ಮಾನವ ಸೇವೆ – ಮಾಧವ ಸೇವೆ

Print Friendly, PDF & Email
ಮಾನವ ಸೇವೆ – ಮಾಧವ ಸೇವೆ

ಒಂದಾನೊಂದು ಕಾಲದಲ್ಲಿ ಜೆರುಸಲೆಮ್‌ಗೆ ಮಹಾಸಂತರೊಬ್ಬರು ಬಂದರು. ಪ್ರತಿದಿನ ಜನರು ದೂರ ಮತ್ತು ಸಮೀಪದ ಸ್ಥಳಗಳಿಂದ ಅವರ ಅನುಗ್ರಹ ಪಡೆಯಲು ಬರುತ್ತಿದ್ದರು.

ಜೆರುಸಲೆಮ್‌ ಹತ್ತಿರದ ಒಂದು ಹಳ್ಳಿಯಲ್ಲಿ ಒಬ್ಬ ಧಮ೵ನಿಷ್ಠ ವೃದ್ಧ ಮಹಿಳೆ ವಾಸಿಸುತ್ತಿದ್ದಳು. ಅವಳು ತುಂಬಾ ಕೃಶ ಮತ್ತು ಅಶಕ್ತಳಾಗಿದ್ದಳು. ಅವಳು ತನ್ನ ಮನೆಯಲ್ಲೂ ಕೂಡ ಒಂದು ಕೋಲಿನ ಸಹಾಯದಿಂದ ಕೆಲವೇ ಹೆಜ್ಜೆ ನಡೆಯಬಲ್ಲವಳಾಗಿದ್ದಳು. ಅವಳು ಪ್ರತಿದಿನ ಗಂಡಸರು, ಹೆಂಗಸರು ಮತ್ತು ಮಕ್ಕಳು ತನ್ನ ಮನೆಯ ಮುಂದಿನಿಂದಲೇ ಸಾಲು ಸಾಲಾಗಿ ಜೆರುಸಲೆಮ್‌ಗೆ ಹೋಗುವುದನ್ನು ನೋಡುತ್ತಿದ್ದಳು. ಒಂದು ದಿನ ಅವಳಿಗೂ ಕೂಡ ತಾನು ಸಾಯುವ ಮೊದಲು ಜೆರುಸಲೆಮ್‌ಗೆ ಹೋಗಿ ಆ ಸಂತರ ಅನುಗ್ರಹ ಪಡೆದು ಬರಬೇಕೆಂದು ಯೋಚನೆಯುಂಟಾಯಿತು. “ನಾನು ಹೋಗುವಾಗ ಹಾದಿಯಲ್ಲಿಯೇ ಸತ್ತರೂ ಕೂಡ ಆ ಭಗವಂತನು ನನ್ನನ್ನು ಅನುಗ್ರಹಿಸಿ ನನ್ನ ಆತ್ಮವನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋಗುತ್ತಾನೆ” ಎಂದು ಯೋಚಿಸಿದಳು.

ಮಾರನೇ ದಿನವೇ ಆ ವೃದ್ಧ ಮಹಿಳೆ ಜೆರುಸಲೆಮ್‌ಗೆ ಹೊರಟಳು. ಪ್ರತಿಯೊಂದು ಹೆಜ್ಜೆಯನ್ನೂ ನಡುಗುತ್ತಲೇ ಇಡುತ್ತಿದ್ದಳು. ಆದರೂ ಕೂಡ ಕೈಯಲ್ಲಿ ಕೋಲನ್ನು ಹಿಡಿದು ಮನದಲ್ಲಿ ದೇವರನ್ನು ನೆನೆಯುತ್ತ ಕಾಲನ್ನು ಎಳೆಯುತ್ತಲೇ ನಡೆದಳು. ಅವಳು ಕಷ್ಟಪಟ್ಟು ಅರ್ಧ ದಾರಿ ಕ್ರಮಿಸುವುದರಲ್ಲಿ ನೆತ್ತಿಗೇರಿದ್ದ ಸೂರ್ಯನ ಕಡು ಬಿಸಿಲಿನಿಂದ ಅವಳಿಗೆ ತುಂಬಾ ಸುಸ್ತಾಗಿ, ತಲೆ ಸುತ್ತತೊಡಗಿತು. ಕಷ್ಟಪಟ್ಟು ರಸ್ತೆ ಪಕ್ಕದಲ್ಲಿರುವ ಒಂದು ಬಂಡೆಯ ಹತ್ತಿರ ಹೋಗಿ ಅದರ ಮೇಲೆ ಕುಳಿತುಕೊಂಡು ದೇವರನ್ನು ಪ್ರಾರ್ಥಿಸತೊಡಗಿದಳು.

ಸ್ವಲ್ಪ ಹೊತ್ತಿನ ನಂತರ ಅವಳು ಅಲ್ಲಿ ಕೆಲವು ಯುವಕ ಯುವತಿಯರು ಹೋಗುತ್ತಿರುವುದನ್ನು ಕಂಡಳು. “ಮಕ್ಕಳೇ ನನ್ನನ್ನೂ ಕೂಡ ನಿಮ್ಮೊಂದಿಗೆ ಜೆರುಸಲೆಮ್‌ಗೆ ಕರೆದೊಯ್ಯುತ್ತೀರಾ?” ಎಂದು ಅವರನ್ನು ಕೇಳಿದಳು. ಅವರಲ್ಲಿ ಕೆಲವರು ಕೋಪದಿಂದ, ಕೆಲವರು ದುರುಗುಟ್ಟಿ ನೋಡಿದರು. ಕೆಲವರು ಆಶ್ಚರ್ಯದಿಂದ ನಿನ್ನನ್ನು ಜೆರುಸೆಲಮ್‌ಗೆ ಬದಲಾಗಿ ಸ್ಮಶಾನಕ್ಕೆ ಕರೆದೊಯ್ಯಬಹುದು ಎಂದು ಜೋರಾಗಿ ನಕ್ಕು, ವ್ಯಂಗ್ಯ ಮಾಡುತ್ತಾ ತಮ್ಮ ದಾರಿ ಹಿಡಿದು ಹೊರಟುಹೋದರು.

ಸ್ವಲ್ಪ ಹೊತ್ತಿನಲ್ಲೇ ಅಲ್ಲೊಬ್ಬ ಯುವ ಪೂಜಾರಿ ಆ ದಾರಿಯಲ್ಲೇ ಬಂದ. ಆಗ ಆ ವೃದ್ಧೆ ಆಸೆಯಿಂದ ಅವನನ್ನು ಕರೆದು “ಸಹೋದರನೇ ನನ್ನನ್ನು ನಿನ್ನ ಜೊತೆಗೆ ಜೆರುಸಲೆಮ್‌ಗೆ ಕರೆದುಕೊಂಡು ಹೋಗುತ್ತಿಯಾ?” ಎಂದು ಕೇಳಿದಳು. ಅದಕ್ಕೆ ಆ ಪೂಜಾರಿ ಕರುಣೆಯಿಂದ ಅವಳ ಹತ್ತಿರ ಬಂದು “ಯೋಚಿಸಬೇಡ, ನೀನು ನನ್ನ ಹೆಗಲ ಮೇಲೆ ಕುಳಿತು ಆಧಾರಕ್ಕಾಗಿ ನನ್ನ ತಲೆಯನ್ನು ಹಿಡಿದುಕೋ. ನಾನು ಸಂತೋಷವಾಗಿ ನಿನ್ನನ್ನು ಜೆರುಸಲೆಮ್‌ಗೆ ಕರೆದೊಯ್ಯುತ್ತೇನೆ” ಎಂದ. ಎಲ್ಲರೂ ಆ ಪವಿತ್ರ ಕ್ಷೇತ್ರವನ್ನು ತಲುಪಿದರು. ಅಲ್ಲಿ ಸಾವಿರಾರು ಜನ ಎತ್ತರವಾದ ವೇದಿಕೆಯ ಮೇಲೆ ಕುಳಿತಿರುವ ಆ ಸಂತರನ್ನು ಸುತ್ತುವರೆದಿದ್ದನ್ನು ನೋಡಿದರು. ಚಿಕ್ಕವರಿಗೆಲ್ಲ ಅವರ ಮುಂದೆ ತ್ತರವಾಗಿರುವವರು ನಿಂತಿದ್ದರಿಂದ ವೇದಿಕೆಯ ಮೇಲಿರುವ ಸಂತರು ಅವರಿಗೆ ಕಾಣಿಸುತ್ತಿರಲಿಲ್ಲ.

ಆದ್ದರಿಂದ ಅವರೆಲ್ಲ ಒಬ್ಬರ ಮೇಲೊಬ್ಬರು ಹತ್ತಿ ಆ ಸಂತರನ್ನು ಕಾಣಬೇಕೆಂದು ನಿರ್ಧರಿಸಿದರು. ಮೊದಲು ನೋಡಿದ ಯುವಕ ಅಚ್ಚರಿಗೊಂಡ. ಸಂತರ ಜಾಗದಲ್ಲಿ ತಾವು ದಾರಿಯಲ್ಲಿ ಬರುವಾಗ ವ್ಯಂಗ್ಯ ಮಾಡಿದ ಆ ವೃದ್ಧೆ ಇರುವುದನ್ನು ಕಂಡ. ತನ್ನ ಕಣ್ಣನ್ನು ಉಜ್ಜಿ ಉಜ್ಜಿ, ಮತ್ತೆ ಮತ್ತೆ ನೋಡಿದ; ಅವನು ಅದೇ ವೃದ್ಧೆಯನ್ನೇ ತನ್ನ ಕಡೆಗೆ ನೋಡಿ ಮುಗುಳ್ನಗುತ್ತಿರುವುದನ್ನು ಕಂಡ. “ನನಗೆ ಆ ಸಂತರು ಕಾಣಿಸುತ್ತಿಲ್ಲ ಎಂದು ಅರಚಿದ. “ಆ ಸಂತರ ಜಾಗದಲ್ಲಿ, ದಾರಿಯಲ್ಲಿ ನಾವು ಕಂಡ ಆ ವೃದ್ಧೆಯುನ್ನು ಕಾಣುತ್ತಿದ್ದೇನೆ” ಎಂದ. ಪ್ರತಿಯೊಬ್ಬರು ನೋಡಿದಾಗಲೂ ಎಲ್ಲರಿಗೂ ಅದೇ ಅನುಭವವಾಯಿತು.

ಆ ಸಂತರು ತಮ್ಮ ಅಭಯ ಹಸ್ತವನ್ನು ಆಶೀರ್ವದಿಸಲು ಎತ್ತಿದಾಗ ಅಪರಿಚಿತ ಪೂಜಾರಿಗೆ ಆ ಸಂತರ ಸಂಪೂರ್ಣ ದರ್ಶನವಾಯಿತು. ಅಷ್ಟೇ ಅಲ್ಲ ಅವನಿಗೆ ತನ್ನ ಹೆಗಲ ಮೇಲೆ ಆ ವೃದ್ಧೆಯ ಬದಲು ಆ ಸಂತರೇ ಕುಳಿತು ತನ್ನನ್ನು ಅನುಗ್ರಹಿಸುತ್ತಿದ್ದಾರೆ ಎಂದೆನಿಸಿತು. ಸ್ವರ್ಗದಲ್ಲಿರುವ ಶಾಂತಿ, ಸಂತೋಷಗಳೆಲ್ಲವೂ ತನ್ನ ಹೃದಯವನ್ನು ಪ್ರವೇಶಿಸುತ್ತಿರುವಂತೆ ಭಾಸವಾಯಿತು. ನಿಜವಾಗಿಯೂ ಆ ವರ್ಷದ ಜೆರುಸಲೆಮ್‌ಗೆ ಆಗಮಿಸಿದ ಎಲ್ಲ ಯಾತ್ರಾರ್ಥಿಗಳಲ್ಲಿ ಅವನೇ ಶ್ರೇಷ್ಠನೆಂದು ಹೇಳಬಹುದು. ಏಕೆಂದರೆ, ಅವನು ಆ ಭಗವಂತನನ್ನು ಪ್ರೀತಿಸಿದಷ್ಟೇ ಅವನ ಎಲ್ಲಾ ಮಕ್ಕಳನ್ನೂ ಪ್ರೀತಿಸುತ್ತಿದ್ದನು.

ಪ್ರಶ್ನೆಗಳು:
  1. ವೃದ್ಧೆಗೆ ಸಹಾಯ ಮಾಡಲು ಏಕೆ ಒಪ್ಪಿದನು? ಅದರಿಂದ ಅವನಿಗೆ ಹೇಗೆ ಲಾಭವಾಯಿತು?
  2. ಯುವಕರು ವೃದ್ಧೆಯನ್ನು ಜೆರುಸಲೆಮ್‌ಗೆ ಕರೆದೊಯ್ಯಲು ಏಕೆ ನಿರಾಕರಿಸಿದರು? ಅದರ ಪರಿಣಾಮ ಏನಾಯಿತು?
  3. ನೀವೇನಾದರೂ ಆ ಯುವಕರಲ್ಲೊಬ್ಬರಾಗಿದ್ದರೆ, ನೀವೇನು ಮಾಡುತ್ತಿದ್ದಿರಿ?

[Narration: Ms. Shreya Pulli, Sri Sathya Sai Balvikas Alumna]

Leave a Reply

Your email address will not be published. Required fields are marked *