ಸರಳ ಉಡುಗೆಯಲ್ಲಿ ಉನ್ನತ ಅಲೋಚನೆ
ಸರಳ ಉಡುಗೆಯಲ್ಲಿ ಉನ್ನತ ಅಲೋಚನೆ
ನಾವು ದುಬಾರಿ ಆಭರಣ ಮತ್ತು ಬಣ್ಣ ಬಣ್ಣದ ಉಡುಗೆ ತೊಡುವುದರಿಂದ ಹೆಚ್ಚು ಗೌರವಾನ್ವಿತರಾಗುತ್ತೇವೆಯೇ? ಆಭರಣಗಳು, ಉಡುಗೆಗಳು ಮತ್ತು ಬಂಗಾರಗಳಿಂದ ನಮಗೆ ಗೌರವ ಸಿಗುತ್ತದೆ ಎಂದು ಅಜ್ಞಾನಿಗಳು ಮಾತ್ರ ಯೋಚಿಸುತ್ತಾರೆ. ಖಂಡಿತವಾಗಿಯೂ ನಾವು ಶುಭ್ರಗೊಳಿಸಿದ, ಸಭ್ಯ ಉಡುಪುಗಳನ್ನೇ ಧರಿಸಬೇಕು. ಆದರೆ ನಾವು ದುಬಾರಿ, ಆಡಂಬರ ಉಡುಪುಗಳನ್ನು ಧರಿಸಿ, ಬೇರೆಯವರ ಗೌರವ ಪಡೆಯಬಹುದು ಎಂಬುದು ನಮ್ಮ ತಪ್ಪು ಕಲ್ಪನೆ. ದುಬಾರಿ ಉಡುಪುಗಳಿಗೆ ಹಣ ವ್ಯಯ ಮಾಡುವ ಬದಲು, ಅದನ್ನು ಬೇರೆಯವರ ಹಿತಕ್ಕೆ ಬಳಸಬಹುದು. ಜಗತ್ತಿನ ಅನೇಕ ಮಹಾತ್ಮರು ಸರಳ ಉಡುಗೆ ಧರಿಸುತ್ತಿದ್ದರು ಹಾಗೂ ವಿನಮ್ರ ನಡವಳಿಕೆಯುಳ್ಳವರಾಗಿದ್ದರು. ಅವರ ಈ ಸರಳತೆ ಮತ್ತು ವಿನಮ್ರತೆ ಅವರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ. ಅದಕ್ಕೆ ಇಲ್ಲಿ ಎರಡು ಉದಾಹರಣೆಗಳಿವೆ.
I.ಮೈಕೇಲ್ ಫ್ಯಾರಡೆ
ನಮ್ಮ ಮನೆಗಳಿಗೆ ವಿದ್ಯುತ್ ಬೆಳಕನ್ನೂ, ಗಿರಣಿ ಕಾರ್ಖಾನೆಗಳಿಗೆ ವಿದ್ಯುತ್ ಶಕ್ತಿಯನ್ನೂ ನೀಡುವ ಡೈನಮೋ ಯಂತ್ರವನ್ನು ಕಂಡು ಹಿಡಿದ ಮೈಕೇಲ್ ಫ್ಯಾರಡೆ ಬಹು ದೊಡ್ಡ ವಿಜ್ಞಾನಿ. ಜಗತ್ತೇ ಆತನನ್ನು ಗೌರವಿಸುತ್ತಿದ್ದರೂ ಅವನು ಮಾತ್ರ ತಾನು ದೊಡ್ಡವನೆಂದು ಎಂದೂ ತೋರಿಸಿಕೊಳ್ಳಲಿಲ್ಲ. ಅನೇಕ ಸಂದರ್ಭಗಳಲ್ಲಿ ಅವನ ಸಾದಾ ಬಟ್ಟೆ, ಸರಳ ನಡವಳಿಕೆಗಳು ಅವನ ಅತ್ಯುನ್ನತ ಪ್ರತಿಭೆಯು ಇತರರಿಗೆ ಕಾಣಿಸದಂತೆ ಮರೆ ಮಾಡಿ ಬಿಡುತ್ತಿದ್ದವು.
ಒಂದು ಸಲ ಇಂಗ್ಲೆಂಡ್‌ನ ಸರಕಾರೀ ಟಂಕಸಾಲೆಯ ಅಧಿಕಾರಿಯೊಬ್ಬನು ಫ್ಯಾರಡೆಯನ್ನು ಕಾಣಬೇಕಿತ್ತು. ಅವನು ರಾಯಲ್ ಸೊಸೈಟಿಯ ವಿಜ್ಞಾನ ವಿಭಾಗಕ್ಕೆ ಹೋದನು. ಅಲ್ಲಿ ಒಬ್ಬನು ಆತನನ್ನು ಫ್ಯಾರಡೆಯ ವಿಜ್ಞಾನ ಪ್ರಯೋಗ ಶಾಲೆಯಿದ್ದ ದೊಡ್ಡ ಕೋಣೆಗೆ ಕರೆದುಕೊಂಡು ಹೋದನು. ನೋಡಲು ಬಂದ ಅಧಿಕಾರಿಯು ಕೋಣೆಯನ್ನು ಪ್ರವೇಶಿಸಿದಾಗ ಅಲ್ಲೊಬ್ಬ ವೃದ್ಧನು ಕಂದು ಬಣ್ಣದ ಪ್ಯಾಂಟನ್ನೂ, ಬಿಳಿ ಶರ್ಟನ್ನೂ ಧರಿಸಿ ಸೀಸೆಗಳನ್ನು ತೊಳೆಯುತ್ತಿದ್ದನು. ಸಂದರ್ಶಕನು ಅವನನ್ನು ಕುರಿತು, “ನೀನು ಈ ಸೊಸ್ಯೆಟಿಯ ಕಾವಲುಗಾರನೆ?” ಎಂದು ಕೇಳಿದನು.
ಅಚ್ಚುಕಟ್ಟಾಗಿ ಉಡುಪು ಧರಿಸಿದ್ದ ಆ ಅಧಿಕಾರಿಯನ್ನೇ ನೋಡುತ್ತಾ ವೃದ್ಧನು “ಹೌದು,” ಎಂದನು.
“ಎಷ್ಟು ವರ್ಷಗಳಿಂದ ನೀನಿಲ್ಲಿ ಕೆಲಸ ಮಾಡುತ್ತಿದ್ದೀಯೆ?”
“ನಾಲ್ಕು ವರ್ಷಗಳಿಂದ.”
“ಇಲ್ಲಿ ದೊರಕುವ ಕೂಲಿಯಿಂದ ನಿನಗೆ ತೃಪ್ತಿಯಿದೆಯೆ?”
“ನಿಜವಾಗಿಯೂ ನಾನು ತೃಪ್ತನಾಗಿದ್ದೇನೆ,” ವೃದ್ಧನು ನಗುತ್ತಾ ಉತ್ತರ ಕೊಟ್ಟನು.
“ಇರಲಿ, ನಿನ್ನ ಹೆಸರೇನಯ್ಯ?” ಸಂದರ್ಶಕನು ಕುತೂಹಲದಿಂದ ಕೇಳಿದನು.
“ನನ್ನನ್ನು ಮೈಕೇಲ್ ಫ್ಯಾರಡೆ ಎಂದು ಕರೆಯುತ್ತಾರೆ.”
ಈ ಉತ್ತರ ಕೇಳಿ ಸಂದರ್ಶಕನಿಗೆ ಆಶ್ಚರ್ಯವೂ ತನ್ನ ತಪ್ಪಿಗಾಗಿ ವ್ಯಥೆಯೂ ಉಂಟಾಯಿತು. ತನ್ನ ಅಪರಾಧಕ್ಕಾಗಿ ಅವನು ಕ್ಷಮೆ ಕೋರಿದನು.
II.ಮಹಾತ್ಮ ಗಾಂಧಿ
ಬ್ರಿಟಿಷ್ ಮುಷ್ಟಿಯಿಂದ ಭಾರತವನ್ನು ಬಿಡುಗಡೆ ಮಾಡಲು ಗಾಂಧೀಜಿಯವರು ರಾಷ್ಟ್ರೀಯ ಆಂದೋಲನವನ್ನು ನಡೆಸುತ್ತಿದ್ದ ಕಾಲವದು. ಅವರು ಹೋದಲ್ಲೆಲ್ಲಾ ಜನರು ಭಾರೀ ಗುಂಪಾಗಿ ಸೇರಿ ‘ಮಹಾತ್ಮ ಗಾಂಧೀಜಿ ಕಿ ಜೈ’ ಎಂದು ಜಯಕಾರ ಮಾಡುತ್ತಿದ್ದರು.
ವಿದೇಶೀ ಅಧಿಕಾರದ ವಿರುದ್ಧವಾಗಿ ಧೈಯದಿಂದ ಹೋರಾಡುತ್ತಿರುವ ಗಾಂಧೀಜಿಯ ಬಗೆಗೆ ಗೌರವ ತಳೆದ ‘ರಿಚಡ್ ಗ್ರೆಗ್’ ಎಂಬ ಅಮೇರಿಕನ್ ಅವರನ್ನು ಕಾಣಲೆಂದು ಸಾಬರಮತಿ ಆಶ್ರಮಕ್ಕೆ ಬಂದನು. ಇನ್ನೂ ಆಶ್ರಮದ ಬಾಗಿಲು ತೆರೆದಿರಲಿಲ್ಲ. ಅಲ್ಲೇ ಹತ್ತಿರದಲ್ಲಿದ್ದ ಯಾರೋ ಒಬ್ಬರನ್ನು “ಗಾಂಧೀಜಿಯವರನ್ನು ಎಲ್ಲಿ ಕಾಣಬಹುದು?” ಎಂದು ಕೇಳಿದನು. “ಸಾಮೂಹಿಕ ಊಟದ ಕೋಣೆಯಲ್ಲಿ” ಎಂದು ಆತ ಉತ್ತರಿಸಿದನು.
“ಓಹೋ, ಧಾರಾಳವಾಗಿ ಹೋಗಬಹುದು, ಈಗ ಅಲ್ಲಿ ಗಾಂಧೀಜಿ ಒಬ್ಬರೇ ಇದ್ದಾರೆ”
ಗ್ರೆಗ್ ಮೆಲ್ಲಗೆ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಊಟದ ಮನೆಯತ್ತ ನಡೆದನು. ಗಾಂಧೀಜಿ ಬೆಳಗಿನ ಉಪಹಾರ ಸೇವಿಸುತ್ತಿರಬಹುದು. ತಾನು ಅವರಿಗೆಲ್ಲಿ ತೊಂದರೆ ಕೊಡುತ್ತಿದ್ದೇನೆಯೋ ಎಂದು ಆತ ಬಹಳವೇ ಹೆದರಿಕೊಂಡಿದ್ದ. ಆದರೆ ಅಲ್ಲಿ ಗ್ರೆಗ್ ಕಂಡದ್ದೇನು? ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರನು ಬೆಳಗಿನ ಉಪಹಾರಕ್ಕೆ ಅಗತ್ಯವಾದ ತರಕಾರಿ ಹೆಚ್ಚುತ್ತಾ ಕುಳಿತಿದ್ದರು. ಉಟ್ಟದ್ದು ಒಂದು ಧೋತಿ; ಅದು ಮೊಣಕಾಲವರೆಗೆ ಬರುತ್ತಿತ್ತು. ಒಂದು ತುಂಡು ಬಟ್ಟೆಯನ್ನು ಭುಜದ ಮೇಲೆ ಹಾಕಿಕೊಂಡಿದ್ದರು. ಸಂದಶಕನನ್ನು ಗಾಂಧೀಜಿ ಮುಗುಳ್ನಗೆಯಿಂದ ಸ್ವಾಗತಿಸುತ್ತಾ, “ಬನ್ನಿ, ಬನ್ನಿ, ನಾನು ಈ ಸಣ್ಣ ಕೆಲಸದಲ್ಲಿ ತೊಡಗಿದ್ದೇನೆಂದು ನೀವು ಬೇಸರಿಸುವುದಿಲ್ಲವೆಂದು ಭಾವಿಸುತ್ತೇನೆ.” ಎಂದರು.
ಗಾಂಧೀಜಿಯ ಸರಳತೆ, ನಮ್ರತೆ ಹಾಗೂ ಅವರ ಮಾತಿನ ರೀತಿಗಳನ್ನು ಕಂಡು ಆ ಅಮೇರಿಕನ್ ಪ್ರವಾಸಿ ತುಂಬಾ ಪ್ರಭಾವಿತನಾದನು.
ಪ್ರಶ್ನೆಗಳು:
- ನಿಮ್ಮ ಪದಗಳಲ್ಲಿ ಒಳ್ಳೆಯ ಉಡುಪು ಕೆಟ್ಟ ಉಡುಪು ಎಂದರೇನು? ವಿವರಿಸಿ.
- ಈ ಎರಡು ಕಥೆಗಳಿಂದ ನೀವು ಏನು ಕಲಿತಿರಿ?
- ಇವರಿಬ್ಬರಲ್ಲಿ ಯಾರು ಸಂತುಷ್ಟರು? ಸರಳ, ವಿನಮ್ರ ನಡವಳಿಕೆಯುಳ್ಳವರೋ ಅಥವಾ ಬಿಗುಮಾನ, ಅಹಂಕಾರದ ನಡವಳಿಕೆಯುಳ್ಳವರೋ?