನು.
ಇದರಿಂದ ಕೋಪಗೊಂಡ ಕಾಳಿದೇವಿಯು, ಆ ಅಪರಾಧಕ್ಕೆ, ತೋರಿದ ಅಧಿಕ ಪ್ರಸಂಗಿತನಕ್ಕೆ, ಶಿಕ್ಷೆಯನ್ನು ಅನುಭವಿಸಬೇಕಾಗುವುದೆಂದು ತಿಳಿಸಿದಳು. ತನ್ನ ತಪ್ಪನ್ನು ಒಪ್ಪಿಕೊಂಡ ರಾಮಕೃಷ್ಣನು, ಅದಕ್ಕೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ದೇವಿಯನ್ನು ಪ್ರಾರ್ಥಿಸಿದನು. ಆದರೆ, ಮಗುವಿನ ವರ್ತನೆಯು ಎಷ್ಟೇ ಉದ್ಧಟತನದಿಂದ ಕೂಡಿದ್ದರೂ, ಅದಕ್ಕೆ ತಾಯಿಯು ಶಿಕ್ಷೆಯನ್ನು ನೀಡಬಲ್ಲಳೇ? ಆಕೆಯು, “ನನ್ನ ಶಾಪವು, ವರವಾಗಿ ನಿನ್ನನ್ನು ಕಾಪಾಡುತ್ತದೆ, ಹೆದರಬೇಡ. ನೀನು ಇಂದಿನಿಂದ, ‘ವಿಕಟ ಕವಿ’ ಎಂದು ಹೆಸರು ಪಡೆಯುವೆ. ಒಬ್ಬ ಚತುರ ಹಾಸ್ಯಗಾರನಾಗಿ, ಆಸ್ಥಾನದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿ, ಬಹಳ ಸಂಪತ್ತನ್ನು ಹೊಂದಿ, ನಿನ್ನ ಸಲಹೆಯನ್ನು ಕೇಳುವವರಿಗೆ ಬುದ್ಧಿವಂತಿಕೆಯ ಉತ್ತರಗಳನ್ನು ನೀಡುತ್ತಾ ಪ್ರಸಿದ್ಧನಾಗುವೆ,” ಎಂದು ಹರಸಿದಳು.
ಪ್ರಶ್ನೆಗಳು
- ಸೂಕ್ತ ಪದಗಳಿಂದ ಖಾಲಿ ಬಿಟ್ಟಿರುವ ಸ್ಥಳಗಳನ್ನು ತುಂಬಿ
- ರಾಮಕೃಷ್ಣನು ———– ದೊರೆಯ ಆಸ್ಥಾನದಲ್ಲಿದ್ದನು.
- ಅವನಿಗೆ ————– ಮಂತ್ರದ ಉಪದೇಶವು ಲಭಿಸಿತು.
- ತಾಯಿಯ ಎರಡೂ ಕೈಗಳಲ್ಲಿ, ತಟ್ಟೆಗಳಲ್ಲಿದ್ದ ಪ್ರಸಾದವು, ಭಕ್ತನಿಗೆ ————– ಮತ್ತು ——————– ನ್ನು ಕರುಣಿಸಬಲ್ಲದ್ದಾಗಿದ್ದವು.
- ರಾಮಕೃಷನು ——————– ಕರುಣಿಸೆಂದು ಕೇಳಿದನು.
- ರಾಮಕೃಷ್ಣನು —————- ಎಂದು ಪ್ರಸಿದ್ಧನಾದನು.
[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್ – 2
ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ.]