ಪಶ್ಯ ಮೇ ಹೆಚ್ಚಿನ ಓದುವಿಕೆ
ಪಶ್ಯ ಮೇ ಪಾರ್ಥರೂಪಾಣಿ ಶತಶೋಥ ಸಹಸ್ರಶಃ
ನಾನಾ ವಿಧಾನಿ ದಿವ್ಯಾನಿ ನಾನಾ ವರ್ಣಾಕೃತೀನಿ ಚ II
(ಅಧ್ಯಾಯ.11, ಶ್ಲೋಕ 5)
ಓ ಅರ್ಜುನ (ಪೃಥೆಯ ಮಗನೇ)! ನಾನಾ ವಿಧವಾದ ದಿವ್ಯವಾದ ಅನೇಕ ವರ್ಣಾಕೃತಿಗಳುಳ್ಳ ನನ್ನ ಅಸಂಖ್ಯಾತ ರೂಪಗಳನ್ನು ನೋಡು.
ಅರ್ಜುನನು ಭಗವಾನ್ ಶ್ರೀ ಕೃಷ್ಣನಲ್ಲಿ ‘ನಿನ್ನ ಅನಂತವಾದ ವಿಶ್ವರೂಪವನ್ನು ಪ್ರದರ್ಶಿಸು’, ಎಂದು ಬೇಡಿಕೊಂಡನು.
ಅವನ ಬೇಗುದಿಯನ್ನು ತಿಳಿದ ಶ್ರೀಕೃಷ್ಣನು, “ ಎಲೈ ಅರ್ಜುನ! ನನ್ನ ಮಹಿಮೆಯನ್ನು ನಿನ್ನ ಭೌತಿಕ ಕಣ್ಣುಗಳಿಂದ ನೋಡಲು ಸಾಧ್ಯವಾಗದು, ಆದ್ದರಿಂದ ನಿನಗೆ ದಿವ್ಯದೃಷ್ಟಿಯನ್ನು ನೀಡುತ್ತಿದ್ದೇನೆ ” ಎಂದು ಹೇಳಿದನು.
ಅವನಿಗೆ ದಿವ್ಯದೃಷ್ಟಿಯನ್ನು ದಯಪಾಲಿಸಿದ ನಂತರ, ಶ್ರೀಕೃಷ್ಣನು ತನ್ನ ವಿರಾಟ್ ಸ್ವರೂಪವನ್ನು ಅರ್ಜುನನಿಗೆ ಪ್ರದರ್ಶಿಸಿದನು…
ಅರ್ಜುನನು ಭಗವಂತನ ದಿವ್ಯ ಶರೀರದಲ್ಲಿ ಇಡೀ ಬ್ರಹ್ಮಾಂಡವನ್ನೇ ಕಂಡನು. ಅವನು ದೇವತೆಗಳನ್ನು ಕಂಡನು. (ಸೂರ್ಯ, ಚಂದ್ರ ಮತ್ತು ಗ್ರಹಗಳು). ಅವನು ಪಂಚಭೂತಗಳನ್ನು ಕಂಡನು (ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ). ಅವನು ಋಷಿ ಮುನಿಗಳು ಮತ್ತು ಸಕಲ ಜೀವಿಗಳನ್ನು ಶ್ರೀ ಕೃಷ್ಣನಲ್ಲಿ ಕಂಡನು .
ಈ ಇಡೀ ಬ್ರಹ್ಮಾಂಡವು ದಿವ್ಯತ್ವದಿಂದ ವ್ಯಾಪಿಸಲ್ಪಟ್ಟಿದೆ. ಪ್ರತಿಯೊಂದು ವಸ್ತುವೂ ದಿವ್ಯತ್ವದ ಒಂದು ಭಾಗವಾಗಿದೆ. ಈ ಅಸಂಖ್ಯಾತ ರೂಪಗಳಿಂದ ಕೂಡಿದ ಬ್ರಹ್ಮಾಂಡವನ್ನು ‘ವಿಶ್ವವಿರಾಟ್’ ಅಥವಾ ‘ವಿಶ್ವರೂಪ’ ಎನ್ನಲಾಗುತ್ತದೆ. ಈ ಬಹುಮುಖದ ಬ್ರಹ್ಮಾಂಡದಲ್ಲಿರುವ ಎಲ್ಲಾ ಜೀವಿಗಳು ಒಂದೇ ದಿವ್ಯರೂಪಿಗಳೆಂದು ಕಾಣಬೇಕು.
ಪ್ರತಿಯೊಂದು ಜೀವಿಯಲ್ಲಿ ಮತ್ತು ಜಗತ್ತಿನ ಪ್ರತಿಯೊಂದರಲ್ಲಿಯೂ ಭಗವಂತನಿದ್ದಾನೆ.
ಹಾವರ್ಡ್ ಮರ್ಫೆಟ್ ಅವರು ಪವಾಡಪುರುಷ ಸಾಯಿಬಾಬಾ ಎಂಬ ತಮ್ಮ ಪುಸ್ತಕದಲ್ಲಿ ಇದರ ಉದಾಹರಣೆಯನ್ನು ನೀಡುತ್ತಾರೆ. ಹೈದ್ರಾಬಾದ್‌ನ ಒಸ್ಮಾನಿಯಾ ವಿಶ್ವವಿದ್ಯಾನಿಲಯದ ಆಗಿನ ಭೂವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ವೈ,ರಾವ್ ಅವರ ಅನುಭವವನ್ನು ಅವರು ಇಲ್ಲಿ ಉಲ್ಲೇಖಿಸುತ್ತಾರೆ.
ಪುಟ್ಟಪರ್ತಿಯಲ್ಲಿ ಒಂದು ದಿನ ಬಾಬಾ ಅವರು ಗ್ರಾನೈಟ್‌ನ ಒಂದು ತುಂಡನ್ನು ಡಾ.ರಾವ್ ಅವರಿಗೆ ನೀಡಿ, ಇದರಲ್ಲಿ ಏನಿದೆ ಎಂದು ಕೇಳಿದರು. ಈ ಭೂವಿಜ್ಞಾನಿಯು, ಆ ಶಿಲೆಯಲ್ಲಿರುವ ಕೆಲವು ಖನಿಜಗಳ ಹೆಸರನ್ನು ಉಲ್ಲೇಖಿಸಿದರು, ಬಾಬಾ : “ಅದಲ್ಲ, ಇನ್ನೂ ಆಳವಾದುದು.”
ಡಾ.ರಾವ್: “ಹಾಗಾದರೆ, ಪರಮಾಣುಗಳು, ಅಣುಗಳು, ಇಲೆಕ್ಟ್ರಾನ್‌ಗಳು, ಪ್ರೋಟಾನ್‌ಗಳು, ನ್ಯೂಟ್ರಾನ್‌ಗಳು.”
ಬಾಬಾ: “ಇಲ್ಲ! ಇಲ್ಲ! ಇನ್ನೂ ಆಳವಾಗಿ ಆಲೋಚಿಸು.”
ಡಾ.ರಾವ್: “ನನಗೆ ಗೊತ್ತಿಲ್ಲ, ಸ್ವಾಮಿ.”
ಬಾಬಾರವರು ಭೂವಿಜ್ಞಾನಿಯ ಕೈಯಿಂದ ಗ್ರಾನೈಟ್ ತುಂಡನ್ನು ತೆಗೆದುಕೊಂಡು, ತಮ್ಮ ಬೆರಳುಗಳಲ್ಲಿ ಅದನ್ನು ಹಿಡಿದುಕೊಂಡು ಅದರ ಮೇಲೆ ಊದಿದರು. ಡಾ.ರಾವ್ ಹೇಳುತ್ತಾರೆ, ಬಾಬಾ ಅವರು ಅದನ್ನು ಹಿಂದಿರುಗಿಸಿದಾಗ ತಮ್ಮ ಕಣ್ಣೆದುರಿಗೇ ಅದರ ಆಯತಾಕಾರವು ಕೊಳಲನ್ನೂದುವ ಕೃಷ್ಣನ ಮೂರ್ತಿಯಾಗಿ ಬದಲಾಗಿತ್ತು. ಭೂವಿಜ್ಞಾನಿಯು ಅದರ ಬಣ್ಣದಲ್ಲಿ ಹಾಗೂ ಶಿಲೆಯ ಸಂಯೋಜನೆಯ ರೂಪದಲ್ಲಿ ಉಂಟಾದ ಬದಲಾವಣೆಯನ್ನು ಕಂಡು ಆಶ್ಚರ್ಯಗೊಂಡರು.
ಬಾಬಾ ಹೇಳಿದರು, “ನೋಡಿದ್ದೀಯಾ? ನಿನ್ನ ಅಣುಗಳು ಮತ್ತು ಪರಮಾಣುಗಳಿಂದಾಚೆಗೆ, ಶಿಲೆಯಲ್ಲಿ ಭಗವಂತನಿದ್ದಾನೆ ಮತ್ತು ಭಗವಂತನು ಮಧುರ ಮತ್ತು ಆನಂದ. ಅದರ ಪಾದವನ್ನು ಒಡೆದು ರುಚಿ ನೋಡು.”
ಡಾ.ರಾವ್ ಅವರು ಆ ಪುಟ್ಟ ಪ್ರತಿಮೆಯ ಗ್ರಾನೈಟ್ ಪಾದವನ್ನು ಅತ್ಯಂತ ಸುಲಭವಾಗಿ ತುಂಡು ಮಾಡಿದರು, ಅದನ್ನು ಬಾಯಿಗೆ ಹಾಕಿದಾಗ ಅದು ಕಲ್ಲುಸಕ್ಕರೆಯಾಗಿತ್ತು.
ಈ ಘಟನೆಯ ನಂತರ ಡಾ.ರಾವ್ ಅವರು, ‘ಇಂದಿನ ಮನುಷ್ಯನ ತರ್ಕಬದ್ಧ ಮನಸ್ಸಿನ ಮಿತಿಗಳನ್ನು ಮೀರಿ, ಶಬ್ದಕ್ಕೂ ಮಿಗಿಲಾಗಿ ಮತ್ತು ಆಧುನಿಕ ವಿಜ್ಞಾನದಿಂದ ಆಚೆಗೆ ಹೆಚ್ಚಿನದನ್ನು ಕಲಿತೆ’, ಎಂದು ಹೇಳುತ್ತಾರೆ.