ರಾವಣನು ಹಿತೋಪದೇಶವನ್ನು ನಿರಾಕರಿಸಿದ್ದು

Print Friendly, PDF & Email
೧೦. ರಾವಣನು ಹಿತೋಪದೇಶವನ್ನು ನಿರಾಕರಿಸಿದ್ದು

Ravana refused to take good counsel

ರಾಮ ಲಕ್ಷ್ಮಣ ಮತ್ತು ಸುಗ್ರೀವರು ಲಂಕಾಪಟ್ಟಣಕ್ಕೆ ದಂಡೆತ್ತಿ ಹೋಗುವ ಸಿದ್ಧತೆಯಲ್ಲಿ ಮಗ್ನರಾಗಿದ್ದರು. ಅಪಾರವಾದ ವಾನರ ಸೈನ್ಯವನ್ನು ಮುಂದೆ ಮಾಡಿಕೊಂಡು ಅವರು ಸಮುದ್ರ ತೀರವನ್ನು ತಲುಪಿದರು. ಆ ಮಹೋದಧಿಯನ್ನು ದಾಟುವುದು ಹೇಗೆಂದು ಅವರೆಲ್ಲ ಅಲ್ಲಿ ಕುಳಿತು ಯೋಚಿಸತೊಡಗಿದರು.

ವಾನರ ಸೈನ್ಯದ ಚಲನವಲನದ ಬಗ್ಗೆ ರಾವಣನಿಗೆ ಸೂಚನೆಗಳು ಮುಟ್ಟುತ್ತಿದ್ದವು. ಅವನು ವ್ಯಾಕುಲನಾಗಿ ಮಂತ್ರಿಗಳ ಆಲೋಚನಾ ಸಭೆಯೊಂದನ್ನು ಕರೆಸುವ ಆಜ್ಞೆ ಹೊರಡಿಸಿದನು ಮತ್ತು ಅವರನ್ನುದ್ದೇಶಿಸಿ ಮಾತಾಡಿದನು. “ಆ ಒಂದು ಕಪಿಯೇ ನಮ್ಮ ಪಟ್ಟಣದಲ್ಲಿ ಎಷ್ಟು ಹಾವಳಿಯನ್ನುಂಟು ಮಾಡಿತೆಂಬುದನ್ನು ನೀವೆಲ್ಲರೂ ಕಂಡಿದ್ದೀರಿ. ರಾಮನಿಂದ ಕಳಿಸಲ್ಪಟ್ಟವನು ತಾನೆಂದು ಅವನು ಹೇಳಿದ್ದ. ರಾಮನು ನಮ್ಮ ಮೇಲೆ ಏರಿ ಬರುವ ಸಿದ್ಧತೆಯಲ್ಲಿದ್ದಾನೆ. ನಿಮ್ಮೆಲ್ಲರ ಅಮೂಲ್ಯ ಸಲಹೆಗಳನ್ನು ನೀವು ನೀಡಬೇಕೆಂದು ನಾನು ಬಯಸುತ್ತೇನೆ.”

ನಿಜವಾಗಿಯೂ ರಾವಣನ ಅಹಂಕಾರ ತತ್ತರಿಸುತ್ತಿತ್ತು. ಅಂತಲೇ ಅದನ್ನು ತನ್ನ ಪ್ರಧಾನಿಗಳ ಮತ್ತು ಸೇನಾಧಿಪತಿಗಳ ಪ್ರೋತ್ಸಾಹಕರ ಮಾತುಗಳಿಂದ ಪುನಃ ಸ್ಥಾಪಿಸಿಕೊಳ್ಳಲು ಬಯಸಿದ್ದನು. ಅವನ ಮನೋಗತವನ್ನರಿತ ಅವರೆಲ್ಲರೂ ಒಬ್ಬೊಬ್ಬರಾಗಿ ಕುಳಿತ ಸ್ಥಾನದಲ್ಲೇ ನಿಂತುಕೊಂಡು ರಾವಣನ ಪ್ರತಾಪ ಮತ್ತು ಅಜೇಯತ್ವವನ್ನು ಪ್ರಶಂಸಿಸುತ್ತಾ ಏಕಕಂಠದಿಂದ ರಾಕ್ಷಸ ಸೈನ್ಯವು ವಾನರ ಸೈನ್ಯವನ್ನು ಸುಲಭವಾಗಿ ಸೋಲಿಸುವುದಾಗಿಯೂ ರಾವಣನು ನಿಶ್ಚಿತವಾಗಿ ರಾಮಲಕ್ಷ್ಮಣರನ್ನು ಕೊಲ್ಲುವುದಾಗಿ ತಮಗೆ ಖಾತ್ರಿ ಇದೆಯೆಂದೂ ಹೇಳಿದರು.

ಅಹಂಕಾರಿಯಾದ ರಾವಣನು ಇದಕ್ಕಾಗಿ ಗರ್ವದಿಂದ ಇನ್ನಷ್ಟು ಉಬ್ಬಿ ತನ್ನ ಪ್ರಧಾನ ಸಚಿವರಿಗೆಲ್ಲ ಅಭಿನಂದನೆಗಳನ್ನು ಸಲ್ಲಿಸಿದನು.

ಆದರೆ, ಬಾಲ್ಯದಿಂದಲೂ ಭಗವದ್ಭಕ್ತನಾದ ಪವಿತ್ರ ಸ್ವಭಾವದ ಅವನ ತಮ್ಮನಾದ ವಿಭೀಷಣನೊಬ್ಬನಿಂದ ಮಾತ್ರ ಅಸಮ್ಮತಿಯ ಸೂಚನೆ ಬಂದಿತು. ಅವನು ನಮ್ರತೆಯಿಂದ ವಿನಯಪೂರ್ವಕವಾಗಿ ರಾವಣನಿಗೆ ಹೇಳಿದನು, “ಅಣ್ಣಾ, ನಿನ್ನ ಪರಾಕ್ರಮ ಮತ್ತು ಧೈಯ೵ದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ಯಾವುದೇ ರೀತಿಯಲ್ಲಿ ನಿನ್ನನ್ನು ಪ್ರಸನ್ನಗೊಳಿಸಬಯಸುವ ಈ ಮೂರ್ಖ ಅಧಿಕಾರಿಗಳು ತೋರಿದ ದಾರಿಯನ್ನು ಅನುಸರಿಸಬೇಡ. ರಾಮನ ಪತ್ನಿಯನ್ನು ಅಪಹರಿಸಿ ತಂದು ನೀನು ಘೋರ ಪಾಪವನ್ನು ಮಾಡಿದ್ದೀಯೆ. ಈಗಲೂ ಹೆಚ್ಚು ತಡವಾಗಿಲ್ಲ. ಒಳ್ಳೆ ರೀತಿಯಲ್ಲಿ ಅವಳನ್ನು ಹಿಂತಿರುಗಿಸು. ಅವನು ನಿನ್ನನ್ನು ಕ್ಷಮಿಸುವನೆಂದು ನಾನು ಮನಗಂಡಿದ್ದೇನೆ. ಆದರೆ ನೀನು ಅಹಂಕಾರ ಮತ್ತು ಸ್ವಾರ್ಥದ ಬೆನ್ನು ಹತ್ತಿದರೆ, ನೀನು ಲಂಕೆಗೆ ಗಂಡಾಂತರವನ್ನು ಮತ್ತು ಸಮಸ್ತ ರಾಕ್ಷಸ ಕುಲಕ್ಕೆ ವಿನಾಶವನ್ನು ತರುವೆಯೆಂಬುದರಲ್ಲಿ ನನಗೆ ಸಂದೇಹವೇ ಇಲ್ಲ.”

ರಾವಣನು ಈ ಉಪದೇಶವನ್ನು ಕೆಟ್ಟ ಅರ್ಥದಲ್ಲಿ ತೆಗೆದುಕೊಂಡನು. ಅವನು ತನ್ನ ತಮ್ಮನ ಹೊಟ್ಟೆಕಿಚ್ಚು ಮತ್ತು ಹೇಡಿತನಕ್ಕಾಗಿ ಆಪಾದಿಸಿದನು. ರಾಮ ಮತ್ತು ಅವನ ವಾನರ ಸೈನ್ಯದ ಜೊತೆ ಯುದ್ಧ ಹೂಡಲು ಪ್ರತಿಯೊಬ್ಬರೂ ಸಿದ್ಧರಾಗಿರಬೇಕೆಂದು ಘೋಷಿಸಿದನು.

ವಿಭೀಷಣನು ಮತ್ತೊಮ್ಮೆ ಪ್ರತಿಪಾದಿಸಿದನು. ಆದರೆ ರಾವಣನ ಅಹಂಭಾವ ಮತ್ತು ವ್ಯರ್ಥವಾದ ದುರಭಿಮಾನಗಳು ಹಿತೋಕ್ತಿಗಳನ್ನು ನಿರಾಕರಿಸುವಂತೆ ಮಾಡಿದವು. ರಾವಣನು ತನ್ನ ಚಿನ್ನದ ರಥದಲ್ಲಿ ಕುಳಿತು ಅರಮನೆಯನ್ನು ಬಿಟ್ಟು ಹೊರಡುವುದರಲ್ಲಿದ್ದನು. ಅವನ ಪತ್ನಿ ಮಂಡೋದರಿ ಅವನನ್ನು ಏಕಾಂತದಲ್ಲಿ ಸಂಧಿಸಿ ಮಾತಾಡಿದಳು. ಅವಳು ಆತನ ಪಾದಗಳ ಮೇಲೆ ಬಿದ್ದು ಸೆರಗೊಡ್ಡಿ ಬೇಡಿಕೊಂಡಳು. “ನನ್ನ ದೊರೆ, ಸೀತೆಯನ್ನು ರಾಮನಿಗೆ ಕಳಿಸಿಕೊಡು. ಸೀತೆಯು ಲಂಕೆಯನ್ನು ಪ್ರವೇಶಿಸಿದಂದಿನಿಂದ ಇಲ್ಲಿ ಅಪಶಕುನಗಳೇ ಉಂಟಾಗುತ್ತಿವೆ. ನಿನಗೆ ಯಥೇಷ್ಟ ಸುಂದರ ಸ್ತ್ರೀಯರಿದ್ದಾರೆ. ಸಾಮಾನ್ಯ ಮಾನವ ಸ್ತ್ರೀಗಾಗಿ ಚಪಲಿಸಿ ಯಾಕೆ ಬೆನ್ನಟ್ಟುವೆ? ರಾಮನ ಬಾಣಗಳು ಅತ್ಯಂತ ಶಕ್ತಿಶಾಲಿಯಾದವುಗಳೆಂದು ಕೇಳಿದ್ದೇನೆ. ಅವು ಖಂಡಿತವಾಗಿ ನಮ್ಮನ್ನು ನಾಶಮಾಡುತ್ತವೆ.” ರಾವಣನು ಅವಳನ್ನು ಪಕ್ಕಕ್ಕೆ ಸರಿಸಿ, ಹೇಳಿದ, “ಇವೆಲ್ಲಾ ಕೇವಲ ಬಲಹೀನ ಹೆಣ್ಣಿನ ಭೀತಿಯಷ್ಟೆ. ನಿನ್ನ ಉಪದೇಶವನ್ನು ಕೇಳಿದರೆ ನಾನು ಹಾಸ್ಯಕ್ಕೀಡಾಗಬೇಕಾದೀತು. ಈ ಮಾನವ ಜಂತುಗಳ ಬಗ್ಗೆ ನನಗೆ ಚಿಂತೆ ಇಲ್ಲ.”

ಪ್ರಶ್ನೆಗಳು :
  1. ರಾವಣನನ್ನು ಅವನ ಸಚಿವರು ಮತ್ತು ಸೇನಾಧಿಕಾರಿಗಳು ಹೇಗೆ ಪ್ರೋತ್ಸಾಹಿಸಿದರು?
  2. ವಿಭೀಷಣ ಮತ್ತು ಮಂಡೋದರಿಯರ ಹಿತೋಪದೇಶಗಳನ್ನು ರಾವಣನು ಯಾಕೆ ನಿರಾಕರಿಸಿದನು?

Leave a Reply

Your email address will not be published. Required fields are marked *