ಉತ್ತಮ ನೆರೆಯವನು

Print Friendly, PDF & Email
ಉತ್ತಮ ನೆರೆಯವನು

ನಿಮ್ಮ ಮೈ ಬಣ್ಣಕ್ಕಿಂತಲೂ ವಿಭಿನ್ನ (ಬೇರೆ ವಿಧ) ಮೈಬಣ್ಣವಿರುವ ಯಾರನ್ನಾದರೂ ನೋಡಿರುವಿರಾ? ಕೆಲವು ಪ್ರದೇಶಗಳಲ್ಲಿ, ಜನರ ಮೈಬಣ್ಣ ಕಪ್ಪು ಅಥವಾ ಕಂದು ಬಣ್ಣದ್ದಾಗಿರುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ, ಜನರು ಹುಟ್ಟಿದಾಗಿನಿಂದಲೇ ಬಹಳ ಬೆಳ್ಳಗಿರುತ್ತಾರೆ. ಇತರರ ಮೈಬಣ್ಣವು, ನಿಮ್ಮದಕ್ಕಿಂತಲೂ ಬೇರೆಯಾಗಿದ್ದರೇ, ಅದು ನಿಮ್ಮನ್ನು ಅವರಿಗಿಂತ ಉತ್ತಮ ವ್ಯಕ್ತಿಗಳನ್ನಾಗಿಸುತ್ತದೆಯೇ? ಕಪ್ಪು ವರ್ಣೀಯರಿಗಿಂತ ತಾವು ಶ್ರೇಷ್ಠ ಎಂದು ಬಿಳಿಯ ಮೈಬಣ್ಣ ಹೊಂದಿರುವವರು ಭಾವಿಸಬಹುದೇ? ಇದರ ಬಗ್ಗೆ ನಿಮಗೇನನ್ನಿಸುತ್ತದೆ?

ನಾವು ಭಗವಾನ್ ಏಸುಕ್ರಿಸ್ತನ ಉಪದೇಶವನ್ನು ಪಾಲಿಸುವುದಾದರೆ, ಪ್ರತಿಯೊಬ್ಬರನ್ನೂ ದಯೆಯಿಂದ, ಕರುಣೆಯಿಂದ ನೋಡಬೇಕಾಗುತ್ತದೆ. ವ್ಯಕ್ತಿಯು ಯಾವ ದೇಶದಿಂದ ಬಂದವನು, ಅವನ ಮೈಬಣ್ಣ ಯಾವುದು, ಇವುಗಳಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ. ನಾವು ಎಲ್ಲಾ ವಿಧದ ಜನರ ಬಗ್ಗೆಯೂ ಪ್ರೀತಿ ತೋರಿಸಬೇಕು. ಇದನ್ನೇ ಏಸುಪ್ರಭು ಹೇಳಿರುವುದು.

ಒಂದು ದಿನ, ಒಬ್ಬ ಯಹೂದ್ಯ ವ್ಯಕ್ತಿ, ಒಂದು ಕಷ್ಟಕರವೆನಿಸಿದ ಪ್ರಶ್ನೆಯನ್ನು ಯೇಸುವಿಗೆ ಹಾಕಿದ. ಅದಕ್ಕೆ ಯೇಸುವು ಉತ್ತರ ನೀಡಲು ಸಾಧ್ಯವಾಗದು ಎಂದು ಅವನ ಭಾವನೆ. ಅವನು ಕೇಳಿದ, “ನಾನು ಶಾಶ್ವತವಾಗಿ ಬದುಕಿರಬೇಕೆಂದರೆ ಏನು ಮಾಡಬೇಕು?” ಎಂದು.

ಆದರೆ, ಆ ಮಹಾನ್ ಗುರುವಿಗಾದರೋ ಅದೊಂದು ಸರಳ ಪ್ರಶ್ನೆ. ಅದನ್ನು ಉತ್ತರಿಸುವ ಬದಲಿಗೆ ಏಸು ಪ್ರಭು ಮರು ಪ್ರಶ್ನೆ ಹಾಕಿದರು,” ಅದಕ್ಕೆ ನಾವೇನು ಮಾಡಬೇಕೆಂದು ಭಗವಂತನ ಕಾನೂನು ಹೇಳುತ್ತದೆ?” ಆ ಯಹೂದ್ಯ ಹೀಗೆ ಉತ್ತರಿಸಿದ,” ನಿನ್ನ ದೇವರಾದ ಯೆಹೋವನನ್ನು ನೀನು ಹೃತ್ಪೂರ್ವಕವಾಗಿ ಪ್ರೀತಿಸು ಎಂದೂ ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ತಿಳಿದು ಪ್ರೀತಿಸು ಎಂದೂ, ದೇವರ ಕಾನೂನು ತಿಳಿಸುತ್ತದೆ.

ಏಸು ಉತ್ತರಿಸಿದರು, “ನೀನು ಹೇಳಿದ್ದು ಸರಿಯಾಗಿದೆ. ಅದರ ಪ್ರಕಾರವೇ ನಡೆದುಕೋ. ನಿನಗೆ ಶಾಶ್ವತ ಜೀವನ ಸಿಗುತ್ತದೆ.” ಆದರೆ, ಆ ವ್ಯಕ್ತಿಗಾದರೋ ಯಾರ ಬಗ್ಗೆಯೂ ಪ್ರೀತಿಯಿರಲಿಲ್ಲ. ಅವನು ಅದಕ್ಕೆ ಒಂದು ನೆಪ ಹೇಳುತ್ತಾ, ಏಸುವನ್ನು ಪುನಃ ಪ್ರಶ್ನಿಸಿದ, “ನಮ್ಮ ನೆರೆಯವರು ಎಂದರೆ ಯಾರು? ಅದನ್ನು ನೀವು ಹೇಗೆ ಅರ್ಥೈಸುವಿರಿ?

Samaritan caring the wounded Jew

ಈ ಪ್ರಶ್ನೆಗೆ, ‘ನೆರೆಯವರು ಎಂದರೆ ನಿನ್ನ ಸ್ನೇಹಿತರು,’ ಎಂದು ಏಸುವು ಉತ್ತರಿಸಬಹುದು ಎಂಬ ಭಾವನೆಯು ಆ ಯಹೂದ್ಯನಿಗಿತ್ತು.” ಹಾಗಾದರೆ ಇತರರು ನಮ್ಮ ನೆರೆಯವರಲ್ಲವೇ? ಅವರ ಬಗ್ಗೆ ಏನು ಹೇಳುವಿರಿ?” ಎಂದು ಪುನಃ ಕೇಳಬಹುದು ಎಂದು ಅವನ ಆಲೋಚನೆ. ಆದರೆ ಯೇಸುವು, ಈ ಪ್ರಶ್ನೆಗೆ ಉತ್ತರ ರೂಪವಾಗಿ, “ಒಬ್ಬ ಯಹೂದ್ಯ ಮತ್ತು ಒಬ್ಬ ಸಮರಿಟನ್” ಬಗ್ಗೆ ಕಥೆಯನ್ನು ಹೇಳತೊಡಗಿದರು.

ಆ ಕಥೆ ಹೀಗಿತ್ತು, ‘ಒಬ್ಬ ಯಹೂದ್ಯ ವ್ಯಕ್ತಿಯು, ಜೆರುಸಲೇಮ್ ನಿಂದ ಜೆರಿಕೋ ನಗರಕ್ಕೆ ಪ್ರಯಾಣ ಹೊರಟಿದ್ದ. ಮಾರ್ಗಮಧ್ಯದಲ್ಲಿ, ದರೋಡೆಕೋರರು ಅವನನ್ನು ಹಿಡಿದು, ಅವನನ್ನು ಬಹಳಷ್ಟು ಹೊಡೆದು, ಅವನ ಬಳಿಯಿದ್ದ ಹಣವನ್ನು ದೋಚಿಕೊಂಡು, ಅರೆಜೀವವಾಗಿದ್ದ ಅವನನ್ನು ರಸ್ತೆಯ ಒಂದು ಬದಿಯಲ್ಲಿ ಹಾಕಿ, ಹೊರಟು ಹೋದರು. ಸ್ವಲ್ಪ ಸಮಯದ ನಂತರ ಆ ದಾರಿಯಲ್ಲಿ ಒಬ್ಬ ಅರ್ಚಕ (priest) ಬಂದ. ಈ ಗಾಯಾಳುವನ್ನು ನೋಡಿದರೂ ಸಹ, ಅವನಿಗೆ ಏನೂ ಸಹಾಯ ಮಾಡದೇ, ರಸ್ತೆಯ ಮತ್ತೊಂದು ಪಕ್ಕದಿಂದ ಮುಂದಕ್ಕೆ ಹೊರಟುಹೋದ. ಇನ್ನು ಸ್ವಲ್ಪ ವೇಳೆಗೆ, ಆ ರಸ್ತೆಯಲ್ಲಿ ಒಬ್ಬ ಲೆವಿಟ್ ಬಂದ. ಅವನು ಜೆರುಸಲೇಮ್ ದೇವಾಲಯದಲ್ಲಿ ಅರ್ಚಕರಿಗೆ ಸಹಾಯ ಮಾಡುವ ಗುಂಪಿಗೆ ಸೇರಿದವನು, ಬಹಳ ಧಾರ್ಮಿಕ ವ್ಯಕ್ತಿ. ಅವನಾದರೂ ನಿಂತು, ಗಾಯಗೊಂಡ ಆ ಯಹೂದ್ಯನಿಗೆ ಸಹಾಯ ಮಾಡಲು ಮುಂದೆ ಬಂದನೇ? ಇಲ್ಲ. ಅವನೂ ಸಹ ಆ ಅರ್ಚಕನ ಹಾಗೆಯೇ, ಯಾವ ಸಹಾಯವನ್ನೂ ಮಾಡದೇ ಮುಂದೆ ಸಾಗಿದ. ಅವನ ಈ ವರ್ತನೆ ಸರಿಯಾಗಿತ್ತೇ?

ಕೊನೆಗೆ, ಒಬ್ಬ ಸಮರಿಟನ್ ಆ ರಸ್ತೆಯಲ್ಲಿ ಬಂದ. ಅಂದಿನ ಸಮಯದಲ್ಲಿ ಯಹೂದ್ಯರಿಗೂ ಮತ್ತು ಸಮರಿಟನ್ನರಿಗೂ ದ್ವೇಷವಿದ್ದು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಆ ಸಮರಿಟನ್ ಸಹ ಗಾಯಗೊಂಡು ನರಳುತ್ತಾ ಬಿದ್ದಿದ್ದ ಆ ಯಹೂದ್ಯನನ್ನು ನೋಡಿದ. ಇತರರು ಮಾಡಿದಂತೆ, ಅವನ ಸಹಾಯಕ್ಕೆ ಬರದೇ ಮುಂದೆ ಸಾಗಿದನೇ? ‘ಈ ಯಹೂದ್ಯನಿಗೆ ನಾನೇಕೆ ಸಹಾಯ ಮಾಡಬೇಕು? ನಾನೇ ಒಂದು ವೇಳೆ ಈ ಸ್ಥಿತಿಯಲ್ಲಿದ್ದಿದ್ದರೇ ನನಗೆ ಇವನು ಸಹಾಯ ಮಾಡುತ್ತಿದ್ದನೇ’? ಎಂದೆಲ್ಲ ಯೋಚಿಸಿದನೇ?

ಆದರೆ ಈ ಸಮರಿಟನ್ ಒಬ್ಬ ದಯಾಳು. ಗಾಯಗೊಂಡು ನರಳುತ್ತಿದ್ದ ಅವನನ್ನು ನೋಡಿ, ಬಹಳ ಕನಿಕರವೆನ್ನಿಸಿತು. ಅವನನ್ನು ಅಲ್ಲಿಯೇ ಸಾಯಲು ಬಿಟ್ಟು, ಹೊರಟುಹೋಗಲು ಅವನ ಮನಸ್ಸು ಒಪ್ಪಲಿಲ್ಲ.

ಅವನು ತಾನು ಏರಿ ಬಂದಿದ್ದ ಪ್ರಾಣಿಯಿಂದ ಇಳಿದು, ಆ ಗಾಯಾಳುವಿನ ಬಳಿ ಬಂದ. ಅವನ ಗಾಯಗಳನ್ನು ಒರೆಸಿ, ಅವುಗಳ ಮೇಲೆ, ಬೇಗ ಗುಣಪಡಿಸುವಂತಹ ಎಣ್ಣೆ ಮತ್ತು ಮದ್ಯವನ್ನು ಸವರಿ, ಪಟ್ಟಿ ಹಾಕಿದ. ನಂತರ, ಅವನನ್ನು ಜಾಗರೂಕತೆಯಿಂದ ಮೇಲೆತ್ತಿ, ತನ್ನ ಪ್ರಾಣಿಯ ಮೇಲೆ ಕೂಡಿಸಿಕೊಂಡು, ನಿಧಾನವಾಗಿ ಮುಂದೆ ನಡೆದ. ಆ ದಾರಿಯಲ್ಲಿ ಕಂಡು ಬಂದ ಒಂದು ಸಣ್ಣ ಹೋಟೆಲ್ ನಲ್ಲಿ, ಅವನಿಗೆ ತಂಗಲು ಒಂದು ಕೊಠಡಿಯನ್ನು ಏರ್ಪಾಟು ಮಾಡಿ, ಅವನಿಗೆ ಒಳ್ಳೆಯ ಆರೈಕೆ ಮಾಡಿದ.’

ಈ ಹಂತದಲ್ಲಿ, ಯೇಸುವು ತನ್ನನ್ನು ಪ್ರಶ್ನಿಸಿದ್ದ ಯಹೂದ್ಯನನ್ನು ಕುರಿತು ಹೀಗೆ ಕೇಳಿದರು, “ಈ ಮೂವರಲ್ಲಿ ಉತ್ತಮ ನೆರೆಯವರು ಯಾರು? ಅರ್ಚಕನೇ? ಲೆವಿಟ್ ನೇ ಅಥವಾ ಸಮರಿಟನ್ನನೆ? ನಿನ್ನ ಉತ್ತರವೇನು?” ಎಂದು. ಯಹೂದ್ಯ ಉತ್ತರಿಸಿದ, “ಸಮರಿಟನ್ನನೇ ಉತ್ತಮ ನೆರೆಯವನು, ಏಕೆಂದರೆ, ಅವನೇ ಗಾಯಗೊಂಡಿದ್ದ ವ್ಯಕ್ತಿಗೆ ಆರೈಕೆ ಮಾಡಿದವನು.”

ಆಗ, ಏಸುಪ್ರಭು ನುಡಿದರು, “ನೀನು ಹೇಳಿದುದು ಸರಿಯಾಗಿದೆ. ನೀನೂ ಸಹ ಮುಂದೆ ಅದೇ ರೀತಿಯಲ್ಲೇ ನಡೆದುಕೋ,” ಎಂದು.

ನಿಜ ಅರ್ಥದಲ್ಲಿ, ನಮ್ಮ ನೆರೆಯವರು ಎಂದರೆ ಯಾರು? ಎಂಬುದನ್ನು ತಿಳಿಸುವ ಇದು ಒಂದು ಸುಂದರ ನೀತಿ ಕಥೆಯಲ್ಲವೇ? ‘ನೆರೆಯವರು’ ಎಂದಾಗ, ಅದು ನಮ್ಮ ಆಪ್ತ ಸ್ನೇಹಿತರು ಮಾತ್ರವಲ್ಲ, ನಮ್ಮ ದೇಶದವರು ಅಥವಾ ನಮ್ಮದೇ ರೀತಿಯ ಮೈಬಣ್ಣ ಹೊಂದಿರುವವರು ಮಾತ್ರವೇ ಅಲ್ಲ, ಎಲ್ಲ ಜನರು ನಮ್ಮ ನೆರೆಯವರೇ. ನೀವು ಈರೀತಿ ಗಾಯಗೊಂಡಿರುವವರನ್ನು ಕಂಡರೆ ಏನು ಮಾಡುವಿರಿ? ಅವನು ನಿಮ್ಮ ದೇಶದವನಲ್ಲದಿದ್ದರೂ, ನಿಮಗಿಂತ ವಿಭಿನ್ನ ಮೈಬಣ್ಣವನ್ನು ಹೊಂದಿದ್ದರೂ ಏನಂತೆ? ಅವನೂ ಸಹ ನಿಮ್ಮ ನೆರೆಯವನೇ. ಅವನಿಗೆ ಸಹಾಯಮಾಡಿ. ಅವನಿಗೆ ನೆರವಾಗಲು ನೀವು ತೀರ ಸಣ್ಣವರಿದ್ದರೆ, ನಿಮ್ಮ ಗುರುಗಳಿಗೋ, ಶಾಲಾ ಶಿಕ್ಷಕರು ಅಥವಾ ಪೊಲೀಸರಿಗೋ ವಿಷಯ ತಿಳಿಸಿ. ಇದೆ ‘ಸಮರಿಟನ್’ ವ್ಯಕ್ತಿಯ ನಡವಳಿಕೆ.

ಮಹಾನ್ ಬೋಧಕ ನಮ್ಮಿಂದ ಅಪೇಕ್ಷಿಸುವುದು ಇದನ್ನೇ. ಯಾರೇ ಆಗಿರಲೀ, ತೊಂದರೆಯಲ್ಲಿರುವವರಿಗೆ ಸಹಾಯ ಮಾಡಿ. ಆದುದರಿಂದಲೇ, ಎಸು ಪ್ರಭುವು,’ ಉತ್ತಮ ನೆರೆ’ ಎಂದರೆ ಯಾರು ಎಂದು ತಿಳಿಸುವ ಈ ಕಥೆಯನ್ನು ಹೇಳಿರುವುದು.

ಪ್ರಶ್ನೆಗಳು

೧. ಯಹೂದ್ಯನು ಏಸುವನ್ನು ಕೇಳಿದ ಪ್ರಶ್ನೆಯೇನು?
೨. ದೇವರ ಕಾನೂನು ಏನು ಹೇಳುತ್ತದೆ ?
೩. ಪ್ರಯಾಣ ಮಾಡುತ್ತಿದ್ದ ಯಹೂದ್ಯನಿಗೆ ಏನಾಯಿತು?
೪. ಅರ್ಚಕನ (priest) ವರ್ತನೆ ಸರಿಯೆನ್ನಿಸುವುದೇ? ‘ಲೆವಿಟ್’ನು ಮಾಡಿದುದು ಸರಿಯಾಗಿತ್ತೇ?
೫. ‘ಉತ್ತಮ ನೆರೆ’ ಎಂದರೆ ಯಾರು?
೬. ಅವನನ್ನು ‘ಉತ್ತಮ ನೆರೆಯವನು’ ಎಂದು ತಿಳಿಯಲು ಕಾರಣವೇನು?

ಮೂಲ :- ಮಕ್ಕಳಿಗಾಗಿ ಕಥೆಗಳು – ೨
ಶ್ರೀ ಸತ್ಯಸಾಯಿ ಪುಸ್ತಕ ಪ್ರಕಾಶನ, ಪ್ರಶಾಂತಿ ನಿಲಯಂ

Leave a Reply

Your email address will not be published. Required fields are marked *