ಪ್ರಾಣಿ ದಯೆ- 2

Print Friendly, PDF & Email
ಪ್ರಾಣಿ ದಯೆ- 2

ಸರ್ ಐಸಾಕ್ ನ್ಯೂಟನ್ ಬಹು ದೊಡ್ಡ ವಿಜ್ಞಾನಿ, ಜಗತ್ ಪ್ರಸಿದ್ಧ ಸಂಶೋಧಕ. ಅಸಾಮಾನ್ಯ ಪ್ರತಿಭೆಯ ಜೊತೆಗೆ ಅವನಲ್ಲಿ ಸಹನೆ, ತಾಳ್ಮೆ, ಪ್ರಾಣಿಗಳನ್ನು ಕುರಿತು ಅನುಕಂಪ ಮೊದಲಾದ ಗುಣಗಳಿದ್ದವು.

ಒಮ್ಮೆ ನ್ಯೂಟನ್ ಒಂದು ಜಟಿಲವಾದ ಸಮಸ್ಯೆಯನ್ನು ಬಿಡಿಸುವುದರಲ್ಲಿ ನಿರತನಾಗಿದ್ದನು. ರಾತ್ರಿ ಸರಿಹೊತ್ತಾದರೂ ಸಮಸ್ಯೆ ಬಗೆಹರಿದಿರಲಿಲ್ಲ. ಲೆಕ್ಕಾಚಾರ ಮುಗಿದಿರಲಿಲ್ಲ. ಬೇರೆ ಯಾವುದರ ಪರಿವೆಯೂ ಇಲ್ಲದೇ ನ್ಯೂಟನ್ ಆ ಸಮಸ್ಯೆಯಲ್ಲೇ ಮುಳುಗಿ ಹೋಗಿದ್ದನು. ಅವನು ತುಂಬ ಪ್ರೀತಿಯಿಂದ ಸಾಕಿದ್ದ ನಾಯಿ ಡೈಮಂಡ್ ಅವನ ಕಾಲ ಬಳಿ ಮೇಜಿನ ಕೆಳಗೆ ಮಲಗಿತ್ತು. ರಾತ್ರಿ ಬಹಳ ಹೊತ್ತಾಗುವ ವೇಳೆಗೆ ನ್ಯೂಟನ್ ಮಾಡುತ್ತಿದ್ದ ಕೆಲಸ ಮುಗಿಯಿತು. ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಿದ ಸಮಾಧಾನದಿಂದ ಅವನು ನಿಟ್ಟುಸಿರುಬಿಟ್ಟನು. ಸ್ವಲ್ಪ ಹೊತ್ತು ಹೊರಗೆ ತಣ್ಣನೆಯ ಗಾಳಿಯಲ್ಲಿ ಅಡ್ಡಾಡಿಕೊಂಡು ಬರಬೇಕೆನಿಸಿತು. ತಾನು ಅಷ್ಟು ಹೊತ್ತು ಲೆಕ್ಕಾಚಾರ ಮಾಡಿದ್ದ ಕಾಗದಗಳನ್ನೆಲ್ಲ ಜೋಡಿಸಿ ಮೇಜಿನ ಮೇಲೆ ತನ್ನ ಸಂಶೋಧನೆಯ ಫಲಿತಗಳನ್ನಿರಿಸಿದ್ದ ಫೈಲಿನೊಳಗಿಟ್ಟು ಮೇಲಕ್ಕೆದ್ದನು.

ಯಜಮಾನನು ಹೊರಕ್ಕೆ ಹೊರಡುತ್ತಿರುವುದನ್ನು ನೋಡಿದ ಡೈಮಂಡ್ ತಾನೂ ಅವನೊಂದಿಗೆ ಹೋಗಲೆಂದು ದಡಕ್ಕನೆ ಎದ್ದಿತು. ಮೇಜಿನ ಕೆಳಗಿನಿಂದ ಹೊರಕ್ಕೆ ನೆಗೆದು ಬಾಗಿಲ ಕಡೆಗೆ ಓಡಿತು. ಆ ರಭಸಕ್ಕೆ ಮೇಜು ಅಲ್ಲಾಡಿ ಉರಿಯುತ್ತಿದ್ದ ಮೇಣದ ಬತ್ತಿ ಉರುಳಿ ಬಿದ್ದಿತು. ಅಮೂಲ್ಯವಾದ ಸಂಶೋಧನೆಗಳನ್ನು ಬರೆದಿಟ್ಟಿದ್ದ ಫೈಲು ಹೊತ್ತಿಕೊಂಡು ಉರಿಯತೊಡಗಿತು. ಕಾಗದ ಸುಟ್ಟ ವಾಸನೆ ಮೂಗಿಗೆ ಬಡಿದು ನ್ಯೂಟನ್ ಓಡಿ ಬಂದು ಬೆಂಕಿಯನ್ನು ಆರಿಸುವ ಹೊತ್ತಿಗೆ ಇಡೀ ಫೈಲು ಸುಟ್ಟು ಬೂದಿಯಾಗಿತ್ತು. ಆತನಿಗೆ ಎಷ್ಟು ನಿರಾಶೆಯಾಗಿರಬೇಕು! ಎಷ್ಟೋ ಕಾಲ ಬಹು ಕಷ್ಟಪಟ್ಟು ಮಾಡಿದ ಸಂಶೋಧನೆಯೆಲ್ಲ ಸುಟ್ಟು ಹೋಯಿತಲ್ಲ! ಅದಕ್ಕೆ ಕಾರಣವಾದ ನಾಯಿಯ ಮೇಲೆ ಆ ಸಮಯದಲ್ಲಿ ಯಾರಿಗೇ ಆಗಲಿ ಅಸಾಧ್ಯ ಕೋಪ ಬಂದುಬಿಡಬೇಕು.

ಡೈಮಂಡ್ ಸುಟ್ಟ ಕಾಗದವನ್ನು ಮೂಸುತ್ತಾ ಬಾಲ ಅಲ್ಲಾಡಿಸುತ್ತಾ ನಿಂತಿತ್ತು. ನ್ಯೂಟನ್ ಒಮ್ಮೆ ಅದನ್ನು ದಿಟ್ಟಿಸಿ ನೋಡಿದನು. ‘ಪಾಪ, ಅದಕ್ಕೇನು ಗೊತ್ತಾಗಬೇಕು ತಾನೆಂಥ ಕೆಲಸ ಮಾಡಿದೆ ಎಂದು!’ ನ್ಯೂಟನ್ ಎಂದಿನಂತೆಯೆ ಅದರ ಬೆನ್ನು ತಡವುತ್ತಾ “ಹೋಗಲಿ ಬಿಡು ಡೈಮಂಡ್, ನೀನು ಎಂಥ ಕೆಲಸ ಮಾಡಿದೆ ಎನ್ನುವುದು ನಿನಗೆ ಗೊತ್ತಾಗುವುದಿಲ್ಲ, ಹೋಗಲಿ ಬಿಡು,” ಎಂದನು.

ಪ್ರಾಣಿಯನ್ನು ಕುರಿತ ಈ ಸಹಾನುಭೂತಿ, ಪ್ರೀತಿ ನ್ಯೂಟನ್‌ನನ್ನು ಮಹಾಪುರುಷನನ್ನಾಗಿಸಿದವು.

ಪ್ರಶ್ನೆಗಳು:
  1. ಪ್ರಾಣಿಗಳ ಮೇಲೆ ದಯೆ ತೋರಿಸುವುದರಿಂದ ನಮಗೆ ಏನು ಸಿಗುತ್ತದೆ?
  2. ನ್ಯೂಟನ್, ಡೈಮಂಡ್ ಮಾಡಿದ ತಪ್ಪಿಗೆ ಶಿಕ್ಷಿಸುವ ಬದಲು ಏಕೆ ಅದನ್ನು ಕ್ಷಮಿಸಿದನು?
  3. ನೀವು ನ್ಯೂಟನ್ ಜಾಗದಲ್ಲಿದ್ದಿದ್ದರೆ ಏನು ಮಾಡುತ್ತಿದ್ದಿರಿ?

Leave a Reply

Your email address will not be published. Required fields are marked *

error: