ಸಂತುಷ್ಟ ಸತತಂ – ಹೆಚ್ಚಿನ ಓದುವಿಕೆ

Print Friendly, PDF & Email
ಸಂತುಷ್ಟ ಸತತಂ – ಹೆಚ್ಚಿನ ಓದುವಿಕೆ
ಸಂತುಷ್ಟ ಸತತಂ ಯೋಗೀ ಯತಾತ್ಮಾ ದೃಢ ನಿಶ್ಚಯಃ
ಮಯ್ಯರ್ಪಿತ ಮನೋಬುದ್ಧಿರ್ಯೊಮದ್ಭಕ್ತಃ ಸಮೇ ಪ್ರಿಯಃ ||

(ಅಧ್ಯಾಯ ೧೨, ಶ್ಲೋಕ ೧೪)

ಯಾರು ಯಾವಾಗಲೂ ಸಂತೃಪ್ತಿಯಿಂದ ಇರುವನೋ, ಯಾವಾಗಲೂ ಸಮಚಿತ್ತದಿಂದ ಇರುತ್ತಾನೆಯೋ, ಸ್ವಯಂ ಸಂಯಮಿಯಾಗಿರು ವನೋ, ದೃಢವಾದ ನಿಶ್ಚಯವುಳ್ಳವನೋ, ಮನಸ್ಸು ಬುದ್ಧಿಗಳನ್ನು ನನಗೆ ಅರ್ಪಿಸಿದ್ದಾನೆಯೋ, ಯಾರು ನನ್ನ ಭಕ್ತನಾಗಿರುವನೋ ಅವನು ನನಗೆ ಪ್ರೀತಿ ಪಾತ್ರನು.

ಯಾರು ಸಂತೋಷದಿಂದ ಬದುಕುತ್ತಾರೋ, ಭಗವಂತನ ಸರ್ವಾಂತರ್ಯಾಮಿತ್ವ ಮತ್ತು ಪ್ರೇಮದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿರು ತ್ತಾರೆಯೋ ಅವರನ್ನು ಭಗವಂತನು ವಿಶೇಷವಾದ ರೀತಿಯಲ್ಲಿ ಪ್ರೀತಿಸುತ್ತಾನೆ. ಅಚಂಚಲವಾದ, ಸ್ಥಿರವಾದ ಮನಸ್ಸಿನಿಂದ ಮತ್ತು ಸ್ಥಿರವಾದ ದೃಷ್ಟಿಯಿಂದ ಅವನು ಸಂಪೂರ್ಣ ಸೃಷ್ಟಿಯಲ್ಲಿ ಸೃಷ್ಟಿಕರ್ತನನ್ನು ಗ್ರಹಿಸುತ್ತಾನೆ. ಭಗವಂತನ ದಯೆಯಿಂದ ಏನೆಲ್ಲ ಲಭಿಸುತ್ತದೆಯೋ ಅದರಿಂದ ಅವನು ತೃಪ್ತಿಪಡುತ್ತಾನೆ. ಅವನು ಯಾರನ್ನೂ ದ್ವೇಷಿಸುವುದಿಲ್ಲ. ಅವನು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಅಥವಾ ನೋಯಿಸುವುದಿಲ್ಲ. ತನ್ನೊಂದಿಗೆ ಬೇರೆಯವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಲೆಕ್ಕಿಸದೆ, ಅವನು ಎಲ್ಲರೊಂದಿಗೂ ಯಾವಾಗಲೂ ದಯಾಪರನಾಗಿರುತ್ತಾನೆ. ಏನೇ ಎದುರಾದರೂ ಧರ್ಮ ಮತ್ತು ಪ್ರೇಮಮಾರ್ಗದಲ್ಲಿ ನಡೆಯುವ ತನ್ನ ನಿಲುವಿನಲ್ಲಿ ಅವನು ಅಚಲನಾಗಿರುತ್ತಾನೆ. ಅವನು ತನ್ನ ಆಲೋಚನೆ, ಮಾತು ಮತ್ತು ಕಾರ್ಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರುತ್ತಾನೆ. ತೀವ್ರವಾದ ಪ್ರಚೋದನೆ ಇರುವಾಗಲೂ ಅವನು ತನ್ನ ಸ್ವಯಂನಿಯಂತ್ರಣವನ್ನು ಕಳೆದುಕೊಳ್ಳುವುದಿಲ್ಲ. ಈ ಕೆಳಗಿನ ಕಥೆಯು ಇದಕ್ಕೆ ನಿದರ್ಶನವಾಗಿದೆ.

ಒಬ್ಬ ಸಾಧುವು ತಮ್ಮ ಶಿಷ್ಯನೊಡನೆ ಎಲ್ಲಿಗೋ ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಅವರಿಗೆ ಎದುರಾದ ಒಬ್ಬ ಮನುಷ್ಯನು, ಅವರ ಶಿಷ್ಯನ ಮೇಲೆ ಸುಳ್ಳು ಆರೋಪ ಹೊರಿಸಿ, ಬೈಯಲಾರಂಭಿಸಿದನು. ಶಿಷ್ಯನು ಸ್ವಲ್ಪ ಹೊತ್ತಿನ ವರೆಗೆ ಅವಮಾನವನ್ನು ಸಹಿಸಿಕೊಂಡು ಶಾಂತವಾಗಿದ್ದನು.

ಆದರೆ ನಂತರ ಅವನೂ ತಾಳ್ಮೆಯನ್ನು ಕಳೆದುಕೊಂಡು ತಾನೂ ಸಹ ತಿರುಗಿ ಬೈಯಲಾರಂಭಿಸಿದನು. ಅವರು ಪರಸ್ಪರ ಬೈದಾಡುವುದನ್ನು ನೋಡಿದ ಸಾಧುವು ಅವರನ್ನು ಅಲ್ಲಿಯೇ ಬಿಟ್ಟು ತನ್ನ ದಾರಿಯಲ್ಲಿ ಮುಂದೆ ನಡೆದನು. ಸ್ವಲ್ಪ ಹೊತ್ತಿನ ನಂತರ ಸಾಧುವಿನ ಹತ್ತಿರ ಬಂದು ಸೇರಿದ ಶಿಷ್ಯನು, “ಸ್ವಾಮಿ, ನೀವು ಆ ಕ್ರೂರ ಮನುಷ್ಯನ ಹತ್ತಿರ ನನ್ನೊಬ್ಬನನ್ನೇ ಬಿಟ್ಟು ಏಕೆ ಹೋದಿರಿ?” ಎಂದು ಕೇಳಿದನು. ಅದಕ್ಕೆ ಸಾಧುವು, “ನೀನೊಬ್ಬನೇ ಎಲ್ಲಿದ್ದೆ? ನೀನು ಬೈಗುಳಗಳ ಜೊತೆಯಲ್ಲಿದ್ದೆ. ನೀನು ಒಬ್ಬಂಟಿಯಾಗಿರುವವರೆಗೆ ನಾನು ನಿನ್ನ ಜೊತೆಯಲ್ಲದ್ದೆ. ನಿನ್ನ ಜೊತೆಯಲ್ಲಿ ದೇವತೆಗಳಿರುವುದನ್ನೂ ಸಹ ನಾನು ನೋಡಿದೆ. ಆದರೆ ನೀನೂ ಸಹ ಬೈಯುವುದನ್ನು ಪ್ರಾರಂಭಿಸಿದಾಗ ಅವರು ಹೊರಟುಹೋದರು, ಅವರು ಯಾವಾಗ ಹೊರಟರೋ ನಾನೂ ಸಹ ಹೊರಟೆ” ಎಂದು ಹೇಳಿದರು.

Leave a Reply

Your email address will not be published. Required fields are marked *