ನರಸಿಂಹ ಮೆಹ್ತಾ

Print Friendly, PDF & Email
ನರಸಿಂಹ ಮೆಹ್ತಾ

ನರಸಿಂಹ ಮೆಹ್ತಾರವರು, ಗುಜರಾತ್ ರಾಜ್ಯದ ಭಾವನಗರದ ಸಮೀಪದ ತಲಜ ಎಂಬ ಗ್ರಾಮದಲ್ಲಿ ಜನಿಸಿದರು. ತಮ್ಮ ಚಿಕ್ಕ ವಯಸ್ಸಿನಲ್ಲೇ ತಂದೆ, ತಾಯಿಯರನ್ನು ಕಳೆದುಕೊಂಡ ಅವರು, ತನ್ನ ಅಣ್ಣ ಮತ್ತು ಅತ್ತಿಗೆಯವರೊಂದಿಗೆ ವಾಸಿಸುತ್ತಿದ್ದರು.

ಅದೊಂದು ದಿನ, ಅವರ ಅತ್ತಿಗೆಯು ನರಸಿಂಹನನ್ನು ಕಟುವಾಗಿ ಬೈದಳು.

ಅದನ್ನು ಸಹಿಸಲಾಗದೆ, ಮನೆ ಬಿಟ್ಟು ಸಮೀಪದಲ್ಲಿದ್ದ ಅರಣ್ಯಕ್ಕೆ ಹೋಗಿ, ಅಲ್ಲಿದ್ದ ಶಿವನ ದೇವಾಲಯದಲ್ಲಿ, ಏಳು ದಿನಗಳು ಉಪವಾಸವಿದ್ದು ಶಿವನ ಪ್ರಾರ್ಥನೆಯಲ್ಲಿ ತೊಡಗಿದನು. ಆ ಹುಡುಗನ ಭಕ್ತಿ ಮತ್ತು ತೀವ್ರ ತಪನದಿಂದ ಪ್ರಸನ್ನನಾದ ಶಿವನು, ಅವನ ಮುಂದೆ ಪ್ರತ್ಯಕ್ಷವಾದನು. ಇಚ್ಚಿಸಿದ ವರವನ್ನು ಕೇಳಿಕೊಳ್ಳೆಂದು ಅನುಗ್ರಹಿಸಿದನು.

ಆದರೆ ನರಸಿಂಹನಾದರೋ, ತನಗೆ ಯಾವುದು ಒಳ್ಳೆಯದೋ ಅದನ್ನೇ ಅನುಗ್ರಹಿಸೆಂದು, ಅದನ್ನು ಶಿವನ ಇಚ್ಛೆಗೆ ಬಿಟ್ಟನು. ಆಗ ಶಿವನು, ಅವನನ್ನು ದ್ವಾರಕೆಗೆ ಕರೆದುಕೊಂಡು ಹೋಗಿ, ಅಲ್ಲಿ ಶ್ರೀ ಕೃಷ್ಣ ಮತ್ತು ಗೋಪಿಯರ ರಾಸಲೀಲೆಯನ್ನು ತೋರಿಸಿದನು. ಆ ನಂತರ, ನರಸಿಂಹನು ಅಲ್ಲಿಯೇ ಮೂರು ತಿಂಗಳ ಕಾಲ ಉಳಿದನು. ಶ್ರೀ ಕೃಷ್ಣನು ಅವನಿಗೆ ಹೂಗಳನ್ನು ಪ್ರಸಾದವಾಗಿ ಕೊಟ್ಟು ಅನುಗ್ರಹಿಸಿ, ಭಕ್ತಿ ಪದ್ಯ (ಕವನ) ಗಳನ್ನು ರಚಿಸುವಂತೆ ಆಶೀರ್ವದಿಸಿದನು.

ಅಲ್ಲಿಂದ ಮನೆಗೆ ಹಿಂತಿರುಗಿ ಬಂದ ನರಸಿಂಹನನ್ನು ಅಣ್ಣ, ಅತ್ತಿಗೆಯರು ಆದರದಿಂದ ಬರಮಾಡಿಕೊಂಡರು. ಮುಂದೆ ನರಸಿಂಹನ ಜೀವನ ಶೈಲಿಯೇ ಬದಲಾವಣೆಹೊಂದಿತು. ಸದಾಕಾಲ ಶ್ರೀ ಹರಿಯ ಧ್ಯಾನ, ಅವನ ನಾಮಸಂಕೀರ್ತನೆ ಮತ್ತು ಆ ನಾಮದ ಮಹಿಮೆಯನ್ನು ಸಾರುವುದೇ ಆತನಿಗೆ ಅತ್ಯಂತ ಪ್ರಿಯವಾಯಿತು. ಅದನ್ನು ಆಲಿಸಲು ಸಮೀಪದ ಮತ್ತು ದೂರದೂರದ ಕಡೆಗಳಿಂದಲೂ ಅನೇಕ ಭಕ್ತರು, ಸಂತರು ಮತ್ತು ಸಜ್ಜನರು ಬರತೊಡಗಿದರು. ಈ ಸಮಯದಲ್ಲೇ, ಆತನು ಸಮೀಪದಲ್ಲಿದ್ದ ಜುನಾಗಢ ಎಂಬ ಸಣ್ಣ ಪಟ್ಟಣದಲ್ಲಿ ಹೋಗಿ ನೆಲೆಸಿದನು.

ನರಸಿಂಹ ಮೆಹ್ತಾನ ಜೀವನದಲ್ಲಿ ನಡೆದ ಕೆಲವು ಘಟನೆಗಳು ಶ್ರೀ ಕೃಷ್ಣನ ಬಗ್ಗೆ ಆತನಿಗಿದ್ದ ಭಕ್ತಿ, ಶ್ರದ್ಧೆಗಳನ್ನು ಸಾರುತ್ತವೆ. ಅವುಗಳಲ್ಲಿ ಹೆಚ್ಚು ಜನಪ್ರಿಯವಾದುದು ಮತ್ತು ಸ್ಮರಣೀಯವಾದುದು “ಮಮೇರಾ ಹುಂಡಿ” ಮತ್ತು “ಹಾರ” ಎಂಬ ಘಟನೆಗಳು. “ಮಮೇರಾ” ಆಚರಣೆಯ ಸಂದರ್ಭದಲ್ಲಿ, ನರಸಿಂಹ ಮೆಹ್ತಾಗೆ ಸ್ನಾನ ಮಾಡಲು ಅತ್ಯಂತ ಬಿಸಿಯಾಗಿರುವ ನೀರನ್ನು ಕೊಡಲಾಯಿತು. ಆಗ ಆತನು ‘ಮಲ್ಹಾರ್’ ರಾಗವನ್ನು ಹಾಡಲಾಗಿ, ಶ್ರೀಕೃಷ್ಣನು ತಣ್ಣಗಿನ ನೀರಿನ ಧಾರೆಯನ್ನು ಮಳೆಯಾಗಿ ಸುರಿಸಿದನು. ಅದರ ಬಗ್ಗೆ ಅವರು ತನ್ನ ಒಂದು ಪದ್ಯದಲ್ಲಿ ಹೀಗೆ ಹಾಡಿದ್ದಾರೆ, “ನನ್ನ ಸೊಸೆಯು ನನಗೆ ಅತ್ಯಂತ ಬಿಸಿಯ ನೀರನ್ನು ಸ್ನಾನಕ್ಕೆ ಕೊಟ್ಟು, ನನ್ನನ್ನು ಗೇಲಿ ಮಾಡಿದಳು. ಆದರೆ ಪ್ರಭು, ನೀನು ಮಳೆ ಬರುವಂತೆ ಮಾಡಿ, ಈ ನಿನ್ನ ದಾಸನನ್ನು ಅನುಗ್ರಹಿಸಿದೆ.”

ದ್ವಾರಕೆಯಲ್ಲೂ ಸಹ, ಶ್ರೀ ಕೃಷ್ಣನು ‘ಸಮಲ್ ಷಾ ಶೇಟ್’ ಎಂಬ ರೂಪತಾಳಿ ಬಂದು, ಜುನಾಘಡದಲ್ಲಿ ಜನರು ಮೆಹ್ತಾರವರ ಬಳಿ ಕೂಡಿಟ್ಟಿದ್ದ ೭೦೦ ರೂಪಾಯಿಗಳನ್ನು ಕೊಡಬೇಕಾಯಿತು.

“ಹಾರ” ದ ಘಟನೆಯು ಅತ್ಯಂತ ದಯನೀಯವಾದುದು ಹಾಗೂ ಮನಮುಟ್ಟುವಂತಹದು. ಅಲ್ಲಿಯ ದೊರೆ ‘ರಾಮಂಡಲಿಕ’ನು (Ramandalika) ನರಸಿಂಹನನ್ನು ಸೆರೆಯಲ್ಲಿಟ್ಟು, ಅವರು ನಿಜವಾದ ಭಕ್ತನೆಂದು ರುಜುವಾತಾಗಬೇಕಾದರೆ, ದೇವರೇ ಬಂದು, ಅವರ ಕೊರಳಿಗೆ ಹಾರವನ್ನು ಹಾಕಬೇಕೆಂಬ ಷರತ್ತನ್ನು ವಿಧಿಸಿದನು. ಹಾಗಾಗದೇ ಹೋದರೆ, ಮರುದಿನ ಬೆಳಗಿನ ಜಾವದಲ್ಲಿ ಅವರ ಶಿರಚ್ಛೇಧ ಮಾಡಲಾಗುವುದೆಂದು ಆಜ್ಞೆ ಮಾಡಿದನು. ಅಂದು ಇಡೀ ರಾತ್ರಿ ನರಸಿಂಹರು ಹೃದಯಾಂತರಾಳದಿಂದ ಭಗವಂತನನ್ನು ಪ್ರಾರ್ಥಿಸುತ್ತಾ, ನಾಮಸ್ಮರಣೆಯಲ್ಲೇ ಕಳೆದರು. ಪ್ರಾರಂಭದಲ್ಲಿ, ದೇವರನ್ನು ಎಷ್ಟೇ ಆರ್ತತೆಯಿಂದ ಪ್ರಾರ್ಥಿಸಿದರೂ ಸಹ, ಏನೂ ಪರಿಣಾಮವಾಗಲಿಲ್ಲ. ಆಗ ಅವರು ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಚಾತುರ್ಯದಿಂದ ಹೀಗೆ ಬೇಡಿದರು, “ದೇವರೇ! ನೀನು ಇದು ನನ್ನ ಕರ್ಮದ ಫಲವೆಂದು ಭಾವಿಸಿದ್ದೇ ಆದರೇ, ನೀನು ‘ಪತಿತ ಪಾವನ’ ಎಂಬ ಹೆಸರನ್ನು ಕಳೆದುಕೊಳ್ಳುವೆ. ನೀನು ನನ್ನ ಕೈ ಬಿಡಲು ಪ್ರಯತ್ನಿಸಿದರೆ, ಆಗ ಜನರು ನಿನ್ನನ್ನು ಗೇಲಿ ಮಾಡಿ ಅಣಕಿಸುವರು.”

ಆಗಲೂ ಸಹ ದೇವರ ಅನುಗ್ರಹದ ಯಾವ ಸೂಚನೆಯೂ ಕಾಣಲಿಲ್ಲ. ಆಗ, ನರಸಿಂಹರು ಏರು ಧ್ವನಿಯಲ್ಲಿ ದೇವರನ್ನು ಉದ್ದೇಶಿಸಿ, “ದೇವರೇ! ಒಂದು ಹೂವಿನ ಹಾರದ ಮೇಲೆ ನಿನಗೇಕೆ ಇಷ್ಟು ಮೋಹ? ನೀನು ಅದನ್ನು ನನಗೆ ಅನುಗ್ರಹಿಸಿದರೆ, ಅದರಿಂದ ನಿನ್ನ ಕೀರ್ತಿಯೇ ಹರಡುವುದು. ನಾನಾದರೋ, ಸದಾ ಕಾಲ ನಿನ್ನ ಮಹಿಮೆಯನ್ನು ಕುರಿತೇ ಹಾಡುತ್ತಾ ಬಂದಿರುವೆ. ಆದರೆ, ಈ ಆಪತ್ಕಾಲದಲ್ಲಿ ನೀನು ನನ್ನನ್ನು ರಕ್ಷಿಸದೇ ಹೋದಲ್ಲಿ, ಇನ್ನು ಮುಂದೆ ಯಾರೂ ನಿನ್ನನ್ನು ಪ್ರಾರ್ಥಿಸುವುದಿಲ್ಲ, ನಿನ್ನ ಮಹಿಮೆಯನ್ನು ಗಾನ ಮಾಡುವುದೂ ಇಲ್ಲ. ನನಗೆ ಸಾವಿನ ಭಯವಿಲ್ಲ. ಆದರೆ ಇದರಿಂದ ನಿನ್ನ ಗೌರವಕ್ಕೇ ಹಾನಿ,” ಎಂದು ಪ್ರಾರ್ಥಿಸಿದರು. ಆತನ ಭಕ್ತಿಗೆ ಭಗವಂತನ ಮನ ಕರಗಿತು. ಮೇಲಿನಿಂದ ಒಂದು ಹಾರವು ಬಂದು, ನರಸಿಂಹರ ಕೊರಳಲ್ಲಿ ಬಿದ್ದಿತು.

ನರಸಿಂಹ ಮೆಹ್ತಾರವರ ಜೀವನದಲ್ಲಿ, ದೇವರು ಅವರನ್ನು ರಕ್ಷಿಸಿದ, ಅವರ ಘನತೆ, ಗೌರವಗಳನ್ನು ಕಾಪಾಡಿದ ಘಟನೆಗಳು ಅನೇಕ. ಅವರು ಶ್ರೀ ಶಂಕರಾಚಾರ್ಯರಂತೆ ಜ್ಞಾನಿಯೂ ಆಗಿದ್ದು, ‘ಅದ್ವೈತ’ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದವರು, ವೇದಗಳು, ಉಪನಿಷತ್ತುಗಳು ಮತ್ತು ಪವಿತ್ರ ಗ್ರಂಥಗಳ ಅಧ್ಯಯನವನ್ನೂ ಮಾಡಿದವರು. ಅವರ ಭಕ್ತಿಯು ಅದೆಷ್ಟು ತೀವ್ರವಾಗಿತ್ತೆಂದರೆ, ತನ್ನ ಶರೀರಕ್ಕೆ ಬೇಕಾದ ಅಗತ್ಯಗಳನ್ನು ಪೂರೈಸುವುದನ್ನೂ ಮರೆತಿದ್ದರು. ಹಸಿವು, ಬಾಯಾರಿಕೆಗಳ ಚಿಂತೆಯಿಲ್ಲ, ಜಗತ್ತಿನ ಸುಖ, ದುಃಖಗಳ ಪರಿಣಾಮವೂ ಅವರ ಮೇಲಾಗಿರಲಿಲ್ಲ. ಅಂತಹ ಉತ್ಕಟ ಭಕ್ತಿಯ ಭಾವನಾತ್ಮಕ ಸ್ಥಿತಿಯಲ್ಲಿ, ಜನರು ತನ್ನ ಬಗ್ಗೆ ಏನು ಆಡಿಕೊಳ್ಳುವರೆಂಬ ಪ್ರಜ್ಞೆಯೂ ಇರಲಿಲ್ಲ. ಅದಾವುದು ಅವರ ಆಧ್ಯಾತ್ಮಿಕ ಪ್ರಗತಿಯನ್ನು ಕುಗ್ಗಿಸಲಾಗಲಿಲ್ಲ. ಅವರ ಮನಸ್ಸು, ಬುದ್ಧಿ, ಇಂದ್ರಿಯಗಳು ಸದಾ ಭಗವಂತನ ಪ್ರೇಮದ ಆನಂದದ ಅನುಭವದಲ್ಲೇ ಮುಳುಗಿದ್ದವು. ತನ್ನ ಇಡೀ ವ್ಯಕ್ತಿತ್ವವನ್ನೇ ಭಗವಂತನ ಚರಣಗಳಲ್ಲಿ ಸಮರ್ಪಿಸಿದವರು. ಇದೇ “ಶರಣಾಗತಿ,” ಭಕ್ತನಲ್ಲಿ ಕಾಣಬಹುದಾದ ಅಪರೂಪ ಭಾವ.

ಮಾನವಕುಲದ ಬಗ್ಗೆ ಮೆಹ್ತಾರವರದು, ಕರುಣೆ, ಉದಾರತೆ ಮಾತು, ಸ್ನೇಹ ತುಂಬಿದ ಮನೋಭಾವ. ಆಧ್ಯಾತ್ಮಿಕತೆಯಿಂದ ತುಂಬಿದ ತನ್ನ ಪದ್ಯಗಳ ಮೂಲಕ, ಅವರನ್ನು ಆಧ್ಯಾತ್ಮಿಕವಾಗಿ ಮೇಲೆತ್ತುವುದರಲ್ಲೇ ಅವರಿಗೆ ಅಪಾರ ಆಸಕ್ತಿ.

ಮಕ್ಕಳು ಇಂತಹ ಭಕ್ತಶ್ರೇಷ್ಠರ ಜೀವನದ ಬಗ್ಗೆ ಓದಿ, ತಿಳಿದು, ದೇವರು ಮತ್ತು ಅವನ ಸೃಷ್ಟಿಯ ಬಗ್ಗೆ ಪ್ರೇಮವನ್ನು ಬೆಳೆಸಿಕೊಂಡಾಗ ಮಾತ್ರ, ಜೀವನವು ಸಾರ್ಥಕವೆನಿಸುತ್ತದೆ.

[Illustrations by A. Priyadarshini, Sri Sathya Sai Balvikas Student.]
[Source: Stories for Children II, Published by Sri Sathya Sai Books & Publications, PN]

Leave a Reply

Your email address will not be published. Required fields are marked *

error: