Saint Kabir

Print Friendly, PDF & Email
Saint Kabir

ಮುಸ್ಲಿಮರ ಒಂದು ಹಬ್ಬದ ದಿನದಂದು, ಕಬೀರನ ಚಿಕ್ಕಪ್ಪ ಒಂದು ಭರ್ಜರಿ ಔತಣ ಕೂಟವನ್ನು ಏರ್ಪಡಿಸಿ, ತನ್ನ ಎಲ್ಲಾ ಬಂಧು, ಮಿತ್ರರನ್ನೂ ಆಹ್ವಾನಿಸಿದ್ದ. ಆದರೆ, ಕಬೀರನನ್ನು ಮಾತ್ರ ಅದಕ್ಕೆ ಕರೆದಿರಲಿಲ್ಲ. ಆ ಔತಣ ಕೂಟದ ಬಗ್ಗೆಯಾಗಲೀ, ಅಥವಾ ಅಲ್ಲಿಗೆ ತನ್ನ ತಂದೆ-ತಾಯಿಯರು ಹೋಗಿರುವ ವಿಷಯವಾಗಲೀ, ಕಬೀರನಿಗೆ ತಿಳಿದಿರಲಿಲ್ಲ. ಮನೆಯಲ್ಲಿ ತಂದೆ, ತಾಯಿಯರನ್ನು ಕಾಣದೆ, ಅವರನ್ನು ಹುಡುಕುತ್ತಾ, ಅಕಸ್ಮಾತ್ ತನ್ನ ಚಿಕ್ಕಪ್ಪನ ಮನೆಗೆ ಬಂದ. ಅಲ್ಲೋ ಮುಸ್ಲಿಮರ ಒಂದು ದೊಡ್ಡ ಗುಂಪೇ ಸೇರಿತ್ತು. ಮೌಲ್ವಿಗಳು, ಖಾಜಿಗಳು ಹಾಗೂ ಅನೇಕ ಶ್ರೀಮಂತರು ಮತ್ತು ಗಣ್ಯರು ಅಲ್ಲಿಗೆ ಔತಣಕ್ಕಾಗಿ ಆಗಮಿಸಿದ್ದರು.

Kabir arguing with a people to stop sacrificing the calf

ಮನೆಯೊಳಗೆ ಹೋದ ಕಬೀರನು ಕಂಡಿದ್ದೇನು? ಅಲ್ಲಿ, ಒಂದು ಎಳೆಯ ಕರುವನ್ನು ಗೂಟಕ್ಕೆ ಕಟ್ಟಿ ಹಾಕಲಾಗಿತ್ತು. ಅದರ ಕೊರಳಿಗೆ ಒಂದು ಹಾರವನ್ನು ಹಾಕಲಾಗಿತ್ತು. ಅದರ ಸುತ್ತಲೂ ಸುಮಾರು ೧೨ ಮುಸ್ಲಿಮರು ಕುಳಿತು, ಪ್ರಾರ್ಥನೆಗಳನ್ನು ಪಠಿಸುತ್ತಿದ್ದರು. ಅವರಲ್ಲಿ ಒಬ್ಬನು, ಸೂರ್ಯಕಿರಣಗಳಲ್ಲಿ ಹೊಳೆಯುತ್ತಿದ್ದ ಒಂದು ಮಚ್ಚು ಕತ್ತಿಯನ್ನು ಹಿಡಿದು ನಿಂತಿದ್ದನು. ನಿಸ್ಸಹಾಯಕ ಕರು ಕಣ್ಣೀರು ಸುರಿಸುತ್ತಿತ್ತು. ಅಲ್ಲಿ ಏನು ನಡೆಯುತ್ತಿದೆ ಎಂಬುದು ಆ ಕ್ಷಣದಲ್ಲೇ ಕಬೀರನಿಗೆ ತಿಳಿದುಹೋಯಿತು. ಆ ಜನರು ಕರುವನ್ನು ದೇವರಿಗೆ ಬಲಿಯಾಗಿ ಕೊಡಲಿರುವರೆಂದು ಅರಿತ ಕಬೀರನು, ಅವರ ಕಡೆ ಧಾವಿಸಿ, ಏರು ಧ್ವನಿಯಲ್ಲಿ ಕೂಗಿದ,” ಮಹನೀಯರೇ! ದಯವಿಟ್ಟು ನಿಲ್ಲಿಸಿ, ಆ ಮುಗ್ಧ ಕರುವನ್ನು ಸಾಯಿಸದಿರಿ,” ಎಂದು.

ಅಲ್ಲಿದ್ದವರು ಕೋಪದಿಂದ, ಆ ಒರಟು ಹುಡುಗನಾರೆಂದು ನೋಡಲು ಅವನ ಕಡೆಗೆ ತಿರುಗಿದರು. ಒಬ್ಬ ವಯಸ್ಸಾದ ಮುಸ್ಲಿಂ ಅಸಹನೆಯಿಂದ ಹೇಳಿದ,” ನೀನು ಸುಮ್ಮನಿರುವುದಕ್ಕೇನು? ಇದನ್ನು “‘ಅಲ್ಲಾ”ಗೆ ಅರ್ಪಿಸುತ್ತಿದ್ದೇವೆಂದು ತಿಳಿದಿಲ್ಲವೇ? ಪ್ರವಾದಿಗಳ ವಾಕ್ಯಕ್ಕೆ ಎದುರು ಮಾತನಾಡುವಷ್ಟು ಧೈರ್ಯವೇ, ನಿನಗೆ?” ಎಂದು.

ಕಬೀರನು ಹೀಗೆ ಉತ್ತರಿಸಿದ, “ಖಂಡಿತ ಇಲ್ಲ. ಆದರೆ ನಿಮ್ಮನ್ನು ಒಂದು ಸರಳ ಪ್ರಶ್ನೆ ಕೇಳಲೇ? ನಿಮ್ಮನ್ನೂ, ನಿಮ್ಮ ಕುಟುಂಬದ ಸ್ತ್ರೀಯರನ್ನೂ ಹಾಗೂ ಮಕ್ಕಳನ್ನೂ ಸೃಷ್ಟಿ ಮಾಡಿದವರು ಯಾರು?

“ಅಲ್ಲಾ ತಾನೇ?” ಎಂದು.

“ಇದೆಂತಹ ಮೂರ್ಖ ಪ್ರಶ್ನೆಯನ್ನು ಕೇಳುತ್ತಿರುವೆ !” ಎಂದು ಆತ ಕೋಪದಿಂದ ಉತ್ತರಿಸಿದ.

ಮುಂದುವರೆಸುತ್ತಾ ಕಬೀರನು ಕೇಳಿದ, “ಈ ಕರುವನ್ನು ಮತ್ತು ಎಲ್ಲಾ ಪ್ರಾಣಿ ಸಂಕುಲವನ್ನು ಸೃಷ್ಟಿಸಿದವರಾರು?”

“ಏಕೆ? ಅವೂ ಕೂಡ “ಅಲ್ಲಾ”ನಿಂದಲೇ ಸೃಷ್ಟಿಯಾದವು.” ಎಂಬ ಉತ್ತರ ಬಂತು.

“ಹಾಗಿದ್ದಲ್ಲಿ, ಈ ಕರುವನ್ನು ಏಕೆ ಕೊಲ್ಲುತ್ತಿದ್ದೀರಿ?” ಎಂದು ಕಬೀರನು ಪ್ರಶ್ನಿಸಿದ.

kabir stopping the calf sacrifice

ಆಗ ಮತ್ತೊಬ್ಬ ಮುಸ್ಲಿಮನು ಅದಕ್ಕೆ ಉತ್ತರ ಕೊಡಲು ಮುಂದಾದ, “ಈ ಸುಂದರ ಜಗತ್ತಿನಲ್ಲಿ, ಎಲ್ಲವೂ ಭಗವಂತನ ಸೃಷ್ಟಿಯೇ! ಮಾನವನು ಆ ಸೃಷ್ಟಿಯ ಕೇಂದ್ರ ಬಿಂದು. ಉಳಿದೆಲ್ಲವನ್ನೂ ಅವನ ಉಪಯೋಗಕ್ಕೆಂದೇ ದೇವರು ಸೃಷ್ಟಿಸಿದ್ದಾನೆ.” “ಹೌದು, ನೀವು ಹೇಳುತ್ತಿರುವುದು ಖಂಡಿತವಾಗಿಯೂ ಸರಿ. ಆದರೆ, ಅವುಗಳನ್ನು ನಾಶ ಮಾಡುವುದು ಸರಿಯೇ? ‘ಕುರಾನ್’ ಪವಿತ್ರ ಗ್ರಂಥವನ್ನೂ ಮತ್ತು ಪ್ರವಾದಿಯವರ ಉಪದೇಶಗಳನ್ನೂ ಮತ್ತೊಮ್ಮೆ ಸರಿಯಾಗಿ ಓದಿ. ಈ ಬಡಪಾಯಿ ಕರುವನ್ನು ಏಕೆ ಕೊಲ್ಲಲು ಬಯಸುತ್ತೀರಿ? ಅದು ನಿಮಗೇನು ತೊಂದರೆ ಮಾಡಿದೆ? ದಯವಿಟ್ಟು ಅದನ್ನು ಬಿಟ್ಟುಬಿಡಿ,” ಎಂದು ಕಬೀರನು ಅವರನ್ನು ಪ್ರಾರ್ಥಿಸಿದ.

ಅಲ್ಲಿದ್ದ ಕೆಲವರು ‘ಕಬೀರನು ಹೇಳುತ್ತಿರುವುದು ಸರಿಯಲ್ಲ, ಅದು ತಪ್ಪು,’ ಎಂದು ವಾದಿಸಿದರು. ಮತ್ತೊಬ್ಬ ವಯಸ್ಸಾದ ಮುಸ್ಲಿಮನು ಕಬೀರನಿಗೆ ಒಂದು ಪ್ರಶ್ನೆ ಹಾಕಿದ,” ಹಸು ಹಾಲು ಕೊಡುತ್ತದೆ. ಆ ಹಾಲನ್ನು ಕುಡಿಯುವುದು ಮಾತ್ರ ಸರಿಯೇ?” ಎಂದು.

ಅದಕ್ಕೆ ಕಬೀರನ ಉತ್ತರ ಹೀಗಿತ್ತು. “ಮಕ್ಕಳು ತಾಯಿಯ ಹಾಲು ಕುಡಿಯುತ್ತವೆ. ಈ ಪ್ರಾಣಿಗಳನ್ನು ಸಹ “ತಾಯಿ” ಎಂಬ ಭಾವನೆಯಿಂದಲೇ ಗೌರವಿಸಿ, ಅವುಗಳ ಹಾಲನ್ನು ಕುಡಿಯಬೇಕೇ ಹೊರತು, ಅವುಗಳನ್ನು ಕೊಲ್ಲಬಾರದು.” ಅಲ್ಲಿ ನೆರೆದಿದ್ದ ಮುಸ್ಲಿಮರು ಮೌನವಾದರು. ಕೆಲವರು ಕಬೀರನ ಧೀಮಂತಿಕೆಯನ್ನು ಮೆಚ್ಚಿದರು. ಅವರೆಲ್ಲರೂ ಒಳ್ಳೆಯವರೇ! ಆದರೆ ಆಹಾರಕ್ಕಾಗಿ, ದೇವರ ಹೆಸರಿನಲ್ಲಿ ಪ್ರಾಣಿವಧೆ ಮಾಡುವುದು ಸರಿಯಲ್ಲವೆಂಬುದರ ಬಗ್ಗೆ ಅವರು ವಿಚಾರ ಮಾಡಿರಲೇ ಇಲ್ಲ, ಅಷ್ಟೇ!

‘ಅಹಿಂಸೆ’ಯ ಮಹತ್ವದ ಬಗ್ಗೆ ಕಬೀರನು, ಅವರಿಗೆ ಆಗ ಅರಿವು ಮೂಡಿಸಿದನು. ಪರಿಣಾಮವಾಗಿ, ಆ ಕರುವನ್ನು ಕೊಲ್ಲುವುದಿಲ್ಲವೆಂದು ಎಲ್ಲರೂ ಒಪ್ಪಿದರು. ಭರ್ಜರಿ ಔತಣ ಸವಿಯಲು ಬಂದಿದ್ದ ಕೆಲವರು ಮಾತ್ರ, ಕಬೀರನನ್ನು ನಿಂದಿಸುತ್ತಾ ಹೊರಟು ಹೋದರು. ಕಬೀರನ ತಂದೆ, ತಾಯಿಯರಿಗಾದರೋ, ತಮ್ಮ ಮಗನು ಪಂಡಿತ ಮುಸ್ಲಿಮರ ಮೇಲೆ ಪಡೆದ ಜಯವನ್ನು ಕಂಡು, ಬಹಳ ಹೆಮ್ಮೆಯಾಯಿತು.

ಪ್ರಶ್ನೆಗಳು
  1. ತನ್ನ ಚಿಕ್ಕಪ್ಪನ ಮನೆಗೆ ಹೋದ ಕಬೀರನು, ಅಲ್ಲಿ ಕಂಡ ದೃಶ್ಯವನ್ನು ವಿವರಿಸಿ.
  2. ಧಾರ್ಮಿಕ ಮುಖಂಡರನ್ನು ಕುರಿತು ಕಬೀರನು ಕೇಳಿದುದೇನು?
  3. ಅದಕ್ಕೆ ಅವರು ನೀಡಿದ ಉತ್ತರವೇನು?
  4. “ಅಹಿಂಸೆ” ಎಂಬ ಮೌಲ್ಯವನ್ನು, ಕಬೀರನು ಆ ಮುಸ್ಲಿಮರಿಗೆ ಹೇಗೆ ಯಶಸ್ವಿಯಾಗಿ ಕಲಿಸಿದನೆಂಬುದನ್ನು ವಿವರಿಸಿ.

[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್– 2
ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ]

Leave a Reply

Your email address will not be published. Required fields are marked *