ಕರಚರಣ ಶ್ಲೋಕ – ಹೆಚ್ಚಿನ ವಿವರಣೆ

Print Friendly, PDF & Email
ಕರಚರಣ ಶ್ಲೋಕ – ಹೆಚ್ಚಿನ ವಿವರಣೆ
ಕಥೆ

ನಾವು ನಿದ್ರೆ ಮಾಡುವ ಮೊದಲು, ದಿನವು ಮುಗಿಯುವ ವೇಳೆಗೆ, ಆ ದಿನದ ನಮ್ಮ ಎಲ್ಲಾ ಕಾರ್ಯಗಳನ್ನು ಭಗವಂತನಿಗೆ ಅರ್ಪಿಸಬೇಕು. ನಾವು ಹೀಗೆ ದೇವರಿಗೆ ನಮ್ಮ ಕೆಲಸವನ್ನು ಅರ್ಪಿಸುವುದರಿಂದ, ನಾವು ಅರ್ಪಿಸಲು ಯೋಗ್ಯವಾದ ಒಳ್ಳೆಯ ಕಾರ್ಯಗಳನ್ನೇ ಮಾಡಬೇಕು. ಇದರಿಂದಾಗಿ ನಾವು ಪವಿತ್ರರಾಗುತ್ತೇವೆ ಮತ್ತು ಒಳ್ಳೆಯ ಕಾರ್ಯಗಳನ್ನೇ ಮಾಡಲು ಮಾರ್ಗದರ್ಶನ ದೊರೆಯುತ್ತದೆ. ಯಾವುದೇ ಕೆಟ್ಟ ಆಲೋಚನೆ-ಮಾತು-ಕಾರ್ಯಗಳನ್ನು ಮಾಡಿದಾಗ ವಿಷಾದಿಸಿ, ಪಶ್ಚಾತಾಪ ಪಡುತ್ತೇವೆ.

ಇದನ್ನು ಸ್ಪಷ್ಟವಾಗಿ ವಿವರಿಸಲು ಸಂತ ಜನಾಬಾಯಿ ಅವರ ಜೀವನದ ಸುಂದರ ಕಥೆ ಇದೆ.

ಸಂತ ಜನಾಬಾಯಿ ೧೩ ನೇ ಶತಮಾನದಲ್ಲಿ ಜೀವಿಸಿದ್ದ ಭಾರತದ ಮರಾಠಿ ಧಾರ್ಮಿಕ ಕವಯತ್ರಿ. ಅವರು ಮಹಾರಾಷ್ಟ್ರದ ಗಂಗಾಖೇಡ್ ಎಂಬಲ್ಲಿ ಜನಿಸಿದರು. ಅವರ ತಾಯಿ ತೀರಿಕೊಂಡ ನಂತರ ಆಕೆಯ ತಂದೆ ಪಂಢರಪುರಕ್ಕೆ ಕರೆದೊಯ್ದರು. ಆಗಿನಿಂದಲೂ ಜನಾಬಾಯಿ ಪಂಢರಪುರದಲ್ಲಿ ವಾಸಿಸುತ್ತಿದ್ದ ದಮಾಸೇಠ್ ಅವರ ಮನೆಯಲ್ಲಿ ಸೇವಕಿಯಾಗಿ ಕೆಲಸ ಮಾಡಿದಳು. ಈ ದಮಾಸೇಠ್, ಸಂತ ನಾಮದೇವರ ತಂದೆ.

ಅವಳು ಪಂಢರಪುರದಲ್ಲಿ ನೆಲೆಸಿರುವ ದೇವರಾದ ಪಾಂಡುರಂಗನ ಉತ್ಕಟ ಭಕ್ತೆಯಾಗಿದ್ದಳು. ಅವಳು ತನ್ನ ಎಲ್ಲಾ ಕಾರ್ಯಗಳನ್ನು ತನ್ನ ಪ್ರೀತಿಯ ಭಗವಂತನಾದ “ಪಾಂಡುರಂಗಾರ್ಪಣಂ” ಎಂದು ಜಪಿಸುವ ಮೂಲಕ ಅರ್ಪಿಸುತ್ತಿದ್ದಳು. ಇಂದಿಗೂ ಹಳ್ಳಿಗಳಲ್ಲಿ ವಾಡಿಕೆಯಂತೆ, ಅವಳು ಹಸುವಿನ-ಸೆಗಣಿಯಿಂದ ಬೆರಣಿ ಮಾಡಿ, ಅಡುಗೆಯ ಒಲೆಗೆ ಇಂಧನವಾಗಿ ಬಳಸುತ್ತಿದ್ದಳು. ಸೆಗಣಿಯನ್ನು ಒಣಗಿಸುವ ಸಲುವಾಗಿ ಅದನ್ನು ಕೈಯಿಂದ ಚೆಂಡಿನಾಕಾರದಲ್ಲಿ ಮಾಡಿ ಗೋಡೆಗೆ ಎಸೆಯಲಾಗುತ್ತದೆ. ಇದರಿಂದ ಅದು ಚಪ್ಪಟೆಯಾಗಿ ಗೋಡೆಗೆ ಅಂಟುತ್ತದೆ, ಜನಾಬಾಯಿ “ಪಾಂಡುರಂಗಾರ್ಪಣಂ” ಎಂದು ಹೇಳಿ ಸೆಗಣಿ ಎಸೆಯುತ್ತಿದ್ದಳು. ಅಷ್ಟೇ ಅಲ್ಲ, ಸೆಗಣಿಯಿಂದ ನೆಲವನ್ನು ಸಾರಿಸುವುದೂ ಹಳ್ಳಿಯ ಮನೆಗಳಲ್ಲಿ ರೂಢಿಯಲ್ಲಿದೆ. ಹೀಗೆ ಎಲ್ಲ ಕೆಲಸವಾದ ಮೇಲೆ, ಅವಳು “ಪಾಂಡುರಂಗಾರ್ಪಣಂ” ಎಂದು ಜಪಿಸುತ್ತಾ ತನ್ನ ಮನೆಯ ಹೊರಗೆ ಉಳಿದಿರುವ ಸಗಣಿಯನ್ನು ಎಸೆಯುತ್ತಿದ್ದಳು. ಅವಳು ಪರಿಶುದ್ಧ ಹೃದಯದವಳಾಗಿದ್ದಳು ಹಾಗು ನೈಜವಾದ ಭಕ್ತಿಯಿಂದ ಇದನ್ನು ಮಾಡುತ್ತಿದ್ದಳು. ಆದ್ದರಿಂದ, ಈ ಸೆಗಣಿ ಊರ ದೇವಸ್ಧಾನದಲ್ಲಿರುವ ಪಾಂಡುರಂಗನ ವಿಗ್ರಹಕ್ಕೆ ಹಾರಿ ಅಂಟಿಕೊಳ್ಳುತ್ತಿತ್ತು.

ಇದೆಲ್ಲವನ್ನೂ ಅರಿಯದ ದೇವಾಲಯದ ಅರ್ಚಕನು ಭಗವಂತನ ವಿಗ್ರಹದ ಮೇಲೆ ಸೆಗಣಿ ಇರುವುದನ್ನು ನೋಡಿದನು. ನಂತರ, ಇದು ಪ್ರತಿದಿನ ನಡೆಯುವುದನ್ನೂ ಗಮನಿಸಿ ಕೋಪಿಸಿಗೊಂಡು, ಸೆಗಣಿಯನ್ನು ಭಗವಂತನ ವಿಗ್ರಹದ ಮೇಲೆ ಎಸೆಯುತ್ತಿದ್ದ ಅಪರಾಧಿಯನ್ನು ಹಿಡಿಯಲು ನಿರ್ಧರಿಸಿದನು. ಆದ್ದರಿಂದ, ಅರ್ಚಕನು ಪ್ರತಿ ಮನೆಗೆ ಹೋಗಿ, ಏನು ನಡೆಯುತ್ತಿದೆ ಎಂದು ನೋಡುತ್ತಿದ್ದನು.

ಒಂದು ದಿನ ಜನಬಾಯಿ ಇದ್ದ ಮನೆಗೆ ಬಂದಾಗ, ಅವಳು “ಪಾಂಡುರಂಗಾರ್ಪಣಂ” ಎಂದು ಹೇಳಿ ಸೆಗಣಿ ಎಸೆಯುವುದನ್ನು ನೋಡಿದನು. ಸಿಟ್ಟಿನಿಂದ ಅವನು, ಅವಳ ತೋಳಿಗೆ ಒಂದು ಕೋಲಿನಿಂದ ತುಂಬಾ ಗಟ್ಟಿಯಾಗಿ ಹೊಡೆದನು. ಅವಳ ತೋಳು ಮುರಿದೇ ಹೋಗಬಹುದೇನೋ ಎನ್ನುವಷ್ಟು ಗಟ್ಟಿಯಾಗಿ ಹೊಡೆದನು. ಆದರೆ, ಜನಾಬಾಯಿ ಯಾವುದೇ ನೋವನ್ನು ಅನುಭವಿಸಲಿಲ್ಲ. ಇದರ ನಂತರ ಅರ್ಚಕನು ಭಗವಂತನಿಗೆ ಪೂಜೆ ಸಲ್ಲಿಸಲು ದೇವಾಲಯಕ್ಕೆ ಹೋದನು. ಅಲ್ಲಿ ತಲುಪಿದಾಗ ಭಗವಂತನ ವಿಗ್ರಹದ ತೋಳುಮುರಿದು ನೆಲದ ಮೇಲೆ ಬಿದ್ದಿರುವುದ್ದನ್ನು ನೋಡಿದನು. ಜನಾಬಾಯಿ ಎಂತಹ ಶ್ರೇಷ್ಠ ಭಕ್ತಳೆಂದು ಅರ್ಥಮಾಡಿಕೊಳ್ಳದೆ ಮಾಡಿದ ತಪ್ಪನ್ನು ತಕ್ಷಣ ಅವನು ಅರಿತುಕೊಂಡನು. ತನ್ನ ಭಕ್ತೆಯನ್ನು ರಕ್ಷಿಸಲು ಭಗವಂತನು ಧಾವಿಸಿ, ಕೋಲಿನ ಹೊಡೆತವನ್ನು ತನ್ನ ಮೇಲೆ ತೆಗೆದುಕೊಂಡಿದ್ದನು. ಅರ್ಚಕನು ತಕ್ಷಣ ಜನಬಾಯಿಯ ಬಳಿ ಓಡಿ, ಅವಳ ಕಾಲುಗಳ ಮೇಲೆ ಬಿದ್ದು ಕ್ಷಮೆಯಾಚಿಸಿದನು. ಜನಾಬಾಯಿ ಪಾಂಡುರಂಗ ಭಗವಂತನ ಮಹಾನ್ ಭಕ್ತೆಯೆಂದು ಅವನು ಅರಿತುಕೊಂಡನು.

ಬೆರಣಿಯನ್ನು ಇಂಧನವಾಗಿ ಮಾರಾಟ ಮಾಡಲು, ಜನಾಬಾಯಿ ಸೆಗಣಿಯನ್ನು ಬಿಸಿಲಿನಲ್ಲಿ ಒಣಗಿಸಿ, ಬೆರಣಿಯನ್ನು ತಯರಿಸುತ್ತಿರುವಾಗಲೆಲ್ಲಾ ಅವಳು “ಪಾಂಡುರಂಗ” ಎಂಬ ಪವಿತ್ರ ಹೆಸರನ್ನು ಪುನರಾವರ್ತಿಸುತ್ತಿದ್ದಳು. ಅವಳ ನಿರಂತರ ಜಪದ ಫಲಿತಾಂಶವಾಗಿ, ಇಂಧನವು “ಪಾಂಡುರಂಗ ಪಾಂಡುರಂಗ” ಶಬ್ದದೊಂದಿಗೆ ಉರಿಯುತ್ತಿದ್ದವು. ಏಕೆಂದರೆ, ಅವು ಪಾಂಡುರಂಗನಿಗೆ ಅರ್ಪಿತವಾಗಿದ್ದವು. ಆದ್ದರಿಂದ ಜನರು ಜನಾಬಾಯಿ ಬೆರಣಿ ಖರೀದಿಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದರು.

ಹೀಗೆ, ಸಂತ ಜನಾಬಾಯಿ ತನ್ನ ಅತ್ಯಂತ ಸಣ್ಣ ಸಣ್ಣ ಸಾಧಾರಣವಾದ ಕಾರ್ಯಗಳನ್ನೂ ಭಗವಂತನಿಗೆ ಅರ್ಪಿಸಿ ಪವಿತ್ರಗೊಳಿಸುತ್ತಿದಳು. ತನ್ನ ಕೆಲಸಗಳನ್ನು ಪ್ರತಿಫಲದ ಆಲೋಚನೆಯಿಲ್ಲದೆ ಅರ್ಪಿಸುತ್ತಿದ್ದಳು.

ನಾವು ನಮ್ಮ ಕೆಲಸವನ್ನೂ, ಬಾಳನ್ನೂ, ಭಗವಂತನಿಗೆ ಈ ರೀತಿ ಅರ್ಪಿಸಿದರೆ, ನಮ್ಮ ಜೀವನವೂ ಪವಿತ್ರವಾಗುತ್ತದೆ.

[Illustrations by Sai Easwaran, Sri Sathya Sai Balvikas Student]
[ಮೂಲ: ಶ್ರೀ ಸತ್ಯ ಸಾಯಿ ಬಾಲವಿಕಾಸ್ ಗುರುಗಳ ಕೈಪಿಡಿ-ವರ್ಷ೧]

Leave a Reply

Your email address will not be published. Required fields are marked *

error: