ಕೇವಲ ವಿದ್ಯೆ ಮಾತ್ರ ಸಾಲದು

Print Friendly, PDF & Email
ಕೇವಲ ವಿದ್ಯೆ ಮಾತ್ರ ಸಾಲದು

ಮಹಾಭಾರತವು ಉಪಮೆಗಳಿಂದೊಡಗೂಡಿದ ಕಥೆಗಳ ಸಂಕಲನವಾಗಿದೆ. ಅದನ್ನೇ ಉಪಾಖ್ಯಾನಗಳೆಂದು ಕರೆಯುವರು. ಅವುಗಳಿಂದ ಎಷ್ಟೋ ನೀತಿ ಪಾಠಗಳನ್ನು ಕಲಿಯಲು ಸಾಧ್ಯ. ದೇಶಭ್ರಷ್ಟರಾಗಿ ಅರಣ್ಯದಲ್ಲಿರುವಾಗ ಪಾಂಡವರು ಅನೇಕ ಪುಣ್ಯತೀರ್ಥ ಹಾಗೂ ಪುಣ್ಯಾಶ್ರಮಗಳನ್ನು ಸಂದರ್ಶಿಸಿದರು. ಅವೆಲ್ಲವೂ ಅರ್ಥಪೂರ್ಣವಾದ ಚರಿತ್ರೆಯನ್ನೊಳಗೊಂಡಿದೆ. ಗಂಗಾ ನದಿಯ ತೀರದಲ್ಲಿರುವ ರೈಭ್ಯ ಋಷ್ಯಾಶ್ರಮವು ಅಂಥವುಗಳಲ್ಲಿ ಒಂದು.

ಶಾಸ್ತ್ರಗಳಲ್ಲಿ ಶ್ರೇಷ್ಠ ಪಾಂಡಿತ್ಯವನ್ನು ಪಡೆದ ಪರಾವಸು ಮತ್ತು ಅರ್ವಾವಸು ಎಂಬ ಈರ್ವರು ರೈಭ್ಯ ಋಷಿಯ ಮಕ್ಕಳು. ಒಮ್ಮೆ ಅವರಿಬ್ಬರನ್ನೂ ಬೃಹದ್ಯುಮ್ಮನೆಂಬ ರಾಜನು ಆಚರಿಸುವ ಯಾಗ ಕಾರ್ಯವನ್ನು ನೆರವೇರಿಸಲು ಋಷಿಯು ಕಳುಹಿಸಿದನು. ಅವರು ರಾಜನ ಅರಮನೆಗೆ ಬಂದರು.

ಒಂದು ದಿವಸ, ರಾತ್ರಿ ಸಮಯ ಪರಾವಸು ತನ್ನ ತಂದೆಯ ಆಶ್ರಮಕ್ಕೆ ಹಿಂತಿರುಗಿ ಬಂದನು. ಅಲ್ಲಿ ಒಂದು ಮರದ ಸಮೀಪದಲ್ಲಿ ಮೃಗಸದೃಶವಾದ ರೂಪವೊಂದು ತುಕ್ಕರಿಸುವುದನ್ನು ಕಂಡು ಕೊಂದುಬಿಟ್ಟನು. ಆದರೆ ಅನಂತರ ಅದು ಸ್ವತಃ ತನ್ನ ತಂದೆಯೇ ಎಂದು ಗೊತ್ತಾಗಿ ಭಯ ಭ್ರಾಂತನಾದನು. ಕೂಡಲೇ ಅವನು ಆತನ ಅಂತಿಮ ಸಂಸ್ಕಾರಗಳನ್ನೆಲ್ಲಾ ಬೇಗನೆ ಪೂರೈಸಿ ಮರಳಿ ರಾಜನ ಅರಮನೆಗೆ ಬಂದನು.

ಅಲ್ಲಿ ತನ್ನ ತಮ್ಮನಿಗೆ ಅರ್ವಾವಸುವಿಗೆ ಆ ನಡೆದ ಸಂಗತಿಯನ್ನು ವಿವರಿಸಿದನು. ಅವನು ತನ್ನ ತಮ್ಮನಿಗೆಂದನು: “ಯಾಗದ ಮೇಲ್ವಿಚಾರಣೆಯ ನಮ್ಮ ಕರ್ತವ್ಯದ ಮಧ್ಯೆ ಈ ವಿಪತ್ತು ಬರಕೂಡದು. ಆದರೂ ನಮ್ಮ ಅಗಲಿದ ತಂದೆಗೋಸ್ಕರ ನಾನು ಮಾಡಬೇಕಾಗಿರುವ ಇನ್ನು ಕೆಲವು ಕರ್ಮಗಳು ಉಳಿದಿವೆ. ನೀನೊಬ್ಬನೇ ಈ ಯಜ್ಞಕಾಯ೵ವನ್ನು ಸಂಭಾಳಿಸಿಕೊಂಡು ಹೋಗಲಾರೆ. ಆದ್ದರಿಂದ ನೀನು ನಮ್ಮ ಆಶ್ರಮಕ್ಕೆ ಹಿಂತಿರುಗು. ನನ್ನ ಪರವಾಗಿ ಸಂಸ್ಕಾರಗಳನ್ನು ಪೂರೈಸು ಮತ್ತು ನನಗೆ ಸಹಾಯ ನೀಡಲು ಇಲ್ಲಿಗೆ ಬಾ. ಈ ಯಜ್ಞವನ್ನು ನೆರವೇರಿಸುವ ಮುಖ್ಯ ಋತ್ವಿಜನು ನಾನಾಗಿರುವುದರಿಂದ ಅಂತಿಮ ಸಂಸ್ಕಾರ ಮತ್ತು ಯಜ್ಞಕಾಯ೵ ನಿರ್ವಹಣೆ ಎರಡನ್ನೂ ನಾನು ಮಾಡಲು ಸಾಧ್ಯವಿಲ್ಲ.”

ಅರ್ವಾವಸುವು ತನ್ನ ಅಣ್ಣನ ಆದೇಶಗಳನ್ನು ಪ್ರಾಮಾಣಿಕ ರೀತಿಯಲ್ಲಿ ಅನುಸರಿಸಿ ತಂದೆಯ ಆಶ್ರಮಕ್ಕೆ ವಾಪಸಾದನು. ಅವನು ಪವಿತ್ರ ಹೃದಯದವನಾಗಿದ್ದನು. ತನಗೊಪ್ಪಿಸಿದ ಕಾಯ೵ವನ್ನು ನಿಷ್ಠೆಯಿಂದ ಮಾಡುವುದೊಂದೇ ಅವನ ಕರ್ತವ್ಯವಾಗಿತ್ತು. ಅವನಾವುದೇ ಕಾಯ೵ ಮಾಡಿದರೂ ಬುದ್ಧಿಪೂರ್ವಕವಾಗಿ ಮನಸ್ಸು ಕೊಟ್ಟು ಮಾಡುತ್ತಿದ್ದನು. ಈ ಪವಿತ್ರವಾದ ಚಾರಿತ್ರ್ಯವು ಅವನ ಮುಖದ ಮೇಲೆ ಪ್ರತಿ ಬಿಂಬಿಸಿ ಅವನ ಮುಖವು ಇನ್ನೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಿತ್ತು.

ತನ್ನ ತಮ್ಮನ ಪ್ರಕಾಶಮಾನವಾಗಿ ಹೊಳೆಯುತ್ತಿರುವ ಮುಖಕಾಂತಿಯನ್ನು ಪರಾವಸುವು ಕಂಡನು. ಪಕ್ಕನೆ ಮತ್ಸರದ ಮಿಂಚು ಅವನನ್ನು ಕುಗ್ಗಿಸಿತು. ಕೂಡಲೇ ಅವನ ಪಾಪಿ ಮನಸ್ಸು ಕಾಯ೵ ಮಾಡಿತು. ಅಲ್ಲಿ ನೆರೆದ ಸಭೆಯಲ್ಲಿ ಅವನು ಅರ್ಭಟಿಸಿದನು, “ನೋಡಿರಿ, ಈ ವ್ಯಕ್ತಿಯು ಒಬ್ಬ ಬ್ರಾಹ್ಮಣನನ್ನು ಕೊಂದಿದ್ದಾನೆ. ಆದ್ದರಿಂದ ಈ ಪವಿತ್ರ ಯಜ್ಞದ ಗಡಿಯನ್ನು ಪ್ರವೇಶ ಮಾಡಲು ಸಾಧ್ಯವಿಲ್ಲ.”

ಈ ಅಪಾದನೆಯನ್ನು ಕೇಳಿದ ಅರ್ವಾವಸು ಕ್ಷಣಕಾಲ ಚಕಿತನಾದನು. ಅವನಿಗೆ ಅಣ್ಣನ ವರ್ತನೆಯನ್ನು ಅರಿತುಕೊಳ್ಳಲು ಸಾಧ್ಯವಾಗಲಿಲ್ಲ. ಸುತ್ತಲೂ ನೆರೆದ ಜನರು ಅವನೊಬ್ಬ ಕ್ರೂರ ಕೃತ್ಯವನ್ನೆಸಗಿದ ದ್ರೋಹಿ ಎಂಬಂತೆ ದುರುಗುಟ್ಟಿ ನೋಡುತ್ತಿದ್ದರು. ಅವರಿಗೆ ತಾನು ಏನು ಹೇಳಬೇಕು? ತನ್ನ ನಿರಪರಾಧಿತ್ವವನ್ನು ಹೇಗೆ ಸಾಬೀತುಗೊಳಿಸಬೇಕು ಎಂಬುದಾವುದೂ ಅವನಿಗೆ ತಿಳಿಯಲಿಲ್ಲ. ತನ್ನ ರೋಷವನ್ನು ಅಡಗಿಸಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ. ಅವನು ಜನರನ್ನುದ್ದೇಶಿಸಿ ಮಾತನಾಡಿದನು, “ಓ ಮಾನ್ಯರೇ, ನಾನು ಹೇಳುವುದನ್ನು ಆಲಿಸಿರಿ, ನಾನು ಸತ್ಯವನ್ನು ಹೇಳುತ್ತಿದ್ದೇನೆ. ಅವನು ನನ್ನ ಅಣ್ಣ, ಅವನು ನಿಜವಾಗಿಯೂ ನಮ್ಮ ತಂದೆಯನ್ನು ಕೊಂದಿದ್ದಾನೆ. ತನ್ನ ಪರವಾಗಿ ಅಂತಿಮ ಸಂಸ್ಕಾರಗಳನ್ನೂ ಮಾಡೆಂದು ಅವನು ನನಗೆ ಅಪ್ಪಣೆ ಮಾಡಿದನು. ಆದ್ದರಿಂದಲೇ ಇಲ್ಲಿಯ ಈ ಯಜ್ಞಕಾಯ೵ದ ಮೇಲ್ವಿಚಾರಣೆಯನ್ನು ಮುಂದುವರಿಸಲು ಅವನಿಗೆ ಸಾಧ್ಯವಾಯಿತು.”

ಪ್ರತಿಯೊಬ್ಬರೂ ಅಲ್ಲಿ ಗುಂಪುಗೂಡಿ ನಗಲು ಪ್ರಾರಂಭಿಸಿದರು. ಈ ಪ್ರಸಂಗವು ಅವನನ್ನು ಮತ್ತಷ್ಟು ಹದಗೆಡಿಸುವಂತೆ ಮಾಡಿತು.

ಇನ್ನೊಬ್ಬರ ಪಾಪಕಾಯ೵ಗಳನ್ನು ಪ್ರಕಟಿಸಲು ಯಾರು ತಾನೇ ಪ್ರತಿನಿಧಿಯಂತೆ ನಟಿಸುತ್ತಾರೆ.

ಸದ್ಗುಣಶಾಲಿಯಾದ ಅರ್ವಾವಸುವಿನ ಮೇಲೆ ಕೊಲೆಯ ಸುಳ್ಳು ಆರೋಪವು ಹೊರಿಸಿದ್ದಲ್ಲದೆ ಸಟೆಗಾರನೆಂಬ ದೂಷಣೆಯೂ ಹಾಕಲ್ಪಟ್ಟಿತು. ಪರಿಶುದ್ಧಾಂತಃಕರಣವುಳ್ಳ ಸತ್ಯಸಂಧನಾದ ವ್ಯಕ್ತಿಗೆ ಇದು ವಿಪರೀತಕ್ಕಿಟ್ಟಿತು. ಹೆಚ್ಚು ಕಾಲ ಅವನಿಂದ ಇದು ಸಹಿಸಲಾಗಲಿಲ್ಲ. ಅಂತಲೇ ಉಗ್ರತಪಶ್ಚರ್ಯವನ್ನಾಚರಿಸಲು ಅರಣ್ಯಕ್ಕೆ ಹೊರಟು ಹೋದನು.

ದೇವತೆಗಳಿಗೆ ಅವನ ಮೇಲೆ ದಯೆ ಹುಟ್ಟಿತು. ಅವರು ಅವನ ಅಭೀಷ್ಟವೇನೆಂದು ಕೇಳಿದರು. ಉಗ್ರತಪಶ್ಚಯ೵ ಮತ್ತು ಕೆಲಕಾಲದವರೆಗೆ ಮಾಡಿದ ಆಳವಾದ ಧ್ಯಾನ ಇವುಗಳ ಕಾರಣದಿಂದ ಅವನು ಕ್ರೋಧ ವಿಮುಕ್ತನಾಗಿದ್ದನು ಮತ್ತು ಸೇಡಿನ ಒತ್ತಾಸೆ ನಶಿಸಿಹೋಗಿತ್ತು. ಆದ್ದರಿಂದ ಅವನು ತಂದೆಯ ಪ್ರಾಣವನ್ನು ತಿರುಗಿ ಪಡೆಯುವಂತೆ ಮತ್ತು ತನ್ನ ಅಣ್ಣನು ಉತ್ತಮ ವ್ಯಕ್ತಿಯಾಗಿ ಪರಿವರ್ತಿಸುವಂತೆ ಪ್ರಾರ್ಥಿಸಿದನು. ಇದು ಕೇವಲ ತನ್ನ ಒಳಿತಿಗಾಗಿ ಮಾತ್ರವಾಗಿರದೆ ತನ್ನಂತೆ ಕಷ್ಟಕ್ಕೀಡಾದ ಇತರ ಒಳಿತಿಗೂ ಅಗತ್ಯವಾಗಿತ್ತು.

ಪರಾವಸು ಮತ್ತು ಅರ್ವಾವಸು ಇಬ್ಬರೂ ಶ್ರೇಷ್ಠ ವಿದ್ಯಾಂಸರಾಗಿದ್ದರೂ ಪರಾವಸುವು ಕುಹಕ ವಿಚಾರಗಳಿಂದೊಡಗೂಡಿದವನಾಗಿಯೂ ಮತ್ತು ಅವನ ತಮ್ಮನು ಸದ್ಗುಣಿಯೂ, ದಯಾಹೃದಯವುಳ್ಳವನೂ ಮತ್ತು ಇನ್ನೊಬ್ಬರನ್ನು ಚೆನ್ನಾಗಿ ಅರಿತುಕೊಳ್ಳುವವನೂ ಆಗಿದ್ದನು. ಕೇವಲ ಕಲಿಕೆಯಿಂದಲೇ ಹಿರಿತನವು ಪ್ರಾಪ್ತವಾಗುವುದಿಲ್ಲ ಎಂಬುದು ಇದರಿಂದ ಕಂಡುಬರುತ್ತದೆ. ಉತ್ತಮ ವಿಚಾರಗಳು, ಶಬ್ದಗಳು ಮತ್ತು ಕರ್ಮಗಳ ಏಕತೆಯೇ ದೊಡ್ಡಸ್ತಿಕೆಯನ್ನು ಬರಿಸುತ್ತದೆ.

ಪ್ರಶ್ನೆಗಳು :
  1. ಪರಾವಸುವಿನ ದುಷ್ಕರ್ಮಗಳು ಯಾವುವು?
  2. ಅರ್ವಾವಸುವು ತಾನು ಸದ್ಗುಣಶಾಲಿ ಎಂಬುದನ್ನು ಹೇಗೆ ತೋರಿಸಿಕೊಟ್ಟನು?
  3. ಈ ಕಥೆಯಿಂದ ನೀವು ಯಾವ ಪಾಠವನ್ನು ಕಲಿಯುವಿರಿ?

Leave a Reply

Your email address will not be published. Required fields are marked *