ಪ್ರಾಣಿ ದಯೆ- 1

Print Friendly, PDF & Email
ಪ್ರಾಣಿ ದಯೆ-1

ಭಾರತದ ಮಹಾಪುರುಷರಲ್ಲಿ ಅರುಣಾಚಲದ ಶ್ರೀ ರಮಣ ಮಹರ್ಷಿಗಳು ತುಂಬಾ ಪ್ರಸಿದ್ಧರಾದವರು. ಅವರು ಮಾನವರ ಬಗೆಗೆ ಹೇಗೋ ಪ್ರಾಣಿ ಪಕ್ಷಿಗಳ ವಿಷಯದಲ್ಲೂ ಹಾಗೆಯೇ ಪ್ರೀತಿಯಿಂದ, ಕರುಣೆಯಿಂದ ನಡೆದುಕೊಳ್ಳುತ್ತಿದ್ದರು.

ಅವರ ಆಶ್ರಮದಲ್ಲಿ ನಾಯಿ, ಹಸು, ಕೋತಿ, ಅಳಿಲು, ನವಿಲು ಮೊದಲಾದ ಅನೇಕ ಪ್ರಾಣಿಗಳಿದ್ದವು. ತಮ್ಮ ದರ್ಶನ ಪಡೆಯಲು ತಮ್ಮ ಸಮೀಪದಲ್ಲಿ ಕುಳಿತುಕೊಳ್ಳಲು ಮಾನವರ ಹಾಗೆಯೇ ಈ ಪ್ರಾಣಿ ಪಕ್ಷಿಗಳೂ ಹಂಬಲಿಸುತ್ತವೆ ಎಂಬುದು ಅವರಿಗೆ ಗೊತ್ತು. ಆದ್ದರಿಂದಲೇ ಅವುಗಳಿಗೂ ತಮ್ಮ ಪ್ರೇಮವನ್ನು ರಮಣ ಮಹರ್ಷಿಗಳು ಧಾರೆಯೆರೆಯುತ್ತಿದ್ದರು. ಎಂದೂ ಅವರು ಪ್ರಾಣಿಗಳನ್ನು ಅದು ಇದು ಎಂದು ಹೇಳುತ್ತಿರಲಿಲ್ಲ. ಅವನು, ಅವಳು ಎಂದು ಮನುಷ್ಯರನ್ನು ಹೇಗೋ ಹಾಗೆಯೇ ಸಂಬೋಧಿಸುತ್ತಿದ್ದರು. ನಾಯಿಗಳ ವಿಷಯದಲ್ಲಿ ವಿಚಾರಿಸುವಾಗ ಪ್ರೀತಿಯಿಂದ “ಮಕ್ಕಳಿಗೆ ಊಟ ಹಾಕಿದ್ದಾಯಿತೇ?” ಎನ್ನುತ್ತಿದ್ದರು. ಪ್ರತಿ ದಿನ ಊಟದ ಹೊತ್ತಿನಲ್ಲಿ ಮೊದಲು ನಾಯಿಗಳಿಗೆ, ಆಮೇಲೆ ಭಿಕ್ಷುಕರಿಗೆ ಊಟ ಬಡಿಸಿದ ನಂತರವೇ ಭಕ್ತರಿಗೆ ಊಟದ ಏರ್ಪಾಡಾಗುತ್ತಿತ್ತು.

ಒಂದು ದಿನ ಕೋತಿಯೊಂದು ತನ್ನ ಮರಿಗಳನ್ನು ಕರೆದುಕೊಂಡು ಮಹರ್ಷಿಗಳು ಕುಳಿತಿದ್ದ ಕಡೆಗೆ ಬರುತ್ತಿತ್ತು. ಪ್ರಾರ್ಥನಾ ಮಂದಿರದ ಶಾಂತಿ ಕೆಡುವುದೆಂದು ಭಕ್ತರು ಅದನ್ನು ಅಲ್ಲಿಂದ ಹೊರಕ್ಕೆ ಓಡಿಸಲು ಪ್ರಯತ್ನಿದ್ದರು. ಮಹರ್ಷಿಗಳು ಅವರನ್ನು ತಡೆದು ನುಡಿದರು. “ಆಕೆಯನ್ನು ಬಿಡಿ, ತಡೆಯಬೇಡಿ. ಅವಳು ಇಲ್ಲಿ ಬರಲಿ. ನಿಮ್ಮ ಹಾಗೆಯೇ ಅವಳೂ ತನ್ನ ಮಕ್ಕಳನ್ನು ನನಗೆ ತೋರಿಸಿ ಆಶೀರ್ವಾದ ಪಡೆಯಲು ಬರುತ್ತಿದ್ದಾಳೆ.”

ಆಶ್ರಮದಲ್ಲಿ ಒಂದು ಹಸು ಇತ್ತು. ಮಹರ್ಷಿಗಳು ಆಕೆಯನ್ನು ಲಕ್ಷ್ಮೀ ಎಂದು ಕರೆಯುತ್ತಿದ್ದರು. ಅವರು ಎಲ್ಲೇ ಇರಲಿ, ನೇರವಾಗಿ ಲಕ್ಷ್ಮೀ ಅವರ ಬಳಿಗೆ ಹೋಗುವಳು. ಮೈ ತಡವಿಸಿಕೊಂಡು ತನಗಾಗಿ ಮಹರ್ಷಿಗಳು ಇಟ್ಟಿರುವ ಬಾಳೆಹಣ್ಣನ್ನೋ ಬೇರೆ ಯಾವುದಾದರೂ ಹಣ್ಣನ್ನು ತಿಂದು ಬರುವಳು. ಆಶ್ರಮದಲ್ಲಿದ್ದವರೆಲ್ಲರಿಗೂ ಲಕ್ಷ್ಮೀಯನ್ನು ಕಂಡರೆ ಪ್ರೀತಿ. ಮಹರ್ಷಿಗಳ ಜಯಂತಿಯಂದೇ ಲಕ್ಷ್ಮೀ ಮೂರು ಹೆಣ್ಣು ಕರುಗಳಿಗೆ ಜನ್ಮವಿತ್ತಿದ್ದಳು. ಲಕ್ಷ್ಮೀಗೆ ವಯಸ್ಸಾಯಿತು. ಒಮ್ಮೆ ಕಾಯಿಲೆ ಬಂದಿತು. ಇನ್ನೇನು ಮರಣ ಸಮೀಪಿಸಿದೆಯೆನಿಸಿತು. ಆಗ ಮಹರ್ಷಿಗಳು ಅವಳ ಬಳಿಗೆ ಬಂದು ಕುಳಿತರು. “ಅಮ್ಮ ಲಕ್ಷ್ಮೀ, ನಾನು ನಿನ್ನ ಬಳಿಗೆ ಇರಬೇಕೆನ್ನುತ್ತೀಯಾ? ಆಗಲಿ”. ಎಂದು ಪ್ರೀತಿಯಿಂದ ನೇವರಿಸುತ್ತಾ ಅವಳ ತಲೆಯನ್ನು ತಮ್ಮ ತೊಡೆಯ ಮೇಲೆ ಇರಿಸಿಕೊಂಡರು. ಸ್ವಲ್ಪ ಹೊತ್ತಿನಲ್ಲಿಯೇ ಲಕ್ಷ್ಮೀ ಶಾಂತವಾಗಿ ಪ್ರಾಣ ಬಿಟ್ಟಳು. ಆಶ್ರಮದ ಆವರಣದಲ್ಲೇ ಜಿಂಕೆ, ನಾಯಿ, ಕಾಗೆಗಳ ಸಮಾಧಿ ಸ್ಥಳದಲ್ಲೇ ಲಕ್ಷ್ಮೀಗೂ ಶಾಸ್ತ್ರ ವಿಧಿಗನುಗುಣವಾಗಿ ಅಂತ್ಯಕ್ರಿಯೆ ನಡೆಸಿ ಸಮಾಧಿ ಮಾಡಿದರು. ಸಮಾಧಿಯ ಮೇಲೆ ಲಕ್ಷ್ಮೀಯ ಚಿತ್ರ ಕೆತ್ತಿದ್ದ ಶಿಲೆಯೊಂದನ್ನು ನೆಡಲಾಯಿತು.

ಪ್ರಾಣಿಗಳ ವಿಷಯದಲ್ಲಿ ಮಹರ್ಷಿಗಳಿಗೆ ಅಷ್ಟೊಂದು ಆದರ, ಕರುಣೆ, ಪ್ರೇಮಗಳು ತುಂಬಿದ್ದವು.

ಪ್ರಶ್ನೆಗಳು:
  1. ರಮಣ ಮಹಷಿ೵ಗಳು ತಮ್ಮ ನಡವಳಿಕೆಯಿಂದ ಏನನ್ನು ಕಲಿಸಿದರು?
  2. ಪ್ರಾಣಿಗಳು ಮರಣ ಹೊಂದಿದ ನಂತರ ಏಕೆ ಅವುಗಳ ಸಮಾಧಿ ಕಟ್ಟಿದರು?
  3. ಪ್ರಾಣಿಗಳ ಬಗೆಗೆ ಮಾನವನು ತೋರಿದ ಪ್ರೀತಿಯ ಬಗ್ಗೆ ನೀವು ಕೇಳಿದ ಅಥವಾ ನೋಡಿದ ಯಾವುದಾದರೂ ಉದಾಹಣೆಯನ್ನು ಬರೆಯಿರಿ.

Leave a Reply

Your email address will not be published. Required fields are marked *