ಸೀತಾ ವಲ್ಲಭ
Compilation of Divine Discourses
ರಘುಕುಲ
ರಾಜ ರಘು ಅತ್ಯಂತ ಉತ್ತಮ ಮತ್ತು ದಕ್ಷ ಆಡಳಿತಗಾರನಾಗಿದ್ದ. ಆದುದರಿಂದಲೇ, ಮುಂದೆ ಅವನ ವಂಶಕ್ಕೆ ಅವನ ಹೆಸರೇ ಕೊಡಲ್ಪಟ್ಟಿತು. ಅವನ ವಂಶವು ರಘು ವಂಶವೆಂದೇ ಪ್ರಸಿದ್ಧವಾಯಿತು.
ರಾಜ ರಘುವಿನ ಶ್ರೇಷ್ಠ ಗುಣಗಳ ಬಗ್ಗೆ, ಭಗವಾನ್ ಬಾಬಾರವರು ತಾವೇ ರಚಿಸಿರುವ ‘ರಾಮ ಕಥಾ ರಸವಾಹಿನಿ’ಯಲ್ಲಿ ಹೀಗೆ ಹೇಳಿದ್ದಾರೆ. “ವಯಸ್ಸಿನಲ್ಲಿ ಚಿಕ್ಕವನಿದ್ದರೂ, ರಘುವು ಸದ್ಗುಣಗಳಲ್ಲಿ ಶ್ರೀಮಂತನಾಗಿದ್ದನು. ಎಂತಹ ಕಠಿಣ ಸಮಸ್ಯೆಯೇ ಎದುರಾದರೂ, ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅದಕ್ಕೆ ಪರಿಹಾರೋಪಾಯವನ್ನು ಕಂಡುಕೊಳ್ಳುತ್ತಿದ್ದನು. ತನ್ನ ಪ್ರಜೆಗಳು ಸಂತೋಷದಿಂದ, ಸಂತೃಪ್ತಿಯಿಂದ ಜೀವಿಸುವಂತೆ ನೋಡಿಕೊಳ್ಳುತ್ತಿದ್ದನು. ಎಂತಹ ದುಷ್ಟ ದೊರೆಗಳನ್ನು ಸಹ ತನ್ನ ರಾಜನೀತಿ ನೈಪುಣ್ಯತೆ ಮತ್ತು ಶಾಂತಿಯುತ ಮಾರ್ಗದ ಮೂಲಕ ಜಯಿಸುತ್ತಿದ್ದನು. ಅದು ಸಾಧ್ಯವಾಗದೇ ಹೋದಾಗ, ಒಂದು ಸಣ್ಣ ಸೈನ್ಯದ ಮೂಲಕ ಯುದ್ಧ ಮಾಡಿ, ಅವರನ್ನು ಜಯಿಸುತ್ತಿದ್ದನು.”
ಸೀತಾ
ಸೀತೆಯು ಪ್ರಕೃತಿಯನ್ನು ಪ್ರತಿನಿಧಿಸಿದರೆ, ಶ್ರೀ ರಾಮನು ಆ ಪ್ರಕೃತಿಯು ಹೊರಹೊಮ್ಮುವುದಕ್ಕೆ ಕಾರಣವಾದ ದೈವೀಕ ಚೈತನ್ಯ. ಮಾನವರಂತೆಯೇ, ತನ್ನ ಎಲ್ಲಾ ಸಮೃದ್ಧಿ ಮತ್ತು ವೈಭವತೆಗಳಿಂದ ಕೂಡಿದ ಪ್ರಕೃತಿಯೂ ಸಹ ಆ ದಿವ್ಯ ಚೈತನ್ಯದ ಒಂದು ಅಂಗ. ಪ್ರಕೃತಿಯಿಲ್ಲದೇ ಬದುಕುವುದು ಸಾಧ್ಯವೇ? ಅದನ್ನು ಊಹಿಸಿಕೊಳ್ಳುವದು ಸಹ ಅಸಾಧ್ಯ. ಪ್ರಕೃತಿಯಾದರೋ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ನಿಸ್ವಾರ್ಥ ಮನೋಭಾವದಿಂದ ನಮಗೆ ಬೇಕಾದ ಎಲ್ಲವನ್ನೂ ನೀಡುತ್ತದೆ. ಆದುದರಿಂದಲೇ ಪ್ರಕೃತಿಯ ಶೋಷಣೆ ಮಾಡದೆ, ಅದನ್ನು ರಕ್ಷಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನವನ್ನೂ ಮಾಡಬೇಕು. ಜಗತ್ತಿನಲ್ಲಿ, ಅನೇಕ ರೀತಿಯ ಪ್ರಾಕೃತಿಕ ವಿಕೋಪಗಳ ಮೂಲಕ, ಪ್ರಕೃತಿಯು ತೋರುತ್ತಿರುವ ಎಚ್ಚರಿಕೆಯೆಂದರೆ, ತಮ್ಮ ವೈಯುಕ್ತಿಕ ಲಾಭಕ್ಕಾಗಿ, ಪ್ರಕೃತಿಯು ನೀಡಿರುವ ಕೊಡುಗೆಗಳನ್ನು ದುರುಪಯೋಗ ಮಾಡಕೂಡದು ಎಂಬುದೇ ಆಗಿದೆ. ಪರಿಸರದಲ್ಲಿ ಪರಿಪೂರ್ಣ ಸಮತೋಲನವನ್ನು ಮೂಡಿಸಿದಲ್ಲಿ, ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾದ ತೊಂದರೆಯೂ ಸಹ ಅಪರೂಪವಾಗುವುದು.
ಸೀತಾ ವಲ್ಲಭ
ಪ್ರಕೃತಿ ಸ್ವರೂಪಿಣಿಯಾದ ಸೀತಾಮಾತೆಯ ಪ್ರಿಯ ಪತಿಯಾದ ಶ್ರೀರಾಮನ ಅವತಾರವೇ ತಾನೆಂದು ಬಾಬಾರವರು ಪ್ರಕಟಪಡಿಸಿದ ಒಂದು ಸಂದರ್ಭವು ಹೀಗಿದೆ.
ಚೆನ್ನೈಗೆ ಸುಮಾರು ೭೦ ಕಿ.ಮೀ ದೂರದಲ್ಲಿ ಮಧುರಾಂತಕಂ ಎಂಬ ಒಂದು ಸಣ್ಣ ಪಟ್ಟಣವಿದೆ. ಈ ಸ್ಥಳಕ್ಕೆ ಸಂಬಂಧಿಸಿದ ಒಂದು ಐತಿಹ್ಯವಿದೆ. ಸೀತಾನ್ವೇಷಣೆಯ ಸಮಯದಲ್ಲಿ ಸ್ವತಃ ಶ್ರೀ ರಾಮನೇ ಇಲ್ಲಿಗೆ ಬಂದಿದ್ದನೆಂದೂ, ಅಲ್ಲೇ ಇರುವ ಒಂದು ದೊಡ್ಡ ಕೆರೆಯಲ್ಲಿ ಸ್ನಾನಮಾಡಿದನೆಂದೂ ಪ್ರತೀತಿಯಿದೆ. ಕಾಲಾನುಕ್ರಮದಲ್ಲಿ, ಇಲ್ಲಿ ಶ್ರೀರಾಮನಿಗಾಗಿ ಒಂದು ದೇವಾಲಯವನ್ನು ನಿರ್ಮಿಸಲಾಯಿತು.
೧೭೯೫ ನೇ ಇಸವಿ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ಉಂಟಾಗಿ, ಮಧುರಾಂತಕಂನ ಸುತ್ತಲೂ ಭಾರಿ ಮಳೆಯು ಸುರಿಯತೊಡಗಿತು. ಕರ್ನಲ್ ಪ್ರೈಸ್ ನು, ಆಗ ಅಲ್ಲಿನ ಜಿಲ್ಲಾ ಕಲೆಕ್ಟರ್. ಕೆರೆಯು ತುಂಬಿ ಹರಿಯುತ್ತಿರುವುದರಿಂದ, ಭಾರಿ ಅಪಾಯವಿದೆಯೆಂದು, ಜೀವಹಾನಿ ಮತ್ತು ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗುವ ಸಂಭವವಿದೆಯೆಂದು, ಎಚ್ಚರಿಕೆಯ ಸುದ್ದಿಯು ಕಲೆಕ್ಟರ್ ಗೆ ಹೋಯಿತು. ಕರ್ನಲ್ ಪ್ರೈಸ್ ಕೂಡಲೇ ಮಧುರಾಂತಕಂಗೆ ಹೊರಟನು. ಕೆರೆಯಲ್ಲಿ ಬಿಟ್ಟಿರುವ ಬಿರುಕನ್ನು ಮುಚ್ಚಲು ಕೂಡಲೇ ಕ್ರಮವನ್ನು ಕೈಗೊಳ್ಳಬೇಕೆಂದು ಆಜ್ಞಾಪಿಸಿ, ಅಲ್ಲಿಯೇ ಸಮೀಪದಲ್ಲಿದ್ದ ಶ್ರೀ ರಾಮನ ದೇವಾಲಯಕ್ಕೆ ಹೋಗಲು ನಿರ್ಧರಿಸಿದನು. ಅಲ್ಲಿ ಹೋಗಿ ನೋಡಿದಾಗ, ಆ ದೇವಾಲಯವು ಅತಿ ಶಿಥಿಲಾವಸ್ಥೆಯಲ್ಲಿರುವುದನ್ನೂ ಮತ್ತು ಒಂದು ಕಡೆಯಲ್ಲಿ ಇಟ್ಟಿಗೆಗಳ ರಾಶಿಯಿರುವುದನ್ನೂ ಗಮನಿಸಿದನು. ಅದರ ಬಗ್ಗೆ ಅಲ್ಲಿನ ಅರ್ಚಕರನ್ನು ವಿಚಾರಿಸಲಾಗಿ, ಸೀತಾಮಾತೆಗೆ ಒಂದು ಗುಡಿಯನ್ನು ನಿರ್ಮಿಸುವ ಸಲುವಾಗಿ, ಆ ಇಟ್ಟಿಗೆಗಳನ್ನು ಸಂಗ್ರಹಿಸಲಾಗಿದೆಯೆಂದೂ, ಆದರೆ ಹಣದ ಕೊರತೆಯಿಂದಾಗಿ, ಅದು ಇನ್ನೂ ಸಾಧ್ಯವಾಗಿಲ್ಲವೆಂದೂ ತಿಳಿಸಿದರು. ಅದು ಮಾತ್ರವಲ್ಲದೇ, ಪ್ರತಿಬಾರಿ ಚಂಡಮಾರುತವು ಬಂದಾಗಲೆಲ್ಲಾ ಆ ಕೆರೆಯಲ್ಲಿ ಬಿರುಕು ಉಂಟಾಗುತ್ತಿರುವುದರಿಂದ, ಜನರಿಗೆ ಬಹಳ ನಷ್ಟವುಂಟಾಗುತ್ತಿದ್ದು, ನಿಧಿ ಸಂಗ್ರಹಣೆಯು ಸಾಧ್ಯವಾಗುತ್ತಿಲ್ಲವೆಂದೂ ತಿಳಿಸಿದರು.
ಆಗ ಕರ್ನಲ್ ನು, ವ್ಯಂಗವಾಗಿ ಪ್ರಶ್ನಿಸಿದನು, “ನಿಮ್ಮ ಶ್ರೀ ರಾಮನು ನಿಮ್ಮ ರಕ್ಷಣೆಗೆ ಏಕೆ ಬರುತ್ತಿಲ್ಲ? ತನ್ನ ಪತ್ನಿಗೆ ದೇವಾಲಯವನ್ನು ಕಟ್ಟಲು ತೊಂದರೆಕೊಡುತ್ತಿರುವ ಕೆರೆಯಿಂದ ಏಕೆ ರಕ್ಷಿಸುತ್ತಿಲ್ಲ?” ಎಂದು. ಆ ದೇವಾಲಯದ ಆಡಳಿತ ವರ್ಗದವರಿಗೆ ಇದನ್ನು ಕೇಳಿ ಮನಸ್ಸಿಗೆ ಬಹಳ ನೋವಾಯಿತು. ಅವರು ಉತ್ತರಿಸಿದರು, “ಮುಂದೆ ಇಂತಹ ತುರ್ತು ಪರಿಸ್ಥಿತಿ ಏರ್ಪಟ್ಟಲ್ಲಿ, ಖಂಡಿತವಾಗಿಯೂ ಪ್ರಭು ಶ್ರೀ ರಾಮನೇ ಬಂದು ನಮ್ಮನ್ನು ರಕ್ಷಿಸುವುದನ್ನು ಖಂಡಿತವಾಗಿಯೂ ನೀವೇ ನೋಡುವಿರಿ.” ಎಂದು.
ಈ ಘಟನೆಯ ನಂತರ, ಸ್ವಲ್ಪ ದಿನಗಳಲ್ಲೇ ಚಂಡಮಾರುತವು ಪುನಃ ಬಂದು, ಮತ್ತೊಮ್ಮೆ ಭಾರಿ ಮಳೆಯು ಪ್ರಾರಂಭವಾಯಿತು. ಮೊದಲಿಗಿಂತಲೂ ಪರಿಸ್ಥಿತಿಯು ಮತ್ತಷ್ಟು ಗಂಭೀರವಾಯಿತು. ಕರ್ನಲ್ ಪ್ರೈಸನು ಪುನಃ ಮಧುರಾಂತಕಂಗೆ ಧಾವಿಸಿದನು. ಅಲ್ಲಿ ಆ ಪ್ರಳಯಾಂತಕ ಬಿರುಗಾಳಿಯನ್ನೂ ಹಾಗೂ ಪ್ರಕೃತಿಯ ‘ರೌದ್ರ ತಾಂಡವ’ವನ್ನೂ ಕಂಡು ಭಯಭೀತನಾದನು. ಈಗ ದೇವರೊಬ್ಬನಿಂದ ಮಾತ್ರ ಎಲ್ಲರನ್ನು ರಕ್ಷಿಸಲು ಸಾಧ್ಯವೆಂದು ಅವನಿಗೆ ಅನಿಸಿತು. ಅವನು ಹೀಗೆ ಯೋಚಿಸುತ್ತಿರುವಾಗಲೇ, ಗ್ರಾಮಸ್ಥರ ಒಂದು ದೊಡ್ಡ ಗುಂಪು ದೇವಾಲಯದಲ್ಲಿ ರಕ್ಷಣೆ ಪಡೆಯಲು ಒಳಗೆ ಧಾವಿಸಿತು. ಅವರಲ್ಲಿ ಹಿರಿಯನೊಬ್ಬನು ಶ್ರೀ ರಾಮನ ಶಕ್ತಿ, ಸಾಮರ್ಥ್ಯ ಮತ್ತು ಮಹಿಮೆಗಳ ಬಗ್ಗೆ ಸತತವಾಗಿ ಮಾತನಾಡುತ್ತಾ ಜನರಲ್ಲಿ ನಂಬಿಕೆಯನ್ನು ತುಂಬಿಸುವ ಪ್ರಯತ್ನ ಮಾಡುತ್ತಿದ್ದನು.
ಆ ಕ್ಷಣದಲ್ಲಿ, ಕ್ರೈಸ್ತನಾದ ಕರ್ನಲ್ ಪ್ರೈಸ್ ಸಹ ಮೌನವಾಗಿ ಪ್ರಾರ್ಥನೆಯಲ್ಲಿ ತೊಡಗಿದ. “ಓ ರಾಮ! ನಿನ್ನ ಮಹಾನತೆಯ ಬಗ್ಗೆ ಈ ಜನರೆಲ್ಲ ಹೇಳುತ್ತಿದ್ದಾರೆ. ಹಾಗಿದ್ದಲ್ಲಿ, ನೀನು ನಮ್ಮೆಲ್ಲರನ್ನೂ ಕಾಪಾಡು. ನನ್ನ ಪ್ರಾರ್ಥನೆಗೆ ನೀನು ಸ್ಪಂದಿಸಿದಲ್ಲಿ, ನಿನ್ನ ಪತ್ನಿ ಸೀತಾದೇವಿಗೆ, ನಾನೇ ಒಂದು ಗುಡಿಯನ್ನು ಕಟ್ಟಿಸಿಕೊಡುವೆ,” ಎಂದು. ಕರ್ನಲ್ ನ ಪ್ರಾರ್ಥನೆಯು ಮುಗಿಯುತ್ತಿದ್ದ ಹಾಗೆಯೇ, ಕಣ್ಣು ಕೋರೈಸುವ ಒಂದು ಮಿಂಚು ಝಳಪಿಸಿತು. ಅದರೊಳಗೆ, ಮುಗುಳ್ನಗುತ್ತಿರುವ ಶ್ರೀ ರಾಮ, ಲಕ್ಷ್ಮಣರ ದಿವ್ಯ ಮುಖಗಳು ಸ್ಪಷ್ಟವಾಗಿ ಗೋಚರಿಸಿದವು. “ಅಲ್ಲಿ ನೋಡಿ!” ಎಂದು ಉದ್ಗರಿಸುತ್ತಾ, ಮೂರ್ಚಿತನಾದ ಕರ್ನಲ್, ಅಲ್ಲಿಯೇ ಪ್ರಜ್ಞೆತಪ್ಪಿ ಬಿದ್ದುಬಿಟ್ಟನು. ಅವನಿಗೆ ಮತ್ತೆ ಪ್ರಜ್ಞೆ ಮರಳಿದಾಗ, ತನ್ನ ಮನೆಯಲ್ಲಿ ತನ್ನ ಕೊಠಡಿಯಲ್ಲಿ ಆರಾಮವಾಗಿ ಮಲಗಿರುವುದು ಅರಿವಾಯಿತು. ಪವಾಡವೆನಿಸುವಂತೆ, ಮಳೆಯೂ ಸಹ ನಿಂತು ಹೋಯಿತೆಂದೂ, ಕೆರೆಯಲ್ಲಿ ನೀರು ಸಹ ಸುರಕ್ಷಿತ ಮಟ್ಟದಲ್ಲೇ ಇದೆಯೆಂದೂ ವರ್ತಮಾನವು ತಿಳಿಯಿತು. ಈ ರೀತಿಯಲ್ಲಿ ದೇವರು ತನ್ನ ಭಕ್ತರ ರಕ್ಷಣೆಗೆಂದು ಬಂದಿದ್ದನ್ನು ಕಂಡು, ಅವನು ಮನಃಪೂರ್ವಕವಾಗಿ ಕೃತಜ್ಞತೆಯನ್ನು ಅರ್ಪಿಸಿದನು.
ಕರ್ನಲ್ ಗೆ ಆದ ಈ ದಿವ್ಯಾನುಭವದ ಬಗ್ಗೆ ಕೇಳಿ, ತಿಳಿದ ಮಧುರಾಂತಕಂನ ನಿವಾಸಿಗಳು, ಶ್ರೀ ರಾಮನೇ ಸ್ವತಃ ತಮ್ಮ ರಕ್ಷಣೆಗೆ ಬಂದು ಕಾಪಾಡಿದನೆಂಬುದನ್ನು ಅರಿತು ತಮ್ಮ ಭಕ್ತಿ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಇಂದೂ ಸಹ ಇಲ್ಲಿ ಶ್ರೀರಾಮನು “ಏರಿಯನ್ನು ಕಾಪಾಡಿದ ಶ್ರೀರಾಮನೆಂದೇ” ಪ್ರಸಿದ್ಧನಾಗಿ, ಪೂಜಿಸಲ್ಪಡುತ್ತಾನೆ. ಈ ಅದ್ಬುತ ಪ್ರಸಂಗವು ಶ್ರೀ ರಾಮನೇ ಪ್ರಕೃತಿಯ ಒಡೆಯನೆಂದು ಸೂಚಿಸುತ್ತದೆ. ಶ್ರೀ ರಾಮನನ್ನು ‘ಸೀತಾ ವಲ್ಲಭ’ನೆಂದು ಸ್ತುತಿಸುವುದು ಸರಿಯೇ ತಾನೇ! ಸೀತೆಯು ಪ್ರಕೃತಿಯ ಸ್ವರೂಪಿಣಿ.
[ಕೃಪೆ: http://media.radiosai.org/journals/Vol_03/10OCT01/katrina.htm]