ನಿಜವಾದ ಬ್ರಾಹ್ಮಣ ಯಾರು?
ನಿಜವಾದ ಬ್ರಾಹ್ಮಣ ಯಾರು?
ಬಹಳ ವರ್ಷಗಳ ಹಿಂದಿನ ಕಥೆ. ಏಕಾಂತವಾದ ಒಂದು ಅರಣ್ಯ ಪ್ರದೇಶ. ಪ್ರಶಾಂತ ಪರಿಸರ. ಒಂದು ಪರಿಶುದ್ಧ ಜಲವಿರುವ ಪವಿತ್ರ ನದಿ. ಒಬ್ಬ ಬ್ರಾಹ್ಮಣ ತಪೋನುಷ್ಠಾನ ನಿರತನಾಗಿ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದ. ತಾನು ಸಾತ್ವಿಕ ಸ್ವಭಾವದ, ಧಾರ್ಮಿಕ ಮನೋಭಾವದ ಶ್ರೇಷ್ಠ ವ್ಯಕ್ತಿ ಎಂಬ ಅಹಂಭಾವ ಅವನ ದೌರ್ಬಲ್ಯ. ಸಾಮಾನ್ಯರ ಸಂಪರ್ಕದಿಂದ ದೂರವಿದ್ದ ಆತ, ಜನ ತನ್ನನ್ನು ಗೌರವಿಸಬೇಕೆಂದು ಬಯಸುತ್ತಿದ್ದ. ಜನಸಾಮಾನ್ಯರ ಬಗ್ಗೆ ಆತನಿಗೆ ಕಳಕಳಿಯಿರಲಿಲ್ಲ. ಅವರು ಕೆಳವರ್ಗದವರೆಂಬ ತಾತ್ಸಾರ ಭಾವನೆ ಅವನಲ್ಲಿತ್ತು. ಅವರ ಸಂಪರ್ಕದಿಂದ ತನಗೆ ಮೈಲಿಗೆಯಾಗುವುದೆಂಬುದು ಅವನ ಅಭಿಪ್ರಾಯವಾಗಿತ್ತು. ಆದ್ದರಿಂದ ಜನಸಾಮಾನ್ಯರಿಂದ ದೂರವೇ ಉಳಿದಿದ್ದ.
ಪವಿತ್ರ ಜಲದಲ್ಲಿ ಸ್ನಾನ, ತಾನೇ ತಯಾರಿಸಿದ, ಬೇರೆಯವರು ಮುಟ್ಟದ ಶುದ್ಧ ಆಹಾರ ಸೇವನೆ, ನಿರಂತರ ಜಪ, ತಪ, ಸಾಧನೆ, ಕಣ್ಮುಚ್ಚಿಕೊಂಡು ತಾಸುಗಟ್ಟಲೆ ಧ್ಯಾನ ಮಾಡುವುದು, ಗಟ್ಟಿ ಸ್ವರದಲ್ಲಿ ಮಂತ್ರಪಠಣೆ-ಇಂಥ ಧಾರ್ಮಿಕ ಕ್ರಿಯೆಗಳು ತನ್ನನ್ನು ಉನ್ನತ ಮಟ್ಟದಲ್ಲಿರಿಸಿವೆ ಎಂಬುದು ಅವನ ಭಾವನೆಯಾಗಿತ್ತು. ತಾನೊಬ್ಬ ಪರಮ ಪಾವನ ಪುರುಷ, ಜನ ತನಗೆ ಮನ್ನಣೆ ಮಾಡಬೇಕೆಂಬುದು ಆತನ ಬಯಕೆ. ಆದರೆ ಆತನ ಅಂತಃಕರಣದಲ್ಲಿ ಎಳ್ಳಷ್ಟೂ ಪರರ ಬಗ್ಗೆ ಪ್ರೀತಿ, ಅನುಕಂಪ, ಸಹಾನುಭೂತಿ ಇರಲಿಲ್ಲ. ಅವನ ಹೃದಯ ದುರ್ಗುಣಗಳ ಕಗ್ಗತ್ತಲ ಕೂಪದಂತಿತ್ತು. ಪ್ರೀತಿಯೆಂಬ ತಂಗಾಳಿಗೆ, ಬೆಚ್ಚಗಿನ ಭಾವನೆಗಳಿಗೆ ಅವನ ಹೃದಯದಲ್ಲಿ ಜಾಗವೇ ಇರಲಿಲ್ಲ. ಆತ್ಮೀಯರು ತನ್ನ ಮನೆಗೆ ಭೇಟಿ ಕೊಡುವುದು ಅವನಿಗೆ ಇಷ್ಟವಿರಲಿಲ್ಲ. ಬಂಧುಗಳ ಭೇಟಿ ಅವನನ್ನು ರೇಗುವಂತೆ ಮಾಡುತ್ತಿತ್ತು. ಪರರ ಆಗಮನದಿಂದ ತನ್ನ ಮನ-ಮನೆ ಮೈಲಿಗೆಯಾಗುವುದೆಂಬ ತಪ್ಪು ಕಲ್ಪನೆ ಅವನದು. ಕಠಿಣ ವ್ರತಾಚರಣೆ ಮಾಡುತ್ತಿದ್ದರೂ ಅವನದು ಹಿಂಸಾತ್ಮಕ ಪ್ರವೃತ್ತಿಯಾಗಿತ್ತು. ಅವನ ಕೋಪ-ತಾಪ ಎಷ್ಟೆಂದರೆ ಕೆಲವೊಮ್ಮೆ ಅವನಿಗೇ ಅವನನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ.
ಒಮ್ಮೆ ಮುಗ್ಧನಾದ ಒಬ್ಬ ಮಡಿವಾಳ (ಧೋಬಿ) ಆ ವನ ಪ್ರದೇಶಕ್ಕೆ ಬಂದ. ಅವನಿಗೆ ಆ ಬ್ರಾಹ್ಮಣನ ಬಗ್ಗೆ, ಆ ನದಿ ಪ್ರದೇಶದ ಪಾವಿತ್ರ್ಯದ ಬಗ್ಗೆ ಅರಿವಿರಲಿಲ್ಲ. ತನ್ನ ಪಾಡಿಗೆ ತಾನು ಬಟ್ಟೆ ಒಗೆಯುತ್ತಿದ್ದ. ಬಟ್ಟೆಯನ್ನು ಜೋರಾಗಿ ಕಲ್ಲಿಗೆ ಬಡಿಯುತ್ತಿದ್ದ. ಆಗ ಆ ಶಬ್ದ ಗಟ್ಟಿಯಾಗಿ ಕಿವಿಗೆ ಅಪ್ಪಳಿಸುತ್ತಿತ್ತು. ಬಟ್ಟೆಯ ನೀರಿನ ಸೇಚನವಾಗುತ್ತಿತ್ತು. ಅಲ್ಲೆ ಸಮೀಪದಲ್ಲಿ ಮರಗಳ ಮರೆಯಲ್ಲಿ, ನೆರಳಿನ ಆಶ್ರಯದಲ್ಲಿ ಬ್ರಾಹ್ಮಣ ತಪೋನುಷ್ಠಾನದಲ್ಲಿ ತೊಡಗಿದ್ದ. ಕಣ್ಮುಚ್ಚಿಕೊಂಡು ಏರುದನಿಯಲ್ಲಿ ಮಂತ್ರಪಠಣ ಮಾಡುತ್ತಿದ್ದ. ನೀರಿನ ಸೇಚನ ಮತ್ತು ಶಬ್ದ ಅವನನ್ನು ಎಚ್ಚರಿಸಿತು. ಕಣ್ತೆರೆದು ಸಿಟ್ಟಿನಿಂದ ನೋಡಿ ಆ ಧೋಬಿಯನ್ನು ಬೈಯಲಾರಂಭಿಸಿದ. ಶಪಿಸಿದ. ತನ್ನ ಕರ್ತವ್ಯದಲ್ಲಿ ಮಗ್ನನಾಗಿದ್ದ ಧೋಭಿಗೆ ಬ್ರಾಹ್ಮಣನ ಮಂತ್ರ ಪಠಣೆಯಾಗಲೀ, ಬೈಗುಳದ ಮಾತುಗಳಾಗಲೀ ಕೇಳಿಸುತ್ತಿರಲಿಲ್ಲ. ಯಾವ ಪರಿವೆಯೂ ಇಲ್ಲದೆ ತನ್ನ ಕೆಲಸವನ್ನು ಮಾಡುತ್ತಲೇ ಇದ್ದ. ಕುಪಿತನಾದ ಬ್ರಾಹ್ಮಣ ಧೋಬಿ ಬಟ್ಟೆ ಒಗೆಯುತ್ತಿದ್ದಲ್ಲಿಗೆ ಬಂದು, ”ಚಂಡಾಲ, ನಿನ್ನ ಬಟ್ಟೆಯ ಕೊಳಕು ನೀರಿನ ಸೇಚನದಿಂದ ನನ್ನನ್ನು ಅಪವಿತ್ರಗೊಳಿಸಿದೆ. ಈ ಪ್ರದೇಶಕ್ಕೆ ಕಾಲಿಡಲು ಎಷ್ಟು ಧೈರ್ಯ ನಿನಗೆ? ನಿನ್ನ ಕೊಳಕು ಕೆಲಸ ನಿಲ್ಲಿಸಿ, ಈ ಜಾಗ ಬಿಟ್ಟು ತೊಲಗು” ಎಂದು ಶಪಿಸಿದ.
ಪಾಪ ಮುಗ್ಧ ಧೋಬಿಗೆ ಏನೊಂದೂ ಅರ್ಥವಾಗಲಿಲ್ಲ. ಮಿಕಿ ಮಿಕಿ ನೋಡಿದ. ಸ್ಥಂಭೀಭೂತನಾಗಿ ಅಲ್ಲೇ ನಿಂತ. ಬ್ರಾಹ್ಮಣ ಇನ್ನಷ್ಟು ಕೋಪಾವಿಷ್ಟನಾದ. ತನ್ನಾಜ್ಞೆ ಪಾಲಿಸದ ಧೋಬಿಗೆ ಹೊಡೆಯಲು ಮುಂದಾದ. ಹಿಗ್ಗಾ ಮುಗ್ಗಾ ಧೋಬಿಯನ್ನು ಬ್ರಾಹ್ಮಣ ಥಳಿಸಿದ. ತನ್ನ ಮೇಲಿನ ಈ ಆಕ್ರಮಣಕ್ಕೆ ಕಾರಣವೇನೆಂದು ತಿಳಿಯದೆ ಹೆದರಿ ನಿಂತಿದ್ದ ಧೋಬಿಗೆ ಆತ ಬ್ರಾಹ್ಮಣನೆಂಬುದು ತಿಳಿಯಿತು. ಅವನು ದೈನ್ಯದಿಂದ ಕೈ ಜೋಡಿಸಿ, ”ಸ್ವಾಮೀ, ಮಹಾನುಭಾವರೆ, ನಿಮ್ಮ ಕೋಪಕ್ಕೆ ಕಾರಣವಾದ, ಈ ಗುಲಾಮ ಮಾಡಿದ ಅಪರಾಧವೇನು? ದಯವಿಟ್ಟು ನನ್ನನ್ನು ಕ್ಷಮಿಸಿ. ವಿಚಾರ ತಿಳಿಸಿ” ಎಂದು ವಿನಮ್ರನಾಗಿ ಪ್ರಾರ್ಥಿಸಿದ. ಆಗ ರೋಷಾವೇಷದಿಂದ “ಕೀಳು ಕುಲದಲ್ಲಿ ಜನಿಸಿದ ನೀನು ನನ್ನ ಆಶ್ರಮದ ಸಮೀಪ ಬಂದು, ಬಟ್ಟೆ ಒಗೆದು, ಕೊಳಕು ನೀರಿನ ಸೇಚನದಿಂದ ನನ್ನ ಮೈಮನಗಳನ್ನು ಅಪವಿತ್ರಗೊಳಿಸಿದೆ. ನನ್ನ ಪವಿತ್ರತೆಯನ್ನು ಮೈಲಿಗೆ ಮಾಡಲು ನಿನಗೆಷ್ಟು ಧೈರ್ಯ? ಎಲೈ ಚಂಡಾಲ, ಈ ಪರಮ ಪವಿತ್ರ ಜಾಗವನ್ನು ಬಿಟ್ಟು ತೊಲಗು” ಎಂದು ಬ್ರಾಹ್ಮಣ ಗುಡುಗಾಡಿದ. ಧೋಬಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದ. ಆ ಪ್ರದೇಶ ಬಿಟ್ಟುಹೋಗಲು ನಿರ್ಧರಿಸಿದ. ಪಶ್ಚಾತ್ತಾಪಪಟ್ಟ, ಪರಿತಪಿಸಿದ.
ಚಂಡಾಲ ಧೋಬಿಯಿಂದ ತನ್ನ ಮೈಮನ ಮೈಲಿಗೆಯಾಯಿತೆಂದು, ತನ್ನನ್ನು ಶುದ್ಧೀಕರಿಸಿಕೊಳ್ಳಬೇಕೆಂದು ಆ ಮುನಿ (ಬ್ರಾಹ್ಮಣ) ನದಿಗೆ ಹೋಗಿ ಸ್ನಾನಮಾಡಿದ. ಮೈಲಿಗೆಯಿಂದ ತನ್ನನ್ನು ಶುದ್ಧೀಕರಿಸಿಕೊಂಡ. ಧೋಬಿ ಕೂಡಾ ನದಿ ನೀರಿನಲ್ಲಿ ಮುಳುಗಿ, ಸ್ನಾನಮಾಡಿ ಬಂದ. ಆಶ್ಚರ್ಯಗೊಂಡ ಮುನಿ “ನೀನೇಕೆ ಸ್ನಾನ ಮಾಡಿದೆ?” ಎಂದು ಧೋಬಿಯನ್ನು ಕೇಳಿದ.ಆಗ ಆತ “ನೀವು ಯಾವ ಕಾರಣಕ್ಕಾಗಿ ಸ್ನಾನ ಮಾಡಿದಿರೋ ನಾನೂ ಅದೇ ಕಾರಣಕ್ಕೆ ಸ್ನಾನಮಾಡಿದೆ. ನನ್ನನ್ನು ಶುದ್ಧೀಕರಿಸಿಕೊಂಡೆ” ಎಂದ. ಅದಕ್ಕೆ ಬ್ರಾಹ್ಮಣ, ”ನಾನು ನಿನ್ನಂಥ ಚಾಂಡಾಲನ ಸಂಪರ್ಕದಿಂದ ಮೈಲಿಗೆಯಾದದ್ದಕ್ಕೆ ಸ್ನಾನ ಮಾಡಿದೆ. ಕೀಳು ಕುಲದಲ್ಲಿ ಜನಿಸಿದ ನಿನ್ನ ಸಂಪರ್ಕದಿಂದ ಮೈಲಿಗೆಯಾದ ಮೈಮನ, ಪವಿತ್ರ ಜಲದ ಸ್ನಾನದಿಂದ ಪರಿಶುದ್ಧವಾಯಿತು” ಎಂದ’. ”ಈಗ ಹೇಳು ನೀನೇಕೆ ಮೈತೊಳೆದುಕೊಂಡೆ?” ಎಂದು ಬ್ರಾಹ್ಮಣ ಧೋಬಿಯನ್ನು ಕೇಳಿದ. ಆಗ ಧೋಬಿ ಆಡಿದ ಮಾತು ಎಲ್ಲರ ಕಣ್ತೆರೆಸುವಂಥದ್ದು. ”ಸ್ವಾಮೀ, ಕೀಳುಕುಲದಲ್ಲಿ ಹುಟ್ಟಿದ ನಾನು, ಉತ್ತಮ ಕುಲದಲ್ಲಿ ಹುಟ್ಟಿದ ನಿಮ್ಮ ಮನಸ್ಸನ್ನು ಅಪವಿತ್ರಗೊಳಿಸಿ ಚಂಡಾಲ ಭಾವವನ್ನು ನಿಮ್ಮಲ್ಲಿ ಉದ್ಧೀಪಿಸಿ, ಕೋಪಾವೇಷಕ್ಕೆ ಒಳಗಾಗಿ ನನ್ನಂಥವನ ಮೇಲೆ ಎರಗಿ, ಥಳಿಸುವಂತಹ ಹೀನ ಕಾರ್ಯ ಮಾಡಿಸಿದ್ದಕ್ಕೆ, ನನ್ನ ಪಾಪದ ಕೊಳೆ ತೊಳೆಯುವುದಕ್ಕಾಗಿ ಸ್ನಾನ ಮಾಡಿದೆ” ಎಂದು ಧೋಬಿ ವಿನಮ್ರನಾಗಿ ನುಡಿದ. ಬ್ರಾಹ್ಮಣನ ಕೈಯಿಂದ ಹೀನ ಕೆಲಸ ಮಾಡಲು ಪ್ರೇರೇಪಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟ ಆ ಬಡ ಧೋಬಿ.
ಧೋಬಿಯ ಮಾತು ಕೇಳುತ್ತಿದ್ದಂತೆ ಬ್ರಾಹ್ಮಣನ ಕಣ್ಣಿನಿಂದ ಅಶ್ರುಧಾರೆ ಹರಿಯಿತು. ತನ್ನ ಕೃತ್ಯದ ಬಗ್ಗೆ ಸ್ವಲ್ಪ ಹೊತ್ತು ಯೋಚಿಸಿದ. ಪಶ್ಚಾತ್ತಾಪ ಪಟ್ಟ. ಕಠಿಣ ವ್ರತಾಚರಣೆಗಿಂತ ಕೋಪವನ್ನು ಗೆಲ್ಲುವುದು ಮುಖ್ಯ ಎಂದು ಅರಿತ. ಆಶೆ ಮತ್ತು ಕೋಪ ಗೆಲ್ಲದೆ ಎಷ್ಟು ವ್ರತಾಚರಣೆ ಮಾಡಿದರೂ ವ್ಯರ್ಥ ಎಂದು ಅರಿತ. ರಾಜ್ಯವನ್ನು ಗೆದ್ದ ಸಾಮ್ರಾಟನಿಗಿಂತ ಕೋಪವನ್ನು ಗೆದ್ದ ಸಾಮಾನ್ಯ ಶ್ರೇಷ್ಠ ಎಂದುಕೊಂಡ.
“ಕೋಪದ ಗುಲಾಮನಾಗಿ ಹಿಂಸೆ ಪ್ರವೃತ್ತಿಗಿಳಿದ ತನಗೂ, ಯಾವುದೇ ಭಾವೋದ್ರೇಕಕ್ಕೆ ಒಳಗಾಗದೆ, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದ, ಶಾಂತ ಮೂರ್ತಿಯಾದ ಧೋಬಿಗೂ ಏನು ವ್ಯತ್ಯಾಸ? ಯಾರು ಶ್ರೇಷ್ಠ? ವಿವೇಚನೆ ಕಳೆದು ಕೊಳ್ಳದ ಧೋಬಿಯೇ? ತಮ್ಮಲ್ಲಿ ಯಾರು ಚಂಡಾಲನ ಪಾತ್ರ ನಿರ್ವಹಿಸಿದವರು?” ಬ್ರಾಹ್ಮಣ ಯೋಚಿಸಿದ. ಪಶ್ಚಾತ್ತಾಪದಿಂದ ಪರಿವರ್ತನೆಗೊಂಡ ಆ ಬ್ರಾಹ್ಮಣ.
ಪ್ರಶ್ನೆಗಳು:
- ಬ್ರಾಹ್ಮಣ (ಸಂನ್ಯಾಸಿ) ಏಕೆ ಧೋಬಿಯನ್ನು ಸಿಟ್ಟಿನಿಂದ ಅಬ್ಬರಿಸಿದ?
- ಧೋಬಿ ಏನು ಮಾಡಿದ?
- ಧೋಬಿ ತನ್ನ ಕಾರ್ಯಕ್ಕೆ ನೀಡಿದ ಸಮರ್ಥನೆ ಏನು?