ಶಂಕರರ ಜೀವನ

Print Friendly, PDF & Email
ಶಂಕರರ ಜೀವನ

ಕ್ರಿಸ್ತಶಕ ಎಂಟನೆಯ ಶತಮಾನದ ಕೊನೆಗೆ ಮಧ್ಯ ಕೇರಳದ ಕಾಲಟಿ ಎಂಬ ಹಳ್ಳಿಯಲ್ಲಿ ಶಂಕರಾಚಾರ್ಯರು ಜನಿಸಿದರು. ಅವರು ಶಿವಗುರು ಮತ್ತು ಆರ್ಯಾಂಬಾ ಎಂಬ ಧರ್ಮನಿಷ್ಠ ದಂಪತಿಗಳ ಒಬ್ಬನೇ ಮಗ. ತ್ರಿಚೂರಿನ ವೃಷಭಾಚಲೇಶ್ವರ ದೇವಾಲಯದ ಭಗವಂತ ಶಿವನನ್ನು ಬಹುಕಾಲ ನಿಷ್ಠೆಯಿಂದ ಸೇವಿಸಿ ಪೂಜಿಸಿ, ಪ್ರಾರ್ಥಿಸಿ ಈ ಮಗನನ್ನು ಶಿವಗುರು ದಂಪತಿ ಪಡೆದರೆಂದು ಹೇಳುತ್ತಾರೆ. ಶಂಕರರದು ಬಾಲ್ಯದಲ್ಲೇ ಅಭೂತಪೂರ್ವ ಪ್ರತಿಭೆ. ಎಂಟನೆಯ ವರ್ಷವಾಗುವ ವೇಳೆಗೆ ವೇದಗಳನ್ನೆಲ್ಲ ಅಧ್ಯಯನ ಮಾಡಿ ಮುಗಿಸಿದ್ದರು. ಶಂಕರರು ಕಿರಿಯ ಬಾಲಕನಾಗಿದ್ದಾಗಲೇ ತಂದೆ ತೀರಿಕೊಂಡು ತಾಯಿಯೇ ಅವರನ್ನು ಅಪಾರ ಪ್ರೀತಿಯನ್ನು ವರ್ಷಿಸಿ ಬೆಳೆಸಿದಳು. ಆಕೆಗೆ ಶಾಂತಿ ಸಮಾಧಾನಗಳನ್ನು ಆಸರೆಯನ್ನು ಕೊಡಬೇಕಾಗಿದ್ದವನು ಈಗ ಮಗನು ಮಾತ್ರ. ಆದರೆ ಬಾಲಕನು ಆ ಎಳೆಯ ವಯಸ್ಸಿನಲ್ಲೇ ವಿರಕ್ತ ಮನೋಭಾವವನ್ನು ತೋರಿಸತೊಡಿಗಿದಾಗ ಆಕೆ ಗಾಬರಿಗೊಂಡಳು. ಹೇಗೇ ಆದರೂ ಈ ಮೇಧಾವಿ ಯಾವ ಮಹೋದ್ದೇಶದಿಂದ ಭೂಮಿಯ ಮೇಲೆ ಅವತರಿಸಿದರೋ ಅದು ನೆರವೇರಲೇಬೇಕಷ್ಟೆ. ಹಾಗಾಗಿ ಶಂಕರರನ್ನು ಪ್ರಾಪಂಚಿಕ ಬಂಧನಗಳಿಂದ ಬಿಡುಗಡೆಮಾಡಲು ಒಂದು ಪವಾಡದಂಥ ಘಟನೆ ನಡೆಯುವುದು ಅಗತ್ಯವಾಗಿತ್ತು. ಒಂದು ದಿನ ಊರಿನ ಸಮೀಪದ ಪೂರ್ಣಾನದಿಯಲ್ಲಿ ಅವರು ಸ್ನಾನ ಮಾಡುತ್ತಿದ್ದರು. ತಾಯಿ ದಡದಲ್ಲಿ ನಿಂತಿದ್ದರು. ಒಂದು ಮೊಸಳೆಯು ಮಗನ ಕಾಲನ್ನು ಹಿಡಿದು ನೀರಿನೊಳಕ್ಕೆ ಎಳೆಯಲಾರಂಭಿಸಿತು. ಮರಣವು ಸಮೀಪಿಸಿದಂತೆ ತೋರಿದಾಗ ಶಂಕರರು ಸನ್ಯಾಸಾಶ್ರಮವನ್ನು ಸ್ವೀಕರಿಸಲು ಅನುಮತಿ ಕೊಡಬೇಕೆಂದು ತಾಯಿಯನ್ನು ಬೇಡಿದರು. ಪ್ರತಿಯೊಬ್ಬ ಹಿಂದುವು ಮರಣಕ್ಕೆ ಮುಂಚೆ ಸನ್ಯಾಸಾಶ್ರಮವನ್ನು ಪಡೆಯಬೇಕು. ಅಂಥದೊಂದು ಬಿಕ್ಕಟಿನ ಸ್ಥಿತಿಯಲ್ಲಿ ಆಪತ್-ಸನ್ಯಾಸವನ್ನು ಪಡೆಯುವುದು ರೂಢಿಯಾಗಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ತಾಯಿ ಅದಕ್ಕೆ ಅನುಮತಿ ಕೊಟ್ಟರು. ಆಶ್ಚಯ೵! ಒಡನೆಯೇ ಮೊಸಳೆ ತನ್ನ ಹಿಡಿತವನ್ನು ಬಿಟ್ಟಿತು. ನದಿಯಿಂದ ಮೇಲಕ್ಕೆ ಬಂದ ಬಾಲ ಸನ್ಯಾಸಿಯು ದೇಶ ಸಂಚಾರ ಮಾಡುವ ಸಾಧುವಾಗಬೇಕೆಂದು ನಿರ್ಧರಿಸಿದರು. ತಾಯಿಯನ್ನು ಸಮಾಧಾನ ಪಡಿಸಿ, ಆಕೆಯ ಕೊನೆಯ ದಿನಗಳಲ್ಲಿ ಎಲ್ಲಿದ್ದರೂ ಸಮೀಪಕ್ಕೆ ಬಂದೇ ಬರುವುದಾಗಿಯೂ, ಅಂತಿಮ ಸಂಸ್ಕಾರಗಳನ್ನು ತಾನೇ ಮಾಡುವುದಾಗಿಯೂ ಭರವಸೆಕೊಟ್ಟು ಶಂಕರರು ಹಳ್ಳಿಯನ್ನು ಬಿಟ್ಟು ಹೊರಟರು. ಈ ದೈವೀ ಯಾತ್ರೆಯನ್ನು ಕೈಗೊಂಡಾಗ ಶಂಕರರಿಗೆ ಎಂಟು ವರ್ಷ ವಯಸ್ಸು. ಅನೇಕ ಬಾಲಕರು ಆ ವಯಸ್ಸಿನಲ್ಲಿ ಇನ್ನೂ ಆಟಿಕೆಗಳನ್ನೇ ಬಿಟ್ಟಿರುವುದಿಲ್ಲ.

ಕಾಲಟಿಯನ್ನು ಬಿಟ್ಟ ಬಾಲ ಸನ್ಯಾಸಿಯು ದಕ್ಷಿಣ ಭಾರತದಾದ್ಯಂತ ಪ್ರವಾಸ ಮಾಡಿದರು. ಒಬ್ಬ ಗುರುವನ್ನು ಹುಡುಕುತ್ತಾ ಕೊನೆಗೆ ನರ್ಮದಾ ತೀರವನ್ನು ಸೇರಿದರು. ಅಲ್ಲಿ ಮಾಂಡೂಕ್ಯ ಕಾರಿಕೆಯನ್ನು ಬರೆದ ಮಹಾ ತಪಸ್ವಿ ಗೌಡಪಾದರ ಶಿಷ್ಯ ಗೋವಿಂದ ಭಗವತ್ಪಾದರ ದರ್ಶನವಾಯಿತು. ಗೋವಿಂದಪಾದರು ಇವರನ್ನು ಶಿಷ್ಯನನ್ನಾಗಿ ಸಂತೋಷದಿಂದ ಸ್ವೀಕರಿಸಿದರು. ವೇದಾಂತದ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಪರಿಚಯ ಮಾಡಿಸಿದರು. ಸುಮಾರು ಏಳುವರ್ಷ ಗುರುವಿನ ಬಳಿ ವೇದಾಂತಾಧ್ಯಯನವನ್ನೂ ಸಾಧನೆಯನ್ನೂ ಮಾಡಿ ಪೂರೈಸಿದ ನಂತರ ಕಾಶಿಗೆ ಹೋಗಬೇಕೆಂದು ಗುರುವಿನ ಆಜ್ಞೆಯಾಯಿತು. ಆ ಕಾಲದಲ್ಲಿ ಕಾಶಿ (ವಾರಣಾಸಿ) ಅಮೋಘ ವಿದ್ವತ್ತು, ಆಧ್ಯಾತ್ಮಿಕ ಸಿದ್ಧಿಗಳ ಕೇಂದ್ರವಾಗಿತ್ತು. ಅಲ್ಲಿಗೆ ಹೋಗಿ ಬ್ರಹ್ಮಸೂತ್ರಗಳು, ಉಪನಿಷತ್ತುಗಳು ಮತ್ತು ಭಗವದ್ಗೀತೆಗಳಿಗೆ ವ್ಯಾಖ್ಯಾನವನ್ನು ಬರೆದು ಅದ್ವೈತ ವೇದಾಂತದ ಸಂದೇಶವನ್ನು ಜಗತ್ತಿಗೆ ಸಾರಬೇಕೆಂದು ಗುರುಗಳು ಆದೇಶಿಸಿದರು. ಅದೇ ಪ್ರಕಾರ ಶಂಕರರು ಕಾಶಿಗೆ ಹೋದರು. ಬಹು ಸ್ವಲ್ಪ ಸಮಯದಲ್ಲೇ ವೇದಾಂತದರ್ಶನದ ಸಮರ್ಥ ಪ್ರತಿಪಾದಕರೆಂದು ಖ್ಯಾತಿ ಗಳಿಸಿದರು. ಅನೇಕ ಧರ್ಮಚರ್ಚೆಗಳಲ್ಲಿ ಜಯಗಳಿಸಿದರು. ಅವರ ಬಳಿಗೆ ಶಿಷ್ಯತ್ವವನ್ನು ಅಪೇಕ್ಷಿಸಿ ಬೇಕಾದಷ್ಟು ಜನರು ಬಂದರು. ಅವರಲ್ಲಿ ಪದ್ಮಪಾದ, ಹಸ್ತಾಮಲಕ, ಮತ್ತು ತೋಟಕ ಇವರು ಮುಖ್ಯರು. ಹೀಗೆ ಹದಿನೈದು ವರ್ಷವಾಗುವ ವೇಳೆಗೆ ಶಂಕರರು ಬಹುದೊಡ್ಡ ದಾರ್ಶನಿಕರಾಗಿ ವಾರಾಣಸಿಯಲ್ಲಿ ಹೆಸರಾದರು.

ವೇದಾಂತದರ್ಶನದ ಚರ್ಚೆಯಲ್ಲಿ ಸೋಲರಿಯದ ಸಮರ್ಥ ಪ್ರತಿಪಾದಕರಾಗಿ ಕಾಶಿಯಲ್ಲಿ ನೆಲೆಸಿದ ನಂತರ ಶಂಕರರು ಬ್ರಹ್ಮಸೂತ್ರಭಾಷ್ಯವನ್ನು ಬರೆಯುವಾಗ ಭಗವಾನ್ ವೇದವ್ಯಾಸರು ಅವರಿಗೆ ದರ್ಶನವಿತ್ತರು. ಅವರು ನೀಡಿದ ನಿರ್ದಿಷ್ಟ ಸೂಚನೆಯಂತೆ ಶಂಕರರು ದೇಶಾದ್ಯಂತ ಧರ್ಮದಿಗ್ವಿಜಯಕ್ಕಾಗಿ ಹೊರಟರು. ಹೋದಕಡೆಯಲ್ಲೆಲ್ಲ ಆ ಕಾಲದಲ್ಲಿ ಪ್ರಚಲಿತವಿದ್ದ ವಿವಿಧ ದರ್ಶನಗಳ ವಿದ್ವಾಂಸರನ್ನೂ ಮುಖ್ಯ ನಾಯಕರನ್ನೂ ಚರ್ಚೆಯಲ್ಲಿ ಗೆದ್ದರು. ಗೆದ್ದು ಅದ್ಭತ ವೇದಾಂತವನ್ನು ಸುಭದ್ರವಾದ ತಳಹದಿಯ ಮೇಲೆ ನಿಲ್ಲಿಸಿದರು. ಅವರ ಅಗಾಧ ಜ್ಞಾನ, ವಾದ ಚಾತುರ್ಯ, ಆಧ್ಯಾತ್ಮಿಕ ಅಂತರ್ದೃಷ್ಟಿಗಳ ಎದುರಿಗೆ ಯಾರೂ ನಿಲ್ಲದಾದರು. ಈ ಧರ್ಮಚರ್ಚೆಗಳಲ್ಲಿ ಬಹಳ ಮುಖ್ಯವಾದ ಒಂದು ಮಂಡನಮಿಶ್ರರೊಂದಿಗೆ ನಡೆಸಿದುದು. ಕರ್ಮಾಚರಣೆಗಳ ಪ್ರತಿಪಾದಕರಾಗಿದ್ದ ಕುಮಾರಿಲಭಟ್ಟರ ಶಿಷ್ಯ ಮಂಡನ ಮಿಶ್ರ, ಆ ಕಾಲದಲ್ಲಿ ವೇದಗಳ ಕರ್ಮಕಾಂಡ ಭಾಗವು ಹಿಂದೂ ಧರ್ಮದ ಮೇಲೆ ಬಿಗಿಯಾದ ಹಿಡಿತವನ್ನು ಹೊಂದಿತ್ತು. ಇದಕ್ಕೆ ಕಾರಣ ದಾರ್ಶನಿಕ ನಾಯಕರೂ ಧಾರ್ಮಿಕ ಮುಖಂಡರೂ ಆಗಿದ್ದ ಕುಮಾರಿಲಭಟ್ಟ, ಮಂಡನಮಿಶ್ರ ಮೊದಲಾದವರು. ಜ್ಞಾನಕಾಂಡದ ಸತ್ಯಗಳನ್ನು ಸಂಸ್ಥಾಪಿಸುವ ಶಂಕರರು ಈ ಇಬ್ಬರು ಮಹಾಮೇಧಾವಿಗಳನ್ನು ಸೋಲಿಸಿ ಜಯಗಳಿಸಬೇಕಾಗಿತ್ತು. ಆ ಸಮಯಕ್ಕೆ ಕುಮಾರಿಲಭಟ್ಟರು ಆತ್ಮಾಹುತಿ ಮಾಡಲು ಅಗ್ನಿ ಮಧ್ಯದಲ್ಲಿದ್ದರು. ಅದು ಜಡದೇಹದ ಬಂಧನದಿಂದ ಆತ್ಮವನ್ನು ಬಿಡುಗಡೆ ಮಾಡುವುದಕ್ಕಿದ್ದ ಧಾರ್ಮಿಕ ವಿಧಿ, ಆದ್ದರಿಂದ ಕುಮಾರಿಲಭಟ್ಟ ಶಂಕರರೊಂದಿಗೆ ವಾಗ್ವಾದ ಮಾಡುವ ಸ್ಥಿತಿಯಲ್ಲಿರಲಿಲ್ಲ. ತಮ್ಮ ಶಿಷ್ಯ ಮಂಡನಮಿಶ್ರನನ್ನು ಭೇಟಿಯಾಗಬೇಕೆಂದು ಶಂಕರರಿಗೆ ಹೇಳಿದರು. ಮಂಡನಮಿಶ್ರರ ಮನೆಯಲ್ಲಿ ಅವರ ಬಹುಶ್ರುತ ವಿದ್ವಾಂಸೆಯಾಗಿದ್ದ ಪತ್ನಿ ಉಭಯ ಭಾರತಿಯ ಅಧ್ಯಕ್ಷತೆಯಲ್ಲಿ ವಾಕ್ಯಾರ್ಥ ನಡೆಯಿತು. ಅನೇಕ ದಿನಗಳ ವಾಗ್ವಾದದ ನಂತರ ಮಂಡನಮಿಶ್ರರು ತಮ್ಮ ಸೋಲನ್ನು ಒಪ್ಪಿಕೊಂಡರು.

ಸೋತವರು ಗೆದ್ದವರ ಶಿಷ್ಯರಾಗತಕ್ಕದ್ದು ಎಂಬುದು ಚರ್ಚೆಗೆ ಮೊದಲೇ ಹಾಕಿದ್ದ ಷರತ್ತು. ಹಾಗಾಗಿ ಸೋತ ಮಂಡನಮಿಶ್ರರು ಶಂಕರರ ಶಿಷ್ಯರಾಗಿ ಸನ್ಯಾಸ ಸ್ವೀಕರಿಸಿದರು. ಸುರೇಶ್ವರ ಎಂದು ಹೊಸ ಹೆಸರು ಪಡೆದರು. ಈ ವಿಜಯವು ಶಂಕರರ ಧರ್ಮದಿಗ್ವಿಜಯಕ್ಕೆ ಹೊಸ ಶಕ್ತಿಯನ್ನು ನೀಡಿತು. ಮಿಥ್ಯಾವಾದಗಳನ್ನು ಖಂಡಿಸುತ್ತಾ, ಆಗ ಧರ್ಮದ ಹೆಸರಿನಲ್ಲಿ ಪ್ರಚಲಿತವಾಗಿದ್ದ ಆಕ್ಷೇಪಾರ್ಹ ಆಚರಣೆಗಳನ್ನು ಶುದ್ಧೀಕರಿಸುತ್ತಾ ಶ್ರೀ ಶಂಕರರೂ ಅವರ ಶಿಷ್ಯರೂ ನಾಡಿನ ಉದ್ದಗಲಕ್ಕೆ ಸಂಚರಿಸಿದರು. ನಾಲ್ಕು ಕಡೆ, ಅಂದರೆ ದಕ್ಷಿಣದಲ್ಲಿ ಶೃಂಗೇರಿ, ಉತ್ತರದಲ್ಲಿ ಬದರಿ, ಪಶ್ಚಿಮದಲ್ಲಿ ದ್ವಾರಕಾ ಹಾಗೂ ಪೂರ್ವದಲ್ಲಿ ಜಗನ್ನಾಥಪುರಿ ಈ ಸ್ಥಳಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಕಂಚಿಯಲ್ಲಿ ಕಾಮಕೋಟಿಪೀಠ ಎಂಬ ಇನ್ನೊಂದು ಮಠವನ್ನು ಸ್ಥಾಪಿಸಿದರೆಂದು ಹೇಳುತ್ತಾರೆ. ಶಂಕರರು ಅಪೂರ್ವ ನೈಸರ್ಗಿಕ ರಮಣೀಯತೆಯಿಂದ ಕೂಡಿದ ಸ್ಥಳಗಳನ್ನೇ ಆರಿಸಿದ್ದರು. ಹಿಮಾಚ್ಛಾದಿತ ಪರ್ವತ, ಕಾಡು, ನದಿ ಅಥವಾ ಸಾಗರ ಹೀಗೆ ಎಲ್ಲಿ ಸ್ವರ್ಗವೂ ಮರ್ತ್ಯವೂ ಕೂಡುತ್ತವೋ ಎಲ್ಲಿ ಮಾನವನ ಚಿಂತನೆಗಳು ಭವ್ಯತೆಯ ತುದಿಗೆ ಏರುವುದೋ ಅಂತಹ ರಮಣೀಯ ಸ್ಥಳಗಳು. ಶ್ರೀ ಸುರೇಶ್ವರಾಚಾರ್ಯರನ್ನು ಶೃಂಗೇರಿಯ ಪೀಠದಲ್ಲಿರಿಸಿದರು. ದ್ವಾರಕೆಯಲ್ಲಿ ಪದ್ಮಪಾದರು ನಿಂತರು. ತೋಟಕರು ಬದರಿಯಲ್ಲೂ ಹಸ್ತಾಮಲಕರು ಪುರಿ ಜಗನ್ನಾಥದಲ್ಲೂ ಮಠದ ಮುಖ್ಯಸ್ಥರಾಗಿ ನಿಂತರು. ಈ ಮಠಗಳ ಸ್ಥಾಪನೆಯಲ್ಲಿ ಹೇಗೆ ಶಂಕರರು ಭಾರತದ ಭೌತಿಕ ಹಾಗೂ ಆಧ್ಯಾತ್ಮಿಕ ಐಕ್ಯವನ್ನು ಸಾಧಿಸಲು ಪ್ರಯತ್ನಿಸಿದರು ಎಂಬುದು ವೇದ್ಯವಾಗುತ್ತದೆ. ಆ ಕಾಲದ ಸುಸಂಸ್ಕೃತ ಭಾಷೆಯಾಗಿದ್ದ ಸಂಸ್ಕೃತದಲ್ಲಿ ಅವರು ತಮ್ಮ ಕೃತಿಗಳನ್ನು ರಚಿಸಿದರು. ನಾಡಿನಾದ್ಯಂತ ಎಲ್ಲ ವಿದ್ವಾಂಸರನ್ನೂ ಅವು ಆಕರ್ಷಿಸಿದುವು.

ಸಾಕಷ್ಟು ದೀರ್ಘಕಾಲ ಅವರು ಶೃಂಗೇರಿಯಲ್ಲಿ ಉಳಿದು ನಂತರ ಮರಣ ಶಯ್ಯೆಯಲ್ಲಿದ್ದ ತಾಯಿಯನ್ನು ನೋಡಲು ಅಲ್ಲಿಂದ ಕಾಲಟಿಗೆ ಹೋದರು. ತಾಯಿಯ ಆತ್ಮವು “ಶಾಶ್ವತ ಜ್ಯೋತಿಕ್ಷೇತ್ರ”ದಲ್ಲಿ ಲೀನವಾಗಲು ಅವಕಾಶ ಮಾಡಿಕೊಟ್ಟರು. ಸಂಪ್ರದಾಯ ಶರಣರಾಗಿದ್ದ ಬಂಧು ಬಾಂಧವರ ಪ್ರತಿಭಟನೆಗೆ ಸ್ವಲ್ಪವೂ ವಿಚಲಿತರಾಗದೆ ಮನೆಯ ಹಿಂದೆ ಪೂರ್ಣಾನದಿಯ ದಂಡೆಯ ಮೇಲೆ ತಾಯಿಯ ದೇಹದ ದಹನ ಸಂಸ್ಕಾರ ನಡೆಸಿದರು. ಅಂದಿನಿಂದಲೂ ಆ ಪುಣ್ಯಸ್ಥಳವು ಪವಿತ್ರ ಯಾತ್ರಾಸ್ಥಳವಾಗಿ ಪರಿಣಮಿಸಿದೆ.

ಭಾರತದ ಎಲ್ಲ ಪವಿತ್ರ ದೇವಾಲಯಗಳನ್ನೂ ಶ್ರೀ ಶಂಕರರು ಸಂದರ್ಶಿಸಿದರು. ಅವುಗಳ ಸುತ್ತಲೇ ಬೆಳೆದು ನಿಂತ ಜನರ ಧಾರ್ಮಿಕ ಸಾಂಸ್ಕೃತಿಕ ಆಚಾರ ವಿಚಾರಗಳು, ಪೂಜಾವಿಧಿಗಳು ಮೊದಲಾದುವನ್ನು ಪರಿಷ್ಕರಿಸಿ, ದೋಷಗಳನ್ನು ತೆಗೆದು ಶುದ್ಧಗೊಳಿಸಿದರು. ಅನೇಕ ಸ್ಥಳಗಳಲ್ಲಿ ಶ್ರೀಚಕ್ರವನ್ನು ಸ್ಥಾಪಿಸಿದರು. ಕಂಚಿಯ ಕಾಮಾಕ್ಷಿ ದೇವಾಲಯ, ಬದರಿಯ ನರನಾರಾಯಣ ದೇವಾಲಯ, ನೇಪಾಳದ ಗುಹೇಶ್ವರಿ ದೇವಾಲಯ ಇತ್ಯಾದಿ ಸ್ಥಳಗಳು ಹೀಗೆ ಪವಿತ್ರಗೊಂಡಿವೆ.

ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶಂಕರರು ಕಾಶ್ಮೀರದ ಮಹಾ ವಿದ್ವಾಂಸರನ್ನು ಜಯಿಸಿ ಕೀರ್ತಿಯ ಕಿರೀಟವನ್ನು ಧರಿಸಿದರು. ಇಡೀ ಜಗತ್ತು ತಮ್ಮ ವಿದ್ವತ್ತಿನ ಅವಿವಾದಿತ ಪ್ರಭುತ್ವವನ್ನು ಗೌರವಿಸಿದುದರ ಕುರುಹಾಗಿ ಸರ್ವಜ್ಞ ಪೀಠವನ್ನು ಆರೋಹಣ ಮಾಡಿದರು.

ನೇಪಾಳಕ್ಕೆ ನೀಡಿದ ಕೊನೆಯ ಭೇಟಿಯಲ್ಲಿ ಅವರಿಗೆ ದತ್ತಾತ್ರೇಯನ ದರ್ಶನವಾಯಿತು. ಅಲ್ಲಿಂದ ಶಂಕರರು ಕೇದಾರನಾಥಕ್ಕೆ ಹೋದರು. ಅಲ್ಲಿ ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿ ಈ ಭೌತಿಕ ದೇಹವನ್ನು ತ್ಯಜಿಸಿ, ಅಂತರ್ಧಾನರಾದರು ಎಂದು ಹೇಳಲಾಗುತ್ತದೆ. ಕೇದಾರನಾಥ ದೇವಾಲಯಕ್ಕೆ ಅನತಿ ದೂರದ ಒಂದು ಸ್ಥಳವನ್ನು ಅವರು ಅಂತರ್ಧಾನರಾದ ಸ್ಥಳ ಎಂದು ತೋರಿಸುತ್ತಾರೆ. (ಪವಿತ್ರ ಕಂಚಿಯಲ್ಲಿ ತಾಯಿ ಕಾಮಾಕ್ಷಿದೇವಿಯಲ್ಲಿ ಲೀನರಾದರು ಎಂದು ಇನ್ನೊಂದು ಹೇಳಿಕೆಯೂ ಇದೆ.)

ಆಧುನಿಕ ಕಾಲದವರೆಗೂ ಇತಿಹಾಸದಲ್ಲಿ ಆಗುವ ವೈಪರೀತ್ಯಗಳು ಮತ್ತು ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ಸನಾತನ ಧರ್ಮವನ್ನು ಬಲಪಡಿಸುವ ಸಲುವಾಗಿ ಉಪನಿಷತ್ತುಗಳ ದರ್ಶನವನ್ನು ತಮ್ಮ ವಿಚಾರಪೂರ್ವಕವೂ ವೈಜ್ಞಾನಿಕವೂ ಆದ ವ್ಯಾಖ್ಯಾನದಿಂದ ಶ್ರೀ ಶಂಕರರು ಬಲಪಡಿಸಿದರು. ಹಿಂದೂ ಧರ್ಮದ ಬೃಹತ್‌ ಸೌಧವನ್ನು ಸುಭದ್ರಗೊಳಿಸಿದರು. ಭಾರತೀಯ ದರ್ಶನಕ್ಕೆ ಅವರು ನೀಡಿದ ಕೊಡುಗೆ ಎಷ್ಟು ದೊಡ್ಡದು ಮತ್ತು ಶಾಶ್ವತವಾದದ್ದು ಎಂದರೆ, ಅಲ್ಲಿಂದೀಚೆಗೆ ಬಂದ ದಾರ್ಶನಿಕರೆಲ್ಲರೂ ಅವರ ಸಿದ್ಧಾಂತಗಳನ್ನು ಖಂಡಿಸುವ ಅಥವಾ ಪ್ರತಿ ಪಾದಿಸುವ ಕೆಲಸ ಮಾಡಿದ್ದಾರೆ ಅಷ್ಟೆ. ವಿದೇಶಗಳಲ್ಲಾದರೋ ಭಾರತೀಯ ದರ್ಶನ ಎಂದರೆ ಶಂಕರರ ಅದೈತ ದರ್ಶನ ಎಂದೇ ಭಾವಿಸುವಷ್ಟು ಮಟ್ಟಿಗೆ ಪ್ರಚಲಿತವಾಗಿದೆ.

ಶ್ರೀ ಶಂಕರರು ನಮ್ಮ ಪ್ರಾಚೀನ ಋಷಿ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಅವರೇ ಆ ಸಂಸ್ಕೃತಿಯ ಅತಿ ಶ್ರೇಷ್ಠ ಪ್ರತಿಪಾದಕರಾಗಿದ್ದರು. ಶಂಕರರ ಸಂದೇಶ ಆಶೆ, ಭರವಸೆಗಳ ಸಂದೇಶ. ಮನುಷ್ಯನು ಅಂತಿಮವಲ್ಲ, ಪರಿಪೂರ್ಣವಾಗಿ ಸಿದ್ಧಗೊಂಡ ವಸ್ತುವಲ್ಲ; ಅವನಲ್ಲಿ ದೈವತ್ವ ಹುದುಗಿದೆ; ಆತ್ಮ ಪ್ರಜ್ಞೆಯ ವಿಕಾಸದಿಂದ ಅದನ್ನು ಕಂಡುಹಿಡಿಯಬೇಕು; ಶಾಂತಿ, ಪೂರ್ಣತೆ ಮತ್ತು ಆನಂದಗಳ ಸಾಮ್ರಾಜ್ಯ ನಮ್ಮ ಒಬ್ಬೊಬ್ಬರಲ್ಲೂ ಇದೆ ಎನ್ನುತ್ತದೆ ಅದ್ವೈತ. ಅದನ್ನು ನಾವು ಸಾಕ್ಷಾತ್ಕರಿಸಿಕೊಳ್ಳಬೇಕು. ಹೆಸರೇ ಹೇಳುವ ಹಾಗೆ (ಶಂಕರೋತಿ ಇತಿ ಶಂಕರ – ಯಾರು ಒಳಿತು ಮಾಡುತ್ತಾರೋ ಅವರು ಶಂಕರ) ಶಂಕರಾಚಾರ್ಯರು ಮಾನವ ಜನಾಂಗವನ್ನು ವಿಶೇಷವಾಗಿ ಅನುಗ್ರಹಿಸಿದ ಮಹಾತ್ಮರು. ಅವರು ಪ್ರತಿಪಾದಿಸಿದ ಅದ್ವೈತ ವೇದಾಂತ ದರ್ಶನವು ವೇದಗಳ ಸಾರ, ಆನಂದ ಅಮೃತತ್ವಗಳ ಹೆದ್ದಾರಿ.

Leave a Reply

Your email address will not be published. Required fields are marked *

error: