ಒಳ್ಳೆಯ ನಾಲಿಗೆ ಮತ್ತು ಕೆಟ್ಟ ನಾಲಿಗೆ

Print Friendly, PDF & Email
ಒಳ್ಳೆಯ ನಾಲಿಗೆ ಮತ್ತು ಕೆಟ್ಟ ನಾಲಿಗೆ

ಒಬ್ಬ ರಾಜನಿದ್ದನು. ಒಮ್ಮೆ ಅವನು ತನ್ನ ಪ್ರತಿಯೊಬ್ಬ ಪ್ರಜೆಯೂ ಬುದ್ಧಿವಂತನೂ, ಸುಖಿಯೂ, ಆಗುವುದು ಹೇಗೆ ಎಂದು ತಿಳಿದುಕೊಳ್ಳಬಯಸಿದನು. ಅದಕ್ಕಾಗಿ ಒಂದು ಪ್ರದರ್ಶನವನ್ನು ಏರ್ಪಡಿಸಿ ತನ್ನ ರಾಜ್ಯದ ಎಲ್ಲ ಬುದ್ಧಿವಂತರಿಗೂ ಹೇಳಿ ಕಳಿಸಿದನು. ಮನುಷ್ಯ ಜೀವನಕ್ಕೆ ಆನಂದವನ್ನು ತರುವಂತಹ ವಸ್ತುಗಳನ್ನು ಆ ಪ್ರದರ್ಶನದಲ್ಲಿ ಇಡಲು ಸಹಾಯ ಮಾಡಬೇಕೆಂದು ಅವರನ್ನು ಕೋರಿದನು. ಒಂದು ದಿನ ತಾನೇ ಆ ಪ್ರದರ್ಶನವನ್ನು ನೋಡಲು ಬಂದನು. ಅಲ್ಲಿ ಮಾನವನಿಗೆ ಸುಖವನ್ನುಂಟು ಮಾಡುವ ವಸ್ತುಗಳ ಸಾಲು ಸಾಲೇ ಪ್ರದರ್ಶಿತವಾಗಿದ್ದಿತು. ಹೂವು, ಹಣ್ಣು, ಮಿಠಾಯಿಗಳು, ಬಟ್ಟೆಬರೆ, ಪುಸ್ತಕ, ಅಲಂಕಾರ ಸಸ್ಯಗಳು, ಸಂಗೀತವಾದ್ಯಗಳು, ಬಂಗಾರದ ಆಭರಣಗಳು, ಆಸಂಖ್ಯಾತ ಕಲಾ ವಸ್ತುಗಳು ಇತ್ಯಾದಿ ಇದ್ದುವು. ಇವು ಯಾವುವೂ ಪ್ರತಿಯೊಬ್ಬ ಮಾನವನನ್ನೂ ಸುಖಿಯನ್ನಾಗಿ ಮಾಡುತ್ತವೆಂದು ರಾಜನಿಗೆ ಆನ್ನಿಸಲಿಲ್ಲ. ಕೊನೆಗೆ ಮಣ್ಣಿನಿಂದ ತಯಾರಿಸಿ ಬಣ್ಣ ಹಾಕಿದ್ದ ಒಂದು ಮಾದರಿಯ ಬಳಿಗೆ ಬಂದನು. ಅದೊಂದು ಮನುಷ್ಯನ ಮುಖ, ನಾಲಗೆಯನ್ನು ಹೊರ ತೆರೆದಿತ್ತು. ಎದುರಿಗಿದ್ದ ಬಡ ಸಣಕಲು ವ್ಯಕ್ತಿಯೊಬ್ಬನೊಂದಿಗೆ ಮಾತಾನಾಡುತ್ತಿರುವಂತೆ ತೋರುತ್ತಿತ್ತು. ಅದರ ಕೆಳಗೆ “ಒಳ್ಳೆಯ ನಾಲಗೆ” ಎಂದು ಬರೆದಿತ್ತು.

King notices GOOD TONGUE model

ಅದನ್ನು ತಯಾರಿಸಿದ ಶಿಲ್ಪಿಗೆ ರಾಜನು ಹೇಳಿ ಕಳಿಸಿದನು. ಆ ಮಾದರಿ ಶಿಲ್ಪವನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆಂದು ಅವನಿಗೆ ಇಷ್ಟವಾಗಿತ್ತು. ಶಿಲ್ಪಿ ಹೇಳಿದನು. “ಮಹಾ ಪ್ರಭು ಈ ಪ್ರದರ್ಶನದಲ್ಲಿ ಇರಿಸಿರುವ ಇತರ ವಸ್ತುಗಳು ಮನುಷ್ಯನಿಗೆ ಸ್ವಲ್ಪ ಕಾಲ ಮಾತ್ರ ಸುಖ ನೀಡುತ್ತವೆ. ಆದರೆ ಪ್ರೇಮ ಸಹಾನುಭೂತಿಗಳನ್ನೂ ದುಬ೵ಲರಿಗೆ ಹೊಸ ಜೀವ ಚೈತನ್ಯವನ್ನೂ ಒದಗಿಸುತ್ತದೆ. ಎಲ್ಲ ಜನರನ್ನೂ ಎಲ್ಲ ಕಾಲದಲ್ಲಿಯೂ ಸುಖಿಗಳನ್ನಾಗಿಸುವುದಕ್ಕೆ ಒಳ್ಳೆಯ ನಾಲಗೆಯು ಮಾತ್ರವೇ ಸಮರ್ಥವಾಗಿದೆ.”

ಶಿಲ್ಪಿಯ ಮಾತುಗಳಿಂದ ರಾಜನಿಗೆ ಅತ್ಯಂತ ಸಂತೋಷವಾಯಿತು. ತೃಪ್ತಿಯಾಯಿತು. ಬಂಗಾರ ನಾಣ್ಯಗಳಿಂದ ತುಂಬಿದ ಚಿನ್ನದ ಸಂಪುಟವನ್ನು ಅವನಿಗೆ ಬಹುಮಾನವಾಗಿ ಕೊಟ್ಟು ಸನ್ಮಾನಿಸಿದನು.

King notices BAD TONGUE model

ಕೆಲವು ದಿನಗಳ ನಂತರ ಆ ರಾಜನಿಗೆ ಪ್ರತಿಯೊಬ್ಬ ಮನುಷ್ಯನನ್ನು ದುಃಖಿಯನ್ನಾಗಿಸುವುದು ಯಾವುದು ಎಂದು ತಿಳಿಯಲು ಇಚ್ಛೆಯಾಯಿತು. ಹಿಂದಿನಂತೆಯೇ ಅವನು ಇನ್ನೊಂದು ಪ್ರದರ್ಶನವನ್ನು ಏರ್ಪಡಿಸಿದನು. ನಾಡಿನ ಬುದ್ದಿವಂತರು, ವಿದ್ವಾಂಸರು ಬಂದು ಬಗೆಬಗೆಯಾದ ವಸ್ತುಗಳಿಂದ ಆ ಪ್ರದರ್ಶನವನ್ನು ಸಜ್ಜುಗೊಳಿಸಿದರು. ಬಡಿಗೆ, ಬಾರುಕೋಲು, ಕತ್ತಿ, ಮುಳ್ಳಿನ ಕಂಟಿ, ಕಹಿಹಣ್ಣು, ಮದ್ಯ, ವಿಷ, ಬೊಗಳುವ ನಾಯಿ, ಕಾಗೆ ಇತ್ಯಾದಿ ಸಾವಿರಾರು ವಸ್ತುಗಳನ್ನು ಅಲ್ಲಿ ತುಂಬಲಾಗಿತ್ತು. ರಾಜನ ಪ್ರಶ್ನೆಗೆ ಇದು ಯಾವುದು ಸರಿಯಾದ ಉತ್ತರ ಕೊಡಲಿಲ್ಲ. ಕೊನೆಗೆ ಹಿಂದಿನ ಪ್ರದರ್ಶನದಲ್ಲಿ ಮಾದರಿಯನ್ನಿಟ್ಟಿದ್ದ ಹಾಗೆಯೇ ಇಲ್ಲಿಯೂ ಒಂದು ಮಾದರಿಯಿದ್ದುದನ್ನು ನೋಡಿ ಅದರ ಬಳಿಗೆ ರಾಜನು ಬಂದನು. ಇದೂ ಒಂದು ಮುಖ. ದೊಡ್ಡದಾದ ಕೆಂಪನೆಯ ಬಿರುಗಣ್ಣುಗಳು, ಕರಿಯ ಬಣ್ಣದ ನಾಲಗೆ ಹೊರ ಚಾಚಿತ್ತು. ಎದುರಿಗಿರುವ ಹಸಿದು ಕಂಗಾಲಾದ ಬಡ ಮುದುಕನನ್ನು ಬಯ್ಯುತ್ತಿರುವಂತೆ ಅನ್ನಿಸುತ್ತಿತ್ತು. ಅದರ ಕೆಳಗೆ “ಕೆಟ್ಟ ನಾಲಗೆ” ಎಂದು ಬರೆದಿತ್ತು. ರಾಜನು ಅದನ್ನು ಸಿದ್ದಪಡಿಸಿದ ಶಿಲ್ಪಿಗೆ ಹೇಳಿ ಕಳಿಸಿದನು.

ಶಿಲ್ಪಿಯು ತನ್ನ ಕೃತಿಯನ್ನು ವಿವರಿಸಿದನು. “ಮಹಾಪ್ರಭು ಕೆಟ್ಟ ನಾಲಗೆಯು ಪರರ ಸುಖ ಸಂತೋಷಗಳನ್ನು ಹಾಳು ಮಾಡಬಲ್ಲದು. ಅವರ ಧೈರ್ಯ ವಿಶ್ವಾಸಗಳನ್ನು ನಾಶಪಡಿಸಬಲ್ಲದು. ಅವರನ್ನು ದುಃಖ ಸಾಗರದಲ್ಲಿ ಮುಳಗಿಸಬಲ್ಲುದು. ಇಂಥ ನಾಲಗೆಯಿಂದ ಪರರ ಹೃದಯಗಳಿಗಾಗುವ ನೋವು ಎಷ್ಟು ವರ್ಷವಾದರೂ ಮಾಯುವುದಿಲ್ಲ. ಕೆಟ್ಟ ನಾಲಗೆಯೇ ಮಾನವನ ಅತಿ ಕೆಟ್ಟ ಶತ್ರು.” ರಾಜನು ಈ ವಿವರಣೆಯಿಂದ ಸಂತುಷ್ಟನಾದನು. ಶಿಲ್ಪಿಗೆ ವಜ್ರ ವೈಡೂರ್ಯಗಳಿಂದ ತುಂಬಿದ ಬಂಗಾರದ ಸಂಪುಟವನ್ನು ಬಹುಮಾನವಾಗಿತ್ತು ಹೇಳಿದನು. “ಈ ವಜ್ರ ರತ್ನ ಬಂಗಾರದ ಸಂಪುಟಗಳೆಲ್ಲ ಸೇರಿದರೂ ನಿನ್ನ ಎರಡು ಮಣ್ಣಿನ ಪ್ರತಿಮೆಗಳ ಬೆಲೆಗೆ ಸರಿದೂಗುವುದಿಲ್ಲ. ಒಳ್ಳೆಯ ನಾಲಗೆಯೇ ಪ್ರತಿಯೊಬ್ಬನ ಅತ್ಯುತ್ತಮ ಮಿತ್ರ, ಸಮಸ್ತರ ಸುಖದ ಸರಳ ಹಾದಿಯೂ ಅದೇ.

ಪ್ರಶ್ನೆಗಳು:
  1. ಒಳ್ಳಯ ನಾಲಿಗೆ ಹೊಂದಿರುವ ಮನುಷ್ಯನನ್ನು ವಣಿ೵ಸಿರಿ. ಅವನು ಹೇಗೆ ಎಲ್ಲರನ್ನೂ ಸಂತೋಷಪಡಿಸಬಲ್ಲನು?
  2. ಕೆಟ್ಟ ನಾಲಿಗೆ ಹೊಂದಿರುವ ಮನುಷ್ಯನನ್ನು ವಣಿ೵ಸಿರಿ. ಅವನು ಹೇಗೆ ಎಲ್ಲರನ್ನೂ ನೋಯಿಸಬಲ್ಲನು?
  3. ಒಳ್ಳೆಯ ನಾಲಿಗೆ ಹೊಂದಿರುವ ಮನುಷ್ಯನೊಬ್ಬ ಬೇರೆಯವರನ್ನು ಸಂತೋಷಪಡಿಸಿದ ಹಾಗೂ ಕೆಟ್ಟ ನಾಲಿಗೆ ಹೊಂದಿರುವ ಮನುಷ್ಯನೊಬ್ಬ ಬೇರೆಯವರನ್ನು ನೋಯಿಸಿದ ಉದಾಹರಣೆ ಕೊಡಿ.
  4. ನೀವು ಯಾವಾಗಲೂ ಒಳ್ಳೆಯ ನಾಲಿಗೆ ಹೊಂದಿರುತ್ತೀರಾ? ಇಲ್ಲವಾದರೆ. ಏಕೆ? ಯಾವಾಗಲೂ ಒಳ್ಳೆಯ ನಾಲಿಗೆ ಹೊಂದಲು ಏನು ಮಾಡಬೇಕು ಎಂದು ನಿಮಗನ್ನಿಸುತ್ತದೆ?

Leave a Reply

Your email address will not be published. Required fields are marked *