ಶಬರಿ ಮೋಕ್ಷ
ಶಬರಿ ಮೋಕ್ಷ
ರಾಮ ಲಕ್ಷ್ಮಣರು ದಕ್ಷಿಣದತ್ತ ಸಾಗಿದರು. ಅಲ್ಲಿ ಅವರು ಧರ್ಮ ನಿಷ್ಠೆಯುಳ್ಳ ‘ಶಬರಿ’ ಎಂಬ ಮಹಿಳೆಯನ್ನು ಭೇಟಿಯಾದರು. ಶಬರಿ ರಾಮನ ಆಗಮನಕ್ಕಾಗಿಯೇ ಕಾಯುತ್ತಾ ಇದ್ದಳು. ಅವಳ ಗುರು ‘ಮಂತಗ ಋಷಿ’ ತನ್ನ ದೇಹ ಬಿಡುವ ಮೊದಲು ರಾಮ ಬರುತ್ತಾನೆ ಎಂದು ಹೇಳಿದ ಮಾತು ನಿಜವಾಯಿತು. ಶಬರಿ ರಾಮನಿಗೆ ಹೇಳಿದಳು “ಓ ದೇವರೇ, ನನ್ನ ಗುರುವಿನ ಆಸೆ ಪೂರೈಸಿತು. ಕೆಲವು ಅಡಿಗಳಷ್ಟು ದೂರದಲ್ಲಿ ನನ್ನ ಗುಡಿಸಲು ಇದೆ. ಅಲ್ಲಿಗೆ ಬಂದು ನನ್ನ ಗುಡಿಸಲನ್ನು ಪವಿತ್ರ ಗೊಳಿಸಿರಿ”. ಶ್ರೀ ರಾಮನ ಪಾದಗಳಿಗೆ ನಮಸ್ಕರಿಸಿದಳು. ಶ್ರೀ ರಾಮನ ದರ್ಶನವಾದೊಡನೆ ಅವಳಲ್ಲಿ ಸಂತೋಷ, ಶಕ್ತಿ ಇಮ್ಮಡಿಯಾಯಿತು. ಬೇಗ ಬೇಗನೆ ಹೋಗಿ ನದಿಯಿಂದ ನೀರನ್ನು, ಹಣ್ಣುಗಳನ್ನು ತಂದು ರಾಮನಿಗೆ ನೀಡಿದಳು. ಆ ಹಣ್ಣುಗಳನ್ನು ರಾಮನಿಗೆ ಕೊಡುವ ಮೊದಲು ಎಲ್ಲ ಹಣ್ಣುಗಳನ್ನು ರುಚಿ ನೋಡಿ ಚೆನ್ನಾಗಿರುವ ಹಣ್ಣು ಮಾತ್ರ ಆಯ್ದು ರಾಮನಿಗೆ ಕೊಟ್ಟಳು. ಶ್ರೀ ರಾಮನು ಅವಳ ಭಕ್ತಿ, ಶ್ರದ್ಧೆ ಮತ್ತು ಪ್ರೀತಿಗೆ ಮೆಚ್ಚಿ, ತುಂಬಾ ಸಂತೋಷದಿಂದ ಹೇಳಿದನು, “ತಾಯಿಯೇ ನನಗೆ ಬೇಕಾಗಿರುವುದು ಭಕ್ತಿ ಮಾತ್ರ. ನಾನು ಆ ಭಕ್ತಿಯಲ್ಲಿರುವ ಸಿಹಿಯನ್ನು, ಪ್ರೀತಿಯನ್ನು ಆನಂದಿಸುತ್ತೇನೆ ಮತ್ತು ಇಷ್ಟಪಡುತ್ತೇನೆ.”