ಹರಿರ್ದಾತಾ ಅರ್ಥ
ಹರಿರ್ದಾತಾ ಅರ್ಥ
ಹರಿರ್ದಾತಾ ಹರಿರ್ಭೋಕ್ತಾ ಹರಿರನ್ನಂ ಪ್ರಜಾಪತಿಃ
ಹರಿರ್ವಿಪ್ರ ಶರೀರಸ್ತು ಭುಂಕ್ತೇ ಭೋಜಯತೇ ಹರಿಃ
ಎಲ್ಲ ಜೀವಿಗಳ ಅಧಿಪತಿ ಹರಿ, ಹಾಗೂ ಆತನೇ ಕೊಡುವವನು, ಆನಂದಿಸುವವನು ಮತ್ತು ಸ್ವತಃ ಆಹಾರವೇ ಆಗಿರುವನು.
ಆಹಾರ ಸೇವಿಸುವವನ ದೇಹವೇ ಹರಿ, ಹರಿಯೇ ಭುಜಿಸುವವನು ಮತ್ತು ಆಹಾರ ನೀಡುವವನು.
ನಾವು ಭೋಜನ ಮಾಡುವ ಮೊದಲು ಭಗವಂತನಿಗೆ ಅರ್ಪಿಸಿದಾಗ, ಅದು ಪ್ರಸಾದವಾಗುತ್ತದೆ ಮತ್ತು ದೋಷಗಳಿಂದ ಮುಕ್ತವಾಗುತ್ತದೆ. ಆಹಾರವು ದೇವರ ಕೊಡುಗೆಯಾಗಿದೆ. ನಾವು ಕೃತಜ್ಞತೆಯೊಂದಿಗೆ ಪ್ರಾರ್ಥನಾ ಮನೋಭಾವದಿಂದ ತಿನ್ನಬೇಕು. ಜೀವನ ಜ್ವಾಲೆಯನ್ನು ಬೆಳಗಿಸುವ ಕಿಡಿಯೇ ಆಹಾರ. ನಾವು ಆಹಾರವನ್ನು ಗೌರವಿಸಬೇಕು. ಪೋಲು ಮಾಡಬಾರದು. ನಮಗೆ ಬೇಕಾದಷ್ಟು ಮಾತ್ರ ನಾವು ಬಡಿಸಿಕೊಳ್ಳಬೇಕು. ನಾವು ತಿಂದು ಬಿಟ್ಟ ಆಹಾರವನ್ನು ಪಶು-ಪಕ್ಷಿಗಳಿಗೆ ನೀಡಬಹುದು.
ನಮ್ಮ ದೇಹದಲ್ಲಿ ವಾಸಿಸುವ ಭಗವಂತನೇ ಆಹಾರವನ್ನು ಸ್ವೀಕರಿಸುತ್ತಾನೆ. ಹಾಗಾಗಿ ನಾವು ಆಹಾರಕ್ಕೆ ಸಂಬಂಧಿಸಿದಂತೆ ಮೂರು ರೀತಿಯ ಶುಚಿತ್ವವನ್ನು ಗಮನಿಸಬೇಕು.
ಪದಾರ್ಥ ಶುದ್ಧಿ: ಅಡುಗೆಗೆ ಬಳಸುವ ಆಹಾರ ಪದಾರ್ಥಗಳು ಸ್ವಚ್ಛವಾಗಿರಬೇಕು.
ಪಾಕ ಶುದ್ಧಿ: ಆಹಾರವನ್ನು ಬೇಯಿಸುವ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಚ್ಛವಾಗಿರಬೇಕು.
ಪಾತ್ರ ಶುದ್ಧಿ: ನಾವು ಅಡುಗೆ ಮಾಡಲು ಮತ್ತು ಸೇವಿಸಲು ಶುದ್ಧ ಪಾತ್ರೆಗಳನ್ನು ಬಳಸಬೇಕು. ನಾವು ಶುದ್ಧವಾದ ಪರಿಸರದಲ್ಲಿ ತಿನ್ನಬೇಕು.
ದೇವರಿಗೆ ಆಹಾರವನ್ನು ಅರ್ಪಿಸಿದಾಗ ಆತನು ಅದನ್ನು ಸ್ವೀಕರಿಸಿ, ಪವಿತ್ರಗೊಳಿಸುವನು. ಅಂತಹ ಆಹಾರವು ದೈವಿಕ ಶಕ್ತಿಯಿಂದ ಸಕ್ರಿಯಗೊಂಡು ಅದಕ್ಕಂಟಿಕೊಂಡ ಎಲ್ಲಾ ದುಷ್ಟ ಪ್ರಭಾವಗಳಿಂದಲೂ ಮುಕ್ತವಾಗುತ್ತದೆ ಎಂಬುದು ಹಿಂದೂ ಧರ್ಮೀಯರ ನಂಬಿಕೆ.
ಭಾರತೀಯ ದಾರ್ಶನಿಕರ ಪ್ರಕಾರ ಒಬ್ಬ ವ್ಯಕ್ತಿಯು ಸೇವಿಸುವ ಆಹಾರದ ಮೂಲ, ಎಲ್ಲಾ ಜೀವಿಗಳ ಪ್ರಾಣಶಕ್ತಿ ಮತ್ತು ಸೃಷ್ಟಿಯ ಎಲ್ಲಾ ವಸ್ತುಗಳ ಆಧಾರ ದೇವರು. ಈ ಮೂಲಭೂತ ಸತ್ಯವನ್ನು ಮರೆತಿದ್ದರಿಂದಲೇ ಇಂದು ಜಗತ್ತು ಕ್ಷಾಮ, ಸಂಘರ್ಷಗಳು, ಯುದ್ಧಗಳು ಮತ್ತು ಗದ್ದಲಗಳಿಂದ ಆವೃತವಾಗಿದೆ.
ಆಹಾರವನ್ನು ಬೆಳೆಯುವ ಭೂಮಿಯನ್ನು ಮನುಷ್ಯ ಸೃಷ್ಟಿಸಲು ಸಾಧ್ಯವೇ? ನಾವು ನೀರನ್ನು ಉತ್ಪಾದಿಸಲು ಸಾಧ್ಯವೇ? ಬೆಂಕಿಯು ಸುಪ್ತವಾಗಿರುವ ಮರವನ್ನು ನಾವು ಸೃಷ್ಟಿಸಬಹುದೇ? ಇವೆಲ್ಲವನ್ನೂ ದೇವರು ಮಾತ್ರ ಸೃಷ್ಟಿಸಬಹುದು. ಅದು ಮನುಷ್ಯನ ಶಕ್ತಿಯನ್ನು ಮೀರಿದುದಾಗಿದೆ.
ನಾವು ದೇವರಿಗೆ ಆಹಾರವನ್ನು ಅರ್ಪಿಸಿದರೆ, ಎಲ್ಲಾ ದೋಷಗಳೂ ನಿವಾರಣೆಯಾಗುತ್ತವೆ ಮತ್ತು ಪ್ರಸಾದವಾಗಿ ಮಾರ್ಪಡುತ್ತದೆ, ಇದು ನಮ್ಮನ್ನು ದೈಹಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪೋಷಿಸುವುದು.