ಅಹಂಕಾರ
ಅಹಂಕಾರ
ಸುರರು ಮತ್ತು ಅಸುರರ ನಡುವೆ ಒಮ್ಮೆ ಯುದ್ಧ ನಡೆಯಿತು. ಆ ಯುದ್ಧದಲ್ಲಿ ದೇವತೆಗಳಿಗೆ ಜಯ ಲಭಿಸಿದ್ದಕ್ಕಾಗಿ ಅವರು ತುಂಬಾ ಅಹಂಕಾರ ಪಟ್ಟರು. ನಿಜವಾಗಿ ಈ ವಿಜಯ ಒಳ್ಳೆಯ ಅಧಿಕಾರದ ಫಲವಾದರೂ ತಮ್ಮಿಂದಲೇ ಜಯ ಲಭಿಸಿದ್ದು ಎಂಬುದು ದೇವತೆಗಳ ಗರ್ವಕ್ಕೆ ಕಾರಣವಾಯಿತು.”ಈ ವಿಜಯ ನಮ್ಮದು, ಇದರ ಕೀರ್ತಿಯೂ ನಮಗೆ. ನಮಗೆ ಸರಿ ಸಾಟಿ ಯಾರು!” ಎಂದು ಅಹಂಕಾರದಲ್ಲಿ ಮೈಮರೆತರು.
ಈ ವಿಚಾರ ಬ್ರಹ್ಮನ ಗಮನಕ್ಕೆ ಬಂತು. ದೇವತೆಗಳಿಗೆ ಅವರ ಇತಿ ಮಿತಿಯನ್ನು ಅರ್ಥೈಸಿಕೊಟ್ಟು, ಸರಿಯಾದ ಪಾಠ ಕಲಿಸಬೇಕೆಂದುಕೊಂಡ ಆ ಬ್ರಹ್ಮದೇವ. ದೇವತೆಗಳು ಸಂತಸ-ಸಂಭ್ರಮದಲ್ಲಿ ಮುಳುಗಿದ್ದಾಗ ಅಲ್ಲಿಗೆ ಬ್ರಹ್ಮದೇವ ಬಂದ. ಸುರರೆಲ್ಲ ಅಹಂಕಾರದಿಂದ ಕುರುಡಾಗಿದ್ದರು. ಬ್ರಹ್ಮದೇವನ ಯೋಜನೆ ಅವರಿಗೆ ಹೇಗೆ ಅರ್ಥವಾದೀತು? ಆಗ ಅದ್ಭುತವಾದ ಚೈತನ್ಯವೊಂದು ಅವರ ಬಳಿ ಸುಳಿದಂತಾಯಿತು. ಆದರೆ ಅದೇನೆಂಬುದನ್ನವರು ಗುರುತಿಸದೇ ಹೋದರು. ಆದರೆ ಹೇಗೋ ಅವರಿಗೆ ವಿಚಾರ ತಿಳಿಯಿತು. ಕೂಲಂಕಷವಾಗಿ ವಿಚಾರ ತಿಳಿಯುವ ಸಲುವಾಗಿ ಅಗ್ನಿಯನ್ನು ನಿಯೋಜಿಸಿದರು.
ಅಗ್ನಿ ಆ ವಿಶಿಷ್ಟ ಚೈತನ್ಯವನ್ನು ಸಮೀಪಿಸಿದ. ಆಗ ಬ್ರಹ್ಮ ಅಗ್ನಿಯನ್ನು, ”ನೀನು ಯಾರು?” ಎಂದು ಪ್ರಶ್ನಿಸಿದ. ಅದಕ್ಕೆ ಆತ ಅಹಂಕಾರದಿಂದ, ”ನಾನು ಎಲ್ಲವನ್ನು ತಿಳಿದ ಸರ್ವಜ್ಞ, ಅಗ್ನಿ” ಎಂದು ಉತ್ತರಿಸಿದ. ಆಗ ಬ್ರಹ್ಮ, ”ಅದು ನಿನ್ನ ಹೆಸರು, ಕೀರ್ತಿಯಾದರೆ, ನಿನ್ನ ಶಕ್ತಿ-ಸಾಮರ್ಥ್ಯ ಎಷ್ಟೆಂಬುದನ್ನು ನಾನು ತಿಳಿದುಕೊಳ್ಳಬಹುದೇ? ಎಂದು ಮರು ಪ್ರಶ್ನೆ ಹಾಕಿದ. ಆಗ ಅಗ್ನಿಯು, ”ಒಳ್ಳೆಯದು, ನಾನು ಭೂಮಿ-ಆಕಾಶಗಳಲ್ಲಿರುವ ಸರ್ವ ವಸ್ತುಗಳನ್ನು ಸುಟ್ಟು ಭಸ್ಮಮಾಡಬಲ್ಲೆ. ಅಲ್ಲದೆ ಸಪ್ತ ಲೋಕಗಳಲ್ಲಿನ ಸಮಸ್ತವನ್ನು ಸುಡಬಲ್ಲೆ” ಎಂದು ಹೆಮ್ಮೆಯಿಂದ ತನ್ನ ಸಾಮರ್ಥ್ಯದ ಬಗ್ಗೆ ಹೇಳಿಕೊಂಡ. ”ಭೇಷ್, ಭಲೇ, ಎಲೈ ಶಕ್ತಿಶಾಲಿಯೇ, ಈ ಹುಲ್ಲಿನ ತುಂಡನ್ನು ಸುಟ್ಟು ನಿನ್ನ ಸಾಮರ್ಥ್ಯ ತೋರಿಸು” ಎಂದು ಬ್ರಹ್ಮ ಹುಲ್ಲಿನ ತುಣುಕೊಂದನ್ನು ಅಗ್ನಿಯ ಮುಂದಿರಿಸಿದ.ತನ್ನೆಲ್ಲ ಶಕ್ತಿ ಸಾಮರ್ಥ್ಯ ಉಪಯೋಗಿಸಿ ಹುಲ್ಲಿನ ತುಂಡನ್ನು ಸುಡಲು ಯತ್ನಿಸಿದ ಅಗ್ನಿ. ಆದರೆ ಅಹಂಕಾರದಿಂದ ಬೀಗಿಕೊಂಡಿದ್ದ ಅವನಿಗೆ ಹುಲ್ಲಿನ ತುಂಡನ್ನು ಸುಡಲಾಗಲಿಲ್ಲ. ನಾಚಿ ನೀರಾದ ಅಗ್ನಿ.
ದೇವತೆಗಳಲ್ಲಿ ತನ್ನ ಅಸಾಮರ್ಥ್ಯವನ್ನು ಹೇಳಿಕೊಂಡ. ಆ ಚೈತನ್ಯ ಯಾವುದೆಂದು ತಿಳಿಯಲಾಗಲಿಲ್ಲ ಎಂಬ ಸಂಗತಿಯನ್ನು ನಿವೇದಿಸಿಕೊಂಡ.
ಅನಂತರ ದೇವತೆಗಳು, ಗಾಳಿಯ ದೇವತೆಯಾದ ವಾಯುದೇವರನ್ನು ಆ ಅದ್ಭುತ ಚೈತನ್ಯಶಕ್ತಿಯ ವಿಚಾರ ತಿಳಿದು ಬರಲು ನಿಯೋಜಿಸಿದರು. ಅಗ್ನಿಯ ಪ್ರಯತ್ನವನ್ನು ವಿಫಲಗೊಳಿಸಿದ ಆ ಚೈತನ್ಯ ಯಾವುದೆಂದು ತಿಳಿಯಬೇಕೆಂದು ವಾಯುದೇವ, ತುಂಬು ವಿಶ್ವಾಸದಿಂದ, ಗೆದ್ದೇ ಗೆಲ್ಲುತ್ತೇನೆಂಬ ಅಹಂಭಾವದಿಂದ ಬಂದ. ಬ್ರಹ್ಮನು, ”ನೀನು ಯಾರು?” ಎಂದು ವಾಯುದೇವನನ್ನು ಪ್ರಶ್ನಿಸಿದ. ಅದಕ್ಕೆ ಆತ, ”ನಾನು ಗಾಳಿಯ ದೇವತೆ, ವಾಯುದೇವನೆಂದು ಪ್ರಖ್ಯಾತನಾಗಿದ್ದೇನೆ.
ವಿಶಾಲಾಕಾಶದಲ್ಲಿನ ಎಲ್ಲವನ್ನು ಬೀಸಿ ಒಗೆಯುವ ಸಾಮರ್ಥ್ಯ ನನ್ನದು” ಎಂದು ಹೆಮ್ಮೆಯಿಂದ ವಾಯುದೇವ ತನ್ನನ್ನು ಪರಿಚಯಿಸಿಕೊಂಡ. ”ಏನು ನಿನ್ನ ಸಾಮರ್ಥ್ಯ?” ಎಂದು ಬ್ರಹ್ಮ ಕೇಳಿದಾಗ, ”ಭೂಮಿಯ ಮೇಲಿನ ಸಕಲವನ್ನೂ ಬೀಸಿ, ಗುಡಿಸಿ, ಜಾಡಿಸಿಬಿಡುವೆ” ಎಂದು ವಾಯುದೇವ ಹೇಳಿದ. ಆಗ ಬ್ರಹ್ಮನು ಒಂದು ಕಡ್ಡಿಯ ತುಂಡನ್ನು ಅವನ ಮುಂದಿರಿಸಿ, ಬೀಸಿ, ಹಾರಿಸುವಂತೆ ಹೇಳಿದ. ವಾಯುದೇವ ಶಕ್ತಿಮೀರಿ ಪ್ರಯತ್ನಿಸಿದರೂ, ಆ ಕಡ್ಡಿಯನ್ನು ಒಂದಿಂಚೂ ಕದಲಿಸಲಾಗಲಿಲ್ಲ. ಅಹಂಕಾರಿಯಾದ ವಾಯುದೇವನಿಗೆ ಸಣ್ಣಕಡ್ಡಿಯನ್ನು ಸ್ವಲ್ಪವೂ ಕದಲಿಸಲಾಗಲಿಲ್ಲವೆಂದು ತುಂಬ ನಾಚಿಕೆಯಾಯಿತು. ಚೈತನ್ಯ ಶಕ್ತಿಯನ್ನು ತಿಳಿಯಲಾಗದ ತನ್ನ ಅಸಾಮರ್ಥ್ಯವನ್ನು ದೇವತೆಗಳಲ್ಲಿ ಹೇಳಿಕೊಂಡ. ಆ ಅದ್ಭುತ ಚೈತನ್ಯ ಶಕ್ತಿ ತನ್ನ ಸಾಮರ್ಥ್ಯಕ್ಕೆ ಮೀರಿದ್ದು ಎಂದು ದೇವತೆಗಳಿಗೆ ತಿಳಿಸಿದ.
ಚಿಂತಿತರಾದ ದೇವತೆಗಳೆಲ್ಲ ಒಟ್ಟಾಗಿ, ತಮ್ಮ ರಾಜನಾದ ಇಂದ್ರನ ಮೊರೆ ಹೊಕ್ಕರು.
”ಓ ಸಂಪದ್ಭರಿತನೇ, ದೇವರಾಜನೇ, ಅಗ್ನಿ ಮತ್ತು ವಾಯು ಇಬ್ಬರಿಗೂ ತಿಳಿಯಲಾಗದ, ಇಬ್ಬರನ್ನೂ ಸೋಲಿಸಿದ ಆ ಅದ್ಭುತ ಚೈತನ್ಯದ ಬಗ್ಗೆ ನೀವಾದರೂ ಗ್ರಹಿಸಬಹುದೇ?” ಎಂದು ದೇವತೆಗಳು ಇಂದ್ರನನ್ನು ಕೇಳಿದರು. ಇಂದ್ರ ದೇವತೆಗಳ ಮಾತಿಗೆ ಒಪ್ಪಿ, ಆ ಚೈತನ್ಯ ಶಕ್ತಿಯನ್ನು ಸಮೀಪಿಸಿದಾಗ ಬ್ರಹ್ಮ ಅಲ್ಲಿಂದ ಮಾಯವಾಗಿ ತನ್ನ ಲೋಕವನ್ನು ಸೇರಿಕೊಂಡು, ಅಲ್ಲಿ ಸುಂದರ, ಸ್ಪುರದ್ರೂಪಿ ದೇವತೆಯಾಗಿ ಕಂಗೊಳಿಸಿದ. ಥಳಥಳಿಸುವ ಸ್ವರ್ಣಾಭರಣಗಳಿಂದ ಶೋಭಿಸುತ್ತಿದ್ದ ಆಕೆ, ಆಧ್ಯಾತ್ಮಿಕ ಜ್ಞಾನದ ದೇವತೆ ಉಮಾ. ಆಕೆಯನ್ನು ನೋಡಿ ನಿಬ್ಬೆರಗಾದ ಇಂದ್ರ, ”ಇಷ್ಟು ಸಮಯ ನಿನ್ನ ಅದ್ಭುತ ಶಕ್ತಿಯಿಂದ ಪ್ರಚೋದನೆ, ಪ್ರೇರಣೆ ಕೊಡುವ, ಭವ್ಯ, ದಿವ್ಯ ಚೈತನ್ಯಮಯಿಯಾದ ನೀನು ಯಾರು?” ಎಂದು ಧೈರ್ಯದಿಂದ ಕೇಳಿದ. ಅದಕ್ಕೆ ಉಮಾ, ”ಮಕ್ಕಳೇ, ಕಿರಿಯರೇ, ನೀವಿದನ್ನು ತಿಳಿದುಕೊಳ್ಳಿ. ಏನೆಂದರೆ ಇದು ಜ್ಞಾನ, ಬ್ರಹ್ಮ. ಇದೇ ಶಕ್ತಿ ಅಸುರರೊಂದಿಗೆ ಹೋರಾಡಿ ಗೆಲುವನ್ನು ತಂದುಕೊಟ್ಟದ್ದು. ನಿಮಗೆ ಗೆಲುವನ್ನು ತಂದುಕೊಟ್ಟ ಆ ಶಕ್ತಿಯ ಬಗ್ಗೆ ಅಭಿಮಾನವಿರಲಿ.
ಅಹಂಕಾರ ಬೇಡ. ಸರ್ವರಿಗೂ ಒಳಿತಾಗಲಿ” ಎಂದು ಹೇಳಿದಳು. ಅದ್ಭುತ ಚೈತನ್ಯ ಶಕ್ತಿ ಬ್ರಹ್ಮ ಎಂಬುದನ್ನರಿತ ಇಂದ್ರ ಮಿತ್ರರಾದ ಇತರ ದೇವತೆಗಳಿಗೆ ಸತ್ಯ ವಿಚಾರ ತಿಳಿಸಿದ. ಅವರೆಲ್ಲರಿಗೂ ತಮ್ಮ ತಪ್ಪಿನ ಅರಿವಾಯಿತು. ಅದ್ಭುತ ಜ್ಞಾನದ ಬೆಳಕಿನಲ್ಲಿ ತಮ್ಮನ್ನು ತಿದ್ದಿಕೊಂಡು ಕೀರ್ತಿವಂತರಾದರು.
ಪ್ರಶ್ನೆಗಳು:
- ದೇವತೆಗಳು ಏಕೆ ಅಹಂಕಾರ ಪಟ್ಟರು?
- ಅಗ್ನಿಯು ಹೇಗೆ ಅವಮಾನಿತನಾದ?
- ವಾಯುವಿಗೆ ಹುಲ್ಲಿನ ತುಂಡನ್ನು ಏಕೆ ಎತ್ತಲಾಗಲಿಲ್ಲ?
- ಇಂದ್ರನಿಗೆ ಉಮಾ ಯಾವ ಪಾಠ ಕಲಿಸಿದಳು?
- ಈ ಕಥೆಯಲ್ಲಿನ ನೀತಿ ಏನು?
[ಮೂಲ:- ಮಕ್ಕಳಿಗಾಗಿ ಕಥೆಗಳು-೨
ಶ್ರೀ ಸತ್ಯಸಾಯಿ ಪುಸ್ತಕ ಪ್ರಕಾಶನ, ಪ್ರಶಾಂತಿ ನಿಲಯಂ]