ಕೃಷ್ಣನ ಶಾಂತಿ ಸಂದೇಶ

Print Friendly, PDF & Email
ಕೃಷ್ಣನ ಶಾಂತಿ ಸಂದೇಶ

ಕೃಷ್ಣನು ಯುದ್ಧ ಪ್ರವರ್ತಕನೆಂದು ಅನೇಕರು ಭಾವಿಸಿದ್ದಾರೆ. ಕಾರಣ ಯುದ್ಧ ವಿಮುಖನಾಗಿ ಓಡ ಬಯಸಿದ ಅರ್ಜುನನನ್ನು ಅವನು ಒಡಂಬಡಿಸಿದ್ದ. ನಿಜವಾಗಿಯೂ ಅವನು ಯುದ್ಧವನ್ನು ನಿವಾರಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದನು. ಪಾಂಡವರು ಅರಣ್ಯವಾಸವನ್ನು ಮುಗಿಸಿ ಬಂದ ಮೇಲೆ ಅವರಿಗೆ ಕೊಡಬೇಕಾದ ರಾಜ್ಯದ ಪಾಲನ್ನು ಕೌರವರು ಕೊಡಲು ನಿರಾಕರಿಸಿದರು; ಎಲ್ಲೆಲ್ಲಿಯೂ ವಿರೋಧ ವಾತಾವರಣ ಹಬ್ಬಿಕೊಂಡಿತು. ಆದ್ದರಿಂದ ತಾನೇ ಸ್ವತಃ ಭಗವಂತನಾಗಿದ್ದ ಕಾರಣ ಕೃಷ್ಣನು ಸಂಧಾನದ ಅಂತಿಮ ಪ್ರಯತ್ನ ಮಾಡಲು ಯೋಚಿಸಿದನು. ಧರ್ಮರಾಜ ಮತ್ತು ಅವನ ಸೋದರರ ವಿಶೇಷ ಧೂತನಾಗಿ ಧೃತರಾಷ್ಟ್ರನ ಆಸ್ಥಾನಕ್ಕೆ ಸ್ವಯಂ ಹೋಗಲು ನಿರ್ಧರಿಸಿದನು.

ಹಸ್ತಿನಾಪುರಕ್ಕೆ ಹೊರಡುವ ಮೊದಲು ಅವನು ಪಾಂಡವರೊಂದಿಗೆ ಆಲೋಚಿಸಿದನು. ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಕೃಷ್ಣನು ಸ್ಯಾತಕಿಯೊಡನೆ ಹಸ್ತಿನಾಪುರವನ್ನು ಸೇರಿದನು. ತಮ್ಮ ಆಡಂಬರ ಹಾಗೂ ವೈಭವಗಳನ್ನು ಮೆರೆಸಿ ಕೃಷ್ಣನನ್ನು ಮೆಚ್ಚಿಸುವುದಕ್ಕಾಗಿ ಕೌರವರು ಅವನ ಆಗಮನಕ್ಕಾಗಿ ಅತ್ಯಂತ ಪ್ರಯಾಸಪಟ್ಟು ಸಿದ್ಧತೆಗಳನ್ನೆಲ್ಲಾ ಮಾಡಿದರು. ಪಟ್ಟಣದ ಮಹಾದ್ವಾರದಲ್ಲಿ ಸ್ವತಃ ದುರ್ಯೋಧನನು ತನ್ನ ತಮ್ಮಂದಿರು ಮತ್ತು ಕರ್ಣನೊಂದಿಗೆ ಕೃಷ್ಣನನ್ನು ಸ್ವಾಗತಿಸಲು ನಿಂತನು. ರಾಜಭವನದಲ್ಲಿ ಅಂದು ತಮ್ಮ ಅತಿಥಿಯಾಗಿದ್ದುಕೊಂಡು ಭೋಜನಕೂಟದಲ್ಲಿ ತಮ್ಮೊಂದಿಗೆ ಪಾಲ್ಗೊಳ್ಳಬೇಕೆಂದು ಅವನು ಶಾಂತಿದೂತನನ್ನು ಆಮಂತ್ರಿಸಿದನು. ಆದರೆ ಕೃಷ್ಣನು ಅತ್ಯಂತ ವಿನಯ ಪೂರ್ವಕವಾಗಿ ಹೇಳಿದನು: “ನನ್ನ ಪ್ರೀತಿಯ ಭಾವನೇ, ನಾನು ನಿನ್ನ ಶತ್ರುಗಳ ವಿಶೇಷ ದೂತಗಾರನಾಗಿ ಬಂದಿದ್ದೇನೆ. ಆದ್ದರಿಂದ ನಿಯಮದ ಪ್ರಕಾರ ದೂತ ತನ್ನ ಕಾಯ೵ವು ಪೂರ್ಣವಾಗುವವರೆಗೆ ಆತಿಥ್ಯ ಮಾಡುವ, ಯಜಮಾನನ ಜೊತೆ ಭುಂಜಿಸುವುದು ಕೂಡದು.”

ಹಾಗೆ ಹೇಳಿ ಕೃಷ್ಣನು ಅಲ್ಲಿಯೇ ಹತ್ತಿರದಲ್ಲಿದ್ದ ವಿದುರನ ಮನೆಗೆ ಹೋದನು. ಅನಿರೀಕ್ಷಿತವಾಗಿ ಭಗವಂತನ ಆಗಮನವನ್ನು ಕಂಡ ವಿದುರನಿಗೆ ಆನಂದಾಶ್ಚಯ೵ಗಳು ಏಕಕಾಲಕ್ಕೆ ಉಂಟಾದವು. ಅವನು ಅತ್ಯಂತ ಭಕ್ತಿಪೂರ್ವಕ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ ಕೃಷ್ಣನನ್ನು ಗೌರವಿಸಿದನು. ತನ್ನ ಭಕ್ತನ ಮನೆಯಲ್ಲಿ ಇಳಿದುಕೊಂಡಾಗ ಕೃಷ್ಣನಿಗೂ ಆನಂದವಾಯಿತು.

ವಿದುರ ಕೃಷ್ಣನಿಗೆ ಹೇಳಿದನು: “ಹೇ ಭಗವಂತಾ, ಈ ದುಷ್ಟ ಕೌರವರೊಂದಿಗೆ ಶಾಂತಿ ಸಂಧಾನಕ್ಕಾಗಿ ನೀನೇಕೆ ಇಷ್ಟೊಂದು ತೊಂದರೆ ತೆಗೆದುಕೊಳ್ಳುತ್ತಿರುವೆ? ಅವರು ಯುದ್ಧಕ್ಕಾಗಿ ತವಕಪಡುತ್ತಿರುವುದು ನಿನಗೆ ಗೊತ್ತೇ ಇದೆ.”

ಕೃಷ್ಣನು ಮುಗುಳ್ನಗೆ ನಕ್ಕು, “ಪ್ರಿಯ ವಿದುರಾ, ನಾನು ಎಲ್ಲರ ಮನಸ್ಸನ್ನೂ ಬಲ್ಲೆ. ದುರ್ಯೋಧನ ಮತ್ತು ಆತನ ತಮ್ಮಂದಿರು ಸಂಧಿಗೆ ಒಪ್ಪುವರೆಂದು ನಾನೆಂದೂ ಬಗೆದಿಲ್ಲ. ಆದರೆ ಶಾಂತಿಗಾಗಿ ಪ್ರಯತ್ನಿಸಿ ರಕ್ತಪಾತವನ್ನು ತಡೆಗಟ್ಟಬೇಕಾದುದು ನನ್ನ ಕರ್ತವ್ಯವೆಂದು ನಾನು ಭಾವಿಸಿದೆ. ನಾನು ಕೊನೆಯ ಯತ್ನವನ್ನೂ ಮಾಡುವೆ,” ಎಂದನು.

ಅನಂತರ ಕೃಷ್ಣನು ಧೃತರಾಷ್ಟ್ರ ಮಹಾರಾಜನ ಒಡ್ಡೋಲಗವನ್ನು ಪ್ರವೇಶಿಸಿದನು. ಧೃತರಾಷ್ಟ್ರ, ದುರ್ಯೊಧನ, ಭೀಷ್ಮ, ದ್ರೋಣ ಮತ್ತು ಕರ್ಣರು ಅವನನ್ನು ಸ್ವಾಗತಿಸಿ ಯೋಗ್ಯ ಆಸನವನ್ನು ಕೊಟ್ಟರು. ಸುತ್ತಲೂ ಒಮ್ಮೆ ಕಣ್ಣಾಡಿಸಿ ನೋಡಿದಾಗ ಪೂಜ್ಯರಾದ ಅನೇಕ ಋಷಿ-ಮುನಿಗಳಿಗೆ ಯೋಗ್ಯವಾದ ಆಸನಗಳನ್ನು ಕೊಡದಿರುವುದನ್ನು ಕೃಷ್ಣನು ಕಂಡನು. ಆದ್ದರಿಂದ ಅವನು, “ಈ ಗೌರವಾನ್ವಿತ ವ್ಯಕ್ತಿಗಳಿಗೆ ಯೋಗ್ಯ ಆಸನಗಳನ್ನು ಕೊಟ್ಟು ಕುಳ್ಳಿರಿಸಿದ ಮೇಲೆ ನಾನು ನನ್ನ ಆಸನವನ್ನು ಸ್ವೀಕರಿಸುವೆ,” ಎಂದನು.

ಎಲ್ಲರೂ ಉಚಿತಾಸನಗಳಲ್ಲಿ ಕುಳಿತುಕೊಂಡ ತರುವಾಯ ಕೃಷ್ಣನು ತನ್ನ ಕಾಯ೵ ಗೌರವವನ್ನು ಕುರಿತು ವಿವರಿಸತೊಡಗಿದನು. ಅವನು ಹೇಳಿದನು: “ಇಲ್ಲಿ ಮಂಡಿಸಿರುವ ಗೌರವಾನ್ವಿತ ಶ್ರೇಷ್ಠ ವ್ಯಕ್ತಿಗಳ ಸಮ್ಮುಖದಲ್ಲಿ ಧೃತರಾಷ್ಟ್ರನಿಗೆ ನನ್ನ ಒಂದು ಕಳಕಳಿಯ ಹೇಳಿಕೆಯೊಂದನ್ನು ಮಂಡಿಸುತ್ತಿದ್ದೇನೆ. ನನ್ನ ಹೇಳಿಕೆಯನ್ನು ಮಾನ್ಯ ಮಾಡಿ ಪಾಂಡವರಿಗೆ ಅವರ ಪಾಲಿನ ಅರ್ಧ ರಾಜ್ಯವನ್ನು ಕೊಡಬೇಕು. ಇದರಿಂದ ಅನಾವಶ್ಯಕವಾಗಿ ಉಂಟಾಗುವ ರಕ್ತಪಾತವು ತಪ್ಪಿ ಚಿರಂತನ ಶಾಂತಿ ನೆಲೆಗೊಳ್ಳುವುದು.” ಭೀಷ್ಮದ್ರೋಣಾದಿ ಇತರ ವೃದ್ಧರು ಕೃಷ್ಣನ ಸಲಹೆಗೆ ಮನಃಪೂರ್ವಕವಾಗಿ ಬೆಂಬಲ ನೀಡಿದರು. ಆದರೆ ದುರ್ಯೋಧನನು ರಾಜ್ಯವನ್ನು ಪಾಲು ಮಾಡುವ ಯಾವ ಮಾತುಗಳನ್ನೇ ಆಗಲಿ ಉಗ್ರವಾಗಿ ಖಂಡಿಸಿದನು. ಅವನು ವಿಚಾರ ಮಾಡದೇ ಹರಟಲು ಪ್ರಾರಂಭಿಸಿದನು, “ಕೃಷ್ಣಾ, ಪಾಂಡವರಿಗೆ ಹೇಳು. ಏನೇ ಆಗಲಿ ಈ ರಾಜ್ಯದ ಸರಹದ್ದಿನ ಸೂಜಿ ಮೊನೆಯಷ್ಟು ಸ್ಥಳವನ್ನೂ ಸಹ ಅವರು ಪಡೆಯಲಾರರು. ನಾವು ಯುದ್ಧಕ್ಕೆ ಸಿದ್ಧರಿದ್ದೇವೆ.”

ತನ್ನ ಮಗನ ಈ ಬಗೆಯ ದುರಾಗ್ರಹದ ನಿಲುವನ್ನು ಮನಸ್ಸಿನಲ್ಲಿಯೇ ಮೆಚ್ಚಿಕೊಂಡನಾದರೂ ಧೃತರಾಷ್ಟ್ರನು ಹೊರತೋರಿಕೆಗೆ, ಈ ಬಗೆಯ ಹಗೆತನದ ಮನೋಭಾವವನ್ನು ಇಟ್ಟುಕೊಳ್ಳುವುದು ಸರಿಯಲ್ಲವೆಂದು ಅಡ್ಡಿ ಮಾಡುವ ಬಲಹೀನ ಪ್ರಯತ್ನವನ್ನು ಮಾಡಿದನು. ಗಾಂಧಾರಿಯೂ ಸಹ ತನ್ನ ಮಗನೊಂದಿಗೆ ವಾದಿಸಿ ಸ್ವಲ್ಪ ಚಾಲನೆಯನ್ನು ಕೊಟ್ಟಳು. ಆದರೆ ತನ್ನ ಕಿಂಕರ ಕರ್ಣನ ಮತ್ತಿತರರ ಬೆಂಬಲ ಪಡೆದ ದುಯೋ೵ಧನನ ಮನಸ್ಸು ಮಣಿಯಲಿಲ್ಲ. ಕೊನೆಗೆ ಕೃಷ್ಣನು ಹೇಳಿದನು: “ಪಾಂಡವರು ಬಲಹೀನರೆಂದು ಭಾವಿಸಬೇಡಿ. ಭೀಮಾಜು೵ನರ ಪರಾಕ್ರಮ ಮತ್ತು ಧರ್ಮರಾಜನ ನೀತಿಯುಕ್ತ ಮುನಿಸು ಸಮಸ್ತ ವಿಶ್ವವನ್ನೇ ನಾಶ ಮಾಡಲು ಸಮರ್ಥವಾಗಿವೆ. ಆದರೆ ಸಮಸ್ತ ಮಾನವ ಜನಾಂಗದ ಕಲ್ಯಾಣಕ್ಕಾಗಿ ಅವರು ಶಾಂತಿಯನ್ನು ಬಯಸುತ್ತಾರೆ. ಆದ್ದರಿಂದ ನಾನು ಮರಳಿ ಮನವಿಯನ್ನು ಮಾಡುತ್ತೇನೆ. ನಿಮ್ಮಲ್ಲರ ಒಳಿತಿಗಾಗಿ ಸಂಧಿಯನ್ನು ಮಾಡಿಕೊಳ್ಳುವುದು ವಿಹಿತ.”

ಆದರೆ ಅವನ ಮಾತುಗಳು ಪೌರುಷದ ಹುಚ್ಚಿನಿಂದ ಮತ್ತರಾದ ಕೌರವರ ಕಿವುಡ ಕಿವಿಗಳ ಮೇಲೆ ಬಿದ್ದಂತಾದವು. ಅವನನ್ನು ತಮ್ಮ ಸೆರೆಯಾಳಾಗಿಸುವ ಸಂಚನ್ನು ಸಹ ಅವರು ಮಾಡುತ್ತಿದ್ದರು. ಆದರೆ ಭಗವಾನ್ ಕೃಷ್ಣನು ಕ್ಷಣ ಮಾತ್ರದಲ್ಲಿ ತನ್ನ ದೈವಿಕ ವಿಶ್ವರೂಪದರ್ಶನವನ್ನು ನೀಡಿದನು. ತನ್ನ ಈ ವಿಶ್ವರೂಪವನ್ನು ಕಾಣಲು ಬೇಕಾದ ದಿವ್ಯದೃಷ್ಟಿಯನ್ನು ಅವನು ಕುರುಡುನಾದ ಧೃತರಾಷ್ಟ್ರನಿಗೆ ದಯಪಾಲಿಸಿದನು. ಆ ವಿಶ್ವರೂಪದರ್ಶನದಿಂದ ಕೌರವರ ಕಣ್ಣುಗಳು ಕುಕ್ಕಲಾರಂಭಿಸಿ ಅವರು ಅಲ್ಲಿಯೇ ಸ್ಥಂಭೀಭೂತರಾಗಿ ನಿಂತರು.

ಕೃಷ್ಣನು ವಿದುರ ಮತ್ತು ಸಾತ್ಯಕಿಯರೊಂದಿಗೆ ಅಲ್ಲಿಂದ ಹೊರಟನು. ಅಧರ್ಮದ ನಾಶಕ್ಕೆ ಮತ್ತು ಧರ್ಮದ ದುಂದುಭಿಯನ್ನು ಮೊಳಗಿಸಲಿಕ್ಕೆ ರಕ್ತಪಾತವು ಅನಿವಾರ್ಯವೆಂದು ಬಗೆದ ಭಗವಂತನು ಶಾಂತಿ ಸಂದೇಶದ ಅಂತಿಮ ಪ್ರಯತ್ನವನ್ನೂ ಮಾಡಿದನು.

ಪ್ರಶ್ನೆಗಳು:
  1. ಕೃಷ್ಣನು ಸಂಧಾನದ ನಿಯೋಗವನ್ನು ಪಡೆದುಕೊಂಡು ಹಸ್ತಿನಾಪುರಕ್ಕೆ ಹೊರಟ ಉದ್ದೇಶವೇನು?
  2. ಕೌರವರ ಸ್ಥಾನದಲ್ಲಿ ಅವನು ಪಡೆದ ಪ್ರತ್ಯುತ್ತರವೇನು?
  3. ಕೃಷ್ಣನು ತಾನು ಪರಮಾತ್ಮನೆಂದು ಅವರಿಗೆ ತೋರಿಸಿದ ಬಗೆ ಹೇಗೆ?

Leave a Reply

Your email address will not be published. Required fields are marked *