ಅಹಂಭಾವ (ಜಂಭ) ದಿಂದ ಅವನತಿ
ಅಹಂಭಾವ (ಜಂಭ) ದಿಂದ ಅವನತಿ
ಶ್ರೀ ಕೃಷ್ಣ ಮತ್ತು ಅರ್ಜುನರು ಒಮ್ಮೆ ಯಮುನಾ ನದಿಯ ತೀರದಲ್ಲಿ ವಿಹರಿಸುತ್ತಿದ್ದರು. ಯಮುನಾ ತೀರದಲ್ಲಿ ಕಳೆದಂತಹ ತನ್ನ ಬಾಲ್ಯದ, ತುಂಟತನದ, ಆಟೋಟಗಳ ಆ ಸವಿ ನೆನಪು ಶ್ರೀ ಕೃಷ್ಣನ ಮನದಲ್ಲಿ ಜಾಗೃತವಾದವು. ಆದರೆ, ಅರ್ಜುನ, ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಯುದ್ಧದ ಬಗ್ಗೆ ಯೋಚಿಸುತ್ತಿದ್ದನು. ಯುದ್ಧದಲ್ಲಿ ಕೌರವರನ್ನು ಎದುರಿಸಲಿರುವ ಚಿಂತನೆಯೊಂದಿಗೆ, ತನ್ನ ಬಿಲ್ಲು ವಿದ್ಯೆಯ ಕೌಶಲ್ಯ ಹಾಗು ಪರಾಕ್ರಮದ ಬಗ್ಗೆ ಅಹಂಕಾರವು ಅವನ ಮನಸ್ಸನ್ನು ಆವರಿಸಿತ್ತು. ಬಿಲ್ಲು ವಿದ್ಯೆಯಲ್ಲಿ ತನಗೆ ಸಮಾನರು ಈ ಭೂಮಿಯಲ್ಲಿಯೇ ಇಲ್ಲ ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡನು. ಯಮುನಾ ನದಿಯನ್ನು ನೋಡುತ್ತಲೇ, ತಾನು ಈ ವಿಶಾಲವಾದ ನದಿಗೆ ಬಾಣಗಳಿಂದಲೇ ಸೇತುವೆಯನ್ನು ನಿರ್ಮಿಸಬಲ್ಲೆ ಎಂಬ ಭಾವನೆ ಅವನಲ್ಲಿ ಉಂಟಾಯಿತು.
ತ್ರೇತಾಯುಗದಲ್ಲಿ ರಾವಣನೊಂದಿಗೆ ಯುದ್ಧ ಮಾಡಲು ಸನ್ನದ್ಧನಾದ ಶ್ರೀ ರಾಮನಿಗೂ ನಿರ್ಮಿಸಲು ಸಾಧ್ಯವಾಗದ್ದನ್ನು ತಾನು ಸಾಧಿಸಬಲ್ಲೆ ಎನ್ನುವ ಒಂದು ವಿಚಿತ್ರ ಯೋಚನೆಯೂ ಮನಸ್ಸಿನಲ್ಲಿ ಹೊಳೆಯಿತು.
ಅರ್ಜುನನ ಅಂತರಂಗದಲ್ಲಿ ಮೂಡಿದ ಈ ಜಂಭ ಮತ್ತು ಅಹಂಕಾರವನ್ನು ಸೂಕ್ಷ್ಮವಾಗಿ ಗಮನಿಸಿದ ಶ್ರೀ ಕೃಷ್ಣನು, “ಅರ್ಜುನ ನೀನು ನಿನ್ನಷ್ಟಕ್ಕೆ ನಗುವ ಹಾಗೆ ಕಾಣುತ್ತಿದೆ; ನನ್ನಿಂದ ಏನಾದರೂ ಪ್ರಮಾದ ಘಟಿಸಿಲ್ಲ ತಾನೇ?” ಎಂದು ಕೇಳಿದನು.
ಅರ್ಜುನ ಸ್ವಲ್ಪ ಹಿಂಜರಿದು, “ಹೇ ಕೃಷ್ಣ, ನಾನು ನನ್ನಷ್ಟಕ್ಕೆ ನಗುತ್ತಿದ್ದದ್ದು ಹೌದು. ಏಕೆಂದರೆ ಶ್ರೀ ರಾಮ ಲಂಕೆಗೆ ಹೋಗುವ ದಾರಿಯಲ್ಲಿ ಆ ಕಪಿಗಳ ಸಹಾಯ ಪಡೆದು ಕಲ್ಲು ಬಂಡೆಗಳಿಂದ ಸಮುದ್ರಕ್ಕೆ ಸೇತುವೆ ನಿರ್ಮಿಸಿದ ಪ್ರಸಂಗ ನೆನಪಾಯಿತು.
ನಾನಾಗ ಇದ್ದಿದ್ದರೇ, ಕ್ಷಣ ಮಾತ್ರಗಳಲ್ಲಿ ಬಾಣಗಳಿಂದಲೇ ಸೇತುವೆಯನ್ನು ನಿರ್ಮಿಸುತ್ತಿದ್ದೆ” ಎಂದನು. ಅರ್ಜುನನಲ್ಲಿ ಮನೆ ಮಾಡಿದ ಈ ಅಹಂಕಾರವನ್ನು ನಿರ್ಮೂಲನ ಮಾಡಲು ಶ್ರೀ ಕೃಷ್ಣ ನಿಶ್ಚಯಿಸಿದನು. ಶ್ರೀ ಕೃಷ್ಣ ಅರ್ಜುನನಿಗೆ ಆ ಪ್ರಸಂಗವನ್ನು ವಿವರಿಸುತ್ತಾ, ತನ್ನ ಪ್ರಬಲವಾದ ಕಪಿ ಸೈನ್ಯದ ಭಾರಕ್ಕೆ ಸೇತುವೆ ಕುಸಿದು ಹೋಗಬಹುದೆನ್ನುವ ಕಾರಣದಿಂದಾಗಿ ಶ್ರೀ ರಾಮನು ಶರಗಳಿಂದ ಸೇತುವೆಯನ್ನು ನಿರ್ಮಿಸಲಿಲ್ಲ ಎಂದನು. ಅರ್ಜುನನ ಜಂಭ ಇನ್ನೂ ಇಳಿದಿರಲಿಲ್ಲ. ಮತ್ತಷ್ಟು ಗಾಂಭೀರ್ಯದಿಂದ, “ಹಾಗಾದರೆ ಕಪಿಗಳ ಭಾರವನ್ನು ಆಧರಿಸಬಲ್ಲಷ್ಟು ಗಟ್ಟಿಯಾದ ಸೇತುವೆಯನ್ನು ನಿರ್ಮಿಸಲು ಶ್ರೀ ರಾಮನಿಗೆ ಸಾಧ್ಯವಾಗಲಿಲ್ಲವೆಂದಾಯಿತು” ಎಂದನು, ಅರ್ಜುನ. ಒಂದು ಕ್ಷಣ ಯೋಚಿಸಿದ ಶ್ರೀ ಕೃಷ್ಣ, ಸಂತೋಷದಿಂದ ಅರ್ಜುನನಿಗೆ, “ಕೇಳು ಅರ್ಜುನ, ಶ್ರೀ ರಾಮನ ಸೈನ್ಯದಲ್ಲಿದ್ದ ಒಬ್ಬ ದೃಢಕಾಯದ ಕಪಿ ಈಗಲೂ ಬದುಕಿದ್ದಾನೆ. ನೀನೀಗ ಯಮುನಾ ನದಿಗೆ ಬಾಣಗಳಿಂದ ಸೇತುವೆಯನ್ನು ನಿರ್ಮಿಸು. ನಿನ್ನ ಶರ ಸೇತುವೆಯ ಶಕ್ತಿಯನ್ನು ಪರೀಕ್ಷಿಸಲು ನಾನು ಆ ಕಪಿಯನ್ನು ಕರೆಯುತ್ತೇನೆ” ಎಂದನು. ಆಗ ಅರ್ಜುನನು ಹೆಮ್ಮೆಯಿಂದ ಶ್ರೀ ಕೃಷ್ಣನ ಸವಾಲನ್ನು ಸ್ವೀಕರಿಸಿದನು.
ಆ ಪ್ರಕಾರ ಅವನು ಸ್ವಲ್ಪ ಸಮಯದಲ್ಲಿಯೇ ನದಿಯ ಎರಡೂ ದಡಗಳನ್ನು ಜೋಡಿಸುವ ಶರ ಸೇತುವೆಯನ್ನು ನಿರ್ಮಿಸಿದನು. “ಹನುಮಾನ್ ಕೂಡಲೇ ಬಾ”, ಎಂದು ಶ್ರೀ ಕೃಷ್ಣ ಕರೆದಾಗ, ತಕ್ಷಣವೇ ಪ್ರತ್ಯಕ್ಷನಾದ ಬೃಹತ್ ಗಾತ್ರದ ಕಪಿ (ಹನುಮಂತ) ಶ್ರೀ ಕೃಷ್ಣನ ಪಾದಗಳಿಗೆ ನಮಸ್ಕರಿಸಿತು.
ಆಗ ಅಲ್ಲಿ ಸೃಷ್ಟಿಸಲ್ಪಟ್ಟಿರುವ ಸೇತುವೆಯ ಮೇಲೆ ನಡೆಯಲು ಶ್ರೀ ಕೃಷ್ಣ ಹನುಮಂತನಿಗೆ ಸೂಚಿಸಿದನು. ಈ ಕಪಿಯ ಭಾರಕ್ಕೆ ಆ ಸೇತುವೆ ಮುರಿಯಬಹುದೆಂದು ಶ್ರೀ ಕೃಷ್ಣ ಹೆದರುತ್ತಿದ್ದಾನೇನೋ, ಎನ್ನುವ ಯೋಚನೆಯಿಂದ ಅರ್ಜುನ ಶ್ರೀ ಕೃಷ್ಣನನ್ನು ನೋಡಿ, ವ್ಯಂಗ್ಯವಾಗಿ ನಕ್ಕನು. ಕಪಿವೀರ ಸ್ವಲ್ಪ ಹಿಂಜರಿದು, ಮತ್ತೆ ತನ್ನ ಬಲ ಪಾದವನ್ನು ಸೇತುವೆಯ ಮೇಲಿಟ್ಟು, ಎಡ ಪಾದವನ್ನು ಇಡುವುದರ ಒಳಗೆ ಸೇತುವೆಯು ಭಯಂಕರ ಶಬ್ದದೊಂದಿಗೆ ಕುಸಿದು ನದಿಗೆ ಅಪ್ಪಳಿಸಿತು. ಆಗ ಅರ್ಜುನನನ್ನು ನೋಡಿ ನಗುವ ಸರದಿ ಕೃಷ್ಣನದ್ದು. ಅರ್ಜುನ ನಾಚಿಕೆಯಿಂದ ತನ್ನ ಬಿಲ್ಲು ಬಾಣಗಳನ್ನು ಆಚೆಗೆ ಎಸೆದು ಶ್ರೀ ಕೃಷ್ಣನ ಪಾದಗಳಿಗೆ ಎರಗಿದನು.
ಶ್ರೀ ಕೃಷ್ಣ ಅರ್ಜುನನನ್ನು ಸಮಾಧಾನ ಪಡಿಸಿ, ಆತನಿಗೆ ಒಂದು ಉತ್ತಮ ಉಪದೇಶವನ್ನು ಮಾಡಿದನು.. “ಅರ್ಜುನ, ಅಧೀರನಾಗಬೇಡ. ಆ ಕಪಿಗಳನ್ನು ಆಧರಿಸಬಹುದಾದ ಸೇತುವೆಯನ್ನು ನಿರ್ಮಿಸಲು ಶ್ರೀ ರಾಮನಿಗೇ ಸಾಧ್ಯವಾಗಿಲ್ಲ ಎಂದ ಮೇಲೆ, ನೀನ್ಯಾಕೆ ಅವಮಾನಿತನೆಂದು ಭಾವಿಸುತ್ತೀಯಾ? ಆದರೆ, ಇಲ್ಲಿ ನಿನಗೊಂದು ಪಾಠವಿದೆ; ಯಾವತ್ತೂ ನಿನ್ನೊಳಗೆ ಗರ್ವ ಮತ್ತು ಅಹಂಕಾರವನ್ನು ಪ್ರವೇಶಿಸಲು ಅವಕಾಶ ಕೊಡಬೇಡ. ಅವೆರಡೂ ಒಬ್ಬ ನಾಯಕನಿಗೆ ಅವನತಿಯನ್ನು ತಂದೊಡ್ಡುವ ಶತ್ರುಗಳು.”
ಅರ್ಜುನ ವಿನಮ್ರತೆಯಿಂದ ಶ್ರೀ ಕೃಷ್ಣನ ಬೋಧನೆಯನ್ನು ಸ್ವೀಕರಿಸಿದನು. ಈ ಹಿನ್ನೆಲೆಯು, ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಅರ್ಜುನನ ರಥದಲ್ಲಿ, ಹನುಮಂತನ ಲಾಂಛನವು “ಕಪಿ ಧ್ವಜ” ಎಂಬ ಹೆಸರಿನಿಂದ ವಿರಾಜಮಾನವಾಗುವುದಕ್ಕೆ ಕಾರಣವಾಯಿತು.
ಪ್ರಶ್ನೆಗಳು:
- ಜಂಭ ಮತ್ತು ಅಹಂ ಏಕೆ ಹಾನಿಕಾರಕ? ಅವು ಏನು ಹಾನಿ ಮಾಡುತ್ತವೆ?
- ಕೃಷ್ಣನು ಅರ್ಜುನನಲ್ಲಿ ಯಾವ ಬದಲಾವಣೆಯನ್ನು ತಂದನು?
- ನಿಮ್ಮ ತರಗತಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ವಿದ್ಯಾರ್ಥಿ ಜಂಭ ಮತ್ತು ಅಹಂಕಾರವನ್ನು ಬೆಳೆಸಿಕೊಳ್ಳುತ್ತಾನೆ ಎಂದು ಭಾವಿಸೋಣ. ಆಗ ಅವನಿಗೆ ಏನಾಗುತ್ತದೆ?