ದುಡಿಯುವವನಿಗೆ ದೈವದ ಸಹಾಯ

Print Friendly, PDF & Email

ದುಡಿಯುವವನಿಗೆ ದೈವದ ಸಹಾಯ

ಒಬ್ಬ ಸಾಧು ಕೆಲವು ಹಳ್ಳಿಗರನ್ನು ಉದ್ದೇಶಿಸಿ ದೇವರು ಮತ್ತು ಅವನ ಮಹಾನತೆಯ ಬಗ್ಗೆ ಮಾತನಾಡುತ್ತಿದ್ದರು. “ದೇವರು ದಯಾಮಯನು, ಪ್ರೇಮಪೂಣ೵ನು. ಸವ೵ ಸಮಥ೵ನು, ಸಮಸ್ತ ಶಕ್ತಿವಂತನು. ನಿಮಗೆ ಸಂಕಟ ಬಂದಾಗ, ನೀವು ಪ್ರಯತ್ನ ಮಾಡಿ ಬಲಹೀನರಾದಾಗ ದೇವರನ್ನು ಪ್ರಾಥಿ೵ಸಿರಿ. ಅವನು ನಿಶ್ಚಯವಾಗಿಯೂ ನಿಮಗೆ ಸಹಾಯ ಮಾಡುವನು.”

Ramcharan's praying Hanuman to push his cart

ಸಾಧುವಿನ ಮಾತುಗಳನ್ನು ಕೇಳುತ್ತಿದ್ದವರಲ್ಲಿ ರಾಮಚರಣನೆಂಬ ಬಂಡಿ ಹೊಡೆಯುವವನೂ ಒಬ್ಬನು. ಅವನು ಹನುಮಂತನ ಭಕ್ತನು. ಸಾಧುವಿನ ಮಾತು ಕೇಳಿ, ದೇವರು ಕಷ್ಟದ ಸಮಯದಲ್ಲಿ ತನ್ನ ಭಕ್ತರಿಗೆ ಸಹಾಯ ಮಾಡುವನು ಎಂಬುದನ್ನು ತಿಳಿದು ಅವನಿಗೆ ತುಂಬಾ ಸಂತೋಷವಾಯಿತು. ಮಳೆಗಾಲದಲ್ಲಿ ಒಂದು ದಿನ ರಾಮಚರಣ ಎತ್ತಿನ ಬಂಡಿಯಲ್ಲಿ ಅಕ್ಕಿ ಮೂಟೆಗಳನ್ನು ತುಂಬಿಕೊಂಡು ಹೋಗುತ್ತಿದ್ದನು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಬಂಡಿಯ ಎರಡೂ ಚಕ್ರಗಳು ಕೆಸರಿನಲ್ಲಿ ಹೂತು ಹೋದವು. ಗಾಡಿ ಮುಂದಕ್ಕೆ ಚಲಿಸಲಿಲ್ಲ. ಆಗ ರಾಮಚರಣನಿಗೆ ಸಾಧು ಹೇಳಿದ ಮಾತುಗಳು ನೆನಪಾದವು. ಅವನು ಕೈಮುಗಿದುಕೊಂಡು ಕಣ್ಣುಮುಚ್ಚಿ ಪ್ರಾಥ೵ನೆ ಮಾಡತೊಡಗಿದನು. “ಓ ಹನುಮಾನ್ ಜೀ, ದಯವಿಟ್ಟು ಬೇಗ ಬಾ. ಕೆಸರಿನಲ್ಲಿ ಸಿಕ್ಕಿಕೊಂಡಿರುವ ನನ್ನ ಬಂಡಿಯ ಚಕ್ರಗಳನ್ನು ಮೇಲಕ್ಕೆತ್ತಿ ಕೊಡು.”

ರಾಮಚರಣನು ಎಷ್ಟು ಸಾರಿ ಪ್ರಾಥ೵ನೆ ಮಾಡಿದರೂ ಹನುಮಂತ ದೇವರು ಅಲ್ಲಿ ಹಾಜರಾಗಲೇ ಇಲ್ಲ. ಈಗ ರಾಮಚರಣನಿಗೆ ನಿರಾಶೆಯಿಂದ ಕೋಪ ಬಂದಿತು. ಹನುಮಾನ್ ಜಿಯನ್ನು ಚೆನ್ನಾಗಿ ಬೈದುಬಿಟ್ಟನು. ಆಮೇಲೆ ಕೋಪವು ಸುಳ್ಳು ಹೇಳಿದ ಸಾಧುವಿನ ಕಡೆ ತಿರುಗಿತು. ಆ ಸಾಧುವು ಉಳಿದುಕೊಂಡಿದ್ದ ದೇವಸ್ಥಾನದ ಕಡೆಗೆ ಧಾವಿಸಿದನು. .

Saint advicing him to try with his full energy first

“ಸ್ವಾಮಿ, ನೀವು ನಮ್ಮೆಲ್ಲರನ್ನು ಮೂಖ೵ರನ್ನಾಗಿ ಮಾಡಿದ್ದೀರಿ. ದೇವರೆಂದೂ ಮನುಷ್ಯನಿಗೆ ಸಹಾಯ ಮಾಡುವುದಿಲ್ಲ. ನನ್ನ ಗಾಡಿಯ ಚಕ್ರಗಳು ಕೆಸರಿನಲ್ಲಿ ಹೂತುಕೊಂಡಿವೆ. ಹತ್ತು ಸಾರಿ ಸಹಾಯ ಮಾಡಬೇಕೆಂದು ದೇವರಲ್ಲಿ ಪ್ರಾಥಿ೵ಸಿದೆ. ಅದೆಲ್ಲ ವ್ಯಥ೵ವಾಯಿತು.” ಎಂದು ಕೋಪದಿಂದ ಕೂಗಾಡಿದನು. ರಾಮಚರಣನು ಹೇಳಿದ್ದನ್ನೆಲ್ಲ ಸಾಧು ಕೇಳಿಸಿಕೊಂಡನು. ಆಮೇಲೆ ಪ್ರೀತಿಯಿಂದ, ಕರುಣೆಯಿಂದ ಅವನ ಬೆನ್ನು ತಟ್ಟುತ್ತಾ ಹೇಳಿದನು, “ಮಗು, ರಾಮಚರಣ, ನಿನಗೆಷ್ಟು ನಿರಾಶೆಯಾಗಿದೆ ಎಂಬುದನ್ನು ನಾನು ಬಲ್ಲೆ ಆದರೆ ಒಂದು ಮಾತು. ನೀನು ಪ್ರಯತ್ನ ಮಾಡಿ ಬಲಹೀನನಾದಾಗ ದೇವರು ಸಹಾಯಕ್ಕೆ ಬರುವನೆಂದು ತಾನೆ ನಾನು ಹೇಳಿದ್ದು? ನಿನಗೆ ಬಾಯಾರಿಕೆಯಾಗಿರುವಾಗ ಬಾವಿಯ ದಂಡೆಯ ಮೇಲೆ ನಿಂತು ಓ ಬಾವಿಯೇ, ಸ್ವಲ್ಪ ನೀರು ಕೊಡು ಎಂದು ಕೇಳುತ್ತಾ ಹೋದರೆ ನೀರು ದೊರಕುವುದೇನು? ಹಗ್ಗ ಕಟ್ಟಿ ಬಿಂದಿಗೆಯನ್ನು ಬಾವಿಗೆ ಇಳಿ ಬಿಟ್ಟು ತುಂಬಿಸಿ ಮೇಲಕ್ಕೆಳೆದುಕೊಂಡರೆ ನೀರು ದೊರಕುವುದು. ಹಾಗೆಯೇ ಇದೂ. ನೀನು ಮಾಡಬೇಕಾದ ಪ್ರಯತ್ನ ಮಾಡಿದ ನಂತರ ದೇವರನ್ನು ಸಹಾಯಕ್ಕಾಗಿ ಪ್ರಾಥಿ೵ಸಬೇಕು.”

Ramacharan feels help while pushing the cart

ಈ ಮಾತುಗಳನ್ನು ಕೇಳಿ ರಾಮಚರಣನಿಗೆ ನಾಚಿಕೆಯಾಯಿತು. ಮತ್ತೆ ತನ್ನ ಬಂಡಿಯ ಬಳಿಗೆ ಹೋದನು. ಕೆಸರಿನಲ್ಲಿ ಹೂತಿದ್ದ ಚಕ್ರಗಳಲ್ಲಿ ಒಂದಕ್ಕೆ ತನ್ನ ಹೆಗಲುಕೊಟ್ಟು ಶಕ್ತಿಯನ್ನೆಲ್ಲ ಉಪಯೋಗಿಸಿ ಮೇಲಕ್ಕೆ ಎತ್ತುತ್ತಾ ಮುಂದಕ್ಕೆಳೆಯಲು ಎತ್ತುಗಳನ್ನು ಹುರಿದುಂಬಿಸಿದನು. ಅದೇ ವೇಳೆಗೆ ಯಾರೋ ಇನ್ನೊಬ್ಬರು ಇನ್ನೊಂದು ಚಕ್ರವನ್ನೂ ಎತ್ತುತ್ತಿದ್ದಾರೆ ಎಂದು ಅವನಿಗೆ ಅನ್ನಿಸಿತು! ಇದು ನಾನು ಪ್ರಾಥ೵ನೆ ಮಾಡಿದ ಹನುಮಾನ್ ಜೀಯೇ ಇರಬೇಕು ಎಂದುಕೊಂಡು ಮತ್ತೊಂದು ಸಲ ಮೇಲಕ್ಕೆತ್ತಲು ಪ್ರಯತ್ನಿಸಿದನು. ತಕ್ಷಣ ಎರಡೂ ಚಕ್ರಗಳು ಕೆಸರಿನಿಂದ ಮೇಲೆ ಬಂದವು. ಎತ್ತುಗಳು ಉತ್ಸಾಹದಿಂದ ಬಂಡಿಯನ್ನು ಎಳೆಯ ತೊಡಗಿದವು. ಅವುಗಳ ಕೊರಳ ಗೆಜ್ಜೆಗಳು ಗಿಲಿಗಿಲಿ ನಾದ ಮಾಡಿದವು. ರಾಮಚರಣನು ಆನಂದದಿಂದ ಪ್ರಾಥ೵ನೆ ಮಾಡುತ್ತಾ ಹನುಮಾನ್ ಜೀಗೆ ತನ್ನ ಕೃತಜ್ಞತೆಯನ್ನು ಸಮಪಿ೵ಸಿದನು.

ಅಂದಿನಿಂದ ರಾಮಚರಣನು ತನ್ನ ಗೆಳೆಯರಿಗೆ ಹೇಳುತ್ತಿದ್ದನು, “ನಿಮ್ಮ ಬುದ್ಧಿಯನ್ನೂ, ಸಮಸ್ತ ಶಕ್ತಿಯನ್ನೂ, ಸಂಪೂಣ೵ವಾಗಿ ಉಪಯೋಗಿಸಿದ ಮೇಲೆಯೇ ದೇವರನ್ನು ಸಹಾಯಕ್ಕಾಗಿ ಪ್ರಾಥಿ೵ಸಿರಿ. ನಿಶ್ಚಯವಾಗಿಯೂ ಅವನು ಧಾವಿಸಿ ಬಂದು ನೆರವಾಗುವನು.. ದುಡಿಯುವವನಿಗೆ ಮಾತ್ರವೇ ದೈವದ ಸಹಾಯ.”

ಪ್ರಶ್ನೆಗಳು:
  1. ರಾಮಚರಣನು ಪ್ರಥಮ ಬಾರಿ ದೇವರನ್ನು ಪ್ರಾಥಿ೵ಸಿದಾಗ, ದೇವರು ಏಕೆ ಅವನ ಸಹಾಯಕ್ಕೆ ಬರಲಿಲ್ಲ?
  2. ದೇವರು ಅವನಿಗೆ ಯಾವಾಗ ಸಹಾಯ ಮಾಡಿದರು?
  3. ನಿಮಗೆ ಯಾವಾಗ ದೇವರ ಸಹಾಯ ಬೇಕಾಗುತ್ತದೆ? ಅದನ್ನು ಪಡೆಯಲು ನೀವು ಏನು ಮಾಡುವಿರಿ?

Leave a Reply

Your email address will not be published. Required fields are marked *