ಸತ್ಯನ ಸರ್ವಜ್ಞತ್ವ

Print Friendly, PDF & Email

ಸತ್ಯನ ಸರ್ವಜ್ಞತ್ವ

ಉರವಕೊಂಡದಲ್ಲಿದ್ದಾಗ ಸತ್ಯನು ಎಲ್ಲರಿಗೂ ಬೇಕಾದವನಾಗಿದ್ದನು. ಎಲ್ಲರಿಗೂ ಗೌರವಾನ್ವಿತನಾಗಿದ್ದನು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದನು. ಒಮ್ಮೆ ಮುಸಲ್ಮಾನ ವ್ಯಕ್ತಿಯೊಬ್ಬನು ತನ್ನ ಕುದುರೆಯನ್ನು ಹುಡುಕುತ್ತಿದ್ದನು. ಅದು ಎಲ್ಲೋ ತಪ್ಪಿಸಿಕೊಂಡು ಹೋಗಿರಬೇಕು ಅಥವಾ ಯಾರೋ ಕದ್ದಿರಬೇಕು. ಅದನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಮಾನು ಸಾಗಿಸುವ ಜಟಕಾ ಬಂಡಿಯನ್ನೆಳೆಯಲು ಉಪಯೋಗಿಸುತ್ತಿದ್ದನು. ಅದು ಅವನ ಏಕೈಕ ಜೀವನಾಧಾರವಾಗಿದ್ದಿತು. ಮೈಲಿಗಳ ಸುತ್ತಲೂ ಕಾಣದೇ ಇದ್ದುದರಿಂದ ಅವನು ಉದ್ರಿಕ್ತನಾಗಿದ್ದನು. ಆಗ ಅವನಿಗೆ ಯಾರೋ ಸತ್ಯನ ವಿಷಯವನ್ನು ಹೇಳಿದರು. ಅವನು ಕೂಡಲೆ ಸತ್ಯನ ಹತ್ತಿರ ಬಂದು ತನ್ನ ಕಷ್ಟವನ್ನು ತೋಡಿಕೊಂಡನು. ಸತ್ಯನು ಕೂಡಲೇ ಅವನಿಗೆ ಸಾಂತ್ವನ ಹೇಳಿ, ನಗರದಿಂದ ಒಂದೂವರೆ ಮೈಲಿ ದೂರದಲ್ಲಿರುವ ಒಂದು ಮರದ ತೋಪಿಗೆ ಹೋಗಲು ಹೇಳಿದನು. ಅವನು ಹಾಗೆಯೇ ಮಾಡಿದನು. ಅಲ್ಲಿ ತನ್ನ ಕುದುರೆಯು ಮೇಯುತ್ತಿರುವುದನ್ನು ಕಂಡನು. ಅದು ಕಾಣದಿದ್ದ ಕಾರಣ ಉಂಟಾದ ಕೋಲಾಹಲದ ಪರಿವೆಯೇ ಇಲ್ಲದೆ ಹಾಯಾಗಿ ಮೇಯುತ್ತಿತ್ತು. ಆ ಪ್ರದೇಶದ ಮುಸ್ಲಿಂ ಬಾಂಧವರಿಗೆ ಈ ಸಹಾನುಭೂತಿಯುತಕಾರ್ಯ ಹೃದಯಸ್ಪರ್ಶಿಯಾಯಿತು. ಅಲ್ಲಿಂದ ಮುಂದೆ ಜಟಕಾ ಹೊಡೆಯುವವರು ಸತ್ಯನನ್ನು ಕಂಡ ಕೂಡಲೇ ಗಾಡಿ ನಿಲ್ಲಿಸಿ, ಅವನನ್ನು ಕೂಡಿಸಿಕೊಂಡು, ಶಾಲೆಯಿಂದ ಕರೆದೊಯ್ಯುತ್ತಿದ್ದರು.

ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡ ಹಲವಾರು ಜನರು ಸತ್ಯನ ಬಳಿ ಬರುತ್ತಿದ್ದರು. ಏಕೆಂದರೆ ಅವನ ಅಂತರ್ದೃಷ್ಟಿಯ ಪರಿಜ್ಞಾನದಿಂದ ತಮ್ಮ ವಸ್ತುವು ಎಲ್ಲಿದೆಯೆಂದು ತಿಳಿಯುವುದೆಂದು ಅವರಿಗೆ ಗೊತ್ತು.

ಉಪಾಧ್ಯಾಯರೊಬ್ಬರು ತಮ್ಮ ಪೆನ್ ಕಳೆದುಕೊಂಡಿದ್ದರು. ಅದನ್ನು ಕಳವು ಮಾಡಿರುವ ವ್ಯಕ್ತಿಯನ್ನು ಹೇಳೆಂದು ಸತ್ಯನನ್ನು ಕೇಳಿಕೊಂಡರು. ಸತ್ಯನು ಒಬ್ಬ ಸೇವಕನ ಹೆಸರನ್ನು ಹೇಳಿದನು. ಉಪಾಧ್ಯಾಯರು ನಂಬಲಿಲ್ಲ. ಏಕೆಂದರೆ ಆ ಸೇವಕನ ರೂಮನ್ನು ಶೋಧಿಸಿಯಾಗಿತ್ತು, ಅಲ್ಲದೆ ಅವನು ಸಾಮಾನ್ಯವಾಗಿ ಪ್ರಾಮಾಣಿಕ ವ್ಯಕ್ತಿಯಾಗಿದ್ದನು. ಸತ್ಯನು ತಾನು ಹೇಳಿರುವುದು ಸರಿಯೆಂದೂ ಆ ಸೇವಕನು ಆ ಪೆನ್ನನ್ನು, ಅನಂತಪುರದಲ್ಲಿ ಓದುತ್ತಿರುವ ತನ್ನ ಮಗನಿಗೆ ಕಳುಹಿಸಿರುವುದಾಗಿಯೂ ತಾನು ಅದನ್ನು ರುಜುವಾತು ಪಡಿಸುವುದಾಗಿಯೂ ತಿಳಿಸಿದನು. ಆ ತಂದೆಯು ಅನಕ್ಷರಸ್ತನಾದ್ದರಿಂದ ಬೇರೆಯವರ ಸಹಾಯದಿಂದ ಪತ್ರಬರೆಸಬೇಕಾಗಿತ್ತು. ಆ ಓಲೆಕಾರನು ವಾಡಿಕೆಯಂತೆ ಬರೆದ ಮೇಲೆ, ಕುಶಲೋಪರಿ ಸಾಂಪ್ರತದ ಬಳಿಕ, ಕಳುಹಿಸಿದ ಪೆನ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ವಿಚಾರಿಸಿದ್ದನು. ಆ ಪೆನ್ನು ದುಬಾರಿ ಆದುದರಿಂದ ಕಳುವಾಗುವ ಸಾಧ್ಯ ಇರುವುದರಿಂದ ಹುಷಾರಾಗಿರಬೇಕೆಂದೂ ಎಚ್ಚರಿಸಿದ್ದನು. ರಿಪ್ಲೈಕಾರ್ಡ್ ಹಾಕಿದ್ದರಿಂದ ನಾಲ್ಕು ದಿನಗಳೊಳಗೆ ಉತ್ತರ ಬಂತು. ಪೆನ್ನು ಬಹಳ ಸೊಗಸಾಗಿ ಬರೆಯುತ್ತಿರುವುದಾಗಿಯೂ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದಾಗಿಯೂ ತಿಳಿಸಲಾಗಿತ್ತು. ಈ ರೀತಿಯಲ್ಲಿ ಸತ್ಯನ ಸರ್ವಜ್ಞತ್ವವು ರುಜುವಾತಾಯಿತು.

[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]

Leave a Reply

Your email address will not be published. Required fields are marked *

error: