ಮುಂದುವರಿಯುವುದು ಹೇಗೆ?

Print Friendly, PDF & Email

ಮುಂದುವರಿಯುವುದು ಹೇಗೆ?

  1. ಚಟುವಟಿಕೆಗೆ ಒಂದು ವಿಷಯವನ್ನು ಗುರುತಿಸುವುದನ್ನು ಕೇಂದ್ರೀಕರಿಸಿ, ತರಗತಿಯಲ್ಲಿ ಒಂದು ಚರ್ಚೆಯನ್ನು ಹುಟ್ಟುಹಾಕುವುದು ಪ್ರಾರಂಭಿಕ ಅಂಶ. ಆಯ್ಕೆ ಮಾಡಲ್ಪಡುವ ವಿಷಯವು ವಿದ್ಯಾರ್ಥಿಗಳ ಆಸಕ್ತಿಯನ್ನು ಹಿಡಿದಿಡುವಂತಿರಬೇಕು. ಮಕ್ಕಳು ಅವರ ಸಮೀಪದ ಪರಿಸರದಲ್ಲಿ ಮತ್ತು ಬದುಕಿನ ಸಂದರ್ಭಗಳಲ್ಲಿ ಅವರ ಪಾತ್ರಕ್ಕೆ ಅದರ ಪ್ರಸ್ತುತತೆಯನ್ನು ಗಮನಿಸಿದಾಗ ಇದು ಸಾಧ್ಯವಾಗುತ್ತದೆ.
  2. ಒಮ್ಮೆ ವಿಷಯವನ್ನು ಒಪ್ಪಿಕೊಂಡ ನಂತರ ತರಗತಿಯು, ಮನೋ ನಿರೂಪಣಾ ಪಟದ ತಯಾರಿಯ ಅಭ್ಯಾಸವನ್ನು ಆರಂಭಿಸಬೇಕು. ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ಮನಸ್ಸಿಗೆ ಬರುವ ಪದಗಳನ್ನು ಹೇಳುವಂತೆ ಗುರುಗಳು ಆಹ್ವಾನಿಸುತ್ತಾರೆ. ಪ್ರಕಟಣೆಯ ಫಲಕದಮೇಲೆ ಎಲ್ಲಾ ಪದಗಳ ಪಟ್ಟಿಯನ್ನು ಬರೆಯಬಹುದು. ಇದು ಮಕ್ಕಳಿಂದ ಸೃಜನಾತ್ಮಕ ಸಲಹೆಗಳಿಗೆ ಸಾಕಷ್ಟು ಅವಕಾಶವನ್ನೀಯುತ್ತದೆ. ಗುರುಗಳೂ ಸಹ ಕೆಲವು ಅಪರೂಪದ ಅಥವಾ ಮನಸ್ಸನ್ನು ಕಾಡುವ ಪದಗಳನ್ನು ಸೇರಿಸಬಹುದು. ಸಹಜವಾಗಿ ಅವರು ಯಾವುದೇ ಪಠ್ಯಪುಸ್ತಕ ಅಥವಾ ಪಠ್ಯವಿಷಯಗಳ ನಿರ್ಬಂಧಗಳಿಗೆ ಸೀಮಿತರಾಗಿರಬೇಕಾಗಿಲ್ಲ. ಏನೇ ಆದರೂ ನಾವು ಮಕ್ಕಳ ಗ್ರಹಿಕೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ.
  3. ಮನೋ ನಿರೂಪಣಾ ಪಟದ ತಯಾರಿಯು ತೃಪ್ತಿಕರ ಹಂತವನ್ನು ತಲುಪಿದಾಗ, ತರಗತಿಯು ಜಾಲನಕ್ಷೆಯ ತಯಾರಿಯನ್ನು ಪ್ರಾರಂಭಿಸುತ್ತದೆ. ಜಾಲನಕ್ಷೆಯ ಪ್ರತಿಯೊಂದು ಭಾಗವೂ, ಪದಗಳ ಒಂದೊಂದು ಗುಂಪನ್ನು ಹೊಂದಿರುತ್ತದೆ. ಅದು ವಿಷಯದ, ಪದಗಳ ಮತ್ತು ಚಟುವಟಿಕೆಗಳ ಮೂಲಕ ಪರಿಶೋಧನೆಯ ವ್ಯಾಪ್ತಿಯ ಪ್ರಮುಖಾಂಶವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಮಕ್ಕಳು ಪದಗಳನ್ನು ವಿಜ್ಞಾನ, ಗಣಿತ, ಸಮಾಜಶಾಸ್ತ್ರ, ಭಾಷೆಗಳು ಇತ್ಯಾದಿಗಳ ಕೆಳಗೆ ಗುಂಪು ಮಾಡುವ ಒಲವನ್ನು ತೋರಿಸುತ್ತಾರೆ, ಎಂಬುದನ್ನು ಗಮನಿಸಲಾಗಿದೆ. ಏಕೆಂದರೆ, ಅವರಿಗೆ ಚೆನ್ನಾಗಿ ನಿರೂಪಿಸಲ್ಪಟ್ಟಿರುವ ಒಂದು ಪಠ್ಯ ವಿಷಯದ ಬಗ್ಗೆ ತಿಳುವಳಿಕೆ ಇದೆ.
  4. ಜಾಲನಕ್ಷೆ ಮಾಡುವ ಸಮಯದಲ್ಲಿ ಮಕ್ಕಳು ಚಿಕ್ಕ ಚಿಕ್ಕ ಗುಂಪುಗಳಾಗಿ ಕುಳಿತು, ತಮ್ಮ ಕಲ್ಪನೆಗಳನ್ನು ಹಂಚಿಕೊಳ್ಳುವುದು ಉಪಯುಕ್ತವಾಗಿರುತ್ತದೆ. ವೃತ್ತಾಕಾರದಲ್ಲಿ ಕುಳಿತುಕೊಂಡರೆ, ಪರಸ್ಪರ ಚರ್ಚೆಗೆ ಪೂರ್ಣ ಸ್ವಾತಂತ್ರ್ಯ ಸಿಗುತ್ತದೆ. ಮೊದಲ ಕೆಲವು ಅಧಿವೇಶನಗಳಲ್ಲಿ, ಮಕ್ಕಳು ಅತೀ ಹೆಚ್ಚು ಮಾತು ಆಥವಾ ಅತೀ ಜೋರಾಗಿ ಮಾತನಾಡುವುದನ್ನು ಗುರುಗಳುಗಮನಿಸಬಹುದು. ಆದರೆ, ಒಂದು ಸಾರಿ ಅವರು ಕೆಲಸಕ್ಕೆ ಅಧೀನರಾದಾಗ ಮತ್ತು ನಿಗದಿತ ಗುರಿ ಸಾಧಿಸುವ ಬಗ್ಗೆ ತಮ್ಮನ್ನು ತಾವೇ ಒಳಪಡಿಸಿಕೊಂಡಾಗ, ಅವರ ಗದ್ದಲ ತನ್ನಿಂದ ತಾನೇ ಕಡಿಮೆಯಾಗುತ್ತದೆ.
  5. ನಂತರ ಈ ಎಲ್ಲಾ ಗುಂಪುಗಳ ವಿಚಾರಗಳನ್ನು ಪೂರ್ಣ ತರಗತಿ ಹಂಚಿಕೊಳ್ಳಬಹುದು. ಆರಂಭದಲ್ಲಿ ಜಾಲನಕ್ಷೆಯು ತುಂಬಾ ದೊಡ್ಡದಾಗಿ, ವ್ಯಾಪಕವಾಗಿ ಅಥವಾ ಕ್ಲಿಷ್ಟಕರವಾಗಿ ಕಾಣಿಸಬಹುದು. ಸಂಬಂಧಪಟ್ಟ ಕೆಲವು ಮುಖ್ಯವಾದ ಪದಗಳನ್ನು ಬಿಟ್ಟಿದ್ದೇವೆ ಎಂದು ಮಕ್ಕಳಿಗೆ ಅನ್ನಿಸಬಹುದು. ಏನೇ ಆದರೂ ಈ ಹಂತದಲ್ಲಿ ನೇರವಾದ ಸಲಹೆಗಳನ್ನು ತಪ್ಪಿಸಬೇಕು. ಆದರೂ, ಮಕ್ಕಳು ಮಂಡನೆ ಮಾಡುವಾಗ ಸಮಂಜಸವಾದುದನ್ನು ತರಲು ಗುರುಗಳು ಜಾಣ್ಮೆಯಿಂದ ಮಾರ್ಗದರ್ಶನ ಮಾಡಬೇಕಾಗಬಹುದು. ಮಕ್ಕಳ ಆಸಕ್ತಿಯ ಆಧಾರದ ಮೇಲೆ ಕೆಲವು ನಿರ್ದಿಷ್ಟ ಆಯ್ದ ಭಾಗಗಳ ಮೇಲೆ ಕೆಲಸ ಮಾಡುವಂತೆ ಗುರುಗಳು ಸಲಹೆ ನೀಡಬಹುದು.
  6. ಈ ಜಾಲನಕ್ಷೆಯನ್ನು ತಯಾರಿಸಿದ ನಂತರ ತರಗತಿಯನ್ನು, ೫-೬ ಮಕ್ಕಳನ್ನು ಒಳಗೊಂಡಿರುವ ಗುಂಪುಗಳನ್ನಾಗಿ ವಿಂಗಡಿಸಬಹುದು. ಪ್ರತಿಯೊಂದು ಗುಂಪು ಜಾಲನಕ್ಷೆಯ ನಿರ್ದಿಷ್ಟವಾದ ಒಂದು ಉಪವಿಭಾಗವನ್ನು ಕಾರ್ಯ ನಿರ್ವಹಣೆಗೆ ಆಯ್ಕೆಮಾಡಿಕೊಳ್ಳಬೇಕು. ಸಹಜವಾಗಿ ಅವರಿಗೆ ಹೆಚ್ಚು ಆಸಕ್ತಿ ಇರುವ ಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದೇ ವಿಷಯದ ಪರಿಣಿತಿಯನ್ನು ತಪ್ಪಿಸುವ ರೀತಿಯಲ್ಲಿ ಗುರುಗಳು ಕೆಲಸದ ಸ್ವರೂಪವನ್ನು ಬದಲಾಯಿಸುತ್ತಿರಬೇಕು. ಸಮಯಾನುಸಾರವಾಗಿ, ಎಲ್ಲ ಮಕ್ಕಳಿಗೂ, ಎಲ್ಲ ಕೌಶಲಗಳನ್ನೂ ಬೆಳೆಸಿಕೊಳ್ಳುವ ಅವಕಾಶ ದೊರೆಯುವಂತಿರಬೇಕು.

ಈಗ ಅವರು ಸಾಧ್ಯವಿರುವ ಎಲ್ಲಚಟುವಟಿಕೆಗಳ ಪಟ್ಟಿಮಾಡಲು ಪ್ರಾರಂಭಿಸಬೇಕು. ಇದು ಬಹುವಾಗಿ ಮಕ್ಕಳು ತೋರಿಸುವ ಪ್ರತಿಭೆ ಮತ್ತು ಕೌಶಲಗಳ ಮೇಲೆ ಅವಲಂಬಿತವಾಗಿದೆ. ಚಟುವಟಿಕೆಯ ಕ್ಷೇತ್ರವು ಸಾಮಾನ್ಯವಾಗಿ ಭಾಷಾಕೌಶಲ (ಹಾಡುಗಳು, ಪದ್ಯಗಳು, ಕಿರುಪ್ರಹಸನ), ಗಣಿತದ ಕೌಶಲಗಳು (ಅಳತೆಗಳು, ಅಂದಾಜು ಮಾಡುವಿಕೆ, ನಕ್ಷೆಯ ರಚನೆ, ರೇಖಾನಕ್ಷೆ), ಸೃಜನಾತ್ಮಕ ಕೌಶಲಗಳು (ಚಿತ್ರಕಲೆ, ಕರಕೌಶಲ, ಸಂಗೀತ, ನಾಟಕೀಕರಣ) ಮತ್ತು ಸಂವಹನ ಕೌಶಲಗಳು (ಸಂದರ್ಶನ, ಕಥೆಹೇಳುವಿಕೆ, ಭಾಷಣ, ಲೇಖನ) ಮುಂತಾಗಿ ಬೇರೆ ಬೇರೆ ವಿಭಾಗಗಳನ್ನು ಹೊಂದಿದೆ.

ಪ್ರತಿಯೊಂದು ಅನುಭವಜನ್ಯ ಕಲಿಕೆಯ ವಿಷಯದ ಕಾಲಾವಧಿಯು ೬ ರಿಂದ ೧೬ ಗಂಟೆಗಳವರೆಗೆ ಬದಲಾಗಬಹುದು. ಶಾಲೆಗಳು ಪ್ರತಿದಿನ ಒಂದು ಗಂಟೆಯಂತೆ ಹಲವಾರು ದಿನಗಳವರೆಗೆ ಸಮಯ ಒದಗಿಸಿಕೊಡಬಹುದು. ಕಟ್ಟುನಿಟ್ಟಾಗಿ ಹೇಳುವುದಾದರೆ, ಬಹುಪಾಲು ಶಾಲೆಗಳು ವಿಶೇಷವಾಗಿ, ಹೊಂದಿಸಬಹುದಾದ ವೇಳಾಪಟ್ಟಿ ಮತ್ತು ಪಠ್ಯಕ್ರಮವನ್ನು ಹೊಂದಿವೆ. ಆದರೆ ಇದನ್ನು ಎಲ್ಲಶಾಲೆಗಳಲ್ಲೂ ಸಾಮಾನ್ಯ ಎಂಬಂತೆ ಪರಿಶೋಧಿಸಿಲ್ಲ. ಶಾಲೆಗಳು ಮತ್ತು ಶಿಕ್ಷಕರು, ನವೀನ ವಿಧಾನಗಳನ್ನು ಒಪ್ಪಿ ಅಳವಡಿಸಿಕೊಳ್ಳಲು ಮತ್ತು ವಿದ್ಯುಕ್ತವಲ್ಲದ ವೇಳಾಪಟ್ಟಿಯನ್ನು ಒದಗಿಸಲು, ನಿಶ್ಚಿತಾಭಿಪ್ರಾಯವನ್ನು ಹೊಂದಿರಬೇಕು.

  • ಕೊಟ್ಟ ಕಾರ್ಯವು ಪೂರ್ಣವಾದಾಗ, ಮಕ್ಕಳಿಗೆ ಅದನ್ನು ಇನ್ನಿತರ ತರಗತಿಗಳಿಗೆ ಮತ್ತು ಸಂದರ್ಶಕರು/ಪೋಷಕರ ಮುಂದೆ ಪ್ರಸ್ತುತ ಪಡಿಸುವ ಅವಕಾಶವನ್ನು ಕೊಡಬಹುದು. ನಕ್ಷೆಗಳು, ಮಾದರಿಗಳು, ಪಾತ್ರಾಭಿನಯ, ಹಾಡುಗಳು, ಆಟಗಳು, ಕಥೆಗಳು ಆಥವಾ ಇನ್ನು ಯಾವುದೇ ಚಟುವಟಿಕೆಯನ್ನು ಬಳಸಿಕೊಂಡು ಪ್ರಸ್ತುತಿಯನ್ನು ಪರಿಣಾಮಕಾರಿಯನ್ನಾಗಿಸಬಹುದು. ನಂತರ ಆ ತರಗತಿ ಮುಂದಿನ ವಿಷಯಕ್ಕೆ ಮುಂದುವರಿಯಬಹುದು.
ಗುರುಗಳ ಪಾತ್ರ:

ಈ ಎಲ್ಲ ಪ್ರಕ್ರಿಯೆಗಳಲ್ಲಿ ಗುರುಗಳ ಪಾತ್ರ ನಿರ್ಣಾಯಕವಾದುದುದಾಗಿದೆ. ಅವರು ಯಾವಾಗಲೂ ಅವಶ್ಯಕವಾದ ಉದ್ದೇಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು. ಮಕ್ಕಳಿಗೆ ಶಿಕ್ಷಕರು ಕೇವಲ ಶಿಕ್ಷಕರಾಗಿರದೆ, ಸ್ನೇಹಿತ, ಮಾರ್ಗದರ್ಶಕ ಮತ್ತು ತತ್ವ ಶಾಸ್ತ್ರಜ್ಞರಾಗಿರುತ್ತಾರೆ. ಗುರುಗಳು ಮಕ್ಕಳಿಗೆ ಸುಲಭವಾಗಿ ಸಿಗುವುದರಿಂದ ಸ್ನೇಹಿತರೆನಿಸುತ್ತಾರೆ. ಮತ್ತು ಕಾಲಕಾಲಕ್ಕೆ ಉತ್ತೇಜನ ನೀಡುತ್ತಾರೆ. ಗುರುಗಳು ಮಕ್ಕಳ ಮೇಲೆ ಬಲವಾಗಿ ಏನನ್ನೂ ಹೇರದೆ, ಪ್ರೇರಕಮಾರ್ಗವನ್ನು ಅಳವಡಿಸಿಕೊಂಡು, ಸಲಹೆಯನ್ನು ನೀಡುತ್ತಾರೆ. ಅವರು ಎಚ್ಚರಿಕೆಯಿಂದ ಸೂಚನೆ ಮತ್ತು ಸುಳಿವುಗಳನ್ನು ನೀಡುತ್ತಾರೆ. ಚರ್ಚೆ ಮತ್ತು ಪ್ರಶ್ನೆಗಳ ಆಧಿವೇಶನವನ್ನು ಧನಾತ್ಮಕವಾಗಿ ನಡೆಸುತ್ತಾರೆ. ಆದ್ದರಿಂದ ಗುರುಗಳು ಮಾರ್ಗದರ್ಶಕರು. ಗುರುಗಳ ಉಪಸ್ಥಿತಿ ಮತ್ತು ಪ್ರಭಾವ, ಸುಳಿವು ಮತ್ತು ಸಲಹೆಗಳು, ಕಲಿಕೆಯಲ್ಲಿರುವ ಎಲ್ಲ ಅಂತರ್ಗತ ಮೌಲ್ಯಗಳನ್ನು ಕಂಡುಹಿಡಿಯಲು ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ, ಗುರುಗಳು ತತ್ವಶಾಸ್ತ್ರಜ್ಞರೆನಿಸುತ್ತಾರೆ. ತರಗತಿಯಲ್ಲಿ, ಎಳೆಯ ಮಕ್ಕಳಿದ್ದಲ್ಲಿ, ಅವರು ಇನ್ನೂ ಉತ್ತಮ ಬರವಣಿಗೆ ಮತ್ತು ಸಂಭಾಷಣಾ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು, ಚಟುವಟಿಕೆ ಮುಗಿದ ತಕ್ಷಣವೇ ಪ್ರಶ್ನೆಗಳನ್ನು ಕೇಳುವುದು ಮತ್ತು ಚರ್ಚಿಸುವುದು ಅತ್ಯಗತ್ಯವಾಗಿದೆ. ಮಕ್ಕಳನ್ನು ಅವರು ಏನು ಮಾಡಿದ್ದಾರೆ? ಏನನ್ನು ಕಂಡುಕೊಂಡಿದ್ದಾರೆ? ಮತ್ತು ಯಾವ ತೀರ್ಮಾನಕ್ಕೆ ಬಂದಿದ್ದಾರೆ? ಎಂದು ಪ್ರಶ್ನಿಸಬೇಕು. ಇದು ಅವರ ಶಬ್ದ ಸಂಪತ್ತು ಮತ್ತು ಸಂವಹನ ಕೌಶಲವನ್ನು ಹೆಚ್ಚಿಸುತ್ತದೆ. ಅವರಿಗೆ ಆತ್ಮವಿಶ್ವಾಸ ಮತ್ತು ಆತ್ಮತೃಪ್ತಿಯನ್ನು ನೀಡುತ್ತದೆ. ಮೊದಲೇ ಹೇಳಿದಂತೆ ಅನುಭವಜನ್ಯ ಕಲಿಕೆಯು ಒಂದು ವಿಧಾನ/ಮಾರ್ಗ. ಅದು ಪಠ್ಯವಿಷಯದ ಕಟ್ಟುಪಾಡಲ್ಲ.

ಆದ್ದರಿಂದ ಗುರುಗಳು ಪಠ್ಯವಿಷಯವನ್ನು ಮಾತ್ರ ಪರಿಗಣಿಸುವ ಮಿತಿಯಿಂದ ಹೊರಬಂದು, ಅದಕ್ಕಿಂತ ಮಿಗಿಲಾಗಿ ಯೋಚಿಸಬೇಕು. ಯಾವಾಗ ಮಕ್ಕಳು ತಮ್ಮ ಕೆಲಸದಲ್ಲಿ ಸಂತೋಷವನ್ನು ಪಡೆದು, ಅದರಲ್ಲಿ ತಲ್ಲೀನರಾಗುತ್ತಾರೆಯೋ, ಯಾವಾಗ ಅವರು ವೈವಿಧ್ಯಮಯವಾದ ಕಾರ್ಯಗಳು ಮತ್ತು ವಿದ್ಯಮಾನಗಳ ನಡುವಿನ ಪರಸ್ಪರ ಸಂಬಂಧವನ್ನು ಆಳವಾಗಿ ಅರ್ಥಮಾಡಿಕೊಳ್ಳುವುದನ್ನು ಬೆಳೆಸಿಕೊಳ್ಳುತ್ತಾರೋ, ಯಾವಾಗ ಅವರಿಗೆ ಏನನ್ನು ಗಮನಿಸಿದ್ದಾರೆ ಮತ್ತು ಕಲಿತಿದ್ದಾರೆ ಎಂಬುದನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆಯೋ, ಮತ್ತು ಯಾವಾಗ ಯೋಚನೆ, ಭಾವನೆ ಮತ್ತು ಕ್ರಿಯೆಯ ನಡುವೆ ಸಾಮರಸ್ಯವನ್ನು ತಂದುಕೊಂಡು, ಅವೆಲ್ಲವೂ ‘ಏಕೀಕೃತ ಅಸ್ತಿತ್ವ’ ಎಂದು ತಿಳಿಯುತ್ತಾರೆಯೋ, ಆಗ ನಾವು ನಮ್ಮ ಪ್ರಯತ್ನದ ಫಲಿತಾಂಶದ ಬಗ್ಗೆ ತೃಪ್ತಿ ಪಟ್ಟುಕೊಳ್ಳಬಹುದು.

[Source – ‘Towards Human Excellence Sri Sathya Sai Education for Schools’ Book 7, “Experiential Learning” published by Institute of Sathya Sai Education, Mumbai.]

Leave a Reply

Your email address will not be published. Required fields are marked *