ಶ್ರೀ ಪುರಂದರದಾಸರು

Print Friendly, PDF & Email
ಶ್ರೀ ಪುರಂದರದಾಸರು

ಪುರಂದದಾಸರು ಮತ್ತು ಪ್ರಭು ವಿಠಲನ ಹೆಸರು ಒಂದರಿಂದ ಒಂದನ್ನು ಬಿಡಿಸಲಾರದಷ್ಟು ಬಲವಾಗಿ ಹೆಣೆದುಕೊಂಡಿವೆ. ವಿಠಲನನ್ನು ನೆನೆದಾಗ ಪುರಂದರದಾಸರ ಹೆಸರು ನಮ್ಮ ಮನದಲ್ಲಿ ಮೂಡುತ್ತದೆ. ಪುರಂದರದಾಸರು ಎಂತಹ ಭಾಗ್ಯವಂತರು ಏಕೆಂದರೆ ದೇವರೊಡನೆ ಬೆಸಗೊಂಡು ಬಿಡಿಸಲಾಗದ ಧನ್ಯರಾಗಿದ್ದಾರೆ. ದಕ್ಷಿಣ ಪ್ರಾಂತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಭಕ್ತಿ ಗೀತೆಗಳನ್ನು ಹಾಡುವಾಗ ಎಲ್ಲರ ಮನೆಯಲ್ಲೂ ಪುರಂದರ ಮತ್ತು ವಿಠಲನ ನಾಮಗಳು ಪ್ರತಿಧ್ವನಿಸುತ್ತದೆ.

ಪುರಂದರದಾಸರನ್ನು ಕರ್ನಾಟಕದ ಸಂಗೀತದ ಪಿತೃವೆಂದರೆ ತಪ್ಪಾಗಲಾರದು. ಪ್ರಭುವಿನ ಮೇಲಿನ ಪ್ರೇಮವನ್ನು ಸಂಗೀತದ ಮೂಲಕ ಹಾಡಿ ಅರ್ಪಿಸಿದರು. ಅವರ ಕೃತಿಗಳಲ್ಲಿ ಭಕ್ತಿರಸ ಹೊಮ್ಮಿ ಹರಿಯುತ್ತದೆ. ದ್ವೈತ ಸಿದ್ಧಾಂತವನ್ನು ವಿವರವಾಗಿ ತಿಳಿಯಪಡಿಸುತ್ತದೆ. ಹರಿಚರಣ ಪಡೆಯಲು ಭಕ್ತಿ ಮಾರ್ಗವೇ ಸುಲಭ ಮಾರ್ಗ. ಭಕ್ತಿಯು ಮಾನವನ ಕರ್ಮವನ್ನು ಪವಿತ್ರಗೊಳಿಸುತ್ತದೆ ಮತ್ತು ಜ್ಞಾನವನ್ನು ಬೆಳಗಿಸುತ್ತದೆ. ಈ ರೀತಿಯಾಗಿ ದಕ್ಷಿಣ ಭಾರತದಲ್ಲಿ ಭಕ್ತಿ ಸಾಮ್ರಾಜ್ಯದ ರಾಜಮಾರ್ಗವನ್ನು ತೋರಿಸಿದರು. ಜನರ ಹೃದಯಗಳನ್ನು ಸಂಗೀತದ ಕೃತಿಗಳ ಮೂಲಕ ಮನ ಮುಟ್ಟುವಂತೆ ತುಂಬಿದರು.

ಆಮೇಲೆ ಬಂದ ಸಂತ ತ್ಯಾಗರಾಜರು ಪುರಂದರದಾಸರ ಕೃತಿಗಳಿಂದ ಪ್ರೋತ್ಸಾಹ ಪಡೆದಿದ್ದರು. ಆದ್ದರಿಂದ ಶ್ರೀ ತ್ಯಾಗರಾಜರಿಗೆ ಪುರಂದರ ದಾಸರ ಮೇಲೆ ಅತ್ಯಂತ ಪೂಜನೀಯ ಅಭಿಮಾನವಿತ್ತು. ನಾರದರ ಭಕ್ತಿ ಸೂತ್ರಗಳನ್ನು ಸರಳೀಕರಿಸಿ ಕೀರ್ತನೆಗಳ ಮೂಲಕ ಎಲ್ಲರ ಮನವನ್ನು ಭಕ್ತಿಯಿಂದ ತುಂಬಲೆಂದೇ ನಾರದರು ಪುರಂದರ ದಾಸರಾಗಿ ಜನ್ಮವೆತ್ತಿದರು ಎನ್ನುತ್ತಾರೆ. ಅಂತೂ ನಾರದರು ಮತ್ತು ಪುರಂದರ ದಾಸರು ಭಕ್ತಿ ಮಾರ್ಗದ ಪರಾಕಾಷ್ಟತೆಯನ್ನು ಕೀರ್ತನೆಗಳ ಮೂಲಕ ಜನರ ಮನದಲ್ಲಿ ತುಂಬಿ ತುಳುಕಾಡುವಂತೆ ಮಾಡಿದರು.

ಅವರ ಜೀವನ:

ಪುರಂದರ ಘಡ ಎಂಬ ಊರಿನಲ್ಲಿ ವರದಪ್ಪ ನಾಯಕನೆಂಬ ರತ್ನಪಡಿವ್ಯಾಪಾರಿ ಇದ್ದನು. ಹುಟ್ಟಿನಿಂದ ವರದಪ್ಪ ಬ್ರಾಹ್ಮಣನಾಗಿದ್ದರೂ ಕಸುಬಿನಲ್ಲಿ ರತ್ನಪಡಿ ವ್ಯಾಪಾರಿಯಾಗಿದ್ದನು. ಅವನು ಸದಾಚಾರಿಯಾಗಿದ್ದು ನ್ಯಾಯ ರೀತಿಯಲ್ಲಿ ವ್ಯಾಪಾರ ಮಾಡುತ್ತಿದ್ದನು. ಅವನಿಗೆ ಅನುಗುಣವಾದ ಹೆಂಡತಿ ಇದ್ದಳು. ಬೇಕಾದಷ್ಟು ಐಶ್ವರ್ಯವಿದ್ದರೂ ಅವರಿಗೆ ಮಕ್ಕಳಿರಲಿಲ್ಲ. ಅದೇ ಅವರಿಗೆ ಜೀವನದಲ್ಲಿ ನಿರಾಸೆಯನ್ನುಂಟುಮಾಡಿತ್ತು.

ಈ ದಂಪತಿಗಳು ತಿರುಪತಿಯ ಯಾತ್ರೆ ಮಾಡಿ ತಮಗೆ ಒಂದು ಪುತ್ರ ಸಂತಾನವಾಗಬೇಕೆಂದು ಪ್ರಭು ಶ್ರೀನಿವಾಸನನ್ನು ಬೇಡಿದರು. ದೇವರ ಅನುಗ್ರಹದಿಂದ ಅವರಿಗೆ ಪುತ್ರ ಸಂತಾನವಾಯಿತು. ಕೃತಜ್ಞತೆ ತೋರಲು ತಮ್ಮ ಮಗನಿಗೂ ಶ್ರೀನಿವಾಸ ನಾಯಕ ಎಂಬ ಹೆಸರನ್ನೇ ಇಟ್ಟರು. ಮಗುವನ್ನು ಪ್ರೀತಿಯಿಂದ ಲಾಲನೆ ಪಾಲನೆ ಮಾಡುತ್ತಿದ್ದರು.

ಶ್ರೀನಿವಾಸನು ಬೆಳೆದಂತೆಲ್ಲಾ ತಂದೆಯ ಕಸುಬಾದ ರತ್ನಪಡಿ ವ್ಯಾಪಾರದ ವಿಷಯವನ್ನು ಅರಿಯುತ್ತಾ ಬಂದನು. ಅವನಿಗೆ ಸರಸ್ವತಿ ಎಂಬ ಮೃದು ಸ್ವಭಾವದ ಸದಾಚಾರಿಯಾದ ಪತ್ನಿಯೊಂದಿಗೆ ವಿವಾಹವಾಯಿತು.

ಶ್ರೀನಿವಾಸನು ಚತುರನಾದ ವ್ಯಾಪಾರಿಯಾಗಿದ್ದನು ಮತ್ತು ಅವನ ವ್ಯಾಪಾರ ವಹಿವಾಟಿನಲ್ಲಿ ಮುಂದುವರೆದನು. ಐಶ್ವರ್ಯ ಹೆಚ್ಚಿದಂತೆಲ್ಲಾ ಅವನಿಗೆ ಹಣಕೂಡಿಸಬೇಕೆಂಬ ದುರಾಸೆಯುಂಟಾಯಿತು. ಅವನಲ್ಲಿ ಜಿಪುಣತನ ಹೆಚ್ಚುತ್ತಾ ಹೋಯಿತು. ಅವನು ಯಾರಿಗೂ ಕರುಣೆ ತೋರುತ್ತಿರಲಿಲ್ಲ ಅಲ್ಲದೆ ಬಹಳ ಸ್ವಾರ್ಥಿಯಾಗುತ್ತಾ ಬಂದನು. ತನ್ನ ಹೆಂಡತಿಯೂ ಯಾವ ದಾನ ಧರ್ಮಗಳನ್ನು ಯಾವ ಬಡವರಿಗಾಗಲೀ, ತೊಂದರೆ ಇರುವವರಿಗಾಗಲೀ ಮಾಡಬಾರದೆಂದು ಕಟ್ಟಪ್ಪಣೆ ಮಾಡಿದನು. ಇದರಿಂದ ಅವನ ಹೆಂಡತಿ ತುಂಬಾ ನೊಂದಳು. ಅವಳು ಯಾವಾಗಲೂ ಪ್ರಭು ವಿಠಲನನ್ನು ತನ್ನ ಗಂಡನಿಗೆ ಉದಾರ ಮನಸ್ಸನ್ನು ಕೊಡು ಅವರ ಮನಸ್ಸನ್ನು ಬದಲಾಯಿಸು ಎಂದು ಪ್ರಾರ್ಥಿಸುತ್ತಿದ್ದಳು. ಅವರಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ತಾತ ವರದಪ್ಪನವರು ಮೊಮ್ಮಕ್ಕಳೊಡನೆ ಸಂತೋಷವಾಗಿ ಕಾಲಕಳೆಯುತ್ತಿದ್ದರು. ಆದರೂ ತಮ್ಮ ಮಗ ಶ್ರೀನಿವಾಸನ ಜಿಪುಣತನವನ್ನೂ ಸ್ವಾರ್ಥತೆಯನ್ನೂ ಕಂಡು ಕೊರಗುತ್ತಿದ್ದರು. ದೇವರು ಐಶ್ವರ್ಯ, ಮಕ್ಕಳು ಮತ್ತು ಎಲ್ಲಾ ಸೌಕರ್ಯಗಳನ್ನು ಕೊಟ್ಟಿದ್ದರೂ ಏಕೆ ಸ್ವಾರ್ಥ ಬುದ್ಧಿ ಕೊಟ್ಟ ಎಂದು ಕೊರಗುತ್ತಿದ್ದರು. ತಮ್ಮ ಮಗನಿಗೆ ಹೃದಯ ವೈಶಾಲ್ಯತೆ, ಮಾನವತ್ವ ಮತ್ತು ಜೀವನದ ಮೌಲ್ಯಗಳನ್ನು ಕರುಣಿಸು ಎಂದು ದೇವರನ್ನು ಪ್ರಾರ್ಥಿಸುತ್ತಿದ್ದರು.

ವರದಪ್ಪ ನಾಯಕರಿಗೆ ವಿಪರೀತವಾದ ಖಾಯಿಲೆಯಾಯಿತು. ಅವರಿಗೆ ರತ್ನಗಳನ್ನು ಸುಟ್ಟು ಅದರ ಬೂದಿಯನ್ನು ಔಷಧವಾಗಿ ಕೊಡಬೇಕೆಂದು ವೈದ್ಯರು ತಿಳಿಸಿದರು. ಆದರೆ ಶ್ರೀನಿವಾಸ ನಾಯಕನು ಹೇಗೂ ತಂದೆಗೆ ವಯಸ್ಸಾಗಿದೆ. ಅವನೇನು ಹೆಚ್ಚು ದಿನ ಬದುಕುವುದಿಲ್ಲ. ರತ್ನಗಳನ್ನೇಕೆ ಅವನಿಗಾಗಿ ದಂಡಮಾಡಬೇಕು. ಅವನು ಇದರಿಂದ ಬದುಕುವನೆಂದು ಏನು ಭರವಸೆ?” ಎಂದು ಯೋಚಿಸಿ ವೈದ್ಯರ ಮಾತನ್ನು ತಿರಸ್ಕರಿಸಿದನು. ಮಾರನೆಯ ದಿನವೇ ವರದಪ್ಪ ನಾಯಕನು ಸತ್ತು ಹೋದನು. ತಂದೆಯ ಸಾವು ಶ್ರೀನಿವಾಸ ನಾಯಕನ ಮೇಲೆ ಅಂತಹ ಪರಿಣಾಮವನ್ನೇನು ಮಾಡಲಿಲ್ಲ.

ತಂದೆಯ ಸಾವಿನ ಕೆಲವು ದಿನಗಳಾದ ಮೇಲೆ ಶ್ರೀನಿವಾಸನ ಬಳಿ ಒಬ್ಬ ಮುದುಕ ಬಂದು, ತಾನು ತನ್ನ ಮಗನ ಉಪಯನವನ್ನು ಮಾಡಬೇಕೆಂದೂ ತನಗೆ ಸ್ವಲ್ಪ ಧನಸಹಾಯ ಮಾಡಬೇಕೆಂದೂ ಕೇಳಿದನು. ಬ್ರಾಹ್ಮಣನ ಬೇಡಿಕೆಗೆ ಶ್ರೀನಿವಾಸನು ಮುಂದಿನ ವಾರ ಬರುವಂತೆ ಸುಮ್ಮನೆ ಹೇಳಿದನು.

ಆಗಿಂದಾಗ್ಗೆ ಬ್ರಾಹ್ಮಣನು ಅಂಗಡಿಗೆ ಬಂದು ಬೇಡಿದರೂ ಶ್ರೀನಿವಾಸನು ಏನೂ ಕೊಡಲಿಲ್ಲ. 6 ತಿಂಗಳು ಇದೇ ರೀತಿ ಪರದಾಡಿಸಿದ ಮೇಲೆ ಶ್ರೀನಿವಾಸನು ಸವೆದಿದ್ದ ಒಂದು ನಾಣ್ಯವನ್ನು ಬ್ರಾಹ್ಮಣನಿಗೆ ಕೊಟ್ಟು ಕಳುಹಿಸಿದನು. ಆದರೆ ಬ್ರಾಹ್ಮಣನು ಅದನ್ನು ತೆಗೆದುಕೊಂಡು ಶ್ರೀನಿವಾಸನ ಮನೆಗೆ ಬಂದು, ಅವನ ಹೆಂಡತಿ ಸರಸ್ವತಿ ಎಂದು ತಿಳಿಯದಂತೆ ನಟಿಸಿ, ಊರಿನ ಅತಿ ಐಶ್ವಯ೵ವಂತನಾದ ಶ್ರೀನಿವಾಸನು ಇಂತಹ ಸವೆದ ನಾಣ್ಯವನ್ನು ಕೊಟ್ಟನು ಎಂದು ದೂರಿದನು ಮತ್ತು ಏನಾದರೂ ಸಹಾಯಮಾಡುವಂತೆ ಬೇಡಿದನು. ಆರು ತಿಂಗಳು ಅಲೆಸಿ ಕಡೆಗೆ ಇಂತಹ ಉಪಯೋಗವಿಲ್ಲದ ಸವೆದ ನಾಣ್ಯ ಕೊಟ್ಟನೆಂದು ಸರಸ್ವತಿಗೆ ತನ್ನ ಗಂಡನ ಮೇಲೆ ಬಹಳ ಬೇಜಾರಾಯಿತು. ಅವಳು ತನ್ನ ಗಂಡನಿಂದಾದ ತಪ್ಪಿಗೆ ನೊಂದುಕೊಂಡು ತನ್ನ ಮೂಗಿನಲ್ಲಿದ್ದ ವಜ್ರದ ಮೂಗುತಿಯನ್ನು ಬ್ರಾಹ್ಮಣನಿಗೆ ದಾನ ಮಾಡಿದಳು. ಆ ಮೂಗುತಿಯನ್ನು ಅವಳಿಗೆ ಅವಳ ತಾಯಿಯ ಮನೆಯವರು ಕೊಟ್ಟಿದ್ದರು. ಆ ಬ್ರಾಹ್ಮಣನು ಸಂತೋಷದಿಂದ ಅವಳಿಗೆ ವಂದಿಸಿ ಹೊರಟು ಹೋದನು.

ಅಲ್ಲಿಂದ ನೆಟ್ಟಗೆ ಶ್ರೀನಿವಾಸನ ಅಂಗಡಿಗೆ ಹೋಗಿ ತನ್ನ ಮಗನ ಉಪನಯನ ಸಂಸ್ಕಾರದ ಖರ್ಚಿಗೆ ಈ ಮೂಗುತಿಯನ್ನು ಮಾರುತ್ತಿರುವೆನೆಂದು ಹೇಳಿ ಹಣವಿಲ್ಲದೆ ಉಪನಯನವನ್ನು ಮುಂದೂಡಲಾಯಿತು ಎಂದನು. ಅಲ್ಲದೆ ಒಬ್ಬ ಕುಲೀನ ಮನೆತನದ ಗೃಹಿಣಿಯು ಇದನ್ನು ತನಗೆ ದಾನವಾಗಿ ನೀಡಿದಳು ಎಂದು ತಿಳಿಸಿದನು.

ಶ್ರೀನಿವಾಸನು ಅದು ತನ್ನ ಪತ್ನಿಯ ಮೂಗುತಿಯೇ ಎಂದು ಗುರುತು ಹಿಡಿದನು. ಇಂತಹ ಬೆಲೆ ಬಾಳುವ ಮೂಗುತಿಯನ್ನು ದಾನವಾಗಿ ನೀಡಿದಳಲ್ಲಾ ಎಂದು ವಿಪರೀತ ಕೋಪಬಂದಿತು. ಮೂಗುತಿಯ ಸರಿಯಾದ ಬೆಲೆಯನ್ನು ನಿಗದಿ ಮಾಡಿ ನಾಳೆ ಹಣಕೊಡುವೆ ಎಂದು ಹೇಳಿ ಬ್ರಾಹ್ಮಣನನ್ನು ಕಳುಹಿಸಿದನು. ಮೂಗುತಿಯನ್ನು ಪೆಟ್ಟಿಗೆಯಲ್ಲಿಟ್ಟು ಭದ್ರವಾಗಿ ಬೀಗ ಹಾಗಿ ಮನೆಗೆ ಆತುರವಾಗಿ ಹೋದನು. ಸರಸ್ವತಿಯ ಮೂಗಿನಲ್ಲಿ ಮೂಗುತಿಯಿರಲಿಲ್ಲ. ಅದು ತನ್ನ ಹೆಂಡತಿಯ ಮೂಗುತಿಯೇ ಎಂದು ಸ್ಪಷ್ಟವಾಗಿ ಗೊತ್ತಾಯಿತು. ತನಗೆ ತಿಳಿಯದಂತೆ ನಟಿಸಿ ಹೆಂಡತಿಯ ಮೂಗುತಿ ಏನಾಯಿತೆಂದು ಕೇಳಿದನು. ಅದನ್ನು ಒಬ್ಬ ಬಡ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟೆನೆಂದು ಹೇಳಿದರೆ ಗಂಡನು ತನಗೆ ಶಿಕ್ಷಿಸುವನೆಂದು ತಿಳಿದು ಹೆದರಿ ಬೆಳಿಗ್ಗೆ ಸ್ನಾನಮಾಡುವಾಗ ಅದನ್ನು ತೆಗೆದು ಎಲ್ಲೋ ಇಟ್ಟಿದ್ದೇನೆ ಎಂದಳು. ಶ್ರೀನಿವಾಸನು ಅದನ್ನು ಹುಡುಕಿ ಈಗಲೇ ತಂದು ತೋರಿಸಬೇಕೆಂದು ಹೇಳಿದನು.

ಸರಸ್ವತಿಗೆ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋರದೆ ದುರಾಸೆ, ಜಿಪುಣತನದಿಂದ ತುಂಬಿರುವ ಈ ಗಂಡನನ್ನು ಹೇಗೆ ಎದುರಿಸಲಿ? ಇದಕ್ಕಿಂತ ಪ್ರಾಣ ಕಳೆದುಕೊಳ್ಳುವುದೇ ಲೇಸು ಎಂದು ಯೋಚಿಸಿದಳು. ಅವಳು ದೇವರ ಮನೆಗೆ ಹೋಗಿ ಚಿಲುಕ ಹಾಕಿಕೊಂಡು ತನ್ನ ಬಳಿಯಲ್ಲಿದ್ದ ವಜ್ರವನ್ನು ಪುಡಿ ಮಾಡಿ ನೀರಿನ ಬಟ್ಟಲಿನಲ್ಲಿ ಹಾಕಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ, ಆ ಬಟ್ಟಲಿನಲ್ಲಿ ಹೊಳೆಯುತ್ತಾ ಇದ್ದ ಅವಳ ಮೂಗುತಿಯು ಕಾಣಿಸಿತು. ಅವಳ ಆನಂದಕ್ಕೆ ಮಿತಿಯೇ ಇರಲಿಲ್ಲ ದೇವರ ಕರುಣೆಯನ್ನು ಕೊಂಡಾಡುತ್ತಾ ಮೂಗುತಿಯನ್ನು ತಂದು ಗಂಡನಿಗೆ ತೋರಿಸಿದಳು. ಶ್ರೀನಿವಾಸನಿಗೆ ಭ್ರಮೆಯಾಗಿ ಅಂಗಡಿಯಲ್ಲಿ ಪೆಟ್ಟಿಗೆಯಲ್ಲಿದ್ದ ಮೂಗುತಿಯನ್ನು ತನಿಖೆ ಮಾಡಲು ಅಂಗಡಿಗೆ ಓಡಿದನು. ಬೀಗ ಹಾಕಿದ್ದ ಪೆಟ್ಟಿಗೆಯಲ್ಲಿದ್ದ ಮೂಗುತಿ ಮಾಯವಾಗಿತ್ತು. ಶ್ರೀನಿವಾಸನಿಗೆ ಪರಮಾಶ್ಚರ್ಯವಾಯಿತು. ಪೆಟ್ಟಿಗೆಯಲ್ಲಿ ಬೀಗಹಾಕಿ ಭದ್ರವಾಗಿ ಇಟ್ಟಿದ್ದ ಮೂಗುತಿ ಹೆಂಡತಿಯ ಕೈಗೆ ಹೇಗೆ ಬಂದಿತು? ಕೂಡಲೇ ಮನೆಗೆ ಹೋಗಿ ಹೆಂಡತಿಯನ್ನು ನಿಜ ಹೇಳಬೇಕೆಂದು ಪ್ರಶ್ನಿಸಿದನು. ಆಗ ಸರಸ್ವತಿಯು ತಾನು ಮೂಗುತಿಯನ್ನು ಬಡ ಬ್ರಾಹ್ಮಣನಿಗೆ ದಾನ ಮಾಡಿದ್ದಳೆಂದೂ, ಶ್ರೀನಿವಾಸನು ಬಂದು ಅದನ್ನು ತೋರಿಸಲು ಹೇಳಿದಾಗ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಪವಾಡವಾಗಿ ದೇವರ ಕೃಪೆಯಿಂದ ತನಗೆ ದೊರಕಿತೆಂದೂ ತಿಳಿಸಿದಳು. ಇದನ್ನು ಕೇಳಿ ಶ್ರೀನಿವಾಸನಿಗೆ ಆಶ್ಚಯ೵ದಿಂದ ತಲೆಸುತ್ತಲು ಪ್ರಾರಂಭವಾಯಿತು. ತನ್ನ ದುರಾಸೆಯಿಂದ ತಂದೆಯ ಸಾವಾಯಿತು. ಮತ್ತೆ ದುರಾಸೆಯಿಂದಲೇ ಸದ್ಗುಣಿಯಾದ ಹೆಂಡತಿಯ ಸಾವಾಗಬೇಕಿತ್ತು. ಈ ಐಶ್ಚಯ೵ದಿಂದ ಏನು ಪ್ರಯೋಜನ. ಈ ಧನಪಿಶಾಚಿ ತನ್ನನ್ನು ಕೆಸರಿನಲ್ಲಿ ಹೊರಳುವಂತೆ ಮಾಡುತ್ತಿತ್ತಲ್ಲಾ ಎಂದು ದುಃಖಿಸಿದನು. ಎಲ್ಲಾ ಮೌಲ್ಯಗಳನ್ನು ಈ ಸಿರಿತನದ ದುರಾಸೆ ತನ್ನನ್ನು ಕುರುಡನನ್ನಾಗಿ ಮಾಡಿತಲ್ಲಾ ಎಂದು ತನ್ನನ್ನೇ ಹಳಿದುಕೊಳ್ಳುತ್ತಾ ಬಡ ಬ್ರಾಹ್ಮಣನನ್ನು ಆರು ತಿಂಗಳು ಅಲೆಸಿ ಕಡೆಗೆ ಸವೆದ ನಾಣ್ಯ ಕೊಟ್ಟು ಮೋಸಮಾಡಿದೆನಲ್ಲಾ ಎಂದು ಹಲುಬಿ ಇನ್ನು ನನಗೆ ನರಕವೇ ಗತಿ. ನನ್ನ ಹೃದಯ ಎಂತಹ ಕಲ್ಲಾಗಿತ್ತು? ಎಂದು ದುಃಖಿಸಿದನು.

ಇಂತಹ ಪರಿಸ್ಥಿತಿಯಲ್ಲಿ ಶ್ರೀನಿವಾಸನಿಗೆ ಹೊಸ ದೃಷ್ಟಿಯಲ್ಲಿ ಬೆಳಕು ಕಾಣಿಸಿತು. ಆಧ್ಯಾತ್ಮಿಕ ಐಶ್ವಯ೵ದ ಮುಂದೆ ಯಾವ ಐಶ್ವರ್ಯವೂ ಹೆಚ್ಚಲ್ಲ. ಅದು ಸರ್ವವ್ಯಾಪಿಯಾಗಿದೆ. ಎಲ್ಲರಿಗೂ ದೊರೆಯುವಂತಹ ಸಂಪತ್ತಾಗಿದೆ. ಬೇಡಿದವರಿಗೆಲ್ಲಾ, ಹುಡುಕಿದವರಿಗೆಲ್ಲಾ ಎಟಕುತ್ತದೆ. ಹಣದ ದುರಾಸೆಯಿದ್ದ ಶ್ರೀನಿವಾಸನು ಬದಲಾಗಿ ದೇವರ ಹುಚ್ಚನಾದನು. ದೇವರ ಸಂಕಲ್ಪವಿದ್ದರೆ ಎಂತಹವನನ್ನೂ ಪರಿವರ್ತನೆ ಮಾಡಬಲ್ಲದು. ತನ್ನಲ್ಲಿದ್ದ ಐಶ್ವರ್ಯವನ್ನೆಲ್ಲಾ ಬಡವರಿಗೆ ದಾನಮಾಡಿ ಶ್ರೀನಿವಾಸನು ತನ್ನ ಹೆಂಡತಿ ಮಕ್ಕಳೊಡನೆ ದೇವರ ಅನುಗ್ರಹದ ಸಂಪತ್ತನ್ನು ಹುಡುಕಿಕೊಂಡು ಹೊರಟನು. ಶ್ರೀನಿವಾಸನಾಯ್ಕನು ಪುರಂದರದಾಸನಾದನು.

ಆಗ ಕರ್ನಾಟಕ ರಾಜ್ಯದ ರಾಜಧಾನಿ ವಿಜಯನಗರವಾಗಿತ್ತು. ಅದು ಬರಿಯ ರಾಜಧಾನಿಯ ಜೊತೆಗೆ ಆಧ್ಯಾತ್ಮಿಕ ಕೇಂದ್ರವೂ ಆಗಿತ್ತು. ಮಹಾಸಂತರಾದ ಆಚಾಯ೵ ವ್ಯಾಸರಾಯರು ವಿಜಯನಗರದಲ್ಲಿ ವಾಸವಾಗಿದ್ದರು. ಅನೇಕ ಆಧ್ಯಾತ್ಮಿಕ ಪಿಪಾಸುಗಳು ಅವರಿಂದ ಜ್ಞಾನದ ಬೆಳಕನ್ನು ಪಡೆಯಲು ಬರುತ್ತಿದ್ದರು. ಆ ಸಮಯದಲ್ಲಿ ಪುರಂದರದಾಸರು ಶ್ರೀವ್ಯಾಸರಾಯರಲ್ಲಿ ಮಂತ್ರೋಪದೇಶ ಪಡೆಯಲು ಬಂದರು. ಶ್ರೀ ವ್ಯಾಸರಾಯರು ಪುರಂದರದಾಸರನ್ನು ನೋಡಿದ ಕೂಡಲೇ ಅವರು ಸಾಣೆ ಹಿಡಿಯದ ವಜ್ರವೆಂದು ಅರಿತರು.

ಪುರಂದರದಾಸರು ಪ್ರಭು ವಿಠಲನ ದಾಸನಾಗಿ ದೇಶದಲ್ಲೆಲ್ಲಾ ತಾನು ರಚಿಸಿದ ಕೀರ್ತನೆಗಳಿಂದ ದೈರ್ವೊನ್ಮತ್ತರಾಗಿ ಸಂಚರಿಸಿದರು. ಕಾಣದ ಕೈಗಳು ಅವರನ್ನು ಪುರಂದರ ಘಡದ ಸುಖವಾದ ಮನೆಯಿಂದ ಅಲ್ಲಿಂದ ಇಲ್ಲಿಗೆ ಅಲೆದಾಡಿಸುತ್ತಾ ಅವನಿಗೆ ನಿಜವಾದ ಆಧ್ಯಾತ್ಮಿಕ ದರ್ಶನ ಮಾಡಿಸಲು ಅನುವಾಯಿತು.

ಪುರಂದರದಾಸರಿಗೆ ಅಪ್ಪಣ್ಣನೆಂಬ ನಂಬಿಕೆಯುಳ್ಳ ಶಿಷ್ಯನಿದ್ದನು. ಶಿಷ್ಯನೊಡಗೂಡಿ ಪುರಂದರದಾಸರು ತಿರುಪತಿ, ಉಡುಪಿ ಮತ್ತು ಇತರ ಯಾತ್ರಾ ಸ್ಥಳಗಳನ್ನು ಸಂದರ್ಶಿಸಿ ಪಂಡರಾಪುರಕ್ಕೆ ಬಂದರು. ಒಂದು ದಿನ ಅಪ್ಪಣ್ಣನು ದೀರ್ಘ ನಿದ್ರೆ ಮಾಡುತ್ತಿದ್ದನು. ಸ್ನಾನಕ್ಕಾಗಿ ಬಿಸಿ ನೀರು ತರಲು ಪುರಂದರದಾಸರು ಅವನನ್ನು ಕರೆದರು. ಉತ್ತರ ಬರಲಿಲ್ಲ. ಅನೇಕ ಬಾರಿ ಕರೆದ ಮೇಲೆ ಅಪ್ಪಣ್ಣನಿಗೆ ಗುರುವಿನ ಧ್ವನಿ ಕೇಳಿ ಎಚ್ಚತ್ತು ಬಂದು ಗುರುವಿನ ಆಣತಿಯಂತೆ ಕೊಡದಲ್ಲಿ ಬಿಸಿ ನೀರನ್ನು ತಂದನು. ಅನೇಕ ಸಲ ಕರೆದ ಮೇಲೆ ಬಿಸಿ ನೀರನ್ನು ತಂದ ಅಪ್ಪಣ್ಣನ ಮೇಲೆ ಕೋಪಗೊಂಡು ಪುರಂದರ ದಾಸರು ಆ ಬಿಸಿ ನೀರನ್ನು ಅಪ್ಪಣ್ಣನ ಕಾಲುಗಳ ಮೇಲೆ ಸುರಿದು, ಕೊಡವನ್ನು ಅವನ ಮುಖಕ್ಕೆ ಎಸೆದರು. ನಿದ್ರೆ ಮಾಡಲು ಹೋದರು.

ಮಾರನೆಯ ಬೆಳಿಗ್ಗೆ ಎದ್ದ ಮೇಲೆ ತಮ್ಮ ಹಿಂದಿನ ದಿನದ ನಡತೆಗೆ ಅಪ್ಪಣ್ಣನಲ್ಲಿ “ನಿನ್ನೆ ರಾತ್ರಿ ನಾನು ಕೋಪದಿಂದ ನಿನಗೆ ಹಿಂಸೆ ಮಾಡಿದೆ. ದಯವಿಟ್ಟು ಕ್ಷಮಿಸು,” ಎಂದು ಕೇಳಿದರು. ಅಪ್ಪಣ್ಣನಿಗೆ ಆಶ್ಚಯ೵ವಾಯಿತು. ಅವನಿಗೆ ಹಿಂದಿನ ರಾತ್ರಿ ಎದ್ದ ನೆನಪೇ ಬರಲಿಲ್ಲ. ಪುರಂದರದಾಸರು “ಹೋಗಲಿ ಬಿಡು, ಅಂತೂ ನಾನು ಇನ್ನು ಮುಂದೆ ಕೋಪವನ್ನು ನಿಗ್ರಹಿಸಬೇಕು,” ಎಂದು ಕೊಂಡರು.

ಆಮೇಲೆ ಪುರಂದರದಾಸರು ದೇವಸ್ಥಾನಕ್ಕೆ ಹೋಗಿ, ಗರ್ಭಗುಡಿಯೊಳಗೆ ಹೋದರು. ಏನಾಶ್ಚರ್ಯ, ಅಲ್ಲಿ ನೋಡಿದರೆ ದೇವರ ಮುಖದ ಮೇಲೆ ಗಾಯಗಳಾಗಿತ್ತು ಮತ್ತು ಮುಖವು ಊದಿತ್ತು. ಇದನ್ನು ನೋಡಿದ ಪುರಂದರದಾಸರು ದುಃಖದಿಂದ ಬಿಕ್ಕುತ್ತಾ “ಅಯ್ಯೋ ದೇವರೇ ನೀನು ಅಪ್ಪಣ್ಣನ ವೇಷದಲ್ಲಿ ನನ್ನ ಸೇವೆ ಮಾಡಲು ಬಂದಾಗ, ನನ್ನ ಆರಾಧ್ಯ ದೇವರಿಗೆ ನಾನು ಮಾಡಿದ ಸತ್ಕಾರ ಎಂತಹದು” ಎಂದು ಪಶ್ಚಾತ್ತಾಪದಿಂದ ಅಳುತ್ತಾ ಅನ್ನ ನೀರನ್ನು ತ್ಯಜಿಸಿದರು. ಹಗಲೂ ರಾತ್ರಿಯೂ ಅಲ್ಲೇ ಉಳಿದರು. ಮಾರನೆಯ ದಿನ ಪೂಜಾರಿಗಳು ಬಂದಾಗಲೂ ಪುರಂದರದಾಸರು ಅಲ್ಲೇ ಕುಳಿತಿದ್ದರು. ದೇವರ ಕೈಯ್ಯಲ್ಲಿದ್ದ ಬೆಲೆಬಾಳುವ ಎರಡು ಬಳೆಗಳು ಕಾಣದಾಗಿದ್ದನ್ನು ಪೂಜಾರಿಗಳು ಗಮನಿಸಿದರು. ಅಷ್ಟು ಹೊತ್ತಿಗೆ ಸರಿಯಾಗಿ ವನಜಾಕ್ಷಿ ಎಂಬ ನೃತ್ಯ ಮಾಡುವವಳು ಅಲ್ಲಿಗೆ ಬಂದಳು. ದೇವರ ಕೈಯಿನ ಬಳೆಗಳು ಅವಳ ಕೈಯ್ಯಲಿದ್ದವು. ಹೇಗೆ ಈ ಬಳೆಗಳು ನಿನ್ನ ಕೈಯಲ್ಲಿ ಬಂದುವು ಎಂದು ಪ್ರಶ್ನಿಸಿದ ಪೂಜಾರಿಗಳಿಗೆ ಸ್ವಲ್ಪವೂ ಹಿಂಜರಿಯದ ವನಜಾಕ್ಷಿಯು ಪುರಂದರ ದಾಸರ ಕಡೆ ಕೈತೋರಿಸಿ “ಈ ಮನುಷ್ಯನು ರಾತ್ರಿ ನಮ್ಮ ಮನೆಗೆ ಬಂದಿದ್ದನು. ನನ್ನ ನೃತ್ಯವನ್ನು ನೋಡಿ ಆನಂದಿಸಿ ಈ ಬಳೆಗಳನ್ನು ನನಗೆ ಪುರಸ್ಕಾರವಾಗಿ ನೀಡಿದನು” ಎಂದಳು. ಪುರಂದರ ದಾಸರು ಏನೂ ತನಗೆ ತಿಳಿಯದೆಂದು ಎಷ್ಟು ಹೇಳಿದರೂ ಅವರನ್ನು ಚೆನ್ನಾಗಿ ಥಳಿಸಿದರು. ಛಡಿದ ತಿನ್ನುತ್ತಾ ಪುರಂದರದಾಸರು “ವಿಠಲ, ವಿಠಲ” ಎಂದು ಸ್ಮರಣೆ ಮಾಡುತ್ತಾ ತನ್ನನ್ನು ಸೇವಿಸಲೆಂದು ಅಪ್ಪಣ್ಣನಂತೆ ಬಂದ ದೇವರಿಗೆ ತಾನು ಕೋಪದಿಂದ ಮಾಡಿದ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿತು ಎಂದು, ತನ್ನ ಕೃತ್ಯಕ್ಕೆ ಬಿಡುಗಡೆಯೇ ಇಲ್ಲ ಎಂದು ಚಿಂತಿಸಿದರು.

ಸ್ವಲ್ಪ ಹೊತ್ತಿನಲ್ಲಿಯೇ ದೇವರ ಕೈಗಳ ಮಣಿಕಟ್ಟಿನಲ್ಲಿ ಬಳೆಗಳು ಕಾಣಿಸಿಕೊಂಡುವು. ಆಗ ವನಜಾಕ್ಷಿಯು “ನಿನ್ನೆ ರಾತ್ರಿ ನಮ್ಮ ಮನೆಗೆ ಬಂದು ಸಂಭಾಷಣೆ ನಡಿಸಿ ಹಾಸ್ಯಗಳನ್ನು ಮಾಡಿ. ನನಗೆ ಬಳೆಗಳನ್ನು ಕೊಟ್ಟವನು ನೀನಲ್ಲವೆ” ಎಂದಳು. ಆಗ ಅಪ್ಪಣ್ಣನಂತೆ ವೇಷ ಮರೆಸಿ ತನ್ನ ಬಳಿಗೆ ಬಂದವನೂ, ಪುರಂದರ ದಾಸನಂತೆ ವೇಷಮರೆಸಿ ವನಜಾಕ್ಷಿಯ ಬಳಿಗೆ ಹೋಗಿ ಬಳೆ ನೀಡಿದವನೂ ಈ ತುಂಟ ಕೃಷ್ಣನಲ್ಲದೆ ಮತ್ಯಾರೂ ಅಲ್ಲ. ದೇವರು ಇನ್ನೂ ಚೆನ್ನಾಗಿ ಸಾಣೆ ಹಿಡಿಯುತ್ತಿದ್ದಾನೆ. ಭಗವಂತನು ಭಕ್ತರಲ್ಲಿ ತೋರುವ ಲೀಲೆಗಳು ರಹಸ್ಯವಾದುವುಗಳು. ಪುರಂದರದಾಸರು ಪುಟಕ್ಕಿಟ್ಟ ಚಿನ್ನದಂತೆ ಅತ್ಯಂತ ಪರಿಶುದ್ಧಾತ್ಮರಾಗಿ ಪೂರ್ಣ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಜ್ಞಾನದಿಂದ ಬೆಳಗಿದರು.
ಒಂದು ದಿನ ಒಬ್ಬ ಸಂಗೀತ ಉಪಾಧ್ಯಾಯರು ವರ್ಷದಿಂದ ಸಂಗೀತ ಕಲಿಯುತ್ತಿದ್ದರೂ ಸರಿಯಾಗಿ ರಾಗವನ್ನು ಕಲಿಯದಿದ್ದ ಶಿಷ್ಯಳನ್ನು ಕೋಪದಿಂದ ಬಯ್ಯುತ್ತಿದ್ದುದನ್ನು ಪುರಂದರ ದಾಸರು ಕಂಡರು. ಗುರುಗಳಿಂದ ಬೈಗಳ ತಿಂದ ಹುಡುಗಿ ಅಳುತ್ತಿದ್ದಳು. ಪುರಂದರದಾಸರು ಅವಳ ಬಳಿ ಕುಳಿತು ಅವಳ ಕಣ್ಣೀರನ್ನು ಒರಸಿದರು. ಅದೇ ರಾಗದ ಒಂದು ಸರಳ ಗೀತೆಯನ್ನು ರಚಿಸಿ ಅವಳಿಂದ ಹಾಡಿಸಿದರು. ಅವಳು ಅದನ್ನು ಚೆನ್ನಾಗಿ ಹಾಡಿ ತೋರಿಸಿದಳು. ವರ್ಷದಿಂದ ಕಲಿಯಲಾಗದ್ದನ್ನು ಕ್ಷಣದಲ್ಲಿ ಕಲಿತಳು. ಸಂಗೀತದ ಉಪಾಧ್ಯಾಯರಿಗೆ ಆಶ್ಚಯ೵ವಾಯಿತು. ಪುರಂದರದಾಸರಿಗೆ ಆನಂದವಾಯಿತು. ಈಗಲೂ ದಕ್ಷಿಣ ಭಾರತದಲ್ಲಿ ಸಂಗೀತ ಕಲಿಯುವ ಮುಂಚೆ ಪುರಂದರದಾಸರ ದೇವರ ನಾಮಗಳನ್ನು ಮೊದಲು ಕಲಿಸುವ ವಾಡಿಕೆ ಇದೆ.

ದೇವರು ಮತ್ತು ಎಲ್ಲಾ ಮಟ್ಟದ ಜನರ ಹೃದಯ ಸಂಪರ್ಕದ ಮಾಧ್ಯಮ ಸಂಗೀತವೆಂದು ಪುರಂದರದಾಸರು ಅರಿತಿದ್ದರು. ರಸ್ತೆಯಲ್ಲಿ ಆಡುವ ಮಕ್ಕಳನ್ನು ಕರೆದು ಅವರಿಗೆ ಕಲ್ಲು ಸಕ್ಕರೆ ಕೊಡುತ್ತೇನೆಂದು ಹೇಳಿ “ಕಲ್ಲು ಸಕ್ಕರೆ ಕೊಳ್ಳಿರೊ ಗೋವಿಂದ ನಾಮದ ವಿಠಲ ನಾಮದ” ಎಂದು ಹಾಡಿ ವಿಠಲನಾಮಕ್ಕಿಂತ ರುಚಿಯಾದ ಸಿಹಿಯಾದ ಕಲ್ಲು ಸಕ್ಕರೆ ಇರಲು ಸಾಧ್ಯವೇ ಎಂದು ಹೇಳುತ್ತಿದ್ದರು. ಎಲ್ಲರ ಕಣ್ಣಲ್ಲೂ ನಾಮಾಮೃತ ಕೇಳಿ ಆನಂದ ಭಾಷ್ಪ ಸುರಿಯುತ್ತಿತ್ತು.

ಪುರಂದರದಾಸರು ತಂಬೂರಿ ಶೃತಿಯಲ್ಲಿ ಹಾಡುತ್ತಿದ್ದರೆ ಅದರಲ್ಲಿ ತಾತ್ವಿಕತೆ ಮತ್ತು ಬೋಧನೆ ತುಂಬಿ ತುಳುಕುತ್ತಿತ್ತು. ಅವರು ನಾಲ್ಕು ಲಕ್ಷಕ್ಕಿಂತ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಆದರೆ ಈಗ ೪೦೦ ಹಾಡುಗಳು ಮಾತ್ರ ದೊರಕಿವೆ. ಆ ಹಾಡುಗಳೇ ಕರ್ನಾಟಕ ಸಂಗೀತದ ಅಮೂಲ್ಯ ರತ್ನಗಳೆಂದು ಹೇಳಬಹುದು.

ತನಗೆ ಆಧ್ಯಾತ್ಮಿಕ ಮಾರ್ಗ ತೋರಿದ ವ್ಯಾಸತೀರ್ಥರನ್ನು ಸನ್ಮಾನಿಸಲು ತನ್ನ ಎಲ್ಲಾ ರಚನೆಗಳನ್ನು ಅವರ ಬಳಿಗೆ ಹೋಗಿ ಅವರ ಪಾದದಡಿಯಲ್ಲಿಟ್ಟರು. ಗುರು ವ್ಯಾಸತೀರ್ಥರು ಅದನ್ನು ವ್ಯಾಸ ಪೀಠದ ಮೇಲಿಟ್ಟರು. ಗುರುಗಳಿಂದ ಪುರಂದರದಾಸರಿಗೆ ದೊರೆತ ಗೌರವವನ್ನು ಕಂಡು ಇತರ ಶಿಷ್ಯರಿಗೆ ಹೊಟ್ಟೆಕಿಚ್ಚು ಉಂಟಾಯಿತು. ಗುರುಗಳು ಆ ಶಿಷ್ಯರುಗಳಿಗೆ ಬುದ್ಧಿ ಕಲಿಸಬೇಕೆಂದು ಅವರನ್ನು ಕರೆದು ವ್ಯಾಸಪೀಠದ ಮೇಲಿದ್ದ ಪುರಂದರದಾಸರ ರಚನೆಯನ್ನು ನೆಲದ ಮೇಲೆ ಇಡಲು ಹೇಳಿದರು. ಅದರಂತೆ ಶಿಷ್ಯರು ಅದನ್ನು ನೆಲದ ಮೇಲೆ ಇಟ್ಟಾಗ ಅದು ಹಾರಿ ಮತ್ತೆ ವ್ಯಾಸಪೀಠದ ಮೇಲೆ ಕುಳಿತುಕೊಂಡಿತು. ಆಗ ವ್ಯಾಸರಾಯರು, ಪುರಂದರದಾಸರ ರಚನೆಯು ಉಪನಿಷತ್ತುಗಳೇ ಹೊರತು ಬೇರೆಯಲ್ಲ ಎಂದು ಹೇಳಿ ಅವರ ರಚನೆಯನ್ನು ‘ಪುರಂದರೋಪನಿಷತ್’ ಎಂದು ಕೊಂಡಾಡಿದರು. ಅವರ ರಚನೆಗಳ ಹೆಚ್ಚು ಭಾಗ ಕನ್ನಡದಲ್ಲಿದ್ದರೂ ಕೆಲವು ಭಾಗ ತೆಲುಗಿನಲ್ಲೂ ಇದೆ.

ಪುರಂದರದಾಸರು ತಮ್ಮ ಕಡೆಯ ದಿನಗಳನ್ನು ವಿಜಯನಗರದ ರಾಜನು ಅವರಿಗೆಂದೇ ಕಟ್ಟಿಸಿದ ಆಶ್ರಮದಲ್ಲಿ ಕಳೆದರು. ಅದು ಹಂಪೆಯ ತುಂಗಭದ್ರಾ ನದಿಯ ದಡದಲ್ಲಿತ್ತು. ಪುರಂದರದಾಸರು, ಕನಕದಾಸರ ಸಮಕಾಲೀನರಾಗಿದ್ದರು. ಇಬ್ಬರಿಗೂ ಅವರವರಲ್ಲಿ ಅಭಿಮಾನ ಮತ್ತು ವಿಶ್ವಾಸವಿತ್ತು. ಪುರಂದರದಾಸರ ಜೀವನದಿಂದ ನಮ್ಮಲ್ಲಿರುವ ಎಲ್ಲಾ ಬಲಹೀನತೆಗಳಾದ ದುರಾಸೆ, ಕ್ರೋಧ, ವ್ಯಾಮೋಹ ಮುಂತಾದುವನ್ನು ಗೆದ್ದು ದೇವರ ದಯೆಯಿಂದ ಪರಿಪೂರ್ಣತೆಯನ್ನು ಪಡೆಯಬಹುದು ಎಂಬ ವಿಷಯ ತಿಳಿಯಬಹುದು. ಭಕ್ತಿ ಮತ್ತು ಶರಣಾಗತಿ ನಮ್ಮನ್ನು ದೇವರೆಡೆಗೆ ಒಯ್ಯುತ್ತವೆ.

ಪುರಂದರದಾಸರ ಬೋಧನೆಗಳು:

ನೈತಿಕತೆಯಿಲ್ಲದ ಯಾವ ಧರ್ಮವೂ ಇಲ್ಲ. ಮತಗಳ ಅಂಧಶ್ರದ್ಧೆಗಳನ್ನು ನೈತಿಕ ನ್ಯಾಯವರ್ತನೆ ಇಲ್ಲದೆ ಅನುಷ್ಠಾನ ಮಾಡುವುದು ನಿಷ್ಟ್ರಯೋಜಕ. ಭಗವಂತನಲ್ಲಿ ಭಕ್ತನಿಗೆ ಪೂರ್ಣ ಶ್ರದ್ಧೆ ಇರಬೇಕು. ನಂಬಿಕೆ ಇಲ್ಲದವರು ಎಂದೂ ಉದ್ಧಾರವಾಗುವುದಿಲ್ಲ. ಹರಿಯಲ್ಲಿ ಮತ್ತು ಅವನ ಕರುಣೆಯಲ್ಲಿ ಸಂಪೂರ್ಣ ಶ್ರದ್ಧೆ ಇರುವವರ ಪ್ರಾರ್ಥನೆಗೆ ದೇವರು ಉತ್ತರ ಕೊಡುತ್ತಾನೆ. ಭಗವಂತನ ನಿವಾಸ ಸ್ಥಾನವಾದ, ವೈಕುಂಠವಿದೆ. ನಮ್ಮ ಕರೆಯ ಕೂಗು ಅವನಿಗೆ ತಲುಪುತ್ತವೆ. ಮತಧರ್ಮಗಳ ಆಚರಣೆಯಲ್ಲಿ ಮಾನವೀಯತೆ ಮತ್ತು ಪ್ರೇಮವಿಲ್ಲದಿದ್ದರೆ ಅದು ನಿಷ್ಟ್ರಯೋಜಕ ಮತ್ತು ಉಪಯೋಗವಿಲ್ಲದ್ದು ಆಗಿದೆ.

ಹೃದಯ ಭಕ್ತಿಯಿಂದ ತುಂಬಿರದಿದ್ದರೆ ನೀರಿನಲ್ಲಿ ದೇಹವನ್ನು ಮುಳುಗಿಸುವುದರಿಂದ ಏನು ಪ್ರಯೋಜನ? ಬೇರೆ ಬೇರೆ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮನಸ್ಸನ್ನು ಶುದ್ಧೀಕರಿಸಲಾಗುವುದಿಲ್ಲ. ತಲೆಯ ಮೇಲೆ ಕೊಡಗಟ್ಟಲೆ ನೀರು ಸುರಿದುಕೊಳ್ಳುವುದರಿಂದ ನಿಜವಾದ ಸ್ನಾನವಾಗುವುದಿಲ್ಲ. ಬಡವರು ಮತ್ತು ಅವಶ್ಯಕತೆ ಇರುವವರಿಗೆ ದಾನ ಮಾಡುವುದು ನಿಜವಾದ ಸ್ನಾನವೆನಿಸುತ್ತದೆ. ಬಡವರು ಮತ್ತು ದುಃಖಿಗಳಿಗೆ ಕರುಣೆ ತೋರಿಸುವುದು, ಹಸಿದವರ ಹೊಟ್ಟೆಗೆ ನೀಡುವುದು ನಿಜವಾದ ಸ್ನಾನವೆನಿಸುವುದು. ದೇವರಲ್ಲಿ ನಮ್ರತೆಯಿಂದ ಪ್ರಾರ್ಥಿಸುವುದು, ವಿರಜಾ ನದಿಯಲ್ಲಿ ಸ್ನಾನಮಾಡುವುದಕ್ಕಿಂತ ಉತ್ತಮವಾದುದು.

ದೇವರ ದರ್ಶನ ಪಡೆಯಲು ದೇವರಲ್ಲಿ ಅಚಲವಾದ ನಂಬಿಕೆ ಇರಬೇಕು. ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣಬೇಕು. ಶ್ರದ್ಧೆಯಿಂದ ಮಾನವನ ಸೇವೆಯೇ ಮಾಧವ ಸೇವೆಯೆಂದು ಸೇವೆ ಸಲ್ಲಿಸಿದಾಗ ನೀನು ಪರಿಶುದ್ಧನಾಗುವೆ. ಆಗ ಹರಿಯೇ ನಿನ್ನನ್ನು ಹುಡುಕಿಕೊಂಡು ಓಡಿ ಬರುವನು. ಪುರಂದರದಾಸರು ದ್ವೈತ ಸಿದ್ಧಾಂತಿಯಾದರೂ, ದ್ವೈತ ಸಿದ್ಧಾಂತವನ್ನು ಬೋಧಿಸಿದರೂ ಅವರ ಎಷ್ಟೋ ರಚನೆಗಳಲ್ಲಿ ಸರ್ವಧರ್ಮ ಸಮನ್ವಯ ಸಿದ್ಧಾಂತ ಇರುವುದರಿಂದ, ದೈತ ಸಿದ್ಧಾಂತವನ್ನು ಒಪ್ಪದಿದ್ದವರೂ ಅವರ ರಚನೆಗಳಿಗೆ ಮಾರುಹೋಗಿದ್ದಾರೆ. ಅದರಿಂದಲೇ ಪುರಂದರ ದಾಸರ ಗೀತ ರಚನೆಗಳು ಸಾರ್ವಜನಿಕ ಮತ್ತು ಸಾರ್ವಕಾಲಿಕವಾಗಿವೆ. ಅದರಿಂದಲೇ ಅದು ಜನರ ಮಾನ್ಯತೆ ಪಡೆದಿದೆ.
ಪುರಂದರದಾಸರು ಭಕ್ತಿ ಗೀತೆಗಳ ರಚನೆಯಿಂದ ನಾರದರ ಭಕ್ತಿ ಮಾರ್ಗವನ್ನು ಅನುಸರಿಸಿದರು.

ಪ್ರಶ್ನೆಗಳು:
  1. ಪುರಂದರದಾಸರು ಯಾವ ರಾಜ್ಯಕ್ಕೆ ಸೇರಿದವರು? ಅವರ ಮೊದಲ ಹೆಸರೇನು?
  2. ಅವರ ಸ್ವಭಾವ ಹೇಗಿತ್ತು?
  3. ಬಡ ಮುದುಕನು ಸರಸ್ವತಿಯಿಂದ ಏನನ್ನು ಕೇಳಿದನು?
  4. ಶ್ರೀನಿವಾಸ ನಾಯಕನ ಜೀವನವನ್ನು ಬದಲಾಯಿಸಿದ ಘಟನೆ ಯಾವುದು?
  5. ಆವರನ್ನು ಕನಾ೵ಟಕದ ಸಂಗೀತ ಪಿತಾಮಹ ಎಂದು ಏಕೆ ಕರೆಯುತ್ತಾರೆ?

Illustrations: A. Harini, Sri Sathya Sai Balvikas Student.
[Source: Stories for Children II, Published by Sri Sathya Sai Books & Publications, PN]

Leave a Reply

Your email address will not be published. Required fields are marked *