ಲಂಕೆಯಲ್ಲಿ ಹನುಮಂತ

Print Friendly, PDF & Email
೯. ಲಂಕೆಯಲ್ಲಿ ಹನುಮಂತ

Hanuman in Lanka

ಸಮುದ್ರವನ್ನು ದಾಟುವಾಗ ಹನುಮಂತನು ಅನೇಕ ಎಡರುತೊಡರುಗಳನ್ನು ಎದುರಿಸಬೇಕಾಯಿತು. ಆದರೆ ಸಮಯಪ್ರಜ್ಞೆ ಮತ್ತು ಸಾಹಸಗಳಿಂದ ಅವೆಲ್ಲವುಗಳನ್ನು ಅವನೂ ಮೀರಿಹೋದನು ಮತ್ತು ಕೊನೆಗೆ ಲಂಕೆಯ ಕರಾವಳಿಗೆ ಬಂದು ಇಳಿದನು. ಅಲ್ಲಿಯ ಚಿಕ್ಕ ಬೆಟ್ಟವೊಂದರ ಮೇಲೆ ವಿಶ್ರಮಿಸಿಕೊಂಡು ಅವನು ಆ ಪಟ್ಟಣವನ್ನವಲೋಕಿಸಿದನು. ಅದರ ವೈಭವ ಮತ್ತು ಸೌಂದರ್ಯಗಳನ್ನು ನೋಡಿ ಅವನು ಆಶ್ಚಯ೵ಚಕಿತನಾದನು. ದಕ್ಷ ಕಾವಲು ಪಡೆಯನ್ನೊಳಗೊಂಡ ಆ ಪಟ್ಟಣವನ್ನು ರಾತ್ರಿ ಸಮಯದಲ್ಲಿ ಪ್ರವೇಶಿಸುವುದೆಂದು ಆತ ನಿಶ್ಚಯಿಸಿದನು.

ರಾತ್ರಿಯಾಯಿತು, ಕೋತಿಮರಿಯಂತೆ ತನ್ನ ದೇಹವನ್ನು ಸಂಕುಚಿತಗೊಳಿಸಿ ಇನ್ನೇನು ಗೋಡೆಯನ್ನು ಹತ್ತಬೇಕು ಅನ್ನುವಷ್ಟರಲ್ಲಿ ಲಂಕೆಯ ರಕ್ಷಕ ದೇವತೆಯಾದ ರಾಕ್ಷಸ ಸ್ತ್ರೀಯೋರ್ವಳು ಫಕ್ಕನೆ ಹಿಡಿದುಕೊಂಡಳು. ಹನುಮಂತನು ಫಟಾರನೆ ಅವಳ ಕೆನ್ನೆಗೊಂದೇಟು ಕೊಟ್ಟು ಹಿಂದಕ್ಕೆ ಕಳಿಸಿದನು. ಅವಳು ಅವನಿಗೆ ತಲೆಬಾಗಿಸಿ ಪಟ್ಟಣ ಪ್ರವೇಶಕ್ಕೆ ಅನುಮತಿಯನ್ನು ನೀಡಿದಳು. ಹೀಗೆ ಅವನು ಬಲವತ್ತರವಾದ ವಿಪತ್ತನ್ನು ಎದುರಿಸಿ ಜಯಶೀಲನಾಗಿ, ಇದು ತಾನು ಮಾಡಬೇಕಾಗಿರುವ ಘನಕಾಯ೵ಕ್ಕೆ ಶುಭಶಕುನವೆಂದುಕೊಂಡನು.

ಈಗ ಹನುಮಂತನು ಪ್ರತಿಯೊಂದು ಅರಮನೆಗೂ ಹೋಗಿ ಕೂಲಂಕುಷವಾಗಿ ಅನ್ವೇಷಿಸಲು ಪ್ರಾರಂಭಿಸಿದನು. ದೇವಶಿಲ್ಪಿಯಾದ ವಿಶ್ವಕರ್ಮನಿಂದ ಯೋಜಿಸಲ್ಪಟ್ಟು ಕಟ್ಟಲ್ಪಟ್ಟ ದಿವ್ಯವಾದ ಲಂಕಾ ಪಟ್ಟಣವದು. ಅಲ್ಲಿ ಅಸಂಖ್ಯಾತ ದೇವಸ್ಥಾನಗಳು, ಉಪವನಗಳು ಮತ್ತು ಇತರ ಕಟ್ಟಡಗಳಿದ್ದವು. ವೇದಘೋಷ, ಕಾವ್ಯವಾಚನ, ರಾಜಕೀಯ ಚರ್ಚೆಗಳು, ಕುಸುರಿನ ಕಲಾಕೃತಿಗಳು, ಸಂಗೀತ, ನೃತ್ಯ ಮುಂತಾದ ಎಲ್ಲ ವಿಧದ ಚಟುವಟಿಕೆಗಳು ಅಲ್ಲಿ ಕಾಣುತ್ತಿದ್ದವು. ವಿಸ್ಮಯ ಹಾಗೂ ಮೆಚ್ಚುಗೆಗಳಿಂದ ಅಲ್ಲಿಯ ಆಡಂಬರವನ್ನು ಕಂಡು ಹನುಮಂತನು ಅತ್ಯಂತ ಸಂತಸಗೊಂಡನು. ಅಲ್ಲಿಯ ಅಂತಃಪುರದ ಏಕಾಂತ ಸ್ಥಳಗಳು, ಪಾಕಶಾಲೆ, ಉಪಹಾರ ಗೃಹಗಳನ್ನು ಸಹ ಪ್ರವೇಶಿಸಿ ಅತ್ಯಂತ ಸುಂದರಿಯರಾದ ಅನೇಕ ಸ್ತ್ರೀಯರನ್ನು ಅವನು ಕಂಡರೂ ಸೀತೆಯನ್ನು ಮಾತ್ರ ಕಾಣಲು ಶಕ್ತನಾಗಲಿಲ್ಲ. ಕೊನೆಗೆ ಹನುಮಂತನು ರಾವಣನ ಶಯಗಾರವನ್ನು ಪ್ರವೇಶಿಸಿದನು. ಆ ಸ್ಥಳದ ಬರೀ ವೈಭವವನ್ನು ಕಂಡು ಅವನು ಮೂಕವಿಸ್ಮಿತನಾದನು. ಎಂಥ ಶ್ರೇಷ್ಠ ತಪಸ್ವಿಯನ್ನು ವಿಚಲಿತಗೊಳಿಸುವಂಥ ರತಿಶೃಂಗಾರದಿಂದೊಡಗೂಡಿದ ದೃಶ್ಯವನ್ನು ನೋಡಿದಾಗ್ಯೂ, ತನ್ನ ಇಂದ್ರಿಯಗಳ ಮೇಲೆ ಸಂಪೂರ್ಣ ನಿಗ್ರಹವಿದ್ದ (ಜಿತೇಂದ್ರಿಯ) ಹನುಮಂತನಿಗೆ ಸೀತೆಯ ಹೊರತು ಬೇರೆ ಯಾವುದರಲ್ಲಿಯೂ ಆಸಕ್ತಿ ಇರಲಿಲ್ಲ.

ರಾವಣನು ಹಾಸಿಗೆಯ ಮೇಲೆ ಪವಡಿಸಿ ನಿದ್ರಿಸುತ್ತಿದ್ದನು. ಹನುಮಂತ ಯೋಚಿಸಿ, ಎಂಥ ಸುಂದರಾಕೃತಿ ಅರಮನೆಯಲ್ಲಿ ಸೀತೆಯನ್ನು ಕಾಣದ ಅವನು ಅಲ್ಲಿಂದ ಹೊರಬಂದು ಸ್ವಲ್ಪಹೊತ್ತು ಅಡ್ಡಾಡುತ್ತಾ ‘ಅಶೋಕ ವನ’ ಎಂಬ ಹೆಸರಾಂತ ಉಪವನವನ್ನು ಪ್ರವೇಶಿಸಿದನು.

ಅವನು ತನಗೆ ಯೋಗ್ಯ ಮಾರ್ಗದರ್ಶನವನ್ನು ಮಾಡೆಂದು ರಾಮನನ್ನು ಪ್ರಾರ್ಥಿಸಿದನು. ಅಶೋಕವನದಲ್ಲಿ ಅವನು ಸುತ್ತಲೂ ನೋಡಿದಾಗ ಅವನಿಗಲ್ಲಿ ಅನೇಕ ರಾಕ್ಷಸ ಸ್ತ್ರೀಯರು ಕಾಣಿಸಿದರು. ಕೆಲವರಂತೂ ಭಯಂಕರವಾಗಿ ಕಾಣುತ್ತಿದ್ದರು. ಅಷ್ಟು ಜನ ಸ್ತ್ರೀಯರು ಅಲ್ಲಿ ಏನು ಮಾಡುತ್ತಿರುವರೆಂದು ನೋಡುವ ಕುತೂಹಲ ಅವನಿಗೆ ತಕ್ಷಣ ಉಂಟಾಯಿತು. ಶಿಶುಂಪಾ ವೃಕ್ಷದ ಕೆಳಗೆ ಸಾದಾ ಉಡುಪನ್ನು ಧರಿಸಿ, ಬೆನ್ನಲ್ಲಿ ಇಳಿಬಿಟ್ಟ ಹರಡಿದ ಕೂದಲುಳ್ಳ ಏಕಾಂಗಿಯಾಗಿ ಕುಳಿತಿರುವ ಲಾವಣ್ಯವತಿಯಾದ ತರುಣಿಯ ಕಡೆಗೆ ಅವನ ದೃಷ್ಟಿ ನೆಟ್ಟಿತು. ಅವಳ ಮುಖ ನಿಸ್ತೇಜವಾಗಿತ್ತು ಮತ್ತು ಕಣ್ಣುಗಳು ಒಂದೇ ಸಮನೆ ಅಳುತ್ತಿದ್ದರಿಂದ ಊದಿಕೊಂಡಿದ್ದವು.

ಹನುಮಂತನು ಸಪ್ಪಳ ಮಾಡದೆ ಆ ಮರಕ್ಕೆ ಜಿಗಿದು ಹತ್ತಿರದಿಂದ ಮರೆಯಿಂದ ನಿರೀಕ್ಷಿಸಿದನು. ಅವಳ ಬಾಯಿಂದ ರಾಮನಾಮವು ಅಸ್ಪಷ್ಟವಾಗಿ ಹೊರಬರುತ್ತಿತ್ತು. ಆ ನಾಮ ಶ್ರವಣ ಮಾತ್ರದಿಂದ ಅವನ ಎದೆ ಜುಮ್ಮೆಂದಿತು. ಆ ಪವಿತ್ರ ನಾರೀಮಣಿಯನ್ನು ಕಂಡು ತಾನು ಪುನೀತನಾದನೆಂದು ಅವನು ಭಾವಿಸಿದನು. ಯಾರ ಶೋಧನೆಗಾಗಿ ತಾನು ನಿಯೋಜಿಸಲ್ಪಟ್ಟಿದ್ದನೋ ಆ ಸೀತೆ ಇವಳೇ ಇರಬೇಕೆಂದು ಅವನು ತಕ್ಷಣ ನಿಶ್ಚಿಯಿಸಿದನು. ಅವಳು ದೊರಕಿದ ಮೇಲೆ ಅವನ ಭಾವನೆಗೆ ಹೆಚ್ಚಿನ ಪುಷ್ಟಿ ದೊರೆಯಿತು.

ಒಮ್ಮೆಲೆ ಕೋಲಾಹಲವುಂಟಾದುದನ್ನು ಅವನು ಕೇಳಿದನು. ಉಪವನಕ್ಕೆ ರಾವಣನು ಬರುವ ಸಮಾಚಾರವನ್ನು ಭಟ್ಟಂಗಿಗಳು ಸಾರುವ ಶಬ್ದವದು. ಅನೇಕ ಪರಿಜನ ಸ್ತ್ರೀಯರೊಂದಿಗೆ ರಾವಣನು ಆ ಸ್ಥಳಕ್ಕೆ ಬಂದನು. ಅವನು ಸೀತೆಯ ಮುಂದೆ ನಿಂತು ತನ್ನನ್ನು ಪತಿಯಾಗಿ ಸ್ವೀಕರಿಸು ಎಂದು ಅವಳೊಂದಿಗೆ ವಾದಿಸಿದನು. ಸೀತೆ ಅಲುಗಾಡದೆ ನಿಂತೇ ಇದ್ದಳು. ರಾವಣನು ಕೋಪೋದ್ರಿಕ್ತನಾಗಿ “ಘೋರ ಫಲವನ್ನು ಅನುಭವಿಸಬೇಕಾದೀತು,” ಎಂದು ಆಕೆಯನ್ನು ಬೆದರಿಸಿದನು. ಅವಳು ತಿರಸ್ಕಾರ ಪೂರ್ಣವಾಗಿ ಉತ್ತರಿಸಿದಳು.

“ನಾನು ರಾಮನನ್ನು ಮದುವೆಯಾಗಿದ್ದೇನೆ, ನಾನು ಆತನಿಗೆ ಸೇರಿದವಳು. ಅನ್ಯಪುರುಷರನ್ನು ನೆನೆಯಲು ಸಹ ನನಗೆ ಸಾಧ್ಯವಿಲ್ಲ. ರಾಮನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಅವನ ಬೆಂಕಿ ಆಯುಧಗಳಿಂದ ನಿನ್ನ ಸಮಸ್ತ ಲಂಕೆಯೂ ಸುಟ್ಟು ಭಸ್ಮವಾಗುವುದು. ಆದ್ದರಿಂದ ಹೋಗಿ ಆತನ ಕಾಲಿಗೆ ಬೀಳು, ಅವನು ಆದರ್ಶ ಪುರುಷ, ಅವನು ನಿನ್ನನ್ನು ಕ್ಷಮಿಸುವನು.”

ಈ ಮಾತುಗಳು ರಾವಣನನ್ನು ಇನ್ನೂ ರೇಗಿಸಿದವು. ಆತ ಗರ್ಜಿಸಿ, “ನಾನು ನಿನಗೆ ಇನ್ನು ಎರಡು ತಿಂಗಳ ಅವಧಿಯನ್ನು ನೀಡುವೆನು. ಅಷ್ಟರಲ್ಲಿ ನೀನು ನನ್ನನ್ನು ವರಿಸದಿದ್ದಲ್ಲಿ ನನ್ನ ಸೇವಕರಿಗೆ ಹೇಳಿ, ನಿನ್ನನ್ನು ತುಂಡರಿಸಿ ನನ್ನ ಬೆಳಗಿನ ಉಪಹಾರಕ್ಕೆ ಆಹಾರವಾಗಿ ನೀಡಲು ಆಜ್ಞೆ ಮಾಡುತ್ತೇನೆ.” ಹೀಗೆ ಕೋಪದಿಂದ ಭುಸುಗುಟ್ಟುತ್ತಾ ರಾವಣನು ತನ್ನ ಅರಮನೆಗೆ ಹೊರಟು ಹೋದನು.

ಸೀತೆಯು ಜನ್ಮಸಹಜವಾದ ತಾಳ್ಮೆ ರಾವಣನ ಕೋರಿಕೆಯನ್ನು ತಡೆಗಟ್ಟುವಲ್ಲಿ ಸಾಕಷ್ಟು ಧೈಯ೵ವನ್ನು ನೀಡಿತ್ತು. ರಾವಣನೊಂದಿಗೆ ಕಾಡಿನ ಕಠಿಣ ಜೀವನವನ್ನು ತಾನಾಗಿಯೇ ಆರಿಸಿಕೊಂಡ ಸೀತೆಯು ರಾವಣನು ನೀಡಿದ ರಾಜವೈಭವ ಮತ್ತು ಐಶ್ವಶ್ಯವನ್ನು ಧಿಕ್ಕರಿಸಿದ್ದಳು. ರಾಮನ ಸಹವಾಸದಲ್ಲಿದ್ದ ಅವಳಿಗೆ ಅವೆಲ್ಲ ಹೊಲಸು ಧೂಳಿಗೆ ಸಮಾನವಾಗಿತ್ತು.

ಮರಿಕೋತಿಯ ರೂಪವನ್ನು ಮೊದಲೇ ಧರಿಸಿದ್ದ ಹನುಮಂತನು ತಕ್ಷಣ ಮರದಿಂದ ಕೆಳಕ್ಕಿಳಿದು ಅವಳನ್ನು ಸಮೀಪಿಸಿದನು. ರಾಮನ ಜನ್ಮಧಾರಭ್ಯ ಕಿಷ್ಕಿಂಧೆಗೆ ಬಂದು ತಲುಪಿದ ಸಮಗ್ರ ಕಥೆಯನ್ನು ಹೇಳಲುಪಕ್ರಮಿಸಿದನು. ಮನುಷ್ಯರಂತೆ ಈ ಕಪಿ ಮಾತಾಡುವುದು ಹೇಗೆ ಸಾಧ್ಯ ಎಂದು ಅವಳಿಗೆ ಅರಿತುಕೊಳ್ಳುವುದು ಸಹ ಅಸಾಧ್ಯವಾಯಿತು. ಅವನು ಕೈಗಳನ್ನು ಮುಗಿದು ಅವಳೆದುರು ನಿಂತನು. ಅವನಾಡಿದ ಶಬ್ದಗಳು ಅವಳಲ್ಲಿ ನಿಸ್ಸಂದೇಹವಾಗಿ ಪರಿಣಾಮವನ್ನುಂಟು ಮಾಡಿದವಾದರೂ ಒಮ್ಮಲೆ ಅವನ ಬಗ್ಗೆ ಸಂದೇಹವುಂಟಾಯಿತು. ಅವಳು ಬೈದು ಹೇಳಿದಳು, ‘ನನಗೆ ಗೊತ್ತು, ನೀನು ರಾವಣ. ನನ್ನನ್ನು ಮೋಸಗೊಳಿಸಲು ಅನೇಕ ರೂಪಗಳನ್ನು ನೀನು ತಾಳುತ್ತಿರುವೆ. ನೀನೆಂದಿಗೂ ಯಶಸ್ವಿಯಾಗುವುದಿಲ್ಲವೆಂದು ತಿಳಿ.”

ಹನುಮಂತನು ಗಲಿಬಿಲಿಗೊಂಡನು. ತಪ್ಪು ಭಾವಿಸಬೇಡವೆಂದು ಅವಳಲ್ಲಿ ಅವನು ಬೇಡಿಕೊಂಡನು. “ನಾನು ನಿಜವಾಗಿಯೂ ರಾಮನ ದಾಸ, ನಿನಗಾಗಿ ಅವನು ಕೊಟ್ಟು ಕಳುಹಿಸಿದ ಈ ಉಂಗುರವನ್ನು ನೋಡು.” ಅವನು ಆಕೆಗೆ ಉಂಗುರವನ್ನು ಕೊಟ್ಟನು. ಆ ಉಂಗುರವನ್ನು ಕೈಗೆತ್ತಿಕೊಂಡು ಅವಳು ಕಣ್ಣೀರೆರೆದಳು. ರಾಮನನ್ನೇ ಪ್ರತ್ಯಕ್ಷವಾಗಿ ತಾನು ಕಂಡಂತೆ ಅವಳು ಭಾವಿಸಿಕೊಂಡಳು. ಅನಂತರ ಹನುಮಂತನು ಅವರು ಕಾಡಿನಲ್ಲಿದ್ದಾಗ ಬೆಳೆದ (ತಮ್ಮೊಡನೆ) ನಿಕಟ ಸಂಬಂಧದ ಸನ್ನಿವೇಶವನ್ನು ಆಕೆಗೆ ತಿಳಿಸಿದನು. ಇದನ್ನು ಕೇಳಿದ ಸೀತೆ ಭಾವಪರವಶಳಾಗಿ ತನ್ನ ಎಲ್ಲ ಸಂದೇಹಗಳಿಂದ ಮುಕ್ತಳಾದಳು. ತನ್ನ ಭುಜವನ್ನೇರಿ ಕುಳಿತುಕೊಂಡರೆ ತಾನು ಲಂಕೆಯಿಂದಾಚೆಗೆ ಕರೆದುಕೊಂಡು ಹೋಗುವುದಾಗಿ ಹನುಮಂತನು ಆಕೆಯನ್ನು ಪ್ರಾರ್ಥಿಸಿದನು. ಆದರೆ ಆಕೆ ನಿರಾಕರಿಸಿದಳು. “ಪ್ರೀತಿಯ ಪುತ್ರನೇ, ನಾನು ಚೋರಳ ಹಾಗೆ ಓಡಿ ಹೋಗಲು ಸಾಧ್ಯವಿಲ್ಲ. ರಾಮನು ಯುದ್ಧಕ್ಕೆ ಕರೆ ನೀಡಬೇಕು. ಲಂಕೆಗೆ ದಂಡೆತ್ತಿ ಬರಬೇಕು. ರಾವಣನನ್ನು ಸೋಲಿಸಬೇಕು ಮತ್ತು ನನ್ನನ್ನು ಮುಕ್ತಗೊಳಿಸಬೇಕು. ಆಗ ಮಾತ್ರ ಅವನು ನಿಜವಾದ ಕ್ಷತ್ರಿಯನು.”

ಈ ಮಾತುಗಳನ್ನು ಕೇಳಿ ಹನುಮಂತನಿಗೆ ಅವಳ ಬಗೆಗೆ ಇರುವ ಗೌರವ ಹತ್ತು ಪಟ್ಟು ಹೆಚ್ಚಾಯಿತು. ಅವನು ಅವಳಿಂದ ಬೀಳ್ಕೊಂಡನು. ಹೊರಡುವ ಮುನ್ನ ಸೀತೆಯು ಅವನಿಗೆ ಚೂಡಾಮಣಿಯನ್ನು ಕೊಟ್ಟು ರಾಮನಿಗೆ ಮುಟ್ಟಿಸಲು ತಿಳಿಸಿದಳು.

ಹನುಮಂತನು ರಾವಣನನ್ನು ಕೆರಳಿಸಿದ್ದು

ಹನುಮಂತನು ನೇರವಾಗಿ ಸಮುದ್ರತೀರಕ್ಕೆ ಹಿಂತಿರುಗುವ ಬದಲು ಕೀಟಲೆ ಮಾಡುವ ಯೋಜನೆಯೊಂದನ್ನು ಯೋಚಿಸಿದನು. ರಾವಣನನ್ನು ಸಿಟ್ಟಿಗೆಬ್ಬಿಸಿ ಚಿಕ್ಕದೊಂದು ಪಾಠವನ್ನು ಆತನಿಗೆ ಕಲಿಸಬೇಕೆಂದು ಬಯಸಿದನು. ಅವನು ತಕ್ಷಣ ಸುಂದರವಾದ ಆ ಅಶೋಕವನವನ್ನು ಧ್ವಂಸ ಮಾಡಲು ಉಪಕ್ರಮಿಸಿದನು. ಕಾವಲುಗಾರರೆಲ್ಲರೂ ಕೂಡಲೇ ರಾವಣನ ಆಸ್ಥಾನಕ್ಕೆ ಓಡುತ್ತ ಹೋಗಿ ಪಟ್ಟಣದಲ್ಲಿರುವ ಸುಂದರವಾದ ಉದ್ಯಾನವನಗಳನ್ನೆಲ್ಲಾ ವಿಲಕ್ಷಣವಾದ ಕಪಿಯೊಂದು ಹಾಳುಗೆಡುವುತ್ತಿದೆಯೆಂದು ದೂರಿದರು.

ರಾವಣನು ರಕ್ಷಕ ಪಡೆಯ ಕೆಲವು ಸೈನಿಕರನ್ನು ಅದೊಂದು ಕ್ಷುಲ್ಲಕ ಕಾಯ೵ವೆಂದು ಬಗೆದು ಕಪಿಯನ್ನು ಎದುರಿಸಲು ಕಳಿಸಿದನು. ಆದರೆ ಅವರೆಲ್ಲ (ರಾಕ್ಷಸ)ರನ್ನು ಹನುಮಂತನು ಕೊಂದಾಗ ರಾವಣನು ಕೆಲ ಸೇನಾಧಿಪತಿಗಳ ಜೊತೆಗೆ ತನ್ನ ಮಕ್ಕಳಲ್ಲಿ ಒಬ್ಬನನ್ನು ಕಳಿಸಿದನು. ಹನುಮಂತನು ಅವರೆಲ್ಲರನ್ನು ಕೊಂದು ಹಾಕಿದನು. ರಾವಣನಿಗೆ ಈಗ ಸ್ವಲ್ಪ ಚಿಂತಿಸುವಂತಾಯಿತು. ತನ್ನ ಮಗ ಇಂದ್ರಜಿತುವನ್ನೇ ಕಳಿಸಿದನು. ಹನುಮಂತನು ಇಂದ್ರಜಿತುವಿನಿಂದ ಪ್ರಯೋಗಿಸಲ್ಪಟ್ಟ ಎಲ್ಲ ಅಸ್ತ್ರಗಳನ್ನು ಹಿಮ್ಮೆಟ್ಟಿಸಿದನು. ಕೊನೆಗೆ ಇಂದ್ರಜಿತು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಬ್ರಹ್ಮದೇವನನ್ನು ಗೌರವಿಸಲೋಸುಗ ಹನುಮಂತನು ಆ ಅಸ್ತ್ರಕ್ಕೆ ತಾನೇ ಬಂಧಿಯಾದನು.

ತಕ್ಷಣ ಅವನನ್ನು ರಾವಣನ ಆಸ್ಥಾನಕ್ಕೆ ಕರೆತಂದರು. “ನೀನಾರು? ಇಲ್ಲಿ ಲಂಕೆಗೆ ಬರಲು ಕಾರಣವೇನು?” ಎಂದು ಮೊದಲಾದ ಪ್ರಶ್ನೆಗಳನ್ನು ಕೇಳಿದರು. ಹನುಮಂತನು ಅವಕ್ಕೆಲ್ಲ ಉತ್ತರಿಸಿದನು. “ನಾನು ರಾಮನ ದೂತನು. ಅವನ ಪತ್ನಿಯನ್ನು ನೀನು ವಂಚಿಸಿ ಕರೆತಂದಿರುವೆ. ಆದ್ದರಿಂದ ಅದರ ಘೋರಫಲದ ಬಗ್ಗೆ ಎಚ್ಚರಿಸಲು ನಾನಿಲ್ಲಿಗೆ ಬಂದಿದ್ದೇನೆ.” ರಾವಣನು ಕ್ರೋಧದಿಂದ ಕಂಗೆಟ್ಟು ಆ ಕೋತಿಯನ್ನು ಕೊಲ್ಲಲು ಆಜ್ಞೆ ನೀಡಿದನು. ರಾವಣನ ತಮ್ಮನಾದ ವಿಭೀಷಣನು ಮಧ್ಯದಲ್ಲಿ ಪ್ರವೇಶಿಸಿ ದೂತನನ್ನು ಕೊಲ್ಲುವುದು ಸರಿಯಲ್ಲವೆಂದು ಹೇಳಿದನು. ಆದ್ದರಿಂದ ಚಿಂದಿ ಬಟ್ಟೆಗಳನ್ನು ಹನುಮಂತನ ಬಾಲಕ್ಕೆ ಸುತ್ತಿ ಅದಕ್ಕೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದರು.

ತಕ್ಷಣ ಹನುಮಂತನು ಪಟ್ಟಣದಲ್ಲೆಲ್ಲಾ ಹಾರಾಡಿ ಎಲ್ಲ ಕಟ್ಟಡಗಳಿಗೂ ಬೆಂಕಿಯನ್ನು ತಾಗಿಸಿ ಕ್ಷಣಾರ್ಧದಲ್ಲಿ ಭಸ್ಮ ಮಾಡಿದನು. ಅನಂತರ ತನ್ನ ಉರಿಯುವ ಬಾಲವನ್ನು ಸಮುದ್ರದಲ್ಲಿ ಮುಳುಗಿಸಿ ಅಲ್ಲಿಯೇ ಸ್ವಲ್ಪ ಹೊತ್ತು ಚಿಂತಿಸುತ್ತಾ ಕುಳಿತನು. ಆಗ ತನ್ನ ಮೂರ್ಖತನದ ಅರಿವಾಯಿತು. ಅಯ್ಯೋ ದೇವರೇ ನಾನೇನು ಮೂರ್ಖತನ ಮಾಡಿದೆ. ಬಹುಶಃ ತಾಯಿ ಸೀತಾದೇವಿ ಕೂಡ ಭಸ್ಮವಾಗಿರಬಹುದು. ಹೀಗೆ ಭಾವಿಸಿ ಅವನು ಕೂಡಲೇ ಅಶೋಕವನಕ್ಕೆ ಹಾರಿದನು. ಅಲ್ಲಿ ದುಃಖಿತಳಾದ ಸೀತೆ ಸಮಾಧಾನದಿಂದ ಕುಳಿತಿರುವುದನ್ನು ಕಂಡು ನೆಮ್ಮದಿಗೊಂಡನು. ಅವನು ಪುನಃ ಅವಳಿಂದ ಬೀಳ್ಕೊಂಡು ಸಮುದ್ರದಾಚೆಗೆ ಮರು ಪ್ರಯಾಣವನ್ನು ಪ್ರಾರಂಭಿಸಿದನು.

ಅವನು ಸಮುದ್ರವನ್ನು ದಾಟಿ ಬಂದಾಗ ಅಂಗದ, ಜಾಂಬವಂತ ಮತ್ತು ಇತರರು ಅವನಿಗೆ ಧನ್ಯವಾದಗಳನ್ನು ಅರ್ಪಿಸಿ ಅವನನ್ನು ಸುತ್ತುಗಟ್ಟಿ ಕುಳಿತರು. ಲಂಕೆಯಲ್ಲಿಯ ತನ್ನ ಅನುಭವಗಳನ್ನು ಅವರಿಗೆ ತಿಳಿಸಿದಾಗ ಅವನ ಸಾಧನೆಗಾಗಿ ಅವರೆಲ್ಲರೂ ಅತಿಶಯವಾಗಿ ಮೆಚ್ಚಿಕೊಂಡು ಹೊಗಳಿದರು. ಅಂಗದನು ಕೂಡಲೇ ಕಿಷ್ಕಿಂಧೆಗೆ ಹಿಂತಿರುಗಬೇಕೆಂದೂ ರಾಮ-ಸುಗ್ರೀವರಿಗೆ ಈ ಹರ್ಷವಾರ್ತೆಯನ್ನು ನೀಡಬೇಕೆಂದೂ ಎಲ್ಲರಿಗೂ ಆಜ್ಞೆ ಮಾಡಿದನು.

ವಾನರರೆಲ್ಲರೂ ಕಿಷ್ಕಿಂಧೆಯನ್ನು ತಲುಪಿದರು. ಅವನ ಕಾಂತಿಯುಕ್ತ ಮುಖಗಳನ್ನು ನೋಡಿ ರಾಮ ಮತ್ತು ಸುಗ್ರೀವರಿಗೆ ಅವರು ತಮ್ಮ ಕಾಯ೵ದಲ್ಲಿ ಜಯಶೀಲರಾಗಿದ್ದಾರೆಂದು ಖಚಿತವಾಯಿತು. ಹನುಮಂತನು ರಾಮನಿಗೆ ನಮಸ್ಕರಿಸಿ ತಾನು ಸೀತಾಮಾತೆಯನ್ನು ಸಂದರ್ಶಿಸಿದ ಬಗೆಯನ್ನೂ ಅವಳೊಂದಿಗೆ ಸಂಭಾಷಿಸಿದ್ದನ್ನೂ ಮತ್ತು ಲಂಕೆಯಲ್ಲಿ ತನಗಾದ ಅನುಭವಗಳನ್ನೂ ಹೇಳಿದನು. ಅನಂತರ ಸೀತಾದೇವಿ ಕೊಟ್ಟ ಚೂಡಾಮಣಿಯನ್ನು ರಾಮನಿಗೆ ಕೊಟ್ಟನು. ಆ ಚೂಡಾಮಣಿಯನ್ನು ಕಂಡು, ಸೀತಾಮಾತೆ ನೀಡಿದ ಸಂದೇಶವನ್ನು ಹನುಮಂತನ ಮೂಲಕ ಕೇಳಿ, ರಾಮನ ಮನಸ್ಸು ಅತ್ಯಂತ ವ್ಯಗ್ರವಾಯಿತು. ಅವನು ಕೂಡಲೇ ಆ ವಾಯುಪುತ್ರನನ್ನು ಪ್ರೀತಿಯಿಂದ ಅಪ್ಪಿಕೊಂಡು ತನ್ನ ಕೃತಜ್ಞತೆಗಳನ್ನು ಸಲ್ಲಿಸಿದನು.

ಪ್ರಶ್ನೆಗಳು :
  1. ತಾನು ರಾಮನ ದೂತನೆಂಬುದನ್ನು ಹನುಮಂತನು ಸೀತೆಗೆ ಹೇಗೆ ಮನವರಿಕೆ ಮಾಡಿಕೊಟ್ಟನು?
  2. ಸೀತಾದೇವಿ ಸಂಶಯಪಟ್ಟಿದ್ದೇಕೆ? ಮತ್ತು ಅವಳಿಗೆ ಅದು ಮನವರಿಕೆಯಾದುದು ಹೇಗೆ?
  3. ಹನುಮಂತನು ರಾವಣನಿಗೆ ಕಲಿಸಿದ ಚಿಕ್ಕ ಪಾಠವೇನು?

Leave a Reply

Your email address will not be published. Required fields are marked *