ಅಸೂಯೆ ಹಾಳುಮಾಡುತ್ತದೆ

Print Friendly, PDF & Email
ಅಸೂಯೆ ಹಾಳುಮಾಡುತ್ತದೆ

ಮಾಧವ ಮತ್ತು ಕೇಶವ ಒಂದೇ ಹಳ್ಳಿಯಲ್ಲಿದ್ದು ಬೇಸಾಯ ಮಾಡುತ್ತಿದ್ದರು. ಮಾಧವ ಬುದ್ಧಿವಂತ, ಕಷ್ಟಪಟ್ಟು ದುಡಿಯುತ್ತಿದ್ದನು. ಸದಾ ಸಂತೃಪ್ತನೂ, ಸಂತುಷ್ಠನೂ ಆಗಿದ್ದನು. ಆದರೆ ಕೇಶವ ಆಲಸಿ, ಚಿಂತಾಮಗ್ನ, ಸದಾ ವಿಷಾದಪಡುವನು. ಅವನಿಗೆ ಮಾಧವನನ್ನು ಕಂಡರೆ ಸ್ವಲ್ಪವೂ ಆಗುತ್ತಿರಲಿಲ್ಲ. ಅಷ್ಟೊಂದು ಹೊಟ್ಟೆಕಿಚ್ಚು. ಮಾಧವನು ಹಾಳಾಗಲಿ ಎಂದೇ ಅವನು ದಿನವೂ ದೇವರನ್ನು ಕೇಳಿಕೊಳ್ಳುತ್ತಿದ್ದನು. ದೇವರು ಮಾಧವನ ವಿಷಯದಲ್ಲಿ ತುಂಬಾ ದಯಾಳುವಾಗಿದ್ದನು. ಏಕೆಂದರೆ ಎಂದೂ ಯಾರೊಬ್ಬರಿಗೂ ಅವನು ಕೆಡಕು ಬಯಸುತ್ತಿರಲಿಲ್ಲ. ಊರಿನ ಪ್ರತಿಯೊಬ್ಬನೂ ಸದಾ ಸುಖಿಯಾಗಿರಬೇಕೆಂದು ಅವನು ಆಶಿಸುತ್ತಿದ್ದನು.

ಒಂದು ಸಲ ಮಾಧವನ ಅನೇಕ ವಾರಗಳ ಕಠಿಣ ಪರಿಶ್ರಮದಿಂದಾಗಿ ತೋಟದಲ್ಲಿ ವಿಶೇಷವಾದ ಒಂದು ಕುಂಬಳಕಾಯಿ ಬೆಳೆಯಿತು. ಅದರ ತೊಗಟೆಯ ಮೇಲೆ ಕಾಮನಬಿಲ್ಲಿನ ಏಳು ಬಣ್ಣಗಳಿದ್ದವು. ಅದು ಮೃದು ಮಧುರವಾದ ಜೇನಿನಂತಹ ಪರಿಮಳವನ್ನು ಬೀರುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ನಾಲ್ಕು ಕಾಲುಗಳು, ಸೊಂಡಿಲು, ಬಾಲಗಳೂ ಇರುವಂತೆ ಬೆಳೆದು ಅದೊಂದು ಆನೆಯಂತೆಯೇ ಕಾಣಿಸುತ್ತಿತ್ತು.

ಇಂತಹ ಆಶ್ಚರ್ಯಕರವಾದ ಕುಂಬಳಕಾಯಿಯನ್ನು ರಾಜನಿಗೆ ಕಾಣಿಕೆಯಾಗಿ ಅರ್ಪಿಸುವುದೇ ಸರಿ ಎಂದು ಮಾಧವನು ಭಾವಿಸಿದನು. ಅದನ್ನು ಜೋಪಾನವಾಗಿ ರಾಜಧಾನಿಗೆ ಎತ್ತಿಕೊಂಡು ಹೋಗಿ ಅರಮನೆಯನ್ನು ಪ್ರವೇಶಿಸಿ ರಾಜನ ಪಾದದ ಬಳಿ ಅದನ್ನಿರಿಸಿ ತನ್ನ ನಮ್ರ ಕಾಣಿಕೆಯನ್ನು ಒಪ್ಪಿಸಿಕೊಳ್ಳಬೇಕು ಎಂದು ವಿನಯದಿಂದ ಕೇಳಿಕೊಂಡನು. ಈ ಅಪರೂಪದ ಕಾಣಿಕೆ ಕಂಡು ರಾಜನಿಗೆ ತುಂಬಾ ಸಂತೋಷವಾಗಿ ಮಾಧವನಿಗೆ ಒಂದು ಜೀವಂತ ಆನೆಯನ್ನೇ ಬಹುಮಾನವಾಗಿ ಕೊಟ್ಟನು

ಕೇಶವನಿಗೆ ಈ ವಿಷಯ ತಿಳಿದೊಡನೆ ಮಾಧವನ ಬಗೆಗೆ ವಿಪರೀತ ಮಾತ್ಸರ್ಯ ಉಂಟಾಯಿತು. ಇಡೀ ರಾತ್ರಿ ಅವನಿಗೆ ನಿದ್ದೆ ಬರಲಿಲ್ಲ. “ಹೇಗಾದರೂ ಮಾಡಿ ನಾನು ಮಾಧವನಿಗಿಂತ ಹೆಚ್ಚಾಗಿ ರಾಜನನ್ನು ಸಂತೋಷ ಪಡಿಸಬೇಕು. ಆಗ ಅವನಿಗೆ ಕೊಟ್ಟಿದ್ದಕ್ಕಿಂತ ಮಿಗಿಲಾದ ಬಹುಮಾನವನ್ನು ರಾಜನು ನನಗೆ ಕೊಡಬಹುದು. ಆನೆಯ ಹಾಗಿರುವ ಒಂದು ಕುಂಬಳಕಾಯಿಂದಲೇ ರಾಜನು ಇಷ್ಟೊಂದು ಸಂತೋಷ ಪಡುವುದಾದರೆ ಜೀವಂತ ಆನೆಯ ಉಡುಗೊರೆಯಿಂದ ಇನ್ನೆಷ್ಟು ಸಂತೋಷಪಡಬಹುದು! ನನಗೆ ಒಂದೆರಡು ಹಳ್ಳಿಗಳನ್ನೇ ದತ್ತಿಯಾಗಿ ಕೊಟ್ಟು ನನ್ನನ್ನು ದೊಡ್ಡ ಜಮೀನುದಾರನನ್ನಾಗಿ ಮಾಡಬಹುದು,” ಎಂದು ಹೀಗೆಲ್ಲ ಯೋಚಿಸಿ ಕೇಶವನು ರಾತ್ರಿಯನ್ನು ಕಳೆದನು.

ಮಾರನೆಯ ದಿನ ತನ್ನ ತೋಟ, ಹಸು, ಎತ್ತು, ಕುರಿ, ಆಡು ಎಲ್ಲವನ್ನು ಮಾರಿಬಿಟ್ಟನು. ಬಂದ ಹಣದಿಂದ ಒಂದು ದೊಡ್ಡ ಆನೆಯನ್ನು ಕೊಂಡುಕೊಂಡು ಅದನ್ನು ನಡೆಸಿಕೊಂಡು ರಾಜನ ಬಳಿಗೆ ಹೋದನು. ಅರಮನೆ ಹೊಕ್ಕು ರಾಜನ ಮುಂದೆ ಆನೆಯನ್ನು ನಿಲ್ಲಿಸಿ, “ಕೃಪೆಯಿಟ್ಟು ಈ ಕಾಣಿಕೆಯನ್ನು ಒಪ್ಪಿಸಿಕೊಳ್ಳಬೇಕು,” ಎಂದು ಕೇಳಿಕೊಂಡನು. ಈ ಹಳ್ಳಿಯ ರೈತನು ತನಗೇಕೆ ಆನೆಯನ್ನು ಕಾಣಿಕೆಯಾಗಿ ಕೊಡುತ್ತಿದ್ದಾನೆ ಎನ್ನುವುದು ರಾಜನಿಗೆ ಅರ್ಥವಾಗಲಿಲ್ಲ. ಅತಿ ಬುದ್ಧಿವಂತನಾಗಿದ್ದ ಮಂತ್ರಿಯನ್ನು ಕರೆಸಿ ಈ ವಿಷಯ ಪರಿಶೀಲಿಸುವಂತೆಯೂ ಈ ಬೇಸಾಯಗಾರನಿಗೆ ಸೂಕ್ತವಾದ ಉಡುಗೊರೆ ಏನು ಕೊಡಬಹುದೆಂದು ಸೂಚಿಸುವಂತೆಯೂ ಹೇಳಿದನು.

ಕೇಶವನ ಸಂಗಡ ಸ್ವಲ್ಪ ಹೊತ್ತು ಮಾತನಾಡುವಷ್ಟರಲ್ಲೇ ಬುದ್ಧಿವಂತನಾಗಿದ್ದ ಮಂತ್ರಿಗೆ ಎಲ್ಲವೂ ಅರ್ಥವಾಗಿ ಹೋಯಿತು. ಅವನು ಕೇವಲ ಹೊಟ್ಟೆಕಿಚ್ಚಿನಿಂದ ಈ ಕಾಣಿಕೆ ತಂದಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯಿತು. ಅವನು ರಾಜನಿಗೆ ಹೀಗೆ ಹೇಳಿದನು, “ಮಹಾಪ್ರಭು, ಈ ಮೊದಲು ಬಂದಿದ್ದ ಒಕ್ಕಲಿಗನಿಗೆ ಅವನು ತಂದ ಕುಂಬಳಕಾಯಿ ಕಾಣಿಕೆಗೆ ಪ್ರತಿಯಾಗಿ ತಾವು ಸುಂದರವಾದ ಒಂದು ಆನೆಯನ್ನು ಬಹುಮಾನವಾಗಿ ನೀಡಿದಿರಿ. ಆದ್ದರಿಂದ ಈಗ ಪ್ರಭುಗಳು ಈ ಒಕ್ಕಲಿಗನ ಆನೆಗೆ ಪ್ರತಿಯಾಗಿ ಒಂದು ಕುಂಬಳಕಾಯಿಯನ್ನು ಉಡುಗೊರೆ ನೀಡಬಹುದು.”

ರಾಜನು ತನಗೆ ಸಾಮಾನ್ಯವಾದ ಒಂದು ಕುಂಬಳಕಾಯಿಯನ್ನು ಉಡುಗೊರೆಯಾಗಿ ನೀಡಿದ್ದು ಕಂಡು ಕೇಶವನಿಗೆ ಎದೆಯೊಡೆಯಿತು. ಅವನು ಆನೆಯನ್ನು ಕೊಳ್ಳಲು ತನ್ನ ಆಸ್ತಿಯನ್ನೆಲ್ಲ ಮಾರಿ ಬಿಟ್ಟಿದ್ದನು. ಅವನಿಗೆ ಕೊನೆಗೆ ಉಳಿದಿದ್ದು ಒಂದು ಕುಂಬಳಕಾಯಿ ಮಾತ್ರ. ಹೊಟ್ಟೆಕಿಚ್ಚು ಅವನ ಸರ್ವನಾಶಕ್ಕೆ ಕಾರಣವಾಯಿತು.

ಪ್ರಶ್ನೆಗಳು:
  1. ಮಾಧವ ಮತ್ತು ಕೇಶವರಲ್ಲಿದ್ದ ವ್ಯತ್ಯಾಸವೇನು? ಇವರಿಬ್ಬರಲ್ಲಿ ನೀವು ಯಾರನ್ನು ಇಷ್ಟಪಡುತ್ತೀರಿ? ಏಕೆ?
  2. ಮಾಧವನಿಗೆ ಆನೆಯನ್ನು ಬಹುಮಾನವಾಗಿ ಕೊಟ್ಟ ರಾಜನು, ಕೇಶವನಿಗೆ ಕೇವಲ ಕುಂಬಳಕಾಯಿಯನ್ನು ಬಹುಮಾನವಾಗಿ ಏಕೆ ನೀಡಿದನು?
  3. ನೀವು ಶಾಲೆಯಲ್ಲಿ ಬಹುಮಾನ ಗೆದ್ದಿರುವುದನ್ನು ಕಂಡ ನಿಮ್ಮ ಗೆಳೆಯನೊಬ್ಬ/ಳು ನಿಮ್ಮ ಬಗ್ಗೆ ಅಸೂಯೆ ಪಟ್ಟರೆ, ನೀವು ಅವನಿಗೆ/ಳಿಗೆ ಏನು ಸಲಹೆ ನೀಡುವಿರಿ ಎಂದು ಬರೆಯಿರಿ.

Leave a Reply

Your email address will not be published. Required fields are marked *