ಆಪತ್ತಿನಲ್ಲಿರುವವರಿಗೆ ಹೇಗೆ ಸಹಾಯ ಮಾಡುವಿರಿ?

Print Friendly, PDF & Email
ಆಪತ್ತಿನಲ್ಲಿರುವವರಿಗೆ ಹೇಗೆ ಸಹಾಯ ಮಾಡುವಿರಿ?

ಅದೊಂದು ದಿನ ಸಂಜೆಯ ವೇಳೆ. ವಯಸ್ಸಾದ ಒಬ್ಬ ಕುರುಡ ವ್ಯಕ್ತಿ, ತನ್ನ ಕೈಯಲ್ಲಿದ್ದ ತಂತಿ ವಾದ್ಯವನ್ನು ನುಡಿಸುತ್ತಾ, ಅದರೊಂದಿಗೆ ಹಾಡುತ್ತಾ, ರಸ್ತೆಯ ಮೇಲೆ ನಡೆದು ಹೋಗುತ್ತಿದ್ದ. ಆತ ಒಂದು ಕಾಲದಲ್ಲಿ ಬಹಳ ಪ್ರಸಿದ್ಧ ಗಾಯಕನಾಗಿದ್ದು, ತಂತಿವಾದ್ಯವನ್ನು ನುಡಿಸುವುದರಲ್ಲೂ ನಿಪುಣನಾಗಿದ್ದ. ಆದರೆ, ವೃದ್ಧಾಪ್ಯ ಮತ್ತು ಕುರುಡುತನದಿಂದಾಗಿ, ದಿನದಲ್ಲಿ ಒಂದು ಊಟ ಮಾಡುವಷ್ಟು ಹಣವನ್ನು ಸಹ ಸಂಪಾದಿಸಲಾಗದ ಪರಿಸ್ಥಿತಿ ಉಂಟಾಗಿತ್ತು.

The boys lifting the blind old man and his harp

ರಸ್ತೆಯ ಮೇಲೆ ನಡೆಯುತ್ತಿದ್ದ ಆತ, ಇದ್ದಕ್ಕಿಂದಂತೆ ಕಾಲು ಜಾರಿ, ಕೆಳಗೆ ಬಿದ್ದು ಬಿಟ್ಟ. ಅದನ್ನು ಕಂಡ, ಆ ದಾರಿಯಲ್ಲೇ ಹೋಗುತ್ತಿದ್ದ ಮೂವರು ಹುಡುಗರು ಕೂಡಲೇ ಆತನ ಕಡೆಗೆ ಧಾವಿಸಿ ಬಂದು, ಸಹಾಯಮಾಡಿ, ಆತನನ್ನು ಮತ್ತು ಆ ತಂತಿ ವಾದ್ಯವನ್ನೂ ಮೇಲೆತ್ತಿದರು. ಆ ವೃದ್ಧನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರೋಣವೆಂದು ಒಬ್ಬ ಹುಡುಗನು ಅಭಿಪ್ರಾಯಪಟ್ಟ.

ಅದಕ್ಕೆ, ಎರಡನೆಯ ಹುಡುಗನು ಹೇಳಿದ, “ಅದೇನೋ ಸುಲಭ. ಆದರೆ ಅದರಿಂದ ಸಮಸ್ಯೆಯು ಪರಿಹಾರವಾಗುವುದಿಲ್ಲ.”

ಮೂರನೆಯ ಹುಡುಗನು ಹೇಳಿದ, “ಹೌದು. ಏನಾದರೂ ಪ್ರಯತ್ನಮಾಡಿ, ಈತನಿಗೆ ನಮ್ಮ ಕೈಯಲ್ಲಿ ಆಗುವ ಸೇವೆ ಮಾಡೋಣ.”

ಮೊದಲನೆಯ ಹುಡುಗನು ಮುಂದೆ ಬಂದು, ಆ ವಯಸ್ಸಾದಾತನನ್ನು ಸಂತೈಸುತ್ತಾ ಹೇಳಿದ, “ನೀವು ಸಮಾಧಾನ ಮಾಡಿಕೊಳ್ಳಿ. ನಿಮಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ.”

ಎರಡನೆಯ ಹುಡುಗನು ತಂತಿವಾದ್ಯವನ್ನು ಕೈಗೆತ್ತಿಕೊಂಡು, ಅದರ ಶ್ರುತಿಯನ್ನು ಸರಿಪಡಿಸಿದ.

ಮೂರನೆಯ ಹುಡುಗನು ಅದನ್ನು ನುಡಿಸುತ್ತಾ, ಹಾಡತೊಡಗಿದ.

ಸ್ವಲ್ಪ ಸಮಯದಲ್ಲೇ ಹಲವಾರು ಜನರು ಅವರ ಸುತ್ತಲೂ ನೆರೆದರು. ಆ ಹುಡುಗನ ಹಾಡು ಎಷ್ಟು ಮಧುರವಾಗಿ, ಮನಮುಟ್ಟುವಂತೆ ಇದ್ದಿತೆಂದರೆ, ಕೈಯಲ್ಲಿ ಬಟ್ಟಲನ್ನು ಹಿಡಿದು ಸುತ್ತಿಬರುತ್ತಿದ್ದ ಮೊದಲನೆಯ ಹುಡುಗನ ಆ ಬಟ್ಟಲಿನೊಳಗೆ, ಅಲ್ಲಿ ಸೇರಿದ್ದ ಪ್ರತಿಯೊಬ್ಬರೂ ನಾಣ್ಯಗಳನ್ನು ಹಾಕಿದರು. ಸುಮಾರು ಒಂದು ಗಂಟೆ ಹೀಗೆ ಕಳೆಯಿತು. ನಂತರ ಜನರ ಗುಂಪು ಕ್ರಮೇಣ ಚದುರಿತು. ಆಗ ಆ ಹುಡುಗರು ಬಟ್ಟಲಲ್ಲಿ ಸೇರಿದ್ದ ಹಣವನ್ನು ಲೆಕ್ಕಮಾಡಿ, ಅದನ್ನು ಒಂದು ಕವರಿನೊಳಗೆ ಹಾಕಿ, ಆ ವಯಸ್ಸಾದ ವ್ಯಕ್ತಿಗೆ ನೀಡಿದರು.

ಇದರಿಂದ ಬಹಳ ಸಂತೋಷಗೊಂಡ ಆತ, ಕಣ್ಣಿಂದ ಆನಂದ ಭಾಷ್ಪಗಳನ್ನು ಸುರಿಸುತ್ತ ಕೇಳಿದ, “ನನ್ನ ಆತ್ಮೀಯರೇ, ನಿಮಗೆ ನಾನು ಯಾವ ರೀತಿ ಧನ್ಯವಾದ ಹೇಳಲಿ? ನಿಮ್ಮ ಹೆಸರುಗಳೇನು? ತಿಳಿಸುವಿರಾ?

“ನನ್ನ ಹೆಸರು ಭರವಸೆ,”

“ನನ್ನ ಹೆಸರು ನಂಬಿಕೆ,”

“ನನ್ನ ಹೆಸರು ಪ್ರೇಮ.” ಎಂದು ಉತ್ತರಿಸಿದ ಹುಡುಗರು, “ಅಜ್ಜ! ನಾವಿನ್ನು ಹೊರಡಲು ಅಪ್ಪಣೆ ಕೊಡುವಿರಾ?” ಎಂದು ಕೇಳಿ ಅಲ್ಲಿಂದ ಹೊರಟರು.

ಆಗ ಆ ವೃದ್ಧನಿಗೆ ಪರಿಸ್ಥಿತಿಯು ಚೆನ್ನಾಗಿ ಅರಿವಾಯಿತು, ತನ್ನ ತಪ್ಪಿನ ಅರಿವಾಯಿತು. ‘ತಾನು, ತನ್ನಲ್ಲಿ ಹಾಗೂ ಇತರರ ಬಗ್ಗೆ , ಭರವಸೆ, ನಂಬಿಕೆ ಮತ್ತು ಪ್ರೇಮ, – ಇವುಗಳನ್ನು ಕಳೆದುಕೊಂಡಿದ್ದನಲ್ಲವೇ? ಆ ಚಿಕ್ಕ ಹುಡುಗರು ತನಗೆಷ್ಟು ಒಳ್ಳೆಯ ಪಾಠವನ್ನು ಕಲಿಸಿದರು!’ ಎಂದು ಆಲೋಚಿಸತೊಡಗಿದ.

ಪ್ರಶ್ನೆಗಳು:
  1. ಹುಡುಗರು ಆ ವೃದ್ಧನನ್ನು ಮನೆಗೆ ಕರೆದುಕೊಂಡು ಹೋಗಿ ಏಕೆ ಬಿಡಲಿಲ್ಲ? ಅಥವಾ ಒಂದು ಸ್ವಲ್ಪ ಹಣವನ್ನು ಕೊಟ್ಟು ಹೊರಟು ಹೋಗಲಿಲ್ಲ?
  2. ಅವರ ಹಾಕಿದ ಯೋಜನೆಯ ಹಿಂದಿದ್ದ ನಿಜವಾದ ಉದ್ದೇಶವೇನು?
  3. ಪ್ರತಿಯೊಬ್ಬರೂ ಹೊಂದಿರಬೇಕಾದ ಮೂರು ಗುಣಗಳು ಯಾವುವು?

Leave a Reply

Your email address will not be published. Required fields are marked *