ಮನ್ಮನಾ ಭವ – ಹೆಚ್ಚಿನ ಓದುವಿಕೆ

Print Friendly, PDF & Email
ಮನ್ಮನಾ ಭವ – ಹೆಚ್ಚಿನ ಓದುವಿಕೆ
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು
ಮಾಮೇವೈಷ್ಯಸಿ ಯುಕ್ತ್ಯೆವಮಾತ್ಮಾನಂ ಮತ್ಪರಾಯಣಃ ||

(ಅಧ್ಯಾಯ ೯; ಶ್ಲೋಕ ೩೪)

ನನ್ನಲ್ಲೇ ಮನಸ್ಸುಳ್ಳವನಾಗಿರು, ನನ್ನ ಭಕ್ತನಾಗಿರು, ನನ್ನನ್ನೇ ಪೂಜಿಸು, ನನ್ನನ್ನು ನಮಸ್ಕರಿಸು. ಹೀಗೆ ನಾನೇ ಪರಮಗತಿಯೆಂದು ತಿಳಿದುಕೊಂಡು, ನನ್ನಲ್ಲಿ ಮನಸ್ಸನ್ನು ನಿಲ್ಲಿಸಿ, ನನ್ನನ್ನೇ ಹೊಂದುವೆ. ಅಂತಹವರು ನನ್ನವರೆಂಬ ಸತ್ಯವನ್ನು ನಾನು ದೃಢವಾಗಿ ಹೇಳುತ್ತೇನೆ.

ಬೃಂದಾವನದಲ್ಲಿ ಸಂಜೆಯ ಹೊತ್ತು ಗೋಪಿಯರು, ಕೃಷ್ಣನ ಮನೆಯಲ್ಲಿ ಮೊದಲು ಬೆಳಗಿಸಲ್ಪಡುತ್ತಿದ್ದ ದೀಪದಿಂದ ತಮ್ಮ ದೀಪವನ್ನು ಬೆಳಗಿಸಿಕೊಳ್ಳಲೋಸ್ಕರ ಕೃಷ್ಣನು ಬೆಳೆಯುತ್ತಿದ್ದ ನಂದನ ಮನೆಗೆ ಹೋಗುತ್ತಿದ್ದರು. ಈ ಪವಿತ್ರವಾದ ದೀಪದಿಂದ ತಮ್ಮ ದೀಪವನ್ನು ಹೊತ್ತಿಸಿಕೊಂಡರೆ, ಆ ಪಾವಿತ್ರ್ಯತೆಯನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋದಹಾಗೆ ಎಂದು ಅವರು ಭಾವಿಸುತ್ತಿದ್ದರು.
ಒಂದು ದಿನ ಒಬ್ಬ ಗೋಪಿಯು ಕೃಷ್ಣನ ಮನೆಯಲ್ಲಿ ದೀಪ ಹೊತ್ತಿಸಲು ಬಹಳ ಸಮಯ ತೆಗೆದುಕೊಂಡಳು. ಕಾಯುತ್ತಿದ್ದ ಉಳಿದ ಗೋಪಿಯರು, ತಾಳ್ಮೆಗೆಟ್ಟು ಬೇಗ ಬರುವಂತೆ ಅವಳನ್ನು ಕರೆದರು. ಗದ್ದಲವನ್ನು ಕೇಳಿ ಹೊರಬಂದ ಯಶೋದೆಯು, ಆ ಗೋಪಿಯು ಕಣ್ಣು ಮುಚ್ಚಿ ನಿಂತಿರುವುದನ್ನೂ ಮತ್ತು ಅವಳ ಬೆರಳುಗಳು ದೀಪದ ಜ್ವಾಲೆಯಲ್ಲಿ ಸುಟ್ಟು ಹೋಗಿರುವುದನ್ನೂ ನೋಡಿದಳು. ಅವಳಿಗೆ ತನ್ನ ಸುತ್ತಲಿನ ಪ್ರಜ್ಞೆಯೇ ಇರಲಿಲ್ಲ. ಅವಳನ್ನು ಎಚ್ಚರಗೊಳಿಸಿದಾಗ, ಅವಳು ದೀಪದ ಜ್ವಾಲೆಯಲ್ಲಿ ತಾನು ಶ್ರೀಕೃಷ್ಣನನ್ನು ನೋಡಿದ್ದಾಗಿ ಹೇಳಿದಳು. ಆ ದೃಶ್ಯವು ಅವಳಿಗೆ ಎಷ್ಟು ಆನಂದವನ್ನುಂಟುಮಾಡಿತೆಂದರೆ,ಅವಳಿಗೆ ತನ್ನ ಬೆರಳುಗಳು ಜ್ವಾಲೆಯಲ್ಲಿರುವುದೂ ಮತ್ತು ಸುಡುತ್ತಿರುವುದೂ ತಿಳಿಯಲೇ ಇಲ್ಲ. ಅವಳಿಗೆ ಯಾವ ವೇದನೆಯೂ ಆಗಲಿಲ್ಲ. ಗೋಪಿಯರ ಏಕಾಗ್ರಭಕ್ತಿ ಆ ರೀತಿಯದಾಗಿತ್ತು!

“ಪ್ರತಿಯೊಂದು ಜೀವಿಯ ಹೃದಯದೊಳಗಿನ ಆತ್ಮವೇ ದೇವರು. ನೀವು ಇದನ್ನು ನಂಬಿ, ಈ ನಂಬಿಕೆಯ ಆಧಾರದಲ್ಲಿ ಬದುಕನ್ನು ಮುನ್ನಡೆಸಿದರೆ, ಅದೇ ನಿಮಗೆ ಅಗತ್ಯ ಧ್ಯಾನವಾಗುತ್ತದೆ. ಈ ನಂಬಿಕೆಯು ಸಡಿಲವಾಗದಂತೆ ಅಥವಾ ಕಡೆಗಣಿಸಲ್ಪಡದಂತೆ ನೋಡಿಕೊಳ್ಳಿ; ಅದಕ್ಕೆ ದೃಢವಾಗಿ ಅಂಟಿಕೊಳ್ಳಿ, ಆ ನಂಬಿಕೆಯನ್ನು ಕಾರ್ಯರೂಪಕ್ಕೆ ತನ್ನಿ, ಅದನ್ನು ನಿಮ್ಮ ಆಲೋಚನೆಗಳು, ಮಾತು ಮತ್ತು ಕಾರ್ಯಗಳಲ್ಲಿ ಅಳವಡಿಸಿಕೊಳ್ಳಿ” ಎಂದು ಬಾಬಾ ಹೇಳಿದ್ದಾರೆ.

‘ಎಲ್ಲರಲ್ಲಿಯೂ ದೇವರಿದ್ದಾನೆ’ ಎಂಬುದನ್ನು ನಾವು ನಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಬೇಕು. ಆಗ ಮಾತ್ರ ನಾವು ಬಾಬಾರವರು ಹೇಳಿರುವ “ಎಲ್ಲರನ್ನೂ ಪ್ರೀತಿಸು; ಎಲ್ಲರ ಸೇವೆ ಮಾಡು” ಎಂಬುದನ್ನು ಅನುಸರಿಸಲು ಸಾಧ್ಯ.

Leave a Reply

Your email address will not be published. Required fields are marked *

error: