ಗುಣಗಳು ಮತ್ತು ತ್ರಿಮೂರ್ತಿಗಳು
ಗುಣಗಳು ಮತ್ತು ತ್ರಿಮೂರ್ತಿಗಳು
ಗುರುರ್ಬ್ರಹ್ಮ ಸಂಬಂಧಿಸಿದ ಉಪನ್ಯಾಸಗಳು:
- ಗುರುರ್ಬ್ರಹ್ಮ ಗುರುರ್ವಿಷ್ಣು
- ಗುರುರ್ದೇವೋ ಮಹೇಶ್ವರಃ
- ಗುರುರ್ಸಾಕ್ಷಾತ್ ಪರಬ್ರಹ್ಮ
- ತಸ್ಮೈ ಶ್ರೀ ಗುರವೇ ನಮಃ||
“ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರನು. ಗುರುವನ್ನು ನಿಮ್ಮ ಸರ್ವಸ್ವವನ್ನಾಗಿ ಪರಿಗಣಿಸಿ. ಎಲ್ಲರೂ ದಿವ್ಯ ಸ್ವರೂಪರು. ವಾಸ್ತವವಾಗಿ ನೀವು ನೋಡುವುದೆಲ್ಲವೂ ಸಹ ದಿವ್ಯ ಬ್ರಹ್ಮಾಂಡದ ರೂಪವಾಗಿದೆ (ವಿಶ್ವ ವಿರಾಟ್ ಸ್ವರೂಪ).”
‘ಗುರು’ ಎಂಬ ಪದವು ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವಂಥಾದ್ದು ಎಂಬ ಅರ್ಥವನ್ನು ನೀಡುತ್ತದೆ. ‘ಗು’ ಎಂದರೆ ಗುಣಾತೀತನು, ‘ರು’ ಎಂದರೆ ರೂಪಗಳಿಗೆ ಅತೀತನಾದವನು. ಇದು ಕೇವಲ ದೇವರಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದಲೇ ಗುರುವನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ (ಹಿಂದೂ ನಂಬಿಕೆಯ ದಿವ್ಯ ತ್ರಿಮೂರ್ತಿಗಳು) ಎಂದು ವಂದಿಸಲಾಗುತ್ತದೆ. ಕೇವಲ ದೇವರು ಮಾತ್ರ ನಿಜವಾದ ಗುರುವು. ಉಳಿದವರೆಲ್ಲರೂ ಕಾಲೇಜಿನ ಬೇರೆಬೇರೆ ವಿಷಯಗಳ ಬೋಧಕರಂತೆ ಶಿಕ್ಷಕರು. ಶಿಷ್ಯನಿಗೆ ಗುರಿಯನ್ನು ಸ್ಪಷ್ಟವಾಗಿ ತೋರಿಸುವವನೇ ಗುರು. ಇಲ್ಲಿ ಗುರಿಯು ಆತ್ಮತತ್ವವನ್ನು ಸೂಚಿಸುತ್ತದೆ.
[ಶ್ರೀ ಸತ್ಯಸಾಯಿ ಬಾಬಾರವರ ದಿವ್ಯೋಪನ್ಯಾಸ: ೨೦ ಜುಲೈ ೧೯೯೭].
ಗುರುವೇ ಬ್ರಹ್ಮ. ಅವನು ಸೃಷ್ಟಿಕರ್ತನು. ಸ್ವಯಂ ಅವನೇ ಸೃಷ್ಟಿಯು ಮತ್ತು ಸೃಷ್ಟಿಯಲ್ಲಿ ಉಪಸ್ಥಿತವಾಗಿರುವವನು ಅವನೇ. ವಿಶ್ವವು ಬ್ರಹ್ಮನ್‌ನಿಂದ ತುಂಬಿದೆ. ಯಾರು ಸ್ವಯಂ ತಾನೇ ವಿಶ್ವವಾಗಿದ್ದಾನೋ ಅವನೇ ಗುರು ಎಂಬುದು ಸ್ಪಷ್ಟವಾಗುತ್ತದೆ.
ಗುರುವೇ ವಿಷ್ಣು. ವಿಷ್ಣು ಯಾರು? ವ್ಯಾಪಕತ್ವದ ಗುಣವನ್ನು ಹೊಂದಿರುವವನು ವಿಷ್ಣು. ಅವನು ನಿರ್ಮಿಸುವವನು ಮತ್ತು ನಿರ್ನಿಸಲ್ಪಟ್ಟದ್ದೂ ಸಹ ಅವನೇ. ವಿಶ್ವವೇ ಕ್ರಿಯೆ ಮತ್ತು ದೇವರೇ ಕರ್ತೃವು, ಕಾರಣ ಮತ್ತು ಪರಿಣಾಮಗಳ ಹಿನ್ನೆಲೆಯಲ್ಲಿರುವ ಪ್ರಜ್ಞೆಯೇ ದೇವರು. ಸಂಪೂರ್ಣ ವಿಶ್ವವೇ ವಿಷ್ಣುವಿನ ರೂಪವಾಗಿದೆ. ಈ ವಿಷ್ಣುವೇ ಗುರು. ಗುರುವೇ ಮಹೇಶ್ವರ. ಮಹೇಶ್ವರ ಯಾರು? ಈ ವಿಶ್ವದ ಸಕಲ ಜೀವಿಗಳನ್ನೂ ಆಳುವವನು. ಅವನು ಆಜ್ಞಾಪಿಸುತ್ತಾನೆ ಮತ್ತು ವಿಶ್ವದ ಪ್ರತಿಯೊಂದೂ ಸರಿಯಾದ ರೀತಿಯಲ್ಲಿರುವಂತೆ ನಿಯಂತ್ರಿಸುತ್ತಾನೆ. ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಅವನ ಅನುಜ್ಞೆಯಂತೆ ನಡೆಯುತ್ತವೆ. ಋತುಗಳು, ಮಳೆ, ಹಗಲು ಮತ್ತು ರಾತ್ರಿ ಎಲ್ಲವೂ ಅವನ ಸಂಕಲ್ಪಗಳು. ಪ್ರತಿಯೊಂದನ್ನೂ ಯಾವುದೇ ನ್ಯೂನ್ಯತೆಯಿಲ್ಲದೆ ತನ್ನ ನಿಯತಿಗನುಗುಣವಾಗಿ ನಡೆಯುವಂತೆ ಮಾಡುವವನೇ ಈಶ್ವರ. ಕೇವಲ ಬೋಧಿಸುವವನು ಗುರುವಲ್ಲ. ಗುರುವು ಸರ್ವಶಕ್ತ, ಸರ್ವಜ್ಞ ಮತ್ತು ಸರ್ವಾಂತರ್ಯಾಮಿ. ಅವನೇ ಸ್ವಯಂ ದೇವರು. ಗುರುಪೂರ್ಣಿಮೆ ಎಂದರೆ, ಯಾವುದೇ ದೋಷ ಅಥವಾ ಕಲೆಗಳಿಲ್ಲದ ಪೂರ್ಣಚಂದ್ರ ಎಂದು ಅರ್ಥ. ಚಂದ್ರನೇ ಮನಸ್ಸು. ಮನಸ್ಸು ಸಂಪೂರ್ಣವಾಗಿ ಸಮರ್ಪಕವಾಗಿದ್ದಾಗ, ಅದು ಬೆಳಕನ್ನು ಚೆಲ್ಲುತ್ತದೆ. ಗುರುಪೂರ್ಣಿಮೆಯ ಆಚರಣೆ ಎಂದರೆ ಗುರುವಿಗೆ ಪ್ರದಕ್ಷಿಣೆ ಬಂದು ಕಾಣಿಕೆಗಳನ್ನು ಅರ್ಪಿಸುವುದಲ್ಲ. ನಿಜವಾದ ಅರ್ಪಣೆ ಯಾವುದು? ತನ್ನನ್ನು ಮತ್ತು ತನ್ನ ಪ್ರೇಮವನ್ನು ಅರ್ಪಿಸುವುದು. ದೇವರು ಎಲ್ಲ ಕಡೆ ಇದ್ದಾನೆಂದು ತಿಳಿಯುವುದೇ ಪ್ರದಕ್ಷಿಣೆ. ಈ ಪದಗಳನ್ನು ನೀವು ಅರ್ಥ ಮಾಡಿಕೊಂಡರೆ ಪ್ರತಿ ದಿನವೂ ಗುರುಪೂರ್ಣಿಮೆಯೇ. ಇರುವವನೊಬ್ಬನೇ ಗುರು. ಅವನೇ ದೇವರು. ಅನ್ಯ ಗುರುವಿಲ್ಲ. ಆ ಗುರುವನ್ನು ಧ್ಯಾನ ಮಾಡಿ.
ಶ್ರೀ ಸತ್ಯಸಾಯಿ ಬಾಬಾ [ದಿವ್ಯೋಪನ್ಯಾಸ;೧೪ಜುಲೈ೧೯೯೨].
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಸ್ವರೂಪಗಳಿಂದ ಕೂಡಿದ ಶಕ್ತಿಗಳಲ್ಲ. ಮೂರ್ತಿತ್ರಯವು ಮೂರುಗುಣಗಳ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಪುರಾಣಗಳು ಬ್ರಹ್ಮನನ್ನು ವಿಶ್ವ ಸೃಷ್ಟಿಯಲ್ಲಿ ತೊಡಗಿಕೊಂಡಿರುವ ನಾಲ್ಕು ತಲೆಗಳ ದೇವತೆಯೆಂದು ತಪ್ಪಾಗಿ ಪ್ರತಿನಿಧಿಸಿವೆ, ಇದು ಸರಿಯಲ್ಲ. ವಾಸ್ತವವಾಗಿ ತ್ರಿಮೂರ್ತಿಯು ಮೂರು ಗುಣಗಳನ್ನು ಪ್ರತಿನಿಧಿಸುತ್ತದೆ.
ಪ್ರಕೃತಿಯಲ್ಲಿ ಭೂಮಿ, ಆಪ್, ಅಗ್ನಿ, ವಾಯು ಮತ್ತು ಆಕಾಶ (ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ) ಎಂಬ ಐದು ಮೂಲಭೂತ ಶಕ್ತಿಗಳಿವೆ. ಸೃಷ್ಟಿಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ನೀವು ಬಯಸುವುದಾದರೆ, ಈ ಪಂಚಭೂತಗಳನ್ನು ವಿವರಿಸುವ ಕ್ರಮವನ್ನು ವಿರುದ್ಧ ರೀತಿಯಲ್ಲಿ ಮಾಡಬೇಕು. ಆಗ ಇದು ಆಕಾಶದಿಂದ ಪ್ರಾರಂಭಿಸಿ ಕ್ರಮವಾಗಿ ವಾಯು, ಅಗ್ನಿ, ನೀರು ಮತ್ತು ಭೂಮಿ ಆಗುತ್ತದೆ. ಪ್ರಕೃತಿಯನ್ನು ಎರಡು ವಿಧಗಳಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಮೊದಲನೆಯದು ಸೃಷ್ಟಿ ಪ್ರಕ್ರಿಯೆಗೆ ಸಂಬಂಧಿಸಿದಂತೆ; ಇನ್ನೊಂದು ದಿನನಿತ್ಯದ ಅನುಭವಕ್ಕೆ ಸಂಬಂಧಿಸಿದಂತೆ. ಅದೇ ರೀತಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಕ್ರಮವನ್ನು ಸೃಷ್ಟಿಗೆ ಸಂಬಂಧಿಸಿದಂತೆ ಗಮನಿಸಿದಾಗ, ಅದನ್ನು ವಿರುದ್ಧ ರೀತಿಯಲ್ಲಿ ಪರಿಗಣಿಸಬೇಕು. ಆಗ ಈಶ್ವರ, ವಿಷ್ಣು ಮತ್ತು ಬ್ರಹ್ಮ ಎಂದಾಗುತ್ತದೆ.
ಮೊದಲಿಗೆ ಈಶ್ವರ ತತ್ವವು ಏನನ್ನು ಸಂಕೇತಿಸುತ್ತದೆ? ಗೀತೆ ಘೋಷಿಸುತ್ತದೆ:
‘ಈಶ್ವರ ಸರ್ವಭೂತಾನಾಂ ಹೃದ್ದೇಶೇ ಅರ್ಜುನತಿಷ್ಠತಿ’ ಎಂದು ಗೀತೆಯು ಸಾರಿದೆ. (ಓ ಅರ್ಜುನಾ, ಎಲ್ಲ ಜೀವಿಗಳ ಹೃದಯದಲ್ಲಿ ಈಶ್ವರನು ವಾಸಿಸುತ್ತಾನೆ.) ಆದ್ದರಿಂದ ಈಶ್ವರ ಎಂದರೆ ಹೃದಯದ ಅಧಿಪತಿ. ಅವನು ಪ್ರತಿಯೊಂದು ಜೀವಿಯ ಹೃದಯವನ್ನು ಬೆಳಗುತ್ತಾನೆ. ಈಶ್ವರನ ದಿವ್ಯಶಕ್ತಿಯು ಪ್ರತಿಯೊಂದು ಹೃದಯದಲ್ಲಿದೆ ಎಂದು ಇದರಿಂದ ತಿಳಿಯುತ್ತದೆ. ಹೃದಯದ ಪ್ರಭುವಾದ ಈಶ್ವರನಿಗಿರುವ ಇನ್ನೊಂದು ಹೆಸರು ಆತ್ಮ.
ಹೃದಯದಿಂದ ಮನಸ್ಸು ಹೊರಹೊಮ್ಮಿದೆ. ಮನಸ್ಸು ವಿಷ್ಣುತತ್ವಕ್ಕೆ ಸಂಬಂಧಿಸಿದೆ. ವಿಷ್ಣು ಎಂದರೆ ಎಲ್ಲ ಕಡೆ ವ್ಯಾಪಿಸಿರುವವನು. ಮನಸ್ಸೂ ಸಹ ಹಾಗೆಯೇ ಸರ್ವವ್ಯಾಪಿಯು. ‘ಮನೋಮೂಲಂ ಇದಂ ಜಗತ್’ (ಈ ಜಗತ್ತಿನ ಮೂಲ ಮನಸ್ಸು). ಮನಸ್ಸು ಇಡೀ ವಿಶ್ವವನ್ನು ವ್ಯಾಪಿಸುತ್ತದೆ. ಆದ್ದರಿಂದ ಅದು ವಿಷ್ಣುತತ್ವವನ್ನು ಸಂಕೇತಿಸುತ್ತದೆ.
ಬ್ರಹ್ಮನನ್ನು ವಿಷ್ಣುವಿನ ನಾಭಿಯಿಂದ ಉದ್ಭವಿಸಿದಂತೆ ಸಾಂಪ್ರದಾಯಿಕವಾಗಿ ವರ್ಣಿಸಲಾಗಿದೆ. ಮನಸ್ಸಿನಿಂದ ವಾಕ್ (ಮಾತು) ಉದ್ಭವಿಸಿದೆ. ಮಾತು ಬ್ರಹ್ಮನ ಮೂರ್ತಸ್ವರೂಪವಾಗಿದೆ. ಆದ್ದರಿಂದ ಬ್ರಹ್ಮನಿಗೆ ಇತರ ಹೆಸರುಗಳೊಂದಿಗೆ ‘ಶಬ್ದ ಬ್ರಹ್ಮ ಮಯೀ’ (ಶಬ್ದವು ಬ್ರಹ್ಮನ್ ಆಗಿ) ಎಂದು ಕರೆಯಲಾಗಿದೆ. ಹೀಗೆ ಈಶ್ವರ, ವಿಷ್ಣು ಮತ್ತು ಬ್ರಹ್ಮ ಇವು ಹೃದಯ, ಮನಸ್ಸು ಮತ್ತು ಮಾತುಗಳನ್ನು ಸಂಕೇತಿಸುತ್ತವೆ. ಈ ಮೂರರ ಒಟ್ಟು ಸಂಯೋಜನೆಯು ಆತ್ಮವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಮೂರರಲ್ಲಿ ಪ್ರತಿಯೊಂದನ್ನೂ ಒಬ್ಬನೇ ಪರಮ ಗುರುವಿನ ಮೂರು ರೂಪಗಳೆಂದು ಪರಿಭಾವಿಸಬೇಕು.
ಪರಮ ಗುರು
- ಗುರುರ್ಬ್ರಹ್ಮ ಗುರುರ್ವಿಷ್ಣು
- ಗುರುರ್ದೇವೋ ಮಹೇಶ್ವರಃ
- ಗುರುರ್ಸಾಕ್ಷಾತ್ ಪರಬ್ರಹ್ಮ
- ತಸ್ಮೈ ಶ್ರೀ ಗುರವೇ ನಮಃ||
ಆಳವಾದ ಮತ್ತು ಪವಿತ್ರವಾದ ಅಂತರಾರ್ಥವನ್ನು ಹೊಂದಿರುವ ಈ ಶ್ಲೋಕವನ್ನು ಸಾಮಾನ್ಯ ಶಿಕ್ಷಕನ ಪಾತ್ರವನ್ನು ವೈಭವೀಕರಿಸಲು, ದಿವ್ಯತ್ವವನ್ನು ವಿಭಜಿಸಿ, ಅದರಲ್ಲಿ ವ್ಯಕ್ತವಾಗಿರುವ ಏಕತ್ವದ ಮೂಲಭೂತ ಸತ್ಯವನ್ನು ಮರೆಮಾಚಿ, ವಿಕೃತಗೊಳಿಸಲಾಗಿದೆ.
ಗುರುರ್ಬ್ರಹ್ಮ: ಇಲ್ಲಿ ಪ್ರಸ್ತಾಪಿಸಿರುವ ಬ್ರಹ್ಮ ಸೃಷ್ಟಿಕರ್ತನಲ್ಲ. ಅದು ‘ವಾಕ್’ಗೆ ಸಂಬಂಧಿಸಿದೆ.
ಗುರುರ್ವಿಷ್ಣುವು ಎಲ್ಲ ಜೀವಿಗಳಲ್ಲೂ ಇರುವ ಸರ್ವವ್ಯಾಪಕ ಮನಸ್ಸಿಗೆ ಅನ್ವಯಿಸುತ್ತದೆ. ಇದು ವಿಷ್ಣುತತ್ವ. ಗುರುರ್ದೇವೋ ಮಹೇಶ್ವರಃ: ಇದು ಹೃದಯದ ಸ್ಥಾನಕ್ಕೆ ಅನ್ವಯಿಸುತ್ತದೆ.
ಗುರುಸಾಕ್ಷಾತ್ ಪರಬ್ರಹ್ಮಃ: ಇದು ಮಾತು, ಮನಸ್ಸು ಮತ್ತು ಹೃದಯಗಳ ಏಕತೆಯು ಗುರುವೆಂದು ಸ್ತುತಿಸಬೇಕಾದ ಪರಮಾತ್ಮನನ್ನು ಪ್ರತಿನಿಧಿಸುತ್ತದೆ ಎಂಬ ಅರ್ಥವನ್ನು ನೀಡುತ್ತದೆ.
ಗುಣಗಳು ಮತ್ತು ಬ್ರಹ್ಮಾಂಡ:
ಗುರುವಿನ ಪಾತ್ರವೇನು? ಅಜ್ಞಾನವೆಂಬ ಅಂಧಕಾರದ ಸಂಪೂರ್ಣ ನಿವಾರಣೆ. ತ್ರಿಗುಣಗಳು ಇರುವವರೆಗೂ ಅಂಧಕಾರದಿಂದ ಮುಕ್ತಿ ಇರುವುದಿಲ್ಲ. ತ್ರಿಗುಣಗಳನ್ನು ಮೀರಿದಾಗ ಮಾತ್ರ ವ್ಯಕ್ತಿಯು ಗುರುವಿನ ಸ್ಥಾನವನ್ನು ಸಾಧಿಸುತ್ತಾನೆ. ಪರ್ಯಾಯವಾಗಿ ತ್ರಿಗುಣಗಳ ಏಕತೆಯನ್ನು ಅರಿತುಕೊಂಡಾಗ ಗುರುವಿನ ಸಂದೇಶವನ್ನು ಗ್ರಹಿಸುತ್ತಾನೆ. ಮೂರು ಗುಣಗಳ ಏಕತೆಯ ಪ್ರಾಧಾನ್ಯತೆಯನ್ನು ಗೀತೆಯ ಘೋಷಣೆ “ಮಮಾತ್ಮಾ ಸರ್ವ ಭೂತಾಂತರಾತ್ಮಾ.”(ನನ್ನ ಆತ್ಮವು ಎಲ್ಲ ಜೀವಿಗಳಲ್ಲಿ ನೆಲೆಸಿರುವ ಚೈತನ್ಯವಾಗಿದೆ.) ದಲ್ಲಿ ಸೂಚಿಸಲಾಗಿದೆ. ಎಲ್ಲ ಜೀವಿಗಳಲ್ಲಿ ನೆಲೆಸಿರುವ ಆ ಒಂದೇ ಒಂದು. ಏಕೋವಸಿ ಸರ್ವ ಭೂತಾಂತರಾತ್ಮ (ಎಲ್ಲ ಜೀವಿಗಳಲ್ಲೂ ಅಂತರ್ ಚೈತನ್ಯವಾಗಿರುವ ಆ ಒಂದು). ಏಕತೆಯ ಈ ಮೂಲತತ್ವವನ್ನು ಮರೆತು, ಅನೇಕತ್ವದ ಮೃಗೀಯತೆಯಲ್ಲಿ ಕಳೆದು ಹೋಗಿರುವ ಜನರು ಶಾಂತಿಯನ್ನು ಹೊಂದಿಲ್ಲ. ಮೂರು ಗುಣಗಳ ವೈವಿಧ್ಯಮಯ ಕಾರ್ಯನಿರ್ವಹಣೆಯಿಂದ ಸೃಷ್ಟಿ, ಬೆಳವಣಿಗೆ ಮತ್ತು ಲಯಗಳ ಪ್ರಕ್ರಿಯೆಗಳು ನಡೆಯುತ್ತವೆ. ಈ ಮೂರು ಗುಣಗಳು ವಿಶ್ವದ ಮೂಲ ಆಕರ, ಮೂಲಾಧಾರ ಮತ್ತು ಜೀವದ ಉಸಿರುಗಳಾಗಿವೆ. ಅವು ಪ್ರಕೃತಿಯಲ್ಲಿನ ಅಭಿವ್ಯಕ್ತಿ ಮತ್ತು ಪರಿವರ್ತನೆಗೆ ಕಾರಣವಾಗಿವೆ. ಮೂರುಗುಣಗಳ ಬೇರೆಬೇರೆ ಪ್ರಮಾಣದ ಕ್ರಮ ಪಲ್ಲಟನೆ ಮತ್ತು ಸಂಯೋಜನೆಗಳಿಂದ ವಿಶ್ವದ ಅಸಂಖ್ಯಾತ ವೈವಿಧ್ಯತೆಗಳು ಪರಿಣಮಿಸುತ್ತವೆ.
ತ್ರಿಮೂರ್ತಿಗಳು ಮತ್ತು ಅವರ ಬಣ್ಣಗಳು:
ಮೂರು ಗುಣಗಳಿಗೆ ಮೂರು ಬಣ್ಣಗಳನ್ನು ಆರೋಪಿಸಲಾಗಿದೆ. ವಿಷ್ಣುವು ಸತ್ವಗುಣವನ್ನು ಪ್ರತಿನಿಧಿಸುತ್ತಾನೆಂಬುದು ಸಾಮಾನ್ಯ ನಂಬಿಕೆಯಾಗಿದೆ. ಆದರೆ ಅದು ಹಾಗಲ್ಲ. ಸತ್ವ ಗುಣವು ನಿಜವಾಗಿಯೂ ಈಶ್ವರನ ಲಕ್ಷಣ. ಅದು ಮಾಯೆಗೆ ಒಳಪಟ್ಟಿಲ್ಲ. ಯೋಗನಿದ್ರೆಯ ಸ್ಥಿತಿಯಲ್ಲಿ ಅದು ಚಿತ್‌ಶಕ್ತಿ (ಜಾಗೃತಶಕ್ತಿ) ಯನ್ನು ಗಳಿಸುತ್ತದೆ. ಮತ್ತು ಶುದ್ಧಾತ್ಮ (ಪರಿಶುದ್ಧ ಪರಿಪೂರ್ಣ) ವಾಗಿ ಗೋಚರಿಸುತ್ತದೆ. ಅದರಿಂದಾಗಿ ಸತ್ವಗುಣವು ಈಶ್ವರತತ್ವವನ್ನು ಪ್ರತಿನಿಧಿಸುತ್ತದೆ. ಅದರ ಬಣ್ಣ ಬಿಳಿ.
ರಜೋಗುಣವು ಅಪೇಕ್ಷೆ ಮತ್ತು ಅನಪೇಕ್ಷೆಗಳಲ್ಲಿ ತಾನಾಗಿ ಉದ್ಭವಿಸುತ್ತದೆ. ಅದು ಬ್ರಹ್ಮನಿಗೆ ಸಂಬಂಧಪಟ್ಟಿದೆಯೆಂದು ಭಾವಿಸಲಾಗಿದೆ. ಆದರೆ ಅದು ತಪ್ಪು. ಇದು ವಿಷ್ಣುವಿಗೆ ಸಂಬಂಧಿಸಿದ ಗುಣವಾಗಿದೆ. ವಿಷ್ಣುವನ್ನು ಶಂಖ, ಚಕ್ರ, ಗದೆ ಮತ್ತು ಪದ್ಮ (ಕಮಲ) ಗಳನ್ನು ಧರಿಸಿರುವ ದೇವತೆಯೆಂದು ಚಿತ್ರಿಸಲಾಗಿದೆ. ವಿಷ್ಣುವನ್ನು ಅಲಂಕಾರ ಸ್ವರೂಪನೆಂದೂ (ಅಲಂಕಾರಗಳಿಂದ ಅಲಂಕೃತನಾದವನು) ವರ್ಣಿಸಲಾಗಿದೆ. ವಿಷ್ಣುವಿಗೆ ವಿಶ್ವಂಭರ (ವಿಶ್ವವನ್ನು ರಕ್ಷಿಸುವವನು ಮತ್ತು ಆಳುವವನು) ಎಂದೂ ಹೆಸರಿದೆ. ರಾಜನಾಗಿ (ಆಳುವವನಾಗಿ) ಅವನು ರಜೋಗುಣವನ್ನು ಹೊಂದಿದ್ದಾನೆ. ರಜೋಗುಣದ ಬಣ್ಣ ಕೆಂಪು.
ನಂತರ ಬ್ರಹ್ಮ. ಬ್ರಹ್ಮನಿಗೆ ರಜೋಗುಣವನ್ನು ಆರೋಪಿಸಲಾಗಿದೆ. ಇದು ತಪ್ಪು. ಬ್ರಹ್ಮನು ತಮೋಗುಣವನ್ನು ಪ್ರತಿನಿಧಿಸುತ್ತಾನೆ. ತಮೋಗುಣವು ಮೂರ್ಖತ್ವಕ್ಕೆ (ವಿಚಾರಹೀನತೆ) ಮತ್ತು ಅಂಧಕಾರ (ಅಜ್ಞಾನದ ಕತ್ತಲು) ಕ್ಕೆ ಸಂಬಂಧಿಸಿದೆ. ಅದು ಮಮಕಾರ (ಒಡೆತನದ ಒಲವು) ಮತ್ತು ಅಭಿಮಾನ (ಕಕ್ಕುಲತೆ) ಗಳಿಂದ ತುಂಬಿದೆ. ಈ ಎರಡು ಪ್ರಚೋದನೆಗಳು ಸೃಷ್ಟಿಗೆ ಕಾರಣವಾಗುತ್ತವೆ. ಭಾವನೆಗಳೇ ಇಲ್ಲವಾದಲ್ಲಿ ರಚನಾತ್ಮಕ ಪ್ರಕ್ರಿಯೆಗಳೇ ನಡೆಯುತ್ತಿರಲಿಲ್ಲ. ಈ ಎರಡು ತಮೋಗುಣದ ಚಿಹ್ನೆಗಳು. ಅದನ್ನು ಕಪ್ಪು ಬಣ್ಣದಿಂದ ಪ್ರತಿನಿಧಿಸಲಾಗಿದೆ. ಬಿಳಿ, ಕೆಂಪು ಮತ್ತು ಕಪ್ಪು ಇವು ಅತ್ಯಂತ ಪ್ರಮುಖವಾದ ಬಣ್ಣಗಳು. ಎಲ್ಲ ಬಣ್ಣಗಳೂ ಈ ಮೂರರಲ್ಲಿ ಸೇರಿವೆ. ಅದೇ ರೀತಿಯಲ್ಲಿ ಜಗತ್ತಿನಲ್ಲಿ ಸತ್ವಗುಣ, ರಜೋಗುಣ ಅಥವಾ ತಮೋಗುಣದ ಜನರಿದ್ದು, ಈ ಮೂರು ಬಣ್ಣಗಳಲ್ಲಿ ಒಂದು ಅಥವಾ ಇನ್ನೊಂದರಿಂದ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಾರೆ.
[ಆಕರ: ಗುರುಪೂರ್ಣಿಮೆಯಂದು ಪೂರ್ಣಚಂದ್ರ ಸಭಾಭವನದಲ್ಲಿ ನೀಡಿದ ದಿವ್ಯೋಪನ್ಯಾಸ]